ನಿಮ್ಮಲ್ಲಿ ಸಾಗುವಾನಿ ಮರ ಇದೆಯೇ , ಅದರ ಬುಡದಲ್ಲಿ ಬಿದ್ದ ತರಗೆಲೆಯ ಅಡಿಯ ಮಣ್ಣನ್ನು ಒಮ್ಮೆ ಗಮನ ಇಟ್ಟು ನೋಡಿ. ಇದು ಫಲವತ್ತಾದ ರಸಸಾರ ತಟಸ್ಥ ಇರುವ ಮೆಕ್ಕಲು ಮಣ್ಣಾಗಿರುತ್ತದೆ. ಸಾಗುವಾನಿ ಮರದ ಎಲೆಗಳು ಮಣ್ಣನ್ನು ಫಲವತ್ತಾಗಿಸುತ್ತದೆ, ಹಾಗೆಯೇ ಮಣ್ಣಿನ pH ಅನ್ನು ಸರಿಮಾಡಿಕೊಡುತ್ತದೆ.
- ಸಾಗುವಾನಿ ಮರದ ಬುಡದಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ಇರುತ್ತವೆ ಎಂಬುದಾಗಿ ಕೇರಳದ ಅರಣ್ಯ ಸಂಶೊಧಾನ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ.
- ಇದರ ಎಲೆಯ ಗಾತ್ರ, ಅದರ ತೂಕ, ಅದು ಕರಗುವ ವೇಗ ನಿಜವಾಗಿಯೂ ಉಳಿದ ಮರಮಟ್ಟುಗಳ ಎಲೆಗಿಂತ ತುಂಬಾ ಭಿನ್ನ.
ಇದನ್ನು ಮರಮಟ್ಟಿಗಾಗಿ ಮತ್ತು ಮಣ್ಣಿನ ಫಲವತ್ತತೆ ಉತ್ತಮಪಡಿಸುವುದಕ್ಕಾಗಿ ಎಲ್ಲಾ ರೈತರೂ ಬೆಳೆಸಬಹುದು. ತೋಟದ ಬೆಳೆಗಳ ಮಧ್ಯದಲ್ಲಿ ಸಹ ( ಎಕ್ರೆಗೆ 5-10) ಸಂಖ್ಯೆಯಲ್ಲಿ ಬೆಳೆಸಿದರೆ ಸೊಪ್ಪು ತರಗೆಲೆಯಲ್ಲಿ ನೀವು ಸ್ವಾವಲಂಬಿಗಳಾಗುವಿರಿ. ಒಂದು 25 ವರ್ಷದ ಸಾಗುವಾನಿ ಮರ ವಾರ್ಷಿಕ 10 ಕಿಲೋದಷ್ಟು ಒಣ ಸಾವಯವ ಸೊಪ್ಪು ಕೊಡುತ್ತದೆ. ಹಾಗೆಯೇ 50 -75 ಕಿಲೋ ತನಕ ಹಸಿ ಸೊಪ್ಪನ್ನು ಕೊಡುತ್ತದೆ.
ಸಾಗುವಾನಿಯ ಎಲೆ ಉತ್ತಮ ಬೆಳೆ ಪೋಷಕ:
- ತೇಗ, ಅಥವಾ ಸಾಗುವಾನಿಯನ್ನು ಬರೇ ಮರಮಟ್ಟು ಬೆಳೆ ಎಂದು ಪರಿಗಣಿಸಬೇಡಿ.
- ಇದು ಒಂದು ಕೃಷಿ ಪೂರಕ ಮರಮಟ್ಟು. ಇದನ್ನು ನೀವು ಬೆಳೆಸಿದರೆ ಸಾಕಷ್ಟು ಸಾವಯವ ಪೋಷಕಗಳು ದೊರೆಯುತ್ತಲೇ ಇರುತ್ತವೆ.
- ಪ್ರತಿಯೋಂದೂ ಮರಮಟ್ಟೂ ಸಹ ತನ್ನ ಬೆಳೆದ ಎಲೆಯನ್ನು ಉದುರಿಸಿ ಹೊಸ ಎಲೆಯನ್ನು ಉತ್ಪಾದಿಸುತ್ತದೆ.
- ಉದುರಿದ ಎಲೆ ಬುಡದ ಮಣ್ಣಿಗೆ ಬಿದ್ದು ಆ ಮಣ್ಣನ್ನು ಫಲವತ್ತಾಗಿಸುತ್ತದೆ.
- ಒಣ ಎಲೆಗಳ ಮೇಲೆ ಮಳೆಗಾಲದ ಮಳೆ ಬಿದ್ದಾಕ್ಷಣ ಅದರಲ್ಲಿ ಸೂಕ್ಷ್ಮಾಣು ಜೀವಿಗಳು ಕೆಲಸ ಮಾಡಿ, ಅದನ್ನು ಫಲವತ್ತಾದ ಮಣ್ಣಾಗಿ ಪರಿವರ್ತಿಸುತ್ತದೆ.
- ಈ ಮೆಕ್ಕಲು ಮಣ್ಣು ಬೇರೆ ಮಣ್ಣಿನಂತಲ್ಲ. ಇದರಲ್ಲಿ ಸಸ್ಯ ಪೋಷಕ ನೈಸರ್ಗಿಕ ಸಾರಾಂಶಗಳು ಹೇರಳವಾಗಿರುತ್ತವೆ.
- ಸಾಗುವಾನಿ ಮರದಿಂದ ಬೀಳುವ ಎಲೆಗಳು ಉಳಿದ ಎಲ್ಲಾ ಎಲೆಗಳಿಗಿಂತ ಹೆಚ್ಚು ಸಾರಾಂಶಗಳಿಂದ ಕೂಡಿದ್ದು, ಇದು ಮಣ್ಣಿನ ಜೈವಿಕ ಮತ್ತು ಭೌತಿಕ ರಚನೆಯನ್ನು ಸಾಕಷ್ಟು ಸುಧಾರಿಸುತ್ತದೆ.
ಮಣ್ಣು ಸವಕಳಿ ತಡೆಯುತ್ತದೆ:
- ಸಾಗುವಾನಿಯ ಎಲೆ ದೊಡ್ದ ಎಲೆಯಾಗಿದ್ದು, ಇದು ಬೇಸಿಗೆಯ ಮಾರ್ಚ್ ತಿಂಗಳಲ್ಲಿ ಎಲೆ ಉದುರಿಸುವ ಮರ.
- ಈ ಸಮಯದಲ್ಲಿ ತೆನ್ನೆಲ್ಲಾ ಎಲೆಯನ್ನೂ ಉದುರಿಸಿ ಮರ ಬೋಳಾಗುತ್ತದೆ.
- ಬಿದ್ದ ಎಲೆಗಳೆಲ್ಲಾ ಮಣ್ಣಿಗೆ ಹೊದಿಕೆಯಾಗಿ ಇದ್ದು ನೆಲದ ಮಣ್ಣು ಸ್ವಲ್ಪವೂ ಕೊಚ್ಚಣೆಯಾಗದಂತೆ ತಡೆಯುತ್ತದೆ.
- ಬೇಸಿಗೆಯ ನೀರೊತ್ತಾಯವನ್ನು ತಡೆದುಕೊಳ್ಳುವ ಸಲುವಾಗಿ ಪ್ರಾಕೃತಿಕವಾಗಿ ಆಗುವಂತದ್ದು.
ಸಾಗುವಾನಿಯ ಮರದ ಬಿಡದಲ್ಲಿ ನಡೆಯುವಾಗ ಮೆತ್ತನೆ ಹಾಸಿಗೆಯ ಮೇಲೆ ನಡೆದ ಆನುಭವವಾಗುತ್ತದೆ. ಮಳೆಗಾಲ ಮುಗಿದ ನಂತರ ನೆಲ ಒಣಗಿದಾಗ ಚಕ್ಕುಲಿ ಹುಡಿಯಾದಂತೆ ಎರೆಮಣ್ಣು ನಡೆದುಕೊಂದು ಹೋಗುವಾಗ ಹುಡಿಯಾಗುತ್ತದೆ.
- ಸಾಮಾನ್ಯವಾಗಿ ಬಹುತೇಕ ಮರಮಟ್ಟಿನ ಕೆಳಭಾಗದ ಮಣ್ಣು ವರ್ಷ ವರ್ಷವೂ ಕರಗಿ ಮರದ ಬೇರು ಕಾಣಿಸುತ್ತದೆಯಾದರೆ, ಸಾಗುವಾನಿಯಲ್ಲಿ ಹಾಗಿಲ್ಲ.
- ವರ್ಷ ವರ್ಷವೂ ಮೇಲ್ಮಣ್ಣು ಸೇರ್ಪಡೆಯಾಗುತ್ತದೆ.
- ಕೇರಳದ ಮಲಪುರಂ, ಮತ್ತು ವಯನಾಡು ಪ್ರದೇಶಗಳ ಕರ್ನಾತಕದ ದಾಂಡೇಲಿ, ಶಿವಮೊಗ್ಗ ಮುಂತಾದ ಸಾಗುವಾನಿ ಮರಮಟ್ಟುಗಳು ಇರುವ ಭಾಗಗಳ ಮಣ್ಣು ಅತ್ಯಂತ ಫಲವತ್ತಾಗಿರುತ್ತದೆ.
- ಇದು ಸಾಗುವಾನಿ ಮರವನ್ನು ಒಂದು ಹಂತದ (10ವರ್ಷದ ತರುವಾಯ)ನಂತರ ವೇಗವಾಗಿ ಬೆಳೆಯುವಂತೆ ಮಾಡುತ್ತದೆ.
ಬುಡದ ಮಣ್ಣು ಬಂಗಾರಕ್ಕೆ ಸಮ:
- ಸಾಗುವಾನಿ ಮರದ ಬುಡದ ಬೇರಿನ ಸುತ್ತ, VAM ವೆಸಿಕ್ಯುಲರ್ ಅರ್ಬುಸ್ಕುಲರ್ ಮೈಕೋರೈಝಾ ಎಂಬ ಬಹಳ ಉಪಯುಕ್ತ ಸೂಕ್ಷ್ಮಾಣು ಜೀವಿಯ ವಾಸವಿರುತ್ತದೆ.
- ಈ ಸೂಕ್ಷ್ಮಾಣು ಜೀವಿ ಎಲ್ಲಾ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಕೊಡುವಂತದ್ದು.
- ಸುಮಾರು 11 ಜಾತಿಯ VAM ಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ.
- ಇದನ್ನು ತಮಿಳುನಾಡಿನ ಏರ್ಕಾಡ್ ಬೆಟ್ಟಗಳ ಸಾಗುವಾನಿ ನೆಡುತೋಪಿನಲ್ಲಿ ವಿಜ್ಞಾನಿಗಳಾದ ಎನ್ ರಾಮನ್ , ಎನ್ ನಾಗರಾಜನ್, ಕೆ ಸಾಂಬನಾದನ್ ಮತ್ತು ಎಸ್ ಗೋಪಿನಾಥನ್ ಇವರು ಕಂಡುಕೊಂಡಿದ್ದಾರೆ.
- ಇದಲ್ಲದೆ ಸಾಗುವಾನಿ ಮರದ ಬುಡದ ಮಣ್ಣಿನಲ್ಲಿ ಸಾರಜನಕ ತುಂಬಾ ಕಡಿಮೆ ಇದ್ದು ರಂಜಕ ಮತ್ತು ಪೊಟ್ಯಾಶಿಯಂ ಹೆಚ್ಚು ಇರುತ್ತದೆ.
- ಹಾಗೆಯೇ ಸೂಕ್ಷ್ಮ ಪೋಷಕಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಸತು ಮತ್ತು ತಾಮ್ರ ಹಾಗೂ ಕಬ್ಬಿಣ ಅಂಶಗಳೂ ಆ ಮಣ್ಣಿನಲ್ಲಿ ಇವೆ ಎಂಬುದಾಗಿ ಸಂಶೋಧನೆಗಳಿಂದ ಕಂಡುಕೊಂಡಿದ್ದಾರೆ.
- ಮಣ್ಣಿನ ರಸಸಾರವು ಸಾಮಾನ್ಯವಾಗಿ ಆಮ್ಲೀಯವೇ ಇರುವಲ್ಲಿ ಸಾಗುವಾನಿ ಎಲೆ ಬಿದ್ದ ಮಣ್ಣಿನ ರಸಸಾರ ಕ್ಷಾರೀಯವಾಗಿರುತ್ತದೆ.
- ಮಣ್ಣಿನ ಸಾವಯವ ಇಂಗಾಲ ಅನುಪಾತ ಸಮೀಪ ಇರುತ್ತದೆ.
- ಮಣ್ಣಿನಲ್ಲಿ ರಂದ್ರಗಳು ಹೆಚ್ಚಾಗಿ ಸಚ್ಚಿಧ್ರತೆ ಹೆಚ್ಚುತ್ತದೆ.
- ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಬರುತ್ತದೆ. ಇವು ನೀರನ್ನೂ ಹೆಚ್ಚು ಬಳಸದೆ ನೀರಿನ ಸಂರಕ್ಷಕವೂ ಆಗಿರುತ್ತವೆ.
ಸಾಗುವಾನಿ ಬೆಳೆಸಿ, ಅದರ ಸೊಪ್ಪನ್ನು ಬೆಳೆಗಳ ಬುಡಕ್ಕೆ ಹಾಕಬಹುದು.ಈ ಮರದ ಬುಡದ ಮಣ್ಣು ಜೀವಾಣು ಸಮೃದ್ಧವಾದ ಮಣ್ಣಾಗಿರುವ ಕಾರಣ ಇದನ್ನು ಜೀವಾಮೃತ ಇತ್ಯಾದಿಗಳಿಗೆ ಬಳಕೆ ಮಾಡಬಹುದು. ಶ್ರೀಯುತ ದಿ.ನಾರಾಯಣ ರೆಡ್ಡಿಯವರು ಜೀವಾಣು ಸಮೃದ್ಧ ಮಣ್ಣು ಎಂದು ಹೇಳುತ್ತಿದ್ದರಲ್ಲವೇ? ಇವರ ಹೊಲದಲ್ಲಿ ಸಾಕಷ್ಟು ಸಾಗುವಾನಿ ಮರಗಳಿದ್ದವು.