ಮಾವಿನ ಮರ- ಸಸಿ ಬಹುತೇಕ ಎಲ್ಲಾ ಕೃಷಿಕರಲ್ಲೂ ಇರುತ್ತದೆ.ಹಣ್ಣು ತಿನ್ನುವ ಆಸೆಗಾಗಿ ಬೆಳೆಸಿದ ಈ ಮರಗಳಿಂದ ಉತ್ತಮ ಫಲ ಪಡೆಯಲು ಈ ಕೆಲಸವನ್ನು ಈಗ ಮಾಡಲೇಬೇಕು. ಮಳೆಗಾಲದ ಸಮಯದಲ್ಲಿ ಮಾವಿನ ಮರಗಳಿಗೆ ಬರುವ ಒಂದು ಶಿಲೀಂದ್ರ ರೋಗದ ಸೋಂಕು ಆ ಮರದ ಫಸಲಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ.ಬಹಳಷ್ಟು ಜನ ಮಾವಿನ ಸಸಿ ಬೆಳೆದವರು ಅದರಲ್ಲಿ ಫಲ ಬಂದರೂ ಉಪಯೋಗಕ್ಕಿಲ್ಲ ಎನ್ನುತ್ತಾರೆ. ಇದಕ್ಕೆ ಕಾರಣ ಮಳೆಗಾಲದಲ್ಲಿ ಬರುವ ಶಿಲೀಂದ್ರ ರೋಗದ ರೋಗಾಣು ಮರದಲ್ಲಿ ಜೀವಂತವಾಗಿ ಉಳಿಯುವುದು. ಈಗ ಶಿಲೀಂದ್ರವನ್ನು ದೂರ ಮಾಡಿದರೆ ಮುಂದೆ ಉತ್ತಮ ಹೊಸ ಚಿಗುರು ಬರುತ್ತದೆ. ಹೂ ಮೊಗ್ಗು ಬರುತ್ತದೆ.
ಮಾವಿನ ಮರಕ್ಕೆ ಬರುವ ರೋಗಗಳಲ್ಲಿ ಅತ್ಯಂತ ನಷ್ಟದಾಯಕ ರೋಗ ಎಂದರೆ ಈ ಶಿಲೀಂದ್ರ ರೋಗ. ಇದನ್ನು Mango Anthracnose disease MAD ಎಂಬುದಾಗಿ ಕರೆಯುತ್ತಾರೆ. ಇದರಿಂದಾಗಿ ಮಾವಿನಲ್ಲಿ ಶೇ.100% ತನಕವೂ ಬೆಳೆ ನಷ್ಟ ಉಂಟಾಗುತ್ತದೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಎಲ್ಲಾ ಕಡೆಯಲ್ಲೂ ಮಾವಿನ ಬೆಳೆಗೆ ಭಾರೀ ಪ್ರಮಾಣದಲ್ಲಿ ತೊಂದರೆ ಮಾಡುವ ಶಿಲೀಂದ್ರ. ಎಲ್ಲಾ ವಾಣಿಜ್ಯ ಉದ್ಡೆಶದ ಮಾವಿನ ತಳಿಗಳೂ ಸಹ ಈ ಶಿಲೀಂದ್ರ ಬಾಧೆಗೆ ಒಳಗಾಗುತ್ತವೆ. ಈ ತನಕ ಇದಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳನ್ನು ಹುಡುಕಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಈ ರೋಗದ ಬಾಧೆ ವಿಪರೀತವಾಗಿ ಹೆಚ್ಚುತ್ತಿದ್ದು ವಾಣಿಜ್ಯ ಉದ್ದೇಶದ ಮಾವು ಬೆಳೆಗಾರರು ಮಳೆಗಾಲ ಪ್ರಾರಂಭವಾಗುವಾಗಿನಿಂದ ಮಾವು ಫಸಲಿಗೆ ಬರುವ ತನಕ ಹಲವಾರು ಬಾರಿ ಬೇರೆ ಬೇರೆ ಶಿಲಿಂದ್ರ ನಾಶಕಗಳನ್ನು ಸಿಂಪಡಿಸಿ ತಕ್ಕಮಟ್ಟಿಗೆ ಹತೋಟಿ ಮಾಡುತ್ತಾರೆ. ಮನೆ ಬಳಕೆಯ ಉದ್ದೇಶಕ್ಕೆ ಬೆಳೆಯುವ ಬೆಳೆಗಾರರು ಈಗ ಮರ ನೋಡಿಯೇ ತೃಪ್ತಿ ಪಡುವಂತಾಗಿದೆ. ಮಳೆಗಾಲದಲ್ಲಿ ಮರದ ಎಲೆ ಉದುರುತ್ತದೆ. ಹೂವು ಆದಾಗ ಗರಿಷ್ಟ ಪ್ರಮಾಣದಲ್ಲಿ ಹೂವು ಕರಟಿ(ಒಣಗಿ) ಉದುರುತ್ತದೆ. ಕಾಯಿಯಾದಾಗಲೂ ಉದುರುತ್ತದೆ. ಬೆಳೆಯುವಾಗ ಮಾವಿನ ಕಾಯಿಯ ಮೇಲ್ಮೈಯಲ್ಲಿ ಸಿಡುಬು ರೋಗದ ತರಹ ಕಪ್ಪು ಕಲೆಗಳಾಗಿ ಬಿಸಾಡುವುದೇ ಆಗುತ್ತದೆ. ಈ ಶಿಲೀಂದ್ರವು ದೀರ್ಘ ಕಾಲದ ತನಕ ಸುಪ್ತಾವಸ್ಥೆಯಾಲ್ಲಿದ್ದು ಅನುಕೂಲ ವಾತಾವರಣ ಸಿಕ್ಕಿದಾಗ ಉಲ್ಬಣವಾಗುತ್ತದೆ.
ಯಾವ ಶಿಲೀಂದ್ರ:
- Colletotrichum ತಳಿಯ ಕೆಲವು ಶಿಲೀಂದ್ರಗಳಿ ಮಾವಿನ ಎಲೆ, ಚಿಗುರು, ಹೂವು ಮತ್ತು ಕಾಯಿಗೆ ಹಾನಿ ಮಾಡುತ್ತವೆ.
- Colletotrichum gloeosporioides , C. asianum , C. kahawae subsp. ciggaro C. karstii , C. fructicola, and C. siamense, C. musae,
- ಇವೆಲ್ಲಾ ಸೇರಿಕೊಂಡು ಎಲೆ, ಮೊಗ್ಗು, ಚಿಗುರು, ಹೂವು ಮಿಡಿ ಮತ್ತು ಹಣ್ಣನ್ನು ಹಾಳುಗೆಡವುತ್ತವೆ.
- ಇದು ಅತ್ಯಂತ ಕ್ಲಿಷ್ಟಕರವಾದ ಶಿಲೀಂದ್ರವಾಗಿದ್ದು, ಹಂತ ಹಂತಗಳಲ್ಲಿ ಇದನ್ನು ನಿಯಂತ್ರಣ ಮಾಡಬೇಕಾಗುತ್ತದೆ.
- ಆರ್ಧ್ರ ವಾತಾವರಣ ಅಂತ್ರೊಕ್ನೋಸ್ ಶಿಲೀಂದ್ರ ಕ್ರಿಯಾತ್ಮವಾಗಿರಲು ಸಹಕಾರಿ.
- ಹಾಗಾಗಿ ಮಳೆ ಬೀಳುವ ಸಮಯದಲ್ಲಿ ಮಾವಿನ ಮರದ ಎಲೆಗಳ ಮೂಲಕ ಶಿಲೀಂದ್ರ ಪ್ರವೇಶವಾಗುತ್ತದೆ.
- ಎಲೆಯಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ಅದು ಬೆಳೆಯುತ್ತಾ ಎಲೆ ಉದುರುವ ತನಕ ಮುಂದುವರಿಯುತ್ತದೆ.
- ಹಾಗೆಯೇ ಚಿಗುರು ಮೊಗ್ಗು (bud) ಗೂ ಸಹ ಸೋಂಕು ತಗಲಿ ಹಾಳಾಗುತ್ತದೆ.
- ಎಲೆ ಗಣನೀಯ ಪ್ರಮಾಣದಲ್ಲಿ ಉದುರಿ ಅದರ ಜೊತೆಗೆ ಶಿಲೀಂದ್ರಗಳು ಮಣ್ಣಿನಲ್ಲಿ ಸೇರಿಕೊಂಡು ಮತ್ತೆ ಹೂವಾಗುವ ಸಮಯದಲ್ಲಿ ಕಾಯಿಯಾಗುವ ಸಮಯದಲ್ಲಿ ತೊಂದರೆ ಉಂಟು ಮಾಡುತ್ತದೆ.
- ಮಾವಿನ ಬೆಳೆಯ ಬಹುತೇಕ ಹಂತಗಳಲ್ಲಿ ಇದು ತೊಂದರೆ ಮಾಡುತ್ತದೆ.
- ಯಾವಾಗಲೂ ಅದು ಮಾವಿನ ಮರದ ಬುಡದಲ್ಲಿ ಇದ್ದೇ ಇರುತ್ತದೆ.
ರೋಗ ಚಿನ್ಹೆ:
- ಪ್ರಾರಂಭದಲ್ಲಿ ಇದು ಮರದ ಎಲೆಗಳಿಗೆ ಬಾಧಿಸುತ್ತದೆ. ಹಿಂದೆ ಹೇಳಿದಂತೆ (ಚಿತ್ರದಲ್ಲಿ ತೋರಿಸಿರುವಂತೆ) ಎಲೆಗಳಲ್ಲಿ ಕಪ್ಪು ಚುಕ್ಕೆಗಳು ಉಂಟಾಗಿ, ಪ್ರಾರಂಭವಾಗುವುದು.
- ನಂತರ ಗೆಲ್ಲಿನ ಹೆಚ್ಚಿನ ಎಲೆಗಳು ಉದುರುವ ಸಾಧ್ಯತೆಯೂ ಇದೆ.
- ತುಂಬಾ ಆರ್ಧ್ರ ವಾತಾವರಣ ಮುಂದುವರಿದರೆ ಎಲೆ ಉದುರುವಿಕೆ ಹೆಚ್ಚಾಗುತ್ತದೆ.
- ನಂತರ ಹೂ ಬಿಡುವಾಗ ಅದರ ಪರಿಣಾಮ powdery mildew ( ಹೂ ಗೊಂಚಲಿನಲ್ಲಿ ಬಿಳಿಯಾದ ಹುಡಿ ರೂಪದ ಶಿಲೀಂದ್ರಗಳು ಬೆಳೆಯುವುದು) ನಲ್ಲಿ ಗೋಚರವಾಗುತ್ತದೆ.
- ಇದರಿಂದಾಗಿ ಸಣ್ಣ ಸಣ್ಣ ಗಾತ್ರದ ಮಿಡಿಗಳು ಉದುರುತ್ತವೆ.
- ಮಾವಿನ ಮರ ಹೂ ಆದಾಗ ಅದರ ಬುಡದಲ್ಲಿ ಕಪ್ಪು ಕಪ್ಪಾಗಿ ಕಾಣುವುದು ಈ ಶಿಲೀಂದ್ರದ ಕಾರಣದಿಂದ. (Flowers effected by anthracnose are dry and dark brown to black)
- ಈ ಸಮಯದಲ್ಲಿ ಸುಮಾರು 30-60% ಫಸಲು ನಷ್ಟವಾಗುತ್ತದೆ.
- ಒಂದು ವೇಳೆ ಹೂ ಬಿಡುವ ಸಮಯದಲ್ಲಿ ಆದ್ರ ವಾತಾವರಣ ಇದ್ದರೆ 100% ಫಸಲು ನಷ್ಟವಾಗಲೂ ಬಹುದು.
- ಅಲ್ಲಿ ಅಳಿದುಳಿದ ಮಿಡಿಗಳು ಬೆಳೆದ ತರುವಾಯ ಬೆಳವಣಿಗೆಯ ಹಂತದಲ್ಲಿ ಕೊಳೆತು ಬೀಳುವುದೂ ಇರುತ್ತದೆ.
- ಮಾವಿನ ಅತೀ ದೊಡ್ಡ ಸಮಸ್ಯೆಯಾದ ತೊಟ್ಟು ಕೊಳೆಯುವಿಕೆ, ಹಾಗೆಯೇ ಹಣ್ಣಿಗೆ ಇಟ್ಟಲ್ಲಿ ಸಿಪ್ಪೆ ಕಪ್ಪಾಗುವಿಕೆಗೂ ಇದೇ ಕಾರಣ.
- ತೀವ್ರ ತರದ ಸೋಂಕು ಉಂಟಾದಾಗ ಗೆಲ್ಲುಗಳು ಸಾಯುವುದೂ ಇದೆ.
- ನೆಲಕ್ಕೆ ಬಿದ್ದ ಎಲೆಗಳ ಮೂಲಕ ರೋಗಗ ಬೀಜಾಣು ಅಭಿವೃದ್ದಿಯಾಗಿ ಮರದ ಗೆಲ್ಲು, ಸೆರೆಗಳಲ್ಲಿ ಅವಿತುಕೊಂಡು ಒಂದು ಸೀನನ್ ನಿಂದ ಮತ್ತೊಂದು ಸೀಸನ್ ವರೆಗೂ ಜೀವಂತವಾಗಿರುತ್ತದೆ.
ಯಾಕೆ ಹೆಚ್ಚಾಗುತ್ತದೆ:
- ಈ ರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನಮ್ಮಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಇದೇ ಸಮಸ್ಯೆ.
- ಇದರಿಂದಾಗಿ ಮಾವಿನ ಬೆಳೆಯೂ ಕಡಿಮೆಯಾಗಲಾರಂಭಿಸಿದೆ.
- ಮಾವಿನ ಈ ರೋಗವನ್ನು ನಿಯಂತ್ರಿಸಲು ಬೇರೆ ಬೇರೆ ಶಿಲೀಂದ್ರ ನಾಶಕಗಳು ಇವೆ.
- ಆದರೆ ನಿರಂತರ ಶಿಲೀಂದ್ರ ನಾಶಕ ಸಿಂಪರಣೆ ಮಾಡುತ್ತಿದ್ದರೆ ಅದರ ಖರ್ಚು ವಿಪರೀತವಾಗಿ ಮಾವಿನ ಬೆಳೆ ಲಾಭದಾಯಕವಾಗುವುದಿಲ್ಲ.
- ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಆದ ವ್ಯತ್ಯಾಸ ಈ ಆಂತ್ರೊಕ್ನೋಸ್ ಕಾಯಿಲೆ ಹೆಚ್ಚಳಕ್ಕೆ ಪ್ರಮುಖ ಕಾರಣ.
- ಅಕಾಲದಲ್ಲಿ ಮಳೆಯಾಗುವುದು. ನಿರಂತರ ಮಳೆಯಾಗುದದಿಂದ ಶಿಲೀಂದ್ರದ ಬೀಜಾಣು ಮಣ್ಣಿನಲ್ಲಿ ಜೀವಂತವಾಗಿರುತ್ತದೆ.
- ಹೆಚ್ಚಾಗಿ ಈ ಶಿಲೀಂದ್ರ ಅನುಕೂಲ ಪರಿಸ್ಥಿತಿ ಸಿಗುವ ವರೆಗೂ ಸುಪ್ತಾವಸ್ಥೆಯಲ್ಲಿ ಮಣ್ಣಿನಲ್ಲಿ ಇರುತ್ತದೆ.
- ಹಿಂದಿನಂತೆ ಈಗ ವಾತಾವರಣವೂ ಸರಿ ಇಲ್ಲ. ಜೊತೆಗೆ ರೈತರಿಗೆ ಸೂಕ್ತ ಬೇಸಾಯ ಕ್ರಮ ಕೈಗೊಳ್ಳಲೂ ಸಾಧ್ಯವಾಗುತ್ತಿಲ್ಲ.
- ಹಿಂದೆ ಮಾವಿನ ಮರದ ಬುಡದಲ್ಲಿ ಬಿದ್ದ ಎಲೆಗಳು, ಹಾಳಾದ ಕಾಯಿ ಹಣ್ಣುಗಳನ್ನು ಅಲ್ಲೇ ಉಳಿಸುತ್ತಿರಲಿಲ್ಲ.
- ಅದನ್ನು ಸೂಕ್ತ ವಿಲೇವಾರಿ ಮಾಡುತ್ತಿದ್ದರು. ತರಗೆಲೆಗಳನ್ನು ಬಿಸಿನೀರು ಕಾಯಿಸಲು ಉಪಯೋಗಿಸುತ್ತಿದ್ದರು.
- ಬುಡ ಭಾಗದಲ್ಲಿ ಸ್ವಚ್ಚತೆ ಇರುತ್ತಿತ್ತು. ವಾಣಿಜ್ಯ ಬೇಸಾಯ ಮಾಡುವವರು ನೆಲವನ್ನು ಉಳುಮೆ ಮಾಡಿ ಶಿಲೀಂದ್ರಗಳನ್ನು ನಾಶ ಮಾಡುತ್ತಿದ್ದರು.
- ಈಗ ಕೆಲಸದವರ ಸಮಸ್ಯೆಯಿಂದ ಇದನ್ನು ಯಾವುದೂ ಮಾಡದ ಕಾರಣ ರೋಗ ಪೀಡಿತ ಭಾಗಗಳು ಅಲ್ಲೇ ಉಳಿದು ಮತ್ತೆ ಮತ್ತೆ ರೋಗ ಹೆಚ್ಚಾಗುತ್ತದೆ.
ಏನು ಪರಿಹಾರ?
- ವಾಣಿಜ್ಯಿಕವಾಗಿ ಅಥವಾ ಮನೆ ಬಳಕೆ ಉದ್ದೇಶಕ್ಕೆ ಮಾವಿನ ಸಸಿ ನೆಡುವವರು ಯಾವಾಗಲೂ ಒಣ ಭೂಮಿಯಲ್ಲಿ ಮಾತ್ರ ನಾಟಿ ಮಾಡಬೇಕು.
- ತಗ್ಗಿನ ಜಾಗದಲ್ಲಿ ನಾಟಿ ಮಾಡಿದರೆ ಫಸಲೂ ಬರುವುದು ಕಡಿಮೆ.
- ರೋಗ ಸಾಧ್ಯತೆಯೂ ಹೆಚ್ಚು. ಥಂಡಿ ಇರುವಾಗ, ಅಧಿಕ ಆರ್ಧ್ರತೆ ಇರುವಾಗ ಮುನ್ನೆಚ್ಚರಿಕಾ ವಿಧಾನ ಅನುಸರಿಸಬೇಕು.
- ಕಾಪರ್ ಆಕ್ಸೀ ಕ್ಲೋರೈಡ್. (COC) ಅಥವಾ ಮ್ಯಾಂಕೋಜೆಬ್ ಅಥವಾ ಆಂತ್ರೋಕಾಲ್ (Propineb) ಸಿಂಪಡಿಸಬೇಕು.
- ಎಲೆಗಳಿಗೆ,ಕಾಂಡದ ಬಿರುಕುಗಳಿಗೆ ತಾಗುವಂತೆ ಸಿಂಪರಣೆ ಮಾಡಬೇಕು.
- ಮಾವು ಹೂ ಮೊಗ್ಗು ಬರುವ ಸಮಯದಲ್ಲೂ, ಹೂ ಅರಳುವ ಸಮಯದಲ್ಲೂ ಶಿಲೀಂದ್ರ ನಾಶಕ ಸಿಂಪರಣೆ ಮಾಡಬೇಕು.
- ತಾಮ್ರ ಆಧಾರಿತ ಶಿಲಿಂದ್ರ ನಾಶಕಗಳು ಇದರ ಹತೋಟಿಗೆ ಪರಿಣಾಮಕಾರಿ ( Copper based fungicide)
- ಕೇವಲ ಶಿಲೀಂದ್ರನಾಶಕ ಒಂದರಿಂದ ಇದನ್ನು ನಿಯಂತ್ರಣ ಮಾಡುವುದು ಕಷ್ಟ.
- ಮಳೆಗಾಲದ ಸಮಯದಲ್ಲಿ ನೆಲಕ್ಕೆ ಬಿದ್ದ ಎಲೆಗಳನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಚ ಮಾಡಬೇಕು.
- ಮರದ ಯಾವುದೇ ಸತ್ತ ಭಾಗಗಳಿದ್ದರೂ ಅದನ್ನು ನೆಲದಲ್ಲಿ ಉಳಿಸಬಾರದು ಇದು ಪ್ರಾಮುಖ್ಯ ಸಂಗತಿ.
- ಪದೇ ಪದೇ ಶಿಲೀಂದ್ರ ನಾಶಕ ಸಿಂಪಡಿಸುವುದರಿಂದ ರೋಗಾಣುಗಳಿಗೆ ನಿರೋಧಕ ಶಕ್ತಿ ಬರುತ್ತದೆ ಹಾಗಾಗಿ ಶಿಲೀಂದ್ರ ನಾಶಕದ ಸಿಂಪರಣೆಗೂ ಮುಂಚೆ ಸ್ವಚ್ಚತೆಗೆ ಆದ್ಯತೆ ಕೊಡಬೇಕು.
- ಒಣ ಭೂಮಿಯಲ್ಲಿ ನಾಟಿ ಮಾಡಿದ ಕಡೆ ವಾತಾವರಣ ಸಹಜವಾಗಿ (ನೆಲಕ್ಕೆ ಬಿಸಿಲು ಬಿದ್ದು) ರೋಗಾಣುಗಳು ಕಡಿಮೆಯಾಗುತ್ತದೆ.
ಮಾವಿನ ಬೆಳೆಗೆ ಕೀಟಗಳ ಹಾವಳಿಗಿಂತ ರೋಗದ ಹಾವಳಿಯೇ ಹೆಚ್ಚು. ರೋಗಕ್ಕೆ ಒಮ್ಮೆ ಅವಕಾಶ ಕೊಟ್ಟರೆ ಮತ್ತೆ ಮತ್ತೆ ಅದು ನಾನಿದ್ದೇನೆ ಎಂದು ಕಾಣಿಸಿಕೊಳ್ಳುತ್ತದೆ. ಮೊದಲ ವರ್ಷದ ಫಸಲಿಗೆ ರೋಗ ತುಂಬಾ ಕಡಿಮೆ ಇರುತ್ತದೆ. ನಂತರದ ವರ್ಷಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಇದಕ್ಕೆ ಕಾರಣ ರೋಗಕಾರಕ ಶಿಲೀಂದ್ರಗಳು ಮಣ್ಣಿನಲ್ಲಿ ಉಳಿಯುವುದು. ಇದನ್ನು ಉಳಿಯದಂತೆ ಮಾಡಿದರೆ ಮಾತ್ರ ಉತ್ತಮ ಫಸಲು ಪಡೆಯಬಹುದು.