ನಿಮಗೆ ಬೇರೆಕಡೆ ಉತ್ತಮ ಹಣ್ಣಿನ – ಹೂವಿನ ಸಸಿ ನೋಡಿ, ಅದನ್ನು ನಿಮ್ಮಲ್ಲೂ ಬೆಳೆಸಬೇಕೆಂಬ ಆಸೆ ಉಂಟಾದರೆ, ಒಂದು ಅದೇ ಜಾತಿಯ ಬೇರು ಗಿಡ ಇದ್ದರೆ ಸಾಕು. ಅಲ್ಲಿಂದ ಎಲೆಗಳು ಇರುವ ಒಂದು ಸಣ್ಣ ಕಾಂಡದ ತುಂಡು ತಂದು ಅದರಿಂದ ಸಸಿ ಮಾಡಿಕೊಳ್ಳಬಹುದು. ಇದು ಬಡ್ಡಿಂಗ್ ವಿಧಾನದಲ್ಲಿ.
- ಪ್ರತೀ ಡೈಕೋಟ್ ( ದ್ವಿದಳ) ಸಸ್ಯದ ಎಲೆಯ ಕಂಕುಳಲ್ಲಿ ಒಂದು ಮೊಳಕೆ ಬರುವ ಜೀವ ಕೋಶ ಇರುತ್ತವೆ.
- ಇದು ಅನುಕೂಲ ಕೂಡಿ ಬಂದಾಗ ಅಲ್ಲೇ ಮೊಳೆತು ಹೊಸ ಚಿಗುರು ರೂಪದಲ್ಲಿ ಬೆಳೆಯುತ್ತದೆ.
- ಇದನ್ನು ಬಳಸಿ ಕಣ್ಣು ಕಸಿ ಮಾಡಲಾಗುತ್ತದೆ.
ಬಡ್ಡಿಂಗ್ ಏನು:
- ಕಣ್ಣು ಕಸಿ ಎಂದರೆ ಒಂದು ಆಯ್ಕೆ ಮಾಡಿದ ಉತ್ತಮ ಗುಣದ ಸಸ್ಯದ ಎಲೆ ತೊಟ್ಟಿನ ಭಾಗದ ತೊಗಟೆಯನ್ನು ತೆಗೆದು ಮತ್ತೊಂದು ಬೇರು ಇರುವ ಸಸ್ಯದ ಕಾಂಡದಲ್ಲಿ ಅಷ್ಟೇ ತೊಗಟೆಯನ್ನು ತೆಗೆದು ಆ ಭಾಗಕ್ಕೆ ಇಟ್ಟು,ಕಟ್ಟಿ ರಕ್ಷಿಸುವುದು.
- ಅದು ಹೊರ ವಾತಾವರಣದ ಸೋಂಕು ಇಲ್ಲದೆ ಐಸಿಯು ನಲ್ಲಿದ್ದಂತೆ ರಕ್ಷಿಸಲ್ಪಡುತ್ತದೆ.
- ಸುಮಾರು ಒಂದು ತಿಂಗಳ ಒಳಗೆ ಆಶ್ರಯದಾತ ಸಸ್ಯವು ಆ ತೊಗಟೆಯನ್ನು ತನ್ನ ತೊಗಟೆಗೆ ಸೇರಿಸಿಕೊಳ್ಳುತ್ತದೆ.
- ಆ ನಂತರ ಅದಕ್ಕೆ ಐಸಿಯು ನಿಂದ ಮುಕ್ತಿ ಸಿಗುತ್ತದೆ.
- ಅಂಟಿಕೊಂಡ ನಂತರ ಆ ಭಾಗದಲ್ಲಿ ಕೆಲವು ಪ್ರೇರಣೆಗಳಿಂದ ಹೊಸ ಚಿಗುರು ಬರುತ್ತದೆ.
- ಆ ಚಿಗುರು ನಾವು ಯಾವ ಮೂಲದ ಸಸ್ಯದ ತೊಗಟೆಯನ್ನು ಅಲ್ಲಿ ಇಟ್ಟು ಕಟ್ಟಿದ್ದೇವೆಯೋ ಆದೇ ಮೂಲದ ಗುಣವನ್ನು ಪಡೆದಿರುತ್ತದೆ.
- ಇಲ್ಲಿ ಆಯಾ ಜಾತಿಯ ಸಸ್ಯಗಳನ್ನು ಮಾತ್ರ ಈ ರೀತಿ ಕಸಿ ಮಾಡಲು ಸಾಧ್ಯವಾಗುತ್ತದೆ.
ಕಣ್ಣು ಕಸಿ ಹೊಸತಲ್ಲ:
- ಚೀನಾ ಮುಂತಾದ ಹೊರ ದೇಶಗಳಲ್ಲಿ ನೂರಾರು ವರ್ಷಗಳಿಂದಲೂ ಸಸ್ಯಾಭಿವೃದ್ದಿಗೆ ಈ ವಿಧಾನವನ್ನು ಅನುಸರಿಸುತ್ತಿದ್ದರು.
- ನಮ್ಮಲ್ಲಿ ಗುಲಾಬಿ ಸಸ್ಯಗಳನ್ನು ಅಧಿಕ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸುವರೇ ಇದನ್ನು 50 ವರ್ಷಗಳ ಹಿಂದಿನಿಂದಲೂ ಅನುಸರಿಸಲಾಗುತ್ತಿತ್ತು.
- ಕ್ರಮೇಣ ಇದು ರಬ್ಬರ್ ಸಸ್ಯಗಳ ಸಸ್ಯೋತ್ಪಾದನೆಗೆ ಕೇರಳದಲ್ಲಿ ಚಾಲನೆಗೆ ಬಂತು.
- ಈಗ ಎಲ್ಲಾ ಕಡೆಗಳಲ್ಲೂ ಅಧಿಕ ಸಂಖ್ಯೆಯ ಸಸ್ಯಾಭಿವೃದ್ದಿಗೆ ಕಣ್ಣು ಕಸಿಯ ವಿಧಾನವನ್ನೇ ಅನುಸರಿಸಲಾಗುತ್ತದೆ.
- ಬಹುತೇಕ ಎಲ್ಲಾ ತರಹದ ಸಸ್ಯಗಳ ಸಸ್ಯೋತ್ಪಾದನೆ ಈ ವಿಧಾನದಲ್ಲಿ ಮಾಡಬಹುದು.
ಆಯ್ಕೆ ಮಾಡುವ ಅಧಿಕ ಇಳುವರಿಯ ಸಸ್ಯ ಮೂಲ ಅತೀ ಕಡಿಮೆ ಪ್ರಮಾಣದಲ್ಲಿದ್ದರೂ, ಎಷ್ಟು ಎಲೆ ಇರುತ್ತದೆಯೋ ಅಷ್ಟೂ ಎಲೆಗಳ ಮೂಲಕ ಒಂದೊಂದು ಸಸ್ಯವನ್ನು ಉತ್ಪಾದಿಸಬಹುದು.
ಕಸಿ ಕ್ರಮ:
- ಮೊದಲಾಗಿ ಮೂಲ ಬೇರು ಉಳ್ಳ ಅದೇ ಜಾತಿಯ ಸಸ್ಯಮೂಲವನ್ನು ಬೀಜ ಬಿತ್ತಿ ಸಿದ್ದಪಡಿಸಿಕೊಳ್ಳಬೇಕು.
- ಇಲ್ಲಿ ಕೆಲವು ವಿಶೇಷ ಗುಣ ಪಡೆದ ಮೂಲ ಸಸ್ಯಗಳನ್ನು ಬಳಸುವ ಕ್ರಮ ಇರುತ್ತದೆ. ಅಂದರೆ ಕಿತ್ತಳೆ, ಮುಸಂಬಿ ಗಿಡಕ್ಕೆ ರೋಗ ನಿರೋಧಕಶಕ್ತಿ ಉಳ್ಳ ರಂಗಾಪುರಿ ಲಿಂಬೆ ಸಸ್ಯವನ್ನು ಬಳಕೆ ಮಾಡುತ್ತಾರೆ.
- ಬೇರು ಮೂಲದ ಸಸಿಯನ್ನು ಬೀಜ ಬಿತ್ತಿ ಬೆಳೆಸಿ ಅದಕ್ಕೆ ಕನಿಷ್ಟ 6 ತಿಂಗಳು ಪ್ರಾಯ ಆಗಿರಬೇಕು.
- ಅದರಲ್ಲಿ ಕಿರು ಬೆರಳಿನಷ್ಟಾದರೂ ಕಾಂಡ ಬೆಳೆದಿರಬೇಕು.
- ಬೆಳವಣಿಗೆ ಹೆಚ್ಚಾದರೆ ಎನೂ ತೊಂದರೆ ಇರುವುದಿಲ್ಲ.
- ಇದರಲ್ಲಿ ಗ್ರೀನ್ ಬಡ್ಡಿಂಗ್ ಅಂದರೆ ಕಾಂಡ ಹಸಿರು ಇರುವಾಗಲೇ ಮಾಡುವ ವಿಧಾನ
- ಕಾಂಡ ಸ್ವಲ್ಪ ಬಲಿತ ನಂತರ ಮಾಡುವ ವಿಧಾನ ಕ್ಕೆ ಯಂಗ್ ಬಡ್ ಎಂದು ಕರೆಯುತ್ತಾರೆ.
- ಕಾಂಡದ ತೊಗಟೆಯ ಬಣ್ಣ ಬೂದು ಬಣ್ಣಕ್ಕೆ ತಿರುಗಿದ ನಂತರ ಮಾಡುವ ಕಸಿಗೆ ಬ್ರೌನ್ ಬಡ್ ಎಂದು ಕರೆಯುತ್ತಾರೆ.
- ಬೀಜ ಹಾಕಿ ಸಸಿ ಮಾಡಿಟ್ಟುಕೊಂಡ ಸಸ್ಯದ ಕಾಂಡದಲ್ಲಿ ಬುಡದಿಂದ ಸುಮಾರು 1/2 ಅಡಿ ಎತ್ತರದಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ತೊಗಟೆಯನ್ನು ತೆಗೆಯಿರಿ.
- ನೀವು ತಂದ ಗೆಲ್ಲಿನ ಎಲೆ ಬಾಗದ ತೊಟ್ಟು ಸಮೇತ ಸಿಪ್ಪೆಯನ್ನು ತೆಗೆಯಿರಿ
- ಅದನ್ನು ಮೊದಲೇ ಗಚ್ಚು ಹಾಕಿ ಸಿಪ್ಪೆ ತೆಗೆದ ಭಾಗಕ್ಕೆ ಇಟ್ಟು ಅದನ್ನು ಒಂದು ಪ್ಲಾಸ್ಟಿಕ್ ಕಸಿ ಪಟಿಯಲ್ಲಿ ಗಾಳಿ ಸೋಂಕದಂತೆ ಕಟ್ಟಿ.
- ಸಸಿಯನ್ನು ನೆರಳಿನಲ್ಲಿ ಇಡಿ. ಬೇರು ಸಸಿಗೆ ನೀರು ಅವಷ್ಯವಿದ್ದಷ್ಟು ಕೊಡುತ್ತಿರಿ.
- ಬೇರು ಸಸ್ಯಕ್ಕೆ ಗಚ್ಚು ಹಾಕಿ ಸಿಪ್ಪೆ ತೆಗೆಯುವಾಗ ಅಂಟಿಸುವ ತೊಗಟೆಗಿಂತ ಸ್ವಲ್ಪ ಅಗಲದಲ್ಲಿ ಸಿಪ್ಪೆಯನ್ನು ತೆಗೆಯಿರಿ.
- ಸುಮಾರು 15 ದಿನ ಕಳೆದಾಗ ನೀವು ಅಂಟಿಸಿದ ಕಣ್ಣು ತೇಪೆ ಸ್ವಲ್ಪ ಬೆಳೆದು ಹೆಚ್ಚು ಅಗಲಕ್ಕೆ ಸಿಪ್ಪೆ ತೆಗೆದ ಭಾಗವನ್ನು ತುಂಬುತ್ತದೆ.
- ಸರಿಯಾಗಿ 1 ತಿಂಗಳು ಕಳೆದಾಗ ಬೇರು ಸಸಿಯ ಸಿಪ್ಪೆ ತೆಗೆದ ಭಾಗ ಪೂರ್ತಿಯಾಗಿ ಕೂಡಿಕೊಂಡಿರುತ್ತದೆ.
- ಆ ಸಮಯದಲ್ಲಿ ಅಂಟಿಸಿದ ಎಲೆ ತೊಟ್ಟಿನ ಭಾಗ ಸ್ವಲ್ಪ ಉಬ್ಬಿರುತ್ತದೆ. ಅಲ್ಲಿ ಹರಿತವಾದ ಬ್ಲೇಡಿನಿಂದ ಅದನ್ನು ಸ್ವಲ್ಪ ಬಿಡಿಸಿರಿ.
ಬೇರು ಸಸಿಯ ತುದಿ ಭಾಗವನ್ನು ತುಂಡು ಮಾಡಿ. ಆಗ ಕಾಂಡದಲ್ಲಿ ಆಹಾರ ಸಂಗ್ರಹ ಉಂಟಾಗಿ ಅಂಟಿಸಿದ ಕಣ್ಣು ಭಾಗಕ್ಕೆ ಹೆಚ್ಚು ಆಹಾರ ದೊರೆತು ಅದು ಚಿಗುರಿಕೊಳ್ಳುತ್ತದೆ. ಇದನ್ನು ಸ್ವಲ್ಪ ಸಮಯ ಬೆಳೆಸಿ ನಂತರ ನಾಟಿ ಮಾಡಬಹುದು, ಬೇರು ಸಸ್ಯದ ಯಾವುದೇ ಭಾಗದಲ್ಲಿ ಬರುವ ಚಿಗುರುಗಳನ್ನು ಉಳಿಸದೆ ತೆಗೆಯುತ್ತಿರಬೇಕು.
ಯಾವ ಸಸ್ಯಗಳಿಗೆ ಕಸಿ ಸಾಧ್ಯ:
- ಹಲಸು – ಮಾವು, ಇನ್ನಿತರ ಹಣ್ಣಿನ ಗಿಡಗಳು, ಹೂವಿನ ಗಿಡಗಳು ಸೇಬು, ಮುಂತಾದ ಲಿಂಗ ವೆತ್ಯಾಸ ಮತ್ತು ಮಿಶ್ರ ಪರಾಗಸ್ಪರ್ಶದ ಮೂಲಕ ತಳಿಗುಣ ವ್ಯತ್ಯಾಸ ಆಗುವ ಎಲ್ಲಾ ದ್ವಿದಳ ಜಾತಿಯ ಸಸ್ಯಗಳಿಗೆ ಈ ರೀತಿಯ ಕಸಿ ಮಾಡಬಹುದು.
- ಇದರ ಅನುಕೂಲ ಎಂದರೆ ಒಂದು ಕಸಿ ಯಶಸ್ವಿಯಾಗದಿದ್ದರೂ ಅದೇ ಕಾಂಡಕ್ಕೆ ಬೇರೆ ಕಸಿ ಮಾಡಬಹುದು.
- ಕಡಿಮೆ ಪ್ರಮಾಣದಲ್ಲಿ ಸಸ್ಯ ಮೂಲ ಇದ್ದರೂ ಅಧಿಕ ಸಸಿ ಮಾಡಬಹುದು.
ಇದು ಮಾಮೂಲು ಸಸ್ಯದಂತೇ ಬೆಳೆಯುತ್ತದೆ. ಇದು ನೈಜ ಗುಣದ ಸಯೋತ್ಪಾದನೆ ಎಂದು ಕರೆಯಲ್ಪಡುತ್ತದೆ.