ಸಾವಯವ ಗೊಬ್ಬರ ತಯಾರಿಸುವುದು ನಮಗೇನೂ ಹೊಸತಲ್ಲ. ಹತ್ತಿಪ್ಪತ್ತು ವರ್ಷದ ಹಿಂದೆ ಇದನ್ನು ನಾವು ಕೊಂಡು ತರುತ್ತಿರಲಿಲ್ಲ. ನಮ್ಮಲ್ಲೇ ತಯಾರಿಸುತ್ತಿದ್ದೆವು. ಈಗ ನಮಗೆ ಹೊರಗಿನ ವಸ್ತು ಸುಂದರವಾಗಿ ಕಾಣುವ ಕಾರಣ ಅದಕ್ಕೆ ಮಾರು ಹೋಗುತ್ತಿದ್ದೇವೆ.
- ನಮ್ಮಲೇ ಎಲ್ಲಾ ಪರಿಕರಗಳು ಇರುವಾಗ ಯಾಕೆ ಬೇರೆ ಕಡೆಯಿಂದ ಗೊಬ್ಬರಗಳನ್ನು ತರಬೇಕು.
- ಯಾವ ತಯಾರಕರಲ್ಲೂ ಮೂಲವಸ್ತುಗಳು ಅವರ ಬಳಿ ಇಲ್ಲ.
- ಅವರೂ ಬೇರೆ ಕಡೆಯಿಂದ ತಂದು ಹೊಸ ಚೀಲದಲ್ಲಿ ತುಂಬಿ ನಮಗೆ ಮಾರಾಟ ಮಾಡುವುದು.
- ಸಾವಯವ ಗೊಬ್ಬರ ನಾವು ಮಾಡಿದರೆ ಚಿನ್ನ. ಕೊಂಡು ತಂದರೆ ಅದು 1 ಗ್ರಾಂ ಗೋಲ್ಡ್.
ಸಾವಯವ ಗೊಬ್ಬರದಲ್ಲಿ ಏನಿದೆ?
- ಸಾವಯಕ ಗೊಬ್ಬರ ಮಾರಾಟ ಮಾಡುವುದು ಎಂದರೆ ನಮಗೆ ಉಚಿತವಾಗಿ ದೊರೆಯುವ ವಸ್ತುಗಳನ್ನೂ ಹಣಕ್ಕೆ ಮಾರಾಟ ಮಾಡುವುದು.
- ಒಂದು ಚೀಲ ಸಾವಯವ ಗೊಬ್ಬರದಲ್ಲಿ ನೀರಿನ ಅಂಶ ಸುಮಾರು 20- 50 % ದಷ್ಟು ಇರುತ್ತದೆ.(Moisture %)
- ನಾವು ಈ ನೀರಿಗೆ ಹಣ ಕೊಟ್ಟು ಖರೀದಿ ಮಾಡಿದಂತೆ ಆಗುತ್ತದೆ.
ಸಾಮಾನ್ಯವಾಗಿ ಸಾವಯವ ಗೊಬ್ಬರ ತಯಾರಕರು ಬಳಸುವ ಮೂಲ ವಸ್ತುಗಳು ತೆಂಗಿನ ನಾರಿನ ಹುಡಿ, ಪ್ರೆಸ್ ಮಡ್ ಮತ್ತು ಅತೀ ಕನಿಶ್ಟ ಮಟ್ಟದಲ್ಲಿ ಬೇವು, ಹರಳು ಹಿಂಡಿಗಳು. ಉಳಿದಂತೆ ಬಹಳಷ್ಟು ಜನ ತಯಾರಕರು ಭತ್ತದ ಹೊಟ್ಟು ಸುಟ್ಟ ಕರಿಯನ್ನು ಬಳಕೆ ಮಾಡುವುದು ಉಂಟು.
- ಕೆಲವು ಕಂಪೆನಿಗಳು ತಮಗಿರುವ ಮಾರುಕಟ್ಟೆ ರೆಪ್ಯೂಟೇಷನ್ ನಲ್ಲಿ ಆಕರ್ಷಕ ಪ್ಯಾಕೇಟ್ ಮೂಲಕ ನಗರಪಾಲಿಕೆ ತ್ಯಾಜ್ಯಗಳನ್ನು ತುಂಬಿ ಜೈವಿಕ ಗೊಬ್ಬರವಾಗಿ ಮಾರಾಟ ಮಾಡುವುದು ಕಂಡು ಬರುತ್ತದೆ.
- ಸಾವಯವ ಗೊಬ್ಬರ ಮಾರಾಟ ವ್ಯವಹಾರದಲ್ಲಿ ಉತ್ಪಾದಕರು, ಸ್ಟಾಕಿ ಸ್ಟ್ ಮತ್ತು ಮಾರಾಟಗಾರರು ಎಂಬ ಚೈನ್ ನಲ್ಲಿ 50% ದಷ್ಟು ಮಾರ್ಜಿನ್ ಇರುತ್ತದೆ.
- ಇಷ್ಟೆಲ್ಲಾ ಮಧ್ಯವರ್ತಿಗಳನ್ನು ನಮ್ಮ ಕಷ್ಟದ ಸಂಪಾದನೆಯಲ್ಲಿ ಸಾಕಬೇಕಾ ಅಥವಾ ಅದರ ಅರ್ಧ ಬೆಲೆಗೆ ನಾವೇ ತಯಾರಿಸುವುದು ಸೂಕ್ತವೋ ನೀವೇ ಯೋಚಿಸಿ.
ಯಾವ ಸಾಮಾಗ್ರಿಗಳು ಬೇಕು:
- ನಿಮ್ಮಲ್ಲಿ ಯಾವ ಮೂಲವಸ್ತುಗಳು ಲಭ್ಯವಿದೆ, ನಿಮ್ಮ ಸಮೀಪದಲ್ಲಿ ಯಾವುದು ಮಿತವ್ಯಯದಲ್ಲಿ ಲಭ್ಯವಿದೆ ಎಂಬುದನ್ನು ಮೊದಲಾಗಿ ಲೆಕ್ಕಾಚಾರ ಹಾಕಿಕೊಳ್ಳಿ.
- ಅದು ತರಗೆಲೆ ಆಗಿರಲಿ, ಬೆಳೆ ತ್ಯಾಜ್ಯಗಳಾಗಿರಲಿ, ತೆಂಗಿನ ನಾರಿನ ಹುಡಿ ಆಗಿರಲಿ , ಕಾರ್ಖಾನೆಯ ಹಾನಿ ರಹಿತ ತ್ಯಾಜ್ಯಗಳೇ ಆಗಿರಲಿ( ಬೂದಿ ಇತ್ಯಾದಿ) ಆಗಿರಲಿ ಅದನ್ನೆಲ್ಲಾ ಒಟ್ಟು ಸೇರಿಸಿರಿ.
- ಕೊಳಿ ಗೊಬ್ಬರ ಅಥವಾ ಕುರಿ ಗೊಬ್ಬರ ಅಥವಾ ಸಮೀಪದಲ್ಲಿ ಸಕ್ಕರೆ ಕಾರ್ಖಾನೆ ಇದ್ದರೆ ಪ್ರೆಸ್ ಮಡ್ ತರಿಸಿಕೊಳ್ಳಿ.
- I ಟನ್ ಗೆ ಸುಮಾರು 1 ಕ್ವಿಂಟಾಲು ಲೆಕ್ಕದಲ್ಲಿ ಹರಳಿನ ಹಿಂಡಿ, ಅಥವಾ ಬೇವಿನಹಿಂಡಿಯನ್ನು ಖರೀದಿ ಮಾಡಿಕೊಳ್ಳಿ.(ಸಸ್ಯ ಜನ್ಯ ಹಿಂಡಿಯಲ್ಲಿ ಸಾರಜನಕ ಅಲ್ಪ ಸ್ವಲ್ಪ ರಂಜಕ ಪೊಟ್ಯಾಶಿಯಂ ಮತ್ತು ಕೆಲವು ಲಘು ಪೋಷಕಾಂಶಗಳು ಮತ್ತು ಕೀಟ ನಿಯಂತ್ರಕ ಗುಣ ಇರುತ್ತದೆ).
- ತಾಜಾ ಕೋಳಿ ಗೊಬ್ಬರ ಆದರೆ ಅದನ್ನು ಸುಮಾರು 3-4 ತಿಂಗಳ ತನಕ ತಣ್ಣಗಾಗಲು ಬಿಡಿ.
- ಇದಕ್ಕೆ ಕಂಪೋಸ್ಟರ್ ಹಾಕಿ ಮುಚ್ಚಿ ಇಡಿ. (ಕಂಪೋಸ್ಟರ್ ಗಳು ಕೃಷಿ ವಿಶ್ವ ವಿಧ್ಯಾನಿಲಯ ಬೆಂಗಳೂರು ಇಲ್ಲಿನ ಸೂಕ್ಷ್ಮಾಣಿ ಜೀವಿ ಶಾಸ್ತ್ರ ವಿಭಾಗದಲ್ಲಿ ಲಭ್ಯ)
- ಕುರಿ ಗೊಬ್ಬರ ಆದರೆ ಅದಕ್ಕೆ ಸುಮಾರು 30-40 % ತೇವಾಂಶ ಕೊಟ್ಟು ಒಂದು ವಾರ ಕಾಲ ಇಡಿ.
- ಆಗ ಅದು ಹುಡಿಯಾಗುತ್ತದೆ. ಮುಚ್ಚಿ ಇಡಿ. ಅದಕ್ಕೂ ಕಂಪೋಸ್ಟರ್ ಹಾಕಿ.
- ಪ್ರೆಸ್ ಮಡ್ ತಾಜಾ ಆಗಿದ್ದರೆ ಅದನ್ನೂ 6 ತಿಂಗಳ ಕಾಲ ಬಿಸಿ ಆರಲು ಬಿಡಿ.
- ಅದಕ್ಕೆ ಗೋಬರ ಗ್ಯಾಸ್ ಬಗ್ಗಡ ವನ್ನು ಹಾಕಿ ಮಿಶ್ರ ಮಾಡಿ ಮುಚ್ಚಿ ಇಡಿ.
- ಶಿಲಾ ರಂಜಕ ಇದ್ದರೆ ಅದನ್ನು ಇದರ ಜೊತೆಗೆ ಸೇರಿಸಿದರೆ ಇನ್ನೂ ಒಳ್ಳೆಯದು.
- ಕೃಷಿ ವಿಶ್ವ ವಿಧ್ಯಾನಿಲಯ ಬೆಂಗಳೂರು ಇಲ್ಲಿಂದ ಅಥವಾ ಇನ್ಯಾವುದೇ ಮೂಲಗಳಿಂದ ಕಾಂಪೋಸ್ಟು ಮಾಡಲು ಬೇಕಾಗುವ ಜೀವಾಣು ಮಿಶ್ರಣವನ್ನು ತಂದಿಟ್ಟುಕೊಳ್ಳಿ. ಇಲ್ಲಿ ಸಿಗುವಷ್ಟು ಮಿತವ್ಯಯದಲ್ಲಿ ಎಲ್ಲೂ ಸಿಗಲಾರದು.
ತಯಾರಿಕಾ
ವಿಧಾನ:
- ತರಗೆಲೆ, ಅಥವಾ ಕೃಷಿ ತ್ಯಾಜ್ಯ ಅಥವಾ ತೆಂಗಿನ ನಾರಿನ ಹುಡಿ ಗಳನ್ನು ( ಯಾವುದಾದರೂ ಒಂದು)ಸುಮಾರು ಒಂದು ಅಡಿ ದಪ್ಪಕ್ಕೆ ನೆಲಕ್ಕೆ ಹಾಸಿ ಅದರ ಮೇಲೆ ಕುರಿ ಗೊಬ್ಬರ ಅಥವಾ ಕೋಳಿ ಗೊಬ್ಬರ ಅಥವಾ ಪ್ರೆಸ್ ಮಡ್ 2 ಅಡಿ ದಪ್ಪಕ್ಕೆ ಹಾಕಿ.
- ತೆಳುವಾಗಿ ಹರಳು ಹಿಂಡಿಯನ್ನು ಚೆಲ್ಲಿ. ಬೂದಿ ಇದ್ದರೆ ಅದನ್ನೂ ತೆಳುವಾಗಿ ಚೆಲ್ಲಿ.
- ಶಿಲಾ ರಂಜಕವನ್ನೂ ಚೆಲ್ಲಿ. ಅದರ ಮೇಲೆ ಹದವಾಗಿ ನೀರು ಚಿಮುಕಿಸಿ.
- ನೀರು ಕೆಳಗೆ ಇಳಿಯುವಷ್ಟು ಹಾಕಬಾರದು.
- ನೀರು 30-40 % ಮೀರಬಾರದು. ತ್ಯಾಜ್ಯಗಳನ್ನು ಮುಷ್ಟಿಯಲ್ಲಿ ಅದುಮಿದಾಗ ನೀರು ತೊಟ್ಟಿಕ್ಕಬಾರದು.
ಅದರ ಮೇಲೆ ಸುಮಾರು 1 ಅಡಿ ದಪ್ಪಕ್ಕೆ ಕೃಷಿ ತ್ಯಾಜ್ಯಗಳನ್ನು ಹಾಕಿ. ಮತ್ತೆ ಹಿಂದಿನಂತೆ ಕೋಳಿ/ ಕುರು/ ಪ್ರೆಸ್ ಮಡ್ 2 ಅಡಿ ತನಕ ಹಾಕಿ. ಅದರ ಮೇಲೆ ಮತ್ತೆ ಸಾವಯವ ತ್ಯಾಜ್ಯಗಳನ್ನು 1 ಅಡಿ ದಪ್ಪೆಕ್ಕೆ ಹಾಕಿ. ಹರಳು/ ಬೇವಿನ ಹಿಂಡಿ ಚೆಲ್ಲಿ. ಬೂದಿ, ಶಿಲಾರಂಜಕ ಇದ್ದರೆ ಹಾಕಿ. ಕಾಂಪೋಸ್ಟಿಂಗ್ ಜೀವಾಣು ಮಿಶ್ರಣವನ್ನು ಚಿಮುಕಿಸಿ. ಮತ್ತೆ ಸ್ವಲ್ಪ ನೀರನ್ನು ಚಿಮುಕಿಸಿರಿ.
- 2 ಅಂತಸ್ತುಗಳಲ್ಲಿ ತುಂಬಿದ ತರುವಾಯ ಅದರ ಮೇಲು ಭಾಗಕ್ಕೆ ತೆಂಗಿನ ಗರಿ ಮುಚ್ಚಿ, ಅದರ ಮೇಲೆ ಕಪ್ಪು ಪಾಲಿಥೀನ್ ಶೀಟನ್ನು ಮುಚ್ಚಿ.
- ಸುಮಾರು ಒಂದು ತಿಂಗಳ ತರುವಾಯ ಯಂತ್ರದ ಮೂಲಕ ಒಮ್ಮೆ ತಿರುವಿ ಹಾಕಿ.
- ಆ ಸಮಯದಲ್ಲಿ ಬಯೋ NPK ಮತ್ತು ಇನ್ನಿತರ ಜೀವಾಣುಗಳನ್ನು ಕಡಿಮೆ ಬೆಲೆಗೆ ದೊರೆಯುವ ಮೂಲವಾದ ಕೃಷಿ ವಿಶ್ವ ವಿಧ್ಯಾನಿಲಯ ಅಥವಾ ಕೃಷಿ ಸಂಶೋಧಾನ ಕೇಂದ್ರಗಳಿಂದ ತರಿಸಿ ಹಾಕಿ.
- 2 ನೇ ತಿಂಗಳಿಗೆ ಸಂಪಧ್ಭರಿತ ಸಾವಯವ ಗೊಬ್ಬರ ಸಿದ್ದವಾಗುತ್ತದೆ.
- ಈ ಗೊಬ್ಬರಕ್ಕೆ ಮಣ್ಣು ಜನ್ಯ ಎರೆಹುಳುಗಳನ್ನು ಬಿಡಬಹುದು. ಸಾಮಾನ್ಯವಾಗಿ ಅವು ಹುಡುಕಿಕೊಂಡು ಬರುತ್ತವೆ.
ಬೆಳೆತ್ಯಾಜ್ಯಗಳಾದ ಅಡಿಕೆ ಸಿಪ್ಪೆ, ತೆಂಗಿನ ಗರಿ, ಅಡಿಕೆ ಗರಿ, ಹಾಳೆ, ಬಾಳೆ ತ್ಯಾಜ್ಯ, ಎಳ್ಳು, ತೊಗರಿ, ಹುರುಳಿ ಸಸ್ಯ, ಕಾಫೀ ಸಿಪ್ಪೆ ಮುಂತಾದವುಗಳಲ್ಲಿ ಬೆಳೆಗೆ ಬಳಕೆ ಆಗಿ ಉಳಿದ ಪೋಷಕಗಳು ಇರುತ್ತವೆ.
- ಈ ರೀತಿ ತಯಾರಿಸಿದ ಗ್ಪೊಬ್ಬರ ಕಿಲೋ ಗೆ ಗರಿಷ್ಟ 4 ರೂ. ಬೆಲೆಯಲ್ಲಿ ಸಿದ್ಧವಾಗುತ್ತದೆ. ಇದರಲ್ಲಿ ಇರುವ ಪೋಷಕಗಳಲ್ಲಿ ನಾವು ಕೊಂಡು ತರುವ ಗೊಬ್ಬರದಿಂದ ಹೆಚ್ಚು ಇರುತ್ತದೆ.
ಸಾವಯವ ಗೊಬ್ಬರ ಎಂಬ ತಯಾರಿಕೆಯಲ್ಲಿ ಅಂತಹ ತಂತ್ರಜ್ಞಾನ ಎಂಬುದು ಇಲ್ಲ. ಆ ಸರಳ ತಂತ್ರಜ್ಞಾನವನ್ನು ನೀವೇ ಅಳವಡಿಸು ಅದಕ್ಕಿಂತ ಉತ್ತಮ ಗೊಬ್ಬರ ತಯಾರಿಸಬಹುದು. ಕಾಂಪೋಸ್ಟು ಮತ್ತು ಪ್ಯಾಕೆಟ್ ರೂಪದ ಸಾವಯವ ಗೊಬ್ಬರ ಬೇರೆ ಬೇರೆ ಅಲ್ಲ.