ಅಂತರ್ಜಲ ಒಂದು ಸಂಗ್ರಹಿತ ಜಲ ಮೂಲ. ಇದನ್ನು ಎಷ್ಟು ಹಿತಮಿತವಾಗಿ ಬಳಕೆ ಮಾಡುತ್ತೇವೆಯೋ ಅಷ್ಟು ಸಮಯ ಅದು ನೀರು ಕೊಡುತ್ತಿರುತ್ತದೆ. ಅಂತರ್ಜಲವನ್ನು ನಾವು ಸಾಮೂಹಿಕವಾಗಿ ಉಳಿಸುವ ಪ್ರಯತ್ನ ಮಾಡಿದರೆ ಉಳಿಸಬಹುದು. ಈಗ ನಾವು ಮಾಡುತ್ತಿರುವ ಅನಾಚಾರದಲ್ಲಿ ಇದು ಕೆಲವೇ ಸಮಯದಲ್ಲಿ ನಮಗೆ ಕೈ ಕೊಡುತ್ತದೆ.
- ರಾಜ್ಯ – ದೇಶದಾದ್ಯಂತ ಅಂತರ್ಜಲ ಮಟ್ಟ ಕುಸಿಯುತ್ತಿದೆ.
- ಸುಮಾರು 25 ವರ್ಷದ ಹಿಂದೆ ಅಂತರ್ಜಲ ಮಟ್ಟ 250 ಅಡಿಯಲ್ಲಿದ್ದುದು,
- ಈಗ 500 ಅಡಿಗೆ ಮುಟ್ಟಿದೆ.
- ಅಪವಾದವಾಗಿ ಕೆಲವು ಕಡೆ ಸ್ವಲ್ಪ ಮೇಲೆಯೇ ದೊರೆಯಬಹುದು.
- ಆದರೆ ಒಟ್ಟಾರೆಯಾಗಿ ಭೂಮಿಯ ಶಿಲಾಪದರದ ಕೆಳಗೆ ಅಡಗಿರುವ ಜಲ ಮೂಲ ಮಾತ್ರ ಕೆಳಕಿಳಿಯುತ್ತಿದೆ.
- ಇದೇ ರೀತಿ ನೀರನ್ನು ಬಳಸುತ್ತಾ ಹೋದರೆ ಇನ್ನು 5 ವರ್ಷ ಕಳೆದರೆ ಅನ್ನಕ್ಕಾ ಗಿ ಗಲಾಟೆ ಅಲ್ಲ.
- ನೀರಿಗಾಗಿ ಗಲಾಟೆ ಪ್ರಾರಂಭವಾಗುತ್ತದೆ!
ಜಲ ಮಟ್ಟ ಎಂದರೇನು:
- ಭೂಮಿಯಲ್ಲಿ ನೆಲದ ಮೇಲೆ ಬಿದ್ದ ನೀರು ತೋಡು, ಹಳ್ಳ, ಹೊಳೆ ಮೂಲಕ ಸಮುದ್ರ ಸೇರುತ್ತದೆ.
- ಕೆಲವು ತಗ್ಗಿನ ಪ್ರದೇಶಗಳಲ್ಲಿ ನೀರು ನಿಂತು ಚಲಿಸುತ್ತದೆ.
- ಸಂದರ್ಭದಲ್ಲಿ ಮೊದಲ ಐದಾರು ಅಡಿ ಹುಡಿ ಮಣ್ಣಿನಲ್ಲಿ ಸರಾಗವಾಗಿ ನೀರು ಇಳಿಯುತ್ತದೆ.
- ಆ ನಂತರ ಸಿಗುವ ಗಟ್ಟಿ ಪದರದಲ್ಲಿ ನಿಧಾನವಾಗಿ ( ಸೋಸಿಕೊಂಡು) ನೀರು ಕೆಳಕ್ಕಿಳಿಯುತ್ತದೆ.
- ಅದು ಪ್ರದೇಶವನ್ನು ಹೊಂದಿಕೊಂಡು 20-50 ಅಡಿ ತನಕವೂ ಇರುತ್ತದೆ.
- ಆ ನಂತರ ಶಿಥಿಲ ಶಿಲೆಗಳು ಸಿಗುತ್ತವೆ. ಅದರಲ್ಲಿ ಅತೀ ಹೆಚ್ಚು ಬಿರುಕುಗಳು ಇರುತ್ತವೆ.
- ಮಣ್ಣಿನಲ್ಲಿ ಇಂಗಿದ ನೀರು ಅದರಲ್ಲಿ ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಕೆಳಕ್ಕಿಳಿಯುತ್ತದೆ.
- ಆನಂತರ ಗಟ್ಟಿ ಶಿಲಾ ಪದರ ಸಿಗುತ್ತದೆ. ಆ ಶಿಲೆಯಲ್ಲಿ ಬಿರುಕುಗಳು ಕಡಿಮೆ.
- ಆದರೆ ಒಂದೊಂದು ಶಿಲೆಯ ಮಧ್ಯೆ ಇರುವ ಅವಕಾಶಗಳ ಎಡೆಯಲ್ಲಿ ಇಂಗಿ ಬಂದ ನೀರು ಅವಕಾಶ ಇರುವಷ್ಟು ಆಳಕ್ಕೆ ಇಳಿಯುತ್ತದೆ.
- ಬಿರುಕು , ಸೀಳುಗಳು ಮತ್ತು ರಂದ್ರಗಳ ಮೂಲಕವೂ ನೀರು ಕೆಳಕ್ಕಿಳಿಯುತ್ತದೆ.
- ಸಮುದ್ರದ ನೀರೂ ಸಹ ಶಿಲಾ ಪದರದ ಕೆಳಕ್ಕೆ ಸೇರಿಕೊಳ್ಳುತ್ತದೆ.
- ಇದು ಭೂ ಗರ್ಭ ಶಾಸ್ತ್ರಜ್ಞರು ಹೇಳುವ ನೀರು ಅಂತರ್ಜಲಕ್ಕೆ ಇಳಿಯುವ ವಿಧಾನ.
ಅಂತರ್ಜಲ ಸಂಪತ್ತು:
- ಭೂಮಿಯಲ್ಲಿ ಮುಗಿದು ಹೋಗುವ ಸಂಪನ್ಮೂಲ ಮತ್ತು ಮತ್ತೆ ಮತ್ತೆ ನವೀಕರಣಗೊಳ್ಳುವ ಸಂಪನ್ಮೂಲ ಎಂದು ಎರಡು ವಿಧ.
- ಹಾಗೆಂದು ಅಂತರ್ಜಲ ಪೂರ್ಣವಾಗಿ ಮುಗಿದು ಹೋಗುವ ಸಂಪನ್ಮೂಲ ಅಲ್ಲ.
- ನಿಧಾನವಾಗಿ ಭೂಗರ್ಭಕ್ಕೆ ನೀರುಸೇರಿಕೊಳ್ಳುವ ಕಾರಣ ಅದಕ್ಕನುಗುಣವಾಗಿ ಬಳಕೆ ಮಾಡಿದರೆ ಅದರಿಂದ ತೊಂದರೆ ಇಲ್ಲ.
- ಅದನ್ನು ನಾವು ವಿವೇಚನೆಯಿಂದ ಬಳಕೆ ಮಾಡಬೇಕು.
- ಎಷ್ಟು ನೆಲಕ್ಕೆ ಪೂರಣ ಆಗುತ್ತದೆಯೋ ಅಷ್ಟು ಮಾತ್ರ ಬಳಕೆ ಮಾಡುತ್ತಿದ್ದರೆ ಅದು ನವೀಕರಣ ಗೊಳ್ಳುವ ಸಂಪನ್ಮೂಲವಾಗಿಯೇ ಉಳಿಯುತ್ತದೆ.
- ಅಂತರ್ಜಲವನ್ನು ಹೆಚ್ಚು ಹೆಚ್ಚು ಶೋಷಣೆ ಮಾಡಿದಾಗ ತೆರೆದ ಬಾವಿಗಳಲ್ಲಿ ನೀರಿನ ಮೂಲ ಇಲ್ಲದಾಗಿ ಚಿತ್ರದುರ್ಗ ಜಿಲ್ಲೆಯಂತೆ ಬರಡು ಕೆರೆಗಳಾಗುತ್ತವೆ.
ನಮ್ಮ ಪಾತ್ರ ಏನು:
- ಕೃಷಿ ನೀರಾವರಿಗೆ ಕೊಳವೆ ಬಾವಿ ಒಂದು ಅಪತ್ಕಾಲದ ಜಲ ಮೂಲ ಮಾತ್ರ.
- ಇದನ್ನೇ ನಂಬಿ ಕೃಷಿ ಮಾಡುವುದು ತಪ್ಪು. ಮಾಡುವುದಿದ್ದರೂ ಹಿತ ಮಿತ ಬಳಕೆ ಕ್ರಮ ಅನುಸರಿಸಬೇಕು.
- ಕೃಷಿ ನೀರಾವರಿಗೆ ಸೂಕ್ತವಾದ ನೀರು ಎಂದರೆ ನೆಲದ ನೀರು. ಕಾಲುವೆ , ಹೊಳೆ ನೀರು. ಇದು ಬೆಳೆಯ ಇಳುವರಿಗೂ ಉತ್ತಮ.
- ನಮ್ಮ ಈಗಿನ ಕೃಷಿ ಉತ್ಪಾದನೆ ಕುಂಠಿತವಾದುದಕ್ಕೆ ಮತ್ತು ಹೆಚ್ಚು ಹೆಚ್ಚು ಪೊಷಕಾಂಶಗಳ ಆವಶ್ಯಕತೆ ಗೆ ಕಾರಣ ಭೂಗರ್ಭದ ಜಲ.
- ಇದರಲ್ಲಿರುವ ಖನಿಜ- ಲವಣಗಳು ಮಣ್ಣನ್ನು ಸಪ್ಪೆ ಮಾಡುತ್ತವೆ.
- ತೆರೆದ ಬಾವಿಯ ಇತಿ ಮಿತಿಗಳಾದ ಬೇಸಿಗೆಯ ದಿನದಲ್ಲಿ ಬತ್ತುವ ಸಮಸ್ಯೆ ಉಂಟಾದಾಗ ಮಾತ್ರ ಕೊಳೆವೆ ಬಾವಿ ನೀರನ್ನು ಉಪಯೋಗಿಸಿ.
ಜಲ ಮಟ್ಟ ಉಳಿಸುವುದು:
- ಇದು ಒಬ್ಬ ವ್ಯಕ್ತಿ ಮಾಡುವ ಕೆಲಸ ಅಲ್ಲ. ಸಾಮೂಹಿಕ ಜವಾಬ್ಧಾರಿ.
- ನಾನು ಮಿತ ನೀರಾವರಿ ಮಾಡಿದರೂ ನನ್ನ ನೆರೆ ಹೊರೆಯವರು ಮನಬಂದಂತೆ ನೀರೆತ್ತಿದರೆ ಅದು ನನಗೂ ತೊಂದರೆಯೇ.
- ಒಬ್ಬಿಬ್ಬರ ದುರಾಶೆಯ ಫಲ ಎಲ್ಲರೂ ಅನುಭವಿಸಬೇಕಾಗುವ ದುಖಃವಾಗಬಹುದು.
- ಇದನ್ನು ಕಾನೂನು ಅಥವಾ ಸಂಘಟಿತ ಮಾನೋಭಾವದಲ್ಲಿ ಮಾತ್ರ ಮಾಡಲು ಸಾಧ್ಯ.
- ಕಾನೂನಿನ ಪ್ರಕಾರ ಹನಿ ನೀರಾವರಿ ಮಾಡುವವರಿಗೆ ಮಾತ್ರ ಕೊಳವೆ ಬಾವಿ ತೋಡಲು ಅನುಮತಿ ಮತ್ತು ವಿದ್ಯುತ್ ಸಂಪರ್ಕ ಕೊಡಬೇಕು.
- ಬೋರ್ ವೆಲ್ ನೀರಿಗೆ ಮೀಟರು ಅಳವಡಿಸುವ ವ್ಯವಸ್ಥೆಯನ್ನು ಮಾಡಿದರೆ ಮಿತ ನೀರಾವರಿ ಸಾಧ್ಯವಾಗಬಹುದು.
- ಅಗತ್ಯ ಇದ್ದವರು ಮಾತ್ರ ಕೊಳವೆ ಬಾವಿ ತೋಡುವಂತಾಗಬೇಕು.
ಸಾರ್ವಜನಿಕ ಕುಡಿಯುವ ನೀರು,ಉದ್ದಿಮೆಗಳಿಗೆ ಬೇಕಾಗುವ ನೀರಿಗೆ ಕೋಲವೆ ಬಾವಿ ನೀರು ಬಳಕೆ ಮಾಡುವುದರ ಬದಲು ಹೊಳೆ ಹಳ್ಳಗಳಿಗೆ ಅಣೆಕಟ್ಟು ಹಾಕಿ ಅದರಿಂದ ಸರಬರಾಜು ಮಾಡಬೇಕು. ಮಳೆ ನೀರಿನ ಸಂಗ್ರಹದಿಂದ ಉದ್ದಿಮೆಗಳ ನೀರಿನ ಅಗತ್ಯವನ್ನು ನೀಗಿಸಬಹುದು.
- ಹಗಲು ರಾತ್ರೆ ನೀರೆತ್ತಿದರೆ ಆ ಭಾಗದ ಕೊಳೆವೆ ಬಾವಿಗಳೆಲ್ಲಾ ಬತ್ತುವ ಸಾಧ್ಯತೆ ಇದೆ. ಇದನ್ನು ಯಾರೂ ಮಾಡಬಾರದು.
ಕೊಳವೆ ಬಾವಿ ನೀರಿನ ಉಪಯೋಗವನ್ನು ತತ್ ಕ್ಷಣ ಮಿತಿಗೊಳಿಸದೇ ಇದ್ದಲ್ಲಿ ಇನ್ನು 5 ವರ್ಷದಲ್ಲಿ ನಮಗೆಲ್ಲಾ ನೀರಿಲ್ಲ ಎಂದಾಗುತ್ತದೆ.