ಪಾಲೀ ಹೌಸ್ ಬೇಕಾಗಿಲ್ಲ – ನೆರಳು ಮನೆಯೇ ಸಾಕು.

Shade net house

ಬೆಳೆ ಬೆಳೆಸುವಾಗ ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ  ಮಾಡಬೇಕು. ಪಾಲೀ ಹೌಸ್  ಎಂದರೆ ಅದು ಆನೆ ಸಾಕಿದಂತೆ. ಅದರ ಬದಲು ತುಂಬಾ ಕಡಿಮೆ ಖರ್ಚಿನಲ್ಲಿ  ಆಗುವ ನೆರಳು ಬಲೆ  ಅಥವಾ ನೆಟ್ ಹೌಸ್  ಒಳಗೆ  ಬಹುತೇಕ ಎಲ್ಲಾ ನಮೂನೆಯ  ಬೆಳೆಗಳನ್ನೂ ಬೆಳೆಯಬಹುದು. ರೈತರಿಗೆ ಇದೇ ಅನುಕೂಲಕರ.

 Shade house

  • ನೆರಳು ಮನೆ  ಎಂದರೆ ಬೆಳೆಗಳ ಮೇಲ್ಭಾಗದಲ್ಲಿ ನಿರ್ದಿಷ್ಟ ಪ್ರಮಾಣದ ನೆರಳನ್ನು ಒದಗಿಸುವ  ಪರದೆಯನ್ನು  ಹಾಸಿ ಮಾಡಿದ ರಚನೆ.
  • ಇಲ್ಲಿ ನೆರಳು ಎಂಬುದು ಕೆಲವು ಬೆಳೆಗಳಿಗೆ ಬೇಕಾಗುತ್ತದೆಯಾದರೂ  ಇದರ ಮೂಲ ಅರ್ಥ ಮಿತವ್ಯಯದ ಸುರಕ್ಷಿತ ಮನೆ ಎಂದು.
  • ಬೆಳೆಗಳನ್ನು  ಬೆಳೆಸುವಾಗ  ಎದುರಾಗುವ ವಾತಾವರಣ ಸಂಬಂಧಿತ ತೊಂದರೆಗಳನ್ನು ಈ ನೆರಳು ಮನೆ ಅಥವಾ ಪರದೆ ಮನೆ  ನಿವಾರಿಸಿ ರೈತರಿಗೆ  ಬೆಳೆ ರಕ್ಷಣೆಗೆ ಮಾಡುವ ಖರ್ಚನ್ನು ಉಳಿಸುತ್ತದೆ.
  • ಇದರಲ್ಲಿ ಹಲವಾರು ಉಪಯೋಗಗಳು ಇವೆ.

ನೆರಳು ಬಲೆಯ ಉಪಯೋಗ:

Gerbera under shade house

  • ಇದು ಸುರಕ್ಷಿತ  ಪಾಲೀ ಹೌಸ್ ಗಿಂತ 75 % ಕಡಿಮೆ  ಖರ್ಚಿನಲ್ಲಿ ಆಗುತ್ತದೆ.
  • ನೆರಳು ಮನೆಗೆ ಚದರ ಮೀಟರಿಗೆ 200-225 ರೂ ಖರ್ಚು .
  • ಪಾಲಿ ಹೌಸ್ ಗೆ  1000 ದಿಂದ  1300 ರೂ. ಖರ್ಚು ತಗಲುತ್ತದೆ.
  • ನೆರಳು ಬಲೆಯೊಳಗೆ ಬೆಳೆ ಬೆಳೆಸಿದಾಗ  ಸೂರ್ಯನ ನೇರಳಾತೀತ ಕಿರಣಗಳು ಬೆಳೆಗಳ ಮೇಲೆ  ಬಿದ್ದು ಸನ್ ಸ್ಕಾರ್ಚಿಂಗ್ ಆಗುವುದಿಲ್ಲ.
  • ಮನೆಯೊಳಗೆ  ಸಸ್ಯ  ಬೆಳವಣಿಗೆಗೆ ಅಗತ್ಯವಾದ ಆರ್ಧ್ರತೆಯ  ವಾತಾವರಣ ಉಳಿಯುತ್ತದೆ.
  • ಹೊರ ವಾತಾವರಣದಿಂದ ಬರುವ ಕೀಟಗಳು ಒಳ ಪ್ರವೇಶಿಸಲು ಆಗುವುದಿಲ್ಲ. ಆದ ಕಾರಣ ಕೀಟ ಸಮಸ್ಯೆ  ಕಡಿಮೆಯಾಗುತ್ತದೆ.
  • ಸಸ್ಯ ಬೆಳವಣಿಗೆಗೆ ಬೇಕಾಗುವ ಅನುಕೂಲಕರ  ವಾತಾವರಣ ಇರುವ ಕಾರಣ ರೋಗಗಳೂ ಸಹ ಕಡಿಮೆಯಾಗುತ್ತದೆ.
  • ತೆರೆದ ಪ್ರದೇಶದಲ್ಲಿ  ಬೆಳೆದಾಗ  ಬೆಳಗ್ಗೆ , ಸಂಜೆ, ಮಧ್ಯಾನ್ಹ ರಾತ್ರೆ  ಈ ಕಾಲಮಾನದಲ್ಲಿ ಇಬ್ಬನಿ, ಬಿಸಿಲು ಮುಂತಾದ ವಾತಾವರಣದ ಏರುಪೇರು ಬೆಳವಣಿಗೆಯನ್ನು ಹತ್ತಿಕ್ಕುತ್ತದೆ.
  • ನೆರಳು ಬಲೆ ಇದರ ತೊಂದರೆಯನ್ನು ಸಾಕಷ್ಟು ಕಡಿಮೆ  ಮಾಡುತ್ತದೆ.

ಯಾವ ಬೆಳೆ ಬೆಳೆಯಬಹುದು:

Shade house cultivation

  • ಹಸುರು ದೊನ್ನೆ ಮೆಣಸಿನ ಕಾಯಿ, ಬಜ್ಜಿ ಮೆಣಸು ಇತ್ಯಾದಿ
  • ಬೀನ್ಸ್ ಅಥವಾ ತಿಂಗಳ ಹುರುಳಿ ಹಣ್ಣೂ ನೊಣ ಬಾಧಿಸುವ ಹೀರೇ, ಹಾಗಲ ಮುಂತಾದ ಬೆಳೆಗಳು.
  •  ಹರಿವೆ, ಪಾಲಕ್  ಕೊತ್ತಂಬರಿ ಸೊಪ್ಪು,  ಇನ್ನೂ ಹಲವಾರು ಸೊಪ್ಪು ತರಕಾರಿಗಳು
  • ಪುಷ್ಪ  ಬೆಳೆಗಳಾದ ಗ್ಲಾಡಿಯೋಲಸ್, ಜರ್ಬೆರಾ ,ಗುಲಾಬಿ, ಆಂಥೂರಿಯಂ , ಕಾರ್ನೇಶನ್  ಇತ್ಯಾದಿ.
  • ಕಸಿ ಮಾಡಿದ ಸಸಿಗಳು ಮತ್ತು ಅಂಗಾಂಶ ಕಸಿಯಲ್ಲಿ ಸೆಕಂಡರಿ ನರ್ಸರಿ ಮಾಡುವ ಸಸಿಗಳು, ಮೊಳಕೆ ಬರಿಸಿ ಸಸಿ ಮಾಡುವಂತದ್ದು.

ಇವುಗಳಿಗೆಲ್ಲಾ ಬೇರೆ  ಬೇರೆ ಪ್ರಮಾಣದ ನೆರಳನ್ನು ಒದಗಿಸುವ ಬಲೆ ಹಾಕಬೇಕು. ಬಲೆಗಳಲ್ಲಿ 25% ,50% 75%  ನೆರಳೊದಗಿಸುವ ಬಲೆಗಳು ಇವೆ. ಕಪ್ಪು , ಹಸುರು ಬಣ್ಣದಲ್ಲಿವೆ. ಹಸುರು ಬಣ್ಣದ 25 %  ನೆರಳಿನ ಬಲೆ  ಹೆಚ್ಚಿನ ಬೆಳೆಗಳಿಗೆ ಸೂಕ್ತ.

ತಯಾರಿಕೆ:

  • ನೆರಳು ಮನೆಯ ರಚನೆಯನ್ನು ಸೂಕ್ತವಾಗಿ ಮಾಡಿದಲ್ಲಿ ಫಲಿತಾಂಶ ಹೆಚ್ಚು.  ಬಾಳ್ವಿಕೆಯೂ ಹೆಚ್ಚು.
  • ಮನೆಗಳ ಎತ್ತರ ಸುಮಾರು 10  ಅಡಿ ಇರಬೇಕು. ಅದಕ್ಕೆ ಕನಿಷ್ಟ 12 ಅಡಿ ಎತ್ತರದ ಕಲ್ಲಿನ ಕಂಬ ಅಥವಾ ಕಾಂಕ್ರೀಟಿನ ಕಂಬಗಳನ್ನು ಬಳಸಬೇಕು.
  • 10- 15  ಅಡಿ ಅಂತರದಲ್ಲಿ  ಕಂಬಗಳನ್ನು ಹಾಕಬೇಕು.
  • ಮಧ್ಯಂತರದಲ್ಲಿ ನೆರಳು ಬಲೆ  ಜೋತು ಬೀಳದಂತೆ  ಜಿ ಐ ಸರಿಗೆಯನ್ನು ಎಳೆಯಬೇಕು.
  • ಕಂಬಗಳ ಮೇಲು ಭಾಗಕ್ಕೆ ನೆರಳು ಬಲೆ  ಹರಿಯದಂತೆ ಹಳೆಯ ರಬ್ಬರ್ ಟ್ಯೂಬುಗಳನ್ನು  ಮುಚ್ಚಬೇಕು.
  • ಆಯ್ಕೆ ಮಾಡುವ ನೆರಳು ಬಲೆಗಳು ಯು ವಿ ಪ್ರತಿಬಂಧಕ ಆಗಿರಬೇಕು.
  • ಯಾವ ಬೆಳೆಗೆ ಎಷ್ಟು ನೆರಳು ಬೇಕು ಅಷ್ಟು ನೆರಳು ಕೊಡುವಂತಹ ಬಲೆಗಳನ್ನೇ ಹಾಕಬೇಕು.

ನೆರಳು ಅಗತ್ಯವಿಲ್ಲದ ಬೆಳೆಗಳಿಗೆ  ಬಿಳಿ ಬಣ್ಣದ ನೆಟ್ ಹಾಕಬೇಕು.ಮೇಲ್ಬಾಗಕ್ಕೆ ಬೇರೆ ಮತ್ತು ಬದಿಗಳಿಗೆ ಬೇರೆಯೇ ಬಲೆಯನ್ನು ಹೊದಿಸಬೇಕು. ಅದು ಅಗತ್ಯ ಬಿದ್ದಾಗ ಸರಿಸಲು ಅನುಕೂಲವಾಗುತ್ತದೆ.

  • ಅವರವರ ಆಗತ್ಯಕ್ಕೆ  ತಕ್ಕಂತೆ  ಮನೆಗಳ  ವಿಸ್ತೀರ್ಣವನ್ನು ಮಾಡಿಕೊಳ್ಳಬಹುದು.

ನೆರಳು ಬಲೆಯನ್ನು ಹೊದಿಸಿ ಮನೆ ಮಾಡಿ ಬೆಳೆ ಬೆಳೆಸುವಾಗ  ಕೀಟ ಸಮಸ್ಯೆಗಳು ಕಡಿಮೆಯಾಗುತ್ತದೆ. ತೆರೆದ ವಾತಾವರಣದಲ್ಲಿ  ಬೆಳೆಯುವುದಕ್ಕಿಂತ 2 ಪಟ್ಟು ಇಳುವರಿ ಹೆಚ್ಚು ದೊರೆಯುತ್ತದೆ. ಇಳುವರಿಯ ಗುಣಮಟ್ಟ ಸಹ ಉತ್ತಮವಾಗಿರುತ್ತದೆ.

  

Leave a Reply

Your email address will not be published. Required fields are marked *

error: Content is protected !!