ನಾವೆಲ್ಲಾ ಬೆಳೆಸುವ ಹೀರೆಕಾಯಿ, ಹಾಗಲಕಾಯಿ, ಪಡುವಲ ಕಾಯಿ ಮುಳ್ಳು ಸೌತೆ ಹಾಳಾಗುವುದಕ್ಕೆ ಕಾರಣ ಒಂದು ನೊಣ. ಈ ನೊಣದ ಸಂತತಿ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಳವಾಗಿದ್ದು, ಯಾವುದೇ ಬೆಳೆಯನ್ನು ಬಿಡದ ಸ್ಥಿತಿ ಬಂದಿದೆ. ಹಿಂದೆ ಕೆಲವು ಸಿಹಿ ಹಣ್ಣು , ತರಕಾರಿಗಳಿಗೆ ಮಾತ್ರ ಇದ್ದ ಇದರ ಕಾಟ ಈಗ ಬಹುತೇಕ ಎಲ್ಲಾ ತರಕಾರಿಗಳಿಗೂ ಬಂದಿದೆ. ತೊಂಡೆಯನ್ನೂ ಬಿಡುತ್ತಿಲ್ಲ. ಪಪ್ಪಾಯಿಯನ್ನೂ ಬಿಡುತ್ತಿಲ್ಲ. ಇವುಗಳ ನಿಯಂತ್ರಣ ಒಂದು ಸಾಹಸವೇ ಆಗಿದೆ.
- ಹಣ್ಣು ನೊಣ Drosophila melanogaster ಎಂದು ಕರೆಯಲ್ಪಡುವ ಒಂದು ಕೀಟ ಬಹುತೇಕ ಎಲ್ಲಾ ಹಣ್ಣಿನ ಬೆಳೆ , ತರಕಾರಿ ಬೆಳೆಗಳಿಗೆ ಮಹಾಶತ್ರು.
- ಇದರಿಂದಾಗಿ ಹಣ್ಣು ತರಕಾರಿಗಳಲ್ಲಿ 50% ಕ್ಕೂ ಹೆಚ್ಚು ಫಸಲು ನಷ್ಟವಾಗುತ್ತದೆ.
- ಕೃಷಿಕರು ಗಮನಿಸಿಯೇ ಇರುವುದಿಲ್ಲ. ಕಣ್ಣು ದೃಷ್ಟಿ ಮುಂತಾದ ಕಾರಣ ಹೇಳುತ್ತಾರೆ.
- ಕೆಲವರು ಯಾವುದೋ ರೋಗ ಎಂದು ಹೇಳುತ್ತಾರೆ.
ಏನಿದು ಹಣ್ಣು ನೊಣ:
- ಹಣ್ಣುಗಳಲ್ಲೇ ಮೊಟ್ಟೆ ಇಟ್ಟು ಮರಿಯಾಗುವ ಒಂದು ಜಾತಿಯ ಹಾರುವ ಕೀಟ.
- ತರಕಾರಿ ಹಣ್ಣು ಹಂಪಲು ಬೆಳೆಯುವಾಗ ಹಣ್ಣಿನ ಮೇಲೆ ಯಾವುದಾದರೂ ಜೇನು ನೊಣದ ತರಹದ ಕೀಟ ಇರುವುದು ಕಂಡಿದ್ದರೆ, ಅದೇ ಈ ಕೀಟ.
- ಇದು ಹಣ್ಣು ತರಕಾರಿಗಳ ಮೇಲೆ ಕುಳಿತು ಚುಚ್ಚಿ ಮೊಟ್ಟೆ ಇಡುತ್ತದೆ ನಂತರ ಅಲ್ಲಿಂದ ಹಾರಿ ಹೋಗುತ್ತದೆ.
- ಮೊಟ್ಟೆ ಇಟ್ಟ ಭಾಗದಲ್ಲಿ ಎರಡು ಮೂರು ದಿನದ ತರುವಾಯ ಸಣ್ಣ ಕಪ್ಪು ಚುಕ್ಕೆ ಕಾಣಿಸುತ್ತದೆ.
- ಈ ನೊಣ ಒಂದು ದಿನದಲ್ಲಿ 50-75 ರಷ್ಟು ಮೊಟ್ಟೆ ಇಡುತ್ತದೆ. ಮೊಟ್ಟೆ ಕೆಲವೇ ದಿನದಲ್ಲಿ ಮರಿಯಾಗುತ್ತದೆ.
- ನಮಗೆ ಗೊತ್ತಾಗುವಾಗ ಹಣ್ಣು ತರಕಾರಿಯ ಒಳಗೆ ಹುಳವಾಗಿರುತ್ತದೆ.
- ಹುಳ ಹಣ್ಣು, ತರಕಾರಿಗಳು ಕೊಳೆಯು ಬಿದ್ದಾಗ ಹುಳ ಮಣ್ಣಿಗೆ ಸೇರಿ ಮತ್ತೆ ಪ್ಯೂಪೆ ಹಂತವನ್ನು ನೆಲದಲ್ಲಿ ಮುಗಿಸಿ ಮತ್ತೆ ನೊಣವಾಗುತ್ತದೆ.
- ನೊಣ ಆದ ನಂತರ ಗಂಡು ಹೆಣ್ಣು ಹೊರ ವಾತಾವರಣದಲ್ಲಿ ಜೋಡಿಯಾಗಿ ಹಣ್ಣು ತರಕಾರಿಗಳಲ್ಲಿ ಮೊಟ್ಟೆ ಇಡುತ್ತವೆ. ಹೀಗೆ ಚಕ್ರ ಮುಂದುವರಿಯುತ್ತದೆ.
- ನಮ್ಮ ದೇಶದಲ್ಲಿ ಮಾತ್ರವಲ್ಲ ಅದು ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲೂ ಇದರ ತೊಂದರೆ ಇದೆ.
- ಎಲ್ಲಾ ಸೀಸನ್ ನಲ್ಲೀ ಇದು ಚಟುವಟಿಕೆಯಲ್ಲಿ ಇರುತ್ತದೆ. ಯಾವಾಗ ಅದಕ್ಕೆ ಮೊಟ್ಟೆ ಇಡಲು ಬೇಕಾಗುವ ಹಣ್ಣು ತರಕಾರಿ ಸಿಗುತ್ತದೆಯೋ ಆಗ ಅದು ಚಟುವಟಿಕೆ ಪ್ರಾರಂಭಿಸುತ್ತದೆ.
ಹತೋಟಿ ವಿಧಾನ:
- ಹಣ್ಣು ನೊಣವನ್ನು ರಾಸಾಯನಿಕ ವಿಧಾನದಲ್ಲಿ ಮತ್ತು ಸುರಕ್ಷಿತ ವಿಧಾನದಲ್ಲಿ ನಿಯಂತ್ರಣ ಮಾಡಲಾಗುತ್ತದೆ.
- ಈ ನೊಣ ಬಿಸಿ ವಾತಾವರಣ ಇದ್ದಾಗ ಹೆಚ್ಚು ಕ್ರಿಯಾತ್ಮಕವಾಗಿರುವುದಿಲ್ಲ. ನೆಲದಲ್ಲಿ ಅದರ ಪ್ಯೂಪೆ ಹಂತ ಮುಗಿಸಲು ಇದು ಅನುಕೂಲವರ ವಾತಾವರಣ ಆಗಿರುವುದಿಲ್ಲ.
- ಆರ್ಧ್ರತೆ ಹೆಚ್ಚಾದಂತೆ ಚಟುವಟಿಕೆ ತೀವ್ರಗೊಳ್ಳುತ್ತದೆ. ಸುಮಾರಾಗಿ ಒಂದು ತುಂತುರು ಮಳೆ ಬಂದರೂ ಸಾಕು ಅದರ ಚಟುವಟಿಕೆ ಹೆಚ್ಚಾಗುತ್ತದೆ.
- ರಾಸಾಯನಿಕ ವಿಧಾನದಲ್ಲಿ ನಿಯಂತ್ರಣ ಕೆಲವು ಬೆಳೆಗಳಿಗೆ ಮಾತ್ರ ಪ್ರಯೋಜನಕಾರಿ.
- ಇದರ ನಿಯಂತಣಕ್ಕೆ ಅಂತರವ್ಯಾಪೀ ಕೀಟನಾಶಕದ ಅವಶ್ಯಕತೆ ಇದ್ದು, ಅದನ್ನು ಉಪಯೋಗಿಸಿದ ನಂತರ ಸುಮಾರು 20-30 ದಿನಗಳ ಕಾಲ ಬಳಕೆ ಮಾಡಬಾರದು.
- ಒಂದು ವೇಳೆ ಬಳಸುವುದೇ ಆಗಿದ್ದರೆ ಕೊಯಿಲಿಗೆ 20-30 ದಿನಕ್ಕೆ ಮುಂಚೆ ಸಿಂಪಡಿಸಿ ಆಗಬೇಕು.
- ಇಮಿಡಾ ಕ್ಲೋಫ್ರಿಡ್,ಎಕಾಲೆಕ್ಸ್, ಡೆಲ್ಟ್ರಾಮೆಥ್ರಿನ್ ಮುಂತಾದ ಕೀಟನಾಶಕಗಳು ಇದರ ನಿಯಂತ್ರಣಕ್ಕೆ ಫಲಕಾರಿ.
- ಯಾವುದೇ ತರಕಾರಿ ಬೆಳೆ( ಹೀರೆ, ಹಾಗಲ, ಪಡುವಲ, ಕಲ್ಲಂಗಡಿ, ಕರಬೂಜ) ರಾಸಾಯನಿಕ ಕೀಟ ನಾಶಕ ಬಳಸಬೇಡಿ.
- ಹಿಂದೆ ತರಕಾರಿ ಬೆಳೆದ ಜಾಗವಾದರೆ ನೆಲವನ್ನು ಹಿತಮಿತವಾಗಿ ಸುಟ್ಟು ಬೀಜ ಹಾಕಿ.
- ಒಂದೇ ಒಂದು ಹಾಳಾದ ಕಾಯಿಯನ್ನೂ ಅಲ್ಲಿ ಉಳಿಸಬೇಡಿ. ತಕ್ಷಣ ಹೆಕ್ಕಿ ಸುಡಿ.
ಸುರಕ್ಷಿತ ವಿಧಾನ:
- ಹಣ್ಣು ನೊಣ ಇಲ್ಲ ಎಂದು ಯಾವ ಬೆಳೆಗಾರನೂ ಸುಮ್ಮನಿರಬಾರದು.
- ಒಮ್ಮೆ ಹಣ್ಣು ನೊಣ ಬಂದರೆ ಅದು ಮತ್ತೆ ಖಾಯಂ ಆಗಿ ಇರುತ್ತದೆ.
- ಹಾಗಲ, ಹೀರೆ, ಪಡುವಲ, ಕಲ್ಲಂಗಡಿ ಬೆಳೆಯುವವರು ಸಸಿಯಲ್ಲಿ ಮಿಡಿ ಆಗುವಾಗಲೇ ಫೆರಮೋನು ಟ್ರಾಪನ್ನು ಹಾಕಬೇಕು.
- ಮಾವಿನಲ್ಲಿ ಮಿಡಿ ಹಂತದಿಂದಲೇ ಟ್ರಾಪು ಹಾಕಬೇಕು.
- ಒಂದು ಫೆರಮೋನು ಟ್ರಾಪಿನಲ್ಲಿ ದಿನಕ್ಕೆ 5ಕಿಂತ ಹೆಚ್ಚು ನೊಣಗಳು ಬಿದ್ದರೆ ಇನ್ನೊಂದು ಟ್ರಾಪನ್ನು ಹಾಕಬೇಕು.
- ಮಿಡಿ ಆಗುವ ಮುಂಚೆಯೆ ಹಾಕಿದರೆ ಮಾತ್ರ ನಿಯಂತ್ರಣ ಸಾಧ್ಯ.
- ಫೆರಮೋನು ಟ್ರಾಪುಗಳು ಗಂಡು ನೊಣವನ್ನು ಮಾತ್ರ ಆಕರ್ಷಿಸುತ್ತವೆ.
- ಗಂಡು ನೊಣ ಕಡಿಮೆಯಾದರೆ ಹೆಣ್ಣು ನೊಣ ಮೊಟ್ಟೆ ಇಡುವುದಕ್ಕೆ ಕಷ್ಟವಾಗುತ್ತದೆ.
- ತಡವಾಗಿ ಟ್ರಾಪು ಹಾಕಿದರೆ ಆಗಲೇ ಅವು ಜೋಡಿಯಾಗಿ ಮೊಟ್ಟೆ ಇಡಲು ಸಿದ್ಧವಾಗಿರುತ್ತವೆ.
ಫೆರಮೋನು ಟ್ರಾಪುಗಳಿಂದ ಯಾರಿಗೂ ಯಾವ ಹಾನಿಯೂ ಇರುವುದಿಲ್ಲ. ಇವುಗಳ ನಿಯಂತ್ರಣ ಒಂದು ಸಾಹಸವೇ ಆಗಿದೆ. ಆದರೆ ಈಗಿತ್ತಲಾಗಿ ಫೆರಮೋನು ಟ್ರಾಪ್ ಗೇ ಇವು ಸೆಡ್ಡು ಹೊಡೆಯುತ್ತಿವೆ. ಮಾರಾಟದ ತರಕಾರಿಗಳಿಗೆ ವಿಷವೇ ಗತಿ.ಬೆಳೆಸುವವರು ತಿನ್ನುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
ಬರೇ ಟ್ರಾಪು ಹಾಕಿದಾಕ್ಷಣ ಎಲ್ಲಾ ಸರಿಯಾಗುವುದಿಲ್ಲ. ಹಾಳಾಗಿ ನೆಲಕ್ಕೆ ಬಿದ್ದ, ಕೊಯಿಲುಮಾಡುವಾಗ ಸಿಕ್ಕಿದ ಹುಳ ಇರುವ ಯಾವ ಕಾಯಿಗಳನ್ನೂ ಅಲ್ಲಿ ಉಳಿಸಬಾರದು. ಸುಡಬೇಕು. ಅದರಲ್ಲಿರುವ ಹುಳ ಮತ್ತೆ ನೊಣವಾಗಿ ಮೊಟ್ಟೆ ಇಡುತ್ತದೆ. ಸಾವಯವ ವಿಧಾನದಲ್ಲಿ ಬೆಳೆಯುವ ಸಾಹಸಿಗಳು ಸೊಳ್ಳೆ ಪರದೆ ಹಾಕಿ ಬೆಳೆದರೆ ಮಾತ್ರ ಹಣ್ಣು ನೊಣದಿಂದ ಮುಕ್ತಿ ಸಾಧ್ಯ.ಫೆರಮೋನು ಟ್ರಾಪುಗಳನ್ನು ಪ್ರತೀಯೊಬ್ಬ ರೈತನೂ ಬಳಕೆ ಮಾಡಬೇಕು. ಗಿಡ ಹೂಬರುವ ಮುಂಚೆಯೇ ನೇತಾಡಿಸಿ ಗಂಡು ನೊಣವನ್ನು ನಾಶಮಾಡುತ್ತಾ ಬರಬಹುದು.
.
end of the article:——————————————————————————-
search words: Pest of Ridge gourd# Pest of bitter gourd# Pest of fruits# Fruit fly# Pest control of vegetables#