ಗ್ರಾಹಕರ ಓಲೈಕೆಗೆ ಸರಿಯಾಗಿ ನೋಟ ಚೆನ್ನಾಗಿರಲು ಮಾಡುವ ಉಪಚಾರ ನಮ್ಮನ್ನು ಕೊಲ್ಲುತ್ತದೆ. 2050 ರ ಸುಮಾರಿಗೆ ತರಕಾರಿ ತಿನ್ನುವವರೂ ಅಧಿಕ ಪ್ರಮಾಣದಲ್ಲಿ ರೋಗಗಳಿಗೆ ತುತ್ತಾಗಿ ಬೇಗ ಸಾಯಬಹುದು, ಅಥವಾ ಅಸ್ವಾಸ್ತ್ಯಕ್ಕೊಳಗಾಗಬಹುದು ಎಂಬ ವರದಿ ಇದೆ.
- ಕೃಷಿ ಉಳಿಸುವ ಭರದಲ್ಲಿ ರೈತರು ಬೇರೆ ಪರ್ಯಾಯ ವ್ಯವಸ್ಥೆಗಳಿಲ್ಲದೆ, ಅಪಾಯಕಾರಿಯೋ, ಅಲ್ಲವೋ ಎಂಬುದನ್ನೂ ಅರಿಯದೆ ಬೇರೆ ಬೇರೆ ಕೃಷಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ.
- ಕೊಯಿಲಿನ ಸಮಯದಲ್ಲೇ ಅಂತರ್ವ್ಯಾಪೀ ಕೀಟನಾಶಕ – ರೋಗ ನಾಶಕ ಬಳಕೆ ಮಾಡುತ್ತಾರೆ.
ಬೆಳೆದವರು ತಾವು ಬೆಳೆದ ಹಣ್ಣು ಹಂಪಲು ತಿನ್ನುವುದಿಲ್ಲ. ತರಕಾರಿ ತಿನ್ನುವುದಿಲ್ಲ. ಕಾರಣ ಅವರಿಗೆ ಅಂಜಿಕೆ. ದಾಳಿಂಬೆ, ದ್ರಾಕ್ಷಿ, ತರಕಾರಿಗಳು, ಎಲ್ಲವೂ ವಿಷದ ಅಭಿಷೇಕದಲ್ಲೇ ಬೆಳೆಯುತ್ತಿದೆ. ಗ್ರಾಹಕರ ಆಕರ್ಷಣೆಗೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು ಹೆಸರು ಸಹ ಇಲ್ಲದ ಕೃಷಿ ರಾಸಾಯನಿಕಗಳನ್ನು ಬಳಸುತ್ತಾರೆ.
ಏನು ಆಗುತ್ತಿದೆ?
- ತರಕಾರಿ ಹಣ್ಣು ಹಂಪಲು ಬೆಳೆಗಳಿಗೆ ಬ್ಯಾಕ್ಟೀರಿಯಾ ಸೊರಗು ರೋಗ ಬಂದರೆ ನಿಯಂತ್ರಣ ಕಷ್ಟ.
- ಬ್ಯಾಕ್ಟೀರಿಯಾ ಸೊರಗು ರೋಗ ಬಾರದಂತೆ ರೈತರು ಕೃಷಿ ವಿಜ್ಞಾನಿಗಳ ಶಿಫಾರಸಿನ ಮೇರೆಗೆ ಮತ್ತು ಕೃಷಿ ಒಳಸುರಿ ಮಾರಾಟ ಮಾಡುವವರ ಸಲಹೆಯ ಮೇರೆಗೆ ಬಿಳಿ ಬಣ್ಣದ ಪುಡಿಯನ್ನು ಕೀಟನಾಶಕ, ಶಿಲೀಂದ್ರ ನಾಶಕದ ಜೊತೆಗೆ ಸೇರಿಸಿ 5-6 ಬಾರಿ ಸಿಂಪರಣೆ ಮಾಡುತ್ತಾರೆ.
- ಈ ಬ್ಯಾಕ್ಟೀರಿಯಾ ನಾಶಕ ಮತ್ಯಾವುದೂ ಅಲ್ಲ. ಸ್ಟ್ರೆಪ್ಟೋಸೈಕ್ಲಿನ್ ಎಂಬ ಅಂಶ ಒಳಗೊಂಡ ಹುಡಿ.
- ಯುನಿಮೈಸಿನ್, ಟ್ಯಾಗ್ ಮೈಸಿನ್ , ಸ್ಟ್ರೆಪ್ಟೋಸಾಕ್, ಅಗ್ರೋಮೈಸಿನ್, ಕ್ರಿಸ್ಟೋಮೈಸಿನ್ ಎಂಬೆಲ್ಲಾ ಬೇರೆ ಬೇರೆ ಹೆಸರುಗಳಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
- ಇದು ಬ್ಯಾಕ್ಟೀರಿಯಾ ಸೋಂಕು ತಗಲಿದ ತರುವಾಯ ನಿರ್ದಿಷ್ಟ ಸಾಂದ್ರತೆಯಲ್ಲಿ ಮಾತ್ರ ಬಳಕೆ ಮಾಡಬೇಕಾಗಿರುವ ಔಷಧಿಯಾಗಿದ್ದು, ಇದನ್ನು ರೋಗ ಬರುವ ಮುನ್ನವೇ ಮುನ್ನೆಚ್ಚರಿಕೆಯಾಗಿ ಬಳಕೆ ಮಾಡುತ್ತಿದ್ದಾರೆ.
ಯಾವ ಬೆಳೆಗೆ ಹೆಚ್ಚಿನ ಬಳಕೆ:
- ಟೊಮಾಟೋ ಬೆಳೆ, ದಾಳಿಂಬೆ ಬೆಳೆ, ಸೇಬು. ಮೂಸಂಬಿ, ಕಿತ್ತಳೆ, ಕಿಮೋ ಹಣ್ಣು, ದ್ರಾಕ್ಷಿ ತರಕಾರಿಗಳಾದ ಸೋರೇ ಕಾಯಿ, ಕಾಲಿ ಪ್ಲವರ್ ಬೀನ್ಸ್ ಹಾಗಲ, ಬದನೆ ಮುಂತಾದವುಗಳಲ್ಲಿ ಇದರ ಬಳಕೆ ಹೆಚ್ಚು.
- ಇನ್ನೂ ಹಲವಾರು ಬೆಳೆಗಳಲ್ಲಿ ಕಾಂಡ, ಕಾಯಿ, ಬೇರುಗಳ ಕೊಳೆಯುವಿಕೆಯಂತಹ ರೋಗವನ್ನು ತಡೆಯಲು ಇದನ್ನು ಬಳಕೆ ಮಾಡುತ್ತಾರೆ.
- ಬ್ಯಾಕ್ಟೀರಿಯಾ ಸೋಂಕಿನ ಕಾರಣದಿಂದ ಬೆಳೆಗಳು ರಾತ್ರೆ ಬೆಳಗಾಗುವುದರ ಒಳಗೆ ಹಾಳಾಗುತ್ತವೆ.
- ಅದಕ್ಕಾಗಿ ರೈತರು ರೋಗ ಬರುವ ಮುನ್ನವೇ ಇದನ್ನು ಸಿಂಪಡಿಸಿ ಮುಂಜಾಗ್ರತೆ ವಹಿಸುತ್ತಾರೆ.
ಏನು ಹಾನಿ?
- ಸ್ಟ್ರೆಪ್ಟೋಸೈಕ್ಲಿನ್ ಎಂಬುದು ಮಾನವರಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸಲು ಇರುವ ಜೀವ ರಕ್ಷಕ ಔಷಧಿ.
- ಇದಕ್ಕೆ ಈಗ ಪ್ರತಿರೋಧ ಬೆಳೆಯುತ್ತಿದ್ದು, ಇದು ಮಾನವರಿಗಿಂತ ಹೆಚ್ಚು ಬೇರೆ ಕಡೆ ಬಳಕೆಯಾಗುತ್ತಿದೆ ಎಂಬ ಕೂಗು ಇದೆ.
- ಇದು ಕ್ಷಯರೋಗವನ್ನು ತರುವ ಬ್ಯಾಕ್ಟೀರಿಯಾ ರೋಗಕ್ಕೆ ಔಷಧಿಯಾಗಿ ಚಾಲನೆಗೆ ಬಂದದ್ದು.
- ಈಗ ಇದು ಬೇರೆ ಕೆಲವು ರೋಗಾಗಳಿಗೂ ಔಷಧಕ್ಕೆ ಬಳಸಲ್ಪಡುತ್ತಿದೆ.
ತರಕಾರಿ ಹಣ್ಣು ಹಂಪಲು ಕೃಷಿಯಲ್ಲಿ ಈ ಬ್ಯಾಕ್ಟೀರಿಯಾ ನಾಶಕಗಳನ್ನು ಬಳಕೆ ಮಾಡುವುದರಿಂದ ಇದನ್ನು ಬಳಕೆ ಮಾಡಿದ ಜನರಿಗೆ ಆಂಟೀ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಉಂಟಾಗಿ ಪ್ರಪಂಚದಾದ್ಯಂತ 2050 ರ ಸುಮಾರಿಗೆ ಅರ್ಧ ಪಾಲಿಗೂ ಹೆಚ್ಚಿನ ಜನರಿಗೆ ತೀವ್ರ ತರಹದ ಅಸ್ವಾಸ್ತ್ಯಗಳು ಬರುವ ಸಾಧ್ಯತೆ ಇದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ.
- ಬೆಳೆಗಳಿಗೆ ಬಳಕೆ ಮಾಡಿ ಹೆಚ್ಚುವರಿಯಾದ ಈ ಪ್ರತಿಜೀವಿಗಳು ( ಆಂಟೀ ಬಯೋಟಿಕ್ಸ್) ಸುತ್ತಮುತ್ತಲಿನ ಪರಿಸರಕ್ಕೆ ಹೋಗಿ,ಮಣ್ಣು, ನೀರಿನಲ್ಲಿ ಸೇರಿ ,ಅದರ ಭಾರಕ್ಕೆ ಸೂಕ್ಷ್ಮಾಣು ಜೀವಿಗಳು ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು.
- ಇದರಿಂದ ಮನುಷ್ಯನಿಗೆ – ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಸಮಯದಲ್ಲಿ ಆದು ಫಲಕಾರಿಯಾಗದೆ ಚಿಕಿತ್ಸೆ ಕ್ಲಿಷ್ಟಕರವಾಗಬಹುದು.
- ಹೊಸ ಔಷಧಿ ಕಂಡು ಹುಡುಕುವ ತನಕ ಅದೆಷ್ಟೋ ಹಾನಿಯೂ ಆಗಬಹುದು ಎನ್ನುತ್ತದೆ ಆಧ್ಯಯನಗಳು.
ಸ್ಟ್ರೇಪ್ಟೋಸೈಕ್ಲಿನ್ ಸಿಂಪಡಿಸಿದ ನಂತರ ಬಹಳ ಸಮಯದ ವರೆಗೆ ಸಸ್ಯದ ಭಾಗಗಳಲ್ಲಿ ಪ್ರತಿಜೀವಿಗಳ ಕುರುಹುಗಳು ಉಳಿಯುವ ಸಾಧ್ಯತೆ ಇದೆ. ಇದನ್ನು ಬಳಸಿದ ಮಾನವನ ಆರೋಗ್ಯಕ್ಕೆ ಅದು ನೇರವಾಗಿ ಪರಿಣಾಮ ಬೀರುತ್ತದೆ. ಮಾನವ ಶರೀರ ನಂತರ ಜೀವ ನಿರೋಧಕಗಳಿಗೆ ಸ್ಪಂದಿಸುವುದಿಲ್ಲ.
ಯಾಕೆ ಹೀಗಾಗುತ್ತದೆ:
- ರೈತರಿಗೆ ತಮ್ಮ ಜೀವನೋಪಾಯಕ್ಕೆ ಕೃಷಿ ಅಲ್ಲದೆ ಬೇರೆ ಆದಾಯ ಮೂಲಗಳಿರುವುದಿಲ್ಲ.
- ಕಷ್ಟ ಪಟ್ಟು ಬೆಳೆ ಬೆಳೆಸುವಾಗ ಆಗುವ ಯಾವುದೇ ನಷ್ಟವನ್ನೂ ಅವರು ತಾಳಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ.
- ಏನಾದರೂ ಆಗಲಿ, ನನ್ನ ಬೆಳೆ ಉಳಿಸಿಕೊಳ್ಳಬೇಕು, ನಾನು ಸಂಪಾದನೆ ಮಾಡಬೇಕು ಎಂದು ಯಾವುದೇ ಕೀಟನಾಶಕ , ರೋಗನಾಶಕ, ಪ್ರಚೋದಕವನ್ನು ಅವರು ಬಳಕೆ ಮಾಡುತ್ತಾರೆ.
- ಬೆಳೆ ನಷ್ಟವಾದರೆ ಅವನು ಆತ್ಮಹತ್ಯೆಗೂ ಸಿದ್ದನಾಗಬೇಕಾಗುತ್ತದೆ.
- ಇಂಥಹ ಸಂಧಿಗ್ಧತೆಯಲ್ಲಿ ರೈತರು ಇವುಗಳನ್ನು ಬಳಕೆ ಮಾಡುತ್ತಾರೆ.
ಇಷ್ಟಕ್ಕೂ ಇದನ್ನು ಕೇಂದ್ರೀಯ ಕೀಟನಾಶಕ ಮಂಡಳಿಯವರು ಬೆಳೆಗಳಿಗೆ ಸಿಂಪಡಿಸಲು ಅನುಮತಿ ನೀಡಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಇದನ್ನು ಶಿಪಾರಸು ಮಾಡಲು ಅನುಮತಿಯನ್ನೂ ನೀಡಿದೆ. ಆದರೆ ಕೆಲವು ಇತಿಮಿತಿಗಳ ಮೂಲಕ. ಎಲ್ಲಾ ಕೃಷಿ ಒಳಸುರಿ ಮಾರಾಟ ಮಾಡುವ ಅಂಗಡಿಗಳಲ್ಲಿ ಇದು ತೆರೆದ ವಸ್ತುವಾಗಿ ಲಭ್ಯವಿರುತ್ತದೆ. ರುಚಿ ಹಿಡಿದ ರೈತ ಶಿಫಾರಸಿಗಿಂತ ಹೆಚ್ಚು ಬಳಕೆ ಮಾಡಿ ಈಗ ಹೆಚ್ಚು ಹೆಚ್ಚು ಬೇಕಾಗುತ್ತಿದೆ.
ರೈತರ ತಪ್ಪಲ್ಲ:
- ರೈತರಿಗೆ ಈ ಔಷಧಿ ಬಿಟ್ಟರೆ ಬೇರೆ ಔಷಧಿ ಇಲ್ಲ.
- ಅದರ ಆವಿಷ್ಕಾರವೂ ಆಗಿಲ್ಲ.
- ಆದ ಕಾರಣ ಇಲ್ಲಿ ರೈತರು ಅಪರಾಧಿ ಅಲ್ಲ.
- ಎಲ್ಲಾ ಮಾಧ್ಯಮಗಳೂ ರೈತರ ಕೆಲಸವನ್ನು ಹೀಗಳೆಯುತ್ತವೆಯೇ ಹೊರತು ಅವನ ಅಸಹಾಯಕತೆಯನ್ನು ಗಮನಿಸುವುದಿಲ್ಲ.
- ನಮ್ಮ ದೇಶದಲ್ಲಿ ಬಹುಸಂಖ್ಯೆಯ ಕೃಷಿಕರು ಕಡಿಮೆ ವಿಧ್ಯಾವಂತರರು.
- ಕೃಷಿ ವಿಜ್ಞಾನ ಕಲಿತವರು ಈ ಮೂರು ಕಾಸಿನ ಸಂಪಾದನೆಯ ವೃತ್ತಿಗೆ ಬರಲಾರರು.
- ಇವರು ಕೃಷಿಕರಿಗೆ ತಿಳುವಳಿಕೆ ಹೇಳುವ ಸ್ಥಾನದಲ್ಲಿ ಕುಳಿತಿದ್ದಾರೆ.
- ರೈತರಿಗೆ ಕೃಷಿ ವಿಜ್ಞಾನದ ಬಗ್ಗೆ ಗೊತ್ತಿಲ್ಲ. ಅದರ ಮೇಲೆ ನಂಬಿಕೆಯೂ ಇಲ್ಲ. ತೆರೆದ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಔಷಧಿಗಳು ಇವೆ.
- ಅದನ್ನು ಪಡೆಯಲು ಪ್ರಿಸ್ಕ್ರಿಪ್ಷನ್ ಬೇಕಾಗಿಲ್ಲ. ಹಾಗಾಗಿ ಅವರು ಬಳಕೆ ಮಾಡುತ್ತಾರೆ.
ಗ್ರಾಹಕರು ಸಹಕರಿಸಿದರೆ ಇದರಿಂದ ಮುಕ್ತಿ ಸಾಧ್ಯ:
- ಗ್ರಾಹಕರು ಬಯಸುವುದು, ಚಂದವನ್ನು, ನೋಟವನ್ನು. ಯಾವುದೇ ಮುರುಟು, ಕಲೆ ಉಳ್ಳ, ಸಣ್ಣ ಗಾತ್ರದ ವಸ್ತುವನ್ನು ಅವರು ಕೊಳ್ಳಲಾರರು.
- ಈ ಮನೋಸ್ಥಿತಿಯ ಈಡೇರಿಕೆಗಾಗಿ ರೈತ ಏನೆಲ್ಲಾ ಬೇಕಾದರೂ ಮಾಡುತ್ತಾನೆ.
- ಆದ ಕಾರಣ ಗ್ರಾಹಕರು ನೋಟಕ್ಕೆ, ಗಾತ್ರಕ್ಕೆ ಮಹತ್ವ ಕೊಡದೆ ಇದ್ದಲ್ಲಿ ರೈತ ದುಬಾರಿ ಬೆಲೆಯ ರಾಸಾಯನಿಕಗಳನ್ನು ಕಡಿಮೆ ಬಳಕೆ ಮಾಡಲು ಸಾಧ್ಯವಾಗುತ್ತದೆ.
- ಅದು ಮಾನವ ಆರೋಗ್ಯಕ್ಕೂ ತೊಂದರೆ ಮಾಡದು.
ಕೃಷಿ ಸಂಶೋಧನೆಯಲ್ಲಿ ಹಿನ್ನಡೆ ಈ ಎಲ್ಲಾ ಅವಾಂತರಗಳಿಗೆ ಮೂಲ ಕಾರಣವಾಗಿದ್ದು, ಬದಲಿ ಔಷಧಿಯ ಸಂಶೋಧನೆ ಆಗುತ್ತಲೇ ಇರಬೇಕು.