ಅಡಿಕೆ ಮರಗಳಿಗೆ ಸುಣ್ಣ ಬಳಿದರೆ ಇಳುವರಿ ಹೆಚ್ಚುತ್ತದೆ.

ಉತ್ತರ –ದಕ್ಷಿಣ (ನೈರುತ್ಯ) ಬಿಸಿಲು ಬೀಳುವ ಭಾಗಕ್ಕೆ ಸುಣ್ಣ ಅಗತ್ಯ

ಅಡಿಕೆ ಮರಗಳ ಕಾಂಡವನ್ನು ಬಿಸಿಲಿನ ಘಾಸಿಯಿಂದ ರಕ್ಷಿಸಿದರೆ ಧೀರ್ಘಾವಧಿ ತನಕ ಫಸಲು  ಕೊಡುತ್ತದೆ. ವರ್ಷ ವರ್ಷವೂ ಗಾಳಿಗೆ ಮರ ಬೀಳುವುದರಿಂದಾಗಿ ಉಂಟಾಗುವ ನಷ್ಟ ಕಡಿಮೆಯಾಗಿ ಇಳುವರಿ ಸ್ಥಿರವಾಗಿರುತ್ತದೆ . ಮರದ ಕಾಂಡಕ್ಕೆ ಸುಣ್ಣ ಬಳಿದರೆ ಕಾಂಡ   ಹಾಳಾಗದೆ  ಅಯುಸ್ಸು ಹೆಚ್ಚಿ ಇಳುವರಿಯು ಹೆಚ್ಚುತ್ತದೆ.

  • ದಕ್ಷಿಣಾಯನ ಮುಗಿಯುವ ಮಕರ ಸಂಕ್ರಮಣದ ತನಕ ಸೂರ್ಯನ ಬಿಸಿಲು ಮರದ ಕಾಂಡಕ್ಕೆ ನೇರವಾಗಿ ಹೊಡೆದು ಮರ ಕಾಂಡ ಸೂರ್ಯ ಕಿರಣದ ಘ್ಹಾಸಿಗೆ ಒಳಗಾಗುತ್ತದೆ.
  • ಅಂತಹ ಮರಗಳು ಬೇಗ ಹಾಳಾಗುತ್ತವೆ. ಒಂದು ವರ್ಷ ನೇರ ಬಿಸಿಲು ಬಿದ್ದರೆ  ಸಾಕು, ಮುಂದಿನ ವರ್ಷ ಆ ಭಾಗದಲ್ಲಿನ ತೊಗಟೆ ಸತ್ತು ಹೋಗುತ್ತದೆ.
  • ಇದು ಕ್ರಮೇಣ ಹೆಚ್ಚಾಗುತ್ತಾ  ಹೋಗಿ ಮರದ ಒಂದು ಭಾಗ ಸಂಪೂರ್ಣ ಘಾಸಿಯಾಗಿ ಯಾವುದೇ ಸಮಯದಲ್ಲಿ  ಅದು ಬೀಳಬಹುದು.
  • ಈ ಕೆಲಸವನ್ನು ಮಳೆಗಾಲ ಕಳೆದ ತಕ್ಷಣ  (ನವೆಂಬರ್ ತಿಂಗಳು) ಮಾಡಬೇಕು.

ಹೇಗೆ  ತಡೆಯುವುದು:

  • ಕೆಲವರು ಇದಕ್ಕೆ ನೆಡುವ ಕ್ರಮವನ್ನು  ಬದಲಿಸಬೇಕು ಎನ್ನುತ್ತಾರೆ.
  • ಆದರೆ ಅದರಿಂದ ಅಂಥಃ ಪ್ರಯೋಜನ ಇಲ್ಲ.
  • ಅಡಿಕೆ  ತೋಟ ಮಾಡುವಾಗ ದಕ್ಷಿಣ ಭಾಗ ಕಟ್ಟಿಕೊಂಡಿರುವ ಸ್ಥಳವನ್ನು ಆಯ್ಕೆ ಮಾಡಬೇಕು ಎಂಬುದು ನಮ್ಮ ಹಿರಿಯರ ಅಭಿಪ್ರಾಯ.
  • ಆದರೆ ಈಗ ಅಂತಹ ಸ್ಥಳಗಳು ಕಡಿಮೆ.
  • ದಕ್ಷಿಣ ಭಾಗದಲ್ಲಿ ಶೀಘ್ರವಾಗಿ ಬೆಳೆಯುವ ಮರಗಳಾದ ಅಕೇಶಿಯಾ- ಉಪ್ಪಳ್ಳಿಗೆ, ಮಹಾಘನಿ ಮುಂತಾದ ಮರ ಮಟ್ಟುಗಳನ್ನು  ಬೆಳೆಸಬಹುದು.
  • ಆ ಮರದ ಬೇರುಗಳು ಅಡಿಕೆ  ತೋಟಕ್ಕೆ ಸುಳಿಯದಂತೆ  ಕಾಲುವೆ ಮಾಡಿ ಸಂಪರ್ಕ ತಪ್ಪಿಸಬೇಕು.
  • ಅಡಿಕೆ ಮರಗಳಿಗಿಂತ ಸಸಿಯನ್ನು ಕನಿಷ್ಜ್ಟ 4 ಮೀ. ದೂರದಲ್ಲಿ  ನಾಟಿ ಮಾಡಬೇಕು.ಸಮೀಪ ಇದ್ದರೆ  ಅದರ ಗೆಲ್ಲುಗಳು ಅಡ್ಡವಾಗುತ್ತದೆ.
  • ವರ್ಷ ವರ್ಷ ಮಳೆಗಾಲ  ಪ್ರಾರಂಭವಾಗುವಾಗ ಮರವನ್ನು ಟ್ರಿಮ್ಮಿಂಗ್ ಮಾಡಬೇಕು.
  • ಇದೆಲ್ಲದರ ಬದಲಿಗೆ  ಸುಲಭದ ವಿಧಾನ ಅಡಿಕೆ  ಮರಗಳಿಗೆ ಸುಣ್ಣ ಬಳಿಯುವುದು. ಬಿಳಿ ಬಣ್ಣವನ್ನು  ಬಳಿದಾಗ ಆ ಭಾಗದಲ್ಲಿ  5-10 ಡಿಗ್ರಿಯಷ್ಟು ಬಿಸಿ   ಕಡಿಮೆಯಾಗುತ್ತದೆ.
  • ಇದು ಮರದ ಎಲ್ಲಾ ರೀತಿಯ ಬೆಳವಣಿಗೆ ಅನುಕೂಲ.
  • ಚಿಪ್ಪು ಸುಣ್ಣವನ್ನು ನೀರಿನಲ್ಲಿ ಕರಗಿಸಿ ಮರಕ್ಕೆ ಲೇಪನ ಮಾಡುವುದರಿಂದ ಮರದ ಕಾಂಡಕ್ಕೆ ಬಿದ್ದ ಬಿಸಿಲಿನ ಪ್ರಖರತೆ  ಘ್ಹಾಸಿಯನ್ನು  ತುಂಬಾ ಕಡಿಮೆ ಮಾಡುತ್ತದೆ.
  • ಸ್ಪ್ರಿಂಕ್ಲರ್ ನೀರಾವರಿಯಲ್ಲಿ ಈ ರೀತಿಯಲ್ಲಿ ಸುಣ್ಣ ಬಳಿದಾಗ ಅದು ತೊಳೆದು ಹೋಗುತ್ತದೆ.
  • ಅದರ ಬದಲಿಗೆ  ಬಿಳಿ ಪ್ರೈಮರ್ ಪೈಂಟ್ ಲೇಪಿಸುವುದು ಸುಲಭ. ಇದರಿಂದ ಮರಕ್ಕೆ ಯಾವುದೇ ತೊಂದರೆ  ಆಗುವುದಿಲ್ಲ.
  • ಇದು ಎರಡು ವರ್ಷ ತನಕ ತೊಳೆದು ಹೋಗುವುದಿಲ್ಲ.
ಉತ್ತರ –ದಕ್ಷಿಣ (ನೈರುತ್ಯ) ಬಿಸಿಲು ಬೀಳದ ಜಾಗಕ್ಕೆ ಬೇಕಾಗಿಲ್ಲ
ಉತ್ತರ –ದಕ್ಷಿಣ (ನೈರುತ್ಯ) ಬಿಸಿಲು ಬೀಳದ ಜಾಗಕ್ಕೆ ಬೇಕಾಗಿಲ್ಲ

ಅನುಕೂಲಗಳು:

  • ಮರದ ಕಾಂಡಕ್ಕೆ  ಯಾವುದೇ ಹಾನಿ ಉಂಟಾಗುವುದಿಲ್ಲ.
  • ಕಾಂಡದ ಎಲ್ಲಾ ಭಾಗಗಳಿಂದಲೂ ಶಿರಕ್ಕೆ ಆಹಾರ ಸರಬರಾಜು ಆಗುತ್ತದೆ.
  • ಕಾಂಡದ ತೊಗಟೆ ತಂಪು ಇರುವ ಕಾರಣ ಮರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.
  • ಕಾಂಡದ ಮೂಲಕ ಚಳಿಗಾಲ ಮುಗಿಯುವ ತನಕ  ಮರ ಏರಿ ಹೂ ಗೊಂಚಲನ್ನು  ಹಾನಿ ಮಾಡುವ ಬಸವನ ಹುಳು ಮೇಲೆ  ಹೋಗುವುದಕ್ಕೆ ಆಗುವುದಿಲ್ಲ.
  • ಕಾಂಡದ ಸಂರಕ್ಷಣೆ ಮಾಡಿದರೆ ಮರದ ಬಾಳ್ವಿಕೆ  ಹೆಚ್ಚುತ್ತದೆ.
  • ಇದರಿಂದ ಹೆಚ್ಚು ಸಮಯದ ತನಕ ಇಳುವರಿ ಪಡೆಯುತ್ತಿರಬಹುದು.
  • ಗಾಳಿಗೆ ಮರ ಬೀಳುವುದು ಕಡಿಮೆಯಾಗುತ್ತದೆ.
  • ಮರದ ಕಾಂಡ ಬಿಸಿ ಆಗದೇ ಇದ್ದರೆ ಅಡಿಕೆ ಮರದ ಹೂ ಗೊಂಚಲು ಒಣಗುವುದು, ಮಿಡಿ ಉದುರುವುದು ಮುಂತಾದ ಸಮಸ್ಯೆಗಳು ಕಡಿಮೆಯಾಗಿ ಇಳುವರಿ ಹೆಚ್ಚುತ್ತದೆ.
  • ನೆಟ್ಟ ವರ್ಷದಿಂದಲೇ ಲೇಪನ ಮಾಡುವುದು ಅಗತ್ಯ. ಎಳೆಸಸಿಗೂ ಬಿಸಿಲಿನ ಘಾಸಿ ಆದರೆ ಅದರ ಬುಡ ಭಾಗವೇ ಹಾಳಾಗುತ್ತದೆ.ನೆರಳು ಬೀಳುವ ಕಡೆ ಲೇಪನ ಬೇಕಾಗಿಲ್ಲ. ಅನುಕೂಲ ಇದ್ದರೆ  ಮಾಡಿದರೆ  ಲಾಭವೇ ಹೊರತು ನಷ್ಟವಿಲ್ಲ.ಅಡಿಕೆ ಮರ ಮಾತ್ರವಲ್ಲ, ತೆಂಗು , ಇನ್ನಿತರ ಮರಮಟ್ಟುಗಳಿಗೂ ಈ ಸಮಯದಲ್ಲಿ  ಕಾಂಡಕ್ಕೆ ಬಿಸಿಲಿನ ಶಾಖದಿಂದ ಆಗುವ ಘಾಸಿ ತಪ್ಪಿಸಿದರೆ  ಮರಕ್ಕೆ ಒಳ್ಳೆಯದು.

ಹೇಗೆ ಲೇಪಿಸುವುದು:

ಸಣ್ಣ ಗಿಡಗಳಿಂದಲೂ ಲೇಪಿಸಬೇಕು
ಸಣ್ಣ ಗಿಡಗಳಿಂದಲೂ ಲೇಪಿಸಬೇಕು
  • ಕೈಗೆಟಕುವವರೆಗೆ  ಬ್ರಷ್ ಮೂಲಕ ಲೇಪನ ಮಾಡಬಹುದು.
  • ನಂತರ ಗೋಡೆಗೆ ಕೊಡುವ ರೋಲರ್ ಬ್ರಷ್ ಅನ್ನು ಮರದ ಕಾಂಡಕ್ಕೆ ಸಮನಾಗಿ ಅರ್ಧ ಚಂದ್ರಾಕಾರದಲ್ಲಿ ಬಾಗಿಸಿ ಕೋಲಿಗೆ ಸಿಕ್ಕಿಸಿ ಲೇಪನ ಮಾಡಬಹುದು.
  • ಗೋಡೆಗೆ  ಲೇಪನ ಮಾಡುವಂತೆ ಎರಡು ಬಾರಿ ಕೋಟಿಂಗ್ ಮಾಡಿದರೆ ಅನುಕೂಲ ಹೆಚ್ಚು.

ಒಂದು ಅಡಿಕೆ ಮರ ನೆಟ್ಟು ಫಸಲು ಬರಲು ಸುಮಾರು 4  ವರ್ಷ ಬೇಕು.ಅದನ್ನು  ಕೊಲ್ಲಲು ಒಂದು ಸೀಸನ್ ನ ಬಿಸಿಲು ಸಾಕು.ಆದ ಕಾರಣ ಬಿಸಿಲಿಂದ ರಕ್ಷಿಸುತ್ತಿದ್ದರೆ ಬಹಳ ಸಮಯದ ತನಕ ಮರದಿಂದ ಫಸಲು ಪಡೆಯುತ್ತಿರಬಹುದು. 

Leave a Reply

Your email address will not be published. Required fields are marked *

error: Content is protected !!