ಭಾರತ ಸರಕಾರದ ಕೃಷಿ ಮಂತ್ರಾಲಯವು ಕೆಲವು ಕೀಟನಾಶಕಗಳನ್ನು ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪ ಎತ್ತಿದೆ. ಕಾರಣ ಅವು ಕೆಲಸ ಮಾಡುವುದಿಲ್ಲವಂತೆ. ಸುಮಾರು 27 ಬೆಳೆಸಂರಕ್ಷಗಳನ್ನು ಬ್ಯಾನ್ ಮಾಡಲು ಮುಂದಾಗಿದೆ. ಹೌದು ನಾವು ಅಡಿಕೆ ಮಿಳ್ಳೆ ಉದುರದಂತೆ ತಡೆಯಲು ಬಳಸುವ ಕೆಲವು ಕೀಟನಾಶಕ, ಶಿಲೀಂದ್ರ ನಾಶಕಗಳೂ ಸೇರಿದಂತೆ ಬಹಳಷ್ಟು ಕೃಷಿ ಒಳಸುರಿಗಳು ಬಳಸಿಯೂ ಕೆಲಸ ಮಾಡದೆ ನಮ್ಮ ಜೇಬು ಖಾಲಿ ಮಾಡಿದ್ದಷ್ಟೇ.
ಅದೆಷ್ಟೋ ರೈತರು ಬೆಳೆಗಳಿಗೆ ಬರುವ ರೋಗಕ್ಕೆ, ಕೀಟಕ್ಕೆ ಔಷಧಿ ಸಿಂಪಡಿಸುತ್ತಾರೆ. ಒಂದನ್ನು ಸಿಂಪಡಿಸಿ ಫಲಿತಾಂಶ ಸಿಗದಿದ್ದರೆ ಮತ್ತೊಂದು. ಹೀಗೆ ಸಸ್ಯ ಸಂರಕ್ಷಣೆಗೆ ರೈತರು ಮಾಡುವ ಖರ್ಚು ಕೇಳಿದರೆ ಬೇಸಾಯವೇ ಬೇಡ ಎನ್ನಿಸುವಷ್ಟು ದುಬಾರಿಯಾಗುತ್ತದೆ. ಇದಕ್ಕೆಲ್ಲಾ ಕಾರಣ ಈ ಸಸ್ಯ ಸಂರಕ್ಷಣಾ ಔಷಧಿಗಳು ಕೆಲಸ ಮಾಡದೆ ಇರುವುದು. ನಮ್ಮಲ್ಲಿ ಒಂದು ಮಾತು ಇದೆ. ಮದ್ದು ತಿಂದು ತಿಂದು ಕೊನೆಗೆ ಮದ್ದೇ ನಾಟದ ಸ್ಥಿತಿ ಉಂಟಾಗುತ್ತದೆ. ಉದಾಹರಣೆಗೆ ಹಿಂದೆ 250 mg ಮಾತ್ರೆ ಯಲ್ಲಿ ವಾಸಿಯಾಗುತ್ತಿದ್ದುದು, ಕ್ರಮೇಣ ಅದಕ್ಕೆ ಬಗ್ಗದೆ 500 mg ಗೆ ಹೋಯಿತು. ಈಗ ಮತ್ತೆ 100 mg ಹೆಚ್ಚಿಸಲಾಗಿದೆ. ಹಾಗೆಯೇ ಕೀಟ ಮತ್ತು ರೋಗಕಾರಕಗಳು ಬೇಗನೆ ಔಷಧಿಗಳಿಗೆ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತವೆ. ಹಾಗಾಗಿ ಕೀಟನಾಶಕಗಳು, ರೋಗ ನಾಶಕಗಳೂ ಬದಲಾವಣೆ ಆಗುತ್ತಾ ಇರಬೇಕಾಗುತ್ತದೆ. ಭಾರತ ಸರಕಾರದ ಕೃಷಿ ಮಂತ್ರಾಲಯವು ಇದನ್ನು ಕಾಲಕಾಲಕ್ಕೆ ಗಮನಿಸಿ ಅದನ್ನು ಮಾರುಕಟ್ಟೆಯಿಂದ ತೆಗೆಯಬೇಕಾಗುತ್ತದೆ. ಇದನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ.
ಯಾವ ಸಸ್ಯ ಸಂರಕ್ಷಕಗಳು ಬಳಕೆಗೆ ಯೋಗ್ಯವಲ್ಲ?
ಕೃಷಿ ವಿಜ್ಞಾನಿಗಳು ಬಹಳ ಹಿಂದೆಯೇ ಈ ವಿಚಾರವನ್ನು ಹೇಳುತ್ತಾ ಬಂದಿದ್ದಾರೆ. ಕೆಲವು ಸಸ್ಯ ಸಂರಕ್ಷಕ ತಯಾರಕರು ಅದಕ್ಕಾಗಿಯೇ ಕಾಂಟಕ್ಟ್ ಜೊತೆಗೆ ಸಿಸ್ಟಮಿಕ್ ಸೇರಿಸಿದ ಸಂಯೋಜನೆಯಲ್ಲಿ ತಮ್ಮ ಉತ್ಪನ್ನವನ್ನು ಬಿಟ್ಟಿದ್ದಾರೆ. ಬಹಳ ಹಿಂದಿನಿಂದಲೂ ಬಳಸುತ್ತಾ ಬಂದಿದ್ದ ಕೀಟ, ಶಿಲೀಂದ್ರದ ನಾಶಕಗಳು ಸಂಬಂಧಿಸಿದವುಗಳ ಮೇಲೆ ಯಾವ ಕೆಲಸವನ್ನೂ ಮಾಡುವುದಿಲ್ಲವಂತೆ.ಅವುಗಳೆಂದರೆ ಅಸಿಫೇಟ್ (Acephate) ಕಾರ್ಬೊಫ್ಯುರಾನ್ (Carbophyran) ಕ್ಲೊರೋಫೆರಿಫೋಸ್ (Chlorophyriphose) Benfuracarb, ಡೆಲ್ಟ್ರಾಮೆಥ್ರಿನ್ (Deltramethrin) ಡೈಕೋಫೋಲ್ (Dicofol) ಡೈಮಿಥೊಯೇಟ್ ( Dimethoate ) ಮೆಲಾಥಿಯಾನ್, melathion ಮೆಥಿಮೆಲ್ Methimyl, ಮೊನೊಕ್ರೊಟೊಫೋಸ್ (Monocrotophos) ಕ್ವಿನಾಲ್ಫೋಸ್ (Quninalphos, ಥಿಯೋಡಿಕಾರ್ಬೋ (Thiodicarb) ಮುಂತಾದ ತಾಂತ್ರಿಕ ಹೆಸರಿನ ಕೀಟನಾಶಕಗಳು. ಆಟ್ರಾಜಿನ್ (Atrazine) ಥಿಯೋಫನೆಟ್ ಮೆಥೆಲ್ Thiophanate methyl, ಸಲ್ಫೋಸಲ್ಫೋರುನ್ sulfosulfuron , ಒಕ್ಸಿ ಫ಼್ಲುರೊಫೆನ್ oxyfluorfen ಬ್ಯುಟಾಕ್ಲೋರ್, ಡಯುರಾನ್, ಮುಂತಾದ ತಾಂತ್ರಿಕ ಹೆಸರಿನ ಕಳೆ ನಾಶಕಗಳು, ಕ್ಯಾಪ್ಟನ್,ಕಾರ್ಬನ್ಡೈಜಿಮ್, ಮ್ಯಾಂಕೋಜೆಬ್, ಥೈರಮ್, ಜೈರಮ್, ಜೈನೆಬ್ ಮುಂತಾದ ಅಂಶಗಳುಳ್ಳ ಶಿಲೀಂದ್ರ ನಾಶಕಗಳು ಇದರಲ್ಲಿ ಸೇರಿವೆ. ಇವೆಲ್ಲಾ ನಾವು ಬೇರೆ ಬೇರೆ ಬೆಳೆಗಳಿಗೆ ಬಳಸುತ್ತಿದ್ದ ಸಸ್ಯ ಸಂರಕ್ಷಣಾ ಔಷಧಿಗಳು. ಇವು ಕೆಲಸ ಮಾಡುವುದಿಲ್ಲ ಎಂಬುದು ಈಗಾಗಲೇ ಹಲವು ತಜ್ಞರು ಹೇಳಿದ್ದಾರೆ. ರೈತರೂ ಗುರುತಿಸಿದ್ದಾರೆ.
ನಾವೆಲ್ಲಾ ಕೀಟನಿಯಂತ್ರಣಕ್ಕೆ ಬಳಸುತ್ತಿದ್ದ ರೋಗರ್, ಎಕಾಲೆಕ್ಸ್, ಥಿಮೇಟ್ ಮೊನೋಕ್ರೋಟೋಫೋಸ್, ಕ್ಲೋರೋಫೆರಿಫೋಸ್, ಡೆಲ್ಟ್ರಾಮೆಥ್ರಿನ್, ಮೆಲಾಥಿಯಾನ್ ಗಳನ್ನು ಬಳಸಿ ಪ್ರಯೋಜನ ಇಲ್ಲ. ಹಾಗೆಯೇ Z 78, M45, ಬಾವಿಸ್ಟಿನ್, ಇತ್ಯಾದಿಗಳೂ ಸಹ ಪ್ರಯೋಜನ ಇಲ್ಲದವು.
ಕೀಟ ನಾಶಕ ಬ್ಯಾನ್ ಮಾತ್ರ ಸಾಲದು:
ನಾವು ಬಳಕೆ ಮಾಡುವ ಬ್ಯಾನ್ ಆದ ಸಾಲಿನ ಕೀಟನಾಶಕದ ಸುದ್ದಿ ಬಿಡುವ. ಮಾರುಕಟ್ಟೆಯಲ್ಲಿ ಇರುವ ಕೀಟನಾಶಕದ ಬಗ್ಗೆ ಹೇಳುವುದೇ ಆದರೆ ಅವುಗಳಲ್ಲಿ ಹೆಚ್ಚಿನವು ಕೆಲಸ ಮಾಡುವುದಿಲ್ಲ. ಯಾಕೆ ಗೊತ್ತೇ?
ಕೀಟನಾಶಕಗಳನ್ನು ಮಾರಾಟ ಮಾಡುವ ಅಂಗಡಿಗಳ ಬಾಗಿಲಿಗೆ ಹೋಗುವಾಗಲೇ ಅದರ ಘಾಟು ಮೂಗಿಗೆ ಹೊಡೆಯುವಂತದ್ದು ಏನಿದೆಯೋ ಅದು ಅಸಮರ್ಪಕ ದಾಸ್ತಾನಿನ ಕಾರಣದಿಂದ. ಕೀಟನಾಶಕ, ಶಿಲೀಂದ್ರ ನಾಶಕ ಅಥವಾ ಕಳೆ ನಾಶಕ ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ಅದನ್ನು ತಂಪು ಇರುವ ವಾತಾವರಣದಲ್ಲಿ ದಾಸ್ತಾನು ಇರಿಸಬೇಕು. ಅಂದರೆ ತಯಾರಿಕೆ ಹಂತದಿಂದ ಮಾರಾಟ ಮಾಡುವ ವರೆಗೂ ಅದನ್ನು ತಂಪಿನ ವಾತಾವರಣದಲ್ಲಿ ಸಾಗಾಣಿಕೆ, ದಾಸ್ತಾನು ಇಡಬೇಕು. ಹಾಗೆಂದು ಅದನ್ನು ಶೀತಲೀಕರಣದಲ್ಲಿ ಇಡುವುದಲ್ಲ. ಸುಮಾರು 20-25 ಡಿಗ್ರಿ ಸೆಲ್ಸಿಯಸ್ ತನಕದ ತಾಪಮಾನ ಇರುವ ಕೋಣೆಯಲ್ಲಿ ದಾಸ್ತಾನು ಇಟ್ಟಾಗ ಮಾತ್ರ ಅದು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯ. ಇಲ್ಲವಾದರೆ ಪದೇ ಪದೇ ಬಳಸಿದರೂ ಪ್ರಯೋಜನ ಸಿಗುವುದಿಲ್ಲ. ಕೀಟನಾಶಕಗಳ ಉಳಿಕೆ ಅವಧಿಯ ತನಕ ಮತ್ತೆ ಕೀಟನಾಶಕ ಬಳಕೆ ಮಾಡಬೇಕಾಗಿಲ್ಲ. ಆದರೆ ಈಗ ಹಾಗಿಲ್ಲ. ವಾರವಾರವೂ ಸಿಂಪಡಿಸಿದರೂ ಕೀಟ ಹತೋಟಿಗೆ ಬರುವುದಿಲ್ಲ. ಇದರಲ್ಲಿ ಬರೇ ತಯಾರಕರು, ಮಾರಾಟಗಾರರದ್ದು ಮಾತ್ರ ಪಾತ್ರವಲ್ಲ, ಬಳಕೆ ಮಾಡುವ ನಾವೂ ಸಹ ಕೀಟನಾಶಕ, ಶಿಲೀಂದ್ರ ನಾಶಕಗಳನ್ನು ಸೂರ್ಯನ ನೇರ ಬಿಸಿಲು ಬೀಳುವಲ್ಲಿ ಇರಿಸಬಾರದು. ತಂಪಾದ ಜಾಗದಲ್ಲಿ ದಾಸ್ತಾನು ಇಡಬೇಕು.
ಕೀಟನಾಶಕಗಳ ಬಳಕೆಗೆ ನಿಯಮ ಬದಲಾಗಬೇಕು:
ಮನುಷ್ಯರಿಗೆ ಏನಾದರೂ ಖಾಯಿಲೆ ಕಸಾಲೆಗಳು ಬಂದರೆ ವೈದ್ಯರ ಸಲಹೆಯಂತೆ ಔಷದೋಪಚಾರ ಮಾಡಬೇಕು ಎಂಬ ನಿಯಮ ಇದೆ. ಮೆಡಿಕಲ್ ಸ್ಟೋರ್ ನಿಂದ ಮಾತ್ರೆ, ಇತ್ಯಾದಿ ಕೊಳ್ಳುವಾಗ ವೈದ್ಯರ ಶಿಫಾರಸು ಪತ್ರ ಕಡ್ದಾಯವಾಗಿ ಬೇಕು. ಹಾಗಿದ್ದರೆ ಸಸ್ಯಗಳಿಗೆ ಯಾವುದೇ ಔಷದೋಪಚಾರ ಮಾಡುವುದಿದ್ದರೆ ಯಾಕೆ ತಜ್ಞರ ಶಿಫಾರಸು ಪತ್ರ ಬೇಡ? ನಮ್ಮ ದೇಶದಲ್ಲಿ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಇವೆ. ಕೃಷಿ ವಿಜ್ಞಾನ ಕೇಂದ್ರಗಳಿವೆ, ಸಂಶೊಧನಾ ಸಂಸ್ಥೆಗಳಿವೆ. ಇಲ್ಲಿ ಕೃಷಿ ಶಿಕ್ಷಣ ಪಡೆದ ತಜ್ಞರಿದ್ದಾರೆ. ಕೃಷಿ ಒಳಸುರಿ ಅಂಗಡಿಯಿಂದ ಯಾವುದೇ ವಸ್ತು ಖರೀದಿಸಬೇಕಿದ್ದರೂ ಅವರ ಶಿಫಾರಸು ಪತ್ರದ ಅವಶ್ಯಕತೆ ಯಾಕೆ ಇಲ್ಲ ಎಂಬುದೇ ಇಲ್ಲಿ ಪ್ರಶ್ನೆ. ಯಾಕೆಂದರೆ ತಜ್ಞರು ಸರಿಯಾದ ಔಷಧಿ, ಸರಿಯಾದ ಪ್ರಮಾಣವನ್ನು ಶಿಫಾರಸು ಮಾಡುವವರು. ಇದು ತಪ್ಪು ಆಗಲು ಸಾಧ್ಯವಿಲ್ಲ. ನಿಖರತೆ ಇರುತ್ತದೆ. ರೈತನಿಗೂ ಉಳಿತಾಯವಾಗುತ್ತದೆ. ನಾಳೆ ನಮ್ಮ ಬೆಳೆ ಏನಾದರೂ ಹಾಳಾದರೆ ಅದು ರೈತರ ತಪ್ಪಿನಿಂದ ಎಂದೆನಿಸುವುದಿಲ್ಲ.
ಸರ್ವೇ ಸಾಮಾನ್ಯವಾಗಿ ಆಗುವುದು:
ಕೀಟನಾಶಕ ಅಥವಾ ಶಿಲೀಂದ್ರ ನಾಶಕ ಬ್ಯಾನ್ ಆದರೆ ಅದರ ಬೇರೆ ಹೆಸರಿನ ಉತ್ಪನ್ನಗಳು ಬರುತ್ತವೆ. ಕೆಲವೊಮ್ಮೆ ಬಾರದೆಯೂ ಇರಬಹುದು.ಆಗ ರೈತರಿಗೆ ಸಮಸ್ಯೆಯಾಗುತ್ತದೆ. ಉದಾಹರಣೆಗೆ ಕಾರ್ಬರಿಲ್.ಇದನ್ನು ಬ್ಯಾನ್ ಮಾಡಲಾಗಿಲ್ಲ. ಶಿಫಾರಸು ಇದೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲೂ ಲಭ್ಯ ಇಲ್ಲ. ಇದನ್ನು ಕೆಲವು ನಕಲಿ ತಯಾರಕರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಹೆಸರಾಂತ ಕಂಪೆನಿಗಳು ಯಾವಾಗಲೂ ರೀ ಪ್ಯಾಕ್ಯಿಂಗ್ ಮಾಡದೆ ತಯಾರಕರೇ ಆಗಿರುತ್ತಾರೆ. ಅವರಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗವೇ ಇರುತ್ತದೆ. ಕಾಲ ಕಾಲಕ್ಕೆ ಅವರು ಸಮಸ್ಯೆಗಳನ್ನು ಅರಿತು ಹೊಸತನ್ನು ಬಿಡುಗಡೆ ಮಾಡುತ್ತಿರುತ್ತಾರೆ, ಬ್ಯಾನ್ ಮಾಡಿ ಅದರ ಬದಲಿಗೆ ಬರುವ ಉತ್ಪನ್ನಗಳು ಹೆಚ್ಚು ದುಬಾರಿಯೂ ಆಗಿರುತ್ತವೆ.ಆದರೆ ಈಗ ಬರುವ ಕೀಟನಾಶಕ ಶಿಲೀಂದ್ರ ನಾಶಕಗಳು ಕಡಿಮೆ ಸಾಂದ್ರತೆಯಲ್ಲಿ ಬಳಸುವವುಗಳಾಗಿರುತ್ತವೆ.
ಕೀಟ ನಾಶಕ ಮಿತಿ ಗೊಳಿಸಿ:
ಕೀಟನಾಶಕಗಳು, ಶಿಲೀಂದ್ರ ನಾಶಕಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿವೆ. ಇದರಿಂದ ಪ್ರಮುಖ ಸಮಸ್ಯೆ ಎಂದರೆ ನಿರೋಧಕ ಶಕ್ತಿ ಬರುವುದು. ಹಾಗೆಯೇ ಮಣ್ಣಿನಲ್ಲಿ ಇರುವ ಪ್ರತಿರೋಧಕ ಜೀವಿಗಳ ಅವನತಿಯೂ ಸಹ ಇದರಿಂದಾಗಿಯೇ ಆಗಿರುವುದು. ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸಲೇ ಬಾರದು. ಅನಗತ್ಯವಾಗಿ ಬಳಕೆ ಮಾಡಬಾರದು. ಕೀಟಗಳ ಚಟುವಟಿಕೆ ಹೆಚ್ಚು ಇರುವ ಸಮಯದಲ್ಲಿ, (ಮೊಡ ಕವಿದ ವಾತಾವರಣ) ಸಿಂಪರಣೆ ಮಾಡಬೇಕು. ಕೀಟನಾಶಕಗಳು ಬರೇ ಕೀಟಗಳಿಗೆ ಮಾತ್ರವಲ್ಲ. ಬಳಸುವವರಿಗೂ ದುಶ್ಪರಿಣಾಮ ಉಂಟು ಮಾಡುತ್ತವೆ. ಆದ ಕಾರಣ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಬಳಕೆ ಮಾಡಬೇಕು.
ಸರಕಾರ ಇನ್ನು ತನ್ನ ನಿರ್ಧಾರ ಬದಲಿಸಲು ಬಹುದು. ಇವುಗಳ ಬ್ಯಾನ್ ನಿಂದ ರೈತರಿಗೆ ಆಮದು ಸಾಮಾಗ್ರಿ ತರಿಸಲು ಹೆಚ್ಚುವರಿ ಖರ್ಚು ಇದೆ.