ಮಣ್ಣಿನಲ್ಲಿ ಬೆಳೆ ಬೆಳೆಯುವ ಪ್ರತೀಯೊಬ್ಬ ರೈತನೂ ಮಣ್ಣಿನ ಬಣ್ಣದ ಮೇಲೆ ಅದರ ಉತ್ಪಾದನಾ ಶಕ್ತಿಯನ್ನು ತಿಳಿಯಬಹುದು.
ಮಣ್ಣಿನ ಉತ್ಪಾದನಾ ಶಕ್ತಿ ( ಬೆಳೆ ಬೆಳೆದಾಗ ಅದರ ಬೆಳವಣಿಗೆ ಮತ್ತು ಅದರಲ್ಲಿ ಫಸಲು) ಅದರ ಭೌತಿಕ ಗುಣಧರ್ಮದ ಮೇಲೆ ಅವಲಂಭಿತವಾಗಿರುತ್ತದೆ. ಜಮೀನಿನ ಮಣ್ಣು ಜೇಡಿಯಿಂದ ಕೂಡಿದೆಯೇ, ಮರಳಿನಿಂದ ಕೂಡಿದೆಯೇ, ಬಣ್ಣ ಹೇಗಿದೆ ಎಂಬುದನ್ನು ಪರಿಶೀಲಿಸಿ ಅದರ ಉತ್ಪಾದಕತೆಯನ್ನು ನಿರ್ಧರಿಸಬಹುದು. ಕೆಲವರು ಮಣ್ಣು ನೋಡಿಯೇ ಈ ಮಣ್ಣಿನಲ್ಲಿ ಕೃಷಿ ಮಾಡುವಾಗ ಎಷ್ಟು ಹಾಕಿದರೂ ಸಾಲದು ಎನ್ನುತ್ತಾರೆ. ಇನ್ನು ಕೆಲವರು ಜಮೀನು ಮಾಡುವಾಗ ಮಣ್ಣಿನ ತರಗತಿಗನುಗುಣವಾಗಿ ಬೆಳೆಗಳನ್ನು ಹಾಕುತ್ತಾರೆ. ಕೆಲವರು ಜಮೀನು ಮಾಡುವಾಗ ಮಣ್ಣು ನೋಡಿಯೇ ಖರೀದಿ ಮಾಡುತ್ತಾರೆ. ಮಣ್ಣಿನ ಗುಣಧರ್ಮ ಯೋಗ್ಯವಾಗಿದ್ದರೆ ಮಾತ್ರ ಕೃಷಿ ಲಾಭದಾಯಕ.
- ಮಣ್ಣಿಗೆ ಒಂದು ಅಂತರ್ಗತ ಶಕ್ತಿ ಇರುತ್ತದೆ. ಅದು ಉತ್ತಮವಾಗಿದ್ದರೆ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ.
- ಗೊಬ್ಬರ ನೀರು, ಎಲ್ಲವೂ ಕಡಿಮೆ ಸಾಕು. ಒಂದು ವೇಳೆ ಸಸ್ಯ ಪಾಲನೆ ವ್ಯತ್ಯಾಸವಾದರೂ ಅದು ತಡೆದುಕೊಳ್ಳುತ್ತದೆ.
ಮಣ್ಣಿನ ಪರೀಕ್ಷೆ:
- ಕೃಷಿ ಮಾಡುವ ಭೂಮಿಯ ಮಣ್ಣಿನ ಗುಣಧರ್ಮ ಹೇಗಿದೆ ಎಂಬುದನ್ನು ಕಣ್ಣಂದಾಜಿಗೂ ನೋಡಬಹುದು.
- ಕೆಲವು ಪರೀಕ್ಷೆಗಳನ್ನೂ ಮಾಡಬಹುದು. ಮೇಲ್ಭಾಗದ ಸುಮಾರು ½ ಅಡಿಯ ಮಣ್ಣನ್ನು ತೆಗೆದುಕೊಂಡೂ ಅದಕ್ಕೆ ಸ್ವಲ್ಪ ನೀರು ಹಾಕಿ ಉಂಡೆ ಮಾಡಿ.
- ಉಂಡೆ ಮಾಡಲು ಚೆನ್ನಾಗಿ ಸ್ಪಂದಿಸುತ್ತಿದ್ದರೆ ಅಂತಹ ಮಣ್ಣು ಕೃಷಿ ಯೋಗ್ಯವಾಗಿರುತ್ತದೆ.
- ಮಣ್ಣನ್ನು ಒಂದು ಬಕೆಟ್ ನಲ್ಲಿ ತೂಕ ಮಾಡಿ ಹಾಕಿ. ಅದಕ್ಕೆ ಅಳತೆಯಲ್ಲಿ ನೀರನ್ನು ಸೇರಿಸಿರಿ.
- ನಂತರ ಅದನ್ನು ಕಲಕಿದಾಗ ಒಟ್ಟು ತೂಕದಲ್ಲಿ ಎಷ್ಟು ಮರಳು ಮತ್ತು ನೊರಜು ಕಲ್ಲುಗಳು ಸಿಗುತ್ತವೆ ಎಂದು ಅಂದಾಜು ಮಾಡಿ.
- ಅರ್ಧ ಪಾಲಿಗಿಂತ ಹೆಚ್ಚು ಕಲ್ಲು ಮರಳುಗಳಿದ್ದರೆ, ಮರಳಿನ ಪ್ರಮಾಣ ಹೆಚ್ಚಾಗಿದ್ದರೆ ಅಂತಹ ಮಣ್ಣು ಕಡಿಮೆ ಫಲವತ್ತತೆಯಿಂದ ಕೂಡಿದ ಮಣ್ಣಾಗಿರುತ್ತದೆ.
- ಮಣ್ಣಿನ ಪರೀಕ್ಷೆ ಮಾಡುವಾಗ ಮುಖ್ಯವಾಗಿ ಗಮನಿಸಬೇಕಾದದ್ದು ಮಣ್ಣಿನ ಆಳ. ಕೃಷಿ ಮಾಡಲು ಯೋಗ್ಯವೆನಿಸುವ ಭೂಮಿಯಲ್ಲಿ ಸುಮಾರು 5 ಅಡಿಯಷ್ಟಾದರೂ ಮಣ್ಣು ಇರಬೇಕು.
- ಮಣ್ಣಿನ ನಂತರ ಜೇಡಿ( ಸೇಡಿ) ಮಣ್ಣು ಸಿಕ್ಕರೆ ಅಂತಹ ತೊಂದರೆ ಇಲ್ಲ.
- ಹಾಸು ಜಂಬಿಟ್ಟಿಗೆ, ಶಿಲೆ ಕಲ್ಲುಗಳು ಇರುವ ಮಣ್ಣು ಧೀರ್ಘಾವಧಿ ಬೆಳೆಗಳನ್ನು, ಆಳಕ್ಕೆ ಬೇರು ಹೋಗುವ ಸಸ್ಯಗಳನ್ನು ಬೆಳೆಸಲು ಯೋಗ್ಯವಾಗಿರುವುದಿಲ್ಲ.
- ಒಂದು ಮುಷ್ಟಿ ಮಣ್ಣನ್ನು ಹಿಡಿದುಕೊಂಡು ಅದಕ್ಕೆ ಒಂದೆರಡು ತೊಟ್ಟು ನೀರನ್ನು ಬಿಟ್ಟಾಗ ಅದು ಅಗಲಕ್ಕೆ ವಿಸ್ತರಿಸಿ ಹರಡುವ ಮಣ್ಣು ಉತ್ತಮ ಮಣ್ಣು ಆಗಿರುತ್ತದೆ.
ಸಾಮಾನ್ಯವಾಗಿ ಮೇಲು ನೊಟಕ್ಕೆ ತಿಳಿಯಬಹುದಾದ ಸಂಗತಿ ಹೊಲದಲ್ಲಿ ಕಳೆಗಳು ಹುಲುಸಾಗಿ ಬೆಳೆಯುವಂತಿದ್ದರೆ ಅಂತಹ ಮಣ್ಣು ಉತ್ತಮ ಮಣ್ಣೇ ಆಗಿರುತ್ತದೆ. ಸಾಮಾನ್ಯವಾಗಿ ಗುದ್ದಲಿಯಲ್ಲಿ ಅಗೆದು ತೆಗೆಯಬೇಕಾದ ಮಣ್ಣು ಫಲವತ್ತತೆ ಕಡಿಮೆ ಇರುವ ಮಣ್ಣಾಗಿರುತ್ತದೆ. ಉತ್ತಮ ಗುಣಮಟ್ಟದ ಮಣ್ಣು ಮಳೆ ಹನಿಯ ಹೊಡೆತಕ್ಕೆ ಸಿಕ್ಕಿದಾಗ ಕರಗಿ ಕಲ್ಲು ಕಾಣುವುದಿಲ್ಲ. ಒಂದು ಮಳೆ ಸಿಂಚನ ಆದ ತಕ್ಷಣ ಅಲ್ಲಿ ಹುಲ್ಲು ಮುಂತಾದ ಕಳೆಗಳು ಹುಟ್ಟಿಕೊಂಡು, ಕೊಚ್ಚಣೆಯಾಗದಂತೆ ತಡೆಯುತ್ತದೆ. ನೆಲದಲ್ಲಿ ನೆಡೆಯುವಾಗ ಕಲ್ಲು ಚುಚ್ಚುವ ಮಣ್ಣಿನಲ್ಲಿ ಫಲವತ್ತತೆ ಕಡಿಮೆ ಇರುತ್ತದೆ.
ಮಣ್ಣಿನ ಬಣ್ಣ:
- ಅಗೆದು ಹಾಕಿದ ಮಣ್ಣಿನ ಬಣ್ಣದ ಮೇಲೆ ಅದರ ಅಂತರ್ಗತ ಫಲವತ್ತೆತೆಯನ್ನು ನಿರ್ಧರಿಸಬಹುದು.
- ಮಣ್ಣಿಗೆ ಕೆಂಪು ,ಕಂದು ಹಳದಿ ಬಣ್ಣಗಳಿರುತ್ತವೆ. ಸಾವಯವ ಸಂಮೃದ್ಧ ಮಣ್ಣು ಕಪ್ಪು ಮಣ್ಣಾಗಿರುತ್ತದೆ.
- ಉಳಿದ ಬಣ್ಣದ ಮಣ್ಣು ಖನಿಜಾಂಶಗಳು ಹೆಚ್ಚಾಗಿರುವ ಮಣ್ಣು ಆಗಿರುತ್ತದೆ.
- ಹಳದಿ ಅಥವಾ ಕಂದು ಬಣ್ಣದ ಮಣ್ಣಿನಲ್ಲಿ ಮ್ಯಾಂಗನೀಸ್, ಮತ್ತು ಕಬ್ಬಿಣ ಅಂಶ ಹೆಚ್ಚಾಗಿರುತ್ತದೆ.
- ಅದರಲ್ಲಿ ಸಾವಯವ ಅಂಶ ಇರುವುದಿಲ್ಲ. ಕೆಂಪು ಮಣ್ಣು ಸಹ ಕೆಲವು ಖನಿಜಗಳು ಹೆಚ್ಚಾಗಿರುವ ಕಾರಣ ಆ ಬಣ್ಣವನ್ನು ಪಡೆದಿರುತ್ತದೆ.
- ಸಿಲಿಕಾ ಮತ್ತು ಅಲ್ಯೂಮೀನಿಯಂ ಹೆಚ್ಚಾಗಿರುವ ಮಣ್ಣು ಕೆಂಪ ಮಣ್ಣು ಆಗಿರುತ್ತದೆ.
- ಇದರಲ್ಲಿ ಪೊಟ್ಯಾಶಿಯಂ ಹೆಚ್ಚು ಇರುತ್ತದೆ. ಕೆಂಪು ಶಿಲೆಗಳು ಕರಗಿದಲ್ಲಿ ಕೆಂಪು ಮಣ್ಣು ಹೆಚ್ಚಾಗಿರುತ್ತದೆ.
- ಕಪ್ಪು ಮಣ್ಣು ಹೆಚ್ಚು ಆಳದ ತನಕ ಇರುವುದಿಲ್ಲ. ಕಾರಣ ಆ ತನಕ ಸಾವಯವ ವಸ್ತುಗಳು ಅದಕ್ಕೆ ಸೇರಿರುವುದಿಲ್ಲ.
ಮಣ್ಣಿನಲ್ಲಿ ಖನಿಜ ಪದಾರ್ಥಗಳು, ಹಾಗೂ ಸಾವಯವ ಪದಾರ್ಥಗಳು ನಿಕಟವರ್ತಿಯಾಗಿ ಸಂಬಂಧ ಪಡೆದಿರುತ್ತವೆ. ಮಣ್ಣಿಗೆ ಖನಿಜ ಕಣಗಳು ಮತ್ತು ಸಾವಯವ ವಸ್ತುಗಳು ಸೇರಲ್ಪಟ್ಟಾಗ ಅದರ ಬಣ್ಣ ಕಪ್ಪು ಅಥವಾ ಕಂದು ಆಗುತ್ತದೆ. ಈ ಮಣ್ಣು ಸಸ್ಯ ಬೆಳವಣಿಗೆಗೆ ಯೋಗ್ಯ ಮಾಧ್ಯಮವಾಗಿರುತ್ತದೆ.
- ಶಿಲೆಗಳು ಕರಗಿದಾಗ ರಚಿತವಾದ ಮಣ್ಣಿಗೆ, ಸಸ್ಯ, ಪಾಚಿ, ಪ್ರಾಣಿ ಮುಂತಾದ ನೆಲದ ಮೇಲಿನ ಜೀವರಾಶಿಗಳು ಸೇರಿ ವಿಲೀನವಾಗಿ ಮಣ್ಣಿಗೆ ಸ್ವಲ್ಪ ಸ್ವಲ್ಪವೇ ಕಂದು, ಕಪ್ಪು ಬಣ್ಣ ಬರುತ್ತದೆ.
- ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗುತ್ತಾ ಅದು ಕಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
- ಇಂತಹ ಮಣ್ಣಿಗೆ ಅಂತರ್ಗತ ಶಕ್ತಿ ಉತ್ತಮವಾಗಿದ್ದು, ಬೆಳೆ ಬೆಳೆಯಲು ಅದು ಅನುಕೂಲ ವಾತಾವರಣವನ್ನು ಕಲ್ಪಿಸಿ ಕೊಡುತ್ತದೆ.
- ಮಣ್ಣು ಕೃಷಿ ಯೋಗ್ಯವೇ ಎಂಬುದನ್ನು ಅದರ ಬಣ್ಣದ ಮೇಲೆ ನಿರ್ಧರಿಸಬಹುದು.
- ಕೃಷಿಗೆ ಮಣ್ಣೇ ಪ್ರಧಾನವಾದ ಅಂಶ.
- ಗೊಬ್ಬರ ಇತ್ಯಾದಿಗಳು ನಂತರ. ನಮ್ಮ ಹಿರಿಯರು ಬೀಜ ಬಿಸಾಡಿದರೂ ಹುಟ್ಟುತ್ತದೆ ಎಂದು ಹೇಳುವುದನ್ನು ಕೇಳಿರಬಹುದು.
- ಅವರು ಅಂತಹ ಮಣ್ಣಿನಲ್ಲಿ ಕೃಷಿ ಮಾಡುತ್ತಿದ್ದರು. ವರ್ಷ ವರ್ಷವೂ ಸಾವಯವ ಪದಾರ್ಥಗಳನು ಹೇರಳವಾಗಿ ಸೇರಿಸುತ್ತಿದ್ದರು.
ಸಾವಯವ ವಸ್ತುಗಳು ಸ್ಥೂಲ ಗೊಬ್ಬರಗಳನ್ನು ವರ್ಷಾನುವರ್ಷಗಳಿಂದ ಮಣ್ಣಿಗೆ ಸೇರಿಸುತ್ತಾ ಬಂದಾಗ ಮಣ್ಣಿಗೆ ಜೀವ ಕಳೆ ಬರುತ್ತದೆ. ಈಗ ಹೊಸ ಹೊಸ ಮಣ್ಣು ಕೃಷಿಗೆ ಸೇರ್ಪಡೆಯಾಗುತ್ತಿರುವ ಕಾರಣ ಅದಕ್ಕೆ ಹೆಚ್ಚು ಹೆಚ್ಚು ಸಾವಯವ ವಸ್ತುಗಳನ್ನು ಸೇರಿಸುತ್ತಾ ಅದರ ಬಣ್ಣ ಬದಲಾವಣೆ ಮಾಡುತ್ತಾ ಕೃಷಿ ಮುಂದುವರಿಸಿದರೆ ಮಾತ್ರ ಅದರಲ್ಲಿ ಯೋಗ್ಯ ಪ್ರತಿಫಲ ಪಡೆಯಲು ಸಾಧ್ಯ.