ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳುವುದು ಹೀಗೆ.

ತಾಜಾ ಸೊಪ್ಪು ತರಕಾರಿ ಮಾರುವವರು

ಯಾವುದೇ ಕೆಲಸ ಮಾಡಬೇಕಾರೂ ಅದು ನಮ್ಮ ಮೈಮೇಲೆ ಬರಬಹುದೇ ಎಂದು ಒಂದಲ್ಲ ಹತ್ತಾರು ಸಲ ಯೋಚಿಸಬೇಕು. ನಾವು ಕಾಲಹರಣಕ್ಕಾಗಿ ಮಾಡುವ ಕೆಲವು ಕೆಲಸಗಳು ನಮ್ಮ ವೃತ್ತಿಗೇ ತೊಂದರೆ ಕೊಡುವಂತಾಗಬಾರದು.ಕೃಷಿಕರು ಬೆಳೆಯುವ ಉತ್ಪನ್ನಗಳಿಗೆ ಅಪಪ್ರಚಾರ ಮಾಡಿ ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳಬಾರದು.

ಕಳೆದ ಎರಡು ದಿನಗಳಿಂದ ನಾವೆಲ್ಲಾ ಚಾಚೂ ತಪ್ಪದೆ ವೀಕ್ಷಿಸುವ ವಾಟ್ಸ್ ಅಪ್, ಫ಼್ಹೇಸ್ ಬುಕ್ ಮುಂತಾದವುಗಳಲ್ಲಿ ಹರಿದಾಡುವ ಒಂದು ವೀಡಿಯೋ ಬಗ್ಗೆ ಇಲ್ಲಿ ಹೇಳಲಿಚ್ಚಿಸುತ್ತೆವೆ. ಇದು ಸೊಪ್ಪು ತರಕಾರಿಗಳನ್ನು ಬಾಡದಂತೆ ಹಚ್ಚ ಹಸುರಾಗಿ ಉಳಿಸಲು ಒಂದು ಪಾತ್ರೆಯಲ್ಲಿ ರಾಸಾಯನಿಕ ಹಾಕಿ ಅದ್ದುವುದಂತೆ. ಅದ್ದಿದ ಸೊಪ್ಪು ತರಕಾರಿ ಹಚ್ಚ ಹಸುರಾಗಿಯೂ , ಬರೇ ನೀರಿನಲ್ಲಿ ಎಂದು ಹೇಳುವ ಬಕೆಟ್ ನಲ್ಲಿ ಅದ್ದಿದ ಸೊಪ್ಪು, ಸ್ವಲ್ಪ ಒಣಗಿಕೊಂಡೇ ಇರುತ್ತದೆಯಂತೆ. ಇದನ್ನು ಅವರವರಿಗೆ ಹೇಗೆ ತೋಚುತ್ತದೆಯೋ ಆ ರೀತಿಯಲ್ಲಿ ಶೀರ್ಷಿಕೆ ಹಾಕಿ ಪ್ರಚಾರದ ತಾಣಗಳಲ್ಲಿ ಹರಿ ಬಿಡಲಾಗುತ್ತದೆ. ಜನ ಇದನ್ನು ನಂಬಿ ಮತ್ತೆ ಮತ್ತೆ ಅದನ್ನು ಹಂಚಿಕೊಂಡು ವಿಜ್ರಂಬಿಸುತ್ತಿದ್ದಾರೆ. ಕೆಲವರು ಈ ರೀತಿ ಮಾಡುವವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇದು ನೀವು ನೋಡುವ ಚಿತ್ರ
ಇದು ನೀವು ನೋಡುವ ಚಿತ್ರ
  • ಎಷ್ಟು ಮಜಾ ಇದೆ ಎಂದು ನೋಡಿ.
  • ಈ ವೀಡಿಯೋ ಹರಿ ಬಿಟ್ಟವರು ಯಾರು, ಇದರ ಮೂಲ ಯಾವುದು ಎಂಬುದು ಯಾರಿಗೂ ಗೊತ್ತಿಲ್ಲ.
  • ಅಲ್ಲಿ ಪ್ರಾತ್ಯಕ್ಷಿಕೆ ಮಾಡುತ್ತಿರುವುದು ಜನತೆಗೆ ತಪ್ಪು ಸಂದೇಶವನ್ನು ಹರಿ ಬಿಡುವುದಕ್ಕೋಸ್ಕರ ಎಂಬುದು ಅಲ್ಲಿ ಇಟ್ಟಿರುವ ಆಕಾಶ ನೀಲಿ ಬಣ್ಣದ ಪಾತ್ರೆ,
  •  ಅದ್ದುವುದಕ್ಕಾಗಿ ತಂದಿರುವ ಸೊಪ್ಪುಗಳನ್ನು ಹಾಗೂ ಮಾಡುವವರು ತಮ್ಮ ಮುಖವನ್ನು ಸ್ಪಷ್ಟವಾಗಿ ತೋರಿಸದೇ ಇರುವುದು ನೋಡಿದರೆ ತಿಳಿಯುತ್ತದೆ.
  • ಇದು ಬರೇ ಪ್ರಚಾರಕ್ಕಾಗಿ ಮಾಡಿರುವುದು ಎಂದು ಎಂತವನಿಗೂ ಗೊತ್ತಾಗದೇ ಇರದು.
  • ಆದರೂ ನಾವು ಅದನ್ನು ಮುಂದೆ ಮುಂದೆ ಹಂಚುತ್ತಾ ಇದ್ದೇವೆ.

ಹೀಗೆ ಮಾಡುವವರು ಇದ್ದಾರೆಯೇ?

  • ಖಂಡಿತವಾಗಿಯೂ ಯಾರೂ ಇದನ್ನು ಮಾಡಲಾರರು.
  • ಸಾಮಾನ್ಯವಾಗಿ ಸೊಪ್ಪು ತರಕಾರಿ, ಹಸಿ ಕಾಯಿ ಪಲ್ಯಗಳಾದ ಬೀನ್ಸ್ ಅಲಸಂಡೆ ಇತ್ಯಾದಿಗಳನ್ನು ಜನ ಹಚ್ಚ ಹಸುರಾಗಿ ಇದ್ದರೆ ಮಾತ್ರ ಖರೀದಿಸುತ್ತಾರೆ ನಿಜ.
  • ಅದಕ್ಕೆ ಬೆಳೆದ ರೈತರು ಕೊಯಿಲುನ್ನು ಸಂಜೆಯ ಹೊತ್ತಿಗೇ ಮಾಡುತ್ತಾರೆ.
  • ಅಥವಾ ಮುಂಜಾವಿನ ಹಿಮ ಬೀಳುವ ಸಮಯದಲ್ಲಿ  ಕಠಾವು ಮಾಡುತ್ತಾರೆ.
  • ಗೊತ್ತಾಗದಷ್ಟು ಪ್ರಮಾಣದಲ್ಲಿ ಸ್ವಲ್ಪ ನೀರು ಚಿಮುಕಿಸುವುದೂ ಇದೆ.
  • ಕೊಳ್ಳುವ ವ್ಯಾಪಾರಿಗಳು  ಅಥವಾ ಮಂಡಿಯವರು ಗೋಣಿ ಚೀಲಕ್ಕೆ ಅಗತ್ಯ ಇದ್ದರೆ ಮಾತ್ರ ಸ್ವಲ್ಪ ನೀರು ಗೆ ಚಿಮುಕಿಸಬಹುದು.
  • ಇದು ಬಿಟ್ಟರೆ ಗೋಣಿಯನ್ನು ಬಿಚ್ಚಿ, ಅದನ್ನು ರಾಸಾಯನಿಕದಲ್ಲಿ ಮುಳುಗಿಸುವುದು ಇತ್ಯಾದಿ  ಮಾಡುವುದೇ ಇಲ್ಲ. ಇದನ್ನು ನಾನೇ ಕಣ್ಣಾರೆ ಕಂಡಿದ್ದೇನೆ.   
  • ಸೊಪ್ಪು ತರಕಾರಿಗಳಾದ ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು, ಹರಿವೆ, ಮೆಂತ್ಯೆ, ಪುದಿನ ಇತ್ಯಾದಿಗಳಿಗೆ ರೈತರಿಗೆ ಸಿಗುವ ಗರಿಷ್ಟ ಹಣ ಮೂಟೆಗೆ ಸುಮಾರು 100 ರೂ. ಗಳಷ್ಟು.
  • ಅದನ್ನು ಕೊಳ್ಳುವ ಮಂಡಿಗೆ ಆತ ಒಯ್ದು ಹಾಕಬೇಕು. ಅವನು ತೂಕ ಮಾಡಿದರೂ ಆಯಿತು ಮಾಡದಿದ್ದರೂ ಆಯಿತು.
  • ಮಂಡಿಯವರು ಅದನ್ನು ಹಾಗೆ ಮೂಟೆಯನ್ನು ಖರೀದಿದಾರರಿಗೆ ಮಾರುತ್ತಾರೆ.
  • ಅದನ್ನು ಬಿಚ್ಚುವುದು ತೂಕ ಮಾಡಿ ಮುಳುಗಿಸುವುದು ಮಾಡಿದರೆ ಅದರ ಮಜೂರಿ ಹುಟ್ಟುವುದಿಲ್ಲ.
  • ಖರೀದಿದಾರರಿಗೂ ಇದನ್ನು ಮಾಡುತ್ತಾ ಕುಳಿತುಕೊಂಡರೆ ಅದರಲ್ಲಿ ಸಿಗುವ ಲಾಭ ಸಾಕಾಗದು.
  • ಹಾಗಾದರೆ ಈ ರೀತಿಯಲ್ಲಿ ಇದನ್ನು ರಾಸಾಯನಿಕದಲ್ಲಿ ಅದ್ದುವುದು, ಆಕರ್ಷಕವಾಗಿ ಕಾಣುವಂತೆ ಮಾಡುವವರು ಯಾರು? ಯಾರೂ ಮಾಡಲಾರರು.
ಸೊಪ್ಪು ತರಕಾರಿ ಬೆಳಗ್ಗೆಯೇ ಮಾರಲ್ಪಡುತ್ತದೆ.
ಸೊಪ್ಪು ತರಕಾರಿ ಬೆಳಗ್ಗೆಯೇ ಮಾರಲ್ಪಡುತ್ತದೆ.

ರಾಸಾಯನಿಕ ಉಚಿತವಾಗಿ ಸಿಗುವುದಿಲ್ಲ:

  • ಜನ ಮಾತಾಡಿಕೊಳ್ಳಲು, ನಿಂದಿಸಿಕೊಳ್ಳಲು ಯಾವ ಖರ್ಚೂ ಮಾಡಬೇಕಾಗಿಲ್ಲ.
  • ಅಧಿಕೃತವಾಗಿ ಏನಾದರೂ ಮಾಡಬೇಕಾದರೆ ಮಾತ್ರ ಅದಕ್ಕೆ ಖರ್ಚು ವೆಚ್ಚಗಳು ಬರುತ್ತವೆ.
  • ಅದಕ್ಕೆ ಯಾರೂ ಮುಂದಾಗುವುದಿಲ್ಲ.
  • ರಾಸಾಯನಿಕ ಎನ್ನುತ್ತಾರಲ್ಲಾ? ಇಷ್ಟು ಗೊತ್ತಿದ್ದವರಿಗೆ ಆ ರಾಸಾಯನಿಕದ ನಿಖರ ಹೆಸರು ಗೊತ್ತಿರಬೇಕು ತಾನೇ?
  • ಹಾಗಿದ್ದರೆ ಅದರ ಬೆಲೆಯೂ ಗೊತ್ತಿರಬೇಕು.
  • ನನ್ನ ತಿಳುವಳಿಕೆಯಲ್ಲಿ ಈ ಬಗ್ಗೆ ಕೆಲವು ಪಂಡಿತರ ಹೇಳುತ್ತಿರುವ ಆ ರಾಸಾಯನಿಕಗಳ ಬೆಲೆ ಕಿಲೋ 250 ಕ್ಕಿಂತ ಹೆಚ್ಚು ಇದೆ.
  • ಅದನ್ನು ಬಳಕೆ ಮಾಡಿ ಹಚ್ಚ ಹಸುರು ತಾಜಾ ತನ ಇರುವಂತೆ ಮಾಡಿದರೆ ಅದರಿಂದ ಲಾಭ ಬಂರಲಾರದು.
ಈ ಅಲಂಕಾರಿಕ ಸೊಪ್ಪುಗಳು ತಾಜಾ ಇರುವಂತೆ ಸಕ್ಕರೆ ದ್ರಾವಣ ಹಾಕುವುದು ಇಲ್ಲದಿಲ್ಲ.
ಈ ಅಲಂಕಾರಿಕ ಸೊಪ್ಪುಗಳು ತಾಜಾ ಇರುವಂತೆ ಸಕ್ಕರೆ ದ್ರಾವಣ ಹಾಕುವುದು ಇಲ್ಲದಿಲ್ಲ.

ಯಾವುದು ಅಗ್ಗದ ವಿಧಾನ:

  • ಸಾಮಾನ್ಯವಾಗಿ ಎಲ್ಲಾ ಸಸಿಗಳೂ ಒಮ್ಮೆ ಸ್ವಲ್ಪ ಬಾಡಿದರೂ ಅದನ್ನು ಸರಿಪಡಿಸಲು ಶೇ.1 ರ ಸಕ್ಕರೆ ದ್ರಾವಣ ಸಾಕಾಗುತ್ತದೆ.
  • ದೂರದ ಊರಿನಿಂದ ಯಾವುದಾದರೂ ಗಿಡ ತಂದರೆ ಅದು ತಲುಪುವಾಗ ಎಲೆ ಸ್ವಲ್ಪ ಬಾಡಿದಂತಾದರೆ ತಕ್ಷಣ ಸಕ್ಕರೆ ದ್ರಾವಣ ಸಿಂಪಡಿಸಿದರೆ ಸರಿಯಾಗುತ್ತದೆ.
  • ಇಂತಹ ಅತ್ಯಂತ ಅಗ್ಗದ ವ್ಯವಸ್ಥೆಯಲ್ಲಿ ಉಪಚಾರ ಮಾಡಿದರೆ ಮಾತ್ರ ಇದು ಪೂರೈಸಬಹುದು.
  • ಕೆ ಆರ್ ಮಾರ್ಕೆಟ್ ನಲ್ಲಿ ಬೆಳ್ಳಂಬೆಳಗ್ಗೆ ನಡೆಯುವ ತರಕಾರಿ, ಹೂವು  ಹಾಗೂ ಅಲಂಕಾರದ ಎಲೆಗಳ ಮಾರುಕಟ್ಟೆಗೆ ಹೋಗಿ. ಒಮ್ಮೆ ಯಾರಾದರೂ ವ್ಯಾಪಾರಿಗಳಲ್ಲಿ ಕೇಳಿದರೆ ನಿಜ ಸಂಗತಿ ಗೊತ್ತಾಗುತ್ತದೆ.
  • ಲೋಡು ಗಟ್ಟಲೆ ಬರುವ ಈ ಸೊಪ್ಪು ತರಕಾರಿಗಳನು ಅವರು 2-3 ಗಂಟೆಯಲ್ಲಿ ವಿಲೇವಾರಿ ಮಾಡಿ ಆಗುತ್ತದೆ.
  • ಯಾವ ರಾಸಾಯನಿಕ ಉಪಚರವೂ ಇಲ್ಲ. ಹಾಗೆಯೇ ಚಿಲ್ಲೆರೆ ವ್ಯಾಪಾರಿಯೂ ಸಹ.

 ರಾಸಾಯನಿಕ ಎಂದರೆ ಅದು ಒಂದೋ ಆಮ್ಲೀಯ ಆಗಿರಬೇಕು ಇಲ್ಲವೇ ಕ್ಷಾರೀಯ ಆಗಿರಬೇಕು. ಇವೆರಡರಲ್ಲೂ ಅದ್ದಿದರೆ ಅವು ತಾಜಾತನ ಕಳೆದುಕೊಳ್ಳುವುದೇ ಜಾಸ್ತಿ. ಯಾವ ರೈತನೇ ಇರಲಿ, ಯಾವ ವ್ಯಾಪಾರಿಯೇ ಇರಲಿ, ತಮಗೆ ಲಾಭ ಆಗುವಂತಿದ್ದರೆ ಮಾತ್ರ ಇಂತಹ ಕೃತ್ರಿಮ ಮಾಡಬಲ್ಲ. ಜನ ಎಥ್ರೇಲ್ ದ್ರಾವಣದಲ್ಲಿ ಅದ್ದಿ ಬಾಳೆ ಹಣ್ಣು ಮಾಡುತ್ತಾರೆ ಎಂದು ಆರೋಪಿಸುತ್ತಾರೆ. ಎಥ್ರೇಲ್ 100 ಮಿಲಿ ಗೆ 500 ರೂ. ಇದೆ. ಅದಕ್ಕಿಂತ ಬೇಗ 2 ರೂ ಊದು ಕಡ್ಡಿ ಹಚ್ಚಿಟ್ಟು  ಹಣ್ಣು ಮಾಡಲಿಕ್ಕೆ ಆಗುತ್ತದೆ. ಆದ ಕಾರಣ ಅಂತಹ  ಹೆಡ್ಡರು ಮಾತ್ರ ದುಬಾರಿ ರಾಸಾಯನಿಕದಲ್ಲಿ ಹಣ್ಣು ಮಾಡಬೇಕಷ್ಟೇ.

ಇದರ ಬೆನ್ನು ಹತ್ತಿ ಹೋಗಬಹುದಲ್ಲವೇ?

  • ಇಷ್ಟಕ್ಕೂ ಇಂತಹ ಸುಳ್ಳು ಸುದ್ದಿ ನಂಬುವ ಜನ ತಾವು ಊರು ಸುತ್ತುವಾಗ ಇದನ್ನು ಪರಿಶೀಲಿಸಬಹುದು ತಾನೇ?
  • ಯಾರಾದರೂ ರೈತನಲ್ಲಿ ಇದನ್ನು ಕೇಳಬಹುದು.
  • ಯಾರಾದರೂ ನಂಬಿಗಸ್ಥ ವ್ಯಾಪಾರಿಯಲ್ಲಿ ಕೇಳಬಹುದು.
  • ಅಥವಾ ಎಲ್ಲಿಯಾದರೂ ಪತ್ತೆದಾರಿಕೆ ಮಾಡಬಹುದಲ್ಲವೇ?
ತಾಜಾ ಸೊಪ್ಪು ಮಾರಾಟ ಮಾಡುವ ವ್ಯಾಪಾರಿ

ಅವರ ಸ್ವಂತ ಕಾಲಿಗೆ ಅವರವರೇ ಮೊಳೆ ಹೊಡೆದುಕೊಳ್ಳುವುದು ಎಂದರೆ ಇದೇ:

  • ಈ ರೀತಿ ಪ್ರಚಾರ ಮಾಡುವುದರಿಂದ ಪರಿಣಾಮ ಏನು ಎಂಬುದನ್ನು ಯಾರಾದರೂ ಯೋಚಿಸಿದ್ದಾರೆಯೇ?
  • ಪ್ರತೀಯೊಂದಕ್ಕೂ ಹೀಗೆ ಪ್ರಚಾರ ಮಾಡುತ್ತಾ ಹೋದರೆ ಜನ ಇಂತಹ ವಸ್ತುಗಳನ್ನು ಖರೀದಿ ಮಾಡುವುದು ಕಡಿಮೆ ಮಾಡುತ್ತಾರೆ.
  • ಇದರಿಂದ ಹೊಡೆತ ಆಗುವುದು  ಬೆಳೆಯುವ ರೈತನಿಗೇ ಹೊರತು ಬೇರೆ ಯಾರಿಗೂ ಅಲ್ಲ.
  • ರೈತ ಅದವನು ಯಾವುದೇ ಇಂತಹ ಅಪ ಪ್ರಚಾರಗಳಿದ್ದರೆ  ಅದನ್ನು ಸ್ವಲ್ಪ ಕೂಲಂಕುಶವಾಗಿ ಪರಿಶೀಲಿಸಿ ಅದನ್ನು ಹಂಚುವುದೋ ಬೇಡವೋ  ಎಂದು ನಿರ್ಧರಿಸಬೇಕು.
  • ಅಂತಿಮವಾಗಿ ಇವೆಲ್ಲವೂ ನಮ್ಮ ಮೇಲೆಯೇ ಬಂದು ಎರಗುತ್ತದೆ.
  • ಇದೆಲ್ಲಾ ಮುಂದುವರಿಯುತ್ತಾ ಇದ್ದರೆ ಮುಂದೆ ರಾಸಾಯನಿಕ ಉಪಚಾರ ಮುಕ್ತ  ಎಂಬ ಹೊಸ ವ್ಯವಹಾರಗಳು ಪ್ರಾರಂಭವಾಗಿ ಗ್ರಾಹಕರಿಗೆ ಈಗಿನ ಬೆಲೆಗಿಂತ ದುಬಾರಿ ಬೆಲೆಗೆ ವಸ್ತು ಸಿಗುವಂತಾಗುತ್ತದೆ.
  • ರೈತರಿಗೂ ತೊಂದರೆ  ಗ್ರಾಹಕರಿಗೂ ತೊಂದರೆ.
  • ಆದ ಕಾರಣ ಅನವಶ್ಯಕವಾಗಿ ಇಂತದ್ದನ್ನು ಪ್ರಚಾರ ಮಾಡುವ ಬದಲು ಸ್ವಲ್ಪ ಪರಾಂಬರಿಸಿ ನೋಡುವುದು ಸೂಕ್ತ.

ನಾವು ಸ್ವಲ್ಪ ಬಾಡಿದ್ದರೂ ಖರೀದಿ ಮಾಡುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸ್ವಲ್ಪ ಬಾಡಿದರೆ ಪ್ರಮಾಣ ಹೆಚ್ಚು ಬರುತ್ತದೆ, ನಮಗೇ ಲಾಭವಾಗುತ್ತದೆ. ಇಷ್ಟು ಜ್ಞಾನ ನಮ್ಮಲ್ಲಿ ಇರಬೇಕು. ಈ ಬರಹ ಯಾರ ಪರವಾಗಿಯೂ ಅಲ್ಲ. ಯಾರ ವಿರೋಧವಾಗಿಯೂ ಅಲ್ಲ. ಬಣವನ್ನು ಅಂಟಿಸಿಕೊಂಡವರು ಹಿಡಿ ಶಾಪ ಹಾಕುವುದು ಬೇಡ. ರೈತರಾಗಿದ್ದು ನಾವು ಅನವಶ್ಯಕ ಅತ್ಯಂತ ಕನಿಷ್ಟ ಆದಾಯ ಕೊಡಬಲ್ಲ  ಸೊಪ್ಪು ತರಕಾರಿ ಬೆಳೆಗಾರರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುವುದು ಬೇಡ ಎಂಬ ಕಳಕಳಿ ಅಷ್ಟೇ.

Leave a Reply

Your email address will not be published. Required fields are marked *

error: Content is protected !!