ಬೇಸಿಗೆ ಕಾಲದಲ್ಲಿ ಕೆಲವು ಸಮಯದಲ್ಲಿ ಒಂದೆರಡು ದಿನ ಮೋಡ ಕವಿದ ವಾತಾವರಣ ಇರುತ್ತದೆ. ಸಾಮಾನ್ಯವಾಗಿ ಮಾವು, ಗೇರು ಹೂ ಬೀಡುವ ಸಮಯದಲ್ಲಿ ಇದು ಹೆಚ್ಚು. ಈ ಮೋಡ ಕವಿದ ದಿನಗಳು ಬೆಳೆಗಳಿಗೆ ಹಾಳು.
- ಈ ವರ್ಷದ ಹವಾಮಾನ ಯಾಕೋ ಭಿನ್ನವಾಗಿದೆ. ಡಿಸೆಂಬರ್ ವರೆಗೂ ಮಳೆ. ಚಳಿಯಂತೂ ತೀರಾ ಕಡಿಮೆ.
- ಆಗಾಗ ಮೋಡ ಕವಿದ ವಾತಾವರಣ.
- ಕೆಲವು ತಜ್ಞರು ಹೇಳುವಂತೆ ಮುಂದಿನ ವರ್ಷಗಳಲ್ಲಿ ಹವಾಮಾನ ಸ್ಥಿತಿ ಸ್ವಲ್ಪ ಸ್ವಲ್ಪವೇ ಬದಲಾವಣೆ ಆಗುತ್ತಾ, ಅಕಾಲಿಕ ಮಳೆ- ಅತಿಯಾದ ಬಿಸಿಲು ಬಂದು ಕೃಷಿ ವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆಯಂತೆ.
ಈಗ ಬಿಸಿಲಿನ ಝಳ ಅತಿಯಾಗಿರಬೇಕಿತ್ತು. ಆದರೆ ಸಂಕ್ರಮಣದ ತನಕವೂ ಸರಿಯಾಗಿ ಚಳಿ ಬಿದ್ದಿಲ್ಲ. ಈ ವಾತಾವರಣ ಕೃಷಿಗೆ ಏನೇನೂ ಉತ್ತಮವಲ್ಲ. ಕೃಷಿಕರಾದ ನಾವು ಅತಿಯಾದ ಬಿಸಿಲು- ಅತಿಯಾದ ಮಳೆ ಕೃಷಿಗೆ ಹಾಳು ಎನ್ನುತ್ತೇವೆ. ಅದಕ್ಕಿಂತೆಲ್ಲಾ ತೊಂದರೆದಾಯಕ ಎಂದರೆ ಮೋಡ ಕವಿದ ವಾತಾವರಣ ಮತ್ತು ಚಳಿ ರಹಿತ ಹವಾಮಾನ.
ಮೋಡ ದಿಂದ ಏನಾಗುತ್ತದೆ:
- ಸಸ್ಯಗಳಿಗೆ ಅತಿಯಾದ ಬಿಸಿಲು, ಅತಿಯಾದ ಮಳೆ ಉತ್ತಮವಲ್ಲ. ಅದೇ ರೀತಿಯಲ್ಲಿ ಮೋಡದ ವಾತಾವರಣವೂ ಸಹ.
- ಈ ಸಮಯದಲ್ಲಿ ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿ ದ್ಯುತಿ ಸಂಸ್ಲೇಶಣ ಕ್ರಿಯೆ ನಡೆಸುವುದಿಲ್ಲ.
- ಮೋಡ ಕವಿದ ವಾತಾವರಣದಲ್ಲಿ ಕೀಟಗಳು, ಪತಂಗಗಳು ಹೆಚ್ಚು ಹೆಚ್ಚು ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಹೊಂದುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.
- ಪ್ರತಿಯೊಂದು ಬೆಳೆಗೂ ಇಂತಿಷ್ಟೇ ಬಿಸಿಲು ಬೇಕು ಎಂದಿದೆ. ಇದನ್ನು ಲಕ್ಸ್ ಮಾಪನದಲ್ಲಿ ಅಳತೆ ಮಾಡುತ್ತಾರೆ. ಹೆಚ್ಚಾದರೂ ತೊಂದರೆ ಕಡಿಮೆಯಾದರೂ ತೊಂದರೆ.
ದ್ರಾಕ್ಷಿ ಬೆಳೆಗಾರರು ಯಾವಾಗಲೂ ತೋಟಕ್ಕೆ ಸಿಂಪರಣೆ ಮಾಡಲು ಔಷಧಿ ಮತ್ತು ಸಾಧನವನ್ನು ಸನ್ನದ್ಧವಾಗಿಯೇ ಇಟ್ಟಿರುತ್ತಾರೆ, ಯಾಕೆಂದರೆ ಒಂದು ಗಂಟೆ ಮೋಡ ಕವಿದ ವಾತಾವರಣ ಇದ್ದರೆ ಸಾಕು ಕಾಯಿಗಳು ಒಡೆದುಕೊಳ್ಳುತ್ತವೆ. ಹಾಳಾಗುತ್ತವೆ. ಇದನ್ನು ಉಳಿಸಲು ಆ ಸಮಯದಲ್ಲೇ ಸಿಂಪರಣೆ ಮಾಡುತ್ತಾರೆ.
- ಅದೇ ರೀತಿಯಲ್ಲಿ ಅಧಿಕ ಆದಾಯದ ದಾಳಿಂಬೆ ಬೆಳೆಗಾರರೂ ಸಹ. ಮೋಡ ಬಂತೆಂದರೆ ಸಿಂಪರಣೆ ಪ್ರಾರಂಭಿಸುತ್ತಾರೆ.
- ತೋಟದ ಬೆಳೆಗಳು, ಕೃಷಿ ಬೆಳೆಗಳು, ತರಕಾರಿ ಬೆಳೆಗಳು ಎಲ್ಲದಕ್ಕೂ ಮೋಡಕವಿದ ವಾತಾವರಣ ತುಂಬಾ ನಷ್ಟವನ್ನು ಉಂಟು ಮಾಡುತ್ತದೆ.
- ಗೇರು ಮರದ ಹೂವು, ಮಾವಿನ ಹೂವು ಕರಳುತ್ತದೆ. ಭತ್ತದ , ಗೋಧಿಯ ಎಲೆಯು ಹಳದಿ ಬಣ್ಣಕ್ಕೆ ತಿರುಗುತ್ತದೆ.
- ಗರಿ ತಿನ್ನುವ – ಬುಡ ತಿನ್ನುವ ಹುಳಗಳು ಜಾಸ್ತಿಯಾಗುತ್ತವೆ.
ಏನು ಪರಿಹಾರ:
- ಬೆಳೆಗೆ ಹಾನಿಯಾಗುವುದು ಮೋಡದ ಪರಿಣಾಮದಿಂದ ಅಲ್ಲ. ಮೊಡ ಅದಕ್ಕೆ ಪೂರಕ ಅಷ್ಟೇ.
- ಮೋಡ ಕವಿದ ವಾತಾವರಣ ಎಲ್ಲಾ ನಮೂನೆಯ ಕೀಟ ಮತ್ತು ರೋಗಕಾರಕಗಳಿಗೆ ಅಧಿಕ ಚಟುವಟಿಕೆಗೆ ಅನುಕೂಲಕರ ವಾತಾವರಣ.
- ಬೆಳೆ ಸಂರಕ್ಷಣೆಗೆ ಬಳಕೆ ಮಾಡುವ ಕೀಟ ನಾಶಕ ರೋಗ ನಾಶಕಗಳನ್ನು ಮೋಡ ಕವಿದ ವಾತಾವರಣ ಇರುವಾಗ ಸಿಂಪಡಿಸಿದರೆ ಕೀಟ – ರೋಗಕಾರಕಗಳನ್ನು ನಾಶ ಮಾಡಬಹುದು.
- ಮೋಡ ಕವಿದ ವಾತಾವರಣ ಎರಡು ಮೂರು ದಿನ ಮುಂದುವರಿದಲ್ಲಿ ಜೊತೆಗೆ ತುಂತುರು ಮಳೆಯೂ ಬಂದರೆ ಆ ಸಮಯದಲ್ಲಿ ಇದ್ದ ಬೆಳೆಯೆಲ್ಲಾ ಹಾಳಾಗುತ್ತದೆ.
- ಆಗ ತಕ್ಷಣ ಸಿಂಪರಣೆ ಮಾಡಿ ಬೆಳೆ ಉಳಿಸಿಕೊಳ್ಳಲೇ ಬೇಕಾಗುತ್ತದೆ.
ಈ ಸಮಯದಲ್ಲಿ ಬೆಳೆಗಳಿಗೆ ಹಾನಿಮಾಡುವ ಎಲ್ಲವೂ ತಮ್ಮ ಉಪಟಳವನ್ನು ಪ್ರಾರಂಭಿಸುತ್ತವೆ.
ಹೂ ಬಿಡುವ ಮಿಡಿ ಹಂತದ ಬೆಳವಣಿಗೆಯ ಸಮಯದಲ್ಲಿ ಮೋಡ ಬಂದರೆ 50 % ಕ್ಕೂ ಹೆಚ್ಚು ಬೆಳೆ ನಷ್ಟವಾಗುತ್ತದೆ. ಆ ಸಮಯದಲ್ಲಿ ಹೊಲದಲ್ಲಿ ಕೃಷಿ ತ್ಯಾಜ್ಯಗಳನ್ನು ರಾಶಿ ಹಾಕಿ ಹೊಗೆ ಹಬ್ಬಿಸಿದರೆ ಕೀಟಗಳಿಗೆ ಕಿರಿ ಕಿರಿ ಉಂಟಾಗಿ ಸ್ವಲ್ಪ ಹತೋಟಿಯಾಗುತ್ತದೆ ಎಂಬುದು ಸಂಶೋಧನೆಗಳಿಂದ ದೃಧಪಟ್ಟಿದೆ.