ಅಮಟೆ- ಇದಕ್ಕೆ ಭಾರೀ ಔಷಧೀಯ ಗುಣ ಇದೆ.  

ಆಮಟೆ ಕಾಯಿ ಒಡೆದದ್ದು

ನಮ್ಮ ಹಿರಿಯರ ಆಹಾರಾಭ್ಯಾಸಗಳಲ್ಲಿ ಬಹಳ  ಶಿಸ್ತು, ಪೌಷ್ಠಿಕತೆ , ಔಷಧೀಯ ಮಹತ್ವ ಇತ್ತು. ಋತುಮಾನ ಆಧಾರಿತ ಆಹಾರವಸ್ತುಗಳನ್ನೇ ಬಳಸುವುದು ಅವರ ಕ್ರಮ. ಇಂತಹ ಆಹಾರಗಳಲ್ಲಿ  ಕೆಸು, ಅಮಟೆ, ಮಾವು, ಕುಡಿ,ಸೊಪ್ಪು ಮುಂತಾದವು ಸೇರಿವೆ.

  • ಹಿರಿಯರು  ಉಚಿತವಾಗಿ   ಲಭ್ಯವಿರುತ್ತಿದ್ದ  ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು.
  • ಅದು ಉಚಿತವಾಗಿದ್ದರೂ ಆರೋಗ್ಯಕ್ಕೆ ಉತ್ತಮವಾಗಿತ್ತು.
  • ಈಗ ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತುಗಳಲ್ಲಿ  ಆರೋಗ್ಯವನ್ನು  ಗಮನಿಸುವುದೇ ಇಲ್ಲ.
  • ಹಿಂದೆ ಮಳೆಗಾಲವೆಂಬ ಕಷ್ಟದ ಸಮಯದಲ್ಲಿ  ಅಡುಗೆಗೆ ಅಗ್ಗದಲ್ಲಿ ದೊರೆಯುವ ಹುಳಿ ಕಾಯಿ ಇದಾಗಿತ್ತು

ಅಮಟೆ ಕಾಯಿ

ಏನಿದು ಅಮಟೆ:

  •  ಅಮಟೆ , ಅಮ್ಟೆ, ಅಂಬಡೆ, ಅಂಬೋಡೆ ಎಂಬ ಹೆಸರುಗಳಲ್ಲಿ ಕರೆಯಲ್ಪಡುವ  ಹುಳಿ ರುಚಿಯ ಕಾಯಿ ಹಿಂದೆ ಪ್ರತೀ ಮನೆಯಲ್ಲೂ ಇದ್ದ ಮರ.
  • ಹುಣಸೆ ಹುಳಿಯ ಬದಲಿಗೆ ಇದನ್ನು ಬಳಕೆ ಮಾಡುತ್ತಿದ್ದರು.
  • ಚಳಿಗಾಲದಲ್ಲಿ ಮರವು ಎಲೆ ಉದುರಿಸಿ, ಹೂ ಬಿಟ್ಟು ಮಳೆಗಾಲಕ್ಕೆ ಕಾಯಿಗಳಾಗುತ್ತದೆ
  • ಮಳೆಗಾಲ ಮುಗಿಯುವ ತನಕವೂ ಕಾಯಿಗಳಿರುತ್ತವೆ
  • ಬೆಳೆದಂತೇ ಹಣ್ಣಾಗಿ ಉದುರುತ್ತದೆ. ಹಕ್ಕಿಗಳು, ಬಾವಲಿಗಳು, ಕೋತಿಗಳಿಗೆ ಅಹಾರವಾಗಿ ಬೀಜ ಪ್ರಸಾರವಾಗಿ ಸಸ್ಯಪ್ರಭೇಧವು ಉಳಿದಿದೆ.

ಇದು ಒಂದು ಔಷಧಿ:

  • ಆಮಟೆ  ಬರೇ ಬಾಯಿ ರುಚಿಯ ಅಡುಗೆಗೆ ಬಳಕೆ ಮಾಡುವುದಕ್ಕೆ ಮಾತ್ರವಲ್ಲ.
  • ಇದರಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ.
  • ಇದರ ಸೇವನೆಯಿಂದ ಕ್ಷಯ, ಭೇಧಿ, ಅತಿಸಾರ, ವಾಂತಿಗಳಿಗೆ ಇದು ಔಷಧಿಯಂತೆ.
  • ಇದರ  ಕಾಯಿಯಲ್ಲದೆ ಮರದ ತೊಗಟೆಯಲ್ಲಿ , ಬೇರಿನಲ್ಲಿ , ಹೂವಿನಲ್ಲಿಕ್ಯಾನ್ಸರ್ ಗುಣಪಡಿಸಬಲ್ಲ  ಗುಣ ಇದೆ ಎನ್ನಲಾಗುತ್ತದೆ.
  • ಬಾಂಗ್ಲಾ ದೇಶದಲ್ಲಿ ಇದರ ಆ್ಯಂಟೀ ಆಕ್ಸಿಡೆಂಟ್, ಸೂಕ್ಷ್ಮಾಣು ಜೀವಿ ನಿರೋಧಕ, ಮತ್ತು ನಂಜು ನಿರೋಧಕ ಶಕ್ತಿಯ ಬಗ್ಗೆ ಅಧ್ಯಯನ ನಡೆಸಿ ಇದನ್ನು ಉತ್ತಮ ಔಷಧೀಯ ಸಸ್ಯವೆಂದು ಪರಿಗಣಿಸಿದ್ದಿದೆ.

ಮೂಲ:

  • ವರ್ಷದಲ್ಲಿ ಸೀಸನ್ ನಲ್ಲಿ ಅಮಟೆ ಅಡುಗೆ ಮಾಡಿ ತಿಂದರೆ ಅವರ ಆರೋಗ್ಯ ಸುಸ್ಥಿರ.ವೈಜ್ಞಾನಿಕ ಹೆಸರು Spondia.
  • ಇದು anacaradiaceae ಕುಟುಂಬಕ್ಕೆ ಸೇರಿದೆ, ಕುಟುಂಬದಲ್ಲಿ ಪ್ರಾದೇಶಿಕವಾಗಿ ಬೇರೆ ಬೇರೆ ವಿಧಗಳು ಇವೆ.
  • ಕಸಿ ಅಮಟೆ ಎಂದು ಕರೆಯಲ್ಪಡುವ Spondias mombin  ಇದು ಗಾತ್ರದಲ್ಲಿ ಸ್ವಲ್ಪ್ಪ ದೊಡ್ಡದಿದ್ದು  ಸಿಪ್ಪೆ ದಪ್ಪ ಇರುತ್ತದೆ.
  • ಇದರ ಎಲೆಗೂ  ಸ್ಥಳೀಯ ಅಮಟೆಯ ಎಲೆಗೂ ರಚನೆಯಲ್ಲಿ ಭಿನ್ನತೆ ಇದೆ.
  • ಸ್ಥಳೀಯ ಅಮಟೆಯಷ್ಟು ಹುಳಿ ಇರುವುದಿಲ್ಲ.
  • ಇದು ಒಂದು ಆಯ್ಕೆ ತಳಿಯೇ  ಹೊರತು ಕಸಿ ತಾಂತ್ರಿಕತೆಯಲ್ಲಿ  ಉತ್ಪಾದಿಸಿದ್ದು ಅಲ್ಲ.
  • ಅದೇ ರೀತಿಯಲ್ಲಿ ತಮಿಳು ನಾಡಿನಲ್ಲಿ Spondias purpureaಎಂಬ ಇನ್ನೊಂದು ಅಮಟೆ ಜಾತಿಯಿದೆ. 
  • ಅದನ್ನು  ಅವರು ವಾಣಿಜ್ಯಿಕ  ಬಳಕೆಗೆ ಬಳಸಿಕೊಳ್ಳುತ್ತಾರೆ.
  • ಇದರಿಂದ ತಯಾರಿಸಿದ ಕೆಲವು ಮಿಟಾಯಿ ತರಹದ ತಿನಿಸುಗಳು( Imili) ಅಂಗಡಿಗಳಲ್ಲಿ ಲಭ್ಯವಿದೆ.
  • ಅಮಟೆಯ ಮೂಲದ ಬಗ್ಗೆ ಯಾವುದೇ ಉಲೇಖಗಳಿಲ್ಲದಿದ್ದರೂ ಇದು  ಮಲಯ ಮೂಲದ್ದು ಎನ್ನಲಾಗುತ್ತಿದೆ.
  • ಇದನ್ನು  ವೈಲ್ಡ್ ಮ್ಯಾಂಗೋ, ಅಥವಾ ಹೊಗ್ಪ್ಲಂ ಎಂದೂ ಕರೆಯುತ್ತಾರೆ.
  • ಮಳೆ ಉತ್ತಮವಾಗಿ ಬರುವ ಕರಾವಳಿ ಮಲೆನಾಡಿನ ಭಾಗಗಳಲ್ಲಿ  ಇದನ್ನು ಕಾಣಬಹುದು.
  • ದಕ್ಷಿಣ ಭಾರತದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತಿನ ಕರಾವಳಿ ಭಾಗಗಳಲ್ಲಿಯೂ ಸಸ್ಯ ಪ್ರಭೇಧಗಳಿವೆ.

ಅಳಿಯುತ್ತಿದೆ – ಉಳಿಸಬೇಕಿದೆ:

ಮರದಲ್ಲಿ ಅಮಟೆ ಇಳುವರಿ

  • ಕೃಷಿ ವಿಸ್ತರಣೆ, ಸಾಂಪ್ರದಾಯಿಕ ಮರಮಟ್ಟುಗಳು, ಅಲಫಲಗಳ ಮೇಲಿನ ಕೀಳರಿಮೆಯಿಂದ ಕೆಡವಿದ ಸಸಿಗಳ ಬದಲಿಗೆ ಬೇರೆ ಸಸಿ ನಾಟಿ ಮಾಡದೆ, ಈಗ ಅಮಟೆ ಸಸ್ಯಮೂಲ ಕ್ಷೀಣಿಸಲಾರಂಭಿಸಿದೆ.
  • ವಸ್ತುವೊಂದು ನಮ್ಮಿಂದ ದೂರವಾದಾಗ ಅದಕ್ಕೆ ಹೆಚ್ಚು ಮಹತ್ವ  ಬಂದಂತೇ  ಅಮಟೆಗೂ ಅದೇ ಕಾಲ ಬಂದಿದೆ.ಬೇಡಿಕೆ ಇದೆ. ಬೆಳೆ ಇಲ್ಲ.

ಅಮಟೆ ಗಿಡದ ಸಸ್ಯಾಭಿವೃದ್ದಿ:

  • ಅಮಟೆ ಮರದಲ್ಲಿ  ಬೆಳೆದ ಹಣ್ಣು ಕೆಳಕ್ಕೆ ಉದುರಿ ಕೆಲವು ಮೊಳಕೆ ಬಂದು ಸಸಿಯಾಗುತ್ತವೆ.
  • ಇದಲ್ಲದೇ  ಹದ ಬಲಿತ ಗೆಲ್ಲುಗಳನ್ನು ನಾಟಿ ಮಾಡಿದರೂ ಅದರಲ್ಲಿ  ಬೇರು ಬರುತ್ತದೆ.
  • ಸಾಮಿಪ್ಯ  ಕಸಿಗೆ ಹಾಗೂ  ಮೃದು ಕಾಂಡ ಕಸಿಗೆ ಹೊಂದಿಕೊಳ್ಳುತ್ತದೆ.
  • ನಾಟಿ ತಳಿಗಳಲ್ಲಿ  ಮಿಶ್ರ ಪರಾಗ ಸ್ಪರ್ಶದಿಂದಾಗಿ ಹಲವಾರು ವೈವಿಧ್ಯತೆಗಳು ನೈಸರ್ಗಿಕವಾಗಿಯೇ ಆಗಿವೆ.
  • ಕೆಲವು ದೊಡ್ಡದು, ಕೆಲವು ಸಣ್ಣದು, ಹೆಚ್ಚು ಹುಳಿಯವೂ ಮತ್ತೆ  ಕೆಲವು ಒಗರು ಇನ್ನು ಕೆಲವು ಹುಳಿ ಸಿಹಿ ರುಚಿಯವೂ ಅಲ್ಲಲ್ಲಿ ಲಭ್ಯ.
  • ಕೆಲವು ದಪ್ಪದ ಸಿಪ್ಪೆ ಹೊಂದಿದ್ದರೆ ಮತ್ತೆ ಕೆಲವು ತೆಳು.
  • ಕೆಲವು  ಒಳ ಬೀಜದಿಂದ ಸಲೀಸಾಗಿ ಸಿಪ್ಪೆ ಬಿಡುವವುಗಳು, ಮತ್ತೆ ಕೆಲವು ಕತ್ತರಿಸಿ  ಬೇರ್ಪಡಿಸುವಂತವುಗಳೂ ನಮ್ಮ ಸುತ್ತಮುತ್ತ ಲಭ್ಯ.
  • ಸಾಮಾನ್ಯವಾಗಿ ಅಮಟೆ ಕಾಯಿಯನ್ನು  ಕೊಯಿದು ತಂದು ಅದನ್ನು ಜಜ್ಜಿ ಬೀಜ ಮತ್ತು ಸಿಪ್ಪೆಯನ್ನು ಬೇರ್ಪಡಿಸುತ್ತಾರೆ.
  • ಆಗ ಸಲೀಸಾಗಿ ತೊಗಟೆ ಮತ್ತು  ಬೀಜ ಬೇರ್ಪಡುವಂತದ್ದಿದ್ದರೆ ಅದು ಉತ್ತಮ ಅಮಟೆ ಎಂದು  ಕರೆಯಲ್ಪಡುತ್ತದೆ.
  • ಅದನ್ನು  ನಿರ್ಲಿಂಗ ರೀತಿಯಲ್ಲಿ ಸಸ್ಯಾಭಿವೃದ್ದಿಮಾಡಿಕೊಳ್ಳಬಹುದು.

ಅಮಟೆ ಕಾಯಿಯ ಅಡುಗೆಗಳು.

ಗುಣ ಮಟ್ಟದ ಅಮಟೆ

  •  ಒಂದೆರಡು ಅಮಟೆಯನ್ನು  ಬೇಯಿಸಿ ಹಿಚುಕಿ ಸ್ವಲ್ಪ ಬೆಲ್ಲ  ಉಪ್ಪು ಹಾಕಿ ಬೆಳ್ಳುಳ್ಳಿ  ಒಗ್ಗರಣೆ ಹಾಕಿ ಬಜ್ಜಿ (ಬೇಯಿಸಿ ಹಿಚುಕಿ ಮಾಡಿದ ತಯಾರಿ) ಮಾಡಿದರೆ ಅದರಲ್ಲಿ ನಾವು ಖುಷಿ ಖುಷಿ ಊಟ ಮಾಡಬಹುದು.
  • ಅಮಟೆಯಿಂದ ಬೇರೆ ಬೇರೆ ಅಡುಗೆಗಳನ್ನು  ಮಾಡಲಾಗುತ್ತದೆ.
  • ಮುಖ್ಯವಾಗಿ  ಮಳೆಗಾಲದಲ್ಲಿ  ಕೆಸುವಿನ ಬೇರು  ಹಾಗೂ ಅಮಟೆ ಹಾಕಿ ಹುಳಿ ( ಸಾಂಬಾರು) ಮಾಡುವ ಪ್ರತೀತಿ ಇದೆ.
  • ಅದೇ ರೀತಿ ದಕ್ಷಿಣ ಕನ್ನಡದಲ್ಲಿ  ಪ್ರಸ್ಥಗಳಿಗೆ ಸಿಹಿ ಪದಾರ್ಥವಾಗಿ  ಮೆಣಸು ಕಾಯಿ ಎಂಬ ಅಡಿಗೆ ಮಾಡುತ್ತಾರೆ.
  • ಅದಕ್ಕೆ ಅಮಟೆ  ಕಾಯಿಯನ್ನು  ಬಳಕೆ ಮಾಡುತ್ತಾರೆ.
  • ಜಿಎಸ್ಬಿ ಪಂಗಡದವರು ಅಮಟೆಯ ಬೇರೆ ಪಾಕಗಳನ್ನೂ ಮಾಡುತ್ತಾರೆ. ಉಪ್ಪಿನ ಕಾಯಿಗೆ ಅಮಟೆ ಉತ್ತಮ.
  • ಎಳೆ ಮಿಡಿಯನ್ನು ಉಪ್ಪಿನ ಕಾಯಿ ಮಾಡುತ್ತಾರೆ.
  • ಬೆಳೆದ ಕಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿ ಉಪ್ಪು ನೀರಿನಲ್ಲಿ ಹಾಕಿಟ್ಟು  ಬೇಕಾದಾಗ ಅಡುಗೆಗೆ ಬಳಕೆ ಮಾಡುತ್ತಾರೆ.
  • ಜ್ಯಾಂ, ಜೆಲ್ಲಿಯನ್ನೂ ತಯಾರಿಸುತ್ತಾರೆ. ಮಾವಿನ ಕಾಯಿಯಂತೇ ಇದರ ಉಪಯೋಗÀ ಇದೆ.

ಸಸ್ಯ ಸಂಪತ್ತು ಈಗ ಅಳಿವಿನಂಚಿಗೆ ತಲುಪಿದೆಅಮಟೆ ಎಲ್ಲರಿಗೂ ಭಾರವಾದ ಮರವಾಯಿತು.  ಹಳ್ಳಿಗಳಲ್ಲೂ ಅಮಟೆ ಮರ ಇಲ್ಲದ ಸ್ಥಿತಿ ಬಂತು. ಉಳಿಸಿದವರು ಸಂರಕ್ಷಿಸಿರಿ. ಕಡಿದವರು   ಹೊಸತು ನೆಡಿ.

 

Leave a Reply

Your email address will not be published. Required fields are marked *

error: Content is protected !!