ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.

ಸಾವಯವ ಕೃಷಿಕ -Organic farmer -

ಬಹಳ ಜನ ಸಾವಯವ ಬೇಸಾಯ ಕ್ರಮವನ್ನು ತಮ್ಮ ಮೈಮೇಲೆ ಎಳೆದುಕೊಂಡವರಂತೆ ವರ್ತಿಸುತ್ತಾರೆ. ಇವರಲ್ಲಿ ಗರಿಷ್ಟ ಜನ ರಜಾ ಕಾಲದ ಕೃಷಿಕರು. ಮತ್ತೆ ಕೆಲವರು ಕಾಟಾಚಾರಕ್ಕೆ ಕೃಷಿ ಮಾಡುವವರು.

ನಾನು ಸುಮಾರು 20 ವರ್ಷಕ್ಕೆ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಸಾಲದ ಹಣ. ಭೂಮಿಯ ಬೆಲೆ ಆಗಲೇ ದುಬಾರಿಯಾಗಿತ್ತು. ನನಗೆ ಭೂಮಿಗೆ ಹಾಕಿದ ಹಣ , ನನ್ನ ಬೇಸಾಯದ ಖರ್ಚನ್ನು ಹಿಂಪಡೆಯುವ ಬಯಕೆ ಸಹಜವಾಗಿ ಎಲ್ಲರಿಗೂ ಇದ್ದಂತೆ ಇತ್ತು. ನಾನು ಸಾವಯವ ಕೃಷಿ ಎಂದು ಅದರ ಹಿಂದೆ ಬೀಳದೆ ಎರಡನ್ನೂ ಸೇರಿಸಿ ಕೃಷಿ ಮಾಡಿದೆ. 20 ವರ್ಷಗಳ ಅವಧಿಯಲ್ಲಿ ಭೂಮಿಗೆ ಹಾಕಿದ ಹಣ, ಮಾಡಿದ ಖರ್ಚನ್ನೂ ಹಿಂದಕ್ಕೆ ಪಡೆದೆ. ಈಗ ನೀವು ಹೇಳಿ. ಹಾಕಿದ ಬಂಡವಾಳಕ್ಕೆ ತಕ್ಕದಾದ ರಿಟರ್ನ್ ಪಡೆಯದಿದ್ದರೆ ಅದು ಎಲ್ಲಿಯ ತನಕ ಮುಂದುವರಿಸಿಕೊಂಡು ಹೋಗಲು ಸಾಧ್ಯ?

ಇಲ್ಲೇ ಇರುವುದು ಸಾವಯವ ಕೃಷಿ ಮತ್ತು ಮಿಶ್ರ ಕೃಷಿಯ ಸತ್ಯಾಸತ್ಯತೆಗಳು ಮತ್ತು ಅದರಿಂದ ದೇಶದ ಆರ್ಥಿಕತೆಯ  ಮೇಲೆ ಆಗುವ ಪರಿಣಾಮಗಳು.ಇದನ್ನು ಒಂದೊಂದಾಗಿಯೇ ಚರ್ಚಿಸೋಣ.

ನಮಗೆ ಅಧಿಕ ಇಳುವರಿಯೂ ಬೇಕು- ಸಾವಯವವವೂ ಆಗಬೇಕು ಎಂದರೆ ಕಷ್ಟಸಾಧ್ಯ- high yield and organic is no co relative
ನಮಗೆ ಅಧಿಕ ಇಳುವರಿಯೂ ಬೇಕು- ಸಾವಯವವವೂ ಆಗಬೇಕು ಎಂದರೆ ಕಷ್ಟಸಾಧ್ಯ

ದೇಶದ ಆರ್ಥಿಕತೆ ಮತ್ತು ಕೃಷಿ:

  • ನಮ್ಮ ದೇಶದಲ್ಲಿ ಈಗಲೂ 75% ಕ್ಕೂ ಹೆಚ್ಚಿನ ಜನ ಕೃಷಿಯನ್ನು ಅವಲಂಭಿಸಿ ಇದ್ದಾರೆ.
  • ಇವರು ಸಾವಯವ ಕೃಷಿ ಎಂದು ಒಂದು ಹೊಲದ ಉತ್ಪಾದಕತೆಗಿಂತ ಕಡಿಮೆ ಉತ್ಪಾದನೆ ತೆಗೆದರೆ ಆ ನಷ್ಟವನ್ನು ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯ?
  • ಯಾವುದೇ ಒಂದು ವ್ಯವಹಾರ ಮಾಡುವಾಗ ಅದರಲ್ಲಿ ಹಾಕಿದ ಬಂಡವಾಳಕ್ಕೆ ತಕ್ಕುದಾದ ಮರುಪಾವತಿ (Return) ಪಡೆಯಬೇಕಾದುದು ಕ್ರಮ.
  • ಆದರೆ ಕೃಷಿಯಲ್ಲಿ ಮಾತ್ರ ಅದು ಆಗುತ್ತಿಲ್ಲ.
  • ಬಹುತೇಕ ರೈತರು ತಮ್ಮ ತಮ್ಮ ಪರೀಕ್ಷೆಗಳ (Experiments) ಮೂಲಕ  ಒಮ್ಮೊಮ್ಮೆ ಒಂದೊಂದು ವಿಧಾನವನ್ನು ಪಾಲಿಸಿ ಯಾವುದರಲ್ಲೂ ತೃಪ್ತರಾಗದೆ ನಷ್ಟವನ್ನು ಅನುಭವಿಸಿಕೊಳ್ಳುತ್ತಾರೆ.
  • ಕೃಷಿಯಲ್ಲಿ 100 ರೂ ಬಂಡವಾಳ ಹಾಕಿದ ಬೆಳೆಯಲ್ಲಿ ಕನಿಷ್ಟ 125 ರೂ. ಗಳ ಮರುಪಾವತಿ ಸಿಕ್ಕದೇ ಇದ್ದರೆ, ಅದು ರಾಷ್ಟ್ರೀಯ ನಷ್ಟ ಎನ್ನಿಸಿಕೊಳ್ಳುತ್ತದೆ.
  • ಪ್ರತೀ ಬಾರಿಯೂ ಕೃಷಿಯಲ್ಲಿ ನಷ್ಟವಾದರೆ ಅವನು ಸಹಾಯಕ್ಕಾಗಿ ವ್ಯವಸ್ಥೆಗೆ (ಸರಕಾರ) ಬೇಡಿಕೆ ಇಡಬೇಕಾಗುತ್ತದೆ.
  • ಸಾಲ ಮನ್ನಾ ಮಾಡಿ, ಬೀಜಕ್ಕೆ ಗೊಬ್ಬರಕ್ಕೆ ಸಬ್ಸಿಡಿ ಕೊಡಿ ಎಂದೆಲ್ಲಾ ಬೇಡಿಕೆಗಳನ್ನು ಇಟ್ಟು, ಕೃಷಿ  ವೃತ್ತಿ ಲಾಭದಾಯಕವಲ್ಲ.
  • ನಾವು ರೈತರು ಬಡವರು ಹೀಗೆಲ್ಲಾ ಹೇಳಿಕೊಂಡು ಎಷ್ಟು ಸಮಯ ಕೃಷಿ ಮಾಡಲು ಸಾಧ್ಯ.

ಸಾವಯವ ಕೃಷಿ ಎಂದರೆ ಅದು ಕೊರೋನಾ ಸೋಂಕು ತಗಲಿದವರನ್ನು ಗುಣಪಡಿಸಲು ಆಯುರ್ವೇದ ಔಷಧಿ ಆಗುತ್ತದೆ ಎಂಬಂತೆ.ಇದು ರೋಗಬಾರದಂತೆ ತಡೆಯಬಹುದೇ ಹೊರತು,ರೋಗ ಬಂದಮೇಲೆ ರೋಗಿ ಉಳಿಸುವುದು ಕಷ್ಟ. ಹಾಗೆಯೇ ಸಾವಯವ ಒಂದರಲ್ಲೇ ನಿಜವಾದ ರೈತ ಉಳಿಯುವುದಿಲ್ಲ. ವೈಜ್ಞಾನಿಕವಾಗಿ ಕೃಷಿ ಮಾಡಬೇಕು.

ಸಾವಯವ ಕೃಷಿ ಯಾರಿಗೆ ಆಗಬಹುದು?

  • ಕೃಷಿ ಭೂಮಿ ಯಾರಿಗೆ ತಾತ ಮುತ್ತಾತನ ಕಾಲದಿಂದ ಬಂದಿದೆಯೋ, ಅವರಿಗೆ ಎಕ್ರೆಗೆ 5 ಕ್ವಿಂಟಾಲು ಅಡಿಕೆ ಬಂದರೂ ಸಾಕು.
  • ಊಟಕ್ಕೆ ತಂಬುಳಿ ಉಂಡರೂ ಸಾಕು ಎಂಬ ಮನೋಸ್ಥಿತಿಯವರಿಗೆ ಇದು ಸೂಕ್ತ.
  • ಅಡಿಕೆ ಇಲ್ಲ. ಕೊಳೆ ಬಂದಿದೆ. ಹಾಗಾಗಿದೆ ಹೀಗಾಗಿದೆ. ಈ ವರ್ಷ ಯಾವ ತಿರುಗಾಟವೂ ಇಲ್ಲ.
  • ಮನೆಗೆ ತರುವ ಸಾಮಾನು ಸರಂಜಾಮುಗಳಲ್ಲಿ ಅರ್ಧ ಕಡಿಮೆ ಮಾಡಿದರಾಯಿತು.
  • ಎಂದು ತಮ್ಮನ್ನೇ ತಾವು ಸಂಬಾಳಿಸಿಕೊಳ್ಳುವವರಿಗೆ ಸೂಕ್ತ.
  • ಇವರಿಗೆ ಭೂಮಿ ಉಚಿತವಾಗಿ ಬಂದಿರುತ್ತದೆ.ಅದರಲ್ಲಿ ಬಂದಂತಹ ಉತ್ಪತ್ತಿಯಲ್ಲಿ ಅವರು ತೃಪ್ತರು.
  • ಇನ್ನು ಕೆಲವರು ಬೇರೆ ಆದಾಯದ ಮೂಲವನ್ನು ಇಟ್ಟುಕೊಂಡು ಕೃಷಿ  ಮಾಡುತ್ತಾರೆ.
  • ಅವರಿಗೆ ಇದು ಒಂದು ಹವ್ಯಾಸ. ಇವರ ತರ್ಕಗಳೇ ಭಿನ್ನ.
  • ಇವರು ನಿಜವಾದ ಕೃಷಿಕರು ಅಲ್ಲ. ಇಂತವರು ನಮ್ಮಲ್ಲಿ ಈಗ ಒಟ್ಟು ಕೃಷಿಕರಲ್ಲಿ 50% ರಷ್ಟು ಇರುವ ಕಾರಣ ಜೈ ಎಂದು ಕೈ ಎತ್ತುತ್ತಾ ಕುರುಡರಂತೆ ಹಿಂಬಾಲಿಸುತ್ತಾರೆ.
  • ಉದ್ಯೋಗದಲ್ಲಿದ್ದು ಪೆನ್ಶನ್ ಬರುವವರು, ಅನಾಯಾಸವಾಗಿ ಹಣ ಸಂಪಾದನೆ ಮಾಡುವವರು ಈ ಸಾಲಿನಲ್ಲಿ ಇರುತ್ತಾರೆ.

ಸಾವಯವದಲ್ಲಿ ಏನು ಆಗುತ್ತದೆ?

  • ಸಾವಯವದಲ್ಲಿ ಭೂಮಿಯನ್ನು ಉಳಿಸಿಕೊಳ್ಳಬಹುದು. ಮರ ಉಳಿಸಿಕೊಳ್ಳಬಹುದು.
  • ಆದರೆ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬೆಳೆ ತೆಗೆಯಲಿಕ್ಕೂ ಆಗುವುದಿಲ್ಲ.
  • ಉಳಿಸಿಕೊಳ್ಳಲಿಕ್ಕೂ ಆಗುವುದಿಲ್ಲ. ಹೀಗಾದರೆ ನಾವು ಕೃಷಿ ಮಾಡಿದರೂ ಒಂದೇ ಮಾಡದಿದ್ದರೂ ಒಂದೇ.
  • ಒಳ್ಳೆಯ ಗದ್ದೆ ಮಾಡಿಕೊಂಡು ಮಣ್ಣು ಚೆನ್ನಾಗಿ ಇಟ್ಟುಕೊಂಡು  ಎಕ್ರೆಗೆ 5-6 ಕ್ವಿಂಟಾಲು ಅಕ್ಕಿ ಪಡೆದರೆ ಏನು ಲಾಭ.
  • ಎಷ್ಟು ದಿನಗಳ ಕಾಲ ಇದನ್ನು ಮುಂದುವರಿಸಬಹುದು? ಇದಕ್ಕೆ ಒಂದು ಮಿತಿ ಇರುತ್ತದೆ.
  • ಒಮ್ಮೆ ಕೃಷಿಯ ಸಹವಾಸವೇ ಬೇಡ ಎಂದು ಹಿಂಜರಿಯಬೇಕು, ಇಲ್ಲವೇ ಭೂಮಿ ಮಾರಾಟ ಮಾಡಬೇಕು.

 ಕೃಷಿಯನ್ನು ನೀವು ಆಧುನಿಕತೆಗೆ ಅನುಗುಣವಾಗಿ ಮಾಡಲಿಲ್ಲ ಎಂದಾದರೆ  ಮಾಡದೆ ಇರುವುದೇ  ಒಳ್ಳೆಯದು. ದೇಶದ ಇನ್ಪುಟ್ ಭೂಮಿಯೊಳಗೆ ಹೋದ ಮೇಲೆ ಅದು ಸ್ವಲ್ಪವಾದರೂ ಲಾಭದ  ಔಟ್ ಪುಟ್ ಆಗಿ ಬಾರದಿದ್ದರೆ ಅದು ದೇಶದ ಬೊಕ್ಕಸ ಬರಿದಾಗಿಸುತ್ತದೆ. ಕೃಷಿ ದೇಶದ ಬೆನ್ನೆಲುಬು, ಎಂದು ಹೇಳಬಹುದು. ನಾನು ಬೆಳೆಯುವ ಬೆಳೆಯಲ್ಲಿ ಲಾಭ ಆಗದಿದ್ದರೆ  ದೇಶಕ್ಕೆ ನಷ್ಟ. ಇದನ್ನು ಪ್ರತೀಯೊಬ್ಬ ರೈತನೂ ಅರ್ಥ ಮಾಡಿಕೊಳ್ಳಬೇಕು.

ಸಾವಯವ ಕೃಷಿಕನೂ ಕುರಿ ಮಂದೆಯೂ – Oraganic agriculturist

ಆಧುನಿಕ ಕೃಷಿಕ ಹೀಗೆ ಇರುತ್ತಾನೆ:

  • ಪೂರ್ಣಾವಧಿ ಕೃಷಿಕ ತಾನು ಬದುಕುವುದೇ ಕೃಷಿಯಲ್ಲಿ ಎಂದು ಅರ್ಥ ಮಾಡಿಕೊಂಡಿರುತ್ತಾನೆ.
  • ಅವನು ನಷ್ಟ ಮಾಡಿಕೊಳ್ಳಲು ಸಿದ್ದನಿರುವುದಿಲ್ಲ.
  • ಬೆಳೆಗೆ ಏನು ಬೇಕು ಅದನ್ನು ಕೊಟ್ಟು ಅದರಿಂದ ಹೇಗಾದರೂ ಲಾಭ ಮಾಡಿಕೊಳ್ಳುತ್ತಾನೆ.
  • ಎಲ್ಲಾದರೂ ಇಂತಹ ಕೃಷಿಕರು ನಮಗೆ ಲಾಭವಾಗಲಿಲ್ಲ.
  • ಭಾರಿ ನಷ್ಟ ಎಂದು ಕೂಗುವುದನ್ನು ಕೇಳಿದ್ದೀರಾ? ಅವನು NPK ಬಳಸುತ್ತಾನೆ, ಕೀಟನಾಶಕ ಬಳಸುತ್ತಾನೆ.
  • ಸಾವಯವವನ್ನೂ ಬಳಸುತ್ತಾನೆ. ಭೂಮಿಯನ್ನೂ ಸುಸ್ಥಿತಿಯಲ್ಲಿ ಉಳಿಸಿಕೊಂಡು ಮುನ್ನಡೆಯುತ್ತಾನೆ.
  • ಲೆಕ್ಕಾಚಾರ ಬರೆದು ಕೃಷಿ ಮಾಡುತ್ತಾನೆ. ಸಮಯಾಧಾರಿತ ಕೃಷಿ ಮಾಡುತ್ತಾನೆ.
  • ಆದರೆ  ಸಾವಯವ  ಎಂಬ ದೆವ್ವ ಬಡಿದವರು ಹಾಗಲ್ಲ.
  • ಭೂಮಿ ಬೇಕು, ನಮ್ಮ ಹಿರಿಯವರದ್ದು, ನಮಗೆ ಇಷ್ಟು ಸಾಕು, ಬೇಕಾದರೆ ಮಕ್ಕಳು ಮಾಡಿಕೊಳ್ಳುತ್ತಾರೆ ಎಂದು ತಮ್ಮದೇ ಲೋಕದಲ್ಲಿ ತೆವಳುತ್ತಾ ಇರುತ್ತಾರೆ.
  • ಕೆಲವು ಅಮಾಯಕರನ್ನು ದಾರಿ ತಪ್ಪಿಸಿ ವಿಕೃತ ಸಂತೋಷ ಪಡೆಯುತ್ತಾರೆ.

ಕೃಷಿಕರು ದೇಶಕ್ಕೆ ಆಸ್ತಿಯಾಗಿ ಇರಬೇಕು:

  • ಕೃಷಿ  ದೇಶದ ವ್ಯವಸ್ಥೆಯೊಳಗೆ ಪ್ರಾಮುಖ್ಯ ಅಂಗ. ಕೃಷಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು.
  • ನಾವು ದೇಶಕ್ಕೆ ಹೊರೆಯಾಗಿರಬಾರದು. ಈಗಾಗಲೇ ದೇಶಕ್ಕೆ ಕೃಷಿ ಮತ್ತು ಕೃಷಿಕರು ಹೊರೆಯಾಗಿದ್ದಾರೆ.
  • ಕೃಷಿಕರಿಗೆ ಕೊಟ್ಟಷ್ಟೂ ಸಾಲದು. ಎಷ್ಟೆಂದು ಸಾಲ ಮನ್ನಾ ಮಾಡುವುದು.
  • ರೈತರನ್ನು ಋಣ ಮುಕ್ತ ಮಾಡಲು ದೇಶದ ಖಜಾನೆಯಿಂದ  ಎಷ್ಟೊಂದು ಹಣ ಮುಗಿಯುತ್ತದೆ ಎಂಬ ಲೆಕ್ಕಾಚಾರ ಏನಾದರೂ ಈ ರೈತರಿಗೆ ಗೊತ್ತೇ?
  • ನಾವು ದೇಶಕ್ಕೆ ಆಸ್ತಿಯಾಗಿರಬೇಕು. ಅದು ಹೇಗೆಂದರೆ ಕಾಲ ಕಾಲಕ್ಕೆ ತಕ್ಕುದಾಗಿ ಬದಲಾವಣೆಯನ್ನು  ಅನುಸರಿಸುವುದು.
  • ನಾವು ಮಾತಾಡುವಾಗ ನೀರವ್ ಮೋದಿ, ಮಲ್ಯ ಮುಂತಾದವರ ಉದಾಹರಣೆ ಕೊಡುತ್ತೇವೆ.
  • ಸರಿ ನೀರವ್ ಮೋದಿ ಅಥವಾ ಮಲ್ಯರಂತಹ ಜನ ಅತ್ಯಲ್ಪ.
  • ಅದೇ ಕೃಷಿಕರನ್ನು ತೆಗೆದುಕೊಂಡರೆ ತಲಾ ಒಬ್ಬೊಬ್ಬ ಕೃಷಿಕನಿಗೆ 25000 ಸಾಲ ಮನ್ನಾ ಮಾಡಿದಾಗ ಬರುವ ಒಟ್ಟು ಮೊತ್ತ ನೂರಾರು ಜನ ಮೋದಿ, ಮಲ್ಯರಿಗೆ ಸಮವಾಗುತ್ತದೆ.
  • ಇದನ್ನು ಯಾರಾದರೂ ಲೆಕ್ಕಾಚಾರ ಹಾಕಿದ್ದುಂಟೇ. ಇದು ಯಾರಿಗಾದರೂ ಅರ್ಥ ವಾಗಿದೆಯೇ?
ಸಾವಯವ ಕೃಷಿಯಲ್ಲಿ ಈ ಇಳುವರಿ ಸಾಧ್ಯವಾ? Is it possible in organic agriculture?
ಸಾವಯವ ಕೃಷಿಯಲ್ಲಿ ಈ ಇಳುವರಿ ಸಾಧ್ಯವಾ?

ರೈತ ವಿರೋಧಿ ಪಟ್ಟ ಗ್ಯಾರಂಟಿ:

  • ಕಂಡದ್ದು ಕಂಡಂತೆ ಹೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ.
  • ನಮಗೆ ಸಮಾಜ ವಿರೋಧಿ ಪಟ್ಟವನ್ನೂ ಕಟ್ಟುತ್ತಾರೆ.
  • ವಾಸ್ತವವಾಗಿ 1 ಎಕ್ರೆ ಅಡಿಕೆ ತೋಟ ಇದ್ದರೆ ಅದರಲ್ಲಿ ಬಹುಸ್ಥರದ ಬೆಳೆ ಬೆಳೆದು 5 ಲಕ್ಷಕ್ಕೂ  ಹೆಚ್ಚು ಅದಾಯ ಪಡೆಯಬಹುದಾದ ಅವಕಾಶ ಇರುವಾಗ ಯಾಕೆ ನಾವು ಆಧುನಿಕ ಚಿಂತನೆಗೆ ಬರಬಾರದು?
  • ಕೃಷಿ ಮಾಡುವ ಉದ್ದೇಶವೇ ಹಾಕಿದ ದುಡ್ಡಿಗೆ  ರಿಟರ್ನ್ ಬರಬೇಕು ಎಂದು.
  • ಅದು ಬಾರದಂತ ಕೃಷಿಯನ್ನು ಮಾಡಿ ನಾವು ಏನು ಸಾಧಿಸಿದಂತಾಗುತ್ತದೆ?

ಸಾವಯವಕ್ಕೆ ಗತಿ ಗೋತ್ರ ಇಲ್ಲ:

  • ಎಲ್ಲಾ ವಸ್ತುಗಳಿಗೂ ಇದನ್ನು ಹೇಗೆ ತಯಾರಿಸಲಾಗಿದೆ. ಅದರಲ್ಲಿ ಎನು ಇದೆ ಎಂಬ ಮಾಹಿತಿ ಇರುತ್ತದೆ. ಆದರೆ ಸಾವಯವಕ್ಕೆ ಅದು ಇಲ್ಲ.
  • ಇದರಲ್ಲೇ ಇರುವುದು ಮೋಸ. ನೂರಾರು, ಸಾವಿರಾರು ಜನ ಇದನ್ನು ರೈತರಿಗೆ ಮಾರಾಟ ಮಾಡಲು ಹುಟ್ಟಿಕೊಂಡಿದ್ದಾರೆ.
  • ನಿಮಗೆ ನಿಮ್ಮ ಸಂಬಂಧಿಯಿಂದಲೇ ವ್ಯವಹಾರ ಮಾಡಿಸುವ ಮಟ್ಟಿಗೆ ಈ ವ್ಯವಹಾರ ಮುಂದುವರಿದಿದೆ.
  • ಆದಕ್ಕೆಲ್ಲಾ ರೈತರು ಮರುಳಾಗುತ್ತಿದ್ದಾರೆ. ಮಾರಾಟಗಾರರ ಒಂದೇ ಒಂದು ಸಮಜಾಯಿಶಿ ಎಂದರೆ ಇದು ಕಂಪ್ಲೀಟ್ ಆರ್ಗಾನಿಕ್ ಎಂಬುದು.
  • ಆರ್ಗಾನಿಕ್ ಗೆ ಏನೂ ಟೆಸ್ಟ್ ಬೇಕಾಗಿಲ್ಲ ಎನ್ನುತ್ತಾರೆ. ಇಂತಹ ಜನ ರಾಜಾರೋಷವಾಗಿ ನಮ್ಮ ರೈತರ ಜೊತೆ ವ್ಯವಹಾರ ಮಾಡುತ್ತಿದ್ದಾರೆ.
  • ಒಂದು ಬಟ್ಟೆ ಅಂಗಡಿಗೆ ಹೋದರೆ ಆ ಬಟ್ಟೆಯ ಪೂರ್ವಾಪರವನ್ನು ಕೂಲಂಕುಶವಾಗಿ ತಿಳಿದು ಖರೀದಿ ಮಾಡುವ ಜನ,
  • ಒಂದು ವಾಹನ ಕೊಳ್ಳುವಾಗ ಅದರ ಎಲ್ಲವನ್ನೂ ತಿಳಿಯುವ ಜನ, ಇಂತಹ ಉತ್ಕನನವನ್ನು ಯಾಕಾಗಿ ಪೂರ್ವಾಪರ ತಿಳಿಯದೇ ಕೊಳ್ಳುತ್ತಾರೆ ಗೊತ್ತಿಲ್ಲ.
  • ಇದೇ ನಮ್ಮ ವೀಕ್ ನೆಸ್. ಕೃಷಿಯ ಪೂರ್ವಾಪರ ಗೊತ್ತಿಲ್ಲದವರು ಇದನ್ನು ಮಾರಾಟ ಮಾಡುತ್ತಾರೆ.
  • 100 ಕ್ಕೆ 99% ಸಾವಯವ ಉತ್ಪನ್ನಗಳನ್ನು ಲ್ಯಾಬ್ ಟೆಸ್ಟ್ ಮಾಡಿಸಿದರೆ ಅದರಲ್ಲಿ ರಾಸಾಯನಿಕ ಇರುತ್ತದೆ.
  • ಇವೆಲ್ಲಾ ಮಾರಾಟದ ಮೂಲಕ ಹಣ ಮಾಡುವ ವ್ಯವಸ್ಥೆ.
  • ಬದುಕಲು ಬೇರೆ ದಾರಿ ಇಲ್ಲದ್ದಕ್ಕೆ ಇದನ್ನು ಮಾಡುವುದು ಅಷ್ಟೇ.
  • ಸಾವಯವ ಗೊಬ್ಬರ ಮಾರಾಟ ಮಾಡುವವರಿಗೆ ಅದು ಬದುಕುವ ದಾರಿ.
  • ಹಾಗಿರುವಾಗ ಕೃಷಿಕರು ಯಾಕೆ ತಮ್ಮ ಬದುಕುವ ದಾರಿಯನ್ನು ಸರಿಯಾಗಿ ತೀರ್ಮಾನ ಮಾಡಬಾರದು ?.

ಗೋವು ಆಧಾರಿತ ಕೃಷಿ ಮತ್ತು ವಂಚನೆ:

  • ಗೋವು ಆಧಾರಿತ ಕೃಷಿ ಭಾರತದ ಕೃಷಿಕರಿಗೆ ಹೊಸತಲ್ಲ. ಶತ ಶತಮಾನಗಳಿಂದ ಲಾಗಾಯ್ತು ಇದನ್ನೇ ಮಾಡುತ್ತಾ ಬಂದವರು ನಾವು.
  • ಅದರಲ್ಲಿ ಆಗುವುದಿಲ್ಲ ಎಂದು ನಾವು ರಾಸಾಯನಿಕಕ್ಕೆ  ಬಂದದ್ದು.
  • ಈಗ ಮತ್ತೆ ಅದಕ್ಕೆ ಹೋಗಬೇಕು ಎನ್ನುವುದಾದರೆ  ಇದರ ಹಿಂದೆ ಯಾವುದೋ ಒಂದು ಮಾಫಿಯಾ ಕೆಲಸ ಮಾಡುತ್ತಿದೆ.
  • ದೇಶದ ಕೃಷಿ ವ್ಯವಸ್ಥೆಯನ್ನು ಹಾಳು ಮಾಡಿ ಅದರಲ್ಲಿ ವ್ಯವಹಾರ ಮಾಡುವ ಬುದ್ದಿವಂತಿಕೆಯೂ ಇರಬಹುದು.
  • ಕೆಲವರಿಗೆ ಇದರಿಂದ ಅನುದಾನ ಸಿಗುತ್ತದೆ. ಆ ತನಕ ಅದರ ಹಿಂದೆ ಅವರು ಹೋಗುತ್ತಾರೆ.
  • ಅನುದಾನ ಮುಗಿಯುವಾಗ ಅವರು ಬೇರೆ ದಾರಿ ಹಿಡಿಯುತ್ತಾರೆ.

ಗೋವು ಮತ್ತು ಕೃಷಿ  ಸಂಬಂಧ ಇರುವಂತದ್ದೇ. ಇದು  ಹೇಗಿತ್ತೋ ಹಾಗಿದ್ದರೆ ಚೆಂದ. ಗೋವನ್ನು ಬಿಟ್ಟು ಕೃಷಿ ಇಲ್ಲ.  ಗೋವಿನಿಂದಲೇ ಕೃಷಿ ಅಗುವುದಿಲ್ಲ. ಹಾಗೆಯೇ ಸಾವಯವ ಒಂದರಿಂದರಿಂದಲೇ ಕೃಷಿ ಆಗುವುದಿಲ್ಲ. ಸಾವಯವವನ್ನು ಬಿಟ್ಟು ಕೃಷಿ ಮಾಡಬಾರದು. ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಂಡು ಕೃಷಿ ಮಾಡಿದರೆ ಅದು ಹೆಚ್ಚು ಸಮಯದ ತನಕ ಮುಂದುವರಿಯುತ್ತದೆ.

ಸಾವಯವ ಪ್ರತಿಪಾದಕರಿಗೆ ಆಹ್ವಾನ ಕೊಡಿ:

  • ಸಾವಯವ ಕೃಷಿಯಲ್ಲಿ ಬಪರ್ ಇಳುವರಿ ಬರುತ್ತದೆಯೋ , ಬರುವುದಿಲ್ಲವೋ ಎಂಬುದರ ಬಗ್ಗೆ ಅದರ ಮಾರಾಟಗಾರರಲ್ಲಿ ಅಥವಾ ತಯಾರಕರಲ್ಲಿ ವೃಥಾ ಚರ್ಚೆ ಬೇಡ.
  • ಅವರು ಬಂಪರ್ ಇಳುವರಿ  ತೆಗೆದುಕೊಡುತ್ತಾರೆ ಎಂದಾದರೆ ಅವರೊಂದಿಗೆ 50:50 ಆಧಾರದಲ್ಲಿ ನಾವು ಅವರಿಗೇ ಬೆಳೆ ಬೆಳೆಸಲು ಹೊಲ ಬಿಟ್ಟು ಕೊಡೋಣ.
  • ನಮಗೂ ಲಾಭವಾಗುತ್ತದೆ. ಅವರಿಗೂ ಲಾಭವಾಗುತ್ತದೆ.  ಇದು ರೈತರು ಮಾಡಬೇಕಾದ ಕೆಲಸ.
  • ತಾಂತ್ರಿಕವಾಗಿ ಸರಿಯಾಗಿದ್ದುದನ್ನು ಬಳಕೆ ಮಾಡುವ ಜಾಯಮಾನ ರೈತರಿಗೆ ಬರಬೇಕು.
  • ಒಂದು ಎರಡು ವರ್ಷ ಚೆನ್ನಾಗಿ ಬರುತ್ತದೆ. ಮೂರನೇ ವರ್ಷ ಕೈ ಕೊಡುತ್ತದೆ.
  • ಆಗ ಆ ಉತ್ಪನ್ನ ಮಾರಾಟ ಮಾಡುವರು ಒಂದಷ್ಟು ಹಣ ಮಾಡಿ ಅಲ್ಲಿಂದ ಓಡಿ ಆಗಿರುತ್ತದೆ.
  • ಸಾವಯವದಲ್ಲಿ ಎಲ್ಲವೂ ಆಗುತ್ತದೆ ಎಂದರೆ ಅದು ತಪ್ಪು. ಆಗುವುದು ಅಷ್ಟಕ್ಕಷ್ಟೇ.
  • ನಿರಂತರ ದೇಶಕ್ಕೆ ಹೊರೆಯಾಗಿಯೇ ಇರಬೇಕಾದರೆ ಮಾತ್ರ ಸಾವಯವ ಬೇಸಾಯ ಎಂಬ ಬಿರುದಿನೊಂದಿಗೆ ಬದುಕಿಕೊಂಡು ಇರಬಹುದು.

ದೇಶದ ಆರ್ಥಿಕತೆ ಸರಿಯಾಗಿ ಮುನ್ನಡೆಯಬೇಕಾದರೆ, ಜನರ ಕೈಯಲ್ಲಿ ಹಣದ ಚಲಾವಣೆ ಆಗಬೇಕು. ದೇಶದಲ್ಲಿ  ಬಹುಸಂಖ್ಯಾತರು ಕೃಷಿಕರು ಇರುವಾಗ  ದೇಶದ ಆರ್ಥಿಕತೆಗೆ ಅವರೇ ಹೊರೆಯಾದರೆ ದೇಶದ ಗತಿ ಏನು ಎಂದು ಯೋಚಿಸಿ. ಕೃಷಿ ನಷ್ಟದ ವ್ಯವಹಾರ ಆಗಬಾರದು. ಕೃಷಿಕರ ಕೈಯಲ್ಲೂ ದುಡ್ಡು ಹರಿದಾಡಬೇಕು. ಅದು ಕೃಷಿಯಲ್ಲಿ ಲಾಭವಾದಾಗ ಮಾತ್ರ ಸಾಧ್ಯ. ನೀವು 100 ರೂ ಬಂಡವಾಳ ಹಾಕಿ 150 ರೂ ಪಡೆದರೆ ನಾಳೆ ಬೈಕ್ ನಲ್ಲಿ ಓಡಾಡಲು ಪೆಟ್ರೋಲ್ ಹಾಕಿಸುತ್ತೀರಿ. ನಿಮ್ಮ ಮನೆಗೆ ಏನಾದರೂ ಸಾಮಾನು ಸರಂಜಾಮ ಖರೀದಿಸಿ ದೇಶಕ್ಕೆ ಟ್ಯಾಕ್ಸ್ ರೂಪದಲ್ಲಿ ಹಣ ಪಾವತಿಸುತ್ತೀರಿ. ಹೀಗೆ ಹಣದ ಚಲಾವಣೆಗೆ ನಿಮ್ಮ ಕೊಡುಗೆ ಇರುತ್ತದೆ. ಇದರಿಂದ  ದೇಶ  ಉಳಿಯುತ್ತದೆ. ನಾವೂ ಉಳಿಯುತ್ತೇವೆ.

ಲೇಖಕರು ಕೃಷಿ ಮಾಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಸರಿ ಕಂಡವರು ಸ್ವೀಕರಿಸಿ. ಬೇಡದಿದ್ದರೆ ಬಿಡಿ.  ಶೇಷಗಿರಿ ಶರ್ಮ, ಕೃಷಿಕರು, ನಾಡಕಲಸಿ, ಸಾಗರ. 9448255868

ಇದು ಸಾವಯವ  ಕೃಷಿ ಎಂಬ ಪದ್ದತಿಯನ್ನು ತೆಗಳುವುದು ಅಲ್ಲ. ಅದರ ಮೇಲೆ ಗೌರವ ಇದೆ. ಆದರೆ ಅದರಿಂದ ಕೃಷಿಕನಿಗೆ ಲಾಭವಾಗಬೇಕು. ದೇಶಕ್ಕೂ ಇದರಿಂದ ಲಾಭವಾಗಬೇಕು. ಇದುವೇ ಈ ಬರಹದ ಉದ್ದೇಶ. ನಾಲ್ಕು ಜನರಿಗೆ ಅನುಕೂಲ ಆದರೆ ಅದರಷ್ಟು ಸಂತೋಷ ಮತ್ತೊಂದಿಲ್ಲ.

8 thoughts on “ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.

    1. We are fear about sharing this articles because some people will quarrel with us. Actually as a farmer my opinion and experience is Organic and fertiliser mixed farming is good. Thankyou for your comment.

    2. It’s Reality and the TRUTH.
      We are hypocrites ,we need to understand that we can’t feed 130 cr population with organic Farming .
      We need a judicial combination of both Organic n Inorganic fertilizer to have sustainable yield and also maintain soil health.
      Appreciate you efforts to highlight the Facts and Reality of going only for organic agriculture.

      1. Your opinion is correct. Organic and chemical combination helps to sustain agriculture. Thanks for your comment Always respond if it is good or bad. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಕಾಲಸ್ಥಿತಿಗೆ ಅನುಗುಣವಾಗಿ ಬದಲಾವಣೆ ಅನಿವಾರ್ಯ. ಸಾವಯವ ದೊಂದಿಗೆ ರಾಸಾಯನಿಕ ಸೇರಿದಾಗ ಸುಸ್ಥಿರತೆ ಬರಲಿ ಸಾಧ್ಯ.

  1. ಸಾವಯವ ಕೃಷಿ ಕಂಡಿತಾ ಲಾಭದಾಕವಲ್ಲ. ಸಾವಯವ ಎಂದು ಪ್ರಚೋದನೆಗೆ ಒಳಗಾಗಿ ಎಷ್ಟೋ ರೈತರು ಹಾಳಾಗಿದ್ದಾರೆ. ಸಾವಯವದಲ್ಲಿ ಮರ ಬೆಳೆಸಬಹುದು ಆದರೆ ಕೃಷಿ ಮಾಡಲು ಆಗುವುದಿಲ್ಲ. ಇದು ಒಂದು ಉಪಯುಕ್ತ ಲೇಖನ. ಲೇಖಕರಿಗೆ ಧನ್ಯವಾದಗಳು.

    1. ನಿಮ್ಮ ಅನುಭವವೇ ನಿಜವಾದ ಕೃಷಿ. ಮಾಡಿ ನೋಡಿದವರಿಗೆ ಅದರ ಎಲ್ಲಾ ವಿಚಾರಗಳೂ ತಿಳಿದಿರುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು. ಯಾವುದೇ ತಪ್ಪುಗಳಿದ್ದರೂ ಪ್ರತಿಕ್ರಿಯಿಸಲು ಸಕೋಚ ಪಡಬೇಡಿ.

Leave a Reply

Your email address will not be published. Required fields are marked *

error: Content is protected !!