ಹಾಸನ ಜಿಲ್ಲೆ, ಚನ್ನರಾಯಪಟ್ಟಣ ಸುತ್ತಮುತ್ತ ನೂರಾರು ರೈತರು ಹಲವಾರು ವರ್ಷಗಳಿಂದ ಬಿಳೀ ಬಣ್ಣದ ಸೌತೇ ಕಾಯಿ ಬೆಳೆಯುತ್ತಾರೆ. ಬಸ್ ಗಳಲ್ಲಿ ಪ್ರಯಾಣಿಸುವವರೆಲ್ಲಾ ಇದರ ಸವಿ ಕಂಡವರು. ರುಚಿಯಾದ ಈ ಸೌತೇ ಕಾಯಿ ಹೇಗೆ ಎಲ್ಲಿ ಬೆಳೆಯಲ್ಪಡುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.!
- ಈ ಸೌತೇಕಾಯಿ ಬೆಳೆಯುವವರು ಹಳ್ಳಿಯ ರೈತರು.
- ರೈತರ ಶ್ರಮಕ್ಕೆ ಬೆಲೆ ತಂದು ಕೊಡುವವರು ರಸ್ತೆ ಬದಿಯ ವ್ಯಾಪಾರಿಗಳು.
- ಈ ವ್ಯಾಪಾರಿಗಳಿಲ್ಲದಿದ್ದರೆ ರೈತರು ಶ್ರಮಕ್ಕೆ ಬೆಲೆ ಇಲ್ಲ.
- ನಾವೆಲ್ಲಾ ವ್ಯಾಪಾರಿಗಳನ್ನು ದೂರುತ್ತೇವೆ.
- ಅವರಿಲ್ಲದಿದ್ದರೆ ನಾವು ಬೆಳೆದ ಬೆಳೆ ಕಟ್ಟಿದ ಹೂಮಾಲೆಯನ್ನು ಮುಡಿಯುವವರಿಲ್ಲದ ತರಹ.
ಯಾಕೆ ವಿಶಿಷ್ಟ:
- ಈ ಸೌತೇ ಕಾಯಿಯ ಸಿಪ್ಪೆ ಉಳಿದ ಸೌತೇ ಕಾಯಿಯಂತೆ ಹಸುರು ಬಣ್ಣವಲ್ಲ.ಬಿಳಿ ಬಣ್ಣ.
- ಇದನ್ನು ಸಿಪ್ಪೆ ತೆಗೆದು ಎರಡು ಸೀಳು ಹಾಕಿ ಅದರ ಮಧ್ಯೆ ಭಾಗಕ್ಕೆ ಉಪ್ಪು ಖಾರ ಹಾಕಿ ಸೌತೇ ಕಾಯೀ… ಸೌತೇ ಕಾಯೀ… ಎಂದು ಮಾರಾಟ ಮಾಡುತ್ತಾರೆ.
- ಬಾಯಾರಿದ ನಮಗೆಲ್ಲಾ ಇದು ಒಮ್ಮೆ ಬಾಯಾರಿಕೆ ತಣಿಸುವಷ್ಟು ರಸವತ್ತಾಗಿರುತ್ತದೆ.
- ಒಂದು ಸೌತೇ ಕಾಯಿ ತಿಂದರೆ ಒಂದು ಲೋಟ ನೀರು ಕುಡಿದಷ್ಟು ರಸವತ್ತಾಗಿರುತ್ತದೆ.
- ಸೌತೇ ಕಾಯಿ ತಿಂದರೆ ಬಸ್ಸಿನವರು ನಿಲ್ಲಿಸುವ ಕಚಡಾ ಹೋಟೇಲೀನಲ್ಲಿ ಏನೂ ತಿನ್ನದಿದ್ದರೂ ಹಸಿವು ತಣಿಸಬಹುದು.
- ತುಂಬಾ ರಸ ಇರುತ್ತದೆ. ಹೊಟ್ಟೆ ತುಂಬುತ್ತದೆ.
- ಮತ್ತೆ ಇನ್ನೊಂದು ತಿನ್ನಬೇಕು ಎನ್ನಿಸುತ್ತದೆ.
- ಚನ್ನರಾಯಪಟ್ಟಣದಿಂದ ಪ್ರಾರಂಭಿಸಿ ಕುಣಿಗಲ್ ತನಕವೂ ಮಾರಾಟ ಮಾಡುತ್ತಾರೆ.
- ಬರೇ ಬಸ್ಸಿನಲ್ಲಿ ಮಾರಾಟ ಮಾತ್ರವಲ್ಲ.
- ರಸ್ತೆ ಬದಿಯ ಎಲ್ಲಾ ಅಂಗಡಿಗಳಲ್ಲೂ ಇದು ಮಾರಲ್ಪಡುತ್ತದೆ.
- ಈ ದಾರಿಯಾಗಿ ಪ್ರಯಾಣಿಸುವ ಎಲ್ಲಾ ವಾಹನದವರೂ ಇದನ್ನು ತಿನ್ನುತ್ತಾರೆ.
- ಮನೆಗೂ ಒಂದಷ್ಟು ಒಯ್ಯುತ್ತಾರೆ.
ಚನ್ನಪಟ್ಟಣದ ಬಣ್ಣದ ಗೊಂಬೆಯಂತೆ ಚನ್ನರಾಯ ಪಟ್ನದ ಸೌತೇ ಕಾಯಿಯೂ.
ಮಾರುಕಟ್ಟೆ ವ್ಯವಸ್ಥೆ:
ಈ ಸೌತೇ ಕಾಯಿಯ ಮಾರುಕಟ್ಟೆ ವ್ಯವಸ್ಥೆ ಬಹಳ ಚೆನ್ನಾಗಿದೆ.ಎಲ್ಲವೂ ಸ್ಥಳೀಯವಾಗಿಯೇ ಮಾರಲ್ಪಡುತ್ತದೆ. ರೈತರು ಚಳಿಗಾಲದ ಬೆಳೆಯಾಗಿ ಬೆಳೆಯುತ್ತಾರೆ. ಹೆಚ್ಚು ರಸವತ್ತಾದ ಈ ಸೌತೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ. ಒಂದು ಸೌತೇ ಕಾಯಿ ತಿಂದರೆ ಬಾಯಾರಿಕೆ ಹಸಿವು ಎರಡೂ ನಿಲ್ಲುತ್ತದೆ. ಚಳಿಗಾಲದಲ್ಲಿ ಈ ಊರಿನಲ್ಲಿ ಅಲ್ಲಲ್ಲಿ ಸೌತೇ ಕಾಯಿ ಮಾರುವ ಗೂಡಂಗಡಿಗಳ ವ್ಯಾಪಾರಿಗಳೇ ಇದನ್ನು ಮಾರಾಟ ಮಾಡಿ ಕೊಡುತ್ತಾರೆ. ಒಂದಷ್ಟು ಬಸ್ ನಲ್ಲಿ ಪ್ರಯಾಣಿಸುವವರಿಗೆ ಸಿಪ್ಪೆ ತೆಗೆದು ಉಪ್ಪು ಖಾರ ಹಾಕಿ ಮಾರಾಟ ಮಾಡಲಾಗುತ್ತದೆ. ಬೇಡಿಕೆ ಚೆನ್ನಾಗಿದೆ.ಆದರೆ ಇತ್ತೀಚೆಗೆ ಇದಕ್ಕೆ ಭಾರೀ ಕೀಟ ರೋಗಗಳು ಕಾಣಿಸುತ್ತಿದ್ದು, ಬೆಳೆಗಾರರ ಲಾಭವನ್ನು ಇದೇ ಕಬಳಿಸುತ್ತಿದೆ.
ಎಲ್ಲೆಲ್ಲಾ ಬೆಳೆಯುತ್ತದೆ:
- ಸುಮಾರು ನೂರಾರು ವರ್ಷಗಳಿಂದಲೂ ಇಲ್ಲಿ ಇದೇ ಪ್ರಕಾರದ ಸೌತೇ ಕಾಯಿ ಬೆಳೆಸಲ್ಪಡುತ್ತಿತ್ತು.
- ಹಿಂದೆ ನಾಟೀ ತಳಿಯನ್ನು ಬೆಳೆಸುತ್ತಿದ್ದರು.
- ಈಗ ಅಧಿಕ ಇಳುವರಿಯ ಹೈಬ್ರೀಡ್ ತಳಿ ಬಂದು ಇದನ್ನೇ ಎಲ್ಲರೂ ಬೆಳೆಸುತ್ತಾರೆ.
- ಸ್ಥಳೀಯ ತಳಿ ತೀರಾ ಕಡಿಮೆ.
- ಸುತ್ತಮುತ್ತಲಿನ 10 ಕ್ಕೂ ಹೆಚ್ಚು ಹಳ್ಳಿಗಳ ರೈತರು ಇದನ್ನು ಬೆಳೆಯುತ್ತಾರೆ.
- ಚಳಿಗಾಲ ಪ್ರಾರಂಭವಾಗುವಾಗ ಬೆಳೆಯಲು ಪ್ರಾರಂಭಿಸುತ್ತಾರೆ.
- ಮಳೆಗಾಲದಲ್ಲಿಯೂ ಅಲ್ಪಸ್ವಲ್ಪ ಬೆಳೆಸುತ್ತಾರೆ.
- ಚಳಿಗಾಲ ಪ್ರಾರಂಭವಾಗಿ ಜೂನ್ ತನಕವೂ ಇದಕ್ಕೆ ಭಾರೀ ಬೇಡಿಕೆ.
- ಕಾರಣ ಸೆಖೆಯ ಧಗೆಯನ್ನು ಇದು ತಣಿಸುತ್ತದೆ.
- ಈ ಸೌತೇಕಾಯಿಗೆ ದಾರಿಯಲ್ಲಿ ಹೋಗುವ ಪ್ರಯಾಣಿಕರೇ ಗಿರಾಕಿಗಳು.
ಬೇಡಿಕೆ ಹೆಚ್ಚು ಇರುವಾಗ ಹೆಚ್ಚಿನ ರೈತರು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಒಬ್ಬ ರೈತ ಬೋಜ ಎಂಬವರನ್ನು ಈ ಬಗ್ಗೆ ಮಾತಾಡಿಸಿದಾಗ ಈ ಬೆಳೆಯ ಕಷ್ಟ ಸುಖಗಳ ಚಿತ್ರಣ ಸಿಕ್ಕಿತು.
ಹೇಗೆ ಬೆಳೆಸುತ್ತಾರೆ:
- ಹಿಂದೆ ಅವರವರೇ ಬೀಜವನ್ನು ಉಳಿಸಿಕೊಂಡು ಬೆಳೆ ಬೆಳೆಯುತ್ತಿದ್ದರಂತೆ.
- ಈಗ ಸ್ಥಳೀಯ ಬೀಜ ಮಾರಾಟದ ಅಂಗಡಿಯಲ್ಲಿ ಇದರ ಬೀಜ ಸಿಗುತ್ತದೆ.
- ಆದ ಕಾರಣ ರೈತರು ಬೀಜಕ್ಕಾಗಿ ಕಾಯಿ ಉಳಿಸುವುದಿಲ್ಲ.
- ಒಂದು ಪ್ಯಾಕೆಟ್ ಬೀಜಕ್ಕೆ ಸುಮಾರು 400 ರೂ. ಇರುತ್ತದೆ.
- ಉಳುಮೆ ಮಾಡಿ ಸಾಲುಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಅದರಲ್ಲಿ ಬಿತ್ತನೆ ಮಾಡುತ್ತಿದ್ದರು.
- ಸಾಲುಗಳ ಮಾಧ್ಯಂತರದಲ್ಲಿ ಹರಿ ನೀರಾವರಿ ಮಾಡುತ್ತಿದ್ದರು.
- ಈಗ ಸಸ್ಯೋತ್ಪಾದನಾ ನರ್ಸರಿಗಳಲ್ಲಿ ಗಿಡ ಸಿಗುತ್ತದೆ.
- ಅದನ್ನೇ ತಂದು ಬೆಳೆಸುತ್ತಾರೆ. ಇನ್ ಲೈನ್ ಡ್ರಿಪ್ಪರನ್ನು ಹಾಕಿ ನೀರಾವರಿ ಮಾಡುತ್ತಾರೆ.
ಹಿಂದೆ ನೆಲದಲ್ಲೇ ತೆಂಗಿನ ಗರಿ ಹಾಕಿ ಬಳ್ಳಿ ಹಬ್ಬಿಸಿ ಬೆಳೆಸುತ್ತಿದ್ದರು. ಈಗ ಹೆಚ್ಚಿನವರು ಹಗ್ಗ ಕಟ್ಟಿ ಅದಕ್ಕೆ ಬಳ್ಳಿ ಹಬ್ಬಿಸುತ್ತಾರೆ. ನೆಲದಲ್ಲಿ ಬಳ್ಳಿ ಹಬ್ಬಿಸಿದರೆ ಕಾಯಿ ಮುರುಟಾಗುತ್ತದೆ. ಇದಕ್ಕೆ ಅರ್ಧ ಬೆಲೆ. ಚಪ್ಪರ ಅಥವಾ ಹಗ್ಗ ಕಟ್ಟಿ ಬಳ್ಳಿ ಹಬ್ಬಿಸಿದರೆ ಕಾಯಿಗಳು ನೇರವಾಗಿ ಬೆಳೆಯುತ್ತವೆ. ಇದಕ್ಕೆ ಉತ್ತಮ ಬೆಲೆ ಸಿಗುತ್ತದೆಯಂತೆ.
- ನಾಟಿ ಮಾಡಿ ಸುಮಾರು 30 ದಿನಕ್ಕೆ ಇಳುವರಿ ಪ್ರಾರಂಭವಾಗುತ್ತದೆ.
- ನಂತರ 2 ತಿಂಗಳ ತನಕ ಇಳುವರಿ ಇರುತ್ತದೆ.
- ಆ ನಂತರ ಇಲ್ಲ. ರೈತರು ಎಲ್ಲರೂ ಒಟ್ಟಿಗೆ ಬೆಳೆಸುವುದಿಲ್ಲ.
- ಆದ ಕಾರಣ ಬೇಸಿಗೆ ಸೀಸನ್ ಪೂರ್ತಿ ಕಾಯಿ ಇರುತ್ತದೆ.
ಬೆಳೆಗಾರ ಕಷ್ಟಗಳು:
- ರೈತರಿಗೆ ಬೆಳೆ ಬಗ್ಗೆ ಮಾಹಿತಿ ಕೊಡುವವರು ಬೀಜ- ಕೀಟನಾಶಕ – ರಸಗೊಬ್ಬರ ಮಾರಾಟ ಮಾಡುವವರು ಮಾತ್ರ.
- ಯಾವುದೇ ಸಮಸ್ಯೆಗಳು ಬಂದರೂ ಎಲೆ- ಸಸಿಯನ್ನು ಒಯ್ದು ಅಂಗಡಿಯವರಿಗೆ ತೋರಿಸಿ ಅವರಿಂದ ಔಷಧಿ ತಂದು ಸಿಂಪಡಿಸುತ್ತಾರೆ.
- ಅಂಗಡಿಯವರು ಕೊಟ್ಟದ್ದು ಔಷಧಿ, ರೈತರ ಅದೃಷ್ಟ ಸರಿ ಇದ್ದರೆ ಎಲ್ಲವೂ ಸರಿ.
- ಒಮ್ಮೆ ಔಷಧಿ ತರುವಾಗ ಸುಮಾರು 2000 ರೂ. ಬೇಕಾಗುತ್ತದೆ.
- ನಾಟಿಯಿಂದ ಪ್ರಾರಂಭವಾಗಿ ಕೊ ಯಿಲು ಮುಗಿಯುವ ತನಕವೂ ಔಷಧಿಗಳು ಬೇಕೇ ಬೇಕು.
- ಉತ್ಪತ್ತಿಯಲ್ಲಿ ಅರ್ಧ ಪಾಲು ಇದಕ್ಕೇ ಬೇಕಂತೆ.
- ಹೊಲದಲ್ಲಿ ಅಲ್ಲಲ್ಲಿ ಕೀಟನಾಶಕ, ರೋಗನಾಶಕಗಳ ಬಾಟಲಿ ಬಿದ್ದಿರುತ್ತದೆ.
- 20-25ರೂ ಗಳ ಹಣ್ಣು ನೊಣದ ನಿಯಂತ್ರಣಕ್ಕೆ ಬಳಸುವ ಲ್ಯೂರ್ ಖರೀದಿಗೂ ಸಹ ರೈತರು 100 ರೂ. ಕೊಡಬೇಕು.
- ಎಲ್ಲಾ ಅದೃಷ್ಟ ಸರಿಯಾಗಿದ್ದರೆ ಒಂದು ಎಕ್ರೆ ಬೆಳೆ ಬೆಳೆದರೆ 25,000 ರೂ. ಲಾಭವಾಗುತ್ತದೆ.
- ಅದು ಮನೆಯವರೇ ಸೇರಿ ಕೆಲಸ ಮಾಡಬೇಕು.
- ಕೂಲಿಯವರನ್ನು ಅವಲಂಭಿಸಿದರೆ ಲಾಭ ಇಲ್ಲ.
- ಇದಷ್ಟೇ ಇಲ್ಲ ಸಿಂಪರಣೆಗೆ ಬಳಕೆ ಮಾಡುವ ಗೊಬ್ಬರ, ಇತ್ಯಾದಿಗಳೂ ಸಹ ಅತೀ ದುಬಾರಿ.
- ರೈತರಿಗೆ ಯಾವ ಜ್ಞಾನವೂ ಇಲ್ಲ.
- ಅವರಿಗೆ ಮಾಹಿತಿ ಕೊಡುವವರೂ ಇಲ್ಲ.
ಇಷ್ಟು ಕಷ್ಟದಲ್ಲಿ ಬೆಳೆದ ಒಂದು ಸೌತೇ ಕಾಯಿ ನಮಗೆ ಗರಿಷ್ಟ10 ರೂ.ಗೆ ಕೊಡುತ್ತಾರೆ. ಆದರೂ ನಾವು ಖರೀದಿಸುವಾಗ ಭಾರೀ ಚೌಕಾಶಿ ಮಾಡುತ್ತೇವೆ. ಇದು ಬೇಕೇ?