ನ್ಯಾನೋ ಯೂರಿಯಾ – ಉಪಯೋಗ ಮತ್ತು ಅನುಕೂಲ.

Urea

ನ್ಯಾನೋಯೂರಿಯಾ ಎಂಬ ಹೊಸ ಹೆಸರು ಬಹಳ ಜನರಿಗೆ  ಹೊಸ ಆಕಾಂಕ್ಷೆಯನ್ನು ತಂದಿರಬಹುದು.  ಒಂದು ಗೊಂದಲವನ್ನೂ ಉಂಟುಮಾಡಿರಬಹುದು. ಆದಾಗ್ಯೂ ನ್ಯಾನೋ ಯೂರಿಯಾ ಎಂದರೆ ಏನು ಎಂಬುದು ಪ್ರತೀಯೊಬ್ಬ ಕೃಷಿಕನಿಗೂ ತಿಳಿದಿರಬೇಕು.

ಮುಂದಿನ ದಿನಗಳಲ್ಲಿ ನಮ್ಮ ತಂತ್ರಜ್ಞರು ಸರಿಯಾಗಿ ಕೆಲಸ ಮಾಡಿದ್ದೇ ಆದರೆ ಕೃಷಿ ಒಳಸುರಿಗಳಾದ ಕೀಟನಾಶಕ, ಶಿಲೀಂದ್ರ ನಾಶಕ , ಬೆಳವಣಿಗೆ ಪ್ರಚೋದಕ, ರಸ ಗೊಬ್ಬರ ಎಲ್ಲವೂ ನ್ಯಾನೋ ತಂತ್ರಜ್ಞಾನದ ಮೂಲಕ ರೈತರಿಗೆ ಸಿಗಲಿದೆ.

  • ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನ ಹೊಸತಲ್ಲ.
  • ನ್ಯಾನೋ ಎಂದರೆ ಬುಟ್ಟಿಯಲ್ಲಿ ಕೊಡುವುದನ್ನು ಮುಷ್ಟಿಯಲ್ಲಿ ಕೊಟ್ಟಂತೆ. (ಹಿಂದೆ ಬುಟ್ಟಿಯಲ್ಲಿ ಕೊಟ್ಟಿಗೆ ಗೊಬ್ಬರ ಕೊಡುತ್ತಿದ್ದೆವು, ರಸ ಗೊಬ್ಬರ ಬಂದ ನಂತರ ಅದನ್ನೇ ಮುಷ್ಟಿಯಲ್ಲಿ ಕೊಡುವಂತಾಯಿತು.
  • ನ್ಯಾನೋ ತಂತ್ರಜ್ಜಾನ ಎಂದರೆ ಮುಷ್ಟಿಯಲ್ಲಿ ಕೊಡುವುದನ್ನು ಚಿಟಿಕೆಯಲ್ಲಿ ಕೊಡುವುದು.ಇದರಿಂದ ನಮಗೆಲ್ಲಾ ಕೃಷಿ ತುಂಬಾ ಅನುಕೂಲವಾಗಲಿದೆ.
  • ಭಾರತ ಕಳೆದ 10 ವರ್ಷಗಳ ಹಿಂದೆಯೇ ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬಾದ ಕೃಷಿ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನ ಮಿಷನ್ ಅನ್ನು ಅಳವಡಿಸಿಕೊಳ್ಳುವರೇ ಪ್ರಾರಂಭಿಕ ಹೆಜ್ಜೆ ಇಟ್ಟಿದೆ.
  • ಈಗ ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಈ ತಾಂತ್ರಿಕತೆಯನ್ನು ಕಾರ್ಯ ರೂಪಕ್ಕೆ ತರಲು ಬೇಕಾದ ನೀತಿ ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ.
  • ಇದರಿಂದ ಈ ತಂತ್ರಜ್ಞಾನದ ವಾಣಿಜ್ಯೀಕರಣ ಆಗಲಿದ್ದು, ರೈತರು ಬೆಳೆ ಬೆಳೆಸುವರೇ ನ್ಯಾನೋ ಗೊಬ್ಬರಗಳು, ನ್ಯಾನೋ  ಕೀಟನಾಶಕಗಳು ಹೆಚ್ಚು ಅನುಕೂಲಕರವಾಗಿ ಲಭ್ಯವಾಗಲಿದೆ.
  • ನ್ಯಾನೋ ಉತ್ಪನ್ನಗಳಿಂದ ರೈತರು ಕಡಿಮೆ  ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಾಗಲಿದೆ. nanotechnology in agriculture comprises the controlled release of certain substances, mainly pesticides and fertilizers.
Traditional urea -ಸಾಂಫ್ರದಾಯಿಕ ಯುರಿಯಾ

ನ್ಯಾನೋ ತಂತ್ರಜ್ಞಾನದಲ್ಲಿ ಕೀಟನಾಶಕಗಳನ್ನು, ಶಿಲೀಂದ್ರ ನಾಶಕಗಳನ್ನೂ ತಯಾರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಪೋಷಕಗಳನ್ನೂ ತಯಾರಿಸಲಾಗುತ್ತದೆ. ಈಗ ತಯಾರಾದ ಯೂರಿಯಾ ಸಹ ಇದೇ ಆಗಿದ್ದು,  ಸಾಂಪ್ರದಾಯಿಕ ಯೂರಿಯಾ ಹರಳು ಗೊಬ್ಬರವನ್ನು  1:10 ರ ಪ್ರಮಾಣಕ್ಕೆ ಇಳಿಸಿದ ದ್ರವ ರೂಪದ ಗೊಬ್ಬರವಾಗಿರುತ್ತದೆ. ಇದರ ಉತ್ಪಾದನೆಯ ಉದ್ದೇಶ ಸಾಂಪ್ರದಾಯಿಕ ಯೂರಿಯಾ ಗೊಬ್ಬರ ಬಳಕೆ ಮಾಡುವುದರಿಂದ ಆಗುವ ವಾತಾವರಣ ಮಾಲಿನ್ಯವನ್ನು ತಡೆಯುವುದು.

  • ರೈತರು ರಸ ಗೊಬ್ಬರ ಸಾಗಾಣಿಕೆಗಾಗಿ ಅಟೋ , ವ್ಯಾನ್ ಲಾರಿಯನ್ನು ಅವಲಂಬಿಸಬೇಕಾಗಿಲ್ಲ.
  • ಬರೇ ಕೈ ಚೀಲದಲ್ಲಿ ಎಕ್ರೆಗೆ ಬೇಕಾಗುವ ಯೂರಿಯಾ ಸಾರವನ್ನು ಸಾಗಾಣಿಕೆ ಮಾಡಬಹುದು.

ನ್ಯಾನೋ ಯೂರಿಯಾ ಯಾಕೆ ಸೂಕ್ತ:

  • ಸಾರಜನಕ ಪತ್ರ ಹರಿತ್ತಿನ, ಪ್ರೋಟೋಪ್ಲಾಸ್ಮಾ, ಪ್ರೋಟೀನು ಹಾಗೂ ನ್ಯೂಕ್ಲಿಯಿಕ್ ಆಮ್ಲದ ಒಂದು ಭಾಗ .
  • ಇದು ಗಿಡದ ಹಸುರು ಬಣ್ಣಕ್ಕೆ ಒಟ್ಟಾರೆ ಬೆಳವಣಿಗೆಗೆ ಮತ್ತು ಸಸ್ಯದ ಅಭಿವೃದ್ದಿಗೆ ಕಾರಣವಾದ ಪೊಷಕ.
  • ರೈತರು ಯೂರಿಯಾ ಗೊಬ್ಬರವನ್ನು ಬಳಸುವಾಗ ಅದರಲ್ಲಿ 30-5 % ಮಾತ್ರ ಬಳಕೆಯಾಗಿ ಉಳಿದವುಗಳು ಅಮೋನಿಯಾ ಅಥವಾ ನೈಟ್ರಸ್ ಆಕ್ಸೈಡ್ ಅಥವಾ ನೈಟ್ರೇಟ್ ರೂಪದಲ್ಲಿ ನಷ್ಟವಾಗುತ್ತದೆ.
  • ಇದರಿಂದ ಮಣ್ಣು ಹಾಗು ನೀರು ಕಲುಷಿತವಾಗುತ್ತದೆ.
  • ಅತಿಯಾದ ಸಾರಜನಕ ಬಳಕೆ ರೋಗ ಕೀಟ ಬಾಧೆಗಳನ್ನು ಹೆಚ್ಚು ಮಾಡುತ್ತದೆ.
  • ಸಾರಜನಕ ಗೊಬ್ಬರ ಹರಳು ರೂಪದ ಯೂರಿಯಾವನ್ನು ಪ್ಯಾಕಿಂಗ್ ದಾಸ್ತಾನು ,ಸಾಗಾಟ ಇತ್ಯಾದಿ ಮಾಡುವಾಗ ಒಂದಷ್ಟು ಸಾರಜನಕ ನಶ್ಟವಾಗುತ್ತದೆ.
  • ಇದನ್ನು ನ್ಯಾನೋ ಯೂರಿಯಾ ಕಡಿಮೆ ಮಾಡುತ್ತದೆ.
  • ಈ ದ್ರವ ರೂಪದ  ಸಾರಜನಕ ಗೊಬ್ಬರದಿಂದ ಪರಿಸರಕ್ಕೆ ಹಾನಿ ಇಲ್ಲ. ಮಣ್ಣು ನೀರು ಮಾಲಿನ್ಯವೂ ಇಲ್ಲ.  

ನ್ಯಾನೋ ಯೂರಿಯಾ ಹೇಗೆ ತಯಾರಿಸಲಾಗಿದೆ:

  • ನ್ಯಾನೋ ಯೂರಿಯಾವನ್ನು Nano Urea  ತಾಂತ್ರಿಕವಾಗಿ ಹೇಗೆ ತಯಾರಿಸುತ್ತಾರೆ ಎಂಬುದು ಕೃಷಿಕರಾದ ನಮಗೆ ಅರಿತುಕೊಳ್ಳಲು ಗಟ್ಟಿ ಕಡಲೆಯೇ ಆಗಬಹುದು.
  • ಸರಳವಾಗಿ ಹೇಳಬೇಕಾದರೆ ಸಾಂಪ್ರದಾಯಿಕ ಸಾರಜನಕ ಗೊಬ್ಬರವಾದ ಯೂರಿಯಾವನ್ನು ಸಂಕ್ಷೇಪಿಸಿ ಕೊಟ್ಟದ್ದು ಎನ್ನಬಹುದು.
  • ಇದರ ಉತ್ಪಾದನೆಗೆ ಸಾಕಷ್ಟು ತಾಂತ್ರಿಕ ವ್ಯವಸ್ಥೆಗಳು ಬೇಕು. ತಂತ್ರಜ್ಞರೂ ಬೇಕು.
  • ಇದನ್ನು ಹೇಗೆ ತಯಾರಿಸಲಾಗಿದೆ ಎಂಬ ಬಗ್ಗೆ ತಯಾರಿಕಾ ಸಂಸ್ಥೆ ಯಾವ ವಿವರವನ್ನೂ ನೀಡಿಲ್ಲ.
  • ಒಂದು ಚೀಲ ಸಾಂಪ್ರದಾಯಿಕ ಯೂರಿಯಾದಲ್ಲಿ ಇರುವಷ್ಟು ಸಾರಜನಕವನ್ನು ಅರ್ಧ ಲೀ. ಬಾಟಲಿಯ ದ್ರವ ರೂಪದ ಯೂರಿಯಾದಲ್ಲಿ ಇದನ್ನು ಸಂಕ್ಷೇಪಿಸಲಾಗಿದೆ.
  • ವಿಜ್ಞಾನ ಹೇಳುವಂತೆ ಕೆಲವು ಲೋಹಗಳ ಆಧಾರದಲ್ಲಿ ಇದನ್ನು ತಯಾರಿಸಬಹುದಂತೆ.
  • ವೈದ್ಯಕೀಯ ಕ್ಷೇತ್ರದಲ್ಲಿ ಈ ರೀತಿ ಕೆಲವು ಔಷಧಿಗಳನ್ನು ತಯಾರಿಸಲಾಗುತ್ತಿದೆ.

ಇಫ಼್ಕೋ ಸಂಸ್ಥೆಯು ಈ ಯೂರಿಯಾವನ್ನು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಲ್ಲೇ ತಯಾರಿಸಿದೆಯಂತೆ. ಅದೇನೇ ಇರಲಿ ಭಾರದ ಚೀಲವನ್ನು ಹೊರುವ ಬದಲು ಹಗುರದ ಕ್ಯಾನ್ ಹೊರುವುದು ಉತ್ತಮ.

IFFCO nano urea-ಇಫ್ಕೋ ನ್ಯಾನೊ ಯುರಿಯಾ

ನ್ಯಾನೋ ಯೂರಿಯಾ ಬಳಕೆ:

  • ನ್ಯಾನೋ ಯೂರಿಯಾ ಎಂಬುದು ಬರೇ ಸಾರಜನಕ ಸತ್ವವನ್ನು ಮಾತ್ರ ಒದಗಿಸಿಕೊಡುವ ಪೋಷಕವಾಗಿದ್ದು, ಸಧ್ಯಕ್ಕೆ ಉಳಿದ ರಂಜಕ ಮತ್ತು ಪೊಟ್ಯಾಶ್ ಸತ್ವವನ್ನು ಸಾಂಪ್ರದಾಯಿಕ ವಿಧಾನದಲ್ಲೇ ಬಳಕೆ ಮಾಡಬೇಕು.
  • ತಯಾರಿಕಾ ಸಂಸ್ಥೆ ತಿಳಿಸುವಂತೆ ಇದನ್ನು ಪತ್ರ ಸಿಂಚನಕ್ಕಾಗಿ ( Foliar spray) ಬಳಕೆ ಮಾಡಬೇಕು.
  • ಒಂದು ಲೀ. ನೀರಿಗೆ 4 ಮಿಲಿ. ಲೀ. ನಂತೆ ಮಿಶ್ರಣ  ಮಾಡಿ ಸಿಂಪರಣೆ ಮಾಡುವುದರಿಂದ ಸಾರಜನಕದ ತೃಷೆ ನೀಗುತ್ತದೆ. ನೆಲಕ್ಕೆ ಹಾಕುವಂತದ್ದಲ್ಲ.
  •  ಎಷ್ಟು ಸಮಯದ ತನಕ  ಮತ್ತು  ಒಂದು ಬೆಳೆಗೆ ಎಷ್ಟು ಬಾರಿ ಸಿಂಪರಣೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ.
  • ಸಿಂಪರಣೆ ಸಹ ಯಾವ ಪ್ರಮಾಣದಲ್ಲಿ ಮಾಡಬೇಕು( ಸಾಮಾನ್ಯ ನಾಸಲ್ ನ ಸಿಂಪರಣೆಯೇ ಅಥವಾ ಮೈಕ್ರಾನ್ ಸಿಂಪರಣೆಯೇ ಎಂಬ ಬಗ್ಗೆ ಗೊಂದಲಗಳಿವೆ.
Only for foliar spray- ಸಿಂಪರಣೆಗೆ ಮಾತ್ರ

ನ್ಯಾನೋ ಯೂರಿಯಾ ಮಾತ್ರವಲ್ಲ:

  • ಇದೇ ಸಂಸ್ಥೆ ಯು ಯೂರಿಯಾ ಮಾತ್ರವಲ್ಲ. ನ್ಯಾನೋ ಕಾಪರ್ , ನ್ಯಾನೋ ಜಿಂಕ್ ಮುಂತಾದ ಉತ್ಪನ್ನವನ್ನೂ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ.
  • ನ್ಯಾನೋ ತಂತ್ರಜ್ಞಾನದಲ್ಲಿ ಬೇರೆ ಬೇರೆ ಬಗೆಯ ಕೀಟ ನಾಶಕಗಳು, ರೋಗ ನಾಶಕಗಳು ಸಧ್ಯವೇ ಮಾರುಕಟ್ಟೆಗೆ ಬರಲಿದೆ.
  • ನ್ಯಾನೋ ತಂತ್ರಗಾರಿಕೆಯಲ್ಲಿ ತಯಾರಿಸಲಾದ  ಕೀಟನಾಶಕವನ್ನು ಬಳಸಿದಲ್ಲಿ ಅದರ ಅಡ್ಡ ಪರಿಣಾಮ ಇರುವುದಿಲ್ಲ.
  • ಅದರ ಕ್ಷಮತೆಯೂ ಹೆಚ್ಚು ಇರುತ್ತದೆ. ಪರಿಸರ ಮಾಲಿನ್ಯವೂ ಇರುವುದಿಲ್ಲ.
  • ಮಾರ್ಪಡಿಸಿದ ತಳಿಗಳು ಸಹ ನ್ಯಾನೋ ತಂತ್ರಜ್ಞಾನದಲ್ಲಿ ಸೇರಿದೆ.
  • ಹಲವಾರು ನಿಯಂತ್ರಣಕ್ಕೆ ಜಠಿಲವಾದ ರೋಗಗಳನ್ನು ಸಹ ಇದರ ಅಳವಡಿಕೆಯಿಂದ ನಿಯಂತ್ರಣ ಮಾಡಲಿಕ್ಕಾಗುತ್ತದೆ.
  • ಮುಂದುವರಿದ ದೇಶಗಳಲ್ಲಿ ಈ ತಂತ್ರಜ್ಞಾನವನ್ನು ಉತ್ತಮವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.
  • ಇದು ನಮ್ಮ ಸಾಂಪ್ರದಾಯಿಕ ಬೆಳೆ ರಕ್ಷಕಗಳಿಗಿಂತ ಸುರಕ್ಷಿತವಾಗಿಯೇ ಇರುತ್ತದೆ.

ಲೋಹ ಆಧಾರಿತವಾಗಿ ಸಸ್ಯ ರೋಗಗಳನ್ನು ಪ್ರತಿಬಂಧಿಸಬಹುದು ಅದಕ್ಕೆ  ಒಂದು ಉದಾಹರಣೆ ನ್ಯಾನೋ ಬೆಳ್ಳಿ( ಸಿಲ್ವರ್) . ಇದಕ್ಕೆ ಬ್ಯಾಕ್ಟೀರಿಯಾ ಪ್ರತಿಬಂಧಕ ಗುಣ ಇದೆ. ಆ್ಯಂಟೀ ಮೈಕ್ರೋಬಿಯಲ್ ( ಜೀವಾಣು ಪ್ರತಿಬಂಧಕ)ವಾಗಿಯೂ ಕೆಲಸ ಮಾಡುತ್ತದೆ. ಇದರಿಂದ ಕೆಲವು ಶಿಲೀಂದ್ರ ನಾಶಕವನ್ನು ತಯಾರಿಸಬಹುದು. ಬ್ಯಾಕ್ಟೀರಿಯಾ ನಾಶಕವನ್ನು ತಯಾರಿಸಬಹುದು.

  • ಕೊಲೊಯ್ಡಲ್ ನ್ಯಾನೋ ಸಿಲ್ವರ್, ನ್ಯಾನೊ ಅಲ್ಯೂಮಿನೊ-ಸಿಲಿಕೇಟ್, ಟೈಟಾನಿಯಂ ಡೈಆಕ್ಸೈಡ್, ಕಾರ್ಬನ್ ನ್ಯಾನೊವಸ್ತುಗಳು ಮುಂತಾದವುಗಳ ಮೂಲಕ ಬೇರೆ ಬೇರೆ ಸಸ್ಯ ಸಂರಕ್ಷಕಗಳನ್ನು ತಯಾರಿಸಲಿಕ್ಕಾಗುತ್ತದೆ.
  • ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ಈ ನ್ಯಾನೋ ತಂತ್ರಜ್ಞಾನ  ಹಾಸು ಹೊಕ್ಕಾಗಲಿಕ್ಕಿದೆ.
  • ಇದೇ ತಂತ್ರಜ್ಞಾನದಲ್ಲಿ ಸಸ್ಯ ರೋಗಗಳನ್ನು ಸಹ ಕರಾರುವಕ್ಕಾಗಿ ಪತ್ತೆ ಹಚ್ಚುವ ತಂತ್ರಜ್ಞಾನವೂ ಬರಲಿದೆ.

ನ್ಯಾನೋ ರೈತರು ನಾವಾಗಬೇಕು:

  • ನಮ್ಮ ರೈತರ ಅತೀ ದೊಡ್ಡ ವೀಕ್ ನೆಸ್ ಎಂದರೆ ಯಾವುದೇ ಹೊಸ ತಂತ್ರಜ್ಞಾನ ಬಂದಾಕ್ಷಣ ವಿರೋಧ ವ್ಯಕ್ತಪಡಿಸುವುದು.
  • ಸರಿಯಾಗಿ ತಿಳಿದು ವಿರೋಧ ವ್ಯಕ್ತ ಪಡಿಸುವುದಿದ್ದರೆ ಅದು ಉತ್ತಮವೇ.
  • ಆದರೆ ನಮ್ಮ ಹಲವಾರು  ರೈತರಿಗೆ ಇನ್ನೂ ಸಹ NPK ಬಗ್ಗೆಯೇ ಗೊತ್ತಿಲ್ಲ.
  • ವಿರೋಧಗಳು ಬೇಕು. ಆದರೆ ಅದಕ್ಕೆ ಬೇಸ್ ಇರಬೇಕು. ಆ ಮಟ್ಟಿಗೆ ನಮ್ಮ ರೈತರು ಜ್ಞಾನವನ್ನು ಹೊಂದಬೇಕು.
  • ಯಾವುದೋ ಒಂದು ಬಾಡಿಗೆಗೆ ಗಲಾಟೆ ಎಬ್ಬಿಸುವ ಸಂಘಟನೆಗಳು ಹೇಳುವ ರಂಗು ರಂಗಾದ ಮಾತುಗಳಿಗೆ ಬೆಲೆ ಕೊಟ್ಟು ಜನರನ್ನು ಗೊಂದಲಕ್ಕೆ ಸಿಕ್ಕಿಸಬಾರದು.
  • ನ್ಯಾನೋ ಯೂರಿಯಾ ಅಥವಾ ಇನ್ನೂ ಮುಂದಿನ ದಿನಗಳಲ್ಲಿ ಬರಲಿರುವ ನ್ಯಾನೋ ತಂತ್ರಜ್ಞಾನದ ಬಗ್ಗೆ ಇದು ಆಗಿ ಗೊಂದಲಗಳು ಉಂಟಾಗದಿರಲಿ ಎಂದು ಆಶಿಸೋಣ.

ರೈತರೇ ನಾವು ಯೂರಿಯಾ ಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದೇವೆ. ಅಧಿಕ ಸಾರಜನಕದ ಬಳಕೆಯಿಂದ  ಬೆಳೆ ನಳನಳಿಸುತ್ತದೆಯಾದರೂ ಕೈಗೆ ಬಂದ ತುತ್ತು  ಬಾಯಿಗಿಲ್ಲ ಎಂದಾಗುವುದೂ ಇದೆ. ಕೀಟ – ರೋಗ ಹಾಗೂ ಅಪಕ್ವ ಫಲಗಳು ಸಾರಜನಕ ಅತಿಯಾದ ಬಳಕೆಯಿಂದ ಆಗುತ್ತದೆ. ಆದ ಕಾರಣ ಮಿತವಾಗಿ ಸಾರಜನಕ ಬಳಸಿ

5 thoughts on “ನ್ಯಾನೋ ಯೂರಿಯಾ – ಉಪಯೋಗ ಮತ್ತು ಅನುಕೂಲ.

  1. Nano bagge full information kottidakke dhanya vadha gallu. Idhu full organic alli adre cheenagi irruthe, mathe chemical indha maddidre mathe chemeical farming agguthe.

  2. ಬಹಳ ಮಾಹಿತಿ ಇನ್ನೂ ಸಿಗಬೇಕಿದೆ ಹೊಸದು ಶುರು ಮಾಡುವಾಗ ಸಮಯ ಹಿಡಿಯುತ್ತದೆ, ಗೆಟ್ ಸ್ಟಾರ್ಟೆಡ್, ರೂಢಿಯಲ್ಲಿ ಬರುತ್ತದೆ.

  3. ಉತ್ತಮ ಮಾಹಿತಿ, ಮೊನ್ನೆ ಮಾನ್ಯ ಸಚಿವರಾದ ಸದಾನಂದ ಗೌಡರು ಇದರ ಬಗ್ಗೆ ಹೇಳಿದಾಗ ನನಗೂ ಸ್ವಲ್ಪ ಗೊಂದಲ ಆಗಿತ್ತು. ಈ ಮಾಹಿತಿಯು ಸುಲಭವಾಗಿ ಅರ್ಥವಾಗುವ ಹಾಗಿದೆ. ಆದರೂ ಬಹು ವಾರ್ಷಿಕ ಬೆಳೆಗಳಾದ ಅಡಿಕೆ ತೆಂಗು ಮುಂತಾದುವುಗಳಿಗೆ ಹೇಗೆ ಉಪಯೋಗಿಸುವುದು? ಪತ್ರ ಸಿಂಚನ ಅಂತಾದ್ರೆ ಬರೇ ಅಲ್ಪಾವದಿ ಬೆಳೆಗಳಾದ ಭತ್ತ, ತರಕಾರಿ ಇನ್ನಿತರ ಬೆಳೆಗಳಿಗೆ ಮಾತ್ರವೇ ಉಪಯೋಗವಾಗುವುದು ಅಲ್ಲವೇ?

    1. ಪತ್ರ ಸಿಂಚನಕ್ಕೆ ಮಾತ್ರ ಎಂಬ ಮಾಹಿತಿ ಇಫ್ಕೊ ದಿಂದ ಲಭ್ಯವಿದೆ. ಇನ್ನೇನು ಮಾರುಕಟ್ಟೆಗೆ ಪ್ರವೇಶ ಆಗಿ, ಅದರ ಬಳಕೆ ಆದ ನಂತರ ನಿಖರವಾಗಿ ಗೊತ್ತಾಗಬಹುದು. ಸಾಂಪ್ರದಾಯಿಕ ಯೂರಿಯಾ ಗೊಬ್ಬರದ ಬಳಕೆ ಕಡಿಮೆ ಮಾಡಲು ಇದು ವ್ಯವಸ್ಥೆ ಆಗಿರಬೇಕು.
      ನಿಮ್ಮ ಪ್ರತಿಕ್ರಿಯೆಗೆ ಅಭಿನಂದನೆ. ಈ ಸೈಟ್ ನಲ್ಲಿ ನಿಮಗೆ ಪ್ರಯೋಜನ ಆಗಿದೆ ಎಂದು ಭಾವಿಸುತ್ತೇವೆ.

Leave a Reply

Your email address will not be published. Required fields are marked *

error: Content is protected !!