ಗುಬ್ಬಿಗಳ ನಾಶಕ್ಕೆ ಟವರ್ ಮಾತ್ರ ಕಾರಣವಲ್ಲ.

by | Mar 20, 2021 | Environment Protection (ಪರಿಸರ ಸಂರಕ್ಷಣೆ) | 0 comments

ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ ಮೊಬೈಲ್ ಟವರ್ ಎನ್ನಲಾಗುತ್ತದೆ. ಆದರೆ ಮೊಬೈಲ್ ಟವರ್ ಬರುವ ಮುಂಚೆಯೇ ಇವು ಕಡಿಮೆಯಾಗಲಾರಂಭಿಸಿವೆ ಗೊತ್ತೇ? ಗುಬ್ಬಿಗಳ ನಾಶಕ್ಕೆ ಮೊಬೈಲ್ ಟವರ್ ಒಂದೇ ಕಾರಣ ಅಲ್ಲ. ನಮ್ಮ ಕೃಷಿ ಚಟುವಟಿಕೆ ಮತ್ತು ಹವಾಮಾನಗಳೂ ಒಂದು ಕಾರಣ.

ಗುಬ್ಬಿಗಳು ಹಿಂದೆ ನಾವು ಸಣ್ಣವರಿದ್ದಾಗ ಮನೆಯ ಮಾಡಿನ ಸಂದುಗಳಲ್ಲಿ , ಚಾವಡಿಯ  ಆಡ್ದದ ಎಡೆಯಲ್ಲಿ ಗೂಡು ಕಟ್ಟಿ ಕುಳಿತುಕೊಳ್ಳುತ್ತಿತ್ತು. ಅದು ತನ್ನಷ್ಟಕ್ಕೇ ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದು ವಾಡಿಕೆ. ಗುಬ್ಬಿಗಳು ಮನೆಯ ಮಕ್ಕಳಂತೆ ಆಗಿದ್ದವು.  ಅದು ಮನೆಯ ಪ್ರತಿಷ್ಟೆಯೂ ಆಗಿತ್ತು. ಅವು ಮನೆಯವರು ಏನಾದರೂ ಸುದ್ದಿ ಮಾತಾಡುವಾಗ ಚಿಂವ್ ಗುಟ್ಟುತ್ತಾ ಇರುತ್ತಿದ್ದವು. ಕೆಲವು ಮಾತುಗಳು ಆಡುವಾಗ ಅವು ಚಿಂವ್ ಗುಟ್ಟಿದರೆ  “ಸತ್ಯವಂತೆ “ ಶಕುನನುಡಿಯಿತು ಗುಬ್ಬಿ ಎಂದು ಹೇಳುವ ಮಾತಿತ್ತು. ಈಗ ಯಾರ ಮನೆಯಲ್ಲೂ ಗುಬ್ಬಿ ಗೂಡು ಇರಲಿಕ್ಕಿಲ್ಲ. ಗುಬ್ಬಿಗಳು ಕಾಣಸಿಗುವುದೇ ಅಪರೂಪವಾಗಿವೆ. ಕಾರಣ ಅಭಿವೃದ್ಧಿ ಎಂದು ಹೇಳಲಾಗುತ್ತಿದೆ.

ಧಾನ್ಯ ತಿನುವ ಗುಬ್ಬಿಗಳು

ಗುಬ್ಬಿಗಳು ಇನ್ನೂ ಉಳಿದಿವೆ:

  • ಗುಬ್ಬಿಗಳು (House sparrow) ಇನ್ನೂ ಕೆಲವು ಪ್ರದೇಶಗಳಲ್ಲಿ ಕಾಣಸಿಗುತ್ತವೆ.
  • ಅಂತಹ ಪ್ರದೇಶಗಳಲ್ಲಿ ನಾನು ಕಂಡದ್ದು,  ಗುಂಡುಲ್ಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮೀ ಬೆಟ್ಟದ ತಪ್ಪಲಿನಲ್ಲಿ,
  • ಇಲ್ಲಿ ನೂರಾರು ಸಂಖ್ಯೆಯಲ್ಲಿ ಗುಬ್ಬಿಗಳ ಹಾರಾಟ ವನ್ನು ಈಗಲೂ ನೀವೆಲ್ಲಾ ಕಾಣಬಹುದು.
  • ಯಾಕೆ ಇಲ್ಲಿಗುಬ್ಬಿಗಳು ಉಳಿದಿವೆ? ಕಾರಣ ಇಷ್ಟೇ .
  • ಇಲ್ಲಿ ಅವುಗಳಿಗೆ ಅಂತಹ ತೊಂದರೆಗಳು ಇಲ್ಲ.
  • ಮೊಬೈಲ್ ಟವರ್ ಈ ಭಾಗದಲ್ಲಿ ಇದೆ.
  • ಆದರೂ ಗುಬ್ಬಿಗಳಿಗೆ ಭಾರೀ ತೊಂದರೆ ಆಗಿ ನಾಶ ಅದಂತಿಲ್ಲ.
  • ಬೆಟ್ಟ ಹಾಗೂ ಕಾಡಿ ಪ್ರದೇಶ ಸಾವಿರಾರು ಎಕ್ರೆ ಇರಬಹುದು.
  • ಇಲ್ಲಿ ಮಾನವ ಹಸ್ತಕ್ಷೇಪದ ಕೃಷಿ ಇಲ್ಲ. ನೈಸರ್ಗಿಕ ಹಸುರು ರಾಶಿಯಲ್ಲಿ ತಮ್ಮ ಆಹಾರ ಅರಸಿ ಬದುಕುಳಿದಿವೆ ಈ ಗುಬ್ಬಿಗಳು.
  • ಈ ಬಗ್ಗೆ ಕೆಲವೊಂದು  ಮಾಹಿತಿಗಳನ್ನು ಕಲೆಹಾಕಿದಾಗ ನಿಜವಿರಬಹುದು ಎಂದು ತಿಳಿದ ವಿಚಾರ ಇದು.
  • ಅಲ್ಲೂ ಪ್ರವಾಸಿಗರು ಗುಬ್ಬಿಗಾಗಿ ಜೋಳ ಕಾಳುಗಳನ್ನು  ಹಾಕಿ ಖುಷಿ ಪಡುತ್ತಾರೆ!

ಗುಬ್ಬಿಗಳ ನಾಶವೂ ಸೇರಿದಂತೆ ಹಲವಾರು ಹಕ್ಕಿಗಳ ನಾಶಕ್ಕೆ ಕಾರಣ ಮೊಬೈಲ್ ಟವರ್ ನ ಜೊತೆಗೆ ನಮ್ಮ ಕೃಷಿ ಚಟುವಟಿಕೆಗಳು. ಹಕ್ಕಿಗಳು ಕ್ಷೀಣಿಸಲು ಪ್ರಾರಂಭವಾದುದು ಸುಮಾರು 20-30  ವರ್ಷಗಳಿಂದೀಚೆಗೆ.ಕಾರಣ ನಾವು ಬಳಕೆ ಮಾಡುವ ಸಸ್ಯ ಸಂರಕ್ಷಕ ರಾಸಾಯನಿಕಗಳು.

  • ಹಿಂದೆ ನಾವು ಬೆಳೆಯುತ್ತಿದ್ದ ಧವಸ ಧಾನ್ಯಗಳಿಗೆ ವಿಷ ರಾಸಾಯನಿಕ ಕೀಟನಾಶಕಗಳ ಬಳಕೆ ಇರಲಿಲ್ಲ.
  • ಆಗ ಈ ಹಕ್ಕಿಗಳು ಸುರಕ್ಷಿತವಾಗಿದ್ದವು. ರೈತರು ಬೆಳೆದ ಬೆಳೆಗಳಲ್ಲಿ ಉಳಿದ, ಉದುರಿದ ಧವಸ ಧಾನ್ಯಗಳನ್ನು
  • ಹುಡುಕಿ ತಿಂದು ಸ್ವಚ್ಚಂದವಾಗಿ ಬದುಕುತ್ತಿದ್ದ ಈ ಹಕ್ಕಿಗಳ ಸಂತತಿ ಮೇಲೆ ಕೀಟನಾಶಕಗಳು ಮಾರಣಾಂತಿಕ ಹೊಡೆತವನ್ನು ನೀಡಿದವು.

ವಿಪರೀತವಾದ ಕೀಟನಾಶಕಗಳ ಬಳಕೆಯಿಂದ ಪೈರಿನಲ್ಲಿ ಧಾನ್ಯಗಳಲ್ಲಿ  ಕೀಟನಾಶಕದ ಶೇಷಗಳು ಉಳಿಯುತ್ತವೆ. ಈ  ಧಾನ್ಯವನ್ನು ತಿಂದ ಹಕ್ಕಿಗಳ ದೇಹಕ್ಕೆ ಆ ಕೀಟನಾಶಕಗಳು ಸೇರಿ, ಅದರ ಮೊಟ್ಟೆ ರಚನೆಯಾಗುವಾಗ ಅದರ ಚಿಪ್ಪು(ಕವಚ) ತೆಳುವಾಗುತ್ತಾ ಬರುತ್ತದೆ. ಮೊಟ್ಟೆಯ ಹೊರ ಕವಚ ತೆಳುವಾದಾಗ ಅಂತಹ ಮೊಟ್ಟೆ ಬೆಳವಣಿಗೆಯಾಗುವ ಮುಂಚೆಯೇ ಒಡೆದು ನಾಶವಾಗುತ್ತದೆ. ಇದು ಗುಬ್ಬಿಯೂ ಸೇರಿದಂತೆ ಹಲವಾರು ಹಕ್ಕಿಗಳ ಸಂತತಿಗಳು ಕ್ಷೀಣಿಸಲು ಇದೂ ಒಂದು ಕಾರಣ.

house Sparrow

ಮೊಬೈಲ್ ಟವರ್ ಒಂದು ಕಾರಣ:

  • ಮೊಬೈಲ್ ಟವರ್ ನ ವಿದ್ಯುತ್ಕಾಂತೀಯ ಪರಿಣಾಮವೂ ಹಕ್ಕಿಗಳ ಸಂತತಿಯ ಕ್ಷೀಣತೆಗೆ ಕಾರಣವಾಗಿರಬಹುದು.
  • ಹಾಗೆಂದು ಅದನ್ನೊಂದೇ ಕಾರಣ ಎನ್ನುವಂತಿಲ್ಲ. ಮೊಬೈಲ್ ಟವರ್ ವ್ಯಾಪಕವಾಗಿ ಬಂದು ಸುಮಾರು 10-15 ವರ್ಷಗಳಾಗಿರಬಹುದು.
  • ಅದಕ್ಕೂ ಮುಂಚೆ ಹಕ್ಕಿಗಳ ಸಂತತಿ ಕಡಿಮೆಯಾಗಲಾರಂಭಿಸಿದೆ ಎಂಬುದಾಗಿ ಡೌನ್ ಟು ಆರ್ಥ್ ನಲ್ಲಿ ಲೇಖನ ಬಂದಿತ್ತು.

ಹೀಗೊಂದು ಕಾಲವಿತ್ತು:

  • ಸುಮಾರು 40 ವರ್ಷಗಳ ಹಿಂದೆ. ಆಗ ಕೀಟನಾಶಕಗಳು ಅಂಗಡಿಯಲ್ಲಿ ಲಭ್ಯತೆಯೂ ಕಡಿಮೆ ಇತ್ತು.
  • ಬಹುತೇಕ ಭತ್ತ ಬೆಳೆಗಾರರು ಕೀಟನಾಶಕ ಬಳಕೆ ಮಾಡುತ್ತಿರಲಿಲ್ಲ.
  • ಅದೇ ರೀತಿಯಲ್ಲಿ ಇತರ ಧವಸ ಧಾನ್ಯ ಬೆಳೆಯುವವರೂ ಸಹ.
  • ಕ್ರಮೇಣ ಅದು ರೈತರಿಗೆ ಚಟದಂತೆ ಆಗಿಬಿಟ್ಟಿತು.
  • ತಜ್ಞರ ಸಲಹೆಯೂ ಹಾಗೆಯೇ ಇತ್ತು.
  • ಹಕ್ಕಿಗಳಿಗೂ ವಿಷ ಕೊಟ್ಟೆವು, ನಾವೂ ಸೇವಿಸಿದೆವು ಎಲ್ಲರೂ ಆಯುಶ್ಯವನ್ನು ಸ್ವಲ್ಪ ಸ್ವಲ್ಪವೇ ಕಡಿಮೆಮಾಡಿಕೊಂಡೆವು.
  • ಗುಬ್ಬಚ್ಚಿಗಾಗಿಯೇ ಒಂದು ಸ್ಮರಣಾ ದಿನವನ್ನು ಆಚರಿಸುವಾಗಲಾದರೂ ಒಮ್ಮೆ ಯಾಕೆ ಹೀಗಾಯಿತು, ಇದನ್ನು ಹೇಗೆ ತಡೆಯುವುದು ಎಂದು ಯೋಚಿಸೊಣ.

ಇಂದು ಕೀಟನಾಶಕಗಳ ಬಳಕೆ ಬೆಳೆ ಉಳಿಸಿಕೊಳ್ಳಲು ಅನಿವಾರ್ಯವಾಗಿರಬಹುದು. ಆದರೆ ಅದನ್ನು ಹಿತಮಿತವಾಗಿ ಬೇಕಾದಾಗ ಮಾತ್ರ, ಉಳಿಕೆ ಅಂಶ ಇಲ್ಲದಂತೆ, ಬಳಕೆ ಮಾಡುವ ಬಗ್ಗೆ ರೈತರಿಗೆ ತಳಮಟ್ಟದಿಂದ ಶಿಕ್ಷಣ ಕೊಡುವ ತುರ್ತು ಅಗತ್ಯ ಇದೆ. ಇಂದು ಹಕ್ಕಿಗಳು, ನಾಳೆ ಸಾಕುಪ್ರಾಣಿಗಳು, ನಾವು ಎಲ್ಲರೂ ಇದರ ಘೋರ ಪರಿಣಾಮವನ್ನು ಕಾಣಬೇಕಾಗಿ ಬರಬಹುದು.

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!