ಅಡಿಕೆಯ ಮಿಡಿಗಳು ಯಾಕೆ ಉದುರುತ್ತವೆ?

ಬೇಸಿಗೆಯಲ್ಲಿ ಏನೇನೋ ಕಸರತ್ತು ಮಾಡಿ ಹೂಗೊಂಚಲಿನಲ್ಲಿ ಮಿಡಿಗಳನ್ನು ಉಳಿಸಿರುತ್ತೇವೆ. ಆದರೆ ಅದು ಒಂದೆರಡು ಮಳೆ ಬಂದ ತಕ್ಷಣ ಉದುರಲಾರಂಭಿಸುತ್ತದೆ. ಕೆಲವು ಮುಂಚೆಯೇ ಉದುರುತ್ತದೆ. ಇದಕ್ಕೆ ಹಲವು ಕಾರಣಗಳಿದ್ದು, ರೈತರು ತಮ್ಮಲ್ಲಿ ಯಾವ ಸ್ಥಿತಿ ಇದೆಯೋ ಅದಕ್ಕನುಗುಣವಾಗಿ ಉಪಚಾರ ಮಾಡಿ ಅದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.

 • ಮಳೆ ಒಂದು ಬಂದರೆ ಸಾಕು, ಅಡಿಕೆ ಮರದಲ್ಲಿ ಮಿಡಿಗಳು ಉದುರುತ್ತವೆ.
 • ಕೆಲವೊಮ್ಮೆ ಒಂದೆರಡು  ಸಂಖ್ಯೆಯಲ್ಲಿ ಉದುರಿದರೆ  ಕೆಲವೊಮ್ಮೆ ಬಹುತೇಕ ಉದುರುತ್ತದೆ.
 • ಅಂತಹಹ ಮಿಡಿಗಳಲ್ಲಿ ಆ ದಿನ ಉದುರಿದ ಮಿಡಿಯನ್ನು ಒಮ್ಮೆ ಸರಿಯಾಗಿ ಪರಾಂಬರಿಸಿ ನೋಡಿ.

ತೊಟ್ಟು ಭಾಗ ಹೇಗಿದೆ?

ಇದು ಕೀಟದ ತೊಂದರೆ
 • ಅಡಿಕೆಯ ಮಿಡಿಯ ತೊಟ್ಟಿನ ಭಾಗವನ್ನು  ಒಮ್ಮೆ ಹೊರ ಬದಿಯಿಂದ ಸರಿಯಾಗಿ ನೋಡಿ.
 • ಏನಾದರೂ ಅಲ್ಲಿ ಚುಚ್ಚಿದ ಕೆರೆದ ಗಾಯಗಳಿವೆಯೇ ಎಂದು ಪರಿಶೀಲಿಸಿರಿ.
 • ಕೆಲವೊಮ್ಮೆ ಇಲಿಗಳೂ ಮಿಡಿಯನ್ನು ಹಾಳು ಮಾಡುವುದಿರುತ್ತದೆ.
 • ಅಂತಹ ಸಂದರ್ಭದಲ್ಲಿ ಮಿಡಿ ಕಾಯಿಯ ತೊಟ್ಟಿನ ಭಾಗದಲ್ಲಿ ಗಾಯ ಇರುತ್ತದೆ, ಅಥವಾ ತೊಟ್ಟು ಕಳಚಿ ಬಿದ್ದಿರುತ್ತದೆ. ಎಳೆಯ  ಭಾಗದಲ್ಲಿ ಕೆರೆದ ಗಾಯ ಇರುತ್ತದೆ.

ತೊಟ್ಟು ತೆಗೆದು ನೋಡಿ:

ಇದು ಹೇಗಿದ್ದರೂ ಉದುರುವಂತದ್ದು, ಪೋಷಕಗಳ ವ್ಯತ್ಯಯದಿಂದ ಆಗುವುದು
 • ಉದುರಿದ ಮಿಡಿಯಲ್ಲಿ ಹೊರ ಭಾಗದಿಂದ ನೊಡುವಾಗ ಯಾವ ಗಾಯಗಳೂ ಇಲ್ಲದೆ  ಸಹಜವಾಗಿ ಕಂಡು ಬಂದರೆ ಅಂತಹ ಮಿಡಿಯನ್ನು ತಕ್ಷಣ ತೊಟ್ಟನ್ನು ತೆಗೆದು ನೋಡಿ.
 • ತೊಟ್ಟಿನ ಭಾಗದಲ್ಲಿ ಅದರ ಬುಡದಲ್ಲಿ ಕಪ್ಪಗಾಗಿದ್ದರೆ ಅದು ನೀರಿನ ಕೊರತೆ ಅನುಭವಿಸಿ , ತಕ್ಷಣ ಮಳೆ ಬಂದಾಗ ಉದುರುವ ಮಿಡಿಗಳು.
 • ಇದಕ್ಕೆ  ಯಾವ ಪರಿಹಾರವೂ ಇಲ್ಲ ಎಂದೇ ಹೇಳಬಹುದು.
 • ಕೆಲವು ಮಿಡಿಗಳಲ್ಲಿ ಇದು ಯಾವುದೇ ಚಿನ್ಹೆಗಳು ಇರುವುದಿಲ್ಲ.
 • ಅಂತಹ  ಮಿಡಿಯನ್ನು ಇನ್ನಷ್ಟು ಕೂಲಂಕುಶ ಪರೀಕ್ಷೆಗೆ ಒಡೆದು ನೋಡಿ.
 • ಒಡೆದಾಗ  ಒಳಗಡೆ ಸರಿಯಾಗಿ ತಿರುಳಿನ ಬೆಳೆವಣಿಗೆ ಆಗದೆ ಅಲ್ಲಿ ಅವಕಾಶ ಕಂಡೂ ಬಂದರೆ  ಅದು ಬೋರಾನ್ ಅಥವಾ ಇನ್ಯಾವುದೋ ಪೋಷಕ ಸರಿಯಾಗಿ ಲಭ್ಯವಾಗದೇ ಆದದ್ದಾಗಿರುತದೆ.
ಇದು ಹೇಗಿದ್ದರೂ ಉದುರುವಂತದ್ದು, ಪೋಷಕಗಳ ವ್ಯತ್ಯಯದಿಂದ ಆಗುವುದು
 • ಅದು ಮುಂದೆಯಾದರೂ ಉದುರುವಂತದೇ .
 • ಇದು ಇಡೀ ಗೊಂಚಲಿನಲ್ಲಿ 5-10 % ತನಕ ಉದುರಬಹುದು. ಇದಕ್ಕೂ ಯಾವುದೇ ಪರಿಹಾರ ಇಲ್ಲ.

ತೊಟ್ಟಿನ ಕವಚವನ್ನು  ತೆಗೆದು ನೋಡಿದಾಗ ಚುಚ್ಚಿದ ಚಿನ್ಹೆ ಇದ್ದರೆ, ಅಲ್ಲಿ ಕೀಟದ  ಹಾವಳಿಯನ್ನು ಸಂಶಯಪಡಬಹುದು.  ತೊಟ್ಟನ್ನು ತೆಗೆದು ಅದರ ಎಳೆಯ ಬಿಳಿ ಭಾಗವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ.

ಇದು ಕೀಟ ಸಮಸ್ಯೆ. ಕೆಂಪು ಮೈಟ್ ಬಂದಿರುವುದು
 • ಸರಿಯಾಗಿ ಏನೂ ಕಾಣದಿದ್ದರೆ ಸ್ವಲ್ಪ ಹಿಗ್ಗಿಸುವ ಮಸೂರದ ಸಹಾಯದಿಂದ ನೊಡಿ.
 • ಆಗ ಅದರಲ್ಲಿ ಚುಚ್ಚಿದ ಅಥವಾ ಕೆರೆದ ಗಾಯಗಳಿರುತ್ತವೆ.
 • ಅಂತಹ ಕಾಯಿಗಳಿಗೆ ಕೋರೀಡ್ ಬಗ್ ಹಾನಿ ಮಾಡಿದೆ ಎಂದರ್ಥ. ಇದರ ನಿಯಂತ್ರಣ ಸಾಧ್ಯ.

ಕೋರೀಡ್ ಬಗ್ ನಿಂದ ಆದ ಸಮಸ್ಯೆ

ತೊಟ್ಟು ತೆಗೆದು ನೋಡುವಾಗ ಅದರ ಬಿಳಿಯಾದ ಎಳೆ ಭಾಗದಲಿ ಕೆಂಪು  ಕಲೆಗಳು ಕಂಡರೆ ಅಥವಾ ಬೆರಳಿನಲ್ಲಿ ಉಜ್ಜುವಾಗ ಅಂಟಿದರೆ ಅಂತಹ ಮರದ  ಕಾಯಿಗಳಿಗೆ ಕೆಂಪು ನುಶಿಯ (ಮೈಟ್) ಬಾಧೆ ಉಂಟಾಗಿದೆ ಎಂದರ್ಥ. ಇದನ್ನೂ ಸಹ ನಿಯಂತ್ರಿಸಬಹುದು.
ಸಿಂಬಳದ ಹುಳು,(slug) ಮರಿಗಳೂ ಹಾನಿ ಮಾಡುತ್ತವೆ

ಪರಿಹಾರಗಳು:

 • ಅಡಿಕೆ ಮರಗಳಿಗೆ ಅತಿಯಾದ ನೀರಾವರಿ ಮಾಡಬೇಡಿ. ಪೊಟ್ಯಾಶಿಯಂ ಗೊಬ್ಬರವನ್ನು ಕಡಿಮೆ ಮಾಡಬೇಡಿ.
 • ಬೇಸಿಗೆ ಕಳೆದು ಮಳೆ ಬರುವ ಸಮಯದಲ್ಲಿ ಒಮ್ಮೆ ಅಡಿಕೆ ಮರದ ಮಿಡಿಕಾಯಿಗಳಿಗೆ ಡೈಮಿಥೋಯೇಟ್( ರೋಗರ್)  ಅಥವಾ ಡೈಕ್ಲೋರೋವಾಸ್ ( ಎಕಾಲೆಕ್ಸ್) ಸಿಂಪಡಿಸಿರಿ.
 • ಈ ಸಿಂಪರಣೆಯ ಜೊತೆಗೆ 1 ಲೀ . ನೀರಿಗೆ 2-3 ಗ್ರಾಂ ತನಕ ಪೊಟ್ಯಾಶಿಯಂ ಫೋಸ್ಫೋನೇಟ್  ಬೆರೆಸಿ.
 • ಕೀಟ ನಾಶಕವನ್ನು 1 ಲೀ. ನೀರಿಗೆ  2.5 ಮಿಲಿ. ಲೀ. ಗೆ ಮಿತಿಗೊಳಿಸಿ. ಕರಾಟೆ ಇತ್ಯಾದಿ ಪ್ರಭಲ ಕೀಟನಾಶಕ ಬಳಸಬೇಡಿ.

ರಾಸಾಯನಿಕ ಕೀಟನಾಶಕದ ಬಳಕೆ ಬಯಸದವರು ಒಂದು ಎರಡು ಪೂರ್ವ ಮುಂಗಾರು ಮಳೆ ಬಂದ ತಕ್ಷಣ ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಿರಿ.

 • ಅದು ಬೇಗ ಆಗುತ್ತದೆ ಎಂದು ಅಂಜಿಕೆ ಬೇಡ. ಇದರಲ್ಲಿ ಕ್ಯಾಲ್ಸಿಯಂ, ತಾಮ್ರ, ಮತ್ತು ಸಲ್ಫರ್  ಮೂರು ಪೊಷಕಾಂಶಗಳು ಇದ್ದು, ಇದು ಕೀಟ  ಮತ್ತು ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ.
 • ಅದರ  ಜೊತೆಗೆ ಬೇರೆ ಯಾವುದನ್ನು ಮಿಶ್ರಣ ಮಾಡಬೇಡಿ.

ಸಾಮಾನ್ಯವಾಗಿ ವಾತಾವರಣ ಬದಲಾವಣೆ ಆಗುವಾಗ ಕೀಟ ಭಾಧೆ ಉಂಟಾಗುವುದು ಇರುತ್ತದೆ. ಇದನ್ನು ಮೊದಲು ಗುರುತಿಸಿ  ಕೀಟನಾಶಕ ಸಿಂಪರಣೆ  ಮಾಡಿದರೆ ಉಳಿದ ಮರಗಳಿಗೆ ಪ್ರಸಾರವಾಗದು.

 

Leave a Reply

Your email address will not be published. Required fields are marked *

error: Content is protected !!