ಮಂಗಗಳ ಕಾಟಕ್ಕೆ ಮುಕ್ತಿ ಬೇಕೇ? ಮಳೆಗಾಲದಲ್ಲಿ ಇದನ್ನು ಮಾಡಿ.

by | Jun 6, 2021 | Environment Protection (ಪರಿಸರ ಸಂರಕ್ಷಣೆ) | 4 comments

ಮಂಗಗಳ ಕಾಟ , ಅಳಿಲು, ನವಿಲು, ಹಂದಿ, ಆನೆ, ಕಾಡು ಕೋಣಗಳ ಹಾವಳಿಯಲ್ಲಿ ಕೃಷಿ ಹಾಳಾಗುತ್ತಿದೆಯೇ? ಹಾಗಿದ್ದರೆ ಈ ಮಳೆಗಾಲದಲ್ಲಿ ಒಂದು ದಿನ ಪ್ರತೀಯೊಬ್ಬರೂ ಇದನ್ನು ಮಾಡಿ. ಕೆಲವು ಸಮಯದಲ್ಲಿ ಅವು ನಿಮ್ಮ ತಂಟೆಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಉಳಿಯಬೇಕಾದರೆ ಇದನ್ನು ನಾವೇ ಮಾಡಬೇಕು.

ಮೊನ್ನೆ ಕೊರೋನಾ ಲಾಕ್ ಡೌನ್ ಇದ್ದರೂ ಸಹ ಜೂನ್ 5 ರಂದು ಪೇಟೆ ಪಟ್ಟಣಗಳಲ್ಲಿ  ಕೆಲವು ಸಂಘಟನೆಗಳು ಕಸ ಹೆಕ್ಕಿದರು, ಕೆಲವರು ರಸ್ತೆ ಬದಿಗಳಲ್ಲಿ ಸಸಿ ನೆಟ್ಟರು.ಯಾರೋ ಉಡುಗೊರೆಯಾಗಿ ಕೊಟ್ಟ ಏಕ ಪ್ರಕಾರದ ಬನಿಯನ್ ತೊಟ್ಟು, ಕೈಗೆ ಗ್ಲೌಸ್ ಹಾಕಿ, ಫೊಟೋ ತೆಗಿಸಿ ಪ್ರಚಾರ ಗಿಟ್ಟಿಸಿಕೊಂಡರು. ಕೆಲವರು ತಮ್ಮದೇ ಜಾಗದಲ್ಲಿ  ಕೆಅವು ಹಣ್ಣಿನ ಗಿಡ ನೆಟ್ಟರು. ಇನ್ನು ಕೆಲವರು ಆಮ್ಲಜನಕದ ಕೊರತೆಗೆ ನಾವು ಕೊಡುವ ಅಳಿಲ ಸೇವೆ ಎಂದು ಅಶ್ವತ್ಥ ಗಿಡವನ್ನೂ ನೆಟ್ಟವರಿದ್ದಾರೆ. ಒಟ್ಟಿನಲ್ಲಿ ಎಲ್ಲರಿಗೂ ಪ್ರಚಾರ ಬೇಕು.  ಪ್ರಚಾರಕ್ಕಾಗಿಯೇ ಎಲ್ಲರಿಗೂ ಕಾಣುವ ಜಾಗದಲ್ಲಿ  ತಮ್ಮ ಪರಿಸರ ಕಳಕಳಿಯನ್ನು ತೋರಿಸುವುದು. ಇದು ಬರೇ ಡಂಬಾಚಾರ. ನಾನು ಮಾಡಿದ್ದು ಯಾರಿಗೂ ಗೊತ್ತಾಗಬಾರದು. ಆದರೆ ಅದರಿಂದ ಮುಂದಿನ ತಲೆಮಾರಿಗೆ ಪ್ರಯೋಜನ ಆಗಬೇಕು. ಇದನ್ನು ಯಾರಾದರೂ ಚಿಂತಿಸಿದ್ದು ಇದೆಯೇ?

 • ಪರಿಸರ ಎಂದರೆ ಸ್ವಚ್ಚತೆ ಒಂದೇ ಅಲ್ಲ. ಮನುಷ್ಯ ಪ್ರಾಣಿ ಪಕ್ಷಿಗಳು ಸ್ವಚ್ಚಂದವಾಗಿ ಬದುಕಲು ಅನುಕೂಲವಾಗುವ ವಾತಾವರಣ.
 • ಇದು  ಕಾಡು ಮತ್ತು ನಾಡಿನ ಸಮತೋಲನದಲ್ಲೇ  ಇದೆ.
 • ಅಸಮತೋಲನ ಸ್ಥಿತಿ ಉಂಟಾದ ಈ ಸಮಯದಲ್ಲಿ ಪರಿಸರ ಉಳಿಸಲು ನಾವು ಬೇಡವೆಂದು ಕಸದ ತೊಟ್ಟಿಗೆ ಹಾಕುವ ಹಣು ಹಂಪಲುಗಳನ್ನು ಕಾಡಿನಲ್ಲಿ ಎಸೆದರೂ ಸಾಕು.
 • ಹೆಚ್ಚೇಕೆ, ಪೇಟೆಯ ಪಟ್ಟಣದಲ್ಲಿ ವಾಸಿಸುವವರು ತ್ಯಾಜ್ಯ ವಿಂಗಡನೆ ಮಾಡಿ ಬಿಸಾಡುವ ಸಾವಯವ ತ್ಯಾಜ್ಯಗಳನ್ನು ಕಾಡಿಗೆ ಎಸೆದರೂ(ಅದರಲ್ಲಿ ಅವರು ತಿಂದು ಹಾಕಿದ ಹಣ್ಣು ಹಂಪಲಿನ ಬೀಜಗಳಿರುತ್ತವೆ) ಅಲ್ಲಿ ಸಾಕಷ್ಟು ಗಿಡ ಹುಟ್ಟಿ ಬೆಳೆಯುತ್ತದೆ!. 
Trees at forest are not food for animals - ಕಾಡು ಇದ್ದರು ಆಹಾರ ಇಲ್ಲ.

ಪರಿಸರ ಸಂರಕ್ಷಣೆಗೆ ದಿನ ಬೇಕಾಗಿಲ್ಲ.

ಜೂನ್ 5 ರಂದೇ ಪರಿಸರ ದಿನಾಚರಣೆ ಆಚರಿಸಬೇಕಾಗಿಲ್ಲ. ನಿಜವಾಗಿ ಈ ದಿನವನ್ನು ನಿರ್ಧರಿಸಿದ್ದು, ಈ ಸಮಯಕ್ಕೆ ಮಳೆ ಬರುತ್ತದೆ. ಭೂಮಿ ಹಸನಾಗಿರುತ್ತದೆ. ಈ ಸಮಯದಲ್ಲಿ ಗಿಡ ನೆಟ್ಟರೆ ಅದು ಬದುಕಲು ಕಷ್ಟವಿಲ್ಲ ಎಂಬ ಕಾರಣಕ್ಕೆ. ಇದನ್ನು ಯಾವಾಗಲೂ ಆಚರಿಸಬಹುದು. ಆಚರಿಸಿದ್ದರ ಪ್ರಯೋಜನ ಎಲ್ಲರಿಗೂ ಗೊತ್ತಾಗಬೇಕು.

 • ಇಂದು ನಮ್ಮಲ್ಲಿ ಕಾಡು ನಾಶವಾಗಿದೆ, ಅದರಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬುದು ನಮಗೆಲ್ಲಾ ಗೊತ್ತಿರುವಂತದ್ದು.
 • ಕಾಡನ್ನು ನಾಶ ಮಾಡಿದವರೂ ನಾವೇ, ಈಗ ಮರುಸೃಷ್ಟಿ ಮಾಡಬೇಕಾದವರೂ ನಾವೆ.
 • ಕಾಡನ್ನು ಕಾಡಿನಲ್ಲೇ ಸೃಷ್ಟಿಸಬೇಕೇ ಹೊರತು ರಸ್ತೆ ಬದಿಗಳಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ.
 • ಕಾಡಿನಲ್ಲಿ ಕಾಡು ಮರು ಜೀವ ಪಡೆದರೆ ಮಾತ್ರ ಪರಿಸರ ಉಳಿವು ಸಾಧ್ಯ.
 • ಜಾಗತಿಕ ತಾಪಮಾನದ ಏರಿಕೆಗೂ ತಡೆಯಾಗಬಹುದು.
 • ಇದಕ್ಕಾಗಿ ನಿರಂತರವಾಗಿ ನಾವು ಪರಿಸರ ಸಂರಕ್ಷಣೆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.
 • ಮೊನ್ನೆ ಯಾರೋ ತಂಪು ಪಾನೀಯ ಅಂಗಡಿ ನಿರ್ವಹಿಸುವ ವ್ಯಕ್ತಿಯೊಬ್ಬರು ತಾನು ಮಾವಿನ ಜ್ಯೂಸ್ ಮಾಡುವಾಗ ನಿರುಪಯುಕ್ತವಾಗಿ ಸಿಗುವ ಗೊರಟುಗಳನ್ನೆಲಾ( ಓಟೆ) ತೊಳೆದು ಜಾಗರೂಕತೆಯಲ್ಲಿ  ಸಂಗ್ರಹಿಸಿಟ್ಟುಕೊಂಡು ಅದನ್ನು ಕುದುರೆ ಮುಖ ಮಾರ್ಗವಾಗಿ ಹೋಗುವಾಗ ಕಾಡಿನಲ್ಲಿ ಎಸೆಯುತ್ತಾರೆಂತೆ.
 • ಅದು ಹುಟ್ಟಿ ಅಲ್ಲಿ ಮರ ಸಸಿಯಾಗಿ ಬೆಳೆದು ಮರವಾಗುತ್ತದೆ. ಎಂಬುದು ಅವರ ಆಶಯ. 
 • ಎಂತಹ ಒಂದು ಮನೋಸ್ಥಿತಿ ನೋಡಿ.
 • ಎಷ್ಟು ಜನಕ್ಕೆ ಇಂತಹ ಐಡಿಯಾ ಬಂದಿದೆ.
 • ನಮ್ಮ ತೋಟದಲ್ಲಿ ಕೊಳೆತು ಉದುರುವ ಹಲಸು, ಮಾವು, ನೇರಳೆ, ಮುರುಗಲ ಹಣ್ಣುಗಳೆಷ್ಟೋ ಇರುತ್ತವೆ.
 • ಇದರಲ್ಲಿ ಒಂದೊಂದು ಮುಷ್ಟಿ ಬೀಜವನ್ನು  ಸಮೀಪದ ಕಾಡಿನಲ್ಲಿ ಎಸೆಯುವ ಬುದ್ದಿ ನಮಗೆ ಬಂದಿದ್ದರೆ ಇಂದು ನಾವು ತುಂಬಾ ಪ್ರಯೋಜನವನ್ನು ಪಡೆಯುತ್ತಿದ್ದೆವು.
 • ಕಾಡು ಪ್ರಾಣಿಗಳು ಕಾಡು ಬಿಟ್ಟು ನಮ್ಮ ಹೊಲಕ್ಕೆ ಧಾಳಿ ಇಡುತ್ತಿರಲಿಲ್ಲ.

ರಸ್ತೆ ಬದಿಯಲ್ಲಿ ಸಸಿ ನೆಡುವುದಕ್ಕೆ ಸಾಕಷ್ಟು ಜನ ಇದ್ದಾರೆ. ಸಾಕಷ್ಟು ಹಣವನ್ನೂ ಖರ್ಚು ಮಾಡುತ್ತಾರೆ. ಅದೆಲ್ಲವೂ ನೀರಿನಲ್ಲಿ ಹೋಮ  ಮಾಡಿದಂತೆ. ನಾಳೆ ರಸ್ತೆ ಅಗಲೀಕರಣ ಆಗುವಾಗ ಅದು ಹೋಗುತ್ತದೆ. ರಸ್ತೆ ಬದಿಯ ವಿದ್ಯುತ್ ತಂತಿಗೆ ತಗಲಿದಾಗ ಅದನ್ನು  ಕಡಿಯಬೇಕಾಗುತ್ತದೆ. ಅದನ್ನೇ ಕಾಡಿನಲ್ಲಿ ಮಾಡಿದರೆ ಶಾಶ್ವತವಾಗಿ ಉಳಿಯುವುದಿಲ್ಲವೇ?

ಹಸುರು ಕಡಿಮೆಯಾಗಲಿಲ್ಲ- ಕಾಡು ಮರ ಕಡಿಮೆಯಾಗಿದೆ:

cocum seeds going through flood - ಮರದ ಬುಡದಲ್ಲಿ ಬಿದ್ದ ಕೊಕಮ್ ಬೀಜ ನೀರಿನಲ್ಲಿ ಕೊಚ್ಚಿ ಹೊಗುತ್ತಿದೆ.
ಮರದ ಬುಡದಲ್ಲಿ ಬಿದ್ದ ಕೊಕಮ್ ಬೀಜ ನೀರಿನಲ್ಲಿ ಕೊಚ್ಚಿ ಹೊಗುತ್ತಿದೆ.
 • ಹಸಿರು ಹೊದಿಸಲು ನಾವು ಕಾಡು ಕಡಿದದ್ದು ನಿಜ. ಆದರೆ ಅದರಿಂದ ಕಾಡು ಮರು ನಿರ್ಮಾಣ ಆಗಲಿಲ್ಲ.
 • ಬರೇ ತೋಟಗಳು ನಿರ್ಮಾಣವಾಗಿವೆ.  ತೋಟಗಳಿಗೆ ನಾವು ಕೃತಕ ಪೋಷಣೆ ಮಾಡಿ ಬೆಳೆಸಿದ್ದೇವೆ.
 • ಹಾಗಾಗಿ ಅವು ನೈಸರ್ಗಿಕ ಕಾಡಿಗೆ ಪ್ರತಿರೂಪವಾಗಲಿಲ್ಲ.
 • ನಾವು ಬೆಳೆಸಿದ ಹಸುರು ಕಾಡಿಗೆ ಯಾವ ಕಾಡು ಪ್ರಾಣಿಯನ್ನೂ ಬಿಡುವುದಿಲ್ಲ.
 • ಇತ್ತೀಚೀಗೆ ಅವು ಧಾಳಿ ಇಡುತ್ತಿವೆ ಅಷ್ಟೇ. ನಾವು ಕದ್ದು ಮುಚ್ಚಿ ಅವುಗಳ ಮಾರಣ ಹೋಮ ಮಾಡುತ್ತಿದ್ದೇವೆ.
 • ಇದೆಲ್ಲಾ ನಾವು ಪರಿಸರದ ಮೇಲೆ ಮಾಡುವ ಧಾಳಿ. ಹಾಗೆಂದು ಕೃಷಿ ಬೇಡವೇ? ಬೇಕು.
 • ಅದು ಮಾನವನ ಬದುಕಿಗೆ ಆಧಾರ.  ಹಾಗೆಯೇ ಕಾಡುಗಳೂ ಅದನ್ನು ನಂಬಿರುವ ಕಾಡು ಪ್ರಾಣಿಗಳಿಗೆ ಆಧಾರ.
 • ಇವೆರಡೂ ಪರಸ್ಪರ ಒಂದು ನಾಣ್ಯದ ಎರಡು ಮುಖಗಳು.
 • ಒಂದರ ಮುಖ ವಿರೂಪವಾಗಿದೆ.ಮತ್ತೊಂದರ ಮುಖ ಸುಂದರವಾಗುತ್ತಿದೆ.
 • ಕಾಡಿನ ಮರಗಳಿಗೆ ಒಂದು ಜಾತಿಯ ನರೆ ಬಳ್ಳಿ Dioscorea bulbifera ಆವರಿಸಿ ಅವುಗಳ ಏಳಿಗೆ ಆಗಲು ಬಿಡುತ್ತಿಲ್ಲ.
 • ಇದು ಕಾಡಿನ ಜೀವ ಜಂತುಗಳಿಗೆ ಅನನುಕೂಲವಾಗಿದೆ.

ಕಾಡಿನಲ್ಲಿ ಮರಮಟ್ಟುಗಳು ಹೆಚ್ಚಿಸಲಿಕ್ಕಾಗಿ ನಾವು ಪರಿಸರ ಕಳಕಳಿಯನ್ನು ಹೊಂದುವುದೇ ಪರಿಸರ ದಿನಾಚರಣೆ. ನಿಮ್ಮ ಯಾವುದೇ ಬಿಡುವಿನ ದಿನದಲ್ಲಿ ಅದನ್ನು ಮಾಡಿ. ಆದರೆ ಅದು ರಸ್ತೆ ಬದಿಯಲ್ಲಿ ಮಾತ್ರ ಮಾಡದಿರಿ ನಮ್ಮ ಹಿರಿಯರು ರಸ್ತೆ ಬದಿಯಲ್ಲಿ ನೆಟ್ಟ ಮರಮಟ್ಟುಗಳೆಷ್ಟು. ಆದರೆ ಅವು ನಮಗಾಗಿ ಉಳಿಯಲಿಲ್ಲ. ರಸ್ತೆ ಅಗಲೀಕರಣ ಆಗುವಾಗ ಕಡಿದು ಹಾಳಾಯಿತು. ಹಾಗೆ ರಸ್ತೆ ಬದಿಯಲ್ಲಿ ನೆಡುವ ಯಾವ ಗಿಡವೂ ನಮ್ಮ ತಲೆಮಾರು ನೆನಪಿಸಿಕೊಳ್ಳುವ ಆಸ್ತಿಯಾಗಲಾರದು.

ಪರಿಸರ ಕಳಕಳಿ ಇದ್ದರೆ ಇದನ್ನು ಮಾಡಿ:

Avoid this type of creepers spreading -ಇಂತಹ ಬಳ್ಲಿ ಹಬ್ಬುವುವಿಕೆ ತಡೆಯಿರಿ
ಇಂತಹ ಬಳ್ಲಿ ಹಬ್ಬುವುವಿಕೆ ತಡೆಯಿರಿ
 • ಪರಿಸರ ದಿನವನ್ನು ನಿಮಗೆ ಆಚರಿಸಲು ಆಸೆ ಇದೆಯೇ ಹಾಗಿದ್ದರೆ ಇದನ್ನು ಮಾಡಿ.
 • ಏನೆಂದರೆ ನಿಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಒಂದು ಹಲಸಿನ ಹಣ್ಣನ್ನು ಒಂದು ಸೆಣಬಿನ ಚೀಲದಲ್ಲಿ ಹಾಕಿ ಸಮೀಪದ ಕಾಡಿನಲ್ಲಿ  ದೂರ ಎಸೆದು ಬನ್ನಿ.
 • ಅದರ ಕೆಲವು ಬೀಜಗಳನ್ನು ಯಾವುದಾದರೂ ದಂಶಕಗಳು ತಿನ್ನಬಹುದು.
 • ಒಂದೆರಡಾದರೂ ಹುಟ್ಟಿ ಬೆಳೆಯಬಹುದು.
 • ಹಾಗೆಯೇ ನಿಮ್ಮ ಮನೆಯಲ್ಲಿ ಅತ್ತಿ , ಆಲ ಮುರುಗಲ, ಹೆಬ್ಬಲಸು, ಪೇರಳೆ, ನೇರಳೆ, ಈಚಲು ಯಾವುದೇ  ಹಣ್ಣುಗಳಿದ್ದರೆ  ಅದನ್ನು ಕೊಯಿದು ಬೇಕಾದಷ್ಟು ತಿನ್ನಿ,
 • ಬೀಜವನ್ನು ಚೀಲದಲ್ಲಿ ತುಂಬಿ ಅದನ್ನು ಕಾಡಿನಲ್ಲಿ ಬಿಸಾಡಿ. 
 • ಮುರುಗಲ ಹಣ್ಣು ಕೊಯಿಲು ಮಾಡಿ ಮಾರಾಟ ಮಾಡಿದರೆ ಮಜೂರಿ ಹುಟ್ಟಲಾರದು.
 • ಅದನ್ನು ಸ್ವಲ್ಪ ಪರಿಸರ ಕಳಕಳಿ ಇದ್ದರೆ ಸೊಳ್ಳೆ ಉತ್ಪತ್ತಿ ಆಗದಿರಲೆಂದು ಚೀಲಕ್ಕೆ ತುಂಬಿ ಕಾಡಿನಲ್ಲಿ ಬಿಸಾಡಿ.
 • ಅಲ್ಲಿ ಅದು ಹುಟ್ಟಿ ಬೆಳೆಯಲಿ. ಇಂತಹ ಹಲವಾರು ಹಣ್ಣು ಹಂಪಲುಗಳು ನಮ್ಮಲ್ಲಿವೆ.ನಾವೂ ತಿನ್ನುವುದಿಲ್ಲ.
 • ಬಿದ್ದು ಹುಟ್ಟಿದರೆ ಅದನ್ನು ಕೀಳುವ ಕೆಲಸ ಮಾಡಬೇಕಾಗುತ್ತದೆ.
 • ಇದೆಲ್ಲವನ್ನೂ ನಾವು ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಿಲೇವಾರಿ ಮಾಡೋಣ.
 • ತೋಟದಲ್ಲಿ ಬೆಳೆಯುವ ಕೆಸುವಿನ ಗಡ್ಡೆ ಇದ್ದರೆ ಕೀಳಿಸಿ, ಸುಡುವ ಬದಲು ಅದನ್ನು ಕಾಡಿನ ಒಳಗೆ ಬಿಸಾಡಿ ಬನ್ನಿ.
 • ಅದು ಹೆಗ್ಗಣಗಳಿಗೆ, ಹಂದಿಗಳಿಗೆ ಆಹಾರವಾಗುತ್ತದೆ.
Forest need this type of plants -ಅರಣ್ಯಕ್ಕೆ ಬೇಕು ಇಂತಹ ಮರಗಳು
ಅರಣ್ಯಕ್ಕೆ ಬೇಕು ಇಂತಹ ಮರಗಳು

ಕಾಡಿಗೆ ಇಂತದ್ದೇ ಮರಮಟ್ಟುಗಳು ಬೇಕು:

Jack fruit is best food for forest animals - ಆರಣ್ಯದಳಲ್ಲಿ ಹಲಸಿನ ಮರ ಇರಲಿ
ಆರಣ್ಯದಲ್ಲಿ ಹಲಸಿನ ಮರ ಇರಲಿ

ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಗುರುತಿಸಿದೆ.ಅದಕ್ಕಾಗಿ ಈಗ ಕಾಡು ಜಾತಿಯ ಮರಮಟ್ಟುಗಳ ಸಸ್ಯೋತ್ಪಾದೆನೆಗೆ ಹೆಚ್ಚಿನ ಒಲವು ಕೊಡುತ್ತಿದ್ದಾರೆ. ಅವರೊಂದಿಗೆ ನಾವೂ ಸೇರಿಕೊಂಡು ಇದನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದು.

 • ನಮ್ಮ ಕಾಡಿನಲ್ಲಿ ಭೀಟೆ, ಸಾಗುವಾನಿ, ನಂದಿ, ಮತ್ತಿ ಹೀಗೆಲ್ಲಾ ಅರಮಟ್ಟುಗಳು ಇರಬೇಕು ಎಂದು ನಾವು ಕಲ್ಪಿಸಿದ್ದರೆ ಅದು ನಮ್ಮ ಅಜ್ಞಾನ.
 • ಇಂತಹ ಮರಮಟ್ಟುಗಳು ಇದ್ದ ಕಾರಣದಿಂದಲೇ ಇಂದು ಕಾಡು ನಾಶವಾಗುತ್ತಿರುವುದು.
 • ಕಾಡುಗಳ್ಳರಿಗೆ ಅನುಕೂಲ ಆಗಿರುವುದು.
 • ಕಾಡಿನಲ್ಲಿ ಅತ್ತಿ ಮರ, ಆಲದ ಮರ , ಈಚಲು ಮರ, ಬಿದಿರು, ಮಾವು ಮುಂತಾದ ನಾಟಾಕ್ಕೆ ಬಾರದ  ಮರಮಟ್ಟುಗಳು ಹೆಚ್ಚಾದರೆ ಆ ಸುದ್ದಿಗೆ ಯಾರೂ ಹೋಗುವುದಿಲ್ಲ.
 • ಅದು ಬೆಲೆಬಾಳುವ ಮರಗಳಲ್ಲ.
 • ಆದರೆ ಅದಕ್ಕೆ ಪರಿಸರದಲ್ಲಿ ಭಾರೀ ಬೆಲೆ ಇದೆ.
 • ಅದು ಕಾಡಿನ ಜೀವ ಜಂತುಗಳನ್ನು ( ಮಂಗ, ಪಕ್ಷಿ, ಆನೆ,ಜಿಂಕೆ, ಇತ್ಯಾದಿ) ನಿರಂತರವಾಗಿ ಪೊಷಿಸುತ್ತದೆ. 
 • ಕಾಡನ್ನು ಮತ್ತೆ ಮತ್ತೆ ಬೀಜ ಪ್ರಸಾರದ ಮೂಲಕ ಪುನರುಜ್ಜೀವನಗೊಳಿಸುತ್ತದೆ. ನಮ್ಮ ಹೊಲದ ಬೆಳೆಗಳಲ್ಲಿ ಅವುಗಳು ಪಾಲು ಕೇಳಲು ಬರುವುದಿಲ್ಲ.

ಈಗ ನೀವೇ ಹೇಳಿ. ಶೋಕಿಗಾಗಿ ಪರಿಸರ ದಿನಾಚರಣೆ ಆಚರಿಸಬೇಕೇ? ನಮಗಾಗಿ ಪರಿಸರ ದಿನಾಚರಣೆಯನ್ನು ಆಚರಿಸಬೇಕೇ? ನಮ್ಮ ಮಕ್ಕಳು ಕ್ಷೇಮವಾಗಿ ಬದುಕಲಿ ಎಂದು ನಾವು ಕೆಲಸವನ್ನು ಮಾಡಬೇಕಲ್ಲವೇ?. ಅದಕ್ಕೆ ದಿನ ಬೇಡ. ಮಳೆಗಾಲದ ಋತುಮಾನದಲ್ಲಿ ಯಾವಾಗಲಾದರೂ ನಿಮ್ಮಲ್ಲಿ ಬಿಸಾಡುವ ಬೀಜಗಳಿದ್ದರೆ ಕಾಡಿಗೆ ಎಸೆದು ಬನ್ನಿ. ಅದನ್ನು ನಿಮ್ಮ ಮಕ್ಕಳು ಮುಂದೆ ನೋಡಿ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ.

ಯಾರಾದರೂ ಈ ಕೆಲಸ ಮಾಡಿದ್ದಿದ್ದರೆ ಅದರ ಚಿತ್ರವನ್ನು ಕಳುಹಿಸಿ.9663724066 ಗೆ ನಿಮ್ಮ ಈ ಘನ ಕಾರ್ಯವನ್ನು ನಾವು ಗೌರವಿಸುತ್ತೇವೆ. ಸಂಪಾದಕ.

4 Comments

 1. Suresh

  Good suggestion,Thanks

  Reply
  • hollavenur

   Dear sir, We appreciate your comment. If it is good or bad please respond with out hesitation.
   Thanks
   Radhakrishna Holla, Editor.

   Reply
 2. Ramakrishna Bhat

  ಕೃಷಿಕರಿಗೆ ಉಪಯುಕ್ತವಾದ ಜಾಲತಾಣ. ಉತ್ತಮ ಮಾಹಿತಿ ಒದಗಿಸುತ್ತಿದೆ.. ಲೇಖಕರಿಗೆ ಧನ್ಯವಾದಗಳು.

  Reply
  • hollavenur

   ಕೃಷಿಕರು ಮುಂದೆ ಇಂತಹ ಕೆಲಸ ಮಾಡದಿದ್ದರೆ ಕಾಡು ಪ್ರಾಣಿಗಳು ನಾಡಿಗೆ ಬರಬಹುದು. ಯಾರು ಏನೇ ಹೇಳಲಿ, ಕಾಡಿನಲ್ಲಿ ಆಹಾರ ಇಲ್ಲದ ಕಾರಣಕ್ಕೆ ಪ್ರಾಣಿಗಳು ನಾಡಿಗೆ ಬಂದಿರುವುದು ನಿಜ.
   ಪ್ರತಿಕ್ರಿಯೆಗೆ ಧನ್ಯವಾದಗಳು.

   Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!