ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಈ ಎಲೆ ಮುರುಟುವ ಸಮಸ್ಯೆಗೆ ಕಾರಣ ಏನು ಮತ್ತು ಸುರಕ್ಷಿತ ಪರಿಹಾರ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ತರಕಾರಿ ಬೆಳೆ ವಾಣಿಜ್ಯಿಕವಾಗಿ ಮಾಡಿದರೂ ಈ ಸಮಸ್ಯೆ ಇದೆ. ಮನೆಬಳಕೆಗೆ ಬೇಕಾದಷ್ಟೇ ಮಾಡಿದರೂ ಈ ಸಮಸ್ಯೆ ಬೆನ್ನು ಬಿಡುವುದಿಲ್ಲ. ತರಕಾರಿ ಬೆಳೆಗಳು ವಿಶೇಷವಾಗಿ ರಾಸಾಯನಿಕ ಮುಕ್ತವಾಗಿದ್ದರೆ ಬೆಳೆಗಾರರಿಗೂ ಒಳ್ಳೆಯದು. ಬಳಕೆದಾರರಿಗೂ ಒಳ್ಳೆಯದು. ಕೃಷಿಕರು ಕೀಟನಾಶಕ ಬಳಸುವುದರಿಂದ ಮೊದಲಾಗಿ ದೊಡ್ಡ ದುಷ್ಪರಿಣಾಮ ಉಂಟಾಗುವುದು ಸಿಂಪಡಿಸಿದವರಿಗೆ. ಅದನ್ನು ಉಸಿರಾಡಿದವರಿಗೆ, ಮೈಗೆ ಕೈಗೆ ತಾಗಿಸಿಕೊಂಡವರಿಗೆ ಪ್ರಾಥಮಿಕ ದುಶ್ಪರಿಣಾಮ. ನಂತರ ಗ್ರಾಹಕರಿಗೆ. ಆದ ಕಾರಣ ಗ್ರಾಹಕರ ಹಿತಕ್ಕಿಂತಲೂ ಸ್ವ ಹಿತದ ದೃಷ್ಟಿಯಿಂದ ಕೀಟನಾಶಕದ ಬಳಕೆಯನ್ನು ಭಾರೀ ಕಡಿಮೆ ಮಾಡಿ ಕೀಟ ಸಮಸ್ಯೆಯಿಂದ ದೂರವಾಗುವುದು ಅಗತ್ಯ.
- ನಮ್ಮ ರೈತರಲ್ಲಿ ಕೆಲವರಿಗೆ ಯಾವುದು ಕೀಟ , ಯಾವುದು ರೋಗ ಎಂಬುದರ ಚಿಹ್ಹೆ ಇನ್ನೂ ಗೊತ್ತಿಲ್ಲ.
- ಏನೇನೋ ಉಪಚಾರ ಮಾಡುವುದು, ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷ್ಯ ಮಾಡುವುದು, ಅಕಾಲದಲ್ಲಿ ಬೆಳೆ ಬೆಳೆಯುವುದು ಮಾಡುವ ಕಾರಣ ಕೀಟ- ರೋಗ ಸಮಸ್ಯೆಗಳು ತೀವ್ರ ಮಟ್ಟಕ್ಕೆ ಹೋಗುತ್ತದೆ.
ಎಲೆ ಮುರುಟುವುದಕ್ಕೆ ಕಾರಣ:
- ಎಲೆಗಳು ಮುರುಟಿಕೊಳ್ಳುವುದು ಸಾಮಾನ್ಯವಾಗಿ ಮೈಟ್, ಮತ್ತು ಹಿಟ್ಟು ತಿಗಣೆಗಳಿಂದ.
- ಇವು ಹೀರುವ ಕೀಟದ ಕಾರಣದಿಂದ. ಇದು ಚಳಿಗಾಲದಲ್ಲಿ ಹೆಚ್ಚು. ಬದನೆ , ಮೆಣಸು, ಅಲಸಂದೆ, ಸೌತೆ, ಕಲ್ಲಂಗಡಿ, ಕರಬೂಜ, ಎಲ್ಲದಕ್ಕೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು.
- ತುದಿ ಭಾಗದ ಎಳೆ ಎಲೆಗಳಿಗೆ ಇದು ಮೊದಲು ಪ್ರವೇಶವಾಗುತ್ತದೆ.
- ಅಲ್ಲಿಂದ ಅದು ಹೆಚ್ಚುತ್ತಾ ಕೆಳ ಭಾಗದ ಎಲೆಗಳಿಗೆ ವ್ಯಾಪಿಸುತ್ತದೆ.
- ಹೊಸ ಎಲೆಗಳು ಮುರುಟಿಕೊಂಡು ಬೆಳೆಯುತ್ತದೆ.
- ಬೆಳವಣಿಗೆ ಕುಂಠಿತವಾಗುತ್ತದೆ. ಎಲೆ ಹಿಮ್ಮುಖವಾಗಿ ಮುರುಟಿಕೊಳ್ಳುತ್ತದೆ.
- ಎಲೆಯ ಅಡಿ ಭಾಗವನ್ನು ತಿರುವಿ ನೊಡಿದಾಗ ಅಲ್ಲಿ ಅತೀ ಸಣ್ಣ ಗಾತ್ರದ ತಿಗಣೆಗಳು ಕಾಣಿಸುತ್ತವೆ.
- ಕೆಲವೊಮ್ಮೆ ಕಾಣಿಸದೆಯೂ ಇರಬಹುದು. ಇವು ರಸ ಹೀರುವ ಕೀಟಗಳಾಗಿದ್ದು, ಅಲ್ಲೇ ಸಂತಾನೋತ್ಪತ್ತಿಯನ್ನೂ ಮಾಡುತ್ತದೆ.
- ಈ ಕೀಟಗಳು ಯಾವಾಗಲೂ ಎಲೆಯ ಅಡಿ ಭಾಗದಲ್ಲೇ ಇರುವ ಕಾರಣ ಮೇಲ್ಭಾಗದಲ್ಲಿ ಯಾವುದೂ ಗೊತ್ತಾಗುವುದಿಲ್ಲ.
ಹೇಗೆ ನಿಯಂತ್ರಣ ಮಾಡುವುದು?
- ಎಲೆ ಮುರುಟುವ ಸಮಸ್ಯೆಗೆ ಪ್ರಾರಂಭಿಕ ಹಂತದಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು.
- ಮಿತಿ ಮೀರಿದಾಗ ಕೀಟನಾಶಕದ ಬಳಕೆ ಅನಿವಾರ್ಯವಾಗುತ್ತದೆ.
- ಪ್ರಾರಂಭಿಕ ಹಂತದಲ್ಲಿ ಎಲೆಗಳ ಚಿಗುರು ಭಾಗದಲ್ಲಿ ಮುರುಟುವಿಕೆ ಕಂಡು ಬಂದಾಗ ಆ ಭಾಗವನ್ನು ಮಾತ್ರ ತುಂಡು ಮಾಡಿ ಅದನ್ನು ಬೆಂಕಿಗೆ ಹಾಕಿ ಸುಡಬೇಕು.
- ಅಲ್ಲೇ ಬಿಸಾಡುವುದರಿಂದ ಅದು ಮತ್ತೆ ಗಿಡಕ್ಕೆ ಪ್ರಸಾರವಾಗುತ್ತದೆ.
- ಇರುವೆಗಳು ಇದರ ಪ್ರಸರಕಗಳಾಗಿರುತ್ತವೆ.
ಚಳಿಗಾಲದಲ್ಲಿ ಕೃಷಿ ಮಾಡುವಾಗ ಕಡ್ಡಾಯವಾಗಿ ಇಂತಹ ಕೀಟಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಕೀಟನಾಶಕವನ್ನು ಬಳಕೆ ಮಾಡುವುದು ಅಗತ್ಯ. ಜೈವಿಕ ಕೀಟನಾಶಕವನ್ನೂ ಬಳಕೆ ಮಾದಬಹುದು. ಬೇವಿನ ಮೂಲದ ಕೀಟನಾಶಕ, ವರ್ಟಿಸೀಲಿಯಂ ನಂತಹ ಜೈವಿಕ ಕೀಟನಾಶಕವನ್ನು ಮುನ್ನೆಚ್ಚರಿಕೆಯಾಗಿ ಬಳಕೆ ಮಾಡಬೇಕು.
- ಅದರ ಲಭ್ಯತೆ ಇಲ್ಲವಾದರೆ ನೀರಿನಲ್ಲಿ ಕರಗುವ ಗಂಧಕವನ್ನು ಲೀಟರಿಗೆ 2 ಗ್ರಾಂ ನಂತೆ ಬೆರೆಸಿ ಸಿಂಪರಣೆ ಮಾಡಬೇಕು.
- ಸಿಂಪರಣೆ ಮಾಡುವಾಗ ಎಲೆಯ ಅಡಿ ಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡಬೇಕಾದುದು ಅತೀ ಅಗತ್ಯ.
- ಇದು ರಸ ಹೀರುವ ಮೈಟ್ , ಹಿಟ್ಟು ತಿಗಣೆ ಮುಂತಾದ ಕೀಟಗಳನ್ನು ನಿಯಂತ್ರಿಸುತ್ತದೆ ಅಲ್ಲದೆ ಎಲೆ ಒಣಗುವ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ.
- ಇದು ವಿಷ ರಾಸಾಯನಿಕ ಆಗಿರುವುದಿಲ್ಲ. ಸಿಂಪಡಿಸುವವರಿಗೆ ತೊಂದರೆ ಇಲ್ಲ. ತಿನ್ನುವ ಗ್ರಾಹಕರಿಗೂ ತೊಂದರೆ ಇಲ್ಲ.
ಮರಸುಟ್ಟ ಬೂದಿಯಲ್ಲಿಯೂ ಈ ರಸ ಹೀರುವ ಕೀಟವನ್ನು ನಿಯಂತ್ರಿಸಬಹುದು. ಆದರೆ ಅದನ್ನು ಎಲೆ ಅಡಿ ಭಾಗಕ್ಕೆ ತಾಗುವಂತೆ ಎರಚಬೇಕು. ತಾಜಾ ಬೂದಿ ಬಳಕೆ ಮಾಡಬಾರದು.
ಅಕಾಲದಲ್ಲಿ ಬೆಳೆ ಬೆಳೆಯುವಾಗ ಯಾವ ಯಾವ ಸಾಮಾನ್ಯ ಕೀಟಗಳು ಬರುತ್ತವೆ ಎಂದುದು ಪ್ರತೀಯೊಬ್ಬ ತರಕಾರಿ ಬೆಳೆಗಾರರಿಗೂ ಗೊತ್ತಿರಬೇಕು. ಅದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಮೊದಲೇ ಕೈಗೊಳ್ಳಬೇಕು. ಹೀಗೆ ಮಾಡಿದರೆ ವಿಷ ರಾಸಾಯನಿಕಗಳ ಬಳಕೆ ಮಾಡದೆ ಬೆಳೆ ಬೆಳೆಯಬಹುದು.