ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ – ಪೊಟ್ಯಾಶಿಯಂ

ಮ್ಯುರೇಟ್ ಆಫ್ ಪೊಟ್ಯಾಶ್ - ಉತ್ತಮ ಗೊಬ್ಬರ

ನಿಮ್ಮ ಬೆಳೆಗಳು ಹಚ್ಚ ಹಸುರಾಗಿ ಬೆಳೆದಿರುತ್ತವೆ. ಆದರೆ ಇಳುವರಿ ಮಾತ್ರ ತೀರಾ ಕಡಿಮೆ ಇರುತ್ತದೆ.ಬರುವ ಇಳುವರಿಯ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಇದಕ್ಕೆಲ್ಲಾ ಕಾರಣ ಪೊಟ್ಯಾಶಿಯಂ ಎಂಬ ಪೋಷಕದ ಕೊರತೆ. ಪೊಟ್ಯಾಶಿಯಂ ಲಭ್ಯವಾದರೆ ಮಾತ್ರ  ಕೈಗೆ ಬಂದ ತುತ್ತು ಬಾಯಿಗೆ ಬರಲು ಸಾಧ್ಯ. ಇದು ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ.

 •  ನಮ್ಮ ದೇಶದ ಬಹಳ ಜನಕ್ಕೆ ಸಮತೊಲನದ ಗೊಬ್ಬರ ಎಂದರೆ ಏನು ಎಂಬುದು ಇನ್ನೂ ತಿಳಿದಿಲ್ಲ.
 • ಅದಕ್ಕೆ ಸರಿಯಾಗಿ ನಮ್ಮಲ್ಲಿ ಪೊಷಕಾಂಶಗಳನ್ನು ಒದಗಿಸುವವರೂ ಮಾರಾಟ ಚಾಕಚಕ್ಯತೆಯನ್ನು ತೋರುತ್ತಿವೆ.
 • ಬರೇ ಗೊಬ್ಬರದ ಚೀಲದಲ್ಲಿ NPK  ಬರೆದಿದ್ದರೆ ಸಾಲದು.
 • ಅದರ ಅಡಿಯಲ್ಲಿ  ಬರೆದ ಪ್ರಮಾಣದ ಮುದ್ರಣವನ್ನು ರೈತರು ಗಮನಿಸಬೇಕು. NPK ಈ ಮೂರೂ ಪೋಷಕಗಳ ಸರಿಯಾದ ಪ್ರಮಾಣ ಬಳಕೆ  ಮಾಡಿದರೆ ಮಾತ್ರ ಬೆಳೆಗಳ ಇಳುವರಿಗೆ ಸಹಾಯಕ.

ಪೊಟ್ಯಾಶ್ ಎಂದರೆ ಏನು:

 • ಪೊಟ್ಯಾಶ್ ಎಂಬುದನ್ನು Pot-ash ಎಂಬ ಶಬ್ಧದಿಂದ ಸಂಭೋಧಿಸಲಾಗುತ್ತದೆ.
 • ಕೆಲವು ಖನಿಜ-ಶಿಲೆಗಳಲ್ಲಿ  ಕರಗುವ ರೂಪದ ಪೊಟ್ಯಾಶಿಯಂ ಇರುತ್ತದೆ.
 • ಇದನ್ನು ಪೊಟ್ಯಾಶಿಯಂ ಲವಣ ಎನ್ನುತ್ತಾರೆ.
 • ಬಹುತೇಕ ಕೃಷಿ ಬಳಕೆಯ ಪೊಟ್ಯಾಶಿಯಂ ಪೊಟ್ಯಾಶಿಯಂ ಕ್ಲೋರೈಡ್ ರೂಪದಲ್ಲಿ ಇರುತ್ತದೆ.
 • ಸಾರಜನಕ ಎಂಬುದು ವಾತಾವರಣದಲ್ಲಿ ಇರುವ ಅನಿಲ ರೂಪದ ಪೋಷಕ.
 • ರಂಜಕ ಮತ್ತು ಪೊಟ್ಯಾಶ್ ಎಂಬುದು ಇದಕ್ಕೆ ವ್ಯತಿರಿಕ್ತವಾಗಿ ಮಣ್ಣಿನಲ್ಲಿ  ಖನಿಜ (mineral )ರೂಪದಲ್ಲಿ ಇರುವ ಪೋಷಕ.
 • ಅತ್ಯಲ್ಪ ಪ್ರಮಾಣದಲ್ಲಿ ಸಾವಯವ ವಸ್ತುಗಳಲ್ಲಿ ರಂಜಕ ಮತ್ತು ಪೊಟ್ಯಾಶ್ ಇರುತ್ತದೆ.
 • ಬಹುತೇಕ ಇವು ಖನಿಜ ರೂಪದಲ್ಲಿ  ಮಣ್ಣಿನಲ್ಲಿ ನಿರವಯವ ವಸ್ತುವಾಗಿ ಇರುತ್ತದೆ.
ಬಿಳಿ ಮ್ಯುರೇಟ್ ಆಫ್ ಪೊಟ್ಯಾಶ್
ಬಿಳಿ ಮ್ಯುರೇಟ್ ಆಫ್ ಪೊಟ್ಯಾಶ್

ಸೃಷ್ಟಿಯಲ್ಲಿ ಪೊಟ್ಯಾಶಿಯಂ ರಂಜಕಕ್ಕೆ ಹೋಲಿಸಿದರೆ ವಿಫುಲವಾಗಿದೆ. ಜ್ವಾಲಾಮುಖಿಯಾಗುವಾಗ, ಫೆಲ್ ಸ್ಟಾರ್,ಅಬ್ರಕ, ಸಿಲಿಕೇಟ್ ಮುಂತಾದ ಖನಿಜಗಳಲ್ಲೂ ಪೊಟ್ಯಾಶ್  ಇರುತ್ತದೆ. ಮರಸುಟ್ಟ ಬೂದಿಯಲ್ಲೂ ಪೊಟ್ಯಾಶ್ ಇರುತ್ತದೆ. ಈ ಪೋಷಕವು ಆವಿಯಾಗಿ ನಷ್ಟವಾಗುವುದಿಲ್ಲ. ಇದ್ದಲ್ಲೇ ಇರುವುದಿಲ್ಲ. ಸರಾಗವಾಗಿ ಕರಗಿ ಭೂಮಿಯಾಳಕ್ಕೆ ಇಳಿದು ಹೋಗುವುದೂ ಇಲ್ಲ. ಇದಕ್ಕೆ ಚಲನೆ ಇದೆ. ಇದರಲ್ಲಿ ಮೂರು ವಿಧಗಳಿವೆ.

 • ಬೆಳೆಗಳಿಗೆ ದೊರೆಯುವ ಪೊಟ್ಯಾಶ್  ಒಂದು. ಇದು ಸುಲಭವಾಗಿ ಸಸ್ಯಗಳಿಗೆ ದೊರೆಯುತ್ತದೆ. ಇಂತಹ ಪೊಟ್ಯಾಶ್ ಕೇವಲ  1-2 % ಮಾತ್ರ.
 • ಬೆಳೆಗಳಿಗೆ ದೊರೆಯದ ರೂಪದ ಪೊಟ್ಯಾಶ್. ಇದು ಸಸ್ಯಗಳಿಗೆ ಅಲಭ್ಯ ಎಂದೇ ಹೇಳಬಹುದು. ಇದು ಮಣ್ಣಿನಲ್ಲಿ ಶೇ.90-98% ತನಕ  ಇರುತ್ತದೆ.
 • ವಿನಿಮಯ ಹೊಂದುವ ಪೊಟ್ಯಾಶ್, ಇದು ಮಣ್ಣಿನಲ್ಲಿ ರುವ ಇಲ್ಲೈಟ್  ಮತ್ತು ವರ್ಮಿಕ್ಯುಲೇಟ್  ಇತ್ಯಾದಿ ಖನಿಜಗಳಲ್ಲಿ ಇರುತ್ತದೆ. ಈ ಪೊಟ್ಯಾಶ್ ಸಹ ಸಸ್ಯಗಳಿಗೆ ಸುಲಭವಾಗಿ ದೊರೆಯಲಾರದು.

ನಾವು ಸಾರ್ವತ್ರಿಕವಾಗಿ ಬಳಕೆ ಮಾಡುವ ಮ್ಯುರೇಟ್ ಆಫ್ ಪೊಟ್ಯಾಶ್ ಎಂಬುದು  ಅಮೇರಿಕಾ, ರಶ್ಯಾ, ಜರ್ಮನಿ,  ಉಕ್ರೆನ್  ಮತ್ತು ಪ್ರಾನ್ಸ್ ದೇಶಗಳಲ್ಲಿ  ಕಂಡು  ಬರುವ ಖನಿಜವನ್ನು ಹುಡಿ ಮಾಡಿ ಪಡೆದ ಗೊಬ್ಬರ. ಇದನ್ನು ಪೊಟ್ಯಾಶಿಯಂ ಕ್ಲೋರೈಡ್ ಎನ್ನುತ್ತಾರೆ.ಪೊಟ್ಯಾಶ್ ಮತ್ತು ಕ್ಲೋರಿನ ಇರುತ್ತದೆ. ಇದು ತಟಸ್ಥ ಗೊಬ್ಬರವಾಗಿದೆ. ಭಾರತದಲ್ಲಿ ಇದು ಇಲ್ಲ. ಅಮದು ಮಾಡಬೇಕು.

ಬೆಳೆಗಳಿಗೆ ಪೊಟ್ಯಾಶಿಯಂ ಯಾಕೆ ಬೇಕು:

 • ಬೆಳೆಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ಸರಜನಕ ಬೇಕಾದರೆ ಆ ಬೆಳೆವಣಿಗೆಗೆ ಶಕ್ತಿ ಕೊಡಲು ಪೊಟ್ಯಾಶ್ ಬೇಕು.
 • ಒಂದು ತೆಂಗಿನ ಕಾಯಿಯ ಗಾತ್ರ ಹೆಚ್ಚಿಸಲು  ಸಾರಜನಕ ಬೇಕು,  ಒಳ ತಿರುಳು ದಪ್ಪವಾಗಿ, ಹೆಚ್ಚು ರಸವತ್ತಾಗಿರಲು  ಪೊಟ್ಯಾಶ್ ಬೇಕು.
 • ಇವೆರಡೂ ಪರಸ್ಪರ ಪೂರಕ. ಒಂದು ತರಕಾರಿ ಸೌತೇ ಕಾಯಿಯನ್ನು ತೆಗೆದುಕೊಳ್ಳೋಣ.
 • ಕಠಾವು ಮಾಡಿ, ಅದನ್ನು ಧೀರ್ಘ ಕಾಲದ ತನಕ ಕಾಪಿಡುವ ಶಕ್ತಿ ಬೇಕೆಂದಾದರೆ ಅದಕ್ಕೆ ಪೋಟ್ಯಾಶ್ ಸತ್ವ ಲಭ್ಯವಾಗಲೇ ಬೇಕು.
 • ಸೊಪ್ಪು ತರಕಾರಿ  ರುಚಿ ಇರಬೇಕಾದರೆ ಅದಕ್ಕೂ ಪೊಟ್ಯಾಶ್ ಬೇಕೇ ಬೇಕು.
 • ಹಣ್ಣಿಗೆ ಸಿಹಿ ಬರಬೇಕಾದರೆ ಪೊಟ್ಯಾಶ್ ಬೇಕು.
 • ಎಲ್ಲಾ ಬೆಳೆಗಳಲ್ಲಿ ಕಾಯಿ ಕಚ್ಚಬೇಕಾದರೂ ಪೊಟ್ಯಾಶ್ ಬೇಕೇ ಬೇಕು.

ಗಡ್ಡೆ ಗೆಣಸು ಬೆಳೆಗಳಿಗೆ ಅಧಿಕ ಪ್ರಮಾಣದಲ್ಲಿ ಪೊಟ್ಯಾಶ್ ಬೇಕು. ಪೊಟ್ಯಾಶಿಯಂ ಸಸ್ಯ ಕೋಶಿಕೆಗಳಲ್ಲಿ ಪ್ರವೇಶ್ಯತೆಯನ್ನು ಕಾಪಾಡುತ್ತದೆ.ಶರ್ಕರ ಪಿಷ್ಟಾದಿಗಳು ಮತ್ತು ಕಬ್ಬಿಣಾಂಶ ವೃದ್ದಿಗೆ ಸಹಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ  ಇದು ಬೇಕು. ಅಮೈನೋ ಆಮ್ಲ ತಯಾರಿಸುವ ಕಿಣ್ವಗಳಿಗೆ ಇದು ಶಕ್ತಿ ಕೊಡುತ್ತದೆ.

 • ಸಾರಜಕದ ಉಪಯೋಗವನ್ನು ಹೆಚ್ಚಿಸುತ್ತದೆ.
 • ಸಸ್ಯಗಳ ಪ್ರಾಮುಖ್ಯ ಕ್ರಿಯೆಯಾದ ದ್ಯುತಿಸಂಸ್ಲೇಶಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.
 • ಬೆಳೆ ಗಟ್ಟಿ ಮುಟ್ಟಾಗುತ್ತದೆ. ಜೀವ ಕೋಶಗಳ ವಿಭಜನೆಗೆ ಸಹಕರಿಸುತ್ತದೆ.

ಒಟ್ಟಿನಲ್ಲಿ ಪೊಟ್ಯಾಶಿಯಂ ಎಂಬ ಪೋಷಕ ಇಲ್ಲದಿದ್ದರೆ ಬೆಳೆ ಅಪೂರ್ಣ. ಇದನ್ನು ಬಿಟ್ಟು ಬೆಳೆ ಇಲ್ಲವೇ ಇಲ್ಲ. ಕೆಲವು ಬೆಳೆಗಳಿಗೆ ಸ್ವಲ್ಪ ಕಡಿಮೆ ಸಾಕು, ಕೆಲವಕ್ಕೆ ಹೆಚ್ಚು ಬೇಕು. ಆದರೆ ಸಸ್ಯಕ್ಕೆ ಇದು ಜೀವ ಎಂದರೂ ತಪ್ಪಾಗಲಾರದು.

Leave a Reply

Your email address will not be published. Required fields are marked *

error: Content is protected !!