ಸ್ಥಳೀಯ ತಳಿಗಳ ಜಾನುವಾರುಗಳ ಸಗಣಿ ಬಗ್ಗೆ ಹೇಳಿದರೆ ಕೆಲವರಿಗೆ ಇದು ಕ್ಷುಲ್ಲಕ ವಿಚಾರವೆನಿಸಬಹುದು, ಇನ್ನು ಕೆಲವರಿಗೆ ಉತ್ಪ್ರೇಕ್ಷೆಯೂ ಆಗಬಹುದು.ಸತ್ಯವೆಂದರೆ ನಮ್ಮ ಹಿರಿಯರೆಲ್ಲಾ ಇದರ ಗುಣಗಳನ್ನು ನಂಬಿದವರು. ಇತ್ತೀಚೆಗೆ ನಾವು ಇದನ್ನು ಮರೆತಿದ್ದೇವೆ. ನಿಜವಾಗಿ ಹಸುವಿನ ಸಗಣಿಯಲ್ಲಿ ಕೆಲವು ವಿಶೇಷ ಶಕ್ತಿ ಇದೆ ಎಂಬುದಂತೂ ಸತ್ಯ.
ದೇಶಿ ತಳಿ ಜಾನುವಾರುವಿನ ಸಗಣಿ ಶ್ರೇಷ್ಟ. ಮೂತ್ರವೂ ಹಾಗೆಯೇ. ಇದು ಈಗ ಚರ್ಚೆಯಾಗುತ್ತಿರುವ ವಿಷಯ. ಯಾಕೆ ಶ್ರೇಷ್ಟ , ಅದರ ಹಿನ್ನೆಲೆ ಏನು? ಶ್ರೇಷ್ಟತೆಗೆ ಮೂಲ ಕಾರಣ ಯಾವುದು? ಈ ವಿಷಯಕ್ಕೆ ಕೆಲವು ವಿಷಯ ತಾಳೆ ಹಾಕಿ ಇದರ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನವೇ ಈ ಲೇಖನ.
ನಮ್ಮಲ್ಲಿ ದೇಶಿ ತಳಿಗಳು ತಲೆ ತಲಾಂತರದಿಂದ ಬಂದಿರುವ ತಳಿ. ಅವುಗಳ ಸಾಕಾಣಿಕೆ ಅನುಗುಣವಾಗಿ ಹಾಲು ಕೊಡುವವು. ಹಿಂದಿನವರು ಕೃಷಿ ಕೆಲಸಕ್ಕೂ ಬಳಕೆ ಮಾಡುತ್ತಿದ್ದರು. ಈಗ ಅದು ಕಡಿಮೆಯಾಗುತ್ತಿದೆ.
1970-80 ರ ದಶಕದಲ್ಲಿ ಅಧಿಕ ಹಾಲು ಉತ್ಪಾದನೆ ಹೆಚ್ಚು ಮಾಡಬೇಕೆಂಬ ಕಾರಣದಿಂದ ವಿದೇಶೀ ತಳಿ ಮತ್ತು ತಳಿ ಸಂಕರಣ ಮಾಡಲು ಪ್ರಾರಂಭಿಸಿ 30-40 ವರ್ಷಗಳಲ್ಲಿ ಮಿಶ್ರತಳಿ ರೈತರ ಮನೆಮಾತಾಗಿದೆ. ಈಗ ಕಡಿಮೆ ಹಾಲೂಡುವ ಸ್ಥಳೀಯ ತಳಿಗಳು ಹಾಲು ಉತ್ಪಾದನೆ ದೃಷ್ಟಿಯಿಂದ ನಿರ್ಲಕ್ಷ್ಯಕ್ಕೊಳಗಾಗಿವೆ.
ದೇಶಿ ತಳಿ ಆಕಳುಗಳಿಗೆ ಮುಖ್ಯ ಆಹಾರ ಒಣಹುಲ್ಲು ಮತ್ತು ಹೊಲ, ತೋಟದ ಹಸಿ ಹುಲ್ಲು ಮಾತ್ರ. ಸಾಮಾನ್ಯವಾಗಿ ಇವು ಸೊಪ್ಪು ಸದೆಗಳನ್ನು ಸಹ ತಿನ್ನುತ್ತವೆ. ಅವುಗಳಿಗೆ ಆಧುನಿಕ ಪಶು ಆಹಾರ, ಖನಿಜ ಮಿಶ್ರಣ ಎಂದು ಹಾಕುವ ಪದ್ದತಿ ಇಲ್ಲ. ಸ್ವಲ್ಪ ಸ್ವಲ್ಪ ಶೇಂಗಾಹಿಂಡಿ, ತೆಂಗಿನ ಹಿಂಡಿ, ಹತ್ತಿ ಹಿಂಡಿ, ಎಳ್ಳು ಹಿಂಡಿ ,ಉದ್ದು, ಕಡಲೆ ಸಿಪೆ ಅಕ್ಕಿ ತೌಡು ಇತ್ಯಾದಿ ಕೊಡುವುದು ಬಿಟ್ಟರೆ ಕಂಠಪೂರ್ತಿ ತಿನ್ನಿಸುವ ಕ್ರಮ ಇಲ್ಲ. ಅವುಗಳು ಪರಿಸರದಲ್ಲಿ ಅಭ್ಯವಿರುವಂತ ಒಣ ಹುಲ್ಲು , ಹಸಿಹುಲ್ಲು, ಸಸ್ಯ, ಸೊಪ್ಪು ಸದೆಯನ್ನು ತಿಂದು ಹಾಲು ಉತ್ಪಾದಿಸುತ್ತವೆ. ಅದೇ ಎಚ್.ಎಫ್, ಜರ್ಸಿ ಮಿಶ್ರತಳಿಗಳನ್ನು ನಾವು ಹಾಕುವ ಕೃತಕವಾದ ಆಹಾರ ಮಿಶ್ರಣ, ಒಂದೇ ಜಾತಿಯ ಹಸಿ ಹುಲ್ಲು, ಒಣ ಹುಲ್ಲು ಸೇವಿಸಿ ಹಾಲು ಉತ್ಪಾದಿಸುತ್ತವೆ. ಇಲ್ಲಿ ಹೆಚ್ಚು ಹಾಲು ಉತ್ಪಾದನೆಗೆ ಒತ್ತು ನೀಡುವುದರಿಂದ ಮಿಶ್ರತಳಿಯನ್ನು ಪರಿಸರದಿಂದ ದೂರ ಮಾಡಿ ಅವುಗಳಿಗೆ ನ್ಯಾಯವಾಗಿ ಏನು ಆಹಾರ ಬೇಕೊ ಅದನ್ನು ನೀಡದೇ ನಮಗೆ ಅನುಕೂಲವಾಗುವಂತಹ, ಸುಲಭವಾಗುವಂತಹ ತಯಾರಿಸಿದ ಆಹಾರ ಮಿಶ್ರಣ,ಹುಲ್ಲು ಹಾಕುವುದನ್ನು ಕಾಣುತ್ತೇವೆ.
ಜಾನುವಾರುಗಳ ಜೀರ್ಣ ಕ್ರಿಯೆಯೇ ಇಲ್ಲಿ ಪ್ರಾಮುಖ್ಯ:
- ಜಾನುವಾರುಗಳ ಜೀರ್ಣ ಕ್ರಿಯೆ ಬಗ್ಗೆ ಹೇಳುವುದಾದರೆ ಅವುಗಳ ಮೂಲ ಆಹಾರ ಹುಲ್ಲು ಮಾತ್ರ.
- ಹುಲ್ಲು ಅಂದರೆ ಹಸಿ ಹುಲ್ಲು. ಸೊಪ್ಪು ನಂತರದ ಆಯ್ಕೆ.
- ಕೊನೆಗೆ ಬರುವುದು ಆಹಾರ ಮಿಶ್ರಣ.
- ಜಾನುವಾರುಗಳು ನಾರಿನ ಅಂಶವಿರುವ ಪದಾರ್ಥಗಳನ್ನು ಮಾತ್ರ ತಿಂದು ಬದುಕುವಂತಹ ಪ್ರಾಣಿ.
- ಈ ನಾರಿನ ಅಂಶ ಕಾಯ್ದುಕೊಂಡಲ್ಲಿ ಮಾತ್ರ ಜಾನುವಾರುಗಳು ಆರೋಗ್ಯ ಕಾಪಾಡಿಕೊಂಡು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬಲ್ಲವು.
- ನಾರಿನ ಅಂಶ ಇಲ್ಲದೇ ಬರೀ ಆಹಾರ ಮಿಶ್ರಣ ನೀಡಿದಲ್ಲಿ ಜಾನುವಾರುಗಳು ಹೆಚ್ಚೆಂದರೆ 10 ವರ್ಷ ಬದುಕುತ್ತವೆ.
- ಇದಕ್ಕೆ ಉದಾಹರಣೆ ಕೋರೆ ಹಲ್ಲು ಇರುವಂತ ಜಾನುವಾರುಗಳನ್ನು ತೆಗೆದುಕೊಳ್ಳಬಹುದು.
- ಅವುಗಳು ಹಸಿಹುಲ್ಲು ತಿಂದು ಮೆಲುಕು ಹಾಕುತ್ತವೆ.
- ಆಹಾರ ಮಿಶ್ರಣ ತಿನ್ನುತ್ತವೆ. ಆದರೆ ಒಣ ಹುಲ್ಲು ತಿನ್ನಲಾಗದೇ ಸಿಂಬೆ ಮಾಡಿ ಉಗಿಯುತ್ತವೆ.
- ಅಂತಹ ಜಾನುವಾರುಗಳಿಗೆ ನಾವು ಉತ್ತಮ ಆಹಾರ ಮಿಶ್ರಣ ನೀಡಿದರೂ ಬಹಳ ಕಾಲ ಬದುಕುಳಿಯಲು ಸಾಧ್ಯವಿಲ್ಲ.
ಯಾವ ಆಹಾರ ಉತ್ತಮ:
- ಜಾನುವಾರುಗಳ ಮೂಲ ಆಹಾರ ಒಣ ಹುಲ್ಲು. ಇದು ಮೂಲ ಆಹಾರ ಮಾತ್ರ ಅಲ್ಲ, ಜಾನುವಾರುಗಳ ಜೀರ್ಣಕ್ರಿಯೆಗೂ ಇದೇ ಮಹತ್ವ ಪಡೆದುಕೊಂಡಿದೆ.
- ಒಣಹುಲ್ಲು ಸೇವಿಸಿದ ಪ್ರಾಣಿಗಳಲ್ಲಿ ಹೊಟ್ಟೆಯ ರಸಸಾರ (ಪಿ.ಎಚ್) 6-7 ಆಸುಪಾಸು ಇರುತ್ತದೆ.
- ಇಂತಹ ರಸಸಾರ ವಾತಾವರಣದಲ್ಲಿ ಕ್ರಿಮಿಗಳು, ಬ್ಯಾಕ್ಟೀರಿಯಾಗಳು ಹೆಚ್ಚು ವೃದ್ದಿಯಾಗುತ್ತದೆ.
- ಜಾನುವಾರುವಿನ ಎಲ್ಲಾ ಆರೋಗ್ಯ ಹಾಗೂ ಉತ್ಪಾದನೆಗೆ ಇದೇ ಮೂಲ.
- ಸದರೀ ಕ್ರಿಮಿಗಳು, ಬ್ಯಾಕ್ಟೀರಿಯಾಗಳು ಮುಂದಿನ ಹೊಟ್ಟೆಗಳಿಗೆ ಸಾಗಿ ಅಲ್ಲಿ ಜೀರ್ಣಗೊಂಡು ಪ್ರೊಟೀನು ಸಪ್ಲಿಮೆಂಟ್ ಮಾಡುತ್ತದೆ.
- ಕೊನೆಗೆ ಕರುಳಿನವರೆಗೂ ರಸಸಾರ 6-7 ಇರುವುದರಿಂದ ಕರುಳಿನಲ್ಲೂ ಉಪಕಾರಿ ಬ್ಯಾಕ್ಟೀರಿಯಾಗಳು ವೃದ್ದಿಯಾಗಿ ದ್ರವದ ಭಾಗವು ಸಂಪೂರ್ಣ ಕರುಳನ್ನು ಸೇರಿಕೊಂಡು ನಂತರ ಸಗಣಿಯಾಗಿ ಹೊರಬರುತ್ತದೆ.
- ಆಹಾರವನ್ನು ನಾವು ಬದಲಾಯಿಸಿ ಆಹಾರ ಮಿಶ್ರಣ ನೀಡಲು ಪ್ರಾರಂಭಿಸಿದರೆ
- ನಾರಿನಂಶ ಇಲ್ಲದೆ ಜಾನುವಾರುಗಳು ಪ್ರಥಮ ಹೊಟ್ಟೆಯಲ್ಲಿ (ರುಮೆನ್) ನಲ್ಲಿ ನಾರನ್ನು ಜೀರ್ಣ ಮಾಡಿ ವೃದ್ದಿಯಾಗುವ ಬ್ಯಾಕ್ಟೀರಿಯಾಗಳು,
- ಕ್ರಿಮಿಗಳಿಗೆ ಆಹಾರ ಇಲ್ಲದೇ ನಶಿಸಿ ಹೋಗಿ ಆಹಾರ ಮಿಶ್ರಣ ಕೊಳೆಯಲು ಪ್ರಾರಂಭಿಸಿ
- ಅಸಿಟಿಕ್ ಆಮ್ಲ, ಬ್ಯುಟರಿಕ್ ಆಮ್ಲ, ಪ್ರೋಪಿಯೋನಿಕ್ ಆಮ್ಲದ ಬದಲು ಲ್ಯಾಕ್ಟಿಕ್ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ.
- ಇದು ಹೊಟ್ಟೆಯ ರಸಸಾರವನ್ನು 5 ಕ್ಕಿಂತ ಕಡಿಮೆ ಮಾಡಿ ಅಜೀರ್ಣಕ್ಕೆ ಮೂಲ ಕಾರಣವಾಗುತ್ತದೆ.
- ಆಗ ಎಲ್ಲಾ ಪ್ರೊಬೈಯೋಟಿಕ್ಸ ಕ್ರಿಮಿಗಳು ನಶಿಸಿ ಹೋಗಿ ನಂತರ ಅದೇ ರಸಸಾರ ಹೊಟ್ಟೆಗಳಿಗೆ ಮುಂದುವರೆದು ಕರುಳಿನಲ್ಲಿ ಸಹ ಬ್ಯಾಕ್ಟೀರಿಯಾಗಳು ನಶಿಸಿ ಹೋಗುತ್ತದೆ.
- ಆಗ ನೀರಿನ ಅಂಶವನ್ನು ಸರಿಯಾಗಿ ಹೀರಿಕೊಳ್ಳಲಾಗದೇ ಸಗಣಿ ತೆಳ್ಳಗಾಗುತ್ತದೆ. ಹಾಗೂ ವಾಸನೆಯುಕ್ತವಾಗಿರುತ್ತದೆ.
- ಒಣ ಹುಲ್ಲು, ಪರಿಸರದಲ್ಲಿಯ ಸೊಪ್ಪು, ಹಸಿ ಹುಲ್ಲು ತಿಂದುಕೊಂಡು ಬಂದಂತಹ ಜಾನುವಾರುಗಳಲ್ಲಿ ಸಗಣಿಯ ರಸಸಾರ 6-7 ರಲ್ಲೆ ಇರುತ್ತದೆ.
- ನಾವು ಕೃತಕವಾಗಿ ಆಹಾರ ಮಿಶ್ರಣ ಒಂದೇ ಬಗೆಯ ಹುಲ್ಲು ತಿನ್ನುವಂತೆ ಕಟ್ಟಿಹಾಕಿ ಯಾವುದೇ ವ್ಯಾಯಾಮವಿಲ್ಲದೇ ಗಾಳಿ ಬೆಳಕು ಸಾಕಷ್ಟು ತೆರೆದುಕೊಳ್ಳದೇ ಇರುವ ಪ್ರಾಣಿಗಳ ಸಗಣಿಯ ರಸಸಾರ 6 ಮತ್ತು 6 ಕ್ಕಿಂತ ಕಡಿಮೆ ಇರಲೇಬೇಕು.
- 6 ರಸಸಾರ ಇರುವಂತ ಜಾನುವಾರುಗಳ ಸಗಣಿಯಲ್ಲಿ ಪರಿಸರಕ್ಕೆ ಒಳ್ಳೆಯದನ್ನು ಮಾಡುವ ಬ್ಯಾಕ್ಟಿರಿಯಾಗಳು ಸಾಕಷ್ಟು ಇರುತ್ತವೆ.
- ರಸಸಾರ 5 ಕ್ಕಿಂತ ಕಡಿಮೆ ಇರುವಲ್ಲಿ ಆಮ್ಲೀಯತೆಯಿಂದ ಬ್ಯಾಕ್ಟೀರಿಯಾಗಳು ನಶಿಸಿ ಹೋಗಿರುವುದರಿಂದ ಒಟ್ಟಾರೆ ಗೊಬ್ಬರದ ಗುಣಮಟ್ಟ (ಸಗಣಿ) ಕಡಿಮೆ ಇರುತ್ತದೆ.
- ಬರೀ ಒಣ ಹುಲ್ಲು ತಿಂದು ಜೀರ್ಣಮಾಡಿಕೊಂಡಂತಹ ಪ್ರಾಣಿಗಳ ಸಗಣಿಯಲ್ಲಿ ಕೋಟಿ ಕೋಟಿ ಬ್ಯಾಕ್ಟಿರಿಯಾಗಳು ವೃದ್ದಿಯಾಗಿರುತ್ತವೆ.
- ಇದೇ ನಮ್ಮ ಕೃಷಿಗೆ, ಭೂಮಿಗೆ, ಮಣ್ಣಿಗೆ ಮಾತ್ರವಲ್ಲದೇ ನಮ್ಮ ಜೀವನಕ್ಕೆ ಅಮೃತವಾಗಿ ಲಭ್ಯವಾಗುತ್ತದೆ.
- ಅದಕ್ಕೆ ನಮ್ಮ ಪೂರ್ವಜರು ಹೇಳಿದ್ದು ದೇಶಿ ತಳಿಗಳಲ್ಲಿ 33 ಕೋಟಿ ದೇವತೆಗಳಿರುತ್ತದೆ ಎಂದು.
- ಅದು ನೀಡುವ ಸಗಣಿಯಲ್ಲಿ ದೇವತೆಗಳಿಗೆ ಸಮಾನವಾದ ಅಂಶಗಳುಳ್ಳ ಕೋಟಿ ಕೋಟಿ ಬ್ಯಾಕ್ಟಿರಿಯಾಗಳೇ ನಿಜವಾಗಿ ನಮಗೆ ವರ.
- ಸಗಣಿಯ ಗುಣಮಟ್ಟ ಹಸಿ ಹುಲ್ಲನ್ನು ಮಾತ್ರ ತಿನ್ನುವಂತ ಪ್ರಾಣಿಗಳಲ್ಲಿ ಕಡಿಮೆಯಾಗುತ್ತ
- ಬರೀ ಆಹಾರ ಮಿಶ್ರಣ ಹೆಚ್ಚು ತಿನ್ನುವಂತವುಗಳಲ್ಲಿ ಅತೀ ಕಡಿಮೆ ಗುಣಮಟ್ಟದ್ದಾಗಿರುತ್ತದೆಯೆಂದು ಬೇರೆ ಹೇಳಬೇಕಾಗಿಲ್ಲ.
ಸಮಸ್ಯೆ ಏನಾಗಿದೆ?
- ವಾಸ್ತವ ಪರಿಸ್ಥಿತಿ ಈಗ ಬದಲಾಗಿದೆ. ನೈಸರ್ಗಿಕ ಹುಲ್ಲು ಬೆಳೆಯುವ ಕ್ಷೇತ್ರ ಯುಪೆಟೋರಿಯಂ ಆಕ್ರಮಿಸಿಕೊಂಡಿದೆ.
- ಗೋಮಾಳ ಮಾಯವಾಗಿದೆ. ಅರಣ್ಯ ಇಲಾಖೆಯವರು ನಮ್ಮ ಹಸುವನ್ನು ಹೊರಗಿನವರೆಂದು ಪರಿಗಣಿಸಿ ಅಗಳ ತೋಡಿ ಕಾವಲು ಕಾಯುತ್ತಿದ್ದಾರೆ.
- ಕಾಡು ಜಾನುವಾರುಗಳೆಲ್ಲ ಅಲ್ಲಿಯೂ ಮೇವಿಲ್ಲದೇ ರೈತರ ಜಮೀನಿಗೆ ಲಗ್ಗೆ ಇಡುತ್ತಿವೆ.
- ಆಕೇಶಿಯಾ, ನೀಲಗಿರಿ ಹಾಗೂ ಸಾಗ್ವಾನಿ ಕಾರಣದಿಂದ. ರೈತರೆಲ್ಲಾ ತಮ್ಮ ಜಮೀನಿನಲ್ಲಿ ತೋಟ ಮಾಡಿ ಬೇಲಿ ಹಾಕಿ ರಕ್ಷಣೆ ಮಾಡಿಕೊಂಡಿದ್ದಾರೆ.
- ಬಡ ದೇಶಿ ಜಾನುವಾರುಗಳಿಗೆ ರಸ್ತೆಯ ಅಕ್ಕಪಕ್ಕವೇ ಗೋಮಾಳವಾಗಿದೆ.
- ಅವುಗಳಿಗೆ ಪ್ರಾಣ ಕಳೆದುಕೊಳ್ಳುವ ಸ್ಥಳವೂ ಆಗಿದೆ.
ಈ ಎಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲಿ ಜಾನುವಾರುಗಳು ಕಸ, ಮುಸರೆ,ತ್ಯಾಜ್ಯ ವಸ್ತುಗಳನ್ನು ತಿಂದು ಬದುಕುವಂತಾಗಿದೆ. ಅಂಥಹ ದೇಶಿ ತಳಿಯ ಜಾನುವಾರುಗಳು ಯಾವ ಗುಣಮಟ್ಟದ ಸಗಣಿ, ಹಾಲು ಮತ್ತು ಮೂತ್ರ ನೀಡಲು ಸಾಧ್ಯ?
ಹಾಲು ಮತ್ತು ಆಹಾರ:
- ಜಾನುವಾರು ಹಾಲಿನ ಗುಣಮಟ್ಟವೂ ಸಹ ಅವುಗಳು ಸೇವಿಸುವ ಆಹಾರವನ್ನು ಅವಲಂಬಿಸಿದೆ.
- ಈಗಿತ್ತಲಾಗಿ ರೈತರು ಅನುಭವಿಸುತ್ತಿರುವ ಅಜೀರ್ಣ ಸಮಸ್ಯೆಗಳು ದೇಶಿ ತಳಿಗಳು ಹಾಗೂ ಎಮ್ಮೆಗಳಲ್ಲಿ ಯಾವ ಸಮಯದಲ್ಲೂ ಕಂಡು ಬಂದಿದ್ದು ಇರುವುದಿಲ್ಲ.
- ಹೆಚ್ಚು ಹಾಲು ಪಡೆಯಬೇಕೆಂಬ ಒಂದೇ ಉದ್ದೇಶದಿಂದ ಆಹಾರ ಮಿಶ್ರಣ ನೀಡುವುದು ಇದಕ್ಕೆಲ್ಲಾ ಮೂಲ ಕಾರಣ.
- ದೇಶಿ ತಳಿಗಳು ಮೇಯಲು ಹೋಗುವುದರಿಂದ ಎಲ್ಲಾ ಬಗೆಯ ಔಷಧಿಯ ಗುಣಗಳುಳ್ಳ ಸಸ್ಯಗಳನ್ನು ತಿನ್ನುವುದರಿಂದ ಹಾಲು ಕಡಿಮೆ ನೀಡಿದರೂ ಗುಣಮಟ್ಟದ್ದಾಗಿರುತ್ತದೆ.
- A2 ಪ್ರೋಟಿನ್ ದೇಶಿ ತಳಿಗಳಲ್ಲಿ ಹೆಚ್ಚು ಕಂಡುಬರುವುದಕ್ಕೆ ಬಹುಶಃ ಕಾರಣ ಇದೇ ಇರಬಹುದು.
ಜಾನುವಾರು ಸಗಣಿ ಮತ್ತು ಮೂತ್ರ:
- ಜಾನುವಾರು ಮೂತ್ರವು ದೇಹದಲ್ಲಿ ಕಲ್ಮಷ ಹೊರಹಾಕುವ ಮಾರ್ಗವಾಗಿದೆ.
- ದೇಶಿ ಜಾನುವಾರುಗಳ ಮೂತ್ರದಲ್ಲಿ ಹಾಗೂ ಮಿಶ್ರತಳಿ ಜಾನುವಾರುಗಳ ಮೂತ್ರದಲ್ಲಿ ವ್ಯತ್ಯಾಸದ ಬಗ್ಗೆ ವಿಶೇಷವಾಗಿ ಹೇಳಲಾಗದಿದ್ದರೂ
- ದೇಶಿ ತಳಿಯ ಆಹಾರ ನೈಸರ್ಗಿಕವಾಗಿರುವುದರಿಂದ ಹಾಗೂ ಔಷಧಿಯ ಸಸ್ಯಗಳನ್ನು ಸೇವಿಸುವುದರಿಂದ ಅವುಗಳ ಅಂಶಗಳು ಸಹ ಮೂತ್ರದಲ್ಲಿ ಕಂಡು ಬರುವುದು ಸಹಜ.
- ವಲಟೈಲ್ ಪ್ಯಾಟಿ ಆಮ್ಲಗಳು ಹಾಗೂ ಎಂಟಿಆಕ್ಸಿಡಂಟ್ ಪ್ರಮಾಣ ದೇಶಿ ತಳಿಯ ಮೂತ್ರದಲ್ಲಿ ಹೆಚ್ಚು ಕಂಡುಬರುತ್ತದೆಯೆಂದು ತಿಳಿಯಲಾಗಿದೆ.
- ಎಮ್ಮೆಯ ವಿಷಯದ ಬಗ್ಗೆ ಗಮನ ಹರಿಸಿದರೆ ಅನಾದಿ ಕಾಲದಿಂದಲೂ ಅತೀ ನಿರ್ಲಕ್ಷಕ್ಕೊಳಗಾದ ಜಾನುವಾರು .
- ಉತ್ತಮ ಹಾಲಿನ ಗುಣಮಟ್ಟ, ರೋಗನಿರೋಧಕ ಶಕ್ತಿ ಎಲ್ಲಾ ಹೊಂದಿದ್ದರು ಧಾರ್ಮಿಕವಾಗಿ ತಿರಸ್ಕøತವಾದ ತಳಿ ಇದು.
- ಬಹುಶಃ ಮಹಿಷಾಸುರ, ಮಹಿಷಿ ಇವರುಗಳು ಕೋಣದ ರೂಪದಲ್ಲಿ ನಮಗೆ ಪುರಾಣದ ಕತೆಗಳಲ್ಲಿ ಕಂಡು ಬರುತ್ತದೆ.
- ಕೃಷ್ಣನ ಗೋವುಗಳ ಗುಂಪಿನಲ್ಲಿ ಎಮ್ಮೆಗೆ ಅವಕಾಶವಿಲ್ಲದಿರುವುದು ಕಂಡು ಬರುವುದರಿಂದ ನಾವು ಎಮ್ಮೆಯನ್ನು ಅನುಕೂಲಕ್ಕಾಗಿ ಮಾತ್ರ ಬಳಸಿಕೊಂಡು ಧಾರ್ಮಿಕವಾಗಿ ದೂರ ಇರಿಸಿರುತ್ತೇವೆ.
- ಮೇಯಲು ಅವಕಾಶ ಹೊರಗಿನ ಪರಿಸರಕ್ಕೆ ಪೂರಕವಾಗಿ ಆಹಾರ ನೀಡಿ ಸಾಕಣೆ ಮಾಡಿದಲ್ಲಿ ಎಮ್ಮೆ ವೈಜ್ಞಾನಿಕವಾಗಿ ಅದರ ಸಗಣಿ, ಹಾಲು, ಮೂತ್ರ ದೇಶಿ ತಳಿ ಸಮಾನಾಂತರ ಮಹತ್ವ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಸಗಣಿಯಲ್ಲೂ ವಿಷ ಸೇರ್ಪಡೆ:
- ಕೊಟ್ಟಿಗೆಯಲ್ಲಿ ಉಣ್ಣೆಯನ್ನು ಹೋಗಲಾಡಿಸಲು ಔಷಧಿ ಬಳಕೆಯಾಗುತ್ತದೆ.
- ಪ್ರತಿಯೊಬ್ಬ ರೈತರ ಕೊಟ್ಟಿಗೆಯಲ್ಲಿ ಉಣುಗಿನ ಔಷಧಿ ಖಾಯಂ ಸದಸ್ಯ.
- ಇಂಥಹ ಉಣಗಿನ ಔಷಧಿಯನ್ನು ಬಳಸಿ ಅದು ಸಗಣಿಗೊಬ್ಬರ ಸಂಗಡ ಸೇರಿದಲ್ಲಿ ಸಗಣಿಯಲ್ಲಿ ಕಂಡು ಬರುವ ಅಷ್ಟು ಬ್ಯಾಕ್ಟಿರಿಯಾಗಳು ನಶಿಸಿ ಅದು ಕೀಟನಾಶಕವಾಗಿ ಮಾರ್ಪಾಡಾಗಿ ಪರೋಕ್ಷವಾಗಿ ಭೂಮಿಗೆ ಹಾನಿಕಾರವಾಗಿದೆ.
- ಇದು ದೇಶಿತಳಿ , ಮಿಶ್ರತಳಿ ಹಾಗೂ ಎಮ್ಮೆಯ ಕೊಟ್ಟಿಗೆಯ ಎಲ್ಲಾ ತಳಿಗೂ ಅನ್ವಯವಾಗುತ್ತದೆ.
ಹಿಂದಿನ ಕಾಲದಲ್ಲಿದ್ದಂತೆ ದೇಶಿ ಜಾನುವಾರುಗಳಿಗೆ ಇರುವ ಮೇವಿನ ಲಭ್ಯತೆ, ಪರಿಸರ, ಗೋಮಾಳ ಮತ್ತು ಅರಣ್ಯದಲ್ಲಿ ಮೇಯಲು ಅವಕಾಶ ಯಾವುದು ಇಲ್ಲದಿರುವಾಗ ಅವುಗಳ ಸಗಣಿ, ಹಾಲು ಹಾಗೂ ಮೂತ್ರ ಉತ್ತಮ ಗುಣಮಟ್ಟದಾಗಿರುತ್ತದೆಯೆಂದು ಹೇಳಲು ಕಷ್ಟಸಾದ್ಯ. ಮತ್ತು ಮಿಶ್ರತಳಿ ಜಾನುವಾರುಗಳನ್ನು ಹಾಲಿನ ಉದ್ದೇಶಕ್ಕಾಗಿ ಮಾತ್ರ ಸಾಕಾಣಿಕೆ ಮಾಡುತ್ತಿರುವುದರಿಂದ ಅವುಗಳಿಂದಲೂ ಇದನ್ನು ನಿರೀಕ್ಷೆ ಮಾಡಲಾಗದು.
ಒಬ್ಬ ಮನುಷ್ಯ ಹುಟ್ಟಿದ ಜಾತಿಯಿಂದ ಮಾತ್ರ ಶ್ರೇಷ್ಟ ಎನಿಸಿಕೊಳ್ಳಲು ಸಾಧ್ಯವಿಲ್ಲ. ಅದು ಅವನ ಸಂಸ್ಕøತಿ, ಸಾಧನೆ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯಿಂದ ತಿಳಿಯಲಾಗುತ್ತದೆ. ಅದೇ ರೀತಿ ದೇಶಿ ತಳಿಯ ಜಾನುವಾರುಗಳಾದ ತಕ್ಷಣ ಅವುಗಳ ಮಲ, ಮೂತ್ರ, ಹಾಲು ಶ್ರೇಷ್ಟ ಎನಿಸಿಕೊಳ್ಳಲು ಸಾದ್ಯವೇ? ಅವುಗಳಿಗೆ ಪೂರಕ ವಾತಾವರಣ ಉತ್ತಮ ಗುಣಮಟ್ಟದ ನಾರಿನ ಮೇವು ಮತ್ತು ಮೇಯಲು ಸಾಕಷ್ಟು ಅವಕಾಶ ನೀಡಿದರೆ ಮಾತ್ರ ಇದು ಸಾಧ್ಯ.