ದಾಳಿಂಬೆ ಬೆಳೆಯಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಕಾಯಿ ಒಡೆಯುವಿಕೆ ಮತ್ತು ಕಾಯಿಯ ನೋಟ ಕೆಡುವಿಕೆ. ಬೆಳೆದು ಇನ್ನೇನು ಕಠಾವಿಗೆ ಸಿದ್ದವಾಗುವ ಸಮಯದಲ್ಲಿ ನೋಟವನ್ನು ಕೆಡಿಸುವ ಕಾಯಿ ಒಡಕ, ಮತ್ತು ಸನ್ ಬರ್ನ್ ಸಮಸ್ಯೆ ಕಂಡು ಬರುತ್ತದೆ. ಇದರಿಂದ ಅರ್ಧಕ್ಕೂ ಹೆಚ್ಚು ಕಾಯಿ ಉಪಯೋಗಕ್ಕಿಲ್ಲದೆ ನಷ್ಟವಾಗುತ್ತದೆ. ಈ ತೊಂದರೆ ಮತ್ತು ರೋಗ ,ಕೀಟ ಸಮಸ್ಯೆಗಳಿಂದ ಪಾರಾದರೆ ಇದು ಲಾಭದ ಉತ್ತಮ ಬೆಳೆ.
ಯಾಕೆ ಆಗುತ್ತದೆ?
- ದಾಳಿಂಬೆಯ ಕಾಯಿಗೆ ಯಾವ ರೋಗಾಣು – ಕೀಟಾಣು ಬಾಧೆ ಇಲ್ಲದಿದ್ದರೂ ಇದು ಆಗುತ್ತದೆ.
- ಬೇಸಿಗೆಯ ಕಾಲದಲ್ಲಿ ಮಧ್ಯಾನ್ಹದ ನಂತರದ ಬಿಸಿಲು ಕಾಯಿಗಳಿಗೆ ಬಿಳುವುದರಿಂದ ಕಾಯಿಯ ಮೇಲೆ ಸನ್ ಬರ್ನ್ ಉಂಟಾಗುತ್ತದೆ.
- ಆಗ ಆ ಭಾಗ ಕಪ್ಪಗಾಗಿ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ವಿಕ್ರಯವಾಗುತ್ತದೆ.
ಇದರ ನಿಯಂತ್ರಣಕ್ಕೆ ಗಿಡವನ್ನು ಪ್ರೂನಿಂಗ್ ಮಾಡುವಾಗ ಕಾಯಿ ಬಿಡುವ ಗೆಲ್ಲುಗಳಿಗೆ ನೆರಳು ಒದಗಿಸುವಂತೆ ಮೇಲು ಭಾಗದಲ್ಲಿ ಗೆಲ್ಲನ್ನು ಬಿಡಬೇಕು. ಇದು ನೆರಳನ್ನು ಕೊಡುವಂತಿದ್ದು ಕಾಯಿಯ ಮೇಲೆ ನೇರ ಸೂರ್ಯನ ಶಾಖ ತಾಗದಂತಿರಬೇಕು.
ಮುನ್ನೆಚ್ಚರಿಕೆ:
- ಕಾಯಿ ಬಿಟ್ಟು 15 ದಿನ ಕಳೆದ ಮೇಲೆ ಬಿಸಿಲಿನ ತೀವ್ರತೆಯನ್ನು ಗಮನಿಸಿ 15 ದಿನಕ್ಕೊಮ್ಮೆ ಕಾಯಿಗಳ ಮೇಲೆ ಕೋಲಿನ್ {Kaoline (inert clay )}ಕಾಯಿಗಳ ಮೇಲೆ ಸಿಂಪರಣೆ ಮಾಡಬೇಕು.
- ಮೊದಲು ಸಿಂಪಡಿಸುವಾಗ 5 % ವನ್ನು ನಂತರ 2.5% ವನ್ನು ಸಿಂಪರಣೆ ಮಾಡಬೇಕು.
- ದಾಳಿಂಬೆ ಸಸ್ಯಕ್ಕೆ ನೇರ ಬಿಸಿಲು ಬಿದ್ದೇ ಬೀಳುತ್ತದೆ ಎಂಬ ಖಾತ್ರಿ ಇದ್ದರೆ ಪ್ರತೀ ಸಸಿಗೆ ನಾಲ್ಕು ಬದಿಗೆ ಗೂಟ ಹಾಕಿ ಇಲ್ಲವೇ ಹಾಗೆಯೇ 35 % ನೆರಳು ಒದಗಿಸುವ ನೆರಳು ಬಲೆಯನ್ನು ಹೊದಿಸುವುದು ಉತ್ತಮ.
- ಈ ನೆರಳು ಬಲೆಯನ್ನು 3-4 ವರ್ಷ ಉಪಯೋಗ ಮಾಡಬಹುದು. ಇದಕ್ಕೆ ಹಳೆ ಸೀರೆ ಹೊದಿಸಿಸುವುದೂ ಇದೆ.
ಕಾಯಿಗಳಿಗೆ ಬಟರ್ ಪೇಪರ್ ಸುತ್ತುವುದೂ ಸಹ ಪರಿಣಾಮಕಾರಿ.ಇದು ತುಂಬಾ ಕೆಲಸ ಅಪೇಕ್ಷಿಸುವ ಕಾರಣ ಅದಕ್ಕಿಂತ ನೆರಳು ಬಲೆ ಹಾಕುವುದು ಅಗ್ಗವಾಗುತ್ತದೆ. ನೆರಳು ಬಲೆಯಿಂದ ಕೆಲವು( ಕಾಯಿ ಕೊರಕ, ನುಶಿ, ಬಿಳಿ ನೊಣ) ಕೀಟಗಳ ಸೋಂಕು ಸಹ ಕಡಿಮೆಯಾಗುತ್ತದೆ.
- ದಾಳಿಂಬೆ ಹೊಲದಲ್ಲಿ ಹೆಬ್ಬೇವಿನ ಸಸಿಗಳನ್ನು ನಾಟಿ ಮಾಡುವುದರಿಂದ ನೆರಳು ಹೆಚ್ಚಿಸಿ ಸೂರ್ಯನ ಶಾಖವನ್ನು ಕಡಿಮೆ ಮಾಡಬಹುದು.
- ಹೆಬ್ಬೇವಿನ ಗಿಡ ವೇಗವಾಗಿ, ಎತ್ತರವಾಗಿ ಬೆಳೆಯುತ್ತದೆ.
- ಅದು ಗಾಳಿಗೆ ವಾಲುತ್ತಾ ಇರುವಾಗ ಕಾಯಿಯ ಮೇಲೆ ನಿರಂತರ ಬಿಸಿಲು ಬೀಳುವಿಕೆಯನ್ನು ತಪ್ಪಿಸುತ್ತದೆ.
- ಮರವನ್ನು 10 ವರ್ಷ ಬೆಳೆಸಿದ ನಂತರ ಅದಕ್ಕೆ ಉತ್ತಮ ಬೆಲೆಯೂ ಇದೆ.
- ಕಾಯಿ ಒಡೆಯುವ ಸಮಸ್ಯೆ ಎಲ್ಲಾ ಕಡೆ ತೀವ್ರವಾಗಿದ್ದು, ಇದರಿಂದ ಭಾರೀ ನಷ್ಟ ಉಂಟಾಗುತ್ತದೆ.
- ಬೆಳೆಯುತ್ತಿರುವ ಕಾಯಿಗಳು ಒಡೆಯಲು ಪ್ರಾರಂಭವಾಗುವುದಕ್ಕೆ ಕಾರಣ ಅತಿಯಾದ ಇಬ್ಬನಿ ಬೀಳುವಿಕೆ , ತಕ್ಷಣ ಮಳೆ ಬರುವಿಕೆ, ಹಗಲಿನ ತಾಪಮಾನ ಹೆಚ್ಚು ಆಗಿರುವುದು. ರಾತ್ರೆಯದ್ದು ಕಡಿಮೆ
- ಹೆಚ್ಚು ಸಮಯ ನೀರಾವರಿ ಮಾಡದೆ ಒಮ್ಮೆಲೇ ಅಧಿಕ ನೀರಾವರಿ ಮಾಡುವುದರಿಂದ. ಮೃಗಶಿರ ಬಹರ್ನಲ್ಲಿ ಈ ಸಮಸ್ಯೆ ಅಧಿಕ.
ಬೇಸಾಯ ಕ್ರಮ:
- ಸೂಕ್ತ ಬೇಸಾಯ ಕ್ರಮ ಅನುಸರಿಸಿ ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು.
- ದಾಳಿಂಬೆ ಕಾಯಿ ಹೂವು ಬಿಟ್ಟ ಮೇಲೆ ನೀರಾವರಿ ಕಡಿಮೆ ಮಾಡಬಾರದು.
- ಹೆಚ್ಚೂ ಮಾಡಬಾರದು. ಸಾಮಾನ್ಯವಾಗಿ ನೀರಾವರಿಯ ವೆತ್ಯಾಸವೇ ಈ ರೀತಿ ಆಗಲು ಕಾರಣ.
- ಹೂ ಬಿಡುವ ಹಂತದಲ್ಲಿ ಕೊಡುವ ನೀರನ್ನು ಕಾಯಿ ಬೆಳವಣಿಗೆ ಆಗುವ ಸಮಯದ ತನಕ ಹೆಚ್ಚಿಸುತ್ತಾ ಬರಬೇಕು.
- ಬರೇ ನೀರು ಹೆಚ್ಚಿಸುವಿಕೆ ಮಾತ್ರವಲ್ಲದೆ ಒಮ್ಮೆ ಪೊಟ್ಯಾಶಿಯಂ ನೈಟ್ರೇಟ್ ನಂತರ ಪೊಟಾಶಿಯಂ ಸಲ್ಫೇಟ್ ಹೀಗೆ ಗೊಬ್ಬರ ಬದಲಾಯಿಸಿ ಕೊಡುತ್ತಿರಬೇಕು.
- ಪೊಟಾಶಿಯಂ ಸಲ್ಫೇಟ್ ಗೊಬ್ಬರವನ್ನು 1 ಕಿಲೋ 200 ಲೀ. ನೀರಿಗೆ ಬೆರೆಸಿ ಕಾಯಿ ಬೆಳವಣಿಗೆಯ ಹಂತದಲ್ಲಿ ಸಿಂಪರಣೆ ಮಾಡುವುದು ಕಾಯಿ ಒಡೆಯದಂತೆ ತಡೆಯಲು ಸಹಕಾರಿ.
- ಹೂ ಬಿಟ್ಟು ಕಾಯಿ ಆಗುವ ಸಮಯದಲ್ಲಿ ಒಮ್ಮೆಯಾದರೂ ಪ್ರತೀ ಸಸಿಗೆ 20ಗ್ರಾಂ ನಂತೆ ಕ್ಯಾಲ್ಸಿಯಂ ನೈಟ್ರೇಟ್ , ಅಥವಾ ಕ್ಯಾಸಿಯಂ ಅಮೋನಿಯಂ ನೈಟ್ರೇಟ್ ಗೊಬ್ಬರವನ್ನು ಕೊಡಬೇಕು.
ಕಾಯಿಯು ಬೆಳವಣಿಗೆ ಆಗುವ ಸಮಯದಲ್ಲಿ ಜಿಬರಲಿಕ್ ಅಸಿಡ್ 120 ಪಿ ಪಿ ಎಂ, ಬೆನ್ಜಿಲಮಿನೋಪುರಿನ್ Benzylaminopurine BA 6 ಮತ್ತು 0.2% ಬೋರಾನನ್ನು ಕೊಡುವುದರಿಂದ ಬಹುತೇಕ ಕಾಯಿ ಒಡೆಯುವಿಕೆಯನ್ನು ನಿಯಂತ್ರಿಸಬಹುದು. ಅಥವಾ ಕಾಯಿ ಬೆಳೆಯುವ ಸಮಯದಲ್ಲಿ 1 ಕಿಲೋ ಕ್ಯಾಲ್ಸಿಯಂ ಕ್ಲೊರೈಡ್ 1 ಕಿಲೋ ಮೆಗ್ನೀಶಿಯಂ ಕ್ಲೋರೈಡ್ 100 ಲೀ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡುವುದರಿಂದ ಕಾಯಿ ಒಡೆಯುವಿಕೆ ಕಡಿಮೆಯಾಗುತ್ತದೆ.
- ಈ ಸಿಂಪರಣೆಯ ನಂತರ 15 ದಿನ ಬಿಟ್ಟು 1.5 ಕಿಲೋ ಡಿ ಎ ಪಿ ಮತ್ತು .75 ಕಿಲೋ ಮೆಗ್ನೀಶಿಯಂ ಸಲ್ಫೇಟ್ 100 ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
- ಉತ್ತಮ ಕಾಯಿ ಪಡೆಯುವುದಕ್ಕಾಗಿ ಹೂವು ಮತ್ತು ಕಾಯಿಗಳ ವಿರಳಗೊಳಿಸುವಿಕೆ ಮಾಡಬೇಕು.
- ಒಂದು ಗಿಡದಲ್ಲಿ 70 -80 ಕಾಯಿಯ ಬದಲಿಗೆ 50-40 ಕಾಯಿಯನ್ನು ಮಾತ್ರವೇ ಉಳಿಸಿಕೊಂಡರೆ ಎಲ್ಲವೂ ಉತ್ತಮ ಕಾಯಿಯಾಗಿ ಆದಾಯಕ್ಕೆ ಕೊರತೆಯಾಗದು.
ಅತಿಯಾಗಿ ರಾಸಾಯನಿಕ ಗೊಬ್ಬರ ಕೊಡಬಾರದು. ಹೆಚ್ಚು ಸಾರಜನ ಯಕ್ತ ಗೊಬ್ಬರ ಕೊಡಬಾರದು. ಸಮತೋಲನದ ಪೋಷಕಾಂಶ ಮತ್ತು ಹಾನಿಯಾಗಿ ಹಾಳಾದ ಹಣ್ಣುಗಳನ್ನು ಸ್ಥಳದಿಂದ ವಿಲೇವಾರಿ ಮಾಡುತ್ತಿದ್ದರೆ ಸಮಸ್ಯೆ ಕಡಿಮೆ.