ಬೆಳೆ ದಾಖಲೆ ಮಾಡಿಲ್ಲವೇ? ಮಾಡಿ. ಬಹಳ ಪ್ರಯೊಜನ ಇದೆ.

ರೈತರ ಹೊಲದಲ್ಲಿ ಯಾವ ಬೆಳೆ ಇದೆ, ಎಂಬುದನ್ನು ಅವರವರೇ ದಾಖಲೀಕರಣ ಮಾಡಿದರೆ ಅದೇ ಉತ್ತಮ. ಯಾಕೆಂದರೆ ಬೇರೆಯವರು ಮಾಡುವುದು ಎಷ್ಟಾದರೂ ಅಷ್ಟೇ. ಇದು ಇಂದು ಬೆಳೆ ದಾಖಲೀಕರಣ  ಮಾಡಿದಾಗ ತಿಳಿದ ಸಂಗತಿ. ಸ್ವಲ್ಪ ತರಬೇತಿ ಅಥವಾ ಸ್ವಲ್ಪ ಮೊಬೈಲ್ ಫೋನ್ ಬಳಕೆ ಗೊತ್ತಿದ್ದವರ ಸಹಾಯ ತೆಗೆದುಕೊಂಡರೆ ಇದನ್ನು ಯಾರೂ ಬಳಸಬಹುದು.
Karnataka crop servery 2020

  • ಸರಕಾರ ಈ ಕೆಲಸವನ್ನು ರೈತರ ತಲೆಗೇ ಹಾಕಿರುವುದು ಮತ್ತೇನಕ್ಕೂ ಅಲ್ಲ. ಈ ಕೆಲಸಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ.
  • GPS  ಸರಿಯಾಗಿ ಸಿಗಬೇಕು. ಕೆಲವೊಮ್ಮೆ ಬೇಗ ಆಗಬಹುದು. ಅರ್ದ ಮುಕ್ಕಾಲು ಗಂಟೆಯೂ ತಗಲಬಹುದು.
  • ಆದ ಕಾರಣ ಖರ್ಚು ಉಳಿತಾಯ ಮಾಡುವ ಸಲುವಾಗಿಯೇ ಈ ಜವಾಬ್ಧಾರಿಯನ್ನು ರೈತರ ತಲೆಗೇ ಹಾಕಿದೆ.
  • ನಮ್ಮದನ್ನು ನಾವೇ ತಾಳ್ಮೆಯಿಂದ  ದಾಖಲಿಸಬಹುದು. ಅದ  ಕಾರಣ  ಇದು ಒಳ್ಳೆಯದೇ ಆಗಿದೆ.

ಉತ್ತಮ ವ್ಯವಸ್ಥೆ:

  • ಬೆಳೆ ದಾಖಲೀಕರಣದ ಈ  ಆಪ್ ವ್ಯವಸ್ಥೆಯನ್ನು ದೂರುವುದು ಸರಿಯಲ್ಲ.
  • ಉತ್ತಮ ಕೆಲಸವೇ ಮಾಡಲಾಗಿದೆ. ರಾಜ್ಯದ ಎಲ್ಲಾ ಬೆಳೆಗಳನ್ನೂ ಸೇರಿಸಲಾಗಿದೆ.
  • ತಮ್ಮ ಹೊಲದಲ್ಲಿ ಯಾವುದೇ ಮಿಶ್ರ ಬೆಳೆ, ಬದು ಬೆಳೆ ಯಾವುದೇ ಇದ್ದರೂ ಅದನ್ನು ಸೇರಿಸಲು ಅವಕಾಶ ಇದೆ.
  • ಇಲ್ಲಿ ಎಲ್ಲವನ್ನೂ ಎಕ್ರೆ ಲೆಕ್ಕದಲ್ಲಿ ನಮೂದಿಸಬೇಕಾಗಿಲ್ಲ. ಕೆಲವೇ ಕೆಲವು ಮರಗಳಿದ್ದರೂ ಅದನ್ನು  ನೋಂದಾವಣೆ ಮಾಡಬಹುದು.

ಹಿಂದೆ ಇದನ್ನು ಗ್ರಾಮ ಕರಣಿಕರ ಕಚೇರಿಯಿಂದ ಸಹಾಯಕರು ಬಂದು ಮಾಡಿ  ಹೋಗುತ್ತಿದ್ದರು. ಅವರ ಬಿಡುವು ಹೊಂದಿ ದಾಖಲೀಕರಣ, ಮಾಡುತ್ತಿದ್ದರು. ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಬೆಳೆಗಳನ್ನಷ್ಟೇ ನಮೂದಿಸುತ್ತಿದ್ದರು.

  • ಈಗ ನಾವೇ ಮಾಡುವ ಕಾರಣ ಅದರಲ್ಲಿ ಹಲಸಿನ ಮರ ಇದ್ದರೂ ನಮೂದಿಸಬಹುದು, ತೇಗದ ಮರ ಇದ್ದರು ನಮೂದಿಸಬಹುದು, ಬಿದಿರು ಇದ್ದರೂ ನಮೂದಿಸಬಹುದು.

ಸ್ವಲ್ಪ ಮೇಲ್ದರ್ಜೆಗೆ ಏರಿಸಬಹುದಿತ್ತು:

  • ಆಪ್ ನಲ್ಲಿ ಮೊದಲಾಗಿ ಜಿಲ್ಲೆಯನ್ನು ಆಯ್ಕೆ ಮಾಡಲಾಗುತ್ತದೆ. ಆ ನಂತರ ತಾಲೂಕು, ಹೋಬಳಿ, ಗ್ರಾಮ ಇದೆಲ್ಲಾ ಇರುತ್ತದೆ.
  • ಜಿಲ್ಲೆ ಬಂದ ತಕ್ಷಣ ಅಲ್ಲಿ ಆ ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳಷ್ಟೇ ದಾಖಲೆಗೆ ಬರುವಂತಾಗಿದ್ದರೆ ಒಳ್ಳೆಯದಿತ್ತು.
  • ಪ್ರತೀ ಬೆಳೆಯ ದಾಖಲೆಯ  ಜೊತೆಗೆ ಗರಿಷ್ಟ ಇಳುವರಿಯನ್ನೂ ರೈತರಿಂದಲೇ  ದಾಖಲೀಕರಣ ಮಾಡಿಸುತ್ತಿದ್ದರೆ,  ಬೆಳೆ ಉತ್ಪಾದನೆಯ ಒಟ್ಟಾರೆ ಲೆಕ್ಕಾಚಾರ ಲಭ್ಯವಾಗುತ್ತಿತ್ತು.
  • ಬೆಳೆ ಲೆಕ್ಕಾಚಾರ ಇಲ್ಲದಿರುವುದೇ ರೈತನಿಗೆ ಸ್ಥಿರ ಬೆಲೆ ದೊರೆಯದಿರಲು ಮೂಲ ಕಾರಣ.
  • ಬೆಳೆ ಉತ್ಪಾದನೆ ಲೆಕ್ಕಾಚಾರ ವನ್ನು ಕರಾರುವಕ್ಕಾಗಿ ಸಂಗ್ರಹಿಸಲು ಇದು ಸರಳ ವ್ಯವಸ್ಥೆಯಾಗುತ್ತಿತ್ತು.

ಮುಂದಿನ ಸಲ ಇದನ್ನು ಮಾಡಬಹುದು ಎಂದು ಯೋಚಿಸೋಣ. ಇಷ್ಟಕ್ಕೂ ಇದು  ರಾಜ್ಯ ಸರಕಾರದ ಯೋಚನೆ ಅಲ್ಲ. ಕೇಂದ್ರದ ಸೂಚನೆಯಂತೆ ಇದನ್ನು ಮಾಡಲಾಗಿದೆ.

ಯಾಕೆ ಬೆಳೆ ದಾಖಲೆ ಮಾಡಬೇಕು:

  • ಈ ವರ್ಷ  ಹಣ್ಣು, ಹೂವಿನ ಬೆಳೆಗಾರರಿಗೆ ಸರಕಾರದಿಂದ ಕೊರೋನಾ ಕಾರಣದಿಂದ ಆದ ನಷ್ಟಕ್ಕೆ ಒಂದಷ್ಟು ಪರಿಹಾರ ಘೋಷಣೆಯಾಗಿತ್ತು.
  • ನನ್ನ ಹೊಲದ ಹಿಂದಿನ ಬೆಳೆ ದಾಖಲಾತಿಯಲ್ಲಿ ಅನನಾಸು ಬೆಳೆ ದಾಖಲಿಸಲ್ಪಟ್ಟಿತ್ತು.
  • ನನ್ನ ಹೊಲವನ್ನು ಹುಡುಕಿಕೊಂಡು ತೋಟಗಾರಿಕಾ ಇಲಾಖೆಯವರು ನನ್ನಲ್ಲಿಗೆ  ಬಂದು ಬೆಳೆ ನಷ್ಟದ ವರದಿಯನ್ನು  ತೆಗೆದುಕೊಂಡು ಹೋಗಿದ್ದರು.
  • ಅದಕ್ಕೆ ಪರಿಹಾರ ಧನವಾಗಿ ರೂ.7000 ನನ್ನ ಖಾತೆಗೆ ಜಮಾ ಆಗಿದೆ.

ಇದು ಒಂದು ಉದಾಹರಣೆ, ನಾವು ಯಾವುದೇ ಬೆಳೆ ನಷ್ಟವಾದರೆ ಅದರ ನಷ್ಟದ ದುಖಃವನ್ನು ಹೊತ್ತುಕೊಂಡು ಗ್ರಾಮಕರಣಿಕ, ಅಥವಾ ಪಂಚಾಯತ್ ಪಿಡಿಒ ಅಥವಾ ಅಭಿವೃದ್ದಿ ಇಲಾಖೆ, ಕಂದಾಯ ಇಲಾಖೆಗಳ ಬಳಿ ಹೋಗಬೇಕಾಗಿಲ್ಲ. ಅವರೇ ನಮ್ಮ ಬಳಿಗೆ ಬರುತ್ತಾರೆ. ನಾವು ಅದಕ್ಕಾಗಿ ಸಮಯ ವ್ಯಯಿಸುವ ಅವಶ್ಯಕತೆ ಇರುವುದಿಲ್ಲ. ಯಾರ ಶಿಫಾರಸು ಬೇಕಾಗಿಲ್ಲ. ಅಲೆದಾಟ ಇಲ್ಲ.ಯಾವ ದಾಖಲೆಯೂ ಕೊಡಬೇಕಾಗಿಲ್ಲ.

  • ಏನಾದರೂ ಪ್ರಕೃತಿ ವಿಕೋಪಕಗಳು ಉಂಟಾದಾಗ  ಸರಕಾರ ಯಾವಾಗಲೂ ಪರಿಶೀಲಿಸುವುದು ಹೊಲದಲ್ಲಿ ಇರುವ ಬೆಳೆಗಳನ್ನು.
  • ಆಗ ಇದು ನಮ್ಮ ಬೆಂಬಲಕ್ಕೆ ಬರುತ್ತದೆ.

ರೈತರು ಬೆಳೆ ದಾಖಲೀಕರಣಕ್ಕೆ ಹಿಂದೇಟು ಹಾಕುವುದು ಬೇಡ. ಸರಕಾರದ ವ್ಯವಸ್ಥೆಯ ಮೇಲೆ ಅಸಮಾಧಾನ ಬಹುತೇಕ ಎಲ್ಲರಿಗೂ ಇರಬಹುದು. ಆದರೆ ನಾವು ನಮ್ಮ ಕೆಲಸ ಸಮರ್ಪಕವಾಗಿ ಮಾಡದೆ ಮುಂದೆ ನಾವು ಪಶ್ಚಾತ್ತಾಪ ಪಡುವುದು ಬೇಡ.
End of the article:————————————————-
Search Words: crop serve 2020 # Bele dakale# Bele samikshe#Karnataka crop entry 2020# ಬೆಳೆ ಸಮೀಕ್ಷೆ#
 

Leave a Reply

Your email address will not be published. Required fields are marked *

error: Content is protected !!