ಒಬ್ಬ ಮೆಕ್ಯಾನಿಕ್ ಶಿಕ್ಷಣ ಕಡಿಮೆಯಾದರೂ ಸಹ ತನ್ನ ವೃತ್ತಿ ಕ್ಷೇತ್ರದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳುತ್ತಾ ಮುಂದುವರಿಯುತ್ತಿರುತ್ತಾನೆ. ಇಂತಹ ಪಾರ್ಟ್ ಹಾಳಾದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂಬುದಾಗಿ ನಿಖರವಾಗಿ ಹೇಳುತ್ತಾನೆ. ಆದರೆ ನಮ್ಮ ಕೃಷಿಕರು ಈ ವಿಷಯದಲ್ಲಿ ಇನ್ನೂ ಪ್ರೌಢರಾಗಿಲ್ಲ. ಪ್ರತೀಯೊಂದು ವಿಚಾರಕ್ಕೂ ಇನ್ನೊಬ್ಬನಲ್ಲಿ ಕೇಳುವ, ಅವನ ಸಂಭಾವನೆ ರಹಿತ ಉಚಿತ ಸಲಹೆ ಕೇಳುವ ಬಹಳಶ್ಟು ಸಂದೇಹಗಳಲ್ಲೇ ಮುಂದುವರಿಯುವ ಮನೋಸ್ಥಿತಿ ನಮ್ಮ ಕೃಷಿಕ ವರ್ಗದಲ್ಲಿ ಕಾಣಿಸುತ್ತಿದೆ. ಹತ್ತು ಜನರ ಅಭಿಪ್ರಾಯ ಕೇಳಿ ತನಗೆ ತೋಚಿದಂತೆ ಅದನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ ಹೆಚ್ಚಿನವರು ಮಾಡುವ ಕೃಷಿ ವಿಧಾನ.
ಕೆಲವು ದಿನಗಳ ಹಿಂದೆ ಕೃಷಿಕ ರಮೇಶ್ ದೇಲಂಪಾಡಿಯವರು ಒಂದು ಪೋಸ್ಟ್ ಹಾಕುತ್ತಾರೆ. ಒಬ್ಬ ಕೃಷಿಕ ಮಹಿಳೆ ಸಿಕ್ಕಿದರು. ನಾನು ರೋಗರ್ ಹೊಡೆದು ಎಲೆ ಚುಕ್ಕೆ ನಿಯಂತ್ರಿಸಿದೆ ಎಂದರಂತೆ. ಮತ್ತೆ ಸ್ವಲ್ಪ ಕೆದಕಿ ಕೇಳಿದಾಗ ಜೊತೆಗೆ SAAF ಸಹ ಮಿಶ್ರಣ ಮಾಡಿದ ವಿಚಾರ ಹೇಳಿದರಂತೆ. ಇಲ್ಲಿ ನಾನು ಗಮನಿಸಿದ್ದು, ನಮ್ಮ ರೈತರಿಗೆ ರೋಗ ಯಾವುದು ಕೀಟ ಯಾವುದು, ಕೀಟ ನಾಶಕ ಯಾವುದು , ರೋಗನಾಶಕ ಯಾವುದು ಎಂಬುದರ ಅರಿವು ಇಲ್ಲದಿರುವುದು. ಕೆಲವರಿಗೆ ಇನ್ನೂ ಒಂದು ಅಭ್ಯಾಸ ಇದೆ. ಅಸಂಬದ್ಧ ಪರೀಕ್ಷೆಗಳನ್ನು ಮಾಡಿ ಅದನ್ನು ಸುದ್ದಿಯಾಗಿ ಹರಿಬಿಡುವುದು !.
ಒಂದು ಉದಾಹರಣೆ ಕೊಡಬಯಸುತ್ತೇನೆ. ಒಂದಷ್ಟು ಜನ ಸೇರಿರುವ ಕಡೆ NPK ಬಗ್ಗೆ ಮಾತಾಡಿದರೆ ಅದು ರಾಸಾಯನಿಕ ಸರಕಾರೀ ಗೊಬ್ಬರ ನಾವು ಬಳಸುವುದಿಲ್ಲ ಎಂದು ಉತ್ತರಿಸುತ್ತಾರೆ. ಇದರಲ್ಲೇ ಗೊತ್ತಾಗುತ್ತದೆ ನಮ್ಮ ಕೃಷಿಕರ ವೃತ್ತಿ ಪ್ರೌಢತೆ ಎಷ್ಟರಮಟ್ಟಿಗೆ ಇದೆ ಎಂದು.ಬಹಳಷ್ಟು ಕೃಷಿಕರಿಗೆ ಸಸ್ಯ, ಅದರ ಬೆಳವಣಿಗೆ, ಅದರ ಬೇಕು ಬೇಡಗಳು, ಇತ್ಯಾದಿಗಳ ಬಗ್ಗೆ ತಿಳುವಳಿಕೆ ಕಡಿಮೆ.ಇದನ್ನು ತಿಳಿಸಿಕೊಡುವ ಪ್ರಯತ್ನವೂ ಸಮರ್ಪಕವಾಗಿ ಆಗಿಲ್ಲ. ಕೃಷಿ ಇಲಾಖೆಗಳು, ತೋಟಗಾರಿಕಾ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಬೇರೆ ಬೇರೆ ಹೊಸ ತಂತ್ರಜ್ಞಾನವನ್ನು ಹೇಳಿಕೊಡುತ್ತವೆ. ಆದರೆ ಮೂಲಭೂತ ವಿಚಾರಗಳನ್ನೇ ಅರ್ಥೈಸಿಕೊಳ್ಳದ ಕೃಷಿಕರಿಗೆ ಇದು ಜಗಿಯಲಾಗದ ಕಡಲೆಯಂತೆ ಆಗುತ್ತಿದೆ.
- ನಮ್ಮ ದೇಶದ ಕೃಷಿಕರು ತಾವು ಬೆಳೆಸುವ ಬೆಳೆ ಹಾಗೆಯೇ ಸಾಮಾನ್ಯವಾಗಿ ಎಲ್ಲರೂ ಬೆಳೆಸುವ ಬೆಳೆಗಳ ಬಗ್ಗೆ ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳಲೇ ಬೇಕಾಗುತ್ತದೆ.
- ಬೆಳೆ ಎಂದರೆ ಬೀಜ ಬಿತ್ತಿ ಸಸ್ಯಗಳನ್ನು ಬೆಳೆಸಿ ಅದರಲ್ಲಿ ಬರುವ ಫಲವನ್ನು ಪಡೆಯುವುದು.
- ಯಾವುದೇ ಸಸ್ಯವಾದರೂ ಮಣ್ಣಿನಲ್ಲಿ ಬೆಳೆದಾಗ ಅದರ ನಿರ್ದಿಷ್ಟ ವಯಸ್ಸಿಗೆ ಅನುಗುಣವಾಗಿ ಹೆಚ್ಚೋ ಕಡಿಮೆಯೋ ಫಲ ಬಿಟ್ಟೇ ಬಿಡುತ್ತದೆ.
- ಹೆಚ್ಚು ಫಲ ಬಿಡಬೇಕಿದ್ದರೆ ಅದಕ್ಕೆ ಬೆಳೆ ಪೊಷಕಗಳಾದ ನೀರು, ಗೊಬ್ಬರ ಕೊಡಬೇಕಾಗುತ್ತದೆ.
- ಪೋಷಕಗಳಲ್ಲಿ ಸತ್ವಾಂಶಗಳಾದ NPK ಯಾವುದಾದರೂ ಇದ್ದೇ ಇರುತ್ತದೆ.
- ಅದು ನಾವು ಉಣ್ಣುವ ಅನ್ನದಲ್ಲೂ ಅಲ್ಪ ಸ್ವಲ್ಪ ಇದ್ದೇ ಇರುತ್ತದೆ.
- ಹಾಗೆಂದು ನಾನು NPK ಇರುವುದನ್ನು ತಿನ್ನುವುದಿಲ್ಲ.
- ಅದು ರಾಸಾಯನಿಕ ಎನ್ನಲಾಗುತ್ತದೆಯೇ? ಇಲ್ಲ. ಸಾವಯವ ಗೊಬ್ಬರಗಳಲ್ಲೂ NPK ಸತ್ವಾಂಶಗಳು ಇರುತ್ತವೆ.
ವೃತ್ತಿ ಪ್ರೌಢತೆ ಎಂದರೇನು- ಹೇಗೆ ಬರಬೇಕು?
- ವಿಷಯ ವಸ್ತುವನ್ನು ಕೂಲಂಕುಶವಾಗಿ ಅರಿಯುವುದೇ ವೃತ್ತಿ ಪ್ರೌಢತೆ.
- ಒಬ್ಬ ಮೆಕ್ಯಾನಿಕ್ ಸಹ ಅವನ ವೃತ್ತಿ ರಂಗದಲ್ಲಿ ತಲ್ಲೀನತೆ ಇಲ್ಲದಿದ್ದರೆ ಅವನೂ ಅದರಲ್ಲಿ ವಿಫಲನೇ ಆಗುತ್ತಾನೆ.
- ಪ್ರೌಢತೆ ಬರಬೇಕಾದರೆ ಶಿಕ್ಷಣವೇ ಬೇಕೆಂದೇನೂ ಇಲ್ಲ.
- ಇಲ್ಲಿ ಒಂದು ಉದಾಹರಣೆ ಕೊಡಬಯಸುತ್ತೇನೆ. ಶಿರಸಿಯ ಬನವಾಸಿಯಲ್ಲಿ ದಿ. ರೌಪ್ ಸಾಹೇಬರು ಇದ್ದರು.
- ಅಂತಹ ವ್ಯಾಸಂಗ ಮಾಡಿದವರಲ್ಲ. ಆದರೆ ಅವರಲ್ಲಿ ವೃತ್ತಿ ಪ್ರೌಢತೆ ಇತ್ತು.
- ಕಾರಣ ಅವರು ವೃತ್ತಿ ಕ್ಷೇತ್ರದಲ್ಲಿ ತಲ್ಲೀನರಾಗಿದ್ದರು.
- ಒಬ್ಬರು ಹೇಳುವುದನ್ನು ಕೇಳಿ , ಅದನ್ನು ಅರ್ಥಮಾಡಿಕೊಳ್ಳುತ್ತಾ ಬಂದರೆ ತಜ್ಞತೆ ಬರುತ್ತದೆ.
- ನಮ್ಮ ಕೃಷಿಕರಲ್ಲಿ ಈ ಮನೋಭಾವನೆ ಇನ್ನೂ ಬೆಳೆದಿಲ್ಲ.
- ತಜ್ಞರನ್ನು ಸಂಪರ್ಕಿಸುವ ಅವರ ಸಲಹೆ ಕೇಳುವ ಮನೋಸ್ಥಿತಿ ಬಹುತೇಕ ರೈತರಿಗೆ ಇನ್ನೂ ಬಂದಿಲ್ಲ.
- ಯಾರಲ್ಲಿಯಾದರೂ ಸಲಹೆ ಕೇಳುವುದಿದ್ದರೆ ಅವರ ಮಾಡಿ ನೋಡಿದ ಅನುಭವ ಎಷ್ಟು ಎಂಬುದನ್ನು ಮೊದಲಾಗಿ ತಿಳಿದುಕೊಳ್ಳಬೇಕು.
- ಪುಸ್ತಕದ ಜ್ಞಾನಕ್ಕೂ ಹೊಲದ ಜ್ಞಾನಕ್ಕೂ ಸ್ವಲ್ಪ ವ್ಯತ್ಯಾಸ ಇರುತ್ತದೆ.
ನಮ್ಮ ಅಸಹಾಯಕತೆ- ಬೇರೆಯವರಿಗೆ ಲಾಭ:
- ಕರ್ನಾಟಕದ ಕೆಲವು ಭಾಗಗಳಲ್ಲಿ ಕ್ಯಾಬೇಜ್, ಹೂಕೋಸು ಬೆಳೆಯುತ್ತಾರೆ.
- ಕ್ಯಾಬೇಜ್, ಹೂಕೋಸು ಬೆಳೆಗೆ ಬರುವಷ್ಟು ಹುಳಗಳು ಬಹುಷಃ ಬೇರೆ ಯಾವ ಬೆಳೆಗೂ ಬರುವುದಿಲ್ಲವೇನೋ.
- ಬೆಳೆದ ರೈತನಿಗೆ ಅದನ್ನು ಮಾರಿ ಅದರ ಖರ್ಚು ಸಾಧ್ಯವಾದರೆ ಲಾಭವನ್ನು ಗಳಿಸುವಾಸೆ.
- ಬೆಳೆ ಉಳಿಸಿಕೊಳ್ಳಲು ಅವನು ದಿನಾಲೂ ಬೇಕಾದರೂ ಕೀಟನಾಶಕ ರೋಗನಾಶಕ ಸಿಂಪಡಿಸಲು ಸಿದ್ದನಿರುತ್ತಾನೆ.
- ನೇರವಾಗಿ ಹೋಗುವುದು ಕೀಟನಾಶಕ ಮಾರಾಟಗಾರರಲ್ಲಿಗೆ.
- ಅವರು ಈಗೀಗ ಮೂರು ನಾಲ್ಕು ಬಗೆಯ ಔಷಧಿಗಳನ್ನು ಕೊಟ್ಟು ಎಲ್ಲವನ್ನೂ ಮಿಶ್ರಣ ಮಾಡಿ ಹೊಡೆಯಿರಿ ಎನ್ನುತ್ತಾರೆ.
- ಅಲ್ಲಿ ಯಾವುದು ಬೇಕು, ಬೇಡ ಎಂಬುದು ರೈತನಿಗೆ ಗೊತ್ತಿಲ್ಲ.
- ಕೊಡುವವನಿಗೆ ಮಾರಾಟವೇ ಅವನ ಉದ್ದೇಶ. ಇಲ್ಲಿ ಇದನ್ನು ಉಲ್ಲೇಖಿಸುವುದು ಸಮಂಜಸವಲ್ಲದಿದ್ದರೂ ಹೇಳಲೇಬೇಕಾಗಿದೆ,
- ಇಂದು ಹಳ್ಳಿ ಹಳ್ಳಿಯಲ್ಲೂ ಹತ್ತಾರು ಕೀಟನಾಶಕ, ಗೊಬ್ಬರ ಮಾರಾಟದ ಅಂಗಡಿಗಳು ತೆರೆಯಲ್ಪಡಲು ಇದೂ ಒಂದು ಕಾರಣ.
- ಕೀಟನಾಶಕ – ರಸಗೊಬ್ಬರ ಅಂಗಡಿಯವರು ದಿನದ 24 ಗಂಟೆ ಬಾಗಿಲು ತೆರೆದು ವ್ಯವಹಾರ ಮಾಡುವುದಿದ್ದರೂ ಗ್ರಾಹಕರು ಬರುವ ಸ್ಥಿತಿ ಇದೆ.
ವ್ಯವಸ್ಥೆಯ ವೈಫಲ್ಯ:
- ಹಸಿರು ಕ್ರಾಂತಿಯ ಮೂಲಕ ಕೃಷಿಕರನ್ನು ಉತ್ಪಾದನೆ ಹೆಚ್ಚಿಸಲು ಹೇಗೆ ತಯಾರು ಮಾಡಬೇಕು ಎಂಬುದನ್ನು ಸ್ವಲ್ಪ ಮಟ್ಟಿಗೆ ಸಾಧಿಸಲಾಯಿತು.
- ಆದರೆ ಅವರನ್ನು ಸ್ವಂತ ಜ್ಞಾನದಲ್ಲಿ ಕೃಷಿ ಮಾಡುವಷ್ಟು ಬೆಳೆಸಲು ಇನ್ನೂ ಸಾಧ್ಯವಾಗಲಿಲ್ಲ.
- ಇದಕ್ಕೆ ಸ್ವಲ್ಪ ಮಟ್ಟಿಗೆ ಕಾರಣ ನಮ್ಮ ಅಭಿವೃದ್ದಿ ಇಲಾಖೆಗಳು.
- ರೈತ ಅದೆಷ್ಟೋ ಸಂದೇಹಗಳನ್ನು ಹೊಂದಿದ್ದಾನೆ.
- ನಮ್ಮಂತಹ ಮಾಧ್ಯಮಗಳು ತಜ್ಞರಿಂದ ಕೇಳಿ ಸಲಹೆ ಕೊಡುವವರಾದರೂ ನಮ್ಮಲ್ಲಿ ಮುಕ್ತವಾಗಿ ಚರ್ಚಿಸಲು ದಿನಕ್ಕೆ ಹತ್ತಾರು ಜನರಾದರೂ ಸಂಪರ್ಕಿಸುತ್ತಾರೆ.
- ಒಂದು ವೇಳೆ ಕೃಷಿ ಶಿಕ್ಷಣ ಪಡೆದ ಅನುಭವಿ ರೈತನ ಸೇವೆಗೆಂದು ತನ್ನ ದೂರವಾಣಿಯನ್ನು ಮುಕ್ತವಾಗಿಟ್ಟರೆ ಬಿಡುವಿಲ್ಲದಷ್ಟು ಕರೆಯನ್ನು ಸೀಕರಿಸಬೇಕಾಗಬಹುದು.
- ರೈತರು ಹೆಚ್ಚಾಗಿ ಸಲಹೆ ಕೊಡುವುದಕ್ಕಾಗಿಯೇ ಇರುವ ಜನರನ್ನು ಸಂಪರ್ಕಿಸಲು ಮುಂದೆ ಹೋಗುವುದಿಲ್ಲ.
- ಹೋದರೂ ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ.
- ನಮ್ಮ ಅಭಿವೃದ್ದಿ ಇಲಾಖೆಯ ತಜ್ಞರು ಕಚೇರಿ ಸಮಯವಲ್ಲದೆ ಬೇರೆ ಸಮಯದಲ್ಲಿ ರೈತರ ಕರೆ ಸ್ವೀಕರಿಸುವ ಮಟ್ಟಕ್ಕೆ ಬೆಳೆದಿಲ್ಲ.
ಅಸಂಬದ್ಧ ಕ್ರಮಗಳು- ದಾರಿತಪ್ಪಿಸುವ ಹೇಳಿಕೆಗಳು:
- ಇತ್ತೀಚೆಗೆ ಒಂದು ಸುದ್ದಿ ಬಂದಿತ್ತು. ಯಾರೋ ಒಬ್ಬರು ಫಾರೆಸ್ಟ್ ಆಫೀಸರ್ ಕಳೆ ನಾಶಕ ಸಿಂಪಡಿಸಿ ಸತ್ತೇ ಹೋದರಂತೆ.
- ಒಬ್ಬ ಅವಿಧ್ಯಾವಂತ ಕೃಷಿಕ ಆದರೆ ಅಚಾತುರ್ಯದಿಂದ ಹೀಗಾಗಲು ಸಾಧ್ಯವಿದೆ.
- ಫಾರೆಸ್ಟ್ ಆಫೀಸರ್ ಕನಿಶ್ಟ ಪದವಿ ಪರೀಕ್ಷೆ ಯನ್ನಾದರೂ ಪಾಸಾಗಿರಬೇಕು.
- ಅದೂ ಅರಣ್ಯ ಅಧಿಕಾರಿ ಆದ ಕಾರಣ ಸಸ್ಯ ಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರವನ್ನು ಸ್ವಲ್ಪವಾದರೂ ಓದಿರಬೇಕೂ ತಾನೇ?
- ಹೀಗಿದ್ದೂ ಬಳಕೆ ಕ್ರಮವನ್ನು ಪಾಲಿಸದೆ ಬಳಸಿ ಹೀಗಾಗಿದೆ ಎಂದರೆ ಇದರ ಸಂದೇಶ ಏನು?
- ನಮ್ಮ ದೇಶದಲ್ಲಿ ಇಂತಹ ಕಳೆ ನಾಶಕವನ್ನು ಇನ್ನೂ ಲಕ್ಷಾಂತರ ಕೃಷಿಕರು ಬಳಸುತ್ತಿದ್ದು, ಇಂತಹ ಸಾವಿನ ವರದಿಗಳಿದ್ದರೆ ಅದು ಬರೇ ಬೆರಳೆಣಿಕೆಯಷ್ಟು ಮಾತ್ರ.
- ಸತ್ತವರ ಬಗ್ಗೆ ಅನುಕಂಪ ಇದೆ. ಆದರೆ ಇಂತಹ ಹಲವಾರು ಅಸಂಬದ್ಧ ಹೇಳಿಕೆಗಳಿಂದ ರೈತ ದಾರಿ ತಪ್ಪುತ್ತಾನೆ.
- ಕೆಟ್ಟದ್ದು ಎಲ್ಲರಿಗೂ ಬೇಗ ಕೇಳಿಸುತ್ತದೆ.
- ನಮ್ಮ ದೇಶದಲ್ಲಿ ಕೀಟನಾಶಕವೊಂದರ ಬಗ್ಗೆಯೂ ಇಂತಹ ರದ್ದಾಂತ ನಡೆದಿದೆ.
- ಒಳ್ಳೆಯದು ಬಹಳ ನಿಧಾನ.
- ಧರ್ಮಸ್ಥಳದ ಧರ್ಮಾಧಿಕಾರಿಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕೆಲವು ಕಡೆ ತಮ್ಮ ಭಾಷಣಗಳಲ್ಲಿ ಹೇಳುವುದನ್ನು ಕೇಳಿದ್ದೇನೆ,
- ಯಾವಾಗಲೂ ಬಳಕೆ ಮಾಡುವ ಮುಂಚೆ ಅದರ ಬಳಕೆ ಕ್ರಮ ಎಂಬ ಮಾಹಿತಿ ಪತ್ರ ಓದುವುದು ನಾವು ಮಾಡಬೇಕಾದ ಪ್ರಾಮುಖ್ಯ ಕೆಲಸ ಎಂದು.
- ಇದನ್ನು ಪಾಲಿಸುವವರು ಬಹಳ ಕಡಿಮೆ.
- ಅದಕ್ಕೆ ತಕ್ಕಂತೆ ಒಂದು ಕಳೆ ನಾಶಕ, ಕೀಟನಾಶಕ, ರೋಗ ನಾಶಕ ಇವುಗಳಲ್ಲಿ ಎಷ್ಟು ಎಷ್ಟು ನೀರಿಗೆ ಎಷ್ಟು ಪ್ರಮಾಣ ಮಿಶ್ರಣ ಮಾಡಬೇಕು ಎಂದು ಮುದ್ರಿಸಿರುವುದಿಲ್ಲ.
- ಎಕ್ರೆಗೆ ಅಥವಾ ಹೆಕ್ಟೇರಿಗೆ ಇಷ್ಟು ಎನ್ನುತ್ತಾರೆ.
- ಇದರ ಬದಲಿಗೆ ನಮ್ಮ ದೇಶದಂತ ಕೃಷಿ ವ್ಯವಸ್ಥೆಗೆ (ಸಣ್ಣ ಅತೀ ಸಣ್ಣ ಹಿಡುವಳಿದಾರರು) ಇದನ್ನು ಸರಿಯಾಗಿ ಅರ್ಥವಾಗುವಂತೆ ಮುದ್ರಿಸಿರಬೇಕು.
- ಕೊಡುವವರಿಗೂ ಗೊತ್ತಿರಬೇಕು. ಇದರಿಂದ ಅನುಕೂಲ ತುಂಬಾ ಇದೆ.
ಕೃಷಿಕರನ್ನು ಎಲ್ಲರೂ ಯಾಮಾರಿಸುತ್ತಾರೆ ಯಾಕೆ?
- ಒಂದು ಗಾದೆ ಮಾತು ಇದೆ. “ಮಂಗ ಆಗುವವರು ಇರುವಷ್ಟು ಸಮಯ ಮಂಗ ಮಾಡುವವರೂ ಇರುತ್ತಾರೆ” ಎಂದು.
- ಇದು ಕೆಲವು ಕೃಷಿಕರಿಗೆ ಹೇಳಿ ಮಾಡಿಸಿದಂತಿದೆ.
- ಕೃಷಿಕನ ಮನೆ ಬಾಗಿಲಿಗೆ ಮರಸುಟ್ಟ ಬೂದಿಯನ್ನು ಆಕರ್ಷಕವಾಗಿ ಪ್ಯಾಕ್ ಮಾಡಿ, ಇಗು ಸ್ವರ್ಣ ಭಸ್ಮ.
- ಇದನ್ನು ಹಾಕಿದರೆ ಭಾರೀ ಇಳುವರಿ ಬರುತ್ತದೆ ಎಂದು ಚೆನ್ನಾಗಿ ಮಾತಾಡಿದರೆ ಕೃಷಿಕರಲ್ಲಿ ಹೆಚ್ಚಿನವರು ಎಷ್ಟೇ ದುಬಾರಿ ಬೆಲೆಯಾದರೂ ಕೊಟ್ಟು ಖರೀದಿಸುತ್ತಾರೆ.
- ಇಂತದ್ದು ಒಂದಲ್ಲ ಎರಡಲ್ಲ ನೂರಾರು ಉದಾಹರಣೆಗಳಿವೆ.
- ಇದೆಲ್ಲಾ ಆಗುವುದು ನಮ್ಮ ವೃತ್ತಿಯ ಕುರಿತಾದ ಜ್ಞಾನದ ಕೊರೆತೆಯಿಂದ.
- ಪ್ರಶ್ಣೆಗೆ ಮರುಪ್ರಶ್ಣೆ ಮಾಡುವಷ್ಟು ನಾವು ಪ್ರೌಢರಾದರೆ ನಮ್ಮನ್ನು ಮೀರಿಸುವವರು ಯಾರೂ ಇಲ್ಲ.
ಕೃಷಿ ವೃತ್ತಿ ಮಾಡುವವರು ಒಂದು ವಿಷಯ ತಿಳಿದಿರಿ. ಕೃಷಿಗಿಂತ ಕೃಷಿ ಒಳಸುರಿ ಕ್ಷೇತ್ರ ಭಾರೀ ಆದಾಯದ ಘ್ಹನಿ. ಇದನ್ನು ಆಯ್ಕೆ ಮಾಡಿಕೊಂಡವರು ಬೇಗ ಧನಿಕರಾಗುತ್ತಾರೆ. ಬರೇ ಕೃಷಿ ಮಾಡುವವರು ಅವರನ್ನು ಸಾಕುತ್ತಾರೆ. ಕೃಷಿಕ ಅದೆಷ್ಟೋ ಕಂಪೆನಿಗಳ ಉತ್ಪನ್ನವನ್ನು ಬಳಸಿ ಅವರಿಗೆ ಆದಾಯ ಕೊಡುತ್ತಾನೆ.ಆದರೆ ಯಾವುದೇ ಕೃಷಿಕನನ್ನು ವಿದೇಶ ಪ್ರವಾಸಕ್ಕೆ ಯಾವ ಕಂಪೆನಿಯೂ ಕಳುಹಿಸುವುದಿಲ್ಲ. ಬದಲಿಗೆ ಮಾರಾಟಗಾರರನ್ನು ಕಳುಹಿಸುತ್ತದೆ.