ಅಡಿಕೆ ಮರದ ಕಾಡಕ್ಕೆ ನಿರಂತರ ಬಿಸಿಲಿನ ಹೊಡೆತ ಬೀಳುವುದರಿಂದ ಆ ಭಾಗ ಬಿಸಿಯಾಗುತ್ತದೆ. ಮೊದಲಿಗೆ ಬಿಸಿಲು ತಾಗಿದ ಭಾಗ ಹಳದಿ ಮಿಶ್ರ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ವರ್ಷ ಕಳೆದಾಗ ಅಲ್ಲಿ ಸಣ್ಣ ಒಡಕು ಕಾಣಿಸುತ್ತದೆ. ಎರಡು ಮೂರು ವರ್ಷ ಕಳೆದಾಗ ಆ ಭಾಗ ನಿರ್ಜೀವವಾಗುತ್ತದೆ. ಅದು ಎದ್ದು ಬರಲೂ ಬಹುದು. ಗಾಳಿಗೆ ಬೀಳಲೂ ಬಹುದು. ಇದನ್ನು ತಡೆಯುವ ಉಪಾಯ ಮರದ ಕಾಂಡಕ್ಕೆ ಎಅರಡನೇ ವರ್ಷದಿಂದ ಸಾದ್ಯವಾದಷ್ಟು ವರ್ಷದ ತನಕ ಸುಣ್ಣದ ಲೇಪನ ಒಂದೇ.
ಚಳಿಗಾಲ ಪ್ರಾರಂಭವಾಗುವ ಕಾರ್ತಿಕ ಮಾಸದಿಂದ ಮಕರ ಮಾಸದ ತನಕ ದಕ್ಷಿಣಾಯನದ ಪ್ರಖರ ಬಿಸಿಲಿಗೆ ಎಳೆಯ ಅಡಿಕೆ ಸಸಿಗಳ ಎಲೆಗಳು ಕರಳಿ ಹೋಗುತ್ತವೆ. ಬೆಳೆಯುತ್ತಿರುವ ಮರದ ಕಾಂಡಕ್ಕೆ ಬಿಸಿಲು ತಾಗಿ ಅಲ್ಲಿ ಸೂರ್ಯನ ಗಾಯ (sun scorch) ಉಂಟಾಗಿ ಮರದ ಆಯುಶ್ಯ ಕಡಿಮೆಯಾಗುತ್ತದೆ. ಇದನ್ನು ನಿಯಂತ್ರಿಸಿಕೊಂಡರೆ ಅಡಿಕೆ ಮರದಲ್ಲಿ 50-60 ವರ್ಷಗಳಿಗೂ ಹೆಚ್ಚು ಕಾಲ ಉತ್ತಮ ಇಳುವರಿ ಪಡೆಯುತ್ತಾ ಇರಬಹುದು.
- ಈಗಿನ ಅಡಿಕೆ ತೋಟಗಳ ಆಯುಸ್ಸು ಎಷ್ಟಪ್ಪಾ ಎಂದರೆ 30-40 ವರ್ಷಗಳು. ಇದಕ್ಕಿಂತ ಹೆಚ್ಚು ಬಾಳ್ವಿಕೆ ಬರುವ ಮರಗಳೇ ಇಲ್ಲ.
- ಆದರೆ ನಮ್ಮ ಹಿರಿಯರು ಮಾಡುತ್ತಿದ್ದ ತೋಟದಲ್ಲಿ ಮರಗಳು 50-60-70 ವರ್ಷಗಳು ಮತ್ತು ಅದಕ್ಕಿಂತಲೂ ಹೆಚ್ಚು ವರ್ಷ ತನಕವೂ ಬದುಕುವುದು ಇತ್ತು.
- ಕಾರಣ ಇಷ್ಟೇ ಇವರು ಅಡಿಕೆ ತೋಟ ಮಾಡಬೇಕಿದ್ದರೆ ಪಶ್ಚಿಮ ದಿಕ್ಕು ಎತ್ತರ ಇರುವ ಆ ಭಾಗದಿಂದ ನೇರ ಬಿಸಿಲು ಬೀಳದಂತಹ ಜಾಗದಲ್ಲೇ ತೋಟ ಮಾಡುತ್ತಿದ್ದರು.
- ಅಡಿಕೆ ತೋಟಕ್ಕೆ ತೆಂಕು (ದಕ್ಷಿಣ ಮತ್ತು ನೈರುತ್ಯ) ಕೂಡಿರಬೇಕು ಎಂಬುದು ಹಿರಿಯರ ಮಾನದಂಡ.
- ಆದರೆ ಎಲ್ಲಾ ಕಡೆ ಈ ಸ್ಥಿತಿ ಇರುವುದಿಲ್ಲ. ಆದ ಕಾರಣ ಅಂತಹ ಸ್ಥಿತಿ ಇಲ್ಲದ ಕಡೆಯೂ ತೋಟ ಮಾಡಲಾಗುತ್ತದೆ.
- ತೋಟ ಎಲ್ಲಿಯೂ ಮಾಡಬಹುದು.
- ಆದರೆ ಮರದ ಬಾಳ್ವಿಕೆ ಎಷ್ಟು ಎಂದರೆ ಅದು ತುಂಬಾ ಕಡಿಮೆ. ಹೀಗಾದರೆ ಪ್ರಯೋಜನ ಕಡಿಮೆ.
ಮರದ ಆಯುಸ್ಸು ಹೆಚ್ಚಿಸುವ ವಿಧಾನ:
- ಮರದ ಆಯುಸ್ಸು ಹೆಚ್ಚಿ, ಗುಣಮಟ್ಟದ ಸುಸ್ಥಿರ ಇಳುವರಿ ಬರುತ್ತಾ ಇರಬೇಕಾದರೆ, ಮರಗಳಿಗೆ ಕೆಲವು ರಕ್ಷಣೆಗಳು ಅಗತ್ಯವಾಗಿ ಬೇಕು.
- ಸಸಿ ಹಂತದಲ್ಲಿ ಗಿಡದ ಎಲೆಗಳು ಬಿಸಿಲಿನ ತಾಪದಲ್ಲಿ ಘಾಸಿಗೊಳ್ಳಬಾರದು.
- ಸಸಿ ಮರವಾಗುತ್ತಿದ್ದಂತೆ ಮರದ ಕಾಂಡಕ್ಕೆ ಸೂರ್ಯನ ಬಿಸಿಲಿನ ನೇರ ಹೊಡೆತ ಬೀಳಲೇ ಬಾರದು.
- ಒಂದು ಸೀಸನ್ ನಲ್ಲಿ ಸೂರ್ಯನ ನೇರ ಬಿಸಿಲು ಮರದ ಕಾಂಡಕ್ಕೆ ಬಿದ್ದರೆ ಸಾಕು ಅದರ ಆಯುಸ್ಸು ಕಡಿಮೆಯಾದಂತೆ.
- ಮೊದಲ ವರ್ಷ ಸೂರ್ಯನ ಬಿಸಿಲು ತಾಗಿದಾಗ ಮರದ ಕಾಂಡದಲ್ಲಿ ಯಾವುದೇ ಘಾಸಿ ಕಾಣುವುದಿಲ್ಲ.
- ಮಳೆಗಾಲ ಕಳೆದಾಕ್ಷಣ ಎಲ್ಲಿ ಸೂರ್ಯನ ನೇರ ಬಿಸಿಲು ತಾಗಿದೆಯೋ ಅಲ್ಲಿ ಅಣಬೆ ಬೆಳೆದು ಆ ಭಾಗ ಸತ್ತು ಹೋಗುತ್ತದೆ.
- ಎಳೆಯ ಸಸಿಗಳಾದರೆ ಕಾಂಡದಲ್ಲಿ ಅರ್ಧ ಭಾಗದ ಜೀವ ಕೋಶವೇ ಸತ್ತು ಹೋಗಿ ಸಸಿಯ ಏಳಿಗೆ ಆಗುವುದಿಲ್ಲ.
ಇಂತಹ ಮರಗಳು ಒಂದೆರಡು ವರ್ಷ ಹಾಗೆಯೇ ಇರುತ್ತವೆ. ಕ್ರಮೇಣ ಈ ಸತ್ತ ಮರದ ಭಾಗದಲ್ಲಿ ಮರಕುಟಿಕ ಪಕ್ಷಿ ಕುಕ್ಕಿ ತೂತು ಮಾಡುತ್ತದೆ. ಬಿರುಸಾದ ಗಾಳಿ ಬಂದಾಗ ಮರ ಬೀಳುತ್ತದೆ. ಮೊದಲು ಒಂದು ಸಾಲಿನ ಮರಗಳು ಮುರಿದು ಬಿದ್ದು ಮುಗಿದರೆ ನಂತರ ಅದರ ನಂತರದ ಸಾಲಿನ ಸರದಿ. ಒಂದು ಸಾಲಿನ ಮರಕ್ಕೆ ತೊಂದರೆ ಆದರೆ ಸಾಕು ನಂತರ ಅದು ಮುಂದುವರಿಯುತ್ತಾ ಇರುತ್ತದೆ.
ಯಾಕೆ ಸುಣ್ಣವೇ ಉತ್ತಮ?
- ಹಿಂದೆ ಇಂತಹ ಬಿಸಿಲು ಬೀಳುವ ಮರಗಳಿಗೆ ತೆಂಗಿನ ಗರಿ . ಅಡಿಕೆ ಮರದ ಗರಿ ಕಟ್ಟುತ್ತಿದ್ದರು.
- ಅದು ಮಾಡಲು ಸಾಧ್ಯವಾದರೆ ಈಗಲೂ ಮಾಡಬಹುದು. ಅದು ಉತ್ತಮ.
- ಆದರೆ ಸುಣ್ಣದ ಲೇಪನ ಈಗಿನ ಕಾಲಕ್ಕೆ ಸುಲಭ.
- ಸುಣ್ಣ ಬಿಳಿಯಾಗಿದ್ದು, ಸೂರ್ಯನ ಬೆಳಕಿನ ಪ್ರಖರತೆಯನ್ನು ಕಡಿಮೆ ಮಾಡಿ ತಂಪು ಕೊಡುತ್ತದೆ.
- ಸುಣ್ಣಕ್ಕೆ ಇರುವಷ್ಟು ಅಂಟುವ ಗುಣ ಮತ್ತೊಂದು ವಸ್ತುವಿಗೆ ಇಲ್ಲ.ಇದು ಅಗ್ಗವೂ ಸಹ.
- ನಾವೆಲ್ಲಾ ಕೆಲವು ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ನಡೆದು ಹೋಗುವ ದಾರಿಗೆ ಬಿಳಿ ಬಣ್ಣ ಕೊಡುವುದನ್ನು ಕಂಡಿದ್ದೇವೆ.
- ಆ ಭಾಗದಲ್ಲಿ ನಡೆಯುವಾಗ ಇರುವ ತಂಪು, ಬಣ್ಣ ಕೊಡದ ಭಾಗದಲ್ಲಿ ಇರುವುದಿಲ್ಲ.
- ಅದೇ ಸ್ಥಿತಿಯನ್ನು ಇಲ್ಲಿಯೂ ನಾವು ಪಡೆಯಬಹುದು.
- ಸುಣ್ಣದ ಮೂಲಕ ಬಸವನ ಹುಳು ಇತ್ಯಾದಿ ಹರಿದುಕೊಂಡು ಹೋಗುವುದು ಕಡಿಮೆ ಅದಕ್ಕೂ ಇದು ಪ್ರಯೋಜನಕಾರಿ.
- ತೊಳೆದು ಹೋದಾಗ ಅದು ಗಿಡಕ್ಕೆ ಪೋಷಕವೂ ಸಹ.
- ಅಡಿಕೆ ತೋಟ ಮಾಡಲು, ಅದಕ್ಕೆ ಗೊಬ್ಬರ ಹಾಕಲು ನಾವು ಮಾಡುವ ಖರ್ಚಿನ ಜೊತೆಗೆ ಅದಕ್ಕಿಂತ ಕಡಿಮೆ ಖರ್ಚಿನಲ್ಲಿ ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಂಡರೆ ಮರದ ಆಯುಸ್ಸು ಹೆಚ್ಚಳವಾಗುತ್ತದೆ.
ಯಾವ ಕ್ರಮ ಕೈಗೊಳ್ಳಬೇಕು:
- ಎಳೆ ಅಡಿಕೆ ಸಸಿಗಳಿರುವಾಗ ಪಶ್ಚಿಮ ದಿಕ್ಕಿನ ಬಿಸಿಲು ಸಸಿಗೆ ನೇರವಾಗಿ ಬೀಳದಂತೆ ಮೊದಲ ವರ್ಷ ಆ ಬದಿಗೆ ತೊಗರಿ ಗಿಡವನ್ನು ನಾಟಿ ಮಾಡಬೇಕು.
- ಇಲ್ಲವಾದರೆ ಮಿಶ್ರ ಬೆಳೆಯಾಗಿ ಅಡಿಕೆ ಸಸ್ಯಕ್ಕೆ ಮೇಲ್ಭಾಗದ ಬಿಸಿಲನ್ನು ತಡೆಯದ ಬೆಳೆಗಳನ್ನು ಬೆಳೆಸಬೇಕು.
- ಆಯ್ಕೆ ಮಾಡುವ ಮಿಶ್ರ ಬೆಳೆ ಅಡಿಕೆ ಸಸ್ಯದ ಬೆಳವಣಿಗೆಗೆ ಅಡ್ಡಿಯಾಗುವಂತೆ ನೆರಳು ಕೊಡುವ ಬೆಳೆ( ಬಾಳೆ) ಬೆಳೆಸಬಾರದು.
- ತಾಪಮಾನ 35 ಡಿಗ್ರಿಗಿಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ಎಳೆ ಸಸಿಯ ಎಲೆಗಳಿಗೆ ಸನ್ ಸ್ಕಾರ್ಚ್ ಆಗದಂತೆ ಶೇ.0.5 ( ½ ಸಿಂಪರಣೆ ಸುಣ್ಣ) ವನ್ನು ಎಲೆಗಳ ಮೇಲ್ಪ್ಭಾಗಕ್ಕೆ ಮತ್ತು ಕೆಳಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡಿದರೆ ಒಳ್ಳೆಯದು.
- ಬಿಳಿ ಬಣ್ಣವು ಸೂರ್ಯನ ಶಾಖವನ್ನು ಕಡಿಮೆ ಮಾಡುತ್ತದೆ.
- ಸಸಿ ಬುಡ ಬಿಟ್ಟ ನಂತರ ಕಾಂಡಕ್ಕೆ ಬಿಸಿಲು ತಾಗದಂತೆ ಸುಣ್ಣವನ್ನು ಪೈಂಟ್ ತರಹ ಲೇಪನ ವಾಗಿ ಮಾಡಲೇ ಬೇಕು.
- ಮರ ಬೆಳೆದಂತೆ ನವೆಂಬರ್ ತಿಂಗಳಲ್ಲಿ ಯಾವ ಭಾಗಕ್ಕೆ ಬಿಸಿಲು ಬೀಳುತ್ತದೆ ಎಂದು ಗಮನಿಸಿ ಆ ಭಾಗಕ್ಕೆ ಸುಣ್ಣವನ್ನು ಲೇಪನ ಮಾಡಬೇಕು.
- ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ಸುಣ್ಣವನ್ನು ಲೇಪನ ಮಾಡಿದರೆ ಅದು ನೀರಿನ ಹೊಡೆತೆಕ್ಕೆ ತೋಳೆದು ಹೋಗುತ್ತದೆ.
- ಅದರ ಬದಲಿಗೆ ಪ್ರೈಮರ್ ಬಿಳಿ ಪೈಂಟ್ ಅನ್ನು (ಲೀ.60-70 ರೂ ಗಳಿಗೆ ಸಿಗುವ) ಲೇಪನ ಮಾಡಬಹುದು.
- ಇದು ಎರಡು ವರ್ಷಗಳ ತನಕ ಉಳಿಯುತ್ತದೆ.
ಇದಲ್ಲದೆ ಮರದ ಪಶ್ಚಿಮ ದಿಕ್ಕಿಗೆ ಬಿಸಿಲು ಬೀಳುವ ಮರಗಳಿಗೆ ಶೇ.75 ನೆರಳು ಕೊಡಬಲ್ಲ ಶೇಡ್ ನೆಟ್ ಅನ್ನು ತುಂಡು ಮಾಡಿ ಕಟ್ಟುವುದು ಪ್ರಯೋಜನಕಾರಿ. ಉತ್ತಮ ಗುಣಮಟ್ಟದ ಶೇಡ್ ನೆಟ್ ಸುಮಾರು 5 ವರ್ಷಕ್ಕೂ ಹೆಚ್ಚು ಬಾಳ್ವಿಕೆ ಬರುತ್ತದೆ. ಇದನ್ನು ಮೇಲ್ಭಾಗದಲ್ಲಿ ಹೆಚ್ಚು ಉದ್ದ ಇಟ್ಟುಕೊಂಡರೆ ಮುಂದಿನ ವರ್ಷ ಅದದನ್ನು ಅಲ್ಲೇ ಎತ್ತರಕ್ಕೆ ಕಟ್ಟಲು ಸಹಾಯವಾಗುತ್ತದೆ. ಕಟ್ಟುವಾಗ ಉತ್ತಮ ಬಿಸಿಲಿಗೆ ಹಾಳಾಗದ ಹಗ್ಗದಿಂದ ಕಟ್ಟುವುದು ಸೂಕ್ತ.
- ಅನುಕೂಲ ಇದ್ದವರು ಅಡಿಕೆ ಮರದ ಗರಿ, ತೆಂಗಿನ ಮರದ ಗರಿಯನ್ನು ಕಟ್ಟಬಹುದು.
- ಇದು ಮುಂದಿನ ವರ್ಷಕ್ಕೆ ಹಾಳಾಗುತ್ತದೆಯಾದರೂ ಪ್ರಯೋಜನಕಾರಿ.
- ಜೀವಂತ ರಕ್ಷೆಗಳಾದ ಕರಿಮೆಣಸು ಬಳ್ಳಿ, ವೀಳ್ಯದೆಲೆ ಸಹ ಬೆಳೆಸಬಹುದು.
ಒಂದು ಅಡಿಕೆ ಸಸಿ ಬೆಳೆಸಲು ನಾವು ಬಹಳ ಶ್ರಮ ಪಡುತ್ತೇವೆ. ಅದು ಬೆಳೆದು ಫಲಕೊಡುವ ಸಮಯಕ್ಕೆ ಕಾಂಡ ಘಾಸಿಯಾಗಿ ಹಾಳಾದರೆ ಎಷ್ಟೊಂದು ನಷ್ಟ. ಈ ಜಾಗದಲ್ಲಿ ಮತ್ತೆ ಹಿಂದಿನಂತೆ ಸಸಿ ಬೆಳೆಯುವುದೂ ಇಲ್ಲ. ಆದುದರಿಂದ ಕಾಂಡದ ರಕ್ಷಣೆ ಅತ್ಯಗತ್ಯ.
ನೆಟ್ಟು ಬೆಳೆಸಿದ ಅಡಿಕೆ ಮರಗಳು ಫಲ ಕೊಡುವ ಸಮಯದಲ್ಲಿ ಗಾಳಿಗೆ ಮುರಿದು ಬಿಳುವುದು ನೋಡಿದಾದ ಬೇಸರವಾಗುತ್ತದೆ. ಒಮ್ಮೆ ಸಸಿ ನೆಟ್ಟ ಜಾಗದಲ್ಲಿ ಮತ್ತೆ ಅದರಂತೆ ಸಸಿ ಬದುಕುವುದಿಲ್ಲ. ಆದ ಕಾರಣ ಮರದ ಆಯುಶ್ಯ ಹೆಚ್ಚಾಗುವಂತೆ ಮರದ ಕಾಂಡಕ್ಕೆ ಅಗತ್ಯವಾಗಿ ರಕ್ಷಣೆ ಮಾಡಲೇ ಬೇಕು.
End of the article:———————————————————————————
search words: Areca plantation# protection of areca palm by sun burn# sun burn damage# Shade net wrapping to areca palm# pepper planting to areca palm# painting to areca palm#