ಬೋರ್ಡೋ ದ್ರಾವಣ ತಾಯಾರಿಕೆ ವಿಧಾನ ಇದು.

ಬೋರ್ಡೋ ದ್ರಾವಣ ಸಿಂಪಡಿಸಿದ ಮರ

ಸುಣ್ಣ ಮತ್ತು ಮೈಲು ತುತ್ತೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸುವ ದ್ರಾವಣಕ್ಕೆ ಬೋರ್ಡೋ  ದ್ರಾವಣ (Bordeaux mixture )ಎಂದು ಹೆಸರು. ಇದು  ಕೊಳೆಯುವ ರೋಗಕ್ಕೆ ಕಾರಣವಾದ  ಶಿಲೀಂದ್ರದ ಬೀಜಾಣುಗಳನ್ನು ಮೊಳಕೆಯೊಡೆಯದಂತೆ  ಪ್ರತಿಬಂಧಿಸುವ ಶಕ್ತಿಯನ್ನು ಹೊಂದಿದೆ.

 • ಪ್ರಾನ್ಸ್ ದೇಶದ ಬೊರ್ಡೋ ಎಂಬ ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಲ್ಲಿ ಸಸ್ಯಾಣುಗಳಿಂದ ಉಂಟಾಗುವ ರೋಗವನ್ನು ನಿಯಂತ್ರಿಸಲು ಈ ಸಾಮಾಗ್ರಿಗಳ ಪಾಕವನ್ನು ಬಳಸಲಾಗುತ್ತಿತ್ತಂತೆ.
 • ಅದನ್ನು ಮೈಸೂರು ಪ್ರಾಂತ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಪರಿಚಯಿಸಿದವರು  ಲೆಸ್ಲಿ ಸಿ ಕೋಲ್ ಮನ್ Leslie Charles Coleman ರವರು.
 • ಇವರು ಮೈಸೂರು ಪ್ರಾಂತ್ಯದ ಮೈಕಾಲಜಿಸ್ಟ್  ಆಗಿದ್ದರು.
 • ಇವರು ಈಗಿನ ಮಲೆನಾಡಿನ ಕೊಪ್ಪ, ಕಡೂರು, ತೀರ್ಥಹಳ್ಳಿ, ಸಾಗರ ಮುಂತಾದ  ಕಡೆಯ ತೋಟಗಳಲ್ಲಿ ಈ ದ್ರಾವಣವನ್ನು ಸ್ವತಹ ಇದ್ದು, ತಯಾರಿಸಿ, ಸಿಂಪಡಿಸಿ, ಅದರ ಫಲಿತಾಂಶವನ್ನು ದಾಖಲಿಸಿದ್ದರು.
 • ಅಂದಿನಿಂದ ಇಂದಿನ ವರೆಗೂ ಈ ದ್ರಾವಣ ತನ್ನ  ಅಸ್ತಿತ್ವವನ್ನು  ಉಳಿಸಿಕೊಂಡಿದೆ.

 30-40 ದಿನಗಳ ಕಾಲ ಅಂಟಿಕೊಂಡು ತನ್ನ ಪರಿಣಾಮವನ್ನು ಉಳಿಸಿಕೊಂಡು ಇರುವ ಶಿಲೀಂದ್ರ ನಾಶಕ ಇಂದಿಗೂ ಇದೊಂದೇ.ಬರೇ ಅಡಿಕೆ ಮಾತ್ರವಲ್ಲದೆ ಬೇರೆ ಬೆಳೆಗೆ ಇದರ ಬಳಕೆ ಇದೆ.

ಬೋರ್ಡೋ ದ್ರಾವಣ ಸಿಂಪರಣೆ

ಹೇಗೆ ತಯಾರಿಸುವುದು:

 • ಮೈಲುತುತ್ತೆ ಎಂಬುದು ತಾಮ್ರದ ಸಲ್ಫೇಟ್. ಅಂದರೆ ತಾಮ್ರ ಎಂಬ ಲೋಹವನ್ನು ನೀರಿನಲ್ಲಿ ಕರಗುವ ರೂಪಕ್ಕೆ ಪರಿವರ್ತಿಸಬೇಕಾದರೆ ಅದನ್ನು ಸಲ್ಫೇಟ್ ರೂಪಕ್ಕೆ ತರಬೇಕು.
 • ನಿರ್ದಿಷ್ಟ ಪ್ರಮಾಣದ ತಾಮ್ರದ ಅದಿರನ್ನು  ಸಲ್ಫ್ಯೂರಿಕ್ ಆಮ್ಲದಲ್ಲಿ ಉಪಚರಿಸಿದಾಗ ಅದು ತಾಮ್ರ ಸಲ್ಫೇಟ್ ಆಗುತ್ತದೆ.
 • ಆಗ ಅದರಲ್ಲಿ ತಾಮ್ರದ ಅಂಶ ಕಡಿಮೆಯಾಗಿ ಗಂಧಕ( ಸಲ್ಪರ್) ಅಂಶ ಹೆಚ್ಚು ಇರುತ್ತದೆ.
 • ಕೃಷಿ ಬಳಕೆಗೆ ಬೇಕಾಗುವುದು ಸುಮಾರು 25%  ತಾಮ್ರ.
 • ಅದರಲ್ಲಿ ಉಳಿದವು ಸಲ್ಫರ್ ಆಗಿರುತ್ತದೆ.
 • ತಾಮ್ರದ ಸಲ್ಫೇಟ್  ಎಂಬುದು ತಯಾರಾಗುವಾಗ  ಹರಳು ರೂಪದಲ್ಲಿ ಇರುತ್ತದೆ.
 • ಇದನ್ನು  ಯಂತ್ರಕ್ಕೆ ಹಾಕಿ ಪುಡಿಯಾಗಿಯೂ ಮಾಡಿಕೊಳ್ಳಬಹುದು.
 • ಸುಣ್ಣ ಎಂಬುದು ಕೆಲವು ಕಡೆ ಸಮುದ್ರ ಚಿಪ್ಪನ್ನು ಬೇಯಿಸಿ ತಯಾರಿಸಿಯೂ, ಇನ್ನು ಕೆಲವು ಕಡೆ ಖನಿಜ ರೂಪದ ಕಲ್ಲನ್ನು ಬೇಯಿಸಿ ಪುಡಿಮಾಡಿ ತಯಾರಿಸಿದ್ದೂ ಇರುತ್ತದೆ.
 • ಮೈಲು ತುತ್ತೆಯ ಹರಳನ್ನು  ಬಟ್ಟೆಯಲ್ಲಿ ಕಟ್ಟಿ ನೀರಿಗೆ ತಾಗುವಂತೆ ನೇತಾಡಿಸಿ ಇಟ್ಟರೆ ಅದು ಬೇಗ ಕರಗುತ್ತದೆ.  ಹಾಗೆಯೇ ನೀರಿಗೆ ಹಾಕಿದರೆ ಬೇಗ ಕರಗಲಾರದು.
 • ಸುಣ್ಣವನ್ನು ನೀರಿನಲ್ಲಿ ಕರಗಿಸಬೇಕು. ಚಿಪ್ಪು ಸುಣ್ಣ ನೀರು ಬಿದ್ದಾಗ ಕರಗುತ್ತದೆ.
 • ಬಿಸಿ ನೀರು ಹಾಕಿದಾಗ ಬೇಗ ಕರಗುತ್ತದೆ. ಹುಡಿ ಸುಣ್ಣವನ್ನೂ ಬಳಸಬಹುದು.
 • ಖನಿಜವನ್ನು ಹುಡಿ ಮಾಡಿ ಪಡೆಯಲಾದ ಸುಣ್ಣವು ನೀರಿನಲ್ಲಿ ಕರಗುತ್ತದೆ.
 • ಸುಣ್ಣ ಕರಗಿದಾಗ ಅದು ಸುಣ್ಣದ ಹೈಡ್ರಾಕ್ಸೈಡ್ ಆಗುತ್ತದೆ.
 • ಮೈಲು ತುತ್ತೆ 1 ಕಿಲೋ ವನ್ನು ಸುಮಾರು 8 ಲೀ. ನೀರಿನಲ್ಲಿ ಕರಗಿಸಿದಾಗ ಕರಗುತ್ತದೆ. 2 ಕಿಲೋ ಆದರೆ 15 ಲೀ. ನಷ್ಟು ನೀರು ಇದ್ದರೆ ಅದು ಪೂರ್ತಿ ಕರಗುತ್ತದೆ.
 • ಸುಣ್ಣ 1 ಕಿಲೋ ಕರಗಿಸಲು 8 ಲೀ. ನೀರು ಬೇಕು. 2 ಕಿಲೋ ಗೆ 15 ಲೀ. ನೀರು ಬೇಕು.
 • ಕರಗಿಸಿದ ಮೂಲವಸ್ತುಗಳನ್ನು  ಪ್ರತ್ಯೆಕವಾಗಿಟ್ಟುಕೊಂಡು  ಬ್ಯಾರಲ್ ಗೆ ನೀರು ತುಂಬಿ ಮೊದಲು ಸುಣ್ಣದ ದ್ರಾವಣವನ್ನು  ಹಾಕಬೇಕು.
 • ಇದಲ್ಲದೆ ಮೊದಲು ಬ್ಯಾರಲ್ ಗೆ  ಕರಗಿಸಿದ ಮೂಲವಸ್ತುಗಳ ದ್ರಾವಣವನ್ನು ಕಳೆದು ಉಳಿದ ಪ್ರಮಾಣದಷ್ಟು ನೀರನ್ನು ತುಂಬಿ ಅದಕ್ಕೆ ಎರಡೂ ದ್ರಾವಣಗಳನ್ನೂ ಏಕಕಾಲದಲ್ಲಿ ಸುರಿಯಿರಿ. ಸುರಿದ ತಕ್ಷಣ ಅದನ್ನು ಕಲಕಿ ಮಿಶ್ರಣ ಮಾಡಿ.
 • ಈಗ ಬೋರ್ಡೋ ದ್ರಾವಣ ತಯಾರಾಗುತ್ತದೆ.

ಶೇ1 ರ ಬೋರ್ಡೋ ದ್ರಾವಣ ಸೂಕ್ತ:

ಶೇಕಡಾ 1 ರ ಬೋರ್ಡೊ ದ್ರಾವಣ

 • ಶೇ. 1 ರ ಬೋರ್ಡೋ ದ್ರಾವಣ ತಯಾರಿಸಲು  ಬೇಕಾಗುವುದು  1 ಕಿಲೋ ಮೈಲು ತುತ್ತೆ ಮತ್ತು 1  ಕಿಲೋ ಸುಣ್ಣ. (copper sulphate and calcium hydroxide)
 • ಈ ಎರಡು ಕಿಲೋ ಕರಗಿಸಿದ ದ್ರಾವಣವನ್ನು 100 ಲೀ. ನೀರಿನಲ್ಲಿ ಮಿಶ್ರಣ ಮಾಡಿದಾಗ ಅದು ಶೇ.1 ರ ಬೋರ್ಡೋ ದ್ರಾವಣ ಆಗುತ್ತದೆ.
 • 200 ಲೀ. ನೀರಿಗೆ 2 ಕಿಲೋ  ಮೈಲು ತುತ್ತೆ ಮತ್ತು 2 ಕಿಲೋ  ಸುಣ್ಣವನ್ನು ಕರಗಿಸಬೇಕಾಗುತ್ತದೆ.
 • ಕೆಲವರು 2 ಕಿಲೋ ಸುಣ್ಣದ ಬದಲಿಗೆ 3 ಕಿಲೋ ಹಾಗೂ ಕೆಲವರು 4 ಕಿಲೊ ಬಳಸುತ್ತಾರೆ.
 • ಶೇ. 1 ರ ದ್ರಾವಣದಲ್ಲಿ ಫೈಟೋಪ್ಥೆರಾ ಶಿಲೀಂದ್ರ  ರೋಗ ನಿಯಂತ್ರಣ ಸಾಧ್ಯವಿದ್ದು,
 • ಹೆಚ್ಚು ಬಳಕೆ ಮಾಡುವುದು ಅವರ ಐಚ್ಚಿಕ ವಿಚಾರವಾಗಿರುತ್ತದೆ.
 • ತಾಮ್ರದ ಸಲ್ಫೇಟ್ ಮತ್ತು ಸುಣ್ಣದ ಗುಣಮಟ್ಟ ಸರಿ ಇರಲಿಕಿಲ್ಲ ಎಂಬ ಸಂದೇಹದಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ.
 • ಕೆಲವರು ಇದರಲ್ಲಿ ಪ್ರಯೋಜನವನ್ನೂ ಗುರುತಿಸಿದ್ದು ಉಂಟು.

ದ್ರಾವಣ ತಯಾರಿ:

 • ಲೋಹ ಆಧಾರಿತ ದ್ರಾವಣ ಆಗಿರುವ ಕಾರಣ ಇದನ್ನು ಕೆಲವು ಪಾತ್ರೆಗಳಲ್ಲಿ ತಯಾರಿ ಮಾಡಬಾರದು. ವಿಶೇಷವಾಗಿ ಅಲ್ಯೂಮೀನಿಯಂ.
 • ಈಗ ಪ್ಲಾಸ್ಟಿಕ್ ಬಕೆಟ್ ಬಂದ ಕಾರಣ ಇದೆಲ್ಲಾ ಯಾರೂ ಬಳಕೆ ಮಾಡುವುದಿಲ್ಲ.
 • ಬೋರ್ಡೋ ದ್ರಾವಣವನ್ನು ತಯಾರಿಸುವಾಗ ಅದರ   ಬಣ್ಣ ಆಕಾಶ ನೀಲಿ ಆಗಿರಬೇಕು.

ಯಾವುದೇ ಕಾರಣಕ್ಕೆ ಅದು ಮೊಸರಿನಂತೆ ಆಗಬಾರದು. ತುತ್ತೆ ಯ ನೀರಿಗೆ ಸುಣ್ಣ ಹಾಕಿದರೆ ಹೀಗಾಗುತ್ತದೆ. ಬಳಕೆ ಮಾಡುವಾಗ ಕಲಕುತ್ತಾ ಇದ್ದರೆ ಒಳ್ಳೆಯದು.  ಬ್ಯಾರಲ್ ನಲ್ಲಿ ತಯಾರಿಸಿದ ದ್ರಾವಣ  ಕಲಕದೇ ಇದ್ದಾಗ ½  ಗಂಟೆಯ ತರುವಾಯ ಮೇಲು ಭಾಗದಲ್ಲಿ ಹೆಚ್ಚೆಂದರೆ ½  ಅಡಿಯಷ್ಟು ಮಾತ್ರ ನೀರು ನಿಂತಿರಬೇಕು. ತಳ ಕಂಡರೆ ಪಾಕ ಸರಿಯಾಗಲಿಲ್ಲ ಎಂದರ್ಥ.

 • ತಯಾರಿಸಿದ ದ್ರಾವಣವನ್ನು ಆ ದಿನವೇ ಸುಮಾರು 12 ಗಂಟೆ ಒಳಗೆಯೇ ಸಿಂಪರಣೆ ಮಾಡುವುದು ಉತ್ತಮ.
 • ಉಳಿದರೆ ಅದಕ್ಕೆ ಬೆಲ್ಲ ( 100 ಲೀ. 50 ಗ್ರಾಂ)  ಹಾಕಿ ಇಡಬೇಕು.
 • ಬೋರ್ಡೋ ದ್ರಾವಣಕ್ಕೆ ಬೇರೆ ಯಾವುದೇ ವಸ್ತುವನ್ನು ಸೇರಿಸಬಾರದು.
 • ಅದರೊಂದಿಗೆ ಯಾವುದೂ ಹೊಂದಾಣಿಕೆ ಆಗುವುದಿಲ್ಲ.
 • ಉತ್ತಮ ಗುಣಮಟ್ಟದ ಅಂಟು ಮತ್ತು ಪ್ರಸರಕವನ್ನು ಮಿಶ್ರಣ ಮಾಡಬಹುದು.
 • ಬೋರ್ಡೋ ದ್ರಾವಣವು ಅಡಿಕೆ ಕಾಯಿಗಳ ಮೇಲ್ಮೈಯಲ್ಲಿ ತೆಳುವಾದ  ಲೇಪನವಾಗಿ ಅಂಟಿಕೊಂಡು ಅಲ್ಲಿ ಶಿಲೀಂದ್ರದ ಬೀಜಾಣು ಮೊಳಕೆ ಒಡೆಯದಂತೆ ತಡೆಯುತ್ತದೆ.
 • ಬೋರ್ಡೋ ದ್ರಾವಣದ ಸ್ಥಿತಿ ಆಮ್ಲೀಯವಾಗಿ ಇರಬಾರದು.
 • ತಾಮ್ರ  ಹೆಚ್ಚಾದರೆ ಆಮ್ಲೀಯವಾಗುತ್ತದೆ.
 • ಇದನ್ನು ಲಿಟ್ಮಸ್ ಪೇಪರ್ ನಲ್ಲಿ ಪರೀಕ್ಷಿಸಬೇಕು.
 • ಸರಳವಾಗಿ ಮಸೆದ ಕತ್ತಿಯನ್ನು ಮುಳುಗಿಸಿದಾಗ ಅದರಲ್ಲಿ ತಾಮ್ರದ ಬಣ್ಣ ಅಂಟಿಕೊಳ್ಳಬಾರದು.
 • ಬೋರ್ಡೋ ದ್ರಾವಣದ pH ನೋಡಲು ಸುಲಭ ಉಪಾಯ ಹೀಗಿದೆ.
 • ಮೂರು 10 ಲೀ. ಹಿಡಿಯುವ ಪಾರದರ್ಶಕ ಬಕೆಟ್ ತೆಗೆದುಕೊಳ್ಳಿ.
 • ಅದರಲ್ಲಿ ಒಂದಕ್ಕೆ 50 ಗ್ರಾಂ ಮೈಲು ತುತ್ತೆ ಹಾಕಿ 5 ಲೀ. ದ್ರಾವಣ ಮಾಡಿಕೊಳ್ಳಿ.
 • ಮತ್ತೆ ಎರಡರಲ್ಲಿ 25 ಗ್ರಾಂ ಸುಣ್ಣವನ್ನು ಸೇರಿಸಿ ದ್ರಾವಣ ಮಾಡಿಕೊಳ್ಳಿ.
 • ಸುಣ್ಣದ ದ್ರಾವಣಕ್ಕೆ ತುತ್ತದ ದ್ರಾವಣ ಹಾಕಿ  ಕಲಕಿ ಲಿಟ್ಮಸ್ ಪೇಪರ್ ನಲ್ಲಿ ಪರೀಕ್ಷಿಸಿ.
 • ಆಮ್ಲೀಯವಾಗಿದ್ದರೆ ಮತ್ತೆ 1 ಲೀ. ಸುಣ್ಣದ ದ್ರಾವಣ ಹಾಕಿ. ಮತ್ತೆ ಪ್ರರೀಕ್ಷಿಸಿ.
 • ಹೀಗೆ ತಟಸ್ಥ ದ್ರಾವಣ ಆಗಲು ಬೇಕಾದಷ್ಟು ಸ್ವಲ್ಪ ಸ್ವಲ್ಪವೇ ಸುಣ್ಣದ ದ್ರಾವಣ ಹಾಕಿ.
 • ಪ್ರಮಾಣವನ್ನು ಲೆಕ್ಕಾಚಾರ ಹಾಕಿ. ಅದರಂತೆ 100-200 ಲೀ. ಗೆ ಸುಣ್ಣವನ್ನು ಹಾಕಬೇಕು.
 • ಸಾಮಾನ್ಯವಾಗಿ 500-600 ಗ್ರಾಂ ಸುಣ್ಣದಲ್ಲಿ ತಟಸ್ಥ ದ್ರಾವಣ ಆಗುತ್ತದೆ

ಮೈಲು ತುತ್ತೆ  ಮತ್ತು ಸುಣ್ಣದ ದ್ರಾವಣ ಈಗಲೂ ಉತ್ತಮ ಕೊಳೆ ನಿಯಂತ್ರಕವಾಗಿ ಕೆಲಸ ಮಾಡುತ್ತದೆ. ಕೆಲವು ಅಪವಾದಗಳು ಇದ್ದರೆ ಅದು ಸಾಮಾಗ್ರಿಯ ದೋಷ ಮತ್ತು ತಯಾರಿಕೆಯ ಕ್ರಮದಿಂದ ಆಗುವುದಾಗಿರುತ್ತದೆ.

One thought on “ಬೋರ್ಡೋ ದ್ರಾವಣ ತಾಯಾರಿಕೆ ವಿಧಾನ ಇದು.

Leave a Reply

Your email address will not be published. Required fields are marked *

error: Content is protected !!