ನೀವೇ ಮಾಡಬಹುದು- ಕರಿಮೆಣಸಿನ ಗಿಡ.

ಚಳಿಗಾಲ ಕಳೆದು ಬೇಸಿಗೆ ಬಂತೆಂದರೆ ಸಾಕು, ಸಸ್ಯಾಭಿವೃದ್ದಿಗೆ ಇದು ಸೂಕ್ತ ಕಾಲ. ಯಾವುದೇ ಸಸಿಯ ಸಸ್ಯಾಭಿವೃದ್ದಿಗೆ ಚಳಿಗಾಲ ಸೂಕ್ತವಲ್ಲ. ಈ ಸಮಯದಲ್ಲಿ ವಾತಾವರಣದಲ್ಲಿ ಆರ್ಧ್ರತೆ  ಹೆಚ್ಚು ಇದ್ದು ಬೇರು ಬರಲು, ಕಸಿ ಕೂಡಲು ಇದು ಸೂಕ್ತ ಕಾಲಾವಧಿ.ಈ ಸಮಯದಲ್ಲಿ  ಮಾಡಿದ ಸಸ್ಯಾಭಿವೃದ್ದಿಯಲ್ಲಿ 90% ಯಾಶಸ್ಸು ಸಾಧ್ಯ…

ಯಾವ ಬಳ್ಳಿ ಸೂಕ್ತ:

 • ನೆಲದಲ್ಲಿ ಹರಿದಾಡುವ ಹಬ್ಬು ಬಳ್ಳಿಗಳನ್ನು ಇದಕ್ಕಾಗಿ ಬಳಕೆ ಮಾಡಬೇಕು.
 • ತೀರಾ ಎಳೆಯ ಬಳ್ಳಿಗಳು ಸೂಕ್ತವಲ್ಲ. ಸಾಧಾರಣ ಬೆಳೆದ ಬಳ್ಳಿಗಳನ್ನೇ ಆಯ್ಕೆ ಮಾಡಬೇಕು.
 • ಹಬ್ಬು ಬಳ್ಳಿಗಳನ್ನು ಮೂಲ ಸ್ಥಳದಿಂದ ಆಯ್ಕೆ ಮಾಡುವಾಗ ಆ ಮೂಲ ಗಿಡಕ್ಕೆ ಆರೋಗ್ಯ ಹೇಗಿದೆ ಎಂಬುದನ್ನು ಗಮನಿಸಬೇಕು.
 • ಎಲೆ ಹಳದಿಯಾಗಿದ್ದರೆ, ಎಲೆಗಳಲ್ಲಿ ರೋಗ ಬಂದ ಚಿನ್ಹೆಗಳು ಏನಾದರೂ ಇದ್ದರೆ, ಅಥವಾ ರೋಗ ಬಾಧಿಸಿ ಅದನ್ನು ಸೂಕ್ತ  ಉಪಚಾರ ಮಾಡಿ ಸುಧಾರಿಸುವಂತೆ ಮಾಡಿದ್ದರೆ, ಆ ಬಳ್ಳಿಯಲ್ಲಿ ಬೆಳೆದ ಹಬ್ಬು ಬಳ್ಳಿಗಳನ್ನು ಸಸ್ಯಾಭಿವೃದ್ದಿಗೆ ಆಯ್ಕೆ ಮಾಡಬೇಡಿ.
 • ರೋಗಕಾರಕ ಶಿಲೀಂದ್ರಗಳು ಆ ಬಳ್ಳಿಯಲ್ಲಿ ಇರುವ ಸಾಧ್ಯತೆ ಇರುತ್ತದೆ.

ಬುಡದಿಂದ ತುದಿ ತನಕ ಎಲೆಗಳು ಹಸುರಾಗಿದ್ದು, ಯಾವುದೇ ರೋಗ ಚಿನ್ಹೆ ಇಲ್ಲದ ಮೂಲ ಬಳ್ಳಿಯ ಬುಡದಲ್ಲಿ ಬರುವ ಹಬ್ಬು ಬಳ್ಳಿಗಳನ್ನು ಮಾತ್ರವೇ ಆಯ್ಕೆ ಮಾಡಬೇಕು.

ತಕ್ಷಣ ಹೀಗೆ ಮಾಡಿ: 

 • ಬಳ್ಳಿಯನ್ನು ಬುಡದಿಂದ ಕತ್ತರಿಸಿ ತೆಗೆದು ತಕ್ಷಣವೇ ಎಲೆಗಳನ್ನು ತೆಗೆಯಬೇಕು.
 • ಎಲ್ಲಾ ಬಳ್ಳಿ ತೆಗೆದ ಮೇಲೆ ಎಲೆ ತೆಗೆಯುವುದು ಸೂಕ್ತವಲ್ಲ. ಪ್ರತೀ ಬಳ್ಳಿ ತೆಗೆದು ಅದರ ಎಲೆಗಳನ್ನೆಲ್ಲಾ ತೆಗೆದ ನಂತರ ಇನ್ನೊಂದು ಬಳ್ಳಿಯನ್ನು  ಕತ್ತರಿಸಿರಿ.
 • ತಕ್ಷಣ ಅದನ್ನು  ಬೇಕಾದಂತೆ ತುಂಡು ಮಾಡಿ ಒಂದು ಒದ್ದೆ ಸೆಣಬಿನ ಚೀಲದಲ್ಲಿ ಸಂಗ್ರಹಿಸಿದರೆ ಒಳ್ಳೆಯದು.
 • ಇಲ್ಲವೇ ಎಲೆ ತೆಗೆದ ಬಳ್ಳಿ ಪೂರ್ತಿ ಮುಚ್ಚುವಂತೆ ಒದ್ದೆ ಮಾಡಿದ ಸೆಣಬಿನ ಚೀಲದಲ್ಲಿ ಮುಚ್ಚಿ ಇಡಬೇಕು.
 • ಬಿಸಿಲು ಹೆಚ್ಚು ಇರುವ ಸಮಯದಲ್ಲಿ ತೆಗೆದರೆ ತಕ್ಷಣ ಬಾಡುತ್ತದೆ.
 • ಎಲೆ ತೆಗೆದರೆ ಬಹಳಷ್ಟು ನೀರು ಆವಿಯಾಗುವುದು ಕಡಿಮೆಯಾಗುತ್ತದೆ.

ನೆಡುವುದು ಹೀಗೆ:

 • ಪಾಲಿಥೀನ್ ಚೀಲದಲ್ಲಿ ಸಸಿ ಮಾಡುವಾಗ ಬಳ್ಳಿ ತುಂಡುಗಳನ್ನು ಒಂದು ಗಣ್ಣು ಇರುವಂತೆ  ತೊಟ್ಟೆಯೊಳಗೆ ಊರುವುದು ಸೂಕ್ತ.
 • ಹೆಚ್ಚು ಗಂಟುಗಳು ಇದ್ದಲ್ಲಿ ಅದು ಒಣಗುತ್ತದೆ.
 • ಒಂದು ಗಣ್ಣಿನ ಸಸಿ ಮಾಡುವುದಾದರೆ ಕೆಳಭಾಗದಲ್ಲಿ 1-2 ಸೆ. ಮೀ. ಮತ್ತು ಮೇಲು ಭಾಗದಲ್ಲಿ 2-4 ಸೆ. ಮೀ. ಇರುವಷ್ಟೇ ಬಿಡಿ.
 • ಅದಕ್ಕಿಂತ ಹೆಚ್ಚು ಬಿಟ್ಟಾಗ  ಆ ಭಾಗ ಒಣಗುತ್ತಾ ಒಣಗುವಿಕೆ ಕೆಳ ಭಾಗಕ್ಕೂ ಮುಂದುವರಿಯುತ್ತದೆ.

ಪಾಲಿಥೀನ್ ಚೀಲಕ್ಕೆ ಎಷ್ಟು ಸಸಿಗಳನ್ನು ಊರಲು ಸಾಧ್ಯವಿದೆಯೋ ಅಷ್ಟನ್ನು ಮಾತ್ರ ಕತ್ತರಿಸಿ ತನ್ನಿ. ಹೆಚ್ಚು ತರಬೇಡಿ. 

 • ಪಾಲಿಥೀನ್ ಚೀಲಕ್ಕೆ ಬಳ್ಳಿಗಳನ್ನು ಊರುವ ಮುನ್ನ, ಚೀಲಕ್ಕೆ ಬೇರು ಬರಲು ಅನುಕೂಲವಾಗುವ ಮಾಧ್ಯಮವನ್ನು ತುಂಬಬೇಕು.
 • ತುಂಬಾ  ಅಂಟಾದ ಮಣ್ಣು ಬೇಡ. ಮಣ್ಣಿನಲ್ಲಿ ಸಡಿಲತನ ಬೇಕು.
 • ಅದಕ್ಕಾಗಿ ಮರಳನ್ನು ಅಥವಾ ಅಕ್ಕಿ ಮಿಲ್ಲುಗಳಲ್ಲಿ ದೊರೆಯುವ ಅರ್ಧ ಸುಟ್ಟ ಭತ್ತದ ಹೊಟ್ಟನ್ನು ಬಳಕೆ ಮಾಡಬಹುದು.
 • ಮಾಧ್ಯಮಕ್ಕೆ ಒಂದು ಟನ್ ಪ್ರಮಾಣಕ್ಕೆ 50 ಕಿಲೋ ದಷ್ಟು  ಶಿಲಾ ರಂಜಕವನ್ನು  ಮಿಶ್ರಣ ಮಾಡುವುದರಿಂದ ಬೇರು ಬರಲು ಅನುಕೂಲವಾಗುತ್ತದೆ.
 • ಪಾಲಿಥೀನ್ ಕೊಟ್ಟೆಗೆ ತುಂಬಿಸುವ ಮಾಧ್ಯಮಕ್ಕೆ ಟ್ರೈಕೋಡರ್ಮಾ, ಸುಡೋಮೋನಸ್ ಮಿಶ್ರಣ ಮಾಡುವುದು ಉತ್ತಮ.

 ಲಭ್ಯವಿದ್ದರೆ  ಕಳಿತ ತೆಂಗಿನ ನಾರಿನ ಹುಡಿಯನ್ನು ಬಳಕೆ ಮಾಡಬಹುದು. ಪಾಲಿಥೀನ್ ಚೀಲಕ್ಕೆ ಬಳ್ಳಿಯ ತುಂಡುಗಳನ್ನು ಬೆರಳು ಇಲ್ಲವೇ ಯಾವುದಾದರೂ ಕಡ್ಡಿಯಲ್ಲಿ ತೂತು ಮಾಡಿ ಅದರೊಳಗೆ ಇಟ್ಟು ಮತ್ತೆ ಬೆರಳಿನಲ್ಲಿ ಒತ್ತಬೇಕು. ಎರಡು ಬಳ್ಳಿ ತುಂಡುಗಳನ್ನು ಊರುವುದು ಒಳ್ಳೆಯದು.

 • ಪಾಲಿಥೀನ್ ಚೀಲಕ್ಕೆ ಹಾಕಿದ ತಕ್ಷಣ ಆದನ್ನು ಒಂದು ಪ್ಲಾಸ್ಟಿಕ್ ಹೊದಿಸಿದ ಪೂರ್ತಿ ಮುಚ್ಚಿದ ಮನೆಯೊಳಗೆ ಇಡಬೇಕು.
 • ಈ ಮನೆ ನೆರಳಿನಲ್ಲಿ ಇದ್ದರೆ  ಒಳ್ಳೆಯದು. ಇದರೊಳಗೆ ಇಟ್ಟಾಗ ಆವೀಕರಣ ತಡೆಯಲ್ಪಡುತ್ತದೆ.
 • ನೆಟ್ಟ ಬಳ್ಳಿ ತುಂಡುಗಳು ಬಾಡುವುದಿಲ್ಲ. ಸಸ್ಯಗಳಿಗೆ ಬೇರು ಬಂದು ಚಿಗುರಲು ಬೇಕಾಗುವ ಸೂಕ್ತ ಆರ್ಧ್ರತೆ ಸಹ ದೊರೆಯುತ್ತದೆ.
 • ಇದಕ್ಕಾಗಿಯೇ ಪ್ಲಾಸ್ಟಿಕ್ ಹೊದಿಸಿದ ಮನೆಗಳನ್ನು ಮಾಡಿಕೊಳ್ಳುವುದು ಅಗತ್ಯ.
 • ತೆರೆದ ವಾತಾವರಣದಲ್ಲಿ  50 % ಗಿಡಗಳು ಚಿಗುರದೇ ಒಣಗಿದರೆ ಇದರಲ್ಲಿ 90 % ಕ್ಕೂ ಹೆಚ್ಚು ಚಿಗುರಿ ಬೇರು ಬರುತ್ತವೆ.
 • ಬೇಸಿಗೆಯಲ್ಲಿ  ದಟ್ಟ ನೆರಳು ಒದಗಿಸಿದರೂ ಸಾಕಾಗುತ್ತದೆ.

ನೆಡುವ ಕಡ್ಡಿಗಳನ್ನು ಮೊದಲಾಗಿ ಯಾವುದಾದರೂ ಶಿಲೀಂದ್ರ ನಾಶಕದಲ್ಲಿ ಅದ್ದಿ ನಾಟಿ ಮಾಡಬೇಕು.  ಲಭ್ಯವಿದ್ದರೆ ಬೇರು ಬರಿಸುವ ಹಾರ್ಮೋನುವಿನಲ್ಲಿ ಅದ್ದಿ ನೆಟ್ಟರೆ ಒಳ್ಳೆಯದು. ಮಾಧ್ಯಮಕ್ಕೆ ಹ್ಯೂಮಿಕ್ ಆಮ್ಲವನ್ನು  ಸೇರಿಸಿದರೆ ಬೇರು ಬರಲು ಅನುಕೂಲವಾಗುತ್ತದೆ.

 • ಕಡ್ಡಿಗಳನ್ನು ನೆಟ್ಟು ಪಾಲೀಹೌಸ್ ಒಳಗೆ ಇಟ್ಟು ಎರಡು ವಾರದಲ್ಲಿ ಚಿಗುರುಗಳು ಮೂಡುತ್ತವೆ.
 • ಆದರೆ ಬೇರು ಬಂದಿರುವುದಿಲ್ಲ. ಬೇರು ಮೂಡಲು ಸುಮಾರು 1 ತಿಂಗಳ ಸಮಯ ಬೇಕಾಗುತ್ತದೆ.
 • ಆ ಸಮಯಕ್ಕೆ  ಚಿಗುರು ಮೊಳಕೆಯಲ್ಲಿ ಒಂದು ಅಥವಾ ಎರಡು ಎಲೆಗಳು ಬಂದಿರುತ್ತವೆ.
 • ಬೇರು ಬಂದುದು ಖಾತ್ರಿಯಾದ ನಂತರವಷ್ಟೇ ಅದನ್ನು  ಅಲ್ಲಿಂದ ವರ್ಗಾಯಿಸಬೇಕು.

 • ವರ್ಗಾಯಿಸದೆ ಅಲ್ಲೇ ಉಳಿಸಿದರೂ ತೊಂದರೆ ಇಲ್ಲ.
 • ಸಸ್ಯಾಭಿವೃದ್ದಿ ಸಮಯದಲ್ಲಿ ಎಲೆಗಳಲ್ಲಿ ತುದಿ ಕಪ್ಪಗಾಗುವಿಕೆ,ಎಲೆಯಲ್ಲಿ ಕಪ್ಪು ಚುಕ್ಕೆಗಳು, ಹಾಗೂ ಎಲೆಯ ಅಲಗು  ಹಳದಿಯಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
 • ಇದಕ್ಕೆ ಸೂಕ್ತ ಶಿಲೀಂದ್ರನಾಶಕದ ಸಿಂಪರಣೆಯನ್ನು ( ಬಾವಿಸ್ಟಿನ್+ ಮ್ಯಾಂಕೋಜೆಬ್ ಸೇರಿದ )ಮಾಡಬೇಕು.
 • ಸಸಿ ಹಂತದಲ್ಲಿ ಒಂದೆರಡು ಬಾರಿ ಅತೀ ಕಡಿಮೆ ಸಾಂದ್ರತೆಯಲ್ಲಿ ಪೋಷಕಾಂಶ ಸಿಂಪರಣೆ ಮಾಡಿದರೆ ಸಸಿ ಚೆನ್ನಾಗಿ ಬೆಳೆಯುತ್ತದೆ.
 • ಪಾಲಿಥೀನ್ ಶೀಟು ಹೊದಿಸಿದ ಮನೆಯಲ್ಲಿ ಇಟ್ಟರೆ ಮಳೆಗಾಲದಲ್ಲೂ ಸಮಸ್ಯೆ ಇಲ್ಲ.

 ಅವರವರೇ ಸಸ್ಯಾಭಿವೃದ್ದಿ ಮಾಡಿಕೊಂಡರೆ ಸಾಗಾಟದ ಖರ್ಚು ಉಳಿಯುತ್ತದೆ. ಆರೋಗ್ಯವಂತ ಸಸಿಗಳ ಆಯ್ಕೆಗೂ ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!