ಕೆಲವು ಸಸ್ಯಗಳ ಬೇರಿನ ಮೇಲೆ ಗಂಟು ಗಂಟು ರಚನೆ ಕಾಣಿಸುತ್ತದೆ. ಇದು ಏನು? ಯಾಕೆ ಆಗುತ್ತದೆ?ಇದರಿಂದ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ.
ಕೆಲವು ನಿರ್ದಿಷ್ಟ ಸಸ್ಯಗಳಲ್ಲಿ ಮಾತ್ರ ಬೇರಿನ ಸನಿಹದಲ್ಲಿ ಗಂಟುಗಳನ್ನು ಕಾಣಬಹುದು. ಇವು ಪ್ರಕೃತಿಯ ಕೊಡುಗೆ. ದ್ವಿದಳ ಸಸ್ಯಗಳಲ್ಲಿ ಮಾತ್ರ ಇಂತಹ ಗಂಟು Root Nodules ರಚನೆಗಳನ್ನು ಕಾಣಬಹುದು. ಬೇರಿನಲ್ಲಿ ಬರುವ ಎಲ್ಲಾ ಗಂಟುಗಳೂ ಒಂದೇ ಅಲ್ಲ. ಕೆಲವು ಜಂತುಹುಳುಗಳ (root-knot nematode) ಕಾಟದಿಂದಲೂ ಆಗುತ್ತದೆ. ಜಂತು ಹುಳುಗಳಾಗಿದ್ದರೆ ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ. ಸಸ್ಯದ ಬೆಳವಣಿಗೆ ಕುಂಠಿತವಾಗಿ ಕೊನೆಗೆ ಸಾಯುತ್ತದೆ. ಇದು ಮಾತ್ರ ಹಾಗಲ್ಲ. ಸಸ್ಯವೊಂದು ತನ್ನ ನಿರ್ದಿಷ್ಟ ಬೆಳವಣಿಗೆ ಆದ ತಕ್ಷಣ (ಹೂ ಬರುವ ಸಮಯಕ್ಕೆ) ಬೇರಿನ ಸನಿಹದಲ್ಲಿ ಗಂಟುಗಳು ಬೆಳೆಯಲಾರಂಭಿಸುತ್ತದೆ. ಜೊತೆಗೆ ಬೇರಿನ ಬೆಳವಣಿಗೆಯೂ ಆಗುತ್ತಲೇ ಇರುತ್ತದೆ. ಇದು ದ್ವಿದಳ ಸಸ್ಯಗಳು ವಾತಾವರಣದಿಂದ ಪೋಷಕಾಂಶಗಳನ್ನು ಸೆಳೆದುಕೊಂಡು ಮಣ್ಣಿಗೆ ಒದಗಿಸಿಕೊಡುವ ಪ್ರಕ್ರಿಯೆ. ಈ ಪ್ರಕ್ರಿಯೆಗೆ ನೆರವಾಗುವಂತದ್ದು ಸೂಕ್ಷ್ಮಾಣುಜೀವಿ ಬ್ಯಾಕ್ಟೀರಿಯಾಗಳು.
ಬ್ಯಾಕ್ಟೀರಿಯಾ ಹೇಗೆ ಕೆಲಸ ಮಾಡುತ್ತದೆ?
- ಸಸ್ಯಗಳ ಬೇರಿನ ಸುತ್ತಮುತ್ತ ಹಲವಾರು ಸೂಕ್ಷ್ಮಾಣು ಜೀವಿಗಳು ಇರುತ್ತದೆ.
- ಇವುಗಳಲ್ಲಿ ಕೆಲವು ರೋಗ ನಿರೋಧಕವಾಗಿ , ಇನ್ನು ಕೆಲವು ರೋಗ ಕಾರಕವಾಗಿ ಹಾಗೆಯೇ ಕೆಲವು ವಾತಾವರಣದಿಂದ ಪೊಷಕಾಂಶವನ್ನು ಮಣ್ಣಿಗೆ ಸ್ಥಿರೀಕರಿಸಿಕೊಡುವ ಕೆಲಸವನ್ನು ಮಾಡುತ್ತವೆ.
- ಮುಖ್ಯವಾಗಿ ಸಾರಜನಕ ಎಂಬ ಪೋಷಕವನ್ನು ಕೆಲವು ಸಸ್ಯಗಳು ತಮ್ಮ ಬೇರುಗಳಲ್ಲಿರುವ ಬ್ಯಾಕ್ಟೀರಿಯಾಗಳು ಸ್ಥಿರೀಕರಿಸಿಕೊಡುತ್ತವೆ.
- ಬೇರಿನ ಸನಿಹದಲ್ಲಿ ಬ್ಯಾಕ್ಟೀರಿಯಾಗಳು ಗಂಟು ರಚನೆಯ ಮೂಲಕ ಇದ್ದುಕೊಂಡು ವಾತಾವರಣದ ಸಾರಜನಕವನ್ನು ಹೀರಿ ಅದನ್ನು ಸಾವಯವ ಸಾರಜನಕವಾಗಿ ಪರಿವರ್ತಿಸಿ ಸಸ್ಯಕ್ಕೆ ಒದಗಿಸಿಕೊಡುತ್ತವೆ.
- ಈ ಸಾರಜನಕ ಪೋಷಕದ ಸಹಾಯದಿಂದ ಸಸ್ಯಗಳು ಹೆಚ್ಚು ಹೆಚ್ಚು ಎಲೆಗಳನ್ನು ಬಿಟ್ಟು ಹುಲುಸಾಗಿ ಬೆಳೆಯುತ್ತವೆ.
- ಯಾವ ಸಸ್ಯದ ಬೇರಿನಲ್ಲಿ ಬ್ಯಾಕ್ಟೀರಿಯಾಗಳು ಆಶ್ರಯ ಪಡೆಯುತ್ತದೆಯೋ ಅದನ್ನು ಹೋಸ್ಟ್ ಪ್ಲಾಂಟ್ ಎನ್ನುತ್ತೇವೆ.
- ಹೋಸ್ಟ್ ಪ್ಲಾಂಟ್ ನಲ್ಲಿರುವ ಪ್ಲೇವನಾಯ್ಡ್ಸ್ ಎಂಬ ವಸ್ತು ಬ್ಯಾಕ್ಟೀರಿಯಾಗಳನ್ನು ತನ್ನತ್ತ ಆಕರ್ಷಿಸುತ್ತದೆ.
- ಮುಖ್ಯ ಬೇರು ಮತ್ತು ಎಲ್ಲಾ ಕವಲು ಬೇರುಗಳಲ್ಲೂ ಈ ಬ್ಯಾಕ್ಟೀರಿಯಾಗಳು ಆಶ್ರಯಪಡೆಯುತ್ತವೆ.
- ಇದನ್ನು Biological naitrogen fixation ಎನ್ನುತ್ತಾರೆ.
ಇದು ಸಾವಯವ ಸಾರಜನಕ ಮೂಲ:
- ವಾತಾವಾರಣದಿಂದ ಸಾರಜನಕ ಸ್ಥಿರೀಕರಿಸಿಕೊಡುವಿಕೆ ಕೋಡುಗಳಾಗುವ ದ್ವಿದಳ ಧಾನ್ಯದ ಸಸ್ಯಗಳಲ್ಲಿ ಮಾತ್ರ ಕಂಡುಬರುತ್ತದೆ.
- ನಮ್ಮ ಸುತ್ತಮುತ್ತ ಬೆಳೆಯುವ ಕೆಲವು ತರಕಾರಿಗಳು ( ಅಲಸಂಡೆ, ಬೀನ್ಸ್, ಅವರೆ ಇತ್ಯಾದಿ) ಎಣ್ಣೆ ಕಾಳು ಬೆಳೆಗಳಾದ ನೆಲಕಡ್ಲೆ, ಸೋಯಾ ಅವರೆ, ಕಡಲೆ ಇತ್ಯಾದಿ) ಹೂವಿನ ಗಿಡಗಳಾದ ಶಂಕಪುಷ್ಪ, ಕಳೆ ಗಿಡಗಳಾದ ಸೆಣಬು, ಸಸ್ಬೇನಿಯಾ, ಕ್ರೊಟೊಲೇರಿಯಾ, ಗ್ಲೆರಿಸೀಡಿಯಾ ಪ್ಯುರೇರಿಯಾ ಇತ್ಯಾದಿಗಳು ಇದಕ್ಕೆ ಉದಾಹರಣೆ.
- ನಮ್ಮ ಸುತ್ತಮುತ್ತ ಇವೆಲ್ಲಾ ಸಸ್ಯಗಳಿದ್ದು, ಅವು ಪ್ರಾಕೃತಿಕ ಸಾರಜನಕವನ್ನು ವಾತಾವರಣದಿಂದ ತಮ್ಮ ಬೇರುಗಳ ಗಂಟುಗಳ ಮೂಲಕ ಮಣ್ಣಿಗೆ ಸ್ಥಿರೀಕರಿಕೊಡುತ್ತವೆ.
- ಬೇರಿನಲ್ಲಿರುವ ಗಂಟುಗಳೇ ಬ್ಯಾಕ್ಟೀರಿಯಾಗಳು.
- ಇದು ಸಸ್ಯಗಳಿಗೆ ತ್ವರಿತವಾಗಿ ಯಾವುದೇ ಬಂಧ (bonding) ಇಲ್ಲದೆ ಸಿಗುವಂತದ್ದು.
- ದ್ವಿದಳ ಸಸ್ಯಗಳು ಎಷ್ಟೇ ಹುಲುಸಾಗಿ ಬೆಳೆದರೂ ತಮ್ಮ ಬೆಳವಣಿಗೆಗೆ ಬೇಕಾದ ಹೆಚ್ಚಿನ ಪೋಷಕವನ್ನು ತಾವಾಗಿಯೇ ತಯಾರಿಸಿಕೊಳ್ಳುತ್ತವೆ.
- ಇವುಗಳನ್ನು ಮಣ್ಣಿಗೆ ಸೇರಿಸುವುದರಿಂದ ಉಳಿದ ಬೆಳೆಗಳಿಗೆ ಸಾರಜನಕ ಲಭ್ಯವಾಗುತ್ತದೆ.ಕೃತಕ ಮೂಲದ ನಾವು ಒದಗಿಸುವ ಸಾರಜನಕ ಗೊಬ್ಬರಗಳಲ್ಲಿ ಸುಮಾರು 50% ನಷ್ಟವಾಗಿ ಹೋಗುತ್ತದೆ.
- ಇದು ಹಾಗಾಗುವುದಿಲ್ಲ. ಅದಕ್ಕಾಗಿಯೇ ಹೊಲದಲ್ಲಿ ಸೆಣಬು, ಸಸ್ಬೇನಿಯಾ, ಡಯಂಚಾ, ಹುರುಳಿ ಮುಂತಾದ ಬೆಳೆಗಳನ್ನು ಬೆಳೆದು ಅವು ಹೂವಾಗುವ ಮುಂಚೆ ಮಣ್ಣಿಗೆ ಸೇರಿಸಬೇಕು ಎನ್ನುವುದು.
- ಈ ಸಾರಜನಕ ದೊರಕಿಸಿಕೊಡುವ ಜೀವಾಣು (ಬ್ಯಾಕ್ಟೀರಿಯಾಗಳು)Rhizobium. ಬೇರಿನಲ್ಲಿ ಗಂಟುಗಳ ತರಹ ಇರುವಂತದ್ದು ರೈಜ಼ೋಬಿಯಂ ಬ್ಯಾಕ್ಟೀರಿಯಾ.
- ಇದು ಮಾತ್ರ ಗಂಟುಗಳ ರೂಪದಲ್ಲಿ ಸಸ್ಯ ಬೇರುಗಳ ಜೊತೆಗೆ ಸಹಜೀವನ ನಡೆಸುವಂತದ್ದು.
- ಅಝೋಸ್ಪರಿಲಂ Azosprillum ಮತ್ತು ಅಜ಼ಟೋಬ್ಯಾಕ್ಟರ್ ಎಂಬುದು ಬೇರಿನ ಸುತ್ತ, ಮಣ್ಣಿನಲ್ಲಿ ಇರುವ ಜೀವಾಣುವಾಗಿದ್ದು, ಇದೂ ಸಹ ಸಾರಜನಕವನ್ನು ವಾತಾವರಣದಿಂದ ಸಾರಜನಕವನ್ನು ಹೀರಿಕೊಂಡು ಸಸ್ಯಗಳಿಗೆ ಒದಗಿಸಿಕೊಡುತ್ತವೆ.
- ಇದು ಏಕದಳ ಸಸ್ಯಗಳ ಬೇರಿನ ಸುತ್ತ ಇರುತ್ತವೆ. ರೈಜೋಬಿಯಂ ಗೂ ಇದಕ್ಕೂ ವ್ಯತ್ಯಾಸ ಇದೆ.
- ರಸ ಗೊಬ್ಬರ ಅಥವಾ ತೀಕ್ಷ್ಣ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಿದಾಗ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ.
- ಇದನ್ನು ಮತ್ತೆ ಹೆಚ್ಚಿಸುವುದಕ್ಕೋಸ್ಕರ ಜೀವಾಣು ಗೊಬ್ಬರದ ರೂಪದಲ್ಲಿ ಇದನ್ನು ಒದಗಿಸಬೇಕಾಗುತ್ತದೆ.
ಅಜೋಸ್ಪರಿಲ್ಲಂ ನ ಕೆಲಸ ಏನು:
- ಇದು ಸ್ವತಂತ್ರವಾಗಿ ಬದುಕುವ ಒಂದು ಬ್ಯಾಕ್ಟೀರಿಯಾ free living nitrogen fixing bacterium. ಹೆಚ್ಚಾಗಿ ಇದು ಹುಲ್ಲು ಹೆಚ್ಚು ಇರುವ ಮಣ್ಣಿನಲ್ಲಿ ಇರುತ್ತದೆ.
- ಆಜೋಸ್ಪರಿಲ್ಲಂ ಎಂಬುದು ತನ್ನ ಚಟುವಟಿಕೆ ಮೂಲಕ ಸಸ್ಯ ಬೆಳವಣಿಗೆ ಪ್ರಚೋದಕವಾಗಿಯೂ ಕೆಲಸ ಮಾಡುತ್ತದೆ.
- ಅನೇಕ ಅಜೋಸ್ಪರಿಲ್ಲಂ ಗಳು ಸಸ್ಯ ಹಾರ್ಮೋನುಗಳನ್ನು ಹೊರ ಹಾಕುತ್ತವೆ.
- ಇದು ಸಸ್ಯಗಳ ಬೇರಿನ ಬೆಳವಣಿಗೆಯನ್ನು ಪ್ರಚೋದಿಸುತ್ತದೆ.
- ಬೇರುಗಳಲ್ಲಿ ಹೆಚ್ಚು ಹೆಚ್ಚು ಕವಲು ಬೇರುಗಳು, ಕೂದಲು ಬೇರುಗಳು ಬೆಳೆಯುತ್ತವೆ.
- ಇದರಿಂದಾಗಿ ಸಸ್ಯಗಳು ಹೆಚ್ಚು ನೀರನ್ನು, ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿಯಾಗುತ್ತದೆ.
- ಇಷ್ಟೇ ಅಲ್ಲದೆ ಈ ಬ್ಯಾಕ್ಟೀರಿಯಾವು ಬೆಳೆಗಳಿಗೆ ಸಾರಜನಕ ಮತ್ತು ರಂಜಕವನ್ನು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುತ್ತದೆ.
- ಅಜೋಸ್ಪರಿಲಂ ಆಂಟಿ ಆಕ್ಸಿಡೆಂಟ್ ಗಳನ್ನು ಬಿಡುಗಡೆ ಮಾಡುವ ಕಾರಣ ಸಸ್ಯಗಳು, ಬರ ಮತ್ತು ಪ್ರವಾಹ ದಂತಹ ಒತ್ತಡದಲ್ಲಿ ಬೇರುಗಳನ್ನು ರಕ್ಷಿಸುತ್ತದೆ.
- ರೋಗ ನಿರೋಧಕವಾಗಿಯೂ (immune system)ಕೆಲಸ ಮಾಡುತ್ತದೆ.
- ಬೇರುಗಳ ಮೇಲೆ ಧಾಳಿ ಮಾಡುವ ರೋಗಕಾರಕಗಳ ವಿರುದ್ಧ (Ristrict tha attach of pathogens) ಹೋರಾಡುತ್ತದೆ.
ಅಝಟೋಬ್ಯಾಕ್ಟರ್ ಬ್ಯಾಕ್ಟೀರಿಯಾ:
- ಪರಾವಲಂಭಿಯಾಗಿ ಬದುಕುವ ಬ್ಯಾಕ್ಟೀರಿಯಾ.ಇದು ಮಣ್ಣಿನ ಮೇಲ್ಮೈಯಲ್ಲಿ ವಾಸಿಸುವ ಬ್ಯಾಕ್ಟೀರಿಯಾ.
- ಇವು ಬದುಕಲು ಹೆಚ್ಚು ಆಮ್ಲಜನಕದ ಅವಷ್ಯಕತೆ ಇರುತ್ತದೆ.ಮಣ್ಣಿನ ಅಡಿಯಲ್ಲೂ ಬದುಕಬಲ್ಲವು.
- ಆದರೆ ಅದರ ಕೆಲಸವನ್ನು ಅಷ್ಟು ಸಮರ್ಪಕವಾಗಿ ಮಾಡಲಾರವು.
- ಸಾರಜನಕ ಸ್ಥಿರೀಕರಣ, ಬೆಳವಣಿಗೆಯ ಹಾರ್ಮೋನು ಉತ್ಪಾದನೆ,PGPR ರಂಜಕ ಕರಗುವಂತೆ ಮಾಡುವುದು, ಅಂತರ್ಗತ ರೋಗ ನಿಯಂತ್ರಣವಾಗಿ ಕೆಲಸ ಮಾಡುತ್ತದೆ.
- ಮಣ್ಣಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಝಟೋಬ್ಯಾಕ್ಟರ್ Azotobactor ಉತ್ತಮ ಜೈವಿಕ ಗೊಬ್ಬರ.
- ಸಾರಜನಕ ಸ್ಥಿರೀಕರಿಸುವ ಗುಣಕ್ಕಾಗಿ ಇದನ್ನು ಬಳಸಲಾಗುತ್ತದೆ.
- ಈ ಜೀವಾಣು ಆಕ್ಸಿನ್, ಸೈಟೋಕಿನ್ಸ್ ಜಿಬ್ಬರಲಿನ್ ಗಳನ್ನೂ ಬಿಡುಗಡೆ ಮಾಡುತ್ತವೆ.
- ಇದನ್ನು ಬೀಜಗಳಿಗೆ ಲೇಪನ ಮಾಡಿದರೆ ಅದರ ಜೀವಮಾನ ಪೂರ್ತಿ ರಕ್ಷಕವಾಗಿ ಇರುತ್ತದೆ.
ಇದು ತಟಸ್ಥ ಮತ್ತು ಸ್ವಲ್ಪ ದುರ್ಬಲ ಮಣ್ಣಿನಲ್ಲಿ ಕಾಣಸಿಗುತ್ತದೆ.ಆದರೆ ಆಮ್ಲೀಯ ಮಣ್ಣಿನಲ್ಲಿ ಇರುವುದಿಲ್ಲ. ಕಡಿಮೆ pH ಇರುವ ಮಣ್ಣಿನಲ್ಲಿ ಹೊರತಾಗಿ ಎಂತಹ ಕಠಿಣ ಮಣ್ಣಿನಲ್ಲೂ ಬದುಕಿರುತ್ತದೆ. ಇದು ಬೀಜಾಣು ರೂಪದಲ್ಲಿ ಮಣ್ಣಿನಲ್ಲಿ 24 ವರ್ಷಗಳ ವರೆಗೂ ಬದುಕಿರುತ್ತವೆ ಎನ್ನುತ್ತಾರೆ. ರೈಜ಼ೋಬಿಯಂ ಎಂಬುದು ಬೇರೆ ಸಸ್ಯದ ಜೊತೆಗೆ ಬದುಕಿ (ಸಹಜೀವನ)ಸಾರಜನಕ ಸ್ಥಿರೀಕರಿಸಿದರೆ ಇದು ಸ್ವತಂತ್ರವಾಗಿ ಸಾರಜನಕ ಸ್ಥಿರೀಕರಿಸಿಕೊಡುತ್ತದೆ.
ಇತ್ತೀಚೆಗೆ ನಮ್ಮ ಕೃಷಿ ಭೂಮಿ ಜೈವಿಕವಾಗಿ ತುಂಬಾ ಬಡವಾಗುತ್ತಿದೆ. ಸ್ವಭಾವಿಕ ರೋಗ ಹತೋಟಿ, ಸ್ವಾಭಾವಿಕ ಮಣ್ಣಿನ ಪೋಷಣ ಶಕ್ತಿ ಕುಗ್ಗುತ್ತಿದೆ. ಮಣ್ಣಿನ ರಚನೆಯ ನಿರ್ಮಾಣದಲ್ಲಿ ಪ್ರಾಮುಖ್ಯ ಅಂಶವಾದ ಜೈವಿಕ ರಚನೆ ಬಡವಾದರೆ ಕೃಷಿ ಬಹಳ ದುಬಾರಿಯಾಗುತ್ತದೆ. ಇದನ್ನು ಸರಿಪಡಿಸುವಲ್ಲಿ ನೈಸರ್ಗಿಕವಾಗಿ ಪೋಷಕ ಒದಗಿಸುವ ಜೀವಾಣುಗಳ ಅಗತ್ಯ ಇದೆ. ಅದಕ್ಕಾಗಿ ಕಳೆ ಇರಬೇಕಾದ ಸಮಯದಲ್ಲಿ ದ್ವಿದಳ ಜಾತಿಯ ಕಳೆ ಅಥವಾ ಮೇವನ್ನು ಹೊಲದಲ್ಲಿ ಬೆಳೆಸುವುದು ಅಗತ್ಯ. ಹೊರ ಮೂಲದ ಸಾರಜನಕ ಸ್ಥಿರೀಕರಣ ಜೀವಾಣು ಒದಗಿಸುವ ಅಭ್ಯಾಸವನ್ನು ಮಾಡಿಕೊಂಡರೆ ತುಂಬಾ ಅನುಕೂಲ.