ಎಳನೀರು ತೆಗೆಯುವುದೆಂದರೆ ಮರ ಹತ್ತುವುದು, ಇಳಿಸುವುದೇ ತೊಂದರೆ. ಅದರೆ ಈ ಗಿಡ್ದ ತಳಿಯ ತೆಂಗು ಬೆಳೆಸಿದರೆ ಅದು ವರ್ಷಕ್ಕೆ ಹೆಚ್ಚೆಂದರೆ 1 ಅಡಿ ಮಾತ್ರ ಬೆಳೆಯುವುದು.
ಎಳನೀರಿಗೆ ಮುಂದೆ ಭಾರೀ ಬೇಡಿಕೆ ಬರಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಉಳಿದ ಸಿಂಥೆಟಿಕ್ ಪಾನೀಯಗಳ ಸ್ಥಾನವನ್ನು ಇದು ಕೆಳಕ್ಕೆ ಹಾಕಿ ಸರ್ವಮಾನ್ಯವಾಗಲಿದೆ. ಆದ ಕಾರಣ ತೆಂಗು ಬೆಳೆಯುವವರು ಬರೇ ಕಾಯಿಗಾಗಿ ಮಾತ್ರ ತೆಂಗು ಬೆಳೆಯದಿರಿ. ಕಾಯಿಗೆ ಕೆಲವು ಸಮಯ ಬೇಡಿಕೆ, ಬೆಲೆ ಕಡಿಮೆಯಾಗಬಹುದು. ಆದರೆ ಎಳನೀರಿಗೆ ಎಂತಹ ಸಂಕಷ್ಟ ಕಾಲದಲ್ಲೂ ಬೇಡಿಕೆ ಇರುತ್ತದೆ. ಆದುದರಿಂದ ಎಳನೀರಿಗೆ ಸೂಕ್ತವಾದ ತಳಿ ನೆಡುವ ಮೂಲಕ ಸ್ವಲ್ಪ ಎಳನೀರಿನ ಉತ್ಪಾದನೆಯತ್ತ ಬದಲಾಗೋಣ.
- ತೆಂಗಿನ ಮರದಲ್ಲಿ ಮಿಡಿ ಬಿಟ್ಟು ಅದು ನಿಧಾನವಾಗಿ ಬೆಳೆಯುತ್ತಾ ಒಳ ಭಾಗದಲ್ಲಿ ಅವಕಾಶವನ್ನು (Cavity) ಬೆಳೆಸುತ್ತಾ ಅದು ಗರಿಷ್ಟ ಮಟ್ಟಕ್ಕೆ ತಲುಪಿ, ಆ ನಂತರ ಅದರಲ್ಲಿ ಗಂಜಿ ಬೆಳೆಯಲಾರಂಬಿಸುತ್ತದೆ.
- ಗಂಜಿ ಮೂಡುವ ಸಮಯದಲ್ಲಿ ಅದನ್ನು ಕೊಯಿಲು ಮಾಡಿದರೆ ಅದು ಎಳನೀರಾಗುತ್ತದೆ.
- ಗಂಜಿ ಬಲಿತು ಗಟ್ಟಿಯಾದ ನಂತರ ಕೊಯಿಲು ಮಾಡಿದರೆ ಅದು ಕಾಯಿಯಾಗುತ್ತದೆ.
- ಗಂಜಿ ಮೂಡುವ ಹಂತದಲ್ಲೇ ಅದಕ್ಕೆ ಸಿಹಿ ಅಂಶ ಸೇರಿಕೊಳ್ಳುವ ಕೆಲವು ತಳಿಗಳು ಎಳನೀರಿಗೆ ಸೂಕ್ತವಾದ ತಳಿಗಳೆಂದು ಗುರುತಿಸಲಾಗಿದೆ.
ಎಳನೀರಿಗೆ ಬಳಕೆಯಾಗುವ ಕಾಯಿ ಹೇಗಿರಬೇಕು:
- ಮುಖ್ಯವಾಗಿ ಎಳನೀರು ದೊಡ್ದದಾಗಿದ್ದರೆ ಸಾಗಾಟಕ್ಕೆ ಕಷ್ಟ.
- ಮಾರಾಟ ಮಾಡುವಾಗಲೂ(ಕಡಿಯುವುದು ಇತ್ಯಾದಿ) ಕಷ್ಟ, ಕುಡಿಯಲೂ ಸಹ ಕಷ್ಟ.
- ಹದ ಗಾತ್ರದ ತೆಳು ಸಿಪ್ಪೆಯ ಕಾಯಿಯೇ ಎಲ್ಲದಕ್ಕೂ ಯೋಗ್ಯ.
- ಎಲ್ಲಾ ತೆಂಗಿನ ತಳಿಗಳ ಫಲವೂ ಗಂಜಿ ಕೂಡಿಕೊಳ್ಳುವ ಸಮಯದಲ್ಲಿ ಎಳನೀರಾಗಿಯೇ ಇರುತ್ತದೆ.
- ಎಳನೀರಿನ ಉದ್ದೇಶಕ್ಕೆ ಯಾವ ತಳಿ ಸೂಕ್ತ ಎಂದು ಗುರುತಿಸಲು ಕೆಲವು ಮಾನದಂಡಗಳಿರುತ್ತವೆ.
- ತೆಂಗಿನ ಕಾಯಿ ಉದ್ದೇಶಕ್ಕೂ ಕೆಲವು ಮಾನದಂಡಗಳಿವೆ.
- ಆದರೆ ಕುಡಿಯಲು ಬಳಕೆಯಾಗುವ ಎಳನೀರಿಗೆ ಮಾತ್ರ ಇನ್ನೂ ಹೆಚ್ಚಿನ ಮಾನದಂಡಗಳಿರುತ್ತವೆ.
- ಕಾಯಿ ಸಾಧಾರಣ ಗಾತ್ರದಲ್ಲಿದ್ದರೂ ಒಳಗಿನ ಅವಕಾಶ ದೊಡ್ಡದಾಗಿರುವ ತಳಿಗಳಲ್ಲಿ ನೀರಿನ ಪ್ರಮಾಣ ಹೆಚ್ಚು ಇರುತ್ತದೆ.
- ನೀರಿನ ಪ್ರಮಾಣ ಹೆಚ್ಚು ಇರುವಂತದ್ದು ಎಳನೀರಿಗೆ ಸೂಕ್ತವಾದುದು. ಬರೇ ಇಷ್ಟೇ ಅಲ್ಲ.
- ಎಳ ನೀರು ಎಂದರೆ ಅದು ದೊಡ್ದ ಕಾಯಿಯಾಗಿರಬಾರದು. ಸಾಧಾರಣ ಗಾತ್ರದಲ್ಲಿರಬೇಕು.
- ಅದರ ಸಿಪ್ಪೆ ತೆಳುವಾಗಿ ತುದಿ ಭಾಗ ಅಥವಾ ಬುಡ ಭಾಗವನ್ನು ಸ್ವಲ್ಪ ಸಿಪ್ಪೆ ತೆಗೆದರೂ ನೀರು ಸಿಗಬೇಕು.
- ಅಂತಹ ತೆಳು ಸಿಪ್ಪೆಯ ಸಾಧಾರಣ ಗಾತ್ರದ ತೆಂಗಿನ ಫಲ ಎಳನೀರಿಗೆ ಹೆಚ್ಚು ಸೂಕ್ತ.
ಎಳನೀರಿಗೆ ಹೊಂದಿಕೆಯಾಗುವ ತೆಂಗಿನ ಮರದ ಕಾಯಿಯ ಗಾತ್ರ ದುಂಡಗೆ ಆಗಿರಬೇಕು. ಕೆಲವು ಉದ್ದುಂಡಗೆ ಕಾಯಿಗಳು ಇರುತ್ತವೆ. ಇಂತಹ ಕಾಯಿಗಳು ತೆಂಗಿನ ಕಾಯಿ ಉದ್ದೇಶಕ್ಕೇ ಸೂಕ್ತವಾಗಿರುತ್ತದೆ.
- ಎಳನೀರು ಎಂದರೆ ಅದಕ್ಕೆ ಒಂದು ರುಚಿ ಇರುತ್ತದೆ. ಅದು ಸ್ವಲ್ಪ ಸಿಹಿ. ಗಂಜಿ ಹೆಚ್ಚಾದಾಗ ಸಿಹಿ ರುಚಿ ಬರುತ್ತದೆ.
- ಸ್ವಲ್ಪ ಹೆಚ್ಚು ಬೆಳೆದರೆ ಹುಳಿ-ಸಿಹಿ ರುಚಿಯೂ ಬರುತ್ತದೆ.
- ಆದರೆ ಎಳನೀರಿಗೆ ಸೂಕ್ತವಾದ ತಳಿಗಳಲ್ಲಿ ಗಂಜಿ ಅತೀ ಸ್ವಲ್ಪ ಪ್ರಮಾಣದಲ್ಲಿ ಕೂಡಿದಾಗಲೇ ಅದಕ್ಕೆ ಸಿಹಿ ರುಚಿ ಇರುತ್ತದೆ.
- ನೀವು ನಿಮ್ಮ ಬೇರೆ ಬೇರೆ ತೆಂಗಿನ ಮರಗಳ ಎಳನೀರನ್ನು ತೆಗೆದು ಕುಡಿದು ನೋಡಿ.
- ಒಳಗಡೆ ಹೆಚ್ಚು ಅವಕಾಶ ಇರುವ, ಕಾಯಿಯಾದಾಗ ಒಳ ತಿರುಳು ತೆಳ್ಳಗೆ ಇರುವ ಕಾಯಿಗಳ ಎಳನೀರಿನ ರುಚಿ ಚೆನ್ನಾಗಿರುತ್ತದೆ.
- ಕೆಲವು ಸಪ್ಪೆಯೇ ಇರುತ್ತದೆ. ಸ್ವಲ್ಪವಾದರೂ ಸಿಹಿ ಇರುವ ಕಾಯಿಯೇ ಉತ್ತಮ ಎಳನೀರಿನ ಫಲ.
ಎಳನೀರಿಗೆ ಸೂಕ್ತವಾದ ತೆಂಗು:
- ಸಾಮಾನ್ಯವಾಗಿ ಪ್ರತೀಯೊಂದು ತೆಂಗಿನ ಮರಗಳ ಕಾಯಿಗಳೂ ಒಂದಕ್ಕೊಂದು ಭಿನ್ನ ಭಿನ್ನವಾಗಿರುತ್ತವೆ.
- ಇದರಲ್ಲಿ ಎಳನೀರಿಗೆ ಇದು ಸೂಕ್ತ ಎಂದು ನೀವು ಬೀಜಕ್ಕೆ ಇಟ್ಟು ಅದನ್ನು ಸಸಿ ಮಾಡಿದರೆ ಅದಕ್ಕೆ ತಾಯಿ ಗುಣ ಬಾರದೆಯೂ ಇರಬಹುದು.
- ಆದ ಕಾರಣ ಎಳನೀರಿಗೆ ಸೂಕ್ತವಾದ ತಳಿಗಳನ್ನೇ ಆಯ್ಕೆ ಮಾಡುವುದು ಹೆಚ್ಚು ಸೂಕ್ತ.
- ಎಳನೀರಿಗೆ ಗಿಡ್ದ ತಳಿಯ ತೆಂಗಿನ ಕಾಯಿಗಳು ಸೂಕ್ತ. ಗಿಡ್ಡ ತಳಿ ಎಂದರೆ ಅಂತರ ಗಣ್ಣುಗಳು ತುಂಬಾ ಹತ್ತಿರವಾಗಿರುವ ತಳಿ.
- ಪ್ರಪಂಚದಾದ್ಯಂತ ಎತ್ತರದ ಮತ್ತು ಗಿಡ್ದ ತಳಿಯ ತೆಂಗು ಇದೆ.
- ಇವೆರಡರ ಮೂಲವೂ ಅಜ್ಞಾತ.
- ಊಹನೆಯ ಪ್ರಕಾರ ಕೆಲವು ತಲೆಮಾರುಗಳಲ್ಲಿ ಎತ್ತರದ ತಳಿಗಳ ಮಧ್ಯೆ (Inbreeding) ಪರಿವರ್ತನೆ ಹೊಂದಿ (Mutation) ಗಿಡ್ಡ ತಳಿ, ಅರೆ ಗಿಡ್ದ ತಳಿ ಆಗಿರಬಹುದು ಎನ್ನಲಾಗುತ್ತಿದೆ.
ಗಿಡ್ಡ ಮರಗಳ ವಿಶೇಷತೆ:
- ಗಿಡ್ಡ ತಳಿಗಳು ಬೇಗ ಇಳುವರಿ ಕೊಡುತ್ತವೆ.
- ಇದರಲ್ಲಿ ಕಾಯಿ ಕಚ್ಚುವಿಕೆ ಪ್ರಮಾಣ ಹೆಚ್ಚು.
- ಕಾರಣ ಇದು ಹೆಚ್ಚಿನ ಪ್ರಮಾಣದಲ್ಲಿ ಸ್ವಕೀಯ ಪರಾಗಸ್ಪರ್ಶದ (Autogamous) ಮೂಲಕ ಹೆಚ್ಚಾಗಿ ಕಾಯಿ ಕಚ್ಚುತ್ತದೆ.
- ಹಾಗಾಗಿಯೇ ಗಿಡ್ದ ತಳಿಯ ಕಾಯಿಯನ್ನು ಬೀಜಕ್ಕೆ ಇಟ್ಟರೆ ಅದು ಗಿಡ್ಡ ತಳಿಯೇ ಆಗುತ್ತದೆ. ಇದರಲ್ಲಿ ಇಳುವರಿ ಹೆಚ್ಚು.
- ಇದರ ಕೊಬ್ಬರಿ ಭಾಗ ತೆಳು. ಎಣ್ಣೆಗೆ ಇದು ಹೊಂದಿಕೆಯಾಗುವುದಿಲ್ಲ.
- ನೀರು ಸಿಹಿ. ಎತ್ತರದ ಮರ 50 ಅಡಿ ಬೆಳೆಯುವಾಗ ಇದು 25 ಅಡಿಯಷ್ಟೇ ಬೆಳೆಯುತ್ತದೆ.
- ಸುಮಾರು 40 ವರ್ಷಗಳ ತನಕವೂ ಏಕ ಪ್ರಕಾರವಾಗಿ ಕಾಯಿ ಕೊಡುತ್ತಾ ಇರುತ್ತದೆ.
- ಸಿಪ್ಪೆ ಗರಿಷ್ಟ 1-1.5 ಸೆಂ ಮೀ. ಇರಬಹುದು.
ಪ್ರಚಲಿತ ಗಿಡ್ದ ತೆಂಗಿನ ತಳಿಗಳು:
- ಮಲೇಶಿಯಾ ಮೂಲದಲ್ಲಿ ‘ಮಲಯನ್ ಡ್ವಾರ್ಫ್’ ಎಂಬ ತಳಿ ಹೆಸರುವಾಸಿ.
- ಇದರಲ್ಲಿ ಹಳದಿ, ಸೇಬು ಕೆಂಪು, ಮತ್ತು ಹಸುರು ಎಂಬ ಮೂರು ಬಣ್ಣದ ಗಿಡ್ದ ತಳಿಗಳಿವೆ.
- ಇದು ಅತ್ಯಧಿಕ ಇಳುವರಿ ನೀಡಬಲ್ಲ ಪ್ರಪಂಚದಾದ್ಯಂತ ಹೆಸರು ಪಡೆದ ತಳಿ.
- ಆದರೆ ಕರ್ನಾಟಕದ ತೆಂಗು ಬೆಳೆಯುವ ಪ್ರದೇಶಗಳಲ್ಲಿ ಇದರ ಕ್ಷಮತೆ ಅಷ್ಟೊಂದು ಉತ್ತಮವಾಗಿಲ್ಲ.
- ನಮ್ಮಲ್ಲಿ ಕೇರಳ ಮೂಲದ ‘ಚೌಘಾಟ್ ಆರೆಂಜ್ ಡ್ವಾರ್ಫ್’ COD ಮತ್ತು ‘ಚೌಘಾಟ್ ಗ್ರೀನ್ ಡ್ವಾರ್ಪ್’ CGD ಎಂಬ ಎರಡು ತಳಿಗಳು ಪಶ್ಚಿಮ ಕರಾವಳಿಯಲ್ಲಿ ಪ್ರಸಿದ್ದಿ.
- ಪೂರ್ವ ಕರಾವಳಿಯಲ್ಲಿ ಆಂದ್ರ ಪ್ರದೇಶದಲ್ಲಿ ‘ಗಂಗ ಬೊಂಡಂ’ GB ಎಂಬ ತಳಿ ಗಿಡ್ಡ ತಳಿಗಳಾಗಿವೆ.
- ಭಾರತದಲ್ಲಿ ಹಿಂದೆ ಈ ಗಿಡ್ಡ ತಳಿಗಳ ವ್ಯವಸಾಯ ಕಡಿಮೆ ಇತ್ತು.
- ಈಗ ಅದು ಹೆಚ್ಚಾಗಿದ್ದು. ಪೂರ್ವ ಕರಾವಳಿಯ ಭಾಗಗಳಲ್ಲಿ ಎಳನೀರಿಗಾಗಿಯೇ ಚೌಘಾಟ್ ಆರೆಂಜ್ ಡ್ವಾರ್ಫ್ ತಳಿಯನ್ನು ಬೆಳೆಸುತ್ತಿದ್ದಾರೆ.
- ನೆರೆಯ ರಾಜ್ಯಗಳ ಎಳನೀರು ಮಾರುಕಟ್ಟೆಯಲ್ಲಿ ಈ ತಳಿಯ ಮೂಲಕ ಭಾರೀ ಸಂಚಲನವನ್ನು ಉಂಟು ಮಾಡಿದ್ದಾರೆ.
- ಈಗ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಎಳನೀರಿನ ಉದ್ದೇಶದ ಗಿಡ್ದ ತಳಿಯ ವ್ಯವಸಾಯ ಪ್ರಾರಂಭವಾಗಿದೆ.
- COD ಎಂದರೆ ನಮ್ಮಲ್ಲಿ ಗೆಂದಾಳಿ ಎನ್ನುತ್ತಾರೆ.
- CGD ಎಂದರೆ ಅದನ್ನು 18 ತಿಂಗಳ ತಳಿ( ಹದಿನೆಂಟು ಎಲೆ ಬಂದಾಗ ಹೂ ಗೊಂಚಲು ಬಿಡುವ)ಎಂದು ಕರೆಯುತ್ತಾರೆ.
- ಇದಲ್ಲದೆ ಇನ್ನೂ ಒಂದೆರಡು ಗಿಡ್ಡ ಅರೆ ಗಿಡ್ಡ ಎಳನೀರಿಗೆ ಸೂಕ್ತವಾದ ಹಸುರು ತಳಿಗಳಿವೆ.
ಎಳನೀರಿಗೆ ಗಿಡ್ದ ತಳಿಗಳೇ ಶ್ರೇಷ್ಟ.
- ನಮ್ಮಲ್ಲಿ ಕೆಲವು ಭಾಗಗಳಲ್ಲಿ ( ಮೈದಾನ ಪ್ರದೇಶ) ಖಾದ್ಯ ಕೊಬ್ಬರಿ (Edible copra) ಗೆ ಬಳಕೆಯಾಗುವ ತೆಂಗು ಬೆಳೆಯುವ ಕಡೆ ರೈತರು ಎಳನೀರು+ ಕೊಬ್ಬರಿ ಎರಡಕ್ಕೂ ಏಕ ಪ್ರಕಾರದ ತೆಂಗನ್ನು ಬಳಸುತ್ತಾರೆ.
- ಇದು ತಪ್ಪಲ್ಲ. ಇಲ್ಲಿನ ಕಾಯಿಯಲ್ಲಿ ಎಣ್ಣೆ ಅಂಶ ಕಡಿಮೆ ಆದ ಕಾರಣ ಇದಕ್ಕೆ ಸಿಹಿ ಹೆಚ್ಚು.
- ಆದರೆ ಇದರ ನ್ಯೂನತೆ, ಬೀಜದಿಂದ ಬೀಜಕ್ಕೆ ತಳಿ ಗುಣ ಬದಲಾವಣೆ.
- ಇದು ಗಿಡ್ಡ ತಳಿಗಳಲ್ಲಿ ಇಲ್ಲ. ಇದು ನೈಸರ್ಗಿಕವಾಗಿಯೇ ಆ ಗುಣವನ್ನು ಬಿಟ್ಟಿದೆ.
- ಅಷ್ಟಕ್ಕೂ ಅಪರೂಪದಲ್ಲಿ ಆಗುವ ತಳಿ ಬದಲಾವಣೆ ಬಣ್ಣದಲ್ಲಿ ಗೊತ್ತಾಗುತ್ತದೆ.
- ಇದಕ್ಕೆ ಕೀಟ – ರೋಗ ಬಾಧೆ ಹೆಚ್ಚು ಎನ್ನುತ್ತಾರೆ. ಎತ್ತರ ಇಲ್ಲದ ಕಾರಣ ಸ್ವಲ್ಪ ಮಟ್ಟಿಗೆ ಇದು ನಿಜ.
- ಸೂಕ್ತ ನಿರ್ವಹಣೆ ಮಾಡಿದರೆ ಇದನ್ನು ನಿವಾರಿಸಬಹುದು.
ತೆಂಗು ಬೆಳೆಯುವವರು ಮುಂದಿನ ದಿನಗಳಲ್ಲಿ ಜನರ ಅಭಿರುಚಿ ಹೇಗೆ ಬದಲಾವಣೆಗಳು ಉಂಟಾಗಬಹುದು ಎಂಬುದನ್ನು ಸ್ವಲ್ಪ ಮುಂದುವರಿದು ಯೋಚಿಸಿ ಅದಕ್ಕನುಗುಣವಾಗಿ ಬೆಳೆ ಹಾಕಬೇಕು. ರೈತರು ಬರೇ ಒಂದೇ ಆದಾಯದ ಮೂಲದ ಬೆಳೆ ಬೆಳೆಸುವ ಬದಲು ಬೇರೆಬೇರೆ ಮೂಲಗಳಿಂದ ಆದಾಯ ಕೊಡಬಲ್ಲ ಬೆಳೆ ಬೆಳೆಸಿ ಹೆಚ್ಚಿನ ಆದಾಯ ಕ್ರೋಢೀಕರಿಸಿ ಆರ್ಥಿಕ ಸುಧಾರಣೆ ಮಾಡಿಕೊಳ್ಳಬಹುದು.