ಒರಿಜಿನಲ್ ಮಂಗಳ ಅಡಿಕೆ ಮರ ಹೀಗಿರುತ್ತದೆ.

good yielded plant

ಮಂಗಳ ಅಡಿಕೆ ತಳಿ ಪ್ರಸ್ತುತ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಲ್ಲಿ ಪರಿಚಯಿಸಲಾದ ತಳಿ ಎಂದೇ ಹೇಳಬಹುದು. 30  ವರ್ಷವಾದರೂ 35-40 ಅಡಿ ಎತ್ತರ. ಹೆಚ್ಚು ಪೋಷಕಾಂಶ ಕೊಟ್ಟಷ್ಟೂ ಹೆಚ್ಚು ಇಳುವರಿ. ಮರದಲ್ಲಿ 4-5 ಭರ್ತಿ ಕಾಯಿಗಳ ಗೊನೆ.  ಅಡಿಕೆ ಬೆಳೆಯುವವರ ಅಂಗಳದ ತುಂಬಾ ಅಡಿಕೆ ಹರಡಿದ ಸಮೃದ್ಧಿ ಉಂಟಾದುದೇ ಈ ತಳಿ ಬಂದ ನಂತರ. ಆದರೆ ಈ ಮೂಲ ತಳಿ ಈಗ ಭಾರೀ ಅಪರೂಪವಾಗಿದೆ.

 •  ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕುಬಳಬೆಟ್ಟು ಗುತ್ತುವಿನ ಪ್ರಗತಿಪರ ಕೃಷಿಕರಾಗಿದ್ದ ದಿವಂಗತ ಶ್ರೀ ಯುವರಾಜ ಕೊಂಬ ರವರು ಸುಮಾರು 38  ವರ್ಷಕ್ಕೆ ಹಿಂದೆ ಮಂಗಳ ತಳಿಯ ಅಡಿಕೆಯನ್ನು ಬೆಳೆಸಿದ್ದಾರೆ.
 • ಆ ಮರಗಳು ಇಂದಿಗೂ ಉತ್ತಮ ಫಸಲನ್ನು ಕೊಡುತ್ತಿವೆ.
 • ಮಗ ಸಂಪತ್ ಕುಮಾರ್ ಕೊಂಬ ಇವರು ಸದಾ ಈ ಮರಗಳನ್ನು ನೋಡಿ ತಮ್ಮ ತಂದೆಯವರ ಕೆಲಸವನ್ನು ನೆನೆಸಿಕೊಳ್ಳುತ್ತಾರೆ.
 • ಈ ಅಡಿಕೆ ಮರಗಳು ಮಂಗಳ ಅಡಿಕೆಯ ಎಲ್ಲಾ ಗುಣಲಕ್ಷಣಗಳನ್ನೂ ಹೊಂದಿವೆ.
 • ಇರುವ ಇತರ ತೋಟಗಳಿಗಿಂತ ಇದರಲ್ಲೇ ಹೆಚ್ಚು ಫಸಲು  ಎನ್ನುತ್ತಾರೆ.

ನಮ್ಮ ಅಡಿಕೆ ಬೆಳೆಗಾರರ  ಕೂಗು ಎಂದರೆ ,ಅಡಿಕೆ ಮರ ಇದ್ದರೆ ಸಾಕೇ ಸರಿಯಾದ ಸಮಯಕ್ಕೆ ಸಿಂಪರಣೆ ಮಾಡಲಿಕ್ಕೆ ಮರ ಹತ್ತುವವರೇ ಸಿಗುವುದಿಲ್ಲ.  ಸರಿಯಾದ ಸಮಯಕ್ಕೆ ಕೊಯಿಲು ಮಾಡಲಿಕ್ಕೂ ಆಗುವುದಿಲ್ಲ. ಮರ ಎತ್ತರವಾಗಿದೆ. ಮರ ಹತ್ತದೆ ಏನೂ ಮಾಡುವಂತಿಲ್ಲ. ಆಕಾಶದೆತ್ತರ ಬೆಳೆದ ಮರಗಳಿಗೆ ಹತ್ತುವವರು ಇನ್ನು ಸಿಗುವುದು ಸಾಧ್ಯವೇ ಇಲ್ಲ. ಇದಕ್ಕಾಗಿ ಯಂತ್ರಗಳ ಹಿಂದೆ ಬಿದ್ದಿದ್ದಾರೆ.

ಮಂಗಳ ಎಲ್ಲದಕ್ಕೂ ಸುಲಭ:

 • ಮಂಗಳ ತಳಿ ಬೆಳೆದರೆ ಅದು ಇತರ ತಳಿಯಂತೆ ಬಹಳ ಎತ್ತರ ಬೆಳೆಯುವುದಿಲ್ಲ.
 • ನೆಟ್ಟು 3  ವರ್ಷಕ್ಕೇ ಫಸಲು. ಹೊಂಡ ಮಾಡಿ ನೆಟ್ಟರೆ ನೆಲಮಟ್ಟಕ್ಕೆ ಬರುವಾಗ ಇಳುವರಿ.
 • ಇಂತಹ ಅಡಿಕೆ ತಳಿ ಹಿಂದೆಯೂ ಇರಲಿಲ್ಲ. ಮುಂದೆಯೂ ಬರಲಿಲ್ಲ.
 • ಇದರ ಅಂತರ ಗಣ್ಣುಗಳು ಪ್ರಾರಂಭದ   ಹಂತದಲ್ಲಿ ಸುಮಾರು 3 ಇಂಚಿನಷ್ಟು ಇದ್ದರೆ ಬೆಳೆದಂತೇ ಅದು 1 ಇಂಚಿನಷ್ಟು  ಇರುತ್ತದೆ.

 • ವರ್ಷಕ್ಕೆ ಹೆಚ್ಚೆಂದರೆ 1 ಅಥವಾ 1.5 ಅಡಿ ಎತ್ತರಕ್ಕೆ ಬೆಳೆಯಬಲ್ಲುದು.
 • ಅಂತರ ಗಣ್ಣುಗಳು  ಹತ್ತಿರ ಇರುವ ಕಾರಣ ಪಶ್ಚಿಮದ ದಿಕ್ಕಿನ ಬಿಸಿಲಿನ ಘಾಸಿ ಸಹ ಮರಕ್ಕೆ  ಹಾನಿ ಉಂಟು ಮಾಡಲಾರದು.

ಅಡಿಕೆಯ ಮರದಲ್ಲಿ ಗೊನೆಗಳ ಸೌಂದರ್ಯವನ್ನು ನೋಡಬೇಕಾದರೆ ಅದು ಮಂಗಳದಲ್ಲಿ ಮಾತ್ರ ಸಾಧ್ಯ. ಮರದಲ್ಲಿ ಭರ್ತಿ 3-4 ಗೊನೆಗಳು. ಅದು ಅಕ್ಕಿ ಮುಡಿ ಕಟ್ಟಿಟ್ಟ ತರಹ ಕಾಣುತ್ತದೆ.

 • 20 ವರ್ಷಗಳ ತನಕವೂ ನೆಲದಿಂದಲೇ ಸಿಂಪರಣೆ ಮಾಡಬಹುದು. ಕೊಯಿಲನ್ನೂ ಸುಲಭವಾಗಿ ಮಾಡಬಹುದು.
 • ಸರಿಯಾಗಿ ಪೋಷಕಾಂಶ ಕೊಡುತ್ತಿದ್ದರೆ ( ಶಿಫಾರಿತ ಪ್ರಮಾಣಕ್ಕಿಂತ  ದುಪ್ಪಟ್ಟು) ವರ್ಷ ವರ್ಷವೂ ಏಕ ಪ್ರಕಾರದ ಇಳುವರಿ.

ಮಂಗಳ ಎಂಬ  ಹೆಸರೇ ಹೇಳುವಂತೆ ಅಡಿಕೆ ಬೆಳೆಗಾರರ ಪಾಲಿಗೆ ಮಂಗಳಕರವಾದ ತಳಿ ಇದಾಗಿತ್ತು. ಆದರೆ ಈಗ ನಾವು ಬೆಳೆಸುತ್ತಿರುವ ಮಂಗಳ ಶುದ್ಧ ಮಂಗಳದ ಲಕ್ಷಣ ಹೊಂದಿಲ್ಲ.

ಏನಾಯಿತು:

 •  ಪರಕೀಯ ಪರಾಗಸ್ಪರ್ಶ ಅಥವಾ ಗಾಳಿಯ ಮೂಲಕ ಪರಾಗಸ್ಪರ್ಷ ಆಗುವ ಅಡಿಕೆ- ತೆಂಗಿನಂತಹ ಸಸ್ಯಗಳಲ್ಲಿ ಸಹಜವಾಗಿ ತಲೆಮಾರಿನಿಂದ ತಲೆಮಾರಿಗೆ ತಳಿ ವ್ಯತ್ಯಾಸಗಳಾಗುವುದು ಪ್ರಕೃತಿ ನಿಯಮ. . ಅದರಂತೆ ಮಂಗಳ ತಳಿಯಲ್ಲೂ ಆಗಿದೆ.
 • 1972  ರ ತರುವಾಯ ಅದು ಏನಿಲ್ಲವೆಂದರೂ ಈಗ ಕನಿಷ್ಟ 20-25 ತಲೆಮಾರು ಮುಗಿಸಿದ ಕಾರಣ  ಮಂಗಳದ ನೈಜ ಗುಣ ಪೂರ್ತಿಯಾಗಿ ಅಳಿಸಿ ಹೋಗಿ ಅದು ಅಮಂಗಳವಾಗಿದೆ.

ಶುದ್ಧ ಮಂಗಳ ಎಲ್ಲಿದೆ?

 • ಯಾರು ಮೂಲ ತಳಿಯನ್ನು ತಂದು ಬೆಳೆಸಿದ್ದಾರೆಯೋ  ಅಂತವರ ತೋಟದ ಬೀಜಗಳಲ್ಲಿ ಅದರ ಗುಣ ಸ್ವಲ್ಪವಾದರೂ ಇರಬಹುದು.
 • ಬಹುಷಃ ಇಂತಹ ತೋಟಗಳು ಇದನ್ನು ಬಿಡುಗಡೆ ಮಾಡಿದ ಸಿಪಿಸಿಆರ್ ಐ ನಲ್ಲೂ ಇಲ್ಲವೆಂದು ಕಾಣುತ್ತದೆ.
 • ಇದನ್ನು ಮನಗಂಡ ವಿಜ್ಞಾನಿಗಳು ಶುದ್ಧ  ತಳಿಯ ಮರು ಪೂರೈಕೆಗೆ ಅನುಕೂಲವಾಗುವಂತೆ ಇಂಟರ್ ಕ್ರಾಸಿಂಗ್ ಮಾಡಿ( ಇಂಟರ್ ಸೆ ಮಂಗಳ) ಶುದ್ಧ ಮಂಗಳವನ್ನು 1982  ರಲ್ಲಿ ಬಿಡುಗಡೆ ಮಾಡಿದರು.
 • ಆದರೆ ಅದಕ್ಕೂ ತಲೆಮಾರು ಸಾಕಷ್ಟು ಆಗಿ ಅದು ಮಂಗಳದ ಹಾದಿಯನ್ನೇ ಹಿಡಿದಿದೆ. ಆದ ಕಾರಣ  ಈಗ ಮಂಗಳ ಶುದ್ಧ ತಳಿಯ ಅಪೇಕ್ಷೆ ಬರೇ ಕನಸಾಗಬಹುದು.

ತರು ಗಮನಿಸಿ: ಯಾವುದೇ ತಳಿಯನ್ನು ಬಿಡುಗಡೆ ಮಾಡುವಾಗ ಇರುವ ಅದರ  ಗುಣಗಳು,  ಬೀಜಗಳ ಮೂಲಕ ತಲೆಮಾರು ಹೆಚ್ಚಾದಂತೆ,  ಕ್ಷೀಣಿಸುತ್ತಾ ಬರುತ್ತದೆ. ಇದು ಪ್ರಾಕೃತಿಕ ಕ್ರಿಯೆ. ಇದಕ್ಕಾಗಿ ರೈತರು ಸಾಧ್ಯವಾದಷ್ಟು ಮೂಲ ಗುಣ ಉಳಿದುಕೊಂಡಲ್ಲಿಂದ  ಬೀಜ ಆಯ್ಕೆ ಮಾಡಬೇಕು.

 ಆದರೂ ಮೂಲ ತಳಿ ಉಳ್ಳ  ತೋಟಗಳಿಂದ ಆಯ್ಕೆ ಮಾಡಿದ ಬೀಜಗಳಲ್ಲಿ ಸ್ವಲ್ಪವಾದರೂ ಶುದ್ದತೆಯನ್ನು ನಿರೀಕ್ಷಿಸಬಹುದು.ಅಂಥಹ ತೋಟ ನಿಮ್ಮ ಸುತ್ತಮುತ್ತ ಇರಲೂ ಬಹುದು. ಅಂತಹ ಕಡೆಯಿಂದ ಬೀಜ ಆರಿಸಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!