ಕೋಲ್ಜೇನು- ಜೇನು ತೆಗೆಯುವುದು ಸುಲಭ.

ಸಾಕುವ ಜೇನು ಎಂದರೆ ಅದು ತೊಡುವೆ ಅಥವಾ ಎಪಿಸ್ ಇಂಡಿಕಾ ಜೇನು ನೊಣ ಮಾತ್ರ. ಎಪಿಸ್ ಮೆಲ್ಲಿಫೆರಾ  ನಮ್ಮ ದೇಶದ ಮೂಲದ್ದಲ್ಲ. ಉಳಿದೆಲ್ಲಾ ಜೇನು ಪ್ರವರ್ಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು. ಆದರೆ ಕೋಲ್ಜೇನನ್ನು ಅಹಿಂಸಾತ್ಮಕವಾಗಿ ಹೆಚ್ಚು ಸಲ ಜೇನು ತೆಗೆಯಲು ಸಾಧ್ಯ. ಅದಕ್ಕೆ  ಅನುಭವಿಯೇ ಆಗಬೇಕೆಂದೇನೂ  ಇಲ್ಲ.

  • ಎಪಿಸ್ ಇಂಡಿಕಾ ಮತ್ತು ಎಪಿಸ್ ಮೆಲ್ಲಿಫೆರಾ ಎರಡು ವಿಧದ ಜೇನುನೊಣಗಳು  ಬಹು ಸಂಖ್ಯೆಯ  ಎರಿಗಳನ್ನು  ತಯಾರಿಸುವವು.
  •   ಉಳಿದೆಲ್ಲಾ ಜೇನುನೊಣಗಳು ಅಂದರೆ  ಕೋಲು ಜೇನು, ಹೆಜ್ಜೇನು ಇವು ಒಂದೇ ಎರಿಯನ್ನು  ತಯಾರಿಸುತ್ತವೆ.
  • ಇವುಗಳಲ್ಲೂ ಎರಿ ರಚನೆಗನುಗುಣವಾಗಿ ಬೇರೆ ಬೇರೆ ಪ್ರಕಾರಗಳಿವೆ.
  • ಕೋಲು ಜೇನಿನಲ್ಲಿ  ಮುಷ್ಟಿ ಕೋಲ್ಜೇನು ಎಂಬುದಿದೆ.
  • ಅದರ ಎರಿಯು  ಹೆಚ್ಚು ಅಗಲ ,ಉದ್ದ ಇರದೆ ಉಂಡೆ ತರಹ ಇರುತ್ತದೆ.

ಹೆಜ್ಜೇನಿನಲ್ಲಿ  ಎರಡು ಪ್ರಕಾರಗಳಿದ್ದು, ಒಂದು ಎತ್ತರದಲ್ಲಿ ಕುಳಿತುಕೊಳ್ಳುವ  ಸ್ವಭಾವದವು. ಅವು ಮರಮಟ್ಟು, ಅಥವಾ ಕಟ್ಟಡದ  ಕಿಟಕಿ, ಲಿಂಟನ್  ಭಾಗದಲ್ಲಿ ಎರಿ ಕಟ್ಟಿ ವಾಸವಾಗಿರುತ್ತವೆ. ಇದನ್ನು ಅನುಭವ ಇಲ್ಲದವರು ತೆಗೆಯುವುದು ಅಪಾಯ.

ಇನ್ನೊಂದು ಹೆಜ್ಜೇನು  ಬಹಳ ಎತ್ತರದಲ್ಲಿ ಕುಳಿತುಕೊಳ್ಳದೆ, ಸುಮಾರು 10 ಅಡಿ ಎತ್ತರದಲ್ಲೇ ವಾಸಿಸುತ್ತವೆ.  ಇದನ್ನು ಸಹ ಹೆಜ್ಜೇನು ಎನ್ನುತ್ತಾರೆ. ಕರಾವಳಿಯ ತುಳು ಭಾಷೆಯಲ್ಲಿ ಇದನ್ನು “ ಪಜೆ ಮಡಪ್ಪೇಲ”  ಎನ್ನುತ್ತಾರೆ.

  • ಯಾಕೆ ಹಾಗೆನ್ನುತ್ತಾರೆ  ಗೊತ್ತಿಲ್ಲ. ಈ ಎಲ್ಲಾ ಜೇನನ್ನೂ ತೆಗೆಯಲಿಕ್ಕಾಗುತ್ತದೆ.
  • ಪ್ರಯತ್ನ ಪಟ್ಟರೆ ಅಹಿಂಸಾತ್ಮಕವಾಗಿ  ತೆಗೆಯಬಹುದು.
  • ಕೋಲು ಜೇನನ್ನು ಮಾತ್ರ ಯಾವುದೇ  ಅಂಜಿಕೆ ಇಲ್ಲದೆ ಅಹಿಂಸಾತ್ಮಕವಾಗಿ ತೆಗೆಯುವುದು ಸುಲಭ.

ಜೇನು ಎಲ್ಲಿರುತ್ತದೆ?


ಮೇಲ್ಭಾಗದಲ್ಲಿ ಬಿಳಿಯಾಗಿ ಕಾಣಿಸುವುದು ಜೇನು
  • ಕೋಲು ಜೇನು ಎಂಬ ಹೆಸರು ಬಂದಿರುವುದೇ ಅದು ಕೋಲಿನ ಆಸರೆಯಲ್ಲಿ ಗೂಡುಕಟ್ಟುವುದಕ್ಕೆ.
  • ಇದು ಕೋಲನ್ನು ಬಿಟ್ಟು ಬೇರೆಡೆ ವಾಸ ಮಾಡುವುದೇ ಇಲ್ಲ.
  • ಹಾಗೆಂದು ಅಪವಾದ ಇಲ್ಲದಿಲ್ಲ. ಕೆಲವೊಮ್ಮೆ ಕಲ್ಲಿನ  ಬದಿ, ಬ್ಯಾರಲ್ ಒಳಗೆ ಸಹ ವಾಸ ಮಾಡುತ್ತದೆ.
  • ಆದರೆ ಅದು ಸುಮಾರಾಗಿ ಅವುಗಳಿಗೆ ಕೋಲಿನ ತರಹ  ಅನುಭವ ಕೊಡುವ  ಜಾಗ ಆಗಬೇಕು ಅಷ್ಟೇ.
  • ಕೋಲಿನಲ್ಲಿ ಅವು ಮೊದಲಾಗಿ ಬಂದು ಕುಳಿತು ಅದಕ್ಕೆ ತಮ್ಮ ಶರೀರದ ಮೇಣವನ್ನು  ಅಂಟಿಸಿ  ಕೆಳಮುಖವಾಗಿ ಎರಿಯನ್ನು ತಯಾರಿಸಿಕೊಳ್ಳುತ್ತವೆ.
  •   ಕೋಲಿನ ಕೆಳ ಭಾಗದಲ್ಲಿ ಎರಿ ದೊಡ್ಡದಾಗುತ್ತಾ ಬಂದಂತೆ  ಕೋಲಿನ ಮೇಲು ಭಾಗದಲ್ಲೂ ಸ್ವಲ್ಪ ಮೇಣವನ್ನು ಅಂಟಿಸಿ ಎರಿಯನ್ನು ತಯಾರಿಸುತ್ತವೆ.

ಕೋಲಿನ ಕೆಳಭಾಗದಲ್ಲಿ  ಇಳಿಯಲ್ಪಟ್ಟ ಎರಿಯಲ್ಲಿ 80% -90%  ತನಕ ಮೊಟ್ಟೆ ಮತ್ತು ಪರಾಗಗಳು ಇರುತ್ತವೆ. ಕೋಲಿನ ಹತ್ತಿರದ ಎರಿಯಲ್ಲಿ ಮತ್ತು ಕೋಲಿನ  ಮೇಲ್ಭಾಗದಲ್ಲಿ  ಉಬ್ಬಿದ ತರಹದ ಎರಿ ಇರುತ್ತದೆ. ಈ ಎರಿಯಲ್ಲಿ ಪೂರ್ತಿಯಾಗಿ ಜೇನೇ ತುಂಬಿರುತ್ತದೆ.

ಜೇನು ತೆಗೆಯುವುದು ಹೇಗೆ?

  • ಕೋಲಿನ ಮೇಲ್ಪ್ಭಾಗದಲ್ಲಿರುವ ಜೇನನ್ನು ವರ್ಷದಲ್ಲಿ ನಾಲ್ಕು ಸಲಕ್ಕಿಂತ ಹೆಚ್ಚು ಸಲ ತೆಗೆಯಬಹುದು.
  •  ಇದು ಅತ್ಯಂತ  ಸರಳ ಮತ್ತು ಸುಲಭದ ಜೇನು ತೆಗೆಯುವ ವಿಧಾನ.
  • ಕೋಲಿನ ಮೇಲು ಭಾಗಕ್ಕೆ ಹೊಗೆ ತಿದಿ ಅಥವಾ ಇನ್ಯಾವುದಾದರೂ ಹೊಗೆ ಮಾತ್ರ  ಬರಬಹುದಾದ ವ್ಯವಸ್ಥೆಗಳ ಮೂಲಕ ಸಣ್ಣಗೆ ಹೊಗೆಯನ್ನು  ಹಾಕಿ.
  • ಅದು ಸುಮಾರು 1 ಮೀ. ದೂರದಿಂದ. ಒಂದು ಬಾರಿ ಹೊಗೆ ಹಾಕಿದ ನಂತರ  ಸಲೀಸಾಗಿ ಹತ್ತಿರ ಹೋಗಬಹುದು.
  • ಯಾವುದೇ ರಕ್ಷಣಾ ಉಡುಗೆ ಬೇಕಾಗಿಲ್ಲ. ಮತ್ತೊಮ್ಮೆ ಹೊಗೆ ಹಾಕಿ.
  • ಕೈಯಲ್ಲಿ ನೊಣಗಳನ್ನು ಸರಿಸಿರಿ. ಬೇಕಾದರೆ  ಬಾಯಿಯ ಮೂಲಕ ಊದಲೂ ಬಹುದು. (ಇದನ್ನು ಈಗ ಮಾಡಬೇಡಿ).
ಜೇನು ತೆಗೆದ ನಂತರ ಹಾಗೆ ಉಳಿಯುವ ಎರಿ
  •  ನೊಣಗಳು ಕೆಳಭಾಗಕ್ಕೆ ಚಲಿಸುತ್ತವೆ. ಸಾಧ್ಯವಾದಷ್ಟೂ ಕೋಲಿನ ಕೆಳ ಭಾಗಕ್ಕೆ ಹೋಗುವಂತೆ ಮಾಡಿ.
  • ನಂತರ ಒಂದು ಹರಿತವಾದ ಚಾಕುವನ್ನು  ತೆಗೆದು ಕೊಳ್ಳಿ.
  • ಒಂದು ಬಟ್ಟಲನ್ನು ಸಿದ್ದವಿಟ್ಟುಕೊಂಡು, ಕೋಲಿನ ಮೇಲು ಭಾಗದ ಮೂಲಕ ಕೋಲಿಗೆ ತಾಗದಂತೆ ಎರಿಯನ್ನು ಕತ್ತರಿಸಿ.
  • ಒಂದು ಕೈಯಲ್ಲಿ ಚೂರಿ ಇರಲಿ ಮತ್ತೊಂದು ಕೈಯಲ್ಲಿ ಬಟ್ಟಲು ಇರಲಿ.
  • ಬಟ್ಟಲನ್ನು ಎರಿಗೆ ತಾಗಿಸಿ ಹಿಡುದುಕೊಳ್ಳಿ. ನಿಧಾನವಾಗಿ ಕತ್ತರಿಸಿದ ಭಾಗವನ್ನು ಬಟ್ಟಲಿನತ್ತ ದೂಡಿ.
  • ಅದು ಬಟ್ಟಲಿಗೆ ಬೀಳುತ್ತದೆ. ಒಂದೆರಡು ನೊಣ ಜೊತೆಗೆ ಬರಬಹುದು.
  • ಅದನ್ನು ಚೂರಿಯ ಮೂಲಕ  ತೆಗೆದು ಹೊರ ಹಾಕಿದರೆ ಮತ್ತೆ ಅಲ್ಲಿಗೆ ಹೋಗುತ್ತವೆ.
  •  ಉಳಿದ ಜೇನು ಅಲ್ಲೇ ಇರಲಿ. ಅದು ಅವುಗಳ ಹಕ್ಕಿನ ಜೇನು ಎಂದು  ಬಿಟ್ಟು ಬಿಡಿ.

ಹೀಗೇ ಮಾಡಿದರೆ ಪುಷ್ಪದ ಲಭ್ಯತೆಗೆ ಅನುಗುಣವಾಗಿ ಮತ್ತೆ 15 ದಿನಕ್ಕೆ ಕೋಲಿನ ಮೇಲೆ ಹಾಗೆಯೇ ಉಬ್ಬುತ್ತದೆ. ಅದನ್ನೂ ಹಾಗೆಯೇ ತೆಗೆಯಿರಿ.

  • ಮಾರ್ಚು ಎರಡನೇ ವಾರದಿಂದ ಮೇ-ಕೊನೇ ತನಕ 5-6 ಸಲ ಜೇನನ್ನು ತೆಗೆಯಬಹುದು.

ಈ ಜೇನನ್ನು ಯಂತ್ರದ ಮೂಲಕ ಹಿಂಡಲಿಕ್ಕೆ ಆಗುವುದಿಲ್ಲ. ಇದನ್ನು ಒಂದು  ಸೋಸುವ ಸಾಧನಕ್ಕೆ ಹಾಕಿ ಒಂದು ಸೌಟಿನಲ್ಲಿ ಚೆನ್ನಾಗಿ ಒತ್ತಿದರೆ ತಳ ಭಾಗದಲ್ಲಿಟ್ಟ ಪಾತ್ರೆಗೆ ಜೇನು ಬೀಳುತ್ತದೆ. ಇದು ಪರಿಶುದ್ಧ ಜೇನಾಗಿರುತ್ತದೆ. ತೊಡುವೆ ಜೇನಿಗಿಂತ ಹೆಚ್ಚು ಸತ್ವ ಉಳ್ಳ ಜೇನು ಇದು.

  • ಹೀಗೆ ಮಾಡುವುದರಿಂದ ಜೇನು ಕುಟುಂಬ ಅಲ್ಲೇ ಇರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಅಧಿಕ ಮಳೆಯಾಗುವಲ್ಲಿ  ಮಳೆಗಾಲದಲ್ಲಿ ಓಡಬಹುದು.
  • ಅದಕ್ಕೆ ಮೇಲು ಭಾಗದಲ್ಲಿ ನೀರು ಬೀಳದ ವ್ಯವಸ್ಥೆ ಇದ್ದರೆ ಅದು ಉಳಿಯಲೂ ಬಹುದು.
  • ಸಾಮಾನ್ಯವಾಗಿ ಇವು ದೂರ ಹಾರದೆ ನಿಮ್ಮ ಸುತ್ತ ಮುತ್ತ ಇರುವ ಗಿಡ ಬಳ್ಳಿಗಳ ಬಿದಿರು ಮೆಳೆಗಳ ಕೋಲಿನಲ್ಲಿ ಆಶ್ರಯ ಪಡೆದಿರುತ್ತದೆ.
ಬೇರೆ ಕಡೆಯಿಂದ ತಂದು ಇಟ್ಟ ಕುಟುಂಬ, ಹಕ್ಕಿಗಳಿಂದ ತೊಂದರೆ ಆಗದಂತೆ ಅರ್ಧ ಭಾಗಕ್ಕೆ ಚೀಲವನ್ನು ಹಾಕಬಹುದು.
  • ಕೆಳಗೆ ಈ ಕುಟುಂಬ  ಇದ್ದರೆ ರಾತ್ರೆ ಹೊತ್ತು ಕೋಲನ್ನು ತುಂಡು ಮಾಡಿ ತಂದು ಮನೆದ  ನೆರಳಿನ ಗಿಡದಲ್ಲಿ ಇಡಬಹುದು.

ಕೋಲು ಜೇನು ಕಡಿಯುತ್ತದೆ. ಹೊಗೆ ಹಾಕದೆ ಹತ್ತಿರ ಹೋಗಿ ಕೈ ಹಾಕಿದರೆ ತೊಡುವೆ ಜೇನಿಗಿಂತ ರಭಸವಾಗಿ ಹತ್ತಾರು ನೊಣಗಳು ಕಚ್ಚುತ್ತವೆ. ಹೊಗೆ ತುಂಬಾ ಕಡಿಮೆ ಸಾಕು.ಮೂದು ಕಡ್ಡಿಯೂ ಆಗುತ್ತದೆ. ಈ ನೊಣದ ಜೇನು ತೆಗೆಯುವ ಅಲೆಮಾರಿಗಳು ಇರುವುದನ್ನು ಕೆಲವು ವೀಡಿಯೋಗಳಲ್ಲಿ  ಕಾಣಬಹುದು.

 

Leave a Reply

Your email address will not be published. Required fields are marked *

error: Content is protected !!