ರೈತರು ಬುದ್ಧಿವಂತರಾಗದಿದ್ದರೆ ಉಳಿಗಾಲವಿಲ್ಲ. ತಿಳಿದಿರಲಿ.

by | Sep 13, 2020 | Current Affairs (ಪ್ರಚಲಿತ ವಿಧ್ಯಮಾನಗಳು) | 0 comments

ನಮ್ಮ ದೇಶದಲ್ಲಿ ಕೃಷಿಕರನ್ನು ಮಾತ್ರ ಯಾವ ರೀತಿಯಲ್ಲೂ ಮೋಸಮಾಡಬಹುದೇನೋ ಅನ್ನಿಸುತ್ತಿದೆ. ಕೃಷಿಕರಿಗೆ ಬೇಕಾಗುವ ಯಂತ್ರೋಪಕರಣ, ಗೊಬ್ಬರ, ಕೀಟ ನಾಶಕ, ಹೀಗೆ ಬೇಕಾಗುವ ಕೃಷಿ ಒಳಸುರಿ ಮಾರಾಟ ಮಾಡುವವರು ದಿನಕ್ಕೆ ಒಬ್ಬರಂತೆ ಸೃಷ್ಟಿಯಾಗುತ್ತಿದ್ದಾರೆ. ನಮಗೆ ಹೇಗಾದರೂ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ. ಅವರಿಗೆ ಇದೇ ಬಂಡವಾಳ. ಹೊಸ ಹೊಸ ಉತ್ಪನ್ನಗಳು. ಹೊಸ ಬಾಟಲಿಯಲ್ಲಿ ಅಧಿಕ ಬೆಲೆಯ ಹಳೇ ಸಾಮಾನುಗಳು ಅಷ್ಟೇ ಬದಲಾವಣೆ.
farmers should discuss with others

ಕೃಷಿಕರ ವೀಕ್ ನೆಸ್-ಇನ್ನೊಬ್ಬರ ಬಂಡವಾಳ:

  • ಕೃಷಿಕರಲ್ಲಿ ಬಹುತೇಕ ಎಲ್ಲರಿಗೂ ಪರಸ್ಪರ ನಂಬಿಕೆ ಕಡಿಮೆ.
  • ಅದು ಒಳ್ಳೆಯದೇ?ಇದು ಒಳ್ಳೆಯದೇ ಎಂಬ ದ್ವಂದ್ವ. ಕೃಷಿಕ ಕೃಷಿಕನ ಒಳಗೇ ಒಳಗೊಳಗೇ ಮುಸುಕಿನ ಗುದ್ದಾಟ.
  • ಪರಸ್ಪರ ಚರ್ಚೆ ಮಾಡುವ ಅಭ್ಯಾಸ ನಮ್ಮಲ್ಲಿ ಇಲ್ಲ.
  • ಈ ಮನೋ ಭಾವನೆ ನಮ್ಮನ್ನು ಯಾವುದಾದರೂ ಒಂದು ಹೊಂಡಕ್ಕೆ ತಳ್ಳುತ್ತದೆ.
  • ಕೊನೆಗೊಂದು ದಿನ ಬುದ್ಧಿಬಂದು ಬರುವುದು ಯಥಾ ಸ್ಥಾನಕ್ಕೆ.
  • ಅಷ್ಟರಲ್ಲಿ ನಮ್ಮ ಶ್ರಮದ ಪಾಲನ್ನು ಕೆಲವರು ಕಬಳಿಸಿ ಆಗುತ್ತದೆ.

farmer picking tomato from his farm
ಕೃಷಿಕರಿಗೆ ನಂಬಿಕೆ ಸ್ವಲ್ಪ ಕಡಿಮೆ. ಇದಕ್ಕೆ ಕಾರಣ ನಮ್ಮ ವ್ಯವಸ್ಥೆ. ಎಲ್ಲರೂ ತಮ್ಮ ಲಾಭಕ್ಕೆ, ತಮ್ಮ ಉತ್ಪನ್ನ ಮಾರಾಟಕ್ಕೆ ಬೇಕಾದ ಸಲಹೆ – ಸೂಚನೆ ನೀಡುತ್ತಿದ್ದಾರೆ. ಇದನ್ನು ನೋಡಿ ನೋಡಿ ಜನ ಬೇಸತ್ತಿದ್ದಾರೆ.

  • ಕೃಷಿಕರಲ್ಲಿ ಗೌಪ್ಯತೆ ಕಾಪಾಡುವ ಒಂದು ಹಂಬುತನ. ನಾನು ಏನೂ ಹಾಕಲಿಲ್ಲ.
  • ಬೆಳೆ ಚೆನ್ನಾಗಿದೆ. ನಾನು ಇದನ್ನು ಹಾಕಿದೆ ಒಳ್ಳೆಯದಿದೆ ಎಂದು ಸುಳ್ಳು ಹೇಳಿ ಪ್ರಚಾರ ಮಾಡುವ, ಇನ್ನೊಬ್ಬರನ್ನು ತಪ್ಪು ದಾರಿಗೆ ಒಯ್ಯುವ   ಬುದ್ಧಿವಂತಿಕೆ.
  • ರೈತರೇ ರೈತರೊಡನೆ ವ್ಯಾಪಾರ ಮಾಡುವ ಮಟ್ಟಕ್ಕೆ ಇಳಿದಿರುವುದು ಇತ್ತೀಚೆಗಿನ ಬೆಳವಣಿಗೆ

ವಾಸ್ತವಿಕತೆ ಹೀಗಿದೆ:

  • ಗೊಬ್ಬರ, ಕೀಟ ನಾಶಕ ಮಾರಾಟ ಮಾಡುವವರು ಹೆಚ್ಚಿನವರು ಕೃಷಿ ಮಾಡುವುದಿಲ್ಲ.
  • ಪಶು ಆಹಾರ ತಯಾರಿಸುವವರು ಹಸು ಸಾಕುವುದಿಲ್ಲ.
  • ಇಂತದ್ದೆಲ್ಲಾ ನಮಗೆ ಗೊತ್ತಿದೆಯೋ ಇಲ್ಲವೋ.
  • ಇವರಲ್ಲಿ ಹೆಚ್ಚಿನವರು  ಕೃಷಿಕರ ಆದಾಯದಲ್ಲಿ ಪಾಲು ಕೇಳುವವರು.

ನಮ್ಮಲ್ಲಿ ಕೃಷಿಕರಿಗೆ ಬೇಕಾದಾಗ ಬೇಕಾದ ಮಾಹಿತಿ ಕೊಡಲಿಕ್ಕಾಗಿ ಸರಕಾರ ಮಾಡಿದ ವ್ಯವಸ್ಥೆಗಳಿವೆ. ಇಲ್ಲಿ ಬಯಲು ಸೀಮೆಯವರು ಕರಾವಳಿಯಲ್ಲೂ, ಕರಾವಳಿಯವರು ಬಯಲು ಸೀಮೆಯಲ್ಲೂ ಕೆಲಸಮಾಡುವಂತೆ ನಮ್ಮ ಸರಕಾರದ ವ್ಯವಸ್ಥೆ.   ಇವರು ಇಲ್ಲಿ ಅನುಭವಿಗಳಾಗುವಾಗ  ವರ್ಗಾವಣೆ.  ಇವರಿಂದ ಆಗುವುದು ಬರೇ ಪುಸ್ತಕದ ಬದನೇಕಾಯಿ.  ಇದು ಜನರಿಗೆ ಗೊತ್ತಾಗಿದೆ. ಜನ ಅವರಿಂದ ಏನಾದರೂ ಲಾಭ ಸಿಗುವುದಿದ್ದರೆ ಮಾತ್ರ ಅವರ ಬಳಿಗೆ ಹೋಗುತ್ತಾರೆ.  ಅವರೂ ಸರಕಾರದ ಸಂಬಳಕ್ಕಾಗಿಯೇ ದುಡಿಯುತ್ತಾರೆ!

  • ಕೃಷಿ ಮಾಹಿತಿ ಕೊಡಲು ಕೃಷಿ ವಿಜ್ಞಾನಿಗಳಿದ್ದಾರೆ. ಅಭಿವೃದ್ದಿ ಇಲಾಖೆಗಳಿವೆ.
  • ಆದರೆ ಜನರಿಗೆ ಇವರ ಮೇಲೆ ವಿಶ್ವಾಸ ಇಲ್ಲದಾಗಿದೆ.
  • ನಮ್ಮಲ್ಲಿ ವಿಧ್ಯಾವಂತರಾದವರು ಕೃಷಿ ಮಾಡುವುದು ತುಂಬಾ ಕಡಿಮೆ.
  • ವಿಧ್ಯೆ ಹತ್ತದವನಿಗೆ ಅಂತಿಮ ಅವಕಾಶ ಕೃಷಿ ಕ್ಷೇತ್ರ.

ನಮ್ಮ  ಮನೆಬಾಗಿಲಿಗೆ ಒಬ್ಬ ಸೂಟು ಬೂಟು ಹಾಕಿ ಬಹಳ ಜೆಂಟಲ್ ಮ್ಯಾನ್ ಫೋಸ್ ನಲ್ಲಿ ಐಷಾರಾಮೀ ಕಾರಿನಲ್ಲಿ ಬಂದ ಎಂದರೆ ನಾವು ಅವನ ಎದುರು ಶರಣಾಗುತ್ತೇವೆ. ಈ ನಮ್ಮ ವೀಕ್ ನೆಸ್ ಅವರಿಗೆ ಲಾಭಮಾಡಿಕೊಡುತ್ತದೆ. ಒಂದು ಉದಾಹರಣೆ: ಒಬ್ಬ ಸಿಪ್ಪೆ ಗೋಟು ವ್ಯಾಪಾರಿ. ಹೀಗೆ ಮಾರುತಿ 800 ಕಾರಿನಲ್ಲಿ ವ್ಯಾಪಾರಕ್ಕೆ ಹೋದರೆ ಅವನಿಗೆ ಯಾರೂ ಉದುರಿ ಕೊಡಲಿಲ್ಲವಂತೆ. ಒಂದು ದಿನ ಆ ಕಾರನ್ನು ಮಾರಿ ಬಂದ ಹಣದಲ್ಲಿ ಮಾರ್ಜಿನ ಮನಿ ಮಾಡಿಕೊಂಡು ಒಂದು ಎಸ್ ಯುವಿ ಕಾರ್ ತೆಗೆದನಂತೆ. ಹಾಗೆ ಎಲ್ಲಿಗೆಲ್ಲಾ ವ್ಯಾಪಾರಕ್ಕೆ ಹೋಗಿ  ವಾಪಾಸಾಗಿದ್ದನೋ ಅಲ್ಲೆಲ್ಲಾ ಇದೇ ಕಾರಿನಲ್ಲಿ ಹೋಗಿ ಉದುರಿ ವ್ಯವಹಾರ ಕುದುರಿಸಿಕೊಂಡು ಬಂದನಂತೆ. ಇದು ಒಂದು ಉದಾಹರಣೆ  ಮಾತ್ರವಲ್ಲ. ನಾವೆಲ್ಲಾ ಮಾಡುವ ಹೆಡ್ಡತನ.

ನಡೆಯುತ್ತಿರುವುದು ಏನು:

  • ಇತ್ತೀಚೆಗೆ ಒಬ್ಬರು ಕೃಷಿ ಬಳಕೆಯ ಸುಣ್ಣದ ಬಗ್ಗೆ ಪ್ರಸ್ತಾಪ ಎತ್ತಿದರು. ನಾನು ಅದಕ್ಕೆ ಕೃಷಿ ಸುಣ್ಣ ಹಾಕಬಹುದು.
  • ಮಣ್ಣಿನಲ್ಲಿ ಸಾಕಷ್ಟು ಸಾವಯವ ವಸ್ತುಗಳು ಇದ್ದರೆ, ಸೊಪ್ಪು , ಕುರಿ, ಅಡಿನ ಗೊಬ್ಬರ  ಹಾಕುತ್ತಿದ್ದರೆ ಸುಣ್ಣದ ಅಷ್ಟೊಂದು ಅವಶ್ಯಕತೆ ಇರುವುದಿಲ್ಲ.
  • ಒಂದು ಹಾರೆಯಲ್ಲಿ  ಮಣ್ಣು ಅಗೆಯುವಾಗ ಎರಡು ಮೂರು ಸಂಖ್ಯೆಯ ಎರೆಹುಳುಗಳು ಸಿಗುತ್ತದೆಯೆಂದಾದರೆ ಅಲ್ಲಿನ ಮಣ್ಣು ತೀರಾ ಆಮ್ಲೀಯವಾಗಿರುವುದಿಲ್ಲ ಎಂದು ಹೇಳಿದೆ.
  • ಸುಣ್ಣದ ಅಗತ್ಯ ಕಂಡಲ್ಲಿ ಡೋಲೋಮೈಟ್ ಸುಣ್ಣ ಹಾಕಿ. ಅದು ಮೈಗೆ ತಾಗಿದರೆ ಸುಡುವುದಿಲ್ಲ.
  • ಅದರಲ್ಲಿ ಮೆಗ್ನೀಶಿಯಂ ಪ್ರಮಾಣವೂ ಇದೆ. ಇದು ಖನಿಜದಿಂದ ತೆಗೆಯುವ ನೈಸರ್ಗಿಕ ವಸ್ತು ಎಂದೆ.
  • ಅವರ ಉತ್ತರ ಬೇರೆಯೇ ಇತ್ತು. ನಾನು ಈ ವರ್ಷ ಹರಳು ರೂಪದ ಯಾವುದೋ “—-ಶಕ್ತಿ” ಸುಣ್ಣವನ್ನು ಬಳಸುತ್ತೇನೆ ಅದು ಒಳ್ಳೆಯದಂತೆ.
  • ತಮ್ಮ ತೀರ್ಮಾನವನ್ನು ಆಗಲೇ ಮಾಡಿದ್ದರು. ಸರಿ ಅದನ್ನೇ ಹಾಕಿ ಎಂದೆ.
  • ಇದರಲ್ಲೇ ನಮ್ಮ ಕೃಷಿಕರ ಮನೋಸ್ಥಿತಿ ಅಡಗಿದೆ.
  • ಹೆಚ್ಚು ಬೆಲೆಯದ್ದು ಒಳ್ಳೆಯದು ಎಂಬುದು ಜನರ ತಲೆಯಲ್ಲಿ ಚೆನ್ನಾಗಿ ಮುದ್ರಿತವಾಗಿದೆ.
  • ತೀರ್ಮಾನ ಮಾಡಿ ನಂತರ ಬೇರೆಯವರಲ್ಲಿ ತನ್ನ ಬುದ್ಧಿವಂತಿಕೆಯನ್ನು ಹೇಳಿ ಅವರೊಡನೆ ವ್ಯಾಪಾರ ಮಾಡುವುದು ಬಹಳ ಕಡೆ ಕಂಡು ಬರುತ್ತದೆ.

ಹೆಚ್ಚಿನ ಬೆಳೆ ಪಡೆಯಲು – ಖರ್ಚು ಕಡಿಮೆ ಮಾಡಬೇಕು:

  • ರೈತರಿಗೆ ಏನಾದರೂ ಮಾಡಿ ಬೆಳೆ ಹೆಚ್ಚು ಪಡೆಯುವ ಹಂಬಲ.
  • ಅದು ತಪ್ಪಲ್ಲ. ಆದರೆ ಈ ಹಂಬಲವನ್ನು ಬೇರೆ ವಿಧಾನದಲ್ಲಿ ಮಾಡಬೇಕು.
  • ರೈತರು ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು.
  • ಸಮತೋಲನ ಪ್ರಮಾಣವನ್ನು ಅನುಸರಿಸಬೇಕು. ಮಣ್ಣಿಗೆ ಶಕ್ತಿ ದುಡ್ಡು ಕೊಟ್ಟು ತರವುದಲ್ಲ.
  • ಅದನ್ನು ಲಭ್ಯ ಕಡಿಮೆ ವೆಚ್ಚದ ಸಂಪನ್ಮೂಲಗಳಿಂದ ಹೊಂದಿಸಿಕೊಳ್ಳಬೇಕು.
  • ಆಗ ತಮ್ಮ ಮಣ್ಣು ಒಳ್ಳೆಯದಾಗುತ್ತದೆ. ಫಸಲು ಚೆನ್ನಾಗಿ ಬರುತ್ತದೆ.
  • ರಾಸಾಯನಿಕ ಗೊಬ್ಬರ ಒಂದೇ ಕೃಷಿಯನ್ನು ಯಾವ ಕಾಲಕ್ಕೂ ಲಾಭದಾಯಕವನ್ನಾಗಿಸುವುದಿಲ್ಲ ರಾಸಾಯನಿಕ ಇಲ್ಲದೆಯೂ ಕೃಷಿ ಸಾಧ್ಯ.
  • ಆದರೆ ಸಾವಯವ ವಸ್ತು ಬಳಸದಿದ್ದರೆ ಶ್ರಮಕ್ಕೆ ತಕ್ಕ ಫಲ ಕೊಡಲಾರದು.

ರೈತರಾದ ನಾವೆಲ್ಲಾ   ಮೊದಲು ಬುದ್ಧಿವಂತರಾಗಬೇಕು.. ಈಗ ನಮಗೆ ತಿಳಿದುಕೊಳ್ಳಲು ಬೇಕಾದ ಎಲ್ಲಾ  ವ್ಯವಸ್ಥೆಗಳಿವೆ. ಜೊತೆಗೆ ನಾವು ಮಾಡುವ ವೃತ್ತಿಯಲ್ಲಿ ನಮಗೆ ತಲ್ಲೀನತೆ ಇದ್ದರೆ ನಮ್ಮ ಬೆಳೆಗೆ  ಏನು ಬೇಕು ಎಂಬುದನ್ನು ಯಾರ ಸಲಹೆಯೂ ಇಲ್ಲದೆ ನಾವೇ  ಅರಿಯಲು ಸಾಧ್ಯ. ಆ ಮಟ್ಟಿಗೆ ನಾವು ನಮ್ಮ ಕ್ಷೇತ್ರದಲ್ಲಿ ಬುದ್ದಿವಂತರಾಗದಿದ್ದರೆ ಇನ್ನೂ ಇನ್ನೂ ನಾವು ದೊಡ್ದ ದೊಡ್ಡ ಟೋಫಿ ಹಾಕುವವನ ಬಲೆಗೇ ಬೀಳಬೇಕಾಗುತ್ತದೆ. ದಯವಿಟ್ಟು ರೈತರು ರೈತರ ಜೊತೆ ವ್ಯಾಪಾರಕ್ಕೆ ಇಳಿಯಬೇಡಿ. ಅವರನ್ನು ಸಹ ವೃತ್ತಿಯವರೆಂದು ಕಾಣಿ. ಪರಸ್ಪರ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಿ, ನೆರೆ ಹೊರೆಯವರ ಜೊತೆಗೆ ವೈಷಮ್ಯ ಬೇಡ. ಒಗ್ಗಟ್ಟು ಇರಲಿ.
end of the article:
search words: Indian farmer# farmers knowledge# farmer and others# farmer and farm implements#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!