ಮಣ್ಣು ತನ್ನ ಪಲವತ್ತತೆಯನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ. ಜನ ಸಾವಯವ ಗೊಬ್ಬರ ಕಡಿಮೆಯಾಗಿ ಹೀಗಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇದು ಸ್ವಲ್ಪ ಮಟ್ಟಿಗೆ ಸರಿಯಾದರೂ ಅದರ ಜೊತೆಗೆ ಇನ್ನೂ ಒಂದು ಕಾರಣ ಇದೆ. ಅದು ಕಳೆನಾಶಕಗಳ ಬಳಕೆ. ಕಳೆನಾಶಕಗಳನ್ನು ಬಳಸಿದಲ್ಲಿ ಮಣ್ಣಿನ ರಚನೆ ಹಾಳಾಗುತ್ತದೆ. ಅದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕಳೆನಾಶಕ ಇದು ತೋಟವನ್ನು ಚೊಕ್ಕವಾಗಿರಿಸುತ್ತದೆ. ಒಡಾಡುವುದಕ್ಕೆ, ಸುಲಭ ಎಂಬುದು ನಮ್ಮ ಅಭಿಪ್ರಾಯ. ಕಳೆಗಳು ಬೆಳೆಗೆ ಪೂರೈಸಿದ ಪೋಷಕಗಳನ್ನು ಬೇಗ ಕಬಳಿಸುತ್ತದೆ, ಇದರಿಂದಾಗಿ ಬೆಳೆ ಸೊರಗುತ್ತದೆ ಎಂಬುದು ವಿಜ್ಞಾನ ಹೇಳುವ ವಿಷಯ. ವಾಸ್ತವವಾಗಿ ಮಣ್ಣು, ಬೆಳೆ ಇವೆರಡಕ್ಕೂ ಅನ್ಯೋನ್ಯ ಸಂಬಂಧ ಇರುವ ಪ್ರಕೃತಿಯ ಸೃಷ್ಟಿ ಎಂದರೆ ನೆಲದ ಮೇಲೆ ಬೆಳೆಯುವ ಕಳೆಗಳು. ಕಳೆಗಳ ಸೃಷ್ಟಿ ಯಾಕೆ ಆಗಿದೆ ಎಂಬುದನ್ನು ತುಂಬಾ ಆಳಕ್ಕೆ ಹೋಗಿ ನೋಡಿದರೆ ಸೃಷ್ಟಿಯ ಬಹಳಷ್ಟು ಕುತೂಹಲಗಳು (miracles) ನಮ್ಮ ಅರಿವಿಗೆ ಬರುತ್ತವೆ. ಬಹುಷಃ ಮರಗಿಡಗಳ ಹುಟ್ಟಿಗೆ ಮುನ್ನವೇ ಕಳೆಗಳ ಹುಟ್ಟು ಆಗಿರಬೇಕು. ಮಣ್ಣಿನ ಸಂರಕ್ಷಣೆ ಯಲ್ಲಿ ಅದರಲ್ಲೂ ಮೇಲ್ಮಣ್ಣು ಸಂರಕ್ಷಣೆಯಲ್ಲಿ ಕಳೆಗಳ ಪಾತ್ರ ಅಪಾರ. ಮಳೆಗಾಲದಲ್ಲಿ ತಿಂಗಳು ಗಟ್ಟಲೆ ನೆಲಕ್ಕೆ ರಭಸದ ಮಳೆ ಹನಿಗಳು ಬೀಳುತ್ತದೆ. ಅದರ ಹೊಡೆತ ತಡೆದುಕೊಳ್ಳುವುದಕ್ಕಾಗಿ ಪ್ರಕೃತಿ ಏನು ಮಾಡುತ್ತದೆ ಎಂದರೆ ಮುಂಗಾರು ಪೂರ್ವದಲ್ಲಿ ಹಿತ ಮಿತವಾಗಿ ಮಳೆ ಸುರಿಸಿ, ನೆಲದಲ್ಲಿ ಇದ್ದ ಬೀಜಗಳು, ಬುಡ ಮಾತ್ರ ಜೀವಂತವಾಗಿರುವ ಹುಲ್ಲು ಸಸ್ಯಗಳನ್ನು ಚಿಗುರುವಂತೆ ಮಾಡುತ್ತದೆ. ಇದು ಚಿಗುರಿ ಇನ್ನೇನು ನೆಲಕ್ಕೆ ಹೊದಿಕೆ ಆಗಿದೆ ಎಂದು ಖಾತ್ರಿ ಆದ ಮೇಲೆ ರಭಸದ ಹನಿಗಳ ಮಳೆ ಬರಲು ಪ್ರಾರಂಭವಾಗುತ್ತದೆ. ಇದು ಪ್ರಕೃತಿಯ ಒಂದು ಸುವ್ಯವಸ್ಥೆ. ಇದಕ್ಕೆ ತಪ್ಪಿ ಎಲ್ಲಿಯೂ ಪ್ರಕೃತಿ ನಡೆದುಕೊಳ್ಳುವುದಿಲ್ಲ. ತನ್ನ ರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಅದು ಚಾಚೂ ತಪ್ಪದೆ ಪಾಲಿಸುತ್ತದೆ.
- ಮಾನವ ಕಳೆ ನಾಶಕ ಸಿಂಪಡಿಸಿ ತತ್ಕಾಲಕ್ಕೆ ಕಳೆಗಳನ್ನು ನಿರ್ಮೂಲನೆ ಮಾಡಬಹುದು.
- ಆದರೆ ಅಲ್ಲಿ ಮತ್ತೆ ಕೆಲವೇ ಸಮಯದಲ್ಲಿ ಹೊಸ ಕಳೆ ಮೊಳಕೆ ಒಡೆಯುತ್ತದೆ.
- ಒಂದು ಕಳೆ ನಿರ್ಮೂಲನೆ ಆದರೂ ಮತ್ತೊಂದು ಹುಟ್ಟಿಕೊಳ್ಳುತ್ತದೆ.
- ಉದಾ: ಸೇವಂತಿಗೆ ಹೂವು ತರಹದ ಕಳೆ ಸಸ್ಯ.Singapore daisy Scientific name:Sphagneticola trilobate ಎಲ್ಲಿತ್ತೋ ಗೊತ್ತಿಲ್ಲ. ಹೇಗೆ ಬಂತೂ ಅದೂ ಗೊತ್ತಿಲ್ಲ.
- ಆದರೆ ನಮ್ಮ ಮಣ್ಣಿನ ಸಂರಕ್ಷಣೆಗೆ ಅದು ಅನಿವಾರ್ಯವಾಗಿತ್ತು.
- ಇದು ಅಲ್ಪ ಕಾಲದಲ್ಲೇ ವ್ಯಾಪಕವಾಗಿ ಹರಡಿ ನೆಲಕ್ಕೆ ರಕ್ಷಣೆ ಕೊಟ್ಟಿತು!.
- ಈ ಕಳೆ ಬಾರದೆ ಇರುತ್ತಿದ್ದರೆ ನಮ್ಮ ಈಗಿನ ಅಧುನಿಕ ಕೃಷಿ ವಿಸ್ತರಣೆ ಭರದಲ್ಲಿ ನೆಲದ ಮೇಲೆ ಮೇಲ್ಮಣ್ಣು ಉಳಿಯುತ್ತಲೇ ಇರಲಿಲ್ಲ.
- ನೆಲ ಬೆತ್ತಲೆಯಾಗುವ ಸ್ಥಿತಿ ಬರುತ್ತಿತ್ತು.
- ಮಳೆ ನೀರಿಗೆ ಮೇಲ್ಮಣ್ಣು ಕೊಚ್ಚಿ ಹೋಗಿ ನೆಲದಲ್ಲಿ ಬರೇ ನೊರಜು ಕಲ್ಲುಗಳು ಕಾಣ್ಣಿಸುವ ಸ್ಥಿತಿ ಬರುತ್ತಿತ್ತು.
- ಈ ಕಳೆಯಿಂದ ಪಶುಗಳ ಹೊಟ್ಟೆಗೆ ಮೇವೂ ಸಹ ಆಗಿದೆ.
- ನಾವೆಲ್ಲಾ ಕಳೆ ನಾಶಕವನ್ನು ಬಳಸಿದವರೇ. ಅದರ ಪರಿಣಾಮವನ್ನು ಕೆಲವರು ಸೂಕ್ಷ್ಮವಾಗಿ ಗಮನಿಸಿರಬಹುದು, ಗಮನಿಸದೆಯೂ ಇರಬಹುದು.
- ಕಳೆನಾಶಕದ ಬಳಕೆಯ ಪರಿಣಾಮದಿಂದ ಗಾಳಿಗೆ ಬೀಜ ಬಿದ್ದು ಹುಟ್ಟುವ ಕಳೆಗಳ ಸಂತತಿ ಹೆಚ್ಚಾಯಿತು.
- ತಲತಲಾಂತದಿಂದ ನಮ್ಮ ಬೆಟ್ಟ ಗುಡ್ಡಗಳಲ್ಲಿದ್ದ ಕಳೆಗಳು ಅವನತಿಯಾಗುತ್ತಾ ಬಂತು.
- ಹೊಸ ಕಳೆಗಳ ಆಗಮನ ಮಣ್ಣಿನ ರಚನೆ ಸುಧಾರಣೆಗೆ ಹೆಚ್ಚಿನ ಕೊಡುಗೆ ನೀಡಿಲ್ಲ.
ಮಣ್ಣು ಫಲವತ್ತತೆ ಮತ್ತು ಕಳೆನಾಶಕ:
- ಕಳೆಗಳು ನೆಲದ ಮೇಲೆ ಬೆಳೆಯುವಾಗ ಅವುಗಳ ಶಾರೀರಿಕ ಗಾತ್ರಕ್ಕನುಗುಣವಾಗಿ ನೆಲದಲ್ಲಿ ಬೇರನ್ನು ಪಸರಿಸುತ್ತವೆ.
- ಬೇರು ಇಳಿಯಲು ಅನುಕೂಲ ಸ್ಥಿತಿ ಇರುವಷ್ಟು ಆಳಕ್ಕೆ, ಬೇರಿನ ಬೆಳವಣಿಗೆ ಇರುತ್ತದೆ.
- ಬಹುತೇಕ ಕಳೆಗಳ ಬೇರುಗಳು ಕೂದಲು ಬೇರುಗಳು. ಅವು ಮಣ್ಣಿನಲ್ಲಿ ಇಳಿದು ಮಣ್ಣನ್ನು ಹಿಡಿದುಕೊಳ್ಳುತ್ತವೆ.
- ಮಣ್ಣಿನ ಸ್ಥಿತಿ ಅನುಕೂಲಕರವಾಗಿದ್ದರೆ ಹೆಚ್ಚು ಆಳಕ್ಕೆ ಬೇರುಗಳು ಇಳಿದು ಅದಕ್ಕಿಂತ ಹೆಚ್ಚಿನ ಎತ್ತರಕ್ಕೆ ಮೇಲ್ಪಾಗದಲ್ಲೂ ಬೆಳವಣಿಗೆ ಇರುತ್ತದೆ.
- ನೆಲದ ಮೇಲೆ ಕಳೆಗಳ ಬೆಳವಣಿಗೆ ಇದ್ದರೆ ನೆಲಕ್ಕೆ ಹೊದಿಕೆ ಇದ್ದಂತೆ.
- ಇದು ಮಳೆ ನೀರಿನ ರಭಸದ ಹೊಡೆತವನ್ನು ತಾನು ತಾಳಿಕೊಂಡು ಮಣ್ಣಿಗೆ ರಕ್ಷಣೆ ಕೊಡುತ್ತದೆ.
- ಒಂದು ವೇಳೆ ನೆಲದಲ್ಲಿ ಹೊದಿಕೆ ಇಲ್ಲದಿದ್ದರೆ ಮಣ್ಣು ನೇರವಾಗಿ ನೀರಿನ ಹೊಡೆತಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ.
- ಇದರಿಂದ ಒಂದು ಮಳೆಗೆ ನಾವು ಹಾಕಿದ ಸಾವಯವ ಗೊಬ್ಬರ ಕೊಚ್ಚಣೆಯಾಗಿ ಹೋಗುತ್ತದೆ.
- ಅಷ್ಟೇ ಅಲ್ಲದೆ ಮಣ್ಣಿನ ಮೇಲ್ಪದರಲ್ಲಿ ಇರುವ ಒಂದು ಎರಡು ಇಂಚಿನಷ್ಟು ಮೆಕ್ಕಲು ಮಣ್ಣು ಸಹ ಕೊಚ್ಚಲ್ಪಡುತ್ತದೆ.
- ಇದು ಮತ್ತೆ ತಯಾರಾಗಬೇಕಾದರೆ 4-5 ವರ್ಷ ಬೇಕಾಗುತ್ತದೆ. ಒಂದು ಎರಡು ಮಳೆಗೆ ವರ್ಷದ ಎಲ್ಲಾ ಸಂಗ್ರಹಿತ ಸಾರಾಂಶವನ್ನು ಕಳೆದುಕೊಳ್ಳುತ್ತೇವೆ.
- ಮತ್ತೆ ಆದನ್ನು ಹೂರಣ ಮಾಡಲು ಗೊಬ್ಬರ ಹಾಕುತ್ತೇವೆ. ಅದೂ ಸಹ ಕೊಚ್ಚಣೆಗೊಳಪಡುತ್ತದೆ.
- ಕೊನೆಗೆ ಮಣ್ಣಿನ ಮೇಲ್ಭಾಗದಲ್ಲಿ ನೊರಜು ಕಲ್ಲುಗಳೇ ಕಾಣಿಸುತ್ತವೆ.
- ಇದನ್ನು ತಡೆಯಲು ಪ್ರಕೃತಿ ಕೊಟ್ಟ ವರವೇ ಕಳೆಗಳು.
- ಕಳೆಗಳು ಎಷ್ಟು ಹುಲುಸಾಗಿ ಬೆಳೆಯುತ್ತದೆಯೋ ಅಷ್ಟು ಮಣ್ಣು ಫಲತ್ತತೆಯಿಂದ ಕೂಡಿದೆ ಎಂದರ್ಥ.
ಕಳೆ ನಾಶಕ ಸಿಂಪಡಿಸುವುದಾದರೆ ಯಾವಾಗ?
- ಕಳೆ ನಾಶಕವನ್ನು ಸಿಂಪಡಿಸುವ ಸಮಯ ಅತ್ಯಂತ ಪ್ರಾಮುಖ್ಯ.
- ಅನಿವಾರ್ಯ ಪ್ರಸಂಗಗಳಲ್ಲಿ ಮಾತ್ರ ಕಳೆನಾಶಕ ಬಳಸಬೇಕು.
- ಕೈಯಿಂದ ತೆಗೆಯಲು ಅಸಾಧ್ಯವಾದ ಮುಳ್ಳು ಗಿಡಗಳು, ಅಥವಾ ಮತ್ತೆ ಮತ್ತೆ ಚಿಗುರು ಬರುವ ಮುಳ್ಳು ಗಿಡಗಳ ನಾಶಕ್ಕೆ ಕಳೆ ನಾಶಕ ಬಳಕೆ ಮಾಡಬಹುದು.
- ಮಳೆಗಾಲ ಪೂರ್ವದಲ್ಲಿ ಅಥವಾ ಮಳೆ ಸಂಪೂರ್ಣವಾಗಿ ನಿಲ್ಲುವ ತನಕ ಕಳೆನಾಶಕ ಸಿಂಪರಣೆ ಮಾಡಬಾರದು.
- ಇದರಿಂದ ಭಾರೀ ಪ್ರಮಾಣದಲ್ಲಿ ಫಲವತ್ತಾದ ಮೆಕ್ಕಲು ಮಣ್ಣು ಕೊಚ್ಚಣೆಯಾಗುತ್ತದೆ.
- ಈ ಮಣ್ಣು ತಗ್ಗು ಜಾಗದಲ್ಲಿ ನಿಲ್ಲುತ್ತದೆ. ಅಥವಾ ಬಸಿ ಕಾಲುವೆ ಮೂಲಕ ನೀರಿನೊಂದಿಗೆ ಕೊಚ್ಚಣೆಯಾಗಿ ಹೋಗುತ್ತದೆ.
- ತಗ್ಗು ಜಾಗದಲ್ಲಿ ಮೆಕ್ಕಲು ಮಣ್ಣು ಸಂಗ್ರಹವಾದರೆ ಅಲ್ಲಿ ನೀರು ಬಸಿಯುವಿಕೆಗೆ (water logging) ಅಡ್ಡಿಯಾಗುತ್ತದೆ.
- ಅಲ್ಲಿ ಉಪಯುಕ್ತ ಜೀವಾಣುಗಳು ಸಾಯುತ್ತವೆ. ಹಾನಿಕಾರಕ ಜೀವಾಣುಗಳು ( anaerobic) ಕ್ರಿಯಾತ್ಮಕವಾಗುತ್ತದೆ.
- ಅಲ್ಲಿ ನಾವು ಹೆಚ್ಚು ಹೊತ್ತು ಓಡಾಡಿದರೆ ನಮ್ಮ ಕಾಲಿಗೂ ಶಿಲೀಂದ್ರ ಸೋಂಕು ಉಂಟಾಗುತ್ತದೆ.
- ಆ ಭಾಗದಲ್ಲಿ ಇರುವ ಅಡಿಕೆ ಮರ, ಅಥವಾ ಸಸಿಗೆ ಬೇರು ಕೊಳೆ ಬರಬಹುದು.
- ಯಾಕೆಂದರೆ ಬೇರಿಗೆ ಉಸಿರುಕಟ್ಟಿದ ಸ್ಥಿತಿ ಉಂಟಾದರೆ ಬೇರು ಸಾಯುತ್ತದೆ.
- ಹಾಗೆಯೇ ಮರಕ್ಕೆ ಕೊಳೆ ರೋಗ ಬರಬಹುದು.
- ಚಳಿಗಾಲ ಪ್ರಾರಂಭವಾಗುವಾಗ ತೀರಾ ಅವಶ್ಯಕವಾದರೆ ಮಾತ್ರ ಕಳೆನಾಶಕ ಸಿಂಪಡಿಸಿ.
- ಅಲ್ಲಿ ಬೇಸಿಗೆ ಕಾಲಕ್ಕೆ ಹಿಂದಿನಂತೆ ಹುಲ್ಲು ಕಳೆ ಬೆಳೆಯಬೇಕು. ಇಲ್ಲವಾದರೆ ನೆಲದ ತೇವಾಂಶ ಆವೀಕರಣಕ್ಕೆ ಒಳಗಾಗುತ್ತದೆ.
- ಒಟ್ಟಿನಲ್ಲಿ ಬೇಸಿಗೆ ಕಾಲ ಮತ್ತು ಮಳೆಗಾಲದಲ್ಲಿ ಯಾವುದೇ ಕಾರಣಕ್ಕೆ ಕಳೆನಾಶಕ ಸಿಂಪಡಿಸಬಾರದು.
- ಸಿಂಪಡಿಸಿದರೆ ದುಪ್ಪಟ್ಟು ಸಾವಯವ ಸ್ಥೂಲ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕಾಗುತ್ತದೆ.
ಮೇಲ್ಮಣ್ಣು ಎಷ್ಟು ಮುಖ್ಯ?
- ಈಗೀಗ ನಮ್ಮ ಹೊಲದಲ್ಲಿ ಕಳೆಗಳೂ ಸಹ ಹುಲುಸಾಗಿ ಬೆಳೆಯುವುದಿಲ್ಲ.
- ಇದನ್ನು ಎಲ್ಲರೂ ಗಮನಿಸಿರಬಹುದು. ಕಾರಣ ಮತ್ತೇನೂ ಅಲ್ಲ. ಅಲ್ಲಿ ಫಲವತ್ತಾದ ಮೆಕ್ಕಲು ಮಣ್ಣು ಕಡಿಮೆಯಾಗಿದೆ.
- ಹಿಂದೆ ನಮ್ಮ ಹೊಲದಲ್ಲಿ ಇರುತ್ತಿದ್ದ ಕೆಲವು ಮಣ್ಣು ಹಿಡಿದಿಟ್ಟುಕೊಳ್ಳುವ ಹುಲ್ಲು ಜಾತಿಯ ಸಸ್ಯಗಳು ಇಲ್ಲದಾಗಿವೆ.
- ಹಿಂದೆಲ್ಲಾ ಪ್ರಾರಂಭದ ಮಳೆಗೆ ಸ್ವಲ್ಪ ಕೆನ್ನೀರು ಹರಿದು ಹೋಗುತ್ತಿತ್ತು.
- ನಂತರ ಸ್ವಚ್ಚವಾದ ನೀರು ಹರಿದು ಹೋಗುವ ಸ್ಥಿತಿ ಇತ್ತು.
- ಕಾರಣ ಹುಲ್ಲು ಇತ್ಯಾದಿ ಕಳೆಗಳಿಂದಾಗಿ ಮಳೆ ನೀರು ಹೇಗೆ ನೆಲಕ್ಕೆ ಬೀಳುತ್ತದೆಯೋ ಹಾಗೆಯೇ ಅದನ್ನು ಹೊರ ಹರಿಯಲು ಅನುಕೂಲಮಾಡಿಕೊಡುತ್ತಿತ್ತು.
- ನಮಗೆಲ್ಲಾ ಈಗಲೂ ನೆನಪಿದೆ,ಹುಲ್ಲುಗಾವಲಿನ ಮೇಲಿಂದ ಬರುವ ತಿಳಿಯಾದ ನೀರಿನಲ್ಲಿ ಆಟವಾಡಿದ್ದು.
- ಈಗ ಕೆನ್ನಿರೇ ವರ್ಷವಿಡೀ ಬರುವುದು ಹಾಗಾಗಿ ಆಟ ಆಡಲು ಸಾಧ್ಯವಿಲ್ಲದಾಗಿದೆ.
- ಮೇಲ್ಮಣ್ಣು ಇಲ್ಲದೆ ಕೃಷಿ ಮಾಡುವುದು ಯಾವತ್ತೂ ಲಾಭದಾಯಕವಲ್ಲ.
- ಒಮ್ಮೆ ಮೇಲ್ಮಣ್ಣು ಕರಗಲು ಪ್ರಾರಂಭವಾದರೆ ಮತ್ತೆ ಅನಿಯಂತ್ರಿತವಾಗಿ ಕರಗುತ್ತಲೇ ಇರುತ್ತದೆ.
- ಕೊನೆಗೊಂದು ದಿನ ಭೂಮಿ ಬರಡಾಗುತ್ತದೆ.
ಕಳೆ ನಾಶಕಗಳ ಬಳಕೆಯಿಂದ ಪರೋಕ್ಷವಾಗಿ ನಾವು ಮೇಲ್ಮಣ್ಣನ್ನು ಕಳೆದುಕೊಳ್ಳುತ್ತೇವೆ. ಜೊತೆಗೆ ಆದು ಮೇಲು ಸ್ಥರದಲ್ಲಿ ಬೇರು ಹಬ್ಬಿ ಬೆಳೆಯುವ ಎಲ್ಲಾ ವಿಧದ ಸಸ್ಯ ವರ್ಗಕ್ಕೂ ಧೀರ್ಘಾವಧಿಯಲ್ಲಿ ಪರಿಣಾಮ ಬೀರುತ್ತದೆ. ನಿಧಾನವಾಗಿ ಸಸ್ಯ ಸೊರಗುತ್ತಾ ಅದು ರೋಗ ಬಾಧೆಗೆ ತುತ್ತಾಗುತ್ತದೆ. ಹಾಗಾಗಿ ಕಳೆ ನಿಯಂತ್ರಣಕ್ಕೆ ಹಸು ಸಾಕು. ಕಳೆನಾಶಕ ಬಿಟ್ಟುಬಿಡಿ. ಹಸು, ಆಡು, ಕುರಿ ಸಾಕಿ ಕಳೆ ನಿಯಂತ್ರಣ ಮಾಡುವ ನಮ್ಮ ಹಿರಿಯರ ಕೃಷಿ ಪದ್ದತಿಯೇ ವೈಜ್ಞಾನಿಕ ಎನ್ನಬಹುದು.