ಕಳೆದ ಕೆಲವು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು, ಕರಿಮೆಣಸಿನ ಬಳ್ಳಿಗೆ ಯಾವಾಗಲೂ ರೋಗ ಬರಬಹುದು. ಬಂದಿರಲೂ ಬಹುದು. ರೋಗದ ಮುನ್ಸೂಚನೆ ಪತ್ತೆ ತಿಳಿದಿದ್ದರೆ ಅದನ್ನು ಬದುಕಿಸಬಹುದು.
ಮಳೆಗಾಲ ಮೆಣಸಿನ ಬಳ್ಳಿಗೆ ತೀವ್ರವಾದ ತೊಂದರೆಯನ್ನು ಉಂಟು ಮಾಡುತ್ತದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಮುಗಿಯುವ ತನಕ ಯಾವಾಗಳೂ ಬರಬಹುದಾದ ಬಳ್ಳಿ ಕೊಳೆ ರೋಗವನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಬಳ್ಳಿಯನ್ನು ಬದುಕಿಸಬಹುದು. ರೋಗ ಪ್ರಾರಂಭವಾಗುವಾಗ ಬಳ್ಳಿ ಯಾವ ಲಕ್ಷಣಗಳನ್ನು ತೋರಿಸುತ್ತದೆ ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಿದ್ದರೆ ಮಾತ್ರ ನಿವಾರಣೆ ಮಾಡಲು ಸಾಧ್ಯ.
ಬುಡ ಭಾಗದಲ್ಲಿ ಎಲೆ ಉದುರಿದೆಯೇ:
- ಆದಾರ ಮರಕ್ಕೆ ಹಬ್ಬಿದ ಬಳ್ಳಿಯ ಎಲೆಗಳಲ್ಲಿ ಮೊದಲ ಲಕ್ಷಣ ಕಂಡು ಬರುತ್ತದೆ.
- ರೋಗವು ಮೊದಲಾಗಿ ಬಳ್ಳಿಯ ಬೇರಿಗೆ ಬಾಧಿತವಾಗುತ್ತದೆ.
- ಬೇರಿನ ಮೂಲಕ ಆ ರೋಗಾಣು ಸಸ್ಯದ ಎಲ್ಲಾ ಅಂಗಗಳಿಗೂ ಪ್ರಸಾರವಾಗುತ್ತದೆ.
- ತಕ್ಷಣದ ಪರಿಣಾಮವಾಗಿ ಎಲೆಗಳು ಬಾಡಿದಂತಾಗಿ( ಬಿಸಿಲು ಇದ್ದರೆ) ಕಾಣಿಸಿ ಒಂದೆರಡು ದಿನದಲ್ಲಿ ಉದುರಲು ಪ್ರಾರಂಭವಾಗುತ್ತದೆ.
- ಬುಡಭಾಗದಲ್ಲಿ 1-2 ಎಲೆ ತೊಟ್ಟು ಸಮೇತ ಉದುರಿದೆ ಎಂದರೆ ಅ ಬಳ್ಳಿಯ ಬೇರಿಗೆ ಶಿಲೀಂದ್ರ ಬಾಧೆ ಪ್ರಾರಂಭವಾಗಿದೆ ಎಂದರ್ಥ.
ಎಲೆ ಹಳದಿಯಾಗಿದೆಯೇ:
- ಒಂದಷ್ಟು ಎಲೆಗಳು ಬುಡದಲ್ಲಿ ಉದುರಿ ಬಿದ್ದಿವೆ. ಬಳ್ಳಿಯಲ್ಲಿ ಎಲೆಗಳು ವಿರಳವಾಗಿದೆ, ಇರುವ ಎಲೆಗಳು ಹಳದಿಯಾಗಿದೆ ಎಂದಾದರೆ ಆ ಬಳ್ಳಿಯ ಬುಡ ಭಾಗ ಸಂಪೂರ್ಣವಾಗಿ ಶಿಲೀಂದ್ರ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದೆ ಎಂದರ್ಥ.
- ಆ ಬಳ್ಳಿಗೆ ಉಪಚಾರ ಮಾಡಿದರೂ ಅದು ಬದುಕುವುದಿಲ್ಲ’.
- ಇಲ್ಲಿ ಒಂದು ಒಂದು ಅಂಶವನ್ನು ಪ್ರತೀಯೊಬ್ಬ ಮೆಣಸು ಬೆಳೆಗಾರನೂ ಗಮನಿಸಬೇಕಾದುದು ಎಂದರೆ
- ಮೆಣಸಿನ ಬಳ್ಳಿ ಅಥವಾ ಸಸಿ ನೆಡುವಾಗ ರೈತರು ಒಂದೇ ಬಳ್ಳಿ ನೆಡುವುದು ಕಡಿಮೆ. ಎರಡು, ಮೂರು ಬಳ್ಳಿಗಳನ್ನು ನೆಟ್ಟಿರುತ್ತಾರೆ,
- ಎರಡು ಮೂರು ಬಳ್ಳಿಗಳೂ ಬದುಕಿ ಉಳಿದರೆ ಅದರ ಮೂರೂ ಕಾಂಡವೂ ಆಸರೆಗೆ ಹಬ್ಬಿರುತ್ತದೆ.
- ಶಿಲೀಂದ್ರ ಸೋಂಕು ಒಂದಕ್ಕೆ ಬಾಧಿತವಾಗಿ ಉಳಿದವು ಬಾಧಿತವಾಗಿರದೇ ಇರಬಹುದು.
- ಇಂತಹ ಸಂದರ್ಭದಲ್ಲಿ ಹಾಳಾದ ಬಳ್ಳಿ ಎಂದು ಉಪಚಾರ ಮಾಡದೆ ಇರಬಾರದು.
- ನಾವು ಮಾಡುವ ಉಪಚಾರ ರೋಗ ಸೋಂಕು ತಗಲದ ಅಥವಾ ಇನ್ನೇನೂ ತಗಲಬಹುದೆಂದಿರುವ ಬಳ್ಳಿಯ ಜೀವವನ್ನು ರಕ್ಷಿಸುತ್ತದೆ. ಅದು ರೋಗಕ್ಕೆ ತುತಾಗುವುದಿಲ್ಲ.
ಕರೆಗಳು ಉದುರಿವೆಯೇ:
- ನಿಮ್ಮ ಮೆಣಸಿನ ಬಳ್ಳಿಯಲ್ಲಿ ಕರೆಗಳು ಉದುರಬಾರದು.
- ಮಾನವಕೃತ ಅಥವಾ ಇನ್ಯಾವುದೋ ಭೌತಿಕ ಕಾರಣಗಳಿಂದ ಉದುರಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ.
- ಅಂತಹ ಕರೆಯನ್ನು ಅಲ್ಲಿಂದ ತೆಗೆದು ಬಿಸಿ ನೀರು ಕಾಯಿಸುವ ಒಲೆಗೆ ಹಾಕಿ.
- ಯಾವುದೇ ಘಾಸಿ ಆಗದೆ ಕರೆಗಳು ಉದುರಿರುವುದು ಕಂಡು ಬಂದರೆ ಆ ಬಳ್ಳಿಗೆ ರೋಗದ ಸೋಂಕು ತಗಲಿದೆ ಎಂದರ್ಥ.
- ಅದಕ್ಕೆ ತಕ್ಷಣ ಉಪಚಾರ ಮಾಡಬೇಕು.
ಎಲೆಗಳಲ್ಲಿ ಕಪ್ಪು ಚುಕ್ಕೆ ಇದೆಯೇ?
- ಕೆಳಭಾಗದ ಅಥವಾ ನೆಲದಲ್ಲಿ ಹಬ್ಬಿರುವ ಬಳ್ಳಿಯ ಎಲೆಗಳಲ್ಲಿ ಕಪ್ಪಗೆ ಕೊಳೆತ ಚುಕ್ಕೆ ಕಂಡು ಬಂದರೆ ಆಲ್ಲಿಯೂ ಶಿಲೀಂದ್ರ ಸೋಂಕು ಉಂಟಾಗಿದೆ ಎಂದರ್ಥ.
- ಇಂತಹ ಬಳ್ಳಿಯ ಕಪ್ಪು ಚುಕ್ಕೆ ಕಂಡು ಬಂದ ಎಲೆಗಳನ್ನು ತುಂಡು ಮಾಡಿ ತೆಗೆದು, ಅದನ್ನು ಸುಡಬೇಕು.
- ಯಾವುದೇ ಕಾರಣಕ್ಕೆ ಅಲ್ಲಿ ಅದನ್ನು ಬಿಡಭಾರದು.
- ತಕ್ಷಣ ಸೋಂಕು ಹರಡದ ಅಥವಾ ಸೋಂಕು ಹೆಚ್ಚಾಗದ ಔಷಧಿಯನ್ನು ಸಿಂಪರಣೆ ಮಾಡಬೇಕು.
ಎಲೆ ಅಲಗುಗಳು ಒಣಗಿದೆದೆಯೇ?
- ಇದೂ ಸಹ ರೋಗ ಸೋಂಕಿನ ಲಕ್ಷಣ. ಇಂತಹ ಎಲೆಗಳು ನೈಜ ಹಸುರು ಬಣ್ಣದಲ್ಲಿ ಇರುವುದಿಲ್ಲ.
- ಅದು ಬಿಳುಚಿಕೊಂಡು ಇರುತ್ತದೆ. ಅಂತಹ ಬಳ್ಳಿಗಳಿಗೆ ತಕ್ಷಣ ಉಪಚಾರ ಮಾಡಬೇಕು.
- ಎಲೆಗಳು ಒಂದೆರಡು ಬಿಸಿಲು ಬಂದ ತಕ್ಷಣ ಬಾಡಿದೆಯೇ, ಅ ಬಳ್ಳಿಗೆ ಸೋಂಕು ತಗಲಿದೆ.
- ಅದನ್ನು ತಕ್ಷಣ ಉಪಚಾರ ಮಾಡಬೇಕು.
- ಎಲೆ ಬಾಡಿದ್ದರೆ ಸೋಂಕು ನಿವಾರಕವಲ್ಲದೆ ತಕ್ಷಣ ಆಹಾರ ಲಭ್ಯವಾಗುವಂತೆ ಮಾಡಲು ಪೋಷಕಾಂಶದ ಸಿಂಪರಣೆ ಅಗತ್ಯ.
ಯಾವ ಔಷಧಿ ಸಿಂಪಡಿಸಬೇಕು:
- ಸಾಮಾನ್ಯವಾಗಿ ರೂಢಿಯಲ್ಲಿರುವ ಔಷಧಿ ಬೋರ್ಡೋ ದ್ರಾವಣ.ಶೇ. 1 ರ ಬೋರ್ಡೋ ದ್ರಾವಣವನ್ನು ಎಲೆಗೆ , ಬಳ್ಳಿಯ ದಂಟಿಗೆ ಹಾಗೂ ಬುಡ ಭಾಗಕ್ಕೆ ಸುಮಾರು 2-3 ಲೀ. ಬೀಳುವಂತೆ ಸಿಂಪರಣೆ ಮಾಡಬೇಕು.
- ಅದಲ್ಲದಿದ್ದರೆ ಪೊಟ್ಯಾಶಿಯಂ ಫೋಸ್ಪೋನೇಟ್ 2.5 ಅಥವಾ 3 ಗ್ರಾಂ 1 ಲೀ. ನೀರಿಗೆ ಬೆರೆಸಿ ಅದರ ಜೊತೆಗೆ 200 ಲೀ. ನೀರಿಗೆ 1 ಕಿಲೋ ಮೊನೋ ಪೊಟ್ಯಾಶಿಯಂ ಫೋಸ್ಫೇಟ್ ಮತ್ತು 100 ಗ್ರಾಂ ಸೂಕ್ಷ್ಮ ಪೊಷಕಾಂಶವನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
- ಇದು ಗರಿಷ್ಟ ಫಲಿತಾಂಶವನ್ನು ಕೊಡುತ್ತದೆ.ಇವೆರಡರ ಬಳಕೆಯನ್ನೂ ಮಾಡುವಾಗ ಒಂದು ದಿನ( 6 ಗಂಟೆ)ದ ಮಟ್ಟಿಗೆ ಯಾದರೂ ಮಳೆ ಬರಬಾರದು.
- ಕೆಲವರು COC ಮತ್ತು ಟಾಗ್ರೋನ್ ಮಿಶ್ರಣ ಮಾಡಿ ಸಿಂಪರಣೆ ಮತ್ತು ಡೆಂಚಿಂಗ್ ಮಾಡುತ್ತಾರೆ. ಇದರಲ್ಲೂ ಫಲಿತಾಂಶ ಇದೆ.
- ಬುಡದಲ್ಲಿ ಹಬ್ಬಿರುವ ಎಲ್ಲಾ ಬಳ್ಳಿಗಳನ್ನೂ ತೆಗೆಯಬೇಕು. ಇಲ್ಲವೇ ಅದಕ್ಕೆ ನೆಲದ ಮಣ್ಣು ಸಿಡಿಯದಂತೆ ಮಾಡಬೇಕು.
- ಮೆಣಸಿನ ಬಳ್ಳಿ ನೆಡುವಾಗ ಅಥವಾ ಬಳ್ಳಿ ಬುಡದಿಂದ ತೆಗೆಯುವಾಗ ನೆಲದಲ್ಲಿ ಅದರ ಎಲೆಗಳನ್ನು ಉಳಿಸಬಾರದು.
- ಕೊಳೆಯುವ ಸೊಪ್ಪು ಸದೆಗಳನ್ನು ಮೆಣಸಿನ ಬಳ್ಳಿಯ ಬುಡಕ್ಕೆ ಹಾಕಬಾರದು.
- ನೆಲದಲ್ಲಿ ಬೆಳೆಯುವ ಕಳೆಗಳನ್ನು ಸ್ವಚ್ಚವಾಗಿ ತೆಗೆದು ಮಣ್ಣಿಗೆ ನೀರು ನೇರವಾಗಿ ಬೀಳುವಂತೆ ಮಾಡಬಾರದು.
- ಅಲ್ಪ ಸ್ವಲ್ಪ ಕಳೆ ಇದ್ದಾಗ ಮಳೆ ನೀರಿನ ನೇರ ಹೊಡೆತ ತಡೆಯಲ್ಪಡುತ್ತದೆ.
- ಮೆಣಸಿನ ಬಳ್ಳಿಯ ಬುಡದಲ್ಲಿ ನೀರು ನಿಲ್ಲಬಾರದು.
- ಹಸಿಯಾದ ಸಾವಯವ ಗೊಬ್ಬರ( ಕಳಿಯದೆ ಇರುವ) ಹಾಕಬಾರದು.
- ಬಳ್ಳಿಗೆ ಮಳೆಗಾಲದ ಕಂತಿನ ಪ್ರಮಾಣದ ಪೋಶಕಾಂಶವನ್ನು ತಪ್ಪದೆ ಕೊಡಬೇಕು. ಇವು ರೋಗದ ಸಾಧ್ಯತೆಯನ್ನ್ನು ಕಡಿಮೆ ಮಾಡುತ್ತದೆ.
ನೆಲಮಟ್ಟದಿಂದ 2 ಅಡಿ ಎತ್ತರದ ತನಕ ಬಳ್ಳಿಯ ಬುಡದಲಿ ಎಲೆಗಳು ಇರಬಾರದು. ಬುಡದ ಬಳ್ಳಿಗೆ 1 ಮೀ. ತನಕ ಬೋರ್ಡೋ ಪೇಸ್ಟ್ ಲೇಪನ ಮಾಡಬೇಕು.ರೋಗ ಬಂದ ಅಥವಾ ರೋಗ ಸೋಂಕು ತಗಲಿದ ಬಳ್ಳಿಗೆ ಸಮರ್ಪಕ ಉಪಚಾರ ಮಾಡದೆ ಉಳಿಸಿದರೆ ಆ ತೋಟದಲ್ಲಿ ರೋಗ ಖಾಯಂ ಅಥಿತಿ ಆಗುವ ಸಾಧ್ಯತೆ ಇದೆ.