ಉಡುಪಿ ಜಿಲ್ಲಾಧಿಕಾರಿಗಳು ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟವರಿಗೆ ನೋಟಿಸು ಜ್ಯಾರಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದು ಈಗಿನ ಕಾಲಕ್ಕೆ ಸಯೋಚಿತ ನಿರ್ಧಾರ ಎನ್ನಬಹುದು.
- ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಜನ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು ವಿರೋಧಿಸಿದ್ದಾರೆ.
- ಜನರ ಅಭಿಪ್ರಾಯವೂ ಸತ್ಯ. ಆದರೆ ಎಲ್ಲಾ ಸಮಸ್ಯೆಗಳ ಮೂಲ ಬೇರು ಇರುವುದು, ಪಾಳು ಬಿದ್ದ ಜಮೀನಿನಲ್ಲೇ ಎಂಬುದು ಸತ್ಯ.
- ಇಂತಹ ಜಿಲ್ಲಾಧಿಕಾರಿಗಳು, ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಳಕಳಿ ಉಳ್ಳ ಜನ ಪ್ರತಿನಿಧಿಗಳು ಇದ್ದರೆ ಭವಿಷ್ಯದಲ್ಲಿ ಕೃಷಿ ಉಳಿಯಲು ಸಾಧ್ಯ.
ಬದಲಾವಣೆ ಅಗತ್ಯ:
- ನಮ್ಮಲ್ಲಿ ಈಗಿನ ಭೂ ಬಳಕೆಯನ್ನು ಗಮನಿಸಿದರೆ ಇನ್ನೊಂದು ರೈತ ಸ್ನೇಹೀ ಭೂ ಸುಧಾರಣಾ ಕಾಯಿದೆಯ ಅಗತ್ಯ ಕಂಡು ಬರುತ್ತದೆ.
- ಒಂದು ಕಾಲದಲ್ಲಿ ನಮಗೆ ಬದುಕಲು ಕೃಷಿಯೇ ಆಧಾರ ಎಂದು ಭೂಮಿ ಪಡೆದುಕೊಂಡ ಜನ, ಇಂದು ಅದು ಪೂರೈಸುವುದಿಲ್ಲ ಎಂದು ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟು, ಬೇರೆ ವೃತ್ತಿ ಮಾಡುತ್ತಿದ್ದಾರೆ.
- ಉಳುವವನನ್ನೇ ಹೊಲದೊಡೆಯ ಮಾಡಿದರೂ ಅವರು ಉಳುವುದನ್ನು ಬಿಟ್ಟಿದ್ದಾನೆ.
- ಭೂಮಿಯನ್ನು ಮಾರಾಟ ಮಾಡಿದ್ದಾನೆ ಅಥವಾ ಸಾಗುವಳಿ ಮಾಡದೆ ಹಾಗೆಯೇ ಉಳಿಸಿದ್ದಾನೆ.
- ಇದರ ಕಾರಣದಿಂದ ಒಂದು ಹೊಲದಲ್ಲಿ ಬೆಳೆ ಮತ್ತೊಂದು ಹೊಲದಲ್ಲಿ ಕಾಡು ಬೆಳೆದು ಕೃಷಿ ಮಾಡುವವರಿಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ.
- ಆಸಕ್ತಿಯಿಂದ ಕೃಷಿ ಮಾಡುತ್ತಿರುವವರಿಗೂ ಕೃಷಿ ಬೇಡ ಎನ್ನಿಸುವಷ್ಟು ಕಾಡು ಪ್ರಾಣಿಗಳಾದ ಮಂಗ, ಕಾಡು ಹಂದಿ, ಕಾಡು ಕೋಣ, ಮುಳ್ಳು ಹಂದಿ, ನವಿಲು ಮುಂತಾದವುಗಳ ಉಪಟಳ ಜಾಸ್ತಿಯಾಗಿದೆ. ಇದಕ್ಕೆಲ್ಲಾ ಒಂದು ಪರಿಹಾರ ಬೇಕಾಗಿದೆ.
ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ರವರು ಕೊಟ್ಟ ಹೇಳಿಕೆ ತುಂಬಾ ಅರ್ಥಪೂರ್ಣವಾಗಿದೆ. ಸರಕಾರಿ ಅಧಿಕಾರಿಯಾಗಿದ್ದು ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಂಡದ್ದಕ್ಕೆ ಇವರಿಗೆ ಧನ್ಯವಾದ ಹೇಳಬೇಕು.
ಭೂ ಒಡೆತನ:
- ಭಾರತ ದೇಶದಲ್ಲಿ ಭೂಮಿಯ ಒಡೆತನ ಎಂಬುದು ಒಂದು ಗೌರವದ ವಿಷಯ.
- ಭೂಮಿ ಎಂದರೆ ಅದು ಒಂದು ಶಾಶ್ವತ ಆಸ್ತಿ ಎಂದು ತಿಳಿದು ಎಲ್ಲರೂ ಭೂಮಿಯ ಒಡೆತನ ಬಯಸುತ್ತಾರೆ.
- ಕೆಲವರಿಗೆ ಭೂ ಒಡೆತನ ಜೀವನ ಹೊರೆಯುವ ಕೃಷಿ ವೃತ್ತಿ ಮಾಡಲು, ಮತ್ತೆ ಕೆಲವರಿಗೆ ಇದು ಯಾವಾಗಾದರೂ ಮಾರಾಟ ಮಾಡಲು.
- ಮೊದಲ ವರ್ಗದಲ್ಲಿ ಭೂ ಹಿಡುವಳಿ ಕಡಿಮೆ ಇದೆ. ಎರಡನೇ ವರ್ಗದಲ್ಲಿ ಹಿಡುವಳಿ ಹೆಚ್ಚು ಇದೆ.
- ಎರಡನೇ ವರ್ಗ ಕೃಷಿ ಮಾಡದೆ ಭೂಮಿಯನ್ನು ಅನುತ್ಪಾದಕವಾಗಿ ಬಿಡುವವರು.
- ನಮ್ಮ ದೇಶದ ಕಾನೂನಿನಲ್ಲಿ ಭೂಮಿಯನ್ನು ಉಳುಮೆ ಮಾಡುವವನು ಅನುಭೋಗಿಸಲು ಹಕ್ಕು ಹೊಂದಿದ್ದಾನೆಯೇ ಹೊರತು ಅದನ್ನು ಪಾಳು ಬಿಡಲು ಅವಕಾಶ ಇಲ್ಲ.
- ಭೂಮಿಯ ಮೇಲೆ ಸಾರ್ವಬೌಮ ಹಕ್ಕು ಸರಕಾರದ್ದೇ ಇರುತ್ತದೆ. ಇದನ್ನು ಶಿಸ್ತು ಬದ್ಧವಾಗಿ ಪಾಲನೆ ಮಾಡಲಾಗುತ್ತಿಲ್ಲ ಅಷ್ಟೇ.
- ಕೃಷಿ ಕ್ಷೇತ್ರ ಭವಿಷ್ಯದಲ್ಲಿ ಸುಸ್ಥಿರವಾಗಿ ಉಳಿಯಬೇಕಿದ್ದರೆ ಕೆಲವು ಬದಲಾವಣೆಗಳು ಅಗತ್ಯ.
ಕೃಷಿಯ ಕಷ್ಟ:
- ಕೃಷಿ ಕ್ಷೇತದಲ್ಲಿ ಹೊಸ ತಲೆಮಾರು ಆಸಕ್ತಿ ತೋರುತ್ತಿಲ್ಲ. ಇತರ ಉದ್ಯೋಗಗಳಿಗೆ ಹೋಲಿಸಿದಾಗ ಕೃಷಿ ಉತ್ಪತ್ತಿ ತುಂಬಾ ಕಡಿಮೆ ಇದೆ.
- ಹೊಲ ದೊಡ್ದದು ಮಾಡಿ ಬದಲಾವಣೆ ಮಾಡಲು ಈಗಿನ ಭೂಮಿಯ ಬೆಲೆ ಲಾಭದಾಯಕವಲ್ಲ .
- ವಾತಾವರಣದೊಂದಿಗೆ ಸೆಣಸಾಡಿ ಕೃಷಿ ಮಾಡುವುದು ತುಂಬಾ ರಿಸ್ಕ್ ಉಳ್ಳ ಕಸುಬು.
- ಕೃಷಿಯಲ್ಲಿ ಆದಾಯ ಸ್ಥಿರತೆ ಮತ್ತು ಭದ್ರತೆ ಇದ್ದರೆ ಮಾತ್ರ ಹೊಸ ತಲೆಮಾರು ಅದರಲ್ಲಿ ಆಸಕ್ತರಾಗಲು ಸಾಧ್ಯ.
- ಎಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡರೆ ಅದು ಓವರ್ ಕ್ರೌಡ್ ಆಗಿ ಅದು ಅನುತ್ಪಾದಕವೇ ಆಗುತ್ತದೆ.
- ಯಾರು ನೈಜ ಆಸಕ್ತರೋ ಅವರು ಮಾತ್ರ ಉಳಿದುಕೊಂಡರೆ ಮಾತ್ರ ಅದು ಮುನ್ನಡೆಯಬಲ್ಲುದು.
ಇದು ಅಗತ್ಯ:
- ಕೃಷಿ ಭೂಮಿಯನ್ನು ನಗದೀಕರಣದ ಆಸ್ತಿಅಲ್ಲ ಎಂದು ಪರಿಗಣಿಸಬೇಕು. ಇದು ಬಹುತೇಕ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಪರಿಹಾರ. ಜನ ಕಾನೂನು ಹೋರಾಟ ಬಿಡುತ್ತಾರೆ. ಯಾರಿಗೆ ಕೃಷಿ ಲಾಭದಾಯಕ ಎಂದು ಕಾಣುತ್ತದೆಯೋ ಅವರು ಮಾತ್ರ ಅಲ್ಲಿ ಉಳಿಯುತ್ತಾರೆ.
- ಯಾರೂ ಕೃಷಿ ಭೂಮಿಯನ್ನು ಮಾರಾಟ ಮಾಡಬಾರದು. ತಮಗೆ ಸಾಗುವಳಿ – ಕೃಷಿ ಮಾಡುವುದು ಸಾಧ್ಯವಿಲ್ಲವಾದರೆ ಅದನ್ನು ಮಾಡುವ ಆಸಕ್ತರಿಗೆ ಬಿಟ್ಟು ಕೊಡಬೇಕು. ಈ ಹಿಂದಿನ ಭೂ ಸುಧಾರಣಾ ಕಾಯಿದೆಯಂತೆ ಪಡೆದ ಭೂಮಿ ಪಾಳು ಬಿದ್ದಿದ್ದರೆ ಅದನ್ನು ತಕ್ಷಣ ಸರಕಾರ ಸ್ವಾದೀನ ಪಡಿಸಿ ಬೇಸಾಯ ಮಾಡುವವರಿಗೆ ಕೊಡಬೇಕು.
- ಭೂ ಬಳಕೆ ಮಾಡಿ ಬೆಳೆ ಬೆಳೆಯುವಾಗ ಉತ್ಪಾದನೆಯ ಮಿತಿಯನ್ನು ನಿಗದಿಗೊಳಿಸಬೇಕು. ಕಾಟಾಚಾರಕ್ಕೆ ಕೃಷಿ ಮಾಡುವುದು ನಿಲ್ಲಬೇಕು.
- ಪ್ರಾದೇಶಿಕವಾಗಿ ಬೆಳೆಯುತ್ತಿರುವ ಬೆಳೆಗಳಿಗೆ ಪೂರಕವಾಗಿರುವ ಬೆಳೆಗಳನ್ನೇ ಬೆಳೆಯಲು ಅನುಮತಿ ನೀಡಬೇಕು. ಒಂದೆಡೆ ಕಾಡು, ಮತ್ತೊಂದೆಡೆ ತೋಟಗಳು ಆಗಿ ಈಗ ಸಮಸ್ಯೆ ಉಂಟಾಗಿದೆ.
- ಅರಣ್ಯ ಭೂಮಿ ಅದು ಸರಕಾರದ್ದಿರಲಿ- ಖಾಸಗಿಯದ್ದಿರಲಿ ಮರ ಮಟ್ಟು ಕಡಿದು ಕೃಷಿಗೆ ಒಳಪಡಿಸುವುದನ್ನು ತಡೆಯಬೇಕು. ಆಗ ಅರಣ್ಯದ ಪ್ರಾಣಿಗಳು ಅಲ್ಲೇ ಇರುತ್ತವೆ.
ಸಾರ್ವಜನಿಕರು ಸರಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯವನ್ನು ಮಾಡಬೇಕು. ಇದು ಒಂದೇ ಕೃಷಿ ಉಳಿಸಲು ಇರುವ ಪರಿಹಾರ.
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ: