Headlines

ಬೋರ್ಡೋ ದ್ರಾವಣದ ಸುಣ್ಣ – ರೈತರ ಸಂದೇಹಗಳಿಗೆ ಉತ್ತರ.

ಸುಣ್ಣ ಮತ್ತು ಮೈಲುತುತ್ತೆ ಸೇರಿಸಿ ತಯಾರಿಸಿದ ಬೋರ್ಡೋ ದ್ರಾವಣ

ಕೆಲವು ದಿನಗಳಿಂದ ಅಡಿಕೆ , ಕಾಫಿ, ಕರಿಮೆಣಸು ಮುಂತಾದ ಬೆಳೆಗಾರರು ಬೋರ್ಡೋ ದ್ರಾವಣ ಸಿಂಪರಣೆಗಾಗಿ ಬಳಕೆ ಮಾಡುವ ಹುಡಿ ಸುಣ್ಣದ ಬಗ್ಗೆ ಕೆಲವು ಸಂದೇಹಗಳು ಉಧ್ಬವವಾಗಿದೆ. ಕೆಲವು ಬ್ರಾಂಡ್ ನ ಸುಣ್ಣ ಬಳಕೆ ಮಾಡದಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೆಲ್ಲದರ ನಡುವಿನಲ್ಲಿ ಎಲ್ಲಾ ಸುಣ್ಣದ ಮೇಲೂ ರೈತರು ಸಂದೇಹ ಪಡುವಂತಾಗಿದೆ. ಈ ಕುರಿತಂತೆ ರೈತರ ಸಂದೇಹಗಳಿಗೆ ಉತ್ತರ ಇಲ್ಲಿದೆ.

ಸುಣ್ಣವನ್ನು ಸಿಂಪರಣೆಗೆ ಕ್ಯಾಲ್ಸಿಯಂ ಮೂಲಕ್ಕಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಲ್ಸಿಯಂ ಮೂಲವಸ್ತುಗಳನ್ನು ನೇರವಾಗಿ ದ್ರವೀಕರಿಸಿ ಬಳಕೆ ಮಾಡಲು ಆಗುವುದಿಲ್ಲ. ಅದು ನೀರಿನಲ್ಲಿ ಕರಗುವುದಿಲ್ಲ. ಬಹಳ ಹಿಂದಿನಿಂದಲೂ ಬೆಳೆಗಳಿಗೆ ಸಿಂಪಡಿಸುವುದಕ್ಕಾಗಿ ಬಳಸುತ್ತಿದ್ದ ಕೃಷಿ ಬಳಕೆಯ ಸುಣ್ಣದ ಮೂಲ ಸಮುದ್ರದ ಕಪ್ಪೆ ಚಿಪ್ಪು ( Seashell lime). ಅದನ್ನು ಬಿಸಿ ಮಾಡಿ ಬೇಯಿಸಿದಾಗ ಅದು ಹುಡಿಯಾಗುತ್ತದೆ ,ನೀರಿನಲ್ಲಿ ಕರಗುತ್ತದೆ. ಹಾಗೆಯೇ ಸಮುದ್ರ ದೂರ ಇರುವ ಭಾಗಗಳಲ್ಲಿ ಸುಣ್ಣದ ಕಲ್ಲು (Lime stone) ಎಂಬ ಉಂಡೆ ಕಲ್ಲುಗಳನ್ನು ಬೇಯಿಸಿ ಸುಣ್ಣವಾಗಿ ಬಳಕೆ ಮಾಡಲಾಗುತ್ತಿತ್ತು. ಈ ಎಲ್ಲಾ ಸುಣ್ಣ ಬೇಯಿಸುವ ಮುಂಚೆ ಗಟ್ಟಿ ಇರುತ್ತದೆ. ಬೇಯಿಸಿದಾಗ  ಮೃದುವಾಗುತ್ತದೆ. ಇದು ವಾತಾವರಣದ ತೇವಾಂಶ ಹೀರಿಕೊಂಡು ಹುಡಿಯಾಗುತ್ತದೆ. ಇದನ್ನು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಎನ್ನುತ್ತಾರೆ. ಇದು ನೈಸರ್ಗಿಕ ಮೂಲದ ಸುಣ್ಣವಾಗಿರುತ್ತದೆ. ಈ ಸುಣ್ಣವನ್ನು ನೀರಿಗೆ ಹಾಕಿದಾಗ ಅದು ಬೆಂದು ಚೆನ್ನಾಗಿ ದ್ರವರೂಪಕ್ಕೆ ಬರುತ್ತದೆ. ಇತ್ತೀಚೆಗೆ ಹುಡಿ ರೂಪದ ಸುಣ್ಣ ಕ್ಯಾಲ್ಸಿಯಂ ಬಂದಿದ್ದು, ಅದು ಯಾವ ಮೂಲದ್ದು ಎಂಬುದಕ್ಕಿಂತ ಅದರಲ್ಲಿ ಕ್ಯಾಲ್ಸಿಯಂ ಅಂಶ ಇರುವಿಕೆಯೇ ಮುಖ್ಯ.

ಹುಡಿ ರೂಪದಲ್ಲಿ ಸುಣ್ಣವು ಮಾರುಕಟ್ಟೆಗೆ ಬರಲು ಪ್ರಾರಂಭವಾಗಿ ಸುಮಾರು 10 ವರ್ಷ ಆಗಿರಬಹುದು. ನೈಸರ್ಗಿಕ ಮೂಲದ ಸುಣ್ಣದ ವಸ್ತುಗಳು ಬಳಸಬೇಕಾದರೆ ಅದು ಹುಡಿಯಾಗಿ ನೀರಿನಲ್ಲಿ ಕರಗಬೇಕು. ಹುಡಿಯಾದ ಸಿದ್ದರೂಪದ ಸುಣ್ಣ ಅಥವಾ ಕ್ಯಾಲ್ಸಿಯಂ ರೈತರಿಗೆ ಕೆಲಸವನ್ನು ಕಡಿಮೆ ಮಾಡುತ್ತದೆ.ಕಶ್ಮಲಗಳಿಲ್ಲದ ಕಾರಣ ನಷ್ಟವೂ ಕಡಿಮೆಯಾಗುತ್ತದೆ. ಕಷ್ಟ ಇಲ್ಲದೆ ಬಳಕೆ ಮಾಡಬಹುದು.

ಸುಣ್ಣದ ಸಿಂಪರಣೆ ಯಾಕೆ:

  • ಬರೇ ಸುಣ್ಣವನ್ನು ಬೆಳೆಗಳಿಗೆ ಸಿಂಪರಣೆ ಮಾಡುವುದು ಕಡಿಮೆ. ಕಾಫೀ ತೋಟಗಳಲ್ಲಿ ಕೆಲವರು ½ % ಸುಣ್ಣದ ದ್ರಾವಣವನ್ನು ಸಿಂಪರಣೆ ಮಾಡುತ್ತಾರೆ.
  • ಹೆಚ್ಚು ಬಿಸಿಲು ಇರುವಲ್ಲಿ  ಬಿಸಿಲಿನ ಝಳ ತಪ್ಪಿಸ್ಸಲು ಮೆಣಸಿನ ಬಳ್ಳಿಗೆ ಎಲೆಗಳಿಗೆ ಇದೇ ಪ್ರಮಾಣದಲ್ಲಿ ಸುಣ್ಣದ ದ್ರಾವಣವನ್ನು ಸಿಂಪರಣೆ  ಮಾಡುತ್ತಾರೆ.
  • ಇದು ಬಿಟ್ಟರೆ ಸುಣ್ಣವನ್ನು ಬಳಕೆ ಮಾಡುವುದು ಮೈಲುತುತ್ತೆಯ ಆಮ್ಲೀಯ ಗುಣವನ್ನು ಕಡಿಮೆಮಾಡಿ ತಟಸ್ಥ ಅಥವಾ ಕ್ಷಾರ ರೂಪಕ್ಕೆ ತರುವ ಮಿಶ್ರಣದ ತಯಾರಿಕೆಗೆ.
  • 90% ಕ್ಕೂ ಹೆಚ್ಚಿನ ರೈತರು ಈ ಉದ್ದೇಶಕ್ಕಾಗಿಯೇ ಸುಣ್ಣವನ್ನು ಬಳಕೆ ಮಾಡುತ್ತಾರೆ.
  • ಇನ್ನು ನೆಲಕ್ಕೆ ಹಾಕುವ ಮಣ್ಣು ರಚನೆ ಸುಧಾರಕ ಸುಣ್ಣ ಎಂಬುದು ಬೇಯಿಸಿದ ಸುಣ್ಣವೇ ಆಗಬೇಕಾಗಿಲ್ಲ.
  • ಬೇಯಿಸದ ಸುಣ್ಣದ ಕಲ್ಲನ್ನೂ ಯಂತ್ರಕ್ಕೆ ಹಾಕಿ ಹುಡಿ ಮಾಡಿ ಮಣ್ಣಿಗೆ ಸೇರಿಸಬಹುದು.
  • ಅಥವಾ ಕ್ಯಾಲ್ಸಿಯಂ ಉಳ್ಳ ಶಿಲೆಗಳ ಹುಡಿಯನ್ನೂ (Dolomite) ಬಳಕೆ ಮಾಡಬಹುದು. 
  • ಇದನ್ನು ಸಿಂಪರಣೆಗೆ ಬಳಕೆ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ.
ಹುಡಿ ಸುಣ್ಣ ಕರಗಿಸುವಿಕೆ
ಹುಡಿ ಸುಣ್ಣ ಕರಗಿಸುವಿಕೆ

ಹುಡಿ ಸುಣ್ಣದ ಮೂಲ ಯಾವುದು:

  • ಇದು ಚಿಪ್ಪು ಸುಣ್ಣವನ್ನು, ಅಥವಾ ಕಲ್ಲು ಸುಣ್ಣವನ್ನು ಬೇಯಿಸಿ  ಹುಡಿ ಮಾಡಿದಂತದ್ದು ಆಗಿರಲೂ ಬಹುದು, ಆಗದೆ ಇರಲೂ ಬಹುದು.
  • ಇದರ  ಬೆಲೆ ನೋಡುವಾಗ ಹೋಲಿಕೆ ಕಷ್ಟವಾಗುತ್ತದೆ.
  • ಕೆಲವು ಉದ್ದಿಮೆಗಳಲ್ಲಿ ಬ್ಲೀಚಿಂಗ್ ಮಾಡಿದಾಗ ಇಂತಹ ಕ್ಯಾಲ್ಸಿಯಂ ಭರಿತ ನುಣ್ಣಗೆ ಹುಡಿಯಾದ ವಸ್ತು ಸಿಗುತ್ತದೆ. (ಊದಾ: ಪೇಪರ್ ಮಿಲ್) ಕಾಗದ ತಯಾರಿಕಾ ಉದ್ದಿಮೆಗಳಲ್ಲಿ ಸುಣ್ಣವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
  • ಇದು ನಂತರ ನುಣುಪಾದ ಹುಡಿಯಾಗಿ ನಿರುಪಯುಕ್ತ ವಸ್ತುವಾಗಿ ಸಿಗುತ್ತದೆ.
  • ಹಾಗೆಯೇ ಸೆರಾಮಿಕ್ ಟೈಲ್ಸ್ ತಯಾರಿಕೆಯಲ್ಲೂ ಕ್ಯಾಲ್ಸಿಯಂ ಅನ್ನು ಬಳಕೆ ಮಾಡುತ್ತಾರೆ.
  • ಅಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಅಥವಾ ಡಿ ಹೈಡ್ರೇಟೆದ್ ಲೈಮ್ ಸಿಗುತ್ತದೆ. 
  • ಹಾಗೆಯೇ ಇನ್ನೂ ಕೆಲವು ಉದ್ದಿಮೆಗಳಲ್ಲಿ ಬ್ಲೀಚಿಂಗ್ ಮಾಡುವಾಗ ಕ್ಯಾಲ್ಸಿಯಂ ಹೈಡ್ರಾಕ್ಸೈಡ್  ಸಿಗುವುದಿದೆ.
  • ಇದನ್ನು ತರಿಸಿ ಪ್ಯಾಕಿಂಗ್ ಮಾಡಿ ಕೊಡುವ ಸಾಧ್ಯತೆ ಇಲ್ಲದಿಲ್ಲ.
  • ಅದೇನಿದ್ದರೂ ರೈತರಿಗೆ ಮೂಲ ಮುಖ್ಯವಲ್ಲ ಅದರಲ್ಲಿ ಇರುವ ಕಂಟೆಂಟ್ ( ಸತ್ವ ) ಮುಖ್ಯ.
  • ಹಲವಾರು ವರ್ಷಗಳಿಂದ ನಮ್ಮಲ್ಲಿ ಕೆಲವು ತಯಾರಿಕೆಗಳು ಇದೆ.
  • ಇವುಗಳನ್ನು ಹೆಚ್ಚಿನ ರೈತರು ಬಳಸಿದ್ದಾರೆ. ಆದರೆ ಯಾವ ದುಶ್ಪರಿಣಾಮವನ್ನೂ ಗುರುತಿಸಿದ್ದಿಲ್ಲ.

ಸುಣ್ಣದ ಬಗ್ಗೆ ಯಾಕೆ ಸುದ್ದಿಯಾಯಿತು:

ಚಿಪ್ಪು ಸುಣ್ಣ ಕರಗಿಸುವಿಕೆ
ಚಿಪ್ಪು ಸುಣ್ಣ ಕರಗಿಸುವಿಕೆ
  • ಯಾವುದೋ ಒಂದು ತಯಾರಿಕೆಯ ಡಿ ಹೈಡ್ರೇಟೆಡ್ ಲೈಮ್ ಬೆರೆಸಿ ಬೋರ್ಡೋ ದ್ರಾವಣ ಸಿಂಪಡಿಸಿದ ಕಾರಣದಿಂದ ಅಡಿಕೆ ಮಿಡಿಗಳು ಉದುರಲಾರಂಭಿಸಿದವಂತೆ.
  • ಈ ವಿಚಾರವನ್ನು  ರೈತರು ಸಮೀಪದ ಕೃಷಿ ವಿಜ್ಞಾನ ಕೇಂದ್ರ ( ಗೋಣಿಕೊಪ್ಪಲು, ಮಡಿಕೇರಿ) ದ ವಿಜ್ಞಾನಿಗಳ ಗಮನಕ್ಕೆ ತಂದರು.
  • ಅವರು ಆ ಸುಣ್ಣವನ್ನು ಪರಿಶೀಲಿಸಿದಾಗ ಅದು ಸಂಪೂರ್ಣವಾಗಿ ನೀರಿನಲ್ಲಿ ಕರಗುತ್ತಿರಲಿಲ್ಲ. ಗಟ್ಟಿ ಐಸ್ ಕ್ರೀಮ್ ತರಹ ಇತ್ತು.
  • ಅದರ pH ( ರಸಸಾರ) ಪರೀಕ್ಷಿಸಿದಾಗ ಸುಣ್ಣದಲ್ಲಿ 8.8 ರಷ್ಟು ಕಂಡಿತ್ತು. 
  • ಇದನ್ನು ರೈತರು ಮೈಲುತುತ್ತೆ ಜೊತೆಗೆ ಮಿಶ್ರಣ ಮಾಡಿ ಸಿಂಪಡಿಸಿದ್ದರು.
  • ಮೈಲುತುತ್ತೆಯ ರಸಸಾರ ಸಾಮಾನ್ಯವಾಗಿ 2.65 -3 ತನಕ ಇರುತ್ತದೆ.
  • ಇಲ್ಲಿ ಬಳಸಲಾದ ಮೈಲುತುತ್ತೆಯಲ್ಲಿ ಅಂತಹ ಸಮಸ್ಯೆ ಕಂಡು ಬರಲಿಲ್ಲ. 
  • ಮೈಲುತುತ್ತೆ ಮತ್ತು ಸುಣ್ಣವನ್ನು ಮಿಶ್ರಣ ಮಾಡಿದಾಗ ಅದರ ರಸಸಾರ ಸಮಾನ್ಯವಾಗಿ ಸುಣ್ಣದ ಪ್ರಮಾಣಕ್ಕನುಗುಣವಾಗಿ 9-10-11 ತನಕವೂ ಬರುತ್ತದೆ.
  • ಇದು 3.5 -4ತನಕ ಬಂದಿದೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ವೀರೇಂದ್ರ ಕುಮಾರ್ ರವರು.
  • ಇವರು ತಮ್ಮಲ್ಲಿರುವ ವ್ಯವಸ್ಥೆಗಳ ಮೂಲಕ ಪರೀಕ್ಷಿಸಿದ್ದು, ಇದು ಪ್ರಯೋಗಾಲಯದ ವರದಿಗಳಷ್ಟು ಕರಾರುವಕ್ಕಾಗಿರುವುದಿಲ್ಲ. 
  • ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕಾದವರು ರೈತರು ಅಥವಾ ಕೃಷಿ ಇಲಾಖೆಯವರಾಗಿರುತ್ತಾರೆ.

ಬೋರ್ಡೋ ದ್ರಾವಣದ ರಸಸಾರ ತಟಸ್ಥ ಆಥವಾ ಕ್ಷಾರೀಯ ಆಗಿರದೆ ಅದು ಆಮ್ಲೀಯವಾದ ಕಾರಣ ಅಡಿಕೆ ಉದುರಲಾರಂಭಿಸಿದೆ ಎಂಬುದಾಗಿ ಗ್ರಹಿಸಲಾಗಿದೆ. ಇದು ಕೃಷಿ ಇಲಾಖೆಯ ಗಮನಕ್ಕೂ ಬಂದಿದ್ದು, ಸಹಾಯಕ ಕೃಷಿ ನಿರ್ಧೇಶಕರು ವಿರಾಜಪೇಟೆ ಕೊಡಗು ಜಿಲ್ಲೆ, ಇವರು ಸಂಬಂಧಿಸಿದ ಸುಣ್ಣವನ್ನು ಮಾತ್ರ ಬಳಸದಂತೆ, ಮಾರಾಟ ಮಾಡದಂತೆ ರೈತರಿಗೆ ಸೂಚನೆಯನ್ನೂ ನೀಡಿದ್ದಾರೆ.  ಇವರು ಸಂಬಂಧಿಸಿದ ಸುಣ್ಣವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅದರ ಗುಣಾವಗುಣಗಳನ್ನು ಪರಿಶೀಲಿಸಬಹುದು.

ಇಂತಹ ವಿದ್ಯಮಾನ ಮಡಿಕೇರಿಯ ವಿರಾಜಪೇಟೆಯಲ್ಲಿ ಮಾತ್ರ ಬೆಳಕಿಗೆ ಬಂದಿದೆ. ಉಳಿದೆಡೆ ಯಾವ ಸುದ್ದಿಯೂ ಆಗಿಲ್ಲ.

ರೈತರು ಏನು ಮಾಡಬೇಕು:

  • ರೈತರು ಯಾವಾಗಲೂ ಸ್ವಲ್ಪ ಬುದ್ದಿವಂತರಾಗುವುದನ್ನು ಕಲಿಯಬೇಕಿದೆ.
  • ಅವರವರ ತಲೆಗೆ ಅವರವರ ಕೈ ಎಂಬಂತೆ  ಯಾರೋ ಮಾಡಬೇಕು, ನಮಗೆ ಅದರ ಫಲ ಸಿಗಬೇಕು ಎಂದು ಕುಳಿತುಕೊಳ್ಳುವುದಲ್ಲ.
  • ಆಯಾ ಸೀಸನ್ ನಲ್ಲಿ ಬಳಕೆ ಮಾಡುವ ಗೊಬ್ಬರ, ಬೆಳೆ ಸಂರಕ್ಷಕಗಳನ್ನು ಸ್ಥಳೀಯ ರೈತರ ಗುಂಪುಗಳು ಒಟ್ಟು ಸೇರಿ ಪ್ರಯೋಗಾಲಯದಲ್ಲಿ ಅದರ ಸಾರಾಂಶಗಳ ಪರಿಶೀಲನೆ ಮಾಡಿಸುವುದು ಮುಂತಾದ ಕೆಲಸಗಳನ್ನು  ಮಾಡಬೇಕು.
  • ಎಲ್ಲರೂ ಒಟ್ಟು ಸೇರಿ ಮಾಡಿಸುವಾಗ ಖರ್ಚು ಕಡಿಮೆ ಬರುತ್ತದೆ.
  • ಕಳೆದ ವರ್ಷ ಕೃಷಿ ಅಭಿವೃದ್ದಿ ತಂಡವು ಕರಾವಳಿಯಲ್ಲಿ ಚಾಲ್ತಿಯಲ್ಲಿರುವ   ಆಯ್ದ 5 ಮೈಲುತುತ್ತೆ   ಬ್ರಾಂಡ್ ಗಳನ್ನು  ಕೇಂದ್ರೀಯ ಕಾಫೀ ಸಂಶೊಧನಾ ಸಂಸ್ಥೆ ಬಾಳೆಹೊನ್ನೂರು ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. 
  • ಯಾರಾದರೂ ನಮ್ಮಲ್ಲಿ ಸಲಹೆ ಕೇಳಿದವರಿಗೆ ಇದರ ಬಗ್ಗೆ ಹೇಳಿದ್ದೆವು.
  • ಈ ವರ್ಷ 5 ಬ್ರಾಂಡ್ ನ ಸುಣ್ಣವನ್ನು ಪರೀಕ್ಷೆಗೆ ಕಳಿಸಲು ಸಿದ್ದತೆ ನಡೆಯುತ್ತಿದ್ದು, ಒಂದು ಬ್ರಾಂಡ್ ಸಿಗುವುದಕ್ಕೆ ಕಾಯುತ್ತಿದ್ದೇವೆ.
  • ಇಂತಹ ಕೆಲಸವನ್ನು ಸ್ಥಳೀಯರು ಪ್ರತೀ ವರ್ಷ ಮಾಡಿಸುತ್ತಿದ್ದರೆ ಈ ಅಚಾತುರ್ಯಗಳಾಗುವುದು ತಪ್ಪುತ್ತದೆ.
  • ಸುಣ್ಣದ ಪರೀಕ್ಷೆ, ಮೈಲುತುತ್ತೆ ಪರೀಕ್ಷೆ ಹಾಗೆಯೇ ಹೊಸತಾಗಿ ಮಾರುಕಟ್ಟೆಗೆ ಬರುವ ಗೊಬ್ಬರ ಇತ್ಯಾದಿಗಳ ಪರೀಕ್ಷೆ ಮಾಡಿಸಿ ಬಳಕೆ ಮಾಡುವಂತಹ ಪ್ರವೃತ್ತಿಯನ್ನು ಬೆಳೆಗಾರರು ಅಗತ್ಯವಾಗಿ ಮಾಡಬೇಕು.

ಹುಡಿ ಸುಣ್ಣ Ca(OH)2  ಮತ್ತು ಚಿಪ್ಪು ಸುಣ್ಣಕ್ಕೆ ವ್ಯತ್ಯಾಸ:

  • ಕೆಲವು ಬುದ್ದಿವಂತ ಕೃಷಿಕರು ನಾವು ಹುಡಿ ಸುಣ್ಣ ಬಳಸುವುದಿಲ್ಲ.
  • ಅದರಲ್ಲಿ ಖಾರ ಇಲ್ಲ. ನಾವು ಚಿಪ್ಪು ಸುಣ್ಣ ಬೇಯಿಸಿ ಕುದಿಸಿ ಅದನ್ನೇ ಬಳಸುವುದು.
  • ಸುಣ್ಣದ ಸತ್ವಪರಿಪೂರ್ಣವಾಗಿ ಸಿಗುತ್ತದೆ ಎಂದೆಲ್ಲಾ ಮಾತಾಡುತ್ತಾರೆ.
  • ನಿಜವಾಗಿ ಇದೆಲ್ಲಾ ಭ್ರಮೆ. ಸುಣ್ಣದಲ್ಲಿ ಖಾರ ಎಂಬ ಪ್ರಶ್ನೆ ಇಲ್ಲ.
  • ಅದರಲ್ಲಿ ಕ್ಯಾಲ್ಸಿಯಂ ಅಂಶ ಇರಬೇಕು. ಹಾಗೆಯೇ ಅದು ಎಷ್ಟು ಇರಬೇಕೋ ಅಷ್ಟು ಇರಬೇಕು.
  • ರಸಸಾರ ಕಡಿಮೆ ಇದ್ದರೆ ಅದರಲ್ಲಿ ಸುಣ್ಣದ ಅಂಶ ಕಡಿಮೆ ಎಂದರ್ಥ.
  • ಸಾಮಾನ್ಯವಾಗಿ ಇಂತಹ ಸುಣ್ಣದ ರಸಸಾರ 11-12 ತನಕ ಇರುತ್ತದೆ. 
  • ಚಿಪ್ಪು ಸುಣ್ಣ ಅಥವಾ ಬೇಯಿಸಿದ ಸುಣ್ಣದ ಕಲ್ಲನ್ನು ನೀರಿನಲ್ಲಿ ಹಾಕಿ ಕುದಿಸಿದಾಗ ಅದರಲ್ಲಿ ಹೆಚ್ಚು ಸತ್ವ ಎಂಬುದು ಭ್ರಮೆ. 
  • ವಾಸ್ತವವಾಗಿ ಮೈಲುತುತ್ತೆಯ ರಸಸಾರ ಮತ್ತು ಸುಣ್ಣದ ರಸಸಾರ ಸೇರಿ ಅದು ತಟಸ್ಥ ರಸಸಾರಕ್ಕೆ ಬರಲು ಸುಣ್ಣದ ರಸಸಾರ 11 ರ ಆಸುಪಾಸಿನಲ್ಲಿ ಇದ್ದರೆ ಒಳ್ಳೆಯದು.
  • ಬೋರ್ಡೋ ದ್ರಾವಣದ ರಸಸಾರ ಹೆಚ್ಚಾದರೆ ( ಹೆಚ್ಚು ಕ್ಷಾರ Alkaline) ಆದರೆ ಅದು ಒಳ್ಳೆಯದಲ್ಲ.
  • ಇದರಿಂದ ಮಣ್ಣಿನಲ್ಲಿ ಕೆಲವು ಪೊಷಕಾಂಶಗಳು ಅಲಭ್ಯ ಸ್ಥಿತಿಗೆ ಬರುತ್ತವೆ.
  • ಮಣ್ಣಿನ ಕೆಲವು ಸೂಕ್ಷ್ಮಾಣು ಜೀವಿಗಳೂ ಸಹ ಅಲ್ಲಿ ಬದುಕಲು ಕಷ್ಟವಾಗುತ್ತದೆ.
  • ಹಾಗಾಗಿ  ಬೋರ್ಡೋ ದ್ರಾವಣದ ತಟಸ್ಥ ಅಥವಾ ತುಸು ಕ್ಷಾರೀಯ ಸ್ಥಿತಿಗೆ ಬೇಕಾದಷ್ಟೇ ಸುಣ್ಣವನ್ನು ಬಳಸಬೇಕು.

ರೈತರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಬುದ್ದಿವಂತರಾದಾಗ ಮಾತ್ರ ಅವರ ಅಭಿವೃದ್ದಿ ಸಾಧ್ಯ. ತಜ್ಞರ ಮಾತನ್ನು ಸ್ವಲ್ಪ ವಿಮರ್ಷೆ ಮಾಡುವ ಬುದ್ದಿವಂತಿಕೆ ರೈತರಲ್ಲಿ ಬೆಳೆಯಬೇಕು.ತರ್ಕಗಳು ಕುತರ್ಕಗಳಾಗಬಾರದು. ಹಾಗಿದ್ದಾಗ ಇಂತಹ ಸಮಸ್ಯೆಗಳು ಉದ್ಭವವಾಗುವುದಿಲ್ಲ. ಕಳಪೆ ಸಾಮಾಗ್ರಿಗಳ ಮೂಲಕ ರೈತರನ್ನು ಮೋಸಮಾಡುವುದೂ ತಪ್ಪುತ್ತದೆ.   

Leave a Reply

Your email address will not be published. Required fields are marked *

error: Content is protected !!