ರೈತರಿಂದ ಕಿಸಾನ್ ಸಮ್ಮಾನ್ ನಿಧಿ ದುರುಪಯೋಗ- ಮರುಪಾವತಿಗೆ ಆದೇಶ.

ಕಿಸಾನ್ ಸಮ್ಮಾನ್ ಫಲಾನುಭವಿ ರೈತ

ಭಾರತ ಸರಕಾರ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಾಗಿ ಕೊಡುತ್ತಿರುವ ವಾರ್ಷಿಕ 6000 ರೂ.ಗಳಿಗೂ ನಕಲಿ ರೈತರು ನುಸುಳಿದ್ದಾರಂತೆ.

ಕೇಂದ್ರ ಕೃಷಿ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್ ಇವರು ಪಾರ್ಲಿಮೆಂಟ್ ಗೆ ನೀಡಿದ ಹೇಳಿಕೆಯಂತೆ, ನಮ್ಮ ದೇಶದಲ್ಲಿ ಅರ್ಹತೆ ಇಲ್ಲದ  ಸುಮಾರು 42 ಲಕ್ಷ  ಮಂದಿ, ಸುಮಾರು 3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರಂತೆ. ಸರಕಾರ ಇದೆಲ್ಲದರ ಲೆಕ್ಕ ತೆಗೆದಿದೆ. ಮತ್ತು ಅದನ್ನು ಪಾವಾಸು ಪಡೆಯಲು ಮುಂದಾಗಿದೆ. ಸರಕಾರಕ್ಕೆ ಜನ ಮೋಸ ಮಾಡುವುದೋ ಅಥವಾ ಸರಕಾರ ಜನರನ್ನು ಮೋಸ ಮಾಡುವುದೋ ತಿಳಿಯದಾಗಿದೆ.

ಯೋಜನೆ ಮತ್ತು ಹಿನ್ನೆಲೆ:

 • ಸರಕಾರ ಇದನ್ನು ಪ್ರಾರಂಭಿಸುವಾಗ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಎಂಬುದಾಗಿ ಪ್ರಕಟಿಸಿತ್ತು.
 • ಕೊನೆಗೆ ಅದನ್ನು ಎಲ್ಲಾ ರೈತರಿಗೂ ಎಂಬುದಾಗಿ ಹೇಳಿತ್ತು.
 • ಅದರಂತೆ ದೇಶದ ಕೃಷಿ ಮಾಡುವ ರೈತರು ಇದರ ಫಲ ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದರು.
 • ಅರ್ಜಿ ಸ್ವೀಕಾರ ಮಾಡುವವರೂ ಯಾವ ಮಾನದಂಡಗಳನ್ನೂ ಪರಿಗಣಿಸದೆ ಎಲ್ಲರನ್ನೂ ಇದಕ್ಕೆ ಸೇರ್ಪಡೆ ಮಾಡಿದರು.
 • ಜನ ಸರಕಾರದಿಂದ ನನಗೆ ವರ್ಷಕ್ಕೆ 6000 ರೂ. ಬರುತ್ತದೆ ಎಂದು ಹೆಮ್ಮೆ ಪಟ್ಟರು.
 • ಸುಮಾರು ಎರಡು ವರ್ಷಗಳ ಕಾಲ ಈ ಹಣವನ್ನು ನಮ್ಮ ಖಾತೆಗೆ ಹಾಕಿದ್ದೇನು, ಹಣ ಜಮಾವಣೆ ಆದ ಮರುದಿನವೇ ಬ್ಯಾಂಕಿಗೆ ಹೋಗಿ ಪಾಸ್ ಪುಸ್ತಕವನ್ನು  ಪರಿಶೀಲಿಸಿದ್ದೇನು?.
 • ಈ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸರಕಾರಕ್ಕೆ ಕೃತಜ್ಞತೆ ಹೇಳಿದ್ದೇನು ?.
 • ಆದರೆ ಈಗ ಮತ್ತೆ ಅಂತವರಲ್ಲಿ ಕೆಲವರಿಗೆ ಇದು ಕಹಿ ಲಡ್ದಾಗಿದೆ.
 • ಎಷ್ಟೋ ಜನ ಸರಕಾರೀ ನೌಕರಗಿರಿ ಮಾಡುತ್ತಿದ್ದರೂ ಸಹ  ತಮ್ಮ ಕೃಷಿ ಭೂಮಿಯ ಹಕ್ಕಿನಲ್ಲಿ ಈ ಹಣವನ್ನು  ಪಡೆದಿದ್ದಾರೆ.
 • ಅದೆಷ್ಟೋ ಜನ ವ್ಯಾಪಾರ ವ್ಯವಹಾರ ಹೊಂದಿ ಸರಕಾರಕ್ಕೆ ಆದಾಯ ಕರ ಪಾವತಿಸುವವರೂ ಸಹ ಇದರ ಫಲಾನುಭವಿಗಳಾಗಿದ್ದಾರೆ.
 • ಹಾಗೆಯೇ ಮನೆ ಕಟ್ಟಲು, ಕಾರ್ ತೆಗೆಯಲು ಆದಾಯದ ಅಸ್ತಿರತೆ ಉಳ್ಳವರು ಆದಾಯ ಇದೆ ಎಂದು ರಿಟನ್ ಸಲ್ಲಿಸಿದರೂ ಈ ಅನರ್ಹ ಫಲಾನುಭವಿಗಳ ಸಾಲಿನಲ್ಲಿ  ಸೇರಿದ್ದಾರೆ.
 • ಇವರೆಲ್ಲರಿಗೂ ಈಗ ಹಣ ಮರುಪಾವತಿಗೆ ಸೂಚನೆ ಬಂದಿದೆ.
 • ಒಂದಷ್ಟು ಜನ ಹಣ ಮರು ಪಾವತಿ ಮಾಡಿಯೂ ಆಗಿದೆ.
 • ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಗಳು ಇಂತವರು ಯಾರು ಎಂದು ಗುರುತಿಸಿ ಅವರನ್ನು ಸಂಪರ್ಕಿಸಿ ಪಡೆದ ಹಣವನ್ನು ಮರು ಪಾವತಿಸಲು ಬೇಕಾದ ಕ್ರಮ ಕೈಗೊಂಡಿವೆ.
ಕಿಸಾನ್ ಸಮ್ಮನ್ ನಿಧಿ ಬಳಕೆದಾರ ರೈತ

ಪತ್ತೆ ಕಾರ್ಯ ನಡೆಯುತ್ತಿದೆ:

 • ಸರಕಾರ ಈಗಾಗಲೇ ಫಲಾನುಭವಿಗಳ ಆದಾರ್ ಸಂಖ್ಯೆ, ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS Public Finance Management system) ಆದಾಯ ತೆರಿಗೆ ಲೆಕ್ಕಾಚಾರಗಳನ್ನು  ಕಲೆಹಾಕುತ್ತಿದ್ದು, ಇಷ್ಟರಲ್ಲಿ ಇಷ್ಟು ಮೊತ್ತ ಲಪಟಾಯಿಸಿದ ವರದಿ ಸಿಕ್ಕಿಹಾಕಿಕೊಂಡಿದೆ.
 • ಪ್ರಕ್ರಿಯೆಗಳು ಇನ್ನೂ ಮುಂದುವರಿಯುತ್ತಿದ್ದು, ಇನ್ನೂ ಜನ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ.
 • ಕೇಂದ್ರವು ಈಗಾಗಲೇ ರಾಜ್ಯ ಸರಕಾರಗಳಿಗೆ ಕೆಲವು ನಿರ್ವಹಣಾ ಕ್ರಮಗಳನ್ನು Standard Operation Guidelines’ (SOPs) ಹೊರಡಿಸಿದೆ.
 • ಯಾರಾದರೂ ಅರ್ಹರಲ್ಲದವರು  ಇದನ್ನು ಪಡೆದಿದ್ದರೆ ಅದನ್ನು ಪತ್ತೆ ಮಾಡಿ ಸರಕಾರಕ್ಕೆ ಮರು ಸಂದಾಯ ಮಾಡುವರೇ ಕ್ರಮ ಕೈಗೊಳ್ಳಲು ಸೂಚಿಸಿದೆ.

ಕರ್ನಾಟಕದ ಪಾಲು ಕಡಿಮೆ:

 •  ಈ ನಿಧಿಯನ್ನು ದುರುಪಯೋಗಪಡಿಸಿಕೊಂಡ ರಾಜ್ಯಗಳೆಂದರೆ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಅಸ್ಸಾಂ, ಪಂಜಾಬ್, ಉತ್ತರಪ್ರದೇಸದವರೇ ಹೆಚ್ಚು ಇದ್ದಾರೆ.
 • ಕರ್ನಾಟಕದಲ್ಲಿ ಇಲ್ಲವೆಂದಲ್ಲ. ಆದರೆ ಇಲ್ಲಿ ಭೂ ಹಿಡುವಳಿ ಸಣ್ಣದಾಗಿದ್ದು  ಸರಕಾರ ಬಿಗು ನೀತಿ ಅನುಸರಿಸದ ಕಾರಣ ಹೆಚ್ಚು ಪ್ರಮಾಣ ದಾಖಲಾಗಿಲ್ಲ.

ಅರ್ಹತೆ ಏನು:

 • ಪ್ರಾರಂಭದಲ್ಲೇ ಈ ಯೋಜನೆಯನ್ನು ತಂದ ಉದ್ದೇಶ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ.
 • ನಂತರ ಅದರಲ್ಲಿ ಬದಲಾವಣೆ ಆದದ್ದು ಇದ್ದರೆ ಅದು ಮೌಖಿಕ ಮಾತ್ರ.
 • ಈಗಲೂ 2 ಹೆಕ್ಟೇರಿಗಿಂತ ಕಡಿಮೆ ಹಿಡುವಳಿ ಹೊಂದಿದವರು ಮಾತ್ರ ಇದಕ್ಕೆ ಅರ್ಹರು.
 • ಆದಾಯ ಮಿತಿಯೂ ಇದಕ್ಕೆ ಇದೆ.
 • ಈ ಎಲ್ಲಾ ಗೈಡ್ ಲೈನ್ ಗಳನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿದೆ.
 • ಆದರೆ ನೋಂದಾಯಿಸಿಕೊಳ್ಳುವಾಗ  ಸ್ವಲ್ಪ ಸಡಿಲ ನೀತಿಯನ್ನು ಅನುಸರಿಸಿದ ಕಾರಣ ಈಗ ಈ ರದ್ದಾಂತ ಉಂಟಾಗಿದೆ.
 • ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬಿಗುವಾಗಲಿದ್ದು, ಬಹಳಷ್ಟು ಜನ ಈ ಯೋಜನೆಯ ಸನ್ಮಾನ ಪಡೆಯುವ ಬದಲು ಅವಮಾನ ಅನುಭವಿಸಬೇಕಾಗಿ ಬರಲೂ ಬಹುದು.

ರೈತರಿಗೆ ಇದು ಬೇಕಾ?

ರೈತರಿಗೆ ಸೂಕ್ತ ಮಾರುಕಟ್ಟೆ ದರ ಒದಗಿಸಿದರೆ ಎಲ್ಲವೂ ಕೊಟ್ಟಂತೆ
 • ಜನ ಸರಕಾರ ಕೊಡುತ್ತದೆ ಎಂದರೆ ಎಷ್ಟು ಕೊಟ್ಟರೂ ಸಾಲದು ಎನ್ನುತ್ತಾರೆ.
 • ಎಲ್ಲರೂ ಸರಕಾರ ಸವಲತ್ತು ಬಯಸುವವರೇ.
 • ಈ ಸವಲತ್ತುಗಳನ್ನು ಯಾವ ಆಡಳಿತಗಾರನೂ ತನ್ನ ಜೇಬಿನಿಂದ ಕೊಡುವುದಿಲ್ಲ.
 • ಒಂದು ಕಡೆಯಲ್ಲಿ ಎಳೆದು ಮತ್ತೊಂದು ಕಡೆಯಲ್ಲಿ ಕೊಡುವುದು ಅಷ್ಟೇ.
 • ಇದರಲ್ಲಿ   ಆಡಳಿತ ನಡೆಸುವವರ ತಪ್ಪು ಏನೂ ಇಲ್ಲ.
 • ಜನತೆಗೆ ಬರಪೂರ ಸವಲತ್ತುಗಳನ್ನು ಕೊಡದೆ ಇದ್ದರೆ ಅವರನ್ನು ಇದೇ ಜನ ಮುಂದೆ ತಿರಸ್ಕರಿಸುತ್ತಾರೆ.
 • ಹಾಲಿ ಆಡಳಿತ ಮಾಡುವವರು ಕೊಡದಿದ್ದರೆ ಮತ್ತೆ ಬರುವವರು ಕೊಡುವ ಆಶ್ವಾಸನೆ ನೀಡಿ ಜನರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಾರೆ.
 • ಹೀಗೆ ಎಲ್ಲೆಲ್ಲೂ ಕೊಡುವುದು ಮಾತ್ರ. ಜನ ನಮಗೆ ಎಲ್ಲಿಂದ ಸರಕಾರ ಕೊಡುತ್ತದೆ ಎಂದು ಎಲ್ಲಿಯೂ ಯೋಚಿಸುವುದಿಲ್ಲ.
 • ಜನತೆ ಸರಕಾರದ ಸವಲತ್ತು ಪಡೆಯಲು ಎಷ್ಟು ಬಡವನಾನಾಗಲೂ ಅವಮಾನ ಪಡುವುದಿಲ್ಲ.
 • ಜನತೆ ಸರಕಾರದ ಸವಲತ್ತುಗಳನ್ನು ಪಡೆಯುವಾಗ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಹೇಸಿಗೆ ಪಟ್ಟುಕೊಳ್ಳುವುದಿಲ್ಲ.
 • ಹಿರಿಯ ನಾಗರೀಕರಿಗೆ ಸರಕಾರ ಕೊಡುವ ಪಿಂಚಣಿಗಾಗಿ ನಾವು ಬರೆದುಕೊಡುವ ಸ್ವ ಘೋಷಣೆ ಯನ್ನು ಯಾರಾದರೂ ಓದಿದ್ದು ಉಂಟಾ.
 • ನಿಜವಾಗಿ ಓದಿದ  ಜನ ಸ್ವಾಭಿಮಾನ ಇದ್ದರೆ ಅದನ್ನು ಪಡೆದುಕೊಂಡಾರೇ?
 • ಹಾಗೆಯೇ ಎಲ್ಲವೂ.
 • ಜನತೆ ಸರಕಾರದ  ಸವಲತ್ತು ಬಯಸುವುದಕ್ಕಿಂತ ಸರಕಾರ ಕ್ಷೇಮವಾಗಿ  ಕೃಷಿ ಮಾಡಿಕೊಂಡು ಬದುಕಲು ಅವಕಾಶ ಕೊಡುವಂತೆ ಒತ್ತಾಯಿಸಬೇಕಾಗಿದೆ.

ಕಿಸಾನ್ ಸಮ್ಮಾನ್ ನಿಂದ 6000 ಪಡೆದರೆ, ನಾವು ಕೊಳ್ಳುವ ಗೊಬ್ಬರ, ಬೆಳೆ ಸಂರಕ್ಷಕ, ಕೃಷಿ ಯಂತ್ರೋಪಕರಣ, ಸಾಧನ ಸಲಕರಣೆ,ಹಾಗೆಯೇ ಇನ್ನಿತರ ನಾವು ಖರೀದಿ ಮಾಡುವ ವಸ್ತುಗಳಿಗೆ ನಾವು ಎಷ್ಟು  ಕರ ಪಾವತಿಸುತ್ತೇವೆ? ಇದನ್ನೆಲ್ಲಾ ಲೆಕ್ಕಾಚಾರ ಹಾಕಿದರೆ ನಮಗೆ ಸರಕಾರದ ಸನ್ಮಾನ ಮಾಡಬೇಕಾಗಿಲ್ಲ, ಇದನ್ನುಮಾಫಿ ಮಾಡಿ ಬೆಲೆ ಸ್ಥಿರತೆಯನ್ನು ಒದಗಿಸಿಕೊಟ್ಟರೆ ನಾವು ಗೌರವಯುತವಾಗಿ ಬದುಕಲು ಸಾಧ್ಯ ಎಂಬುದಾಗಿ ಕೆಲವು ರೈತರು ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!