ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ

ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳು

ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ  ಯಾವ ಕಶ್ಮಲ  ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು  ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ.

  • ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು  ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ.
  • ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ  ಕೆಡುತ್ತದೆ.

ಯಾವ ನೀರಿನ ಮೂಲ:

  • ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ ನೀರು, ಹೊಳೆ- ಕಾಲುವೆ, ಹಳ್ಳಗಳ ನೀರು.
  • ಈ ಮೂರು ನೀರಿನ ಮೂಲದಲ್ಲೂ ಬೇರೆ ಬೇರೆ ನಮೂನೆಯ ಕಟ್ಟಿಕೊಳ್ಳುವ ವಸ್ತುಗಳಿರುತ್ತವೆ.
  • ಅದನ್ನು ಮೊದಲಾಗಿ ತಿಳಿಯಬೇಕು.
  • ಬಾವಿ -ಕೆರೆ, ಟ್ಯಾಂಕ್ ನೀರಿನಲ್ಲಿ ಹೆಚ್ಚಾಗಿ ಹಾವಸೆ ಮತ್ತು ಮಣ್ಣಿನ ಕಣಗಳು ಇರುತ್ತವೆ.
  • ಇವು ಹನಿ ನೀರಾವರಿಯ ತೊಟ್ಟಿಕ್ಕುವ ಸಾಧನಗಳನ್ನು ಕಟ್ಟಿಕೊಳ್ಳುವಂತೆ ಮಾಡುತ್ತದೆ.

ಕೊಳವೆ  ಬಾವಿಯ ನೀರಿನಲ್ಲಿ ಕಲ್ಲಿನ ಸಣ್ಣ ಹುಡಿ ಮತ್ತು  ತೋಡುವ ಸಮಯದಲ್ಲಿ ಗ್ಯಾಪ್ ಗಳಲ್ಲಿ ಸಂಗ್ರಹವಾಗಿ ಉಳಿದ ಸಣ್ಣ ಸಣ್ಣ ಕಲ್ಲಿನ ಚೂರುಗಳು, ಮಣ್ಣಿನ ಕಣಗಳು (ಸಿಲ್ಟ್) ಹೆಚ್ಚಾಗಿ ಇರುತ್ತವೆ. ಇದು  ಕಟ್ಟಿ ಕೊಳ್ಳುವ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ.

ನೀರಿನ ಪರೀಕ್ಷೆ:

  • ಎಲ್ಲಾ ಮೂಲದ ನೀರನ್ನು ಹನಿ ನೀರಾವರಿಯ  ಮೂಲಕ  ಉಪಯೋಗ ಮಾಡುವಾಗ ಮೊದಲಾಗಿ ನೀರನ್ನು ಪರೀಕ್ಷೆ ಮಾಡಬೇಕು.
  • ಒಂದು ಗಂಟೆ ಕಾಲ ನೀರನ್ನು ಪಂಪಿನ ಮೂಲಕ ಹರಿಸಿ ನಂತರ ಅದನ್ನು ಒಂದು 200 ಲೀ. ಸಾಮರ್ಥ್ಯದ  ಬ್ಯಾರಲ್‍ಗೆ ತೀರಾ ಸೂಕ್ಷ್ಮ ತೂತು ಉಳ್ಳ  ಬಿಳಿ ಬಟ್ಟೆ ಕಟ್ಟಿ ತುಂಬಿಸಬೇಕು.  
  • ಬಟ್ಟೆಯ ಮೇಲೆ ಹಾವಸೆ, ಮಣ್ಣಿನ ಕಣ,  ಕಲ್ಲಿನ ಹುಡಿ, ಸಣ್ಣ ಮರಳು ತಂಗುತ್ತದೆ.

ಕೊಳವೆ ಬಾವಿಯಲ್ಲಿ  ಹಾವಸೆ ಇರುವುದಿಲ್ಲ.  ಬ್ಯಾರಲ್ ಗೆ ತುಂಬಿ ಒಂದು ದಿನ ಬಿಟ್ಟು ನೋಡಿದರೆ ತಳದಲ್ಲಿ ತಂಗಿದ ಕಶ್ಮಲ ಯಾವುದು ಎಂದು ಗೊತ್ತಾಗುತ್ತದೆ. ಡೆಲಿವರಿ ಪೈಪ್ ಲೈನಿನ ತಗ್ಗಿನ ಬದಿಯ  ಎಂಡ್ ಕ್ಯಾಪ್ ನಲ್ಲಿ ಕಣಗಳ ಸಂಗ್ರಹ ಇರುತ್ತದೆ. ಇದನ್ನು ನೊಡಿ ಯಾವ ಕಶ್ಮಲ ಇದೆ ಎಂದು ತಿಳಿಯಬಹುದು.

ಸಿಲ್ಟ್:

  • ಇದು ಮಣ್ಣಿನ ಸೂಕ್ಷ್ಮ ಕಣಗಳು. ಗಂಧದ ತರಹ ಪೈಪಿನ ಗೋಡೆಗಳಲ್ಲಿ, ನೀರು ತೊಟ್ಟಿಕ್ಕುವ ಸಾಧನಗಳಲ್ಲಿ ಅಂಟಿಕೊಂಡಿರುತ್ತದೆ.
  • ನೀರಿನೊಂದಿಗೆ ಸೇರಿಕೊಂಡು ಇರುವ ಕಾರಣ ಇದರ ಇರುವಿಕೆ ಗೊತ್ತೇ ಆಗುವುದಿಲ್ಲ.
  • ಸಾಮಾನ್ಯವಾಗಿ ಮೆಶ್‍ಫಿಲ್ಟರ್‍ನಲ್ಲಿ ಇದು ಹಾದು ಹೋಗುತ್ತದೆ.
  • ಕಲ್ಲಿನ ಎಡೆಯಿಂದ ಬರುವ ನೀರಿನಲ್ಲಿ, ಸಂಗ್ರಹಿತ ನೀರಿನಲ್ಲಿ, ಕೊಳವೆ ಬಾವಿಗಳ ನೀರಿನಲ್ಲಿ  ಇದು ಇರುತ್ತದೆ, ಬರಿ ಕಣ್ಣಿಗೆ ಈ ಸಿಲ್ಟ್  ಕಾಣಿಸುವುದಿಲ್ಲ.
  • ಹೊಸ ಪೈಪನ್ನು ಅಳವಡಿಸಿದ್ದರೆ, ಆ ಪೈಪಿನ ಒಳ ಗೋಡೆಗಳಲ್ಲಿ ಅದು ಅಂಟಿಕೊಳ್ಳುತ್ತದೆ.
  • ಪೈಪಿನ ಒಳ ಮೈಯಲ್ಲಿ ಮಣ್ಣು ತರಹ ಅಂಟಿದ್ದು ಕಂಡು ಬಂದರೆ ಆ ನೀರಿನಲ್ಲಿ ಸಿಲ್ಟ್ ಇದೆ ಎಂದರ್ಥ.
  • ಈ ಸಿಲ್ಟ್ ಸ್ವಲ್ಪ ಸ್ವಲ್ಪವೇ ಶೇಖರಣೆಯಾಗಿ ನೀರು ಹರಿಯುವ ಪೈಪಿನುದ್ದಕ್ಕೂ ಸಂಗ್ರಹವಾಗುತ್ತದೆ.
  • ಇದು ನೀರು ಹೊರ ಹಾಕುವ ಸಾಧನಗಳನ್ನು ನಿಧಾನವಾಗಿ ಬ್ಲಾಕ್ ಮಾಡುತ್ತದೆ. 
  • ಡ್ರಿಪ್ಪರನ್ನು ತೆರೆದು ನೋಡಿದರೆ ಅದರೊಳಗೆ ಶೇಖರಣೆಯಾದುದು ಕಂಡು ಬರುತ್ತದೆ. ಪೈಪಿನಲ್ಲೂ ಇರುತ್ತದೆ.

ನಿವಾರಣೆ:

  • ಬಹುತೇಕ ಬೋರ್ ವೆಲ್ ಗಳಲ್ಲಿ ಈ ಸಿಲ್ಟ್ ಇರುತ್ತದೆ. ಇದು ಮಣ್ಣಿನಲ್ಲಿರುವ ಖನಿಜದ ಅಂಶ.
  • ಇದನ್ನು ಹೈಡ್ರೋಕ್ಲೋರಿಕ್ ಎಸಿಡ್ ಮಾತ್ರ ತೆಗೆಯಬಲ್ಲುದು.
  • ಹನಿ ನೀರವರಿ ಕೊಳವೆಗಳಿಗೆ ವರ್ಷಕ್ಕೆ ಒಂದು ಬಾರಿ ಅಗತ್ಯವಿದ್ದರೆ ಎರಡು ಬಾರಿ ವೆಂಚುರಿ ಮೂಲಕ ಈ ಆಮ್ಲವನ್ನು (1ಲೀ ಆಮ್ಲಕ್ಕೆ 5 ಲೀ. ನೀರು ಸೇರಿಸಿ) ತುಂಬಿ ಒಂದು ದಿನ ಬಿಟ್ಟು ಎಂಡ್ ಕ್ಯಾಪ್ ತೆಗೆದರೆ ಬಹುತೇಕ ಸಿಲ್ಟ್ ಕರಗಿ ಹೋಗುತ್ತದೆ.
  • ಡ್ರಿಪ್ಪರುಗಳಲ್ಲಿ ಅಂಟಿರುವುದೂ ಕರಗಿ ಹೋಗುತ್ತದೆ.
  • ಒಂದು ವೇಳೆ ಅತೀ ಹೆಚ್ಚು ಸಂಗ್ರಹವಾಗಿದ್ದರೆ ಎಲ್ಲಾ ಡ್ರಿಪ್ಪರುಗಳನ್ನು ತೆಗೆದು ಅದನ್ನು ಬಿಚ್ಚಿ ಈ ಆಮ್ಲದ ದ್ರಾವಣದಲ್ಲಿ ಹಾಕಿ ಒಂದು ದಿನ ಬಿಟ್ಟರೆ ಹೊಸ ಡ್ರಿಪ್ಪರಿನಂತೆ ಆಗುತ್ತದೆ.

ಇದಕ್ಕೆ ಸೂಕ್ತವಾದ ಸ್ಯಾಂಡ್ ಫಿಲ್ಟರ್ ಅಳವಡಿಸದಿದ್ದರೆ ಹನಿ ನೀರಾವರಿ ಪೂರ್ತಿ ವಿಫಲವಾಗುತ್ತದೆ. ಆಮ್ಲ ಉಪಚಾರ ಅಗತ್ಯ.

ಹನಿ ನೀರಾವರಿಯಲ್ಲಿ  ನೀರು ತೊಟ್ಟಿಕ್ಕುವ ಸಾಧನಗಳ ತೂತುಗಳು ಅತೀ ಸೂಕ್ಷ್ಮವಾಗಿದ್ದು, ಅತೀ ಸಣ್ಣ ಕಣ ರೂಪದ ಕಶ್ಮಲವೂ ಇಲ್ಲಿ ಕಟ್ಟಿಕೊಳ್ಳುತ್ತದೆ. ಆದ ಕಾರಣ  ಕಶ್ಮಲ ಯಾವುದೆಂದು ತಿಳಿದು ಅದಕ್ಕೆ  ಬೇಕಾದ ಸೋಸು ವ್ಯವಸ್ಥೆ ಮಾಡಿ ಅಳವಡಿಕೆ ಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!