ನಾವೆಲ್ಲಾ ಮಾವು, ಹಲಸು, ರಾಂಬುಟಾನ್, ಬಟರ್ ಫ್ರೂಟ್, ಲವಂಗ, ಜಾಯಿ ಕಾಯಿ ಹೀಗೆಲ್ಲಾ ಹಣ್ಣಿನ, ಮತ್ತು ಸಾಂಬಾರ ಮರಗಳನ್ನು ಬೆಳೆಸುತ್ತೇವೆ. ಕೆಲವೊಮ್ಮೆ ಈ ಸಸಿಗಳ/ ಮರಗಳ ಗೆಲ್ಲುಗಳು ಅಥವಾ ಮರವೇ ಕಾಣು ಕಾಣುತ್ತಿದ್ದಂತೆ ಒಣಗಿ ಸಾಯುತ್ತವೆ. ಇದನ್ನು ಕೆಲವರು ಯಾವುದೋ ರೋಗ ಎಂದು ಭಾವಿಸುತ್ತಾರೆ. ಇದು ರೋಗ ಅಲ್ಲ. ಇದೊಂದು ಕೀಟ. ಈ ಕೀಟಕ್ಕೆ ಮರಮಟ್ಟುಗಳ ಕೊಲೆಗಾರ ಕೀಟ ಎಂದು ಕರೆಯುತ್ತಾರೆ. ಒಮ್ಮೆ ನಿಮ್ಮ ಹೊಲಕ್ಕೆ ಪ್ರವೇಶವಾದರೆ ಅದಕ್ಕೆ ಸೂಕ್ತ ನಿರ್ವಹಣೆ ಅಥವಾ ಅದರ ಪರಭಕ್ಷಕಗಳು ಹುಟ್ಟಿಕೊಳ್ಳದೇ ಇದ್ದರೆ ಭಾರೀ ಪ್ರಮಾಣದಲ್ಲಿ ಹಾನಿ ಮಾಡುತ್ತವೆ.
ಚಿತ್ರದಲ್ಲಿ ಕಾಣಿಸಿದ ಈ ಕೀಟ ಬಹುತೇಕ ಎಲ್ಲಾ ಮರಮಟ್ಟುಗಳಿಗೂ ತೊಂದರೆ ಮಾಡುತ್ತವೆ. ಮರಮಟ್ಟುಗಳೇ ಇವುಗಳ (Host) ವಾಸಸ್ಥಾನ. ಆರ್ಥ್ರೋಪೋಡಾ ಸಾಮ್ರಾಜ್ಯಕ್ಕೆ ಸೇರಿದ ಈ ಕೀಟ ಬಹುತೇಕ ಮರಮಟ್ಟುಗಳ ಗೆಲ್ಲುಗಳಿಗೆ, ಕಾಂಡಕ್ಕೆ ಹಾನಿ ಮಾಡುತ್ತದೆ. ಇದನ್ನು ತೊಗಟೆ ಜೀರುಂಡೆ, ಕಾಂಡ ಕೊರಕ ಎಂದು ಕರೆಯುತ್ತಾರೆ. ವಿಶ್ವದಲ್ಲೇ ಇದು ಅತ್ಯಂತ ವಿನಾಶಕಾರೀ ಕೀಟ. ಇದನ್ನು ದುಂಬಿ ಕುಟುಂಬಕ್ಕೆ Curculionidae ಸೇರಿದೆ. ಇದು ಸಸ್ಯದ ತೊಗಟೆ ಭಾಗದಲ್ಲಿ ಒಳ ಸೇರುತ್ತದೆ. ಆ ಭಾಗವನ್ನು ಕೊರೆಯುತ್ತಾ ಒಳ ಸೇರಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಸಂತಾನಾಭಿವೃದ್ಧಿಯಾಗಿ ಹೊರ ಬಂದು ಮತ್ತೆ ಬೇರೆ ಮರವನ್ನು ಆಶ್ರಯಿಸುತ್ತದೆ. ಇದು ಹಣ್ಣಿನ ಮರಮಟ್ಟುಗಳಿಗೆ ಭಾರೀ ಹಾನಿ ಮಾಡುವ ಕೀಟವಾಗಿದ್ದು ಇದನ್ನು ಗುರುತಿಸಿ ಪ್ರಾರಂಭದಲ್ಲೇ ನಿಯಂತ್ರಣ ಮಾಡಬೇಕು.
ಕೀಟದ ಪರಿಚಯ:
- ಈ ಜೀರುಂಡೆಗಳಲ್ಲಿ ಸುಮಾರು 2000 ಕ್ಕೂ ಹೆಚ್ಚು ವಿಧಗಳಿದ್ದು, ಎಲ್ಲವೂ ಮರಮಟ್ಟುಗಳ ಕಾಂಡ, ಬಲಿತ ಗೆಲ್ಲು ಬೆಳೆಯುತ್ತಿರುವ ಸಸಿಗಳ ಬುಡ ಭಾಗವನ್ನು ಕೊರೆದು bark beetle ಬದುಕುವಂತದ್ದು.
- ಇದರ ಬಣ್ಣ ಕಂದು ಅಥವಾ ಕಪ್ಪು. ಗಂಡು ಮತ್ತು ಹೆಣ್ಣು ಮರದ ತೊಗಟೆಯನ್ನು ಕೊರೆದು ಒಳ ಸೇರಿ ಅಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ.
- ಮರದಲ್ಲಿ ಕೊರೆದ ಭಾಗವೇನಿದೆಯೋ ಅದು ಅವುಗಳ ಮೊಟ್ಟೆ ಇಡುವ ಸ್ಥಳಾವಕಾಶ (ಗೂಡು)ಆಗಿರುತ್ತದೆ.
- ಹೆಚ್ಚಾಗಿ ಒಂದು ಗಂಡು ಜೀರುಂಡೆಯ ಜೊತೆಗೆ ಒಂದಕ್ಕಿಂತ ಹೆಚ್ಚು ಹೆಣ್ಣು ಜೀರುಂಡೆಗಳು ಇರುತ್ತವೆ.
- ಕೋಣೆಯ ಒಂದು ಬದಿಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಆ ಮರಿಗಳು ಮತ್ತೆ ಮರವನ್ನು ಕೊರೆಯಲು ಪ್ರಾರಂಭಿಸುತ್ತವೆ.
- ಕೊರೆದಾಗ ಆಹಾರ ಸರಬರಾಜು ಆಗುವ ಭಾಗವೇ ಸಂಪರ್ಕ ಕಡಿದುಕೊಳ್ಳುತ್ತದೆ.
- ಮೊಟ್ಟೆ ಇಟ್ಟು ಮರಿಯಾಗಿ ಪ್ರತೀಯೊಂದು ಲಾರ್ವೆಯೂ ಕೊರೆಯುತ್ತಾ ಬಂದಾಗ ಆ ಮರ ಅಥವಾ ಗೆಲ್ಲುಗಳಲ್ಲಿ ಅಲ್ಲಲ್ಲಿ ತೂತುಗಳು ಕಂಡು ಬಂದು ಆ ಗೆಲ್ಲು ಒಣಗುತ್ತದೆ.
- ಎಲ್ಲಾ ಮರಗಳಿಗೂ ಒಂದೇ ರೀತಿಯ ಜೀರುಂಡೆ(stem borer) ಹಾನಿ ಮಾಡುವುದಲ್ಲ.
- ಬೇರೆ ಬೇರೆ ಮರಕ್ಕೆ ಹಾನಿ ಮಾಡುವ ಜೀರುಂಡೆಗಳೇ ಬೇರೆ. ಹಸಿ ಮರಕ್ಕೆ ಹಾನಿ ಮಾಡುವವುಗಳು ಮತ್ತು ಒಣ ಮರಕ್ಕೆ ಹಾನಿ ಮಾಡುವವುಗಳು ಬೇರೆ ಬೇರೆ ಇರುತ್ತವೆ.
- ಇಲ್ಲಿ ಚಿತ್ರದಲ್ಲಿ ಕಾಣಿಸಿರುವ ಜೀರುಂಡೆ ರಾಂಬುಟಾನ್ ಮರದ ಹಸಿ ಗೆಲ್ಲುಗಳನ್ನು ಕೊರೆಯುವ ಜೀರುಂಡೆಯಾಗಿದೆ.
- ಇದರ ಉದ್ದ ಹೆಚ್ಚೆಂದರೆ 5 ಮಿಲಿ ಮೀ. ನಷ್ಟು.ಮಾವಿನ ಮರಕ್ಕೆ ಹಾನಿ ಮಾಡುವ ಜೀರುಂಡೆ ಬೇರೆ ಆಗಿರುತ್ತದೆ.
- ಬೆಣ್ಣೆ ಹಣ್ಣಿನ ಮರಕ್ಕೆ ಬಾಧಿಸುವ ಕಾಂಡ ಕೊರಕ ದುಂಬಿಯೂ ಸಹ ರಾಂಬುಟಾನ್ ಮರಕ್ಕೆ ಬಾಧಿಸುವ ದುಂಬಿಯ ತರಹವೇ ಇರುತ್ತದೆ.
- ಇದು ಮಳೆಗಾಲ ಮುಗಿಯುವ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಆ ಸಮಯದಲ್ಲಿ ಅವುಗಳು ಸಂತಾನಾಭಿವೃದ್ದಿ ಹೊಂದುತ್ತವೆ.
ನಿಯಂತ್ರಣ ವಿಧಾನ:
ಈ ಕೀಟವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಒಂದು ಮರದ ಗೆಲ್ಲು ಅಥವಾ ಕಾಂಡಕ್ಕೆ ತೊಂದರೆ ಮಾಡಿದರೆ ನಂತರ ಮತ್ತೊಂದಕ್ಕೆ ಅದು ತೊಂದರೆ ಮಾಡಲೇ ಬೇಕು. ಇತ್ತೀಚೆಗೆ ಇವುಗಳ ಶತೄ ಕೀಟಗಳ ಸಂತತಿ ಕಡಿಮೆಯಾಗಿ ಭಾರೀ ಹಾನಿ ಉಂಟಾಗುತ್ತಿದೆಯೇನೋ ಅನ್ನಿಸುತ್ತದೆ. ಒಂದು ಮರ ಈ ಕೀಟದ ಹಾವಳಿಗೆ ತುತ್ತಾಗಿ ಸತ್ತರೆ, ಅದನ್ನು ಹಾಗೆಯೇ ಬಿಟ್ಟಾಗ ಅದರಲ್ಲಿ ಮರಿಗಳು ಬೆಳೆದು ಮತ್ತೆ ಬೇರೆ ಆಶ್ರಯ ತಾಣವನ್ನು ಹುಡುಕುತ್ತವೆ. ನಿರ್ಲಕ್ಷ್ಯದ ಕಾರಣದಿಂದಾಗಿಯೇ ಇದರ ಸಂತತಿ ಮತ್ತು ಹಾನಿ ಹೆಚ್ಚಾಗುತ್ತಿದೆ ಎಂದು ಹೇಳಬಹುದು.
- ಗೆಲ್ಲು ಒಣಗಿದ್ದರೆ ಅಥವಾ ಕಾಂಡವೇ ಬಲಿಯಾಗಿದ್ದರೆ, ಎಲ್ಲಿಯ ತನಕ ಸತ್ತಿದೆಯೋ ಅಲ್ಲಿ ತನಕ ಭಾಗವನ್ನು ಸಂಪೂರ್ಣವಾಗಿ ಕಡಿಯಬೇಕು.
- ಕಡಿದ ಭಾಗವನ್ನು ಹಾಗೆಯೇ ಅಲ್ಲಿ ಬಿಡುವುದಲ್ಲ. ಅದನ್ನು ಸುಡಬೇಕು ಇಲ್ಲವೇ ತೂತುಗಳಿಗೆ ವಿಷ ಕೀಟನಾಶಕ ( ಡೆಲ್ಟ್ರಾ ಮೆಥ್ರಿನ್) ಒಳಗೆ ಹೋಗುವಂತೆ ಸಿಂಪಡಿಸಬೇಕು.
- ಇದು ಪ್ರಾಮುಖ್ಯವಾದ ಕೆಲಸ.
ಸತ್ತ ಮರಗಳಿದ್ದರೆ ಅದನ್ನು ಹಾಗೇ ಉಳಿಸಿಕೊಳ್ಳಬೇಡಿ. ಅಲ್ಲಿ ಈ ದುಂಬಿಯ ಸಂತಾನಾಭಿವೃದ್ದಿಯಾಗುತ್ತದೆ. ಮರಮಟ್ಟುಗಳಿಗೆ ನೀರೊತ್ತಾಯ ಆಗದಂತೆ, ಪೋಷಕಾಂಶದ ಕೊರತೆ ಆಗದಂತೆ ನೋಡಿಕೊಳ್ಳಬೇಕು.
ಈ ಕೀಟ ಪ್ರವೇಶ ಆಗದಂತೆ ತಡೆಯಲು ಕಾಂಡಕ್ಕೆ ಸುಣ್ಣ ಮತ್ತು ಕಾಪರ್ ಸಲ್ಫೇಟ್ ಹಾಗೂ ಡೆಲ್ಟ್ರಾಮೆಥ್ರಿನ್ ಕೀಟನಾಶಕದ ಲೇಪನ ಪರಿಣಾಮಕಾರಿ. ಸಣ್ಣ ಸಣ್ಣ ಬೆಳೆಗಾರರಿಗೆ ಒಂದು ಎರಡು ಮರ ಉಳ್ಳ ರೈತರು ಮರದ ಕಾಂಡದಲ್ಲಿ ಇಂತಹ ತೂತು ಕೊರೆಯುವಿಕೆ ಕಂಡು ಬಂದರೆ ತಕ್ಷಣ ಆ ಗೆಲ್ಲನ್ನು ಒಣಗಿದ ಭಾಗದಿಂದ ½ ಅಡಿ ಹಿಂದಕ್ಕೆ ಕಡಿದು ತೆಗೆದು ಅದನ್ನು ಸುಡಬೇಕು. ಆಗ ಅದರ ಒಳಗೆ ಇರುವ ದುಂಬಿ, ಮತ್ತು ಲಾರ್ವೆ ನಾಶವಾಗುತ್ತದೆ. ಕೀಟನಾಶಕ ಲಭ್ಯವಾಗದೆ ಇದ್ದರೆ ಎಲ್ಲಾ ಅಂಗಡಿಗಳಲ್ಲಿ ಸಿಗುವ ಲಕ್ಷ್ಮಣ ರೇಖೆ ಎಂಬ ಚಾಕ್ ಅನ್ನು ಹುಡಿ ಮಾಡಿ ಅಥವಾ ದ್ರವ ಮಾಡಿ ತೂತಿಗೆ ಹಾಕಿದರೆ ದುಂಬಿ ಮತ್ತು ಹುಳ ಸಾಯುತ್ತದೆ.