ಸ್ಥಳೀಯ ತಳಿಗಳು ಅನಾದಿ ಕಾಲದಿಂದಲೂ ನಮ್ಮ ಸ್ಥಳಕ್ಕೆ ಹೊಂದಿಕೊಂಡ ತಳಿಗಳಾದ ಕಾರಣ ಇವು ಎಲ್ಲಾ ದೃಷ್ಟಿಯಲ್ಲೂ ಸುರಕ್ಷಿತ ಮತ್ತು ಶಾಶ್ವತ. ಅಧಿಕ ಇಳುವರಿ ಇಲ್ಲ ಎಂಬ ಕಾರಣಕ್ಕೆ ನಾವು ಸ್ಥಳೀಯ ತಳಿಗಳನ್ನು ದೂರ ಇಡುವುದು ಸೂಕ್ತವಲ್ಲ. ಅದನ್ನು ಉಳಿಸಿಕೊಳ್ಳಲೇ ಬೇಕು. ಬೇರೆ ತಳಿಗಳು ಇರಲಿ, ಆದರೆ ಸ್ಥಳೀಯ ತಳಿಗಳನ್ನು ಮಾತ್ರ ಬಿಡಬೇಡಿ.
ಯಾಕೆ ಇಲ್ಲಿ ಈ ಪ್ರಸ್ತಾಪ ಎನ್ನುತ್ತೀರಾ? ಬಹುತೇಕ ರೋಗ ರುಜಿನಗಳು, ಕೀಟ ಕಸಾಲೆಗಳು ಮೊದಲಾಗಿ ಧಾಳಿ ಮಾಡುವುದು ಇದೇ ಅಧಿಕ ಇಳುವರಿಯ ಅಥವಾ ವಿಶಿಷ್ಟ ತಳಿಗಳಿಗೆ. ಅಲ್ಪಾವಧಿ ಬೆಳೆಗಳಾದರೆ ಒಂದು ಬೆಳೆ ಹೋದರೆ ಹೋಗಲಿ, ಮುಂದೆ ಸರಿ ಮಾಡಿಕೊಂಡರಾಯಿತು ಎಂದು ಮರೆತು ಬಿಡಬಹುದು. ಆದರೆ ಧೀರ್ಘಾವಧಿ ಬೆಳೆಗಳಿಗೆ ಹಾಗೆ ಮಾಡುವಂತಿಲ್ಲ. ಒಮ್ಮೆ ಬೆಳೆ ಹಾಕಿದರೆ ಮುಗಿಯಿತು. ಅಲ್ಲಿ ಆಗುವ ಯಾವುದೇ ನಷ್ಟಕ್ಕೂ ನಾವು ಸಿದ್ದರಿರಬೇಕಾಗುತ್ತದೆ. ಒಂದೋ ಮತ್ತೆ ಆ ಬೆಳೆಯನ್ನು ತೆಗೆದು ಬೇರೆ ಹಾಕಬೇಕು. ಇಲ್ಲವೇ ದುಬಾರಿ ಖರ್ಚು ಮಾಡಿ ನಿರ್ವಹಣೆ ಮಾಡಿ ಪ್ರಯತ್ನ ಮಾಡುತ್ತಾ ಇರಬೇಕು.
ಧೀರ್ಘಾವಧಿ ಬೆಳೆಗಳಾದ ಅಡಿಕೆ, ತೆಂಗು ಹಾಗೆಯೇ ಇನ್ನಿತರ ಬೆಳೆಗಳನ್ನು ಬೆಳೆಸುವಾಗ ಸಾಧ್ಯವಾದಷ್ಟು ಸ್ಥಳೀಯ ತಳಿಗಳನ್ನು ಹಾಕಿ. ಅಡಿಕೆಯಲ್ಲಿ ಬೇರೆ ಬೇರೆ ತಳಿಗಳಿವೆ. ಆದರೆ ಸ್ಥಳಜನ್ಯ ತಳಿಗಳಿಗೆ ಅದರದ್ದೇ ಆದ ವಿಶೇಷ ಗುಣ ಇದೆ. ತೆಂಗಿನಲ್ಲಿಯೂ ಹಾಗೀಯೇ. ಹೈಬ್ರೀಡ್ ತಳಿಗಳು, ಗಿಡ್ದ ತಳಿಗಳು ಹೀಗೆಲ್ಲಾ ಇವೆ. ಆದರೆ ಸ್ಥಳೀಯ ತಳಿ, ಪಶ್ಚಿಮ ಕರಾವಳಿ ತಳಿ, ಅರಸೀಕೆರೆ ತಳಿ, ತಿಪಟೂರ್ ತಳಿ ಇವುಗಳು ಅನಾದಿ ಕಾಲದಿಂದ ನಮ್ಮಲ್ಲಿ ಇದ್ದ ಸ್ಥಳೀಯ ತಳಿಗಳು. ಈ ತಳಿಗಳಿಗೂ ನಮಗೆ ರಂಗು ರಂಗಾಗಿ ಕಾಣುವ ಬೇರೆ ತಳಿಗಳಿಗೂ ವ್ಯತ್ಯಾಸ ಇಷ್ಟೇ. ಅದು ಐಷಾರಾಮಿ , ಇದು ಸಾಮಾನ್ಯ. ಇಂದಿನ ಕೆಲವು ಪರಿಸ್ಥಿತಿಗಳನ್ನು ಗಮನಿಸಿದಾಗ ನಮ್ಮ ಕೈಹಿಡಿಯುವ ತಳಿಗಳಿದ್ದರೆ ಅದು ಸ್ಥಳೀಯ ತಳಿಗಳು ಮಾತ್ರ ಎಂದು ಕಂಡಿತವಾಗಿಯೂ ಹೇಳಬಹುದು. ಕೇರಳದಲ್ಲಿ ಈ ಒಂದು ವಿಚಾರ ಬಹಳ ಚರ್ಚೆಯಗೆ ಒಳಪಟ್ಟಿದ್ದು, ರೈತರು ಸ್ಥಳೀಯ ತಳಿಗತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ.
ತೆಂಗಿನ ಸ್ಥಳೀಯ ತಳಿಯ ವಿಶೇಷ:
- ತೆಂಗಿಗೆ ಕೀಟಗಳಾಗಿ ಇಂದು ಸಮಸ್ಯೆ ಕೊಡುವಂತವುಗಳೆಂದರೆ ಕುರುವಾಯಿ ಕೀಟ. ಕೆಂಪು ಮೂತಿ ದುಂಬಿ, ಬಿಳಿ ನೊಣ ಇತ್ಯಾದಿಗಳು.
- ರೋಗಗಳಲ್ಲಿ ಸುಳಿ ಕೊಳೆ, ಹಾಗೆಯೇ ಕಾಂಡ ರಸ ಸೋರುವ ರೋಗ ಮತ್ತು ಇತ್ತೀಚೆಗೆ ಹೆಚ್ಚಾಗುತ್ತಿರುವ ಕೆಂಪು ಶಿಲೀಂದ್ರ.
- ಇವು ಮೊದಲು ಬಾಧಿಸುವುದು ಹೈಬ್ರೀಡ್, ಹಾಗೂ ಗಿಡ್ದ ತಳಿಗಳಿಗೆ.
- ಒಮ್ಮೆ CPCRI ಕಾಸರಗೋಡು ಇಲ್ಲಿನ ಪ್ರಾತ್ಯಕ್ಷಿಕಾ ತೆಂಗಿನ ತೋಟವನ್ನು ಗಮನಿಸಿ.
- ಅಲ್ಲಿ ಕಳೆದ ಮೂರು ನಾಲ್ಕು ವರ್ಷಕ್ಕೆ ಹಿಂದೆ ನಮ್ಮನ್ನೆಲ್ಲಾ ಮರುಳು ಮಾಡಿದ್ದ ಅಲ್ಲಿನ ಕಿತ್ತಳೆ ತಳಿ, ಹಸುರು ತಳಿ, ಹಳದಿ ತಳಿ , ಹೈಬ್ರೀಡ್ ತಳಿಗಳು ಈಗ ನೋಡಿದರೆ ನಮಗೆಲ್ಲಾ ಅಚ್ಚರಿಯುಂಟಾಗುತ್ತದೆ.
- ಬೇರೆ ಏನೂ ಅಲ್ಲ. ಅವೆಲ್ಲಾ ಈಗ ಬಿಳಿ ನೊಣದ ಬಾಧೆಗೆ ತುತ್ತಾಗಿ ಇಳುವರಿ ಕ್ಷೀಣಿಸಿಕೊಂಡು ನೋಡಲು ಬಹಳ ಬೇಜಾರು ತರುವಂತಾಗಿದೆ.
- ಅದೇ ಸ್ಥಳೀಯ ವೆಸ್ಟ್ ಕೊಸ್ಟ್ ತಳಿ ಎತ್ತರ ಬೆಳೆದರೂ ಸಹ ಅವುಗಳ ಎಡೆಯಲ್ಲಿ ನೋಡಲು ಆಕರ್ಷಕವಾಗಿದೆ.
- ಹೋಲಿಕೆ ಮಾಡಿದರೆ ಇವುಗಳಿಗೆ ಬಿಳಿ ನೊಣ ಬಾಧಿಸಿದ್ದರೂ ಅವು ಸೊರಗಲಿಲ್ಲ.
- ಇದನ್ನು ಗಮನಿಸಿದಾಗ ಕೊನೆಗೂ ನಮ್ಮನ್ನು ಕಾಯುವುದು ಸ್ಥಳೀಯ ತಳಿಗಳು ಮಾತ್ರ ಎಂದೆಣಿಸುತ್ತದೆ.
- CPCRI ಸಂಸ್ಥೆಯ ಪ್ರಾದೇಶಿಕ ಪ್ರಾತ್ಯಕ್ಷಿಕಾ ಕೇಂದ್ರ ಕರ್ನಾಟಕದ ನೆಟ್ಟಣದಲ್ಲಿರುವ ಕಿಡು ಫಾರಂ ಗೆ ಹೋದರೆ ಅಲ್ಲಿ ಇರುವ ಗಿಡ್ಡ ತಳಿಯ ತೆಂಗಿನ ಮರಗಳಿಗೆ ಎಷ್ಟೊಂದು ಕುರುವಾಯಿ ಕೀಟದ ಹಾವಳಿ ಇದೆ.
- ಹಾಗೆಯೇ ಸುಳಿ ಕೊಳೆ ರೋಗ. ಮೊದಲಾಗಿ ಈ ತಳಿಗೆ ರೋಗ ಕೀಟಗಳು ಉಪಟಳ ಉಂಟು ಮಾಡುತ್ತವೆ.
- ನಂತರ ಅದು ಇತರ ಸ್ಥಳೀಯ ತಳಿಗಳಿಗೂ ಹರಡುತ್ತದೆ.
- ಇಲ್ಲಿ ಮಳೆಗಾಲದಾದ್ಯಂತ ಸುಳಿ ಕೊಳೆರೋಗವನ್ನು ಗುರುತಿಸಿ ಉಪಚಾರ ಮಾಡುವುದೇ ದೊಡ್ಡ ಕೆಲಸ.
ಇಷ್ಟಲ್ಲದೆ ತೆಂಗಿನ ಮಹಾಮಾರಿ ಕೀಟಗಳಾದ ಕುರುವಾಯಿ ಕೀಟ, ಕೆಂಪು ಮೂತಿ ದುಂಬಿ ಎಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುವುದು ಹೈಬ್ರೀಡ್, ಕಿತ್ತಳೆ , ಹಸುರು ಮುಂತಾದ ತಳಿಗಳಿಗೆ. ಇವುಗಳ ಉಪಚಾರಕ್ಕೆ ಒಂದು ಮರದಲ್ಲಿ ಬರುವ ವಾರ್ಷಿಕ ಅದಾಯ ಸಾಲದು.
ಅಡಿಕೆಯ ಸ್ಥಳೀಯ ತಳಿಯ ವಿಶೇಷ:
- ಅಡಿಕೆಯಲ್ಲಿ ಅದರಲ್ಲೂ ಚಾಲಿ ಅಡಿಕೆ ಬೆಳೆ ಪ್ರದೇಶದಲ್ಲಿ ಒಂದಷ್ಟು ಹೊರ ಪ್ರದೇಶಗಳ ತಳಿಗಳು ಪರಿಚಯಿಸಲ್ಪಟ್ಟಿವೆ.
- ಇವೆಲ್ಲವೂ ಇಳುವರಿ ವಿಚಾರದಲ್ಲಿ ಸ್ಥಳೀಯ ತಳಿಗಳನ್ನು ಮೀರಿಸಿದ್ದರೂ ಸಹ ಗಟ್ಟಿತನ, ರೋಗ ನಿರೋಧಕ ಶಕ್ತಿ, ಬಾಳ್ವಿಕೆ ದೃಷ್ಟಿಯಲ್ಲಿ ಸ್ಥಳೀಯ ತಳಿಗಳನ್ನು ಮೀರಿಸಲು ಅದರಿಂದ ಸಾಧ್ಯವಾಗಲಿಲ್ಲ.
- ಇತ್ತೀಚೀಗೆ ಹೆಚ್ಚಳವಾಗುತ್ತಿರುವ ಕೊಲೆಟ್ರೋಟ್ರಿಕಂ ಶಿಲೀಂದ್ರ ರೋಗ ಹಾಗೆಯೇ ಕೀಟ ಬಾಧೆಗಳು ಈ ತಳಿಗಳಿಗೆ ಹೆಚ್ಚು.
- ಹೊಸತಾಗಿ ಪರಿಚಯಿಸಲ್ಪಟ್ಟ ಎಲ್ಲಾ ತಳಿಗಳ ಪೀಳಿಗೆಯಲ್ಲಿ ವ್ಯತ್ಯಾಸಗಳು ಹಚ್ಚಾಗಿ ಕಂಡು ಬಂದರೆ ಸ್ಥಳೀಯ ತಳಿಯಲ್ಲಿ ಅಂತಹ ವ್ಯತ್ಯಾಸ ಸಲ್ಪ ಕಡಿಮೆ.
- ಶಿವಮೊಗ್ಗ, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ಕೆಂಪಡಿಕೆ ಮಾಡುವ ತಳಿಗಳು.
- ಈ ಪ್ರದೇಶಗಳಲ್ಲಿ ಈ ತನಕ ಹೊಸ ತಳಿಗಳ ಪರಿಚಯ ಆಗಿಲ್ಲ.
- ಇರುವ ಸ್ಥಳೀಯ ತಳಿಗಳು ಯಾವ ರೈತನಿಗೂ ಇಳುವರಿಯಲ್ಲಿ ಮೋಸ ಮಾಡಿಲ್ಲ.
- ಬೇಸಾಯದಲ್ಲಿ ಅಧಿಕ ಇಳುವರಿ ಒಂದೇ ಮಾನದಂಡ ಅಲ್ಲ.
- ಕೆಲವೊಂದು ಸಂದರ್ಭಗಳಲ್ಲಿ ಎಲ್ಲವೂ ಪಾಸ್ ಆಗಿಬಿಡುತ್ತವೆ.
- ಆದರೆ ಕೆಲವು ಹವಾಮನ ವೈಪರೀತ್ಯಗಳ ಸಮಯದಲ್ಲಿ ಮೊದಲು ಕೈ ಕೊಡುವುದು ಸ್ಥಳಜನ್ಯವಲ್ಲದ ತಳಿಗಳು ಮಾತ್ರ.
- ಇಷ್ಟಕ್ಕೂ ಹೊಸ ತಳಿಯ ಪರಿಚಯ ಮಾಡುವಾಗ ಸರಕಾರೀ ಸ್ವಾಮ್ಯದ ಸಂಸ್ಥೆಗಳಿರಲಿ.
- ಖಾಸಗಿಯವರು ಇರಲಿ, ಕೆಲವು ಅವಸರಗಳನ್ನು ಹಾಗೆಯೇ ಕೆಲವು ಅಗತ್ಯ ಮಾನದದಂಡಗಳನ್ನು ಗಣನೆಗೆತೆಗೆದುಕೊಳ್ಳದೆ ಬಿಡುಗಡೆ ಮಾಡುತ್ತಾರೆ.
- ತಳಿ ಬಿಡುಗಡೆ ಒಬ್ಬ ತಳಿ ತಜ್ಞನಿಗೆ ಒಂದು ಘನತೆ ಹೆಚ್ಚಿಸಿಕೊಡುವಂತದ್ದು ಆದ ಕಾರಣ ಹೇಗಾದರೂ ಮಾಡಿ ತಳಿಯನ್ನು ಬಿಡುಗಡೆ ಮಾಡುವುದೂ ಇರುತ್ತದೆ.
- ಇಂತವುಗಳು ಹವಾಮಾನ ವೈಪರೀತ್ಯಗಳ ಸಮಯದಲ್ಲಿ ಕೈಕೊಡುತ್ತವೆ.
- ಸ್ಥಳೀಯ ತಳಿಗಳು ಸಾಮಾನ್ಯವಾಗಿ ಹೆಚ್ಚಿನ ವೈಪರೀತ್ಯಗಳಿಗೆ ನಿರೋಧಕ ಶಕ್ತಿ ಪಡೆದಿರುತ್ತವೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ ಸುಮಾರು ಒಂದು ಹಳ್ಳಿ ಪೂರ್ತಿ ಭತ್ತದ ಬೆಳೆ ಬೆಳೆಸುತ್ತಾರೆ. ಇಲ್ಲಿ ಒಂದು ತಿಂಗಳ ಕಾಲ ನೆರೆ ಬಂದು ನೀರು ಸಾಗರದಂತೆ ನಿಂತೇ ಇರುವ ಕಾರಣ ಅಡಿಕೆ ಬೆಳೆಯಲಿಕ್ಕೆ ಆಗುವುದಿಲ್ಲ. ಅಲ್ಲೆಲ್ಲಾ ಭತ್ತ ಬೆಳೆಸುತ್ತಾರೆ. (ನೆರೆಗುಳಿ ಭತ್ತ) ಭತ್ತದ ಪೈರು ತಿಂಗಳಿಗೂ ಹೆಚ್ಚು ಕಾಲ ಮುಳುಗಿರುತ್ತದೆ. ಅದು ಅಲ್ಲಿಯ ಸ್ಥಳೀಯ ತಳಿ ಅದ ಕಾರಣ ನೆರೆ ಬರಲಿ, ಏನೇ ಆಗಲಿ ಮಾಮೂಲು ಇಳುವರಿ ಕೊಟ್ಟೇ (15-16 ಕ್ವಿಂಟಾಲು) ಕೊಡುತ್ತದೆ. ಇಂತಹ ಹಲವಾರು ವಿಶೇಷ ತಳಿಗಳು ನಮ್ಮಲ್ಲಿವೆ. ಈ ತಳಿಗಳ -ಬದಲಿಗೆ ರೈತರೇನಾದರೂ ಅಧಿಕ ಇಳುವರಿಯ ತಳಿ ಬೆಳೆದರೆ ಏನೇನೂ ಇಲ್ಲದ ಸ್ಥಿತಿ ಉಂಟಾಗಬಹುದು.ಭತ್ತ ಮಾತ್ರವಲ್ಲ, ಜೋಳ, ರಾಗಿ ಹಾಗೆಯೇ ಇನ್ನೂ ಹಲವಾರು ಆಹಾರ ಬೆಳೆಗಳು, ಧಾನ್ಯದ ಬೆಳೆಗಳಲ್ಲಿ ಸ್ಥಳೀಯ ತಳಿಗಳಿಗೆ ನಿರೋಧಕ ಶಕ್ತಿ ಅಧಿಕ ಪ್ರಮಾಣದಲ್ಲಿ ಇರುತ್ತದೆ.
ಅಧಿಕ ಇಳುವರಿ ಕೊಡುವ ತಳಿಗಳ ಸಮಸ್ಯೆಗಳು:
- ಆಹಾರ ಬೆಳೆಗಳಲ್ಲಿ ನಾವೆಲ್ಲಾ ಹಲವಾರು ಹೈಬ್ರೀಡ್ ತಳಿಗಳನ್ನು ನೋಡಿರಬಹುದು.
- ಇವು ಕೆಲವು ವರ್ಷ ಉತ್ತಮ ಫಲಿತಾಂಶವನ್ನು ಕೊಡುತ್ತವೆ. ಹಾಗೆಯೇ ಕೆಲವು ಸಮಯದ ತರುವಾಯ ಏನೇನೇನೂ ಫಲಿತಾಂಶವನ್ನು ಕೊಡುವುದಿಲ್ಲ.
- ಇದಕ್ಕೆ ತಳಿ ಗುಣದ ಕ್ಷೀಣತೆ ಎಂದು ಕರೆಯುತ್ತಾರೆ.
- ಈ ಸಮಸ್ಯೆ ಸ್ಥಳೀಯ ತಳಿಯಲ್ಲಿ ತುಂಬಾ ಕಡಿಮೆ.
- ಸ್ಥಳೀಯ ತಳಿಗಳು ಭಾರೀ ಇಳುವರಿ ಕೊಡುವುದಿಲ್ಲವಾದರೂ ಕೊಡುವ ಇಳುವರಿ ಸರಾಸರಿಯಾಗಿ ವ್ಯತ್ಯಾಸವಾಗುವುದಿಲ್ಲ.
ಮುಂದಿನ ದಿನಗಳು ಹೇಗಿರಬಹುದು?
- ಕಳೆದ 10 ವರ್ಷದ ಹಿಂದಿನ ಹವಾಮಾನವನ್ನು ಗಮನಿಸಿದರೆ ಈಗ ತಾಪಮಾನ ವ್ಯತ್ಯಾಸವಾಗಿದೆ.
- ಮಳೆ, ಚಳಿ ಎಲ್ಲವೂ ವ್ಯತ್ಯಾಅಸವಾಗಿದೆ. ಇದು ಬದಲಾವಣೆ ಆಗುತ್ತಾ ಇರುತ್ತದೆ.
- ಮುಂದೆ ತಾಪಮಾನ ಹೆಚ್ಚಾಗಬಹುದು. ಮಳೆ ಹೆಚ್ಚಾಗಬಹುದು.
- ಬರಗಾಲವೂ ಬರಬಹುದು. ಇಂತಹ ಸನ್ನಿವೇಶಗಳಲ್ಲಿ ಸ್ಥಳೀಯ ತಳಿಗಳು ನಮ್ಮನ್ನು ನೇರವಾಗಿ ಪಾತಾಳಕ್ಕೆ ತಳ್ಳಲಾರವು.
- ಸ್ವಲ್ಪವಾದರೂ ಆಧರಿಸಬಲ್ಲವು. ಒಂದೊಂದು ವರ್ಷ ಸ್ಥಳೀಯ ತಳಿಗಳಿಗೆ ಕಾಯಿಲೆ ಕಸಾಲೆಗಳು ಬರಬಹುದು.
- ಆದರೆ ಅದು ಬೇಗ ಸಹಜಸ್ಥಿತಿಗೆ ಬರುತ್ತವೆ.
- ಆದರೆ ಹೈಬ್ರೀಡ್ ಅಥವಾ ಅದಿಕ ಇಳುವರಿಯ ತಳಿಗಳು ಒಮ್ಮೆ ವೀಕ್ ಆದರೆ ಅದರ ಕಥೆ ಮುಗಿಯಿತು ಎಂದೇ ಹೇಳಬಹುದು.
ಕೊನೆಗೂ ಉಳಿದುಕೊಳ್ಳುವುದು ಸ್ಥಳೀಯ ತಳಿಗಳೇ.ಈಗಾಗಲೇ ರೈತರಿಗೆ ಇದರ ವಾಸ್ತವಿಕತೆ ಮನವರಿಕೆಯಾಗಿದೆ. ಹಾಗಾಗಿ ರಿಸ್ಕ್ ಇಲ್ಲದೆ ಬೆಳೆ ಬೆಳೆಸುವ ಆಸಕ್ತರು ಸ್ಥಳೀಯ ತಳಿಗೆ ಆದ್ಯತೆ ನೀಡಿ.