ಫಲವತ್ತತೆ ಕಳೆದುಕೊಳ್ಳುತ್ತಿರುವ ಕೃಷಿ ಭೂಮಿ- ಭವಿಷ್ಯದ ಆತಂಕ.

ಫಲವತ್ತಾದ ಮಣ್ಣು

ನಮ್ಮ ದೇಶದ 50% ಕ್ಕೂ ಹೆಚ್ಚಿನ ಕೃಷಿ ಭೂಮಿ ಸಾರ ಕಳೆದುಕೊಂಡು  ಬರಡಾಗುತ್ತಿರುವುದು ಭಾರತ ಸರಕಾರದ ಅಧ್ಯಯನಗಳಿಂದ ತಿಳಿದು ಬಂದಿದೆ.

ಅಧ್ಯಯನದ ವರದಿ ಇರಲಿ. ನಮಗೆಲ್ಲಾ ಈ ವಿಚಾರ ಗಮನಕ್ಕೆ ಬಂದಿರುವಂತದ್ದೇ. ನಮ್ಮ ಕೃಷಿ ಭೂಮಿಯಲ್ಲಿ ಬೆಳೆ ಏನೋ ಹಿಂದಿಗಿಂತ ಹೆಚ್ಚು ಬರಬಹುದು. ಆದರೆ ಖರ್ಚು ಮಾತ್ರ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ಇತರ  ಬೆಳೆ ನಿರ್ವಹಣೆ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಬೇರೆ ಏನೂ ಅಲ್ಲ. ಮಣ್ಣು ತನ್ನ ಸಾರವನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳುತ್ತಿದೆ. ಇದು ಗಂಭೀರ ವಿಚಾರವಾಗಿದ್ದು, ಮುಂದೆ ಇದು ಭೂಮಿಯ ಉತ್ಪಾದಕತೆಯನ್ನು ಇನ್ನಷ್ಟು ಕುಗ್ಗಿಸುವ ಸಾಧ್ಯತೆ ಇದೆ.

  • ಮಣ್ಣು ಒಂದು ಸಸ್ಯ ಬೆಳವಣಿಗೆಗೆ ಆಧಾರ ಮಾತ್ರ. ಅಲ್ಲಿ ಸಾವಯವ ತ್ಯಾಜ್ಯಗಳು ಸೇರಿ ಅದಕ್ಕೆ ಸಾರ ಕೂಡಿಕೊಳ್ಳುತ್ತದೆ.
  • ಇದು ನೂರಾರು ಸಾವಿರಾರು ವರ್ಷಗಳಿಂದ ಸೇರಿಕೊಂಡಿರುವಂತದ್ದು.
  • ಒಂದೆಡೆ ಸಾವಯವ ತ್ಯಾಜ್ಯಗಳು ಮಣ್ಣಿಗೆ ಸೇರುತ್ತಾ ಇರುವುದು, ಮತ್ತೊಂದೆಡೆ ಅಲ್ಲಿ ಸಸ್ಯಗಳು ಬೆಳೆಯುತ್ತಾ ಇರುವುದು ನಡೆಯುತ್ತಿದ್ದಾಗ ಅಲ್ಲಿ ಕೊರತೆ ಬಾರದು.
  • ಸೇರ್ಪಡೆ ಕಡಿಮೆಯಾಗಿ ಬಳಕೆ ಹೆಚ್ಚಿದಾಗ  ಸಮಸ್ಯೆಗಳು ಉಂಟಾಗುತ್ತದೆ.
  • ಈಗ ಆದದ್ದು ಇದುವೇ. ಕೃಷಿ ಹೆಚ್ಚಾಗಿದೆ. ಸಾವಯವ ಉತ್ಪನ್ನಗಳ ಕೊರತೆ ಉಂಟಾಗಿದೆ.
  • ಇದನ್ನು 2019-20 ರ ಮಣ್ಣಿನ ಆರೋಗ್ಯ ಸಮೀಕ್ಷೆ ವರದಿ ಮಾಡಿದೆ.
  • ಇದರಂತೆ ನಮ್ಮ ದೇಶದ 55% ಭೂಮಿ ಸಾರಜನಕ ಕೊರತೆಯನ್ನೂ, 42% ಭೂಮಿ ರಂಜಕದ ಕೊರತೆಯನ್ನೂ 44% ಭೂಮಿ ಸಾವಯವ ಅಂಶದ ಕೊರತೆಯನ್ನೂ ಹೊಂದಿದೆ ಎಂಬುದಾಗಿ ತಜ್ಞರು (Centre for Science and Environment) ಹೇಳುತ್ತಾರೆ.
ಮಣ್ಣಿನಲ್ಲಿ ಈ ಕ್ರಿಯೆ ನಿರಂತರವಾಗಿದ್ದರೆ ಫಲವತ್ತೆತೆ ಹೆಚ್ಚಾಗುತ್ತದೆ

ಮಣ್ಣಿನ ಸತ್ವ ಮತ್ತು ಬೆಳೆ ಪೋಷಕ:

  • ಮಣ್ಣಿಗೆ ಬರೇ ರಸ ಗೊಬ್ಬರ ಕೊಡುವುದರಿಂದ ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ.
  • ರಸ ಗೊಬ್ಬರಗಳು ತೀಕ್ಷ್ಣ ಗೊಬ್ಬರಗಳಾಗಿದ್ದು, ಇದು ಎಷ್ಟು ಕೆಲಸಮಾಡುವುದು ಮಣ್ಣಿನ ಗುಣದ ಮೇಲೆ.
  • ಯಾವುದೇ ಸಸ್ಯವು ರಸ ಗೊಬ್ಬರದ ಸಾರವನ್ನು ನೇರವಾಗಿ ಬಳಕೆ ಮಾಡಿಕೊಳ್ಳುವುದಿಲ್ಲ.
  • ಮಣ್ಣಿನ ಸೂಕ್ಷ್ಮಾಣು ಜೀವಿಗಳು ಅದನ್ನು ಬಳಕೆ ಮಾಡಿ ಜೀರ್ಣಿಸಿದ ತರುವಾಯ ಅದು ಸಸ್ಯಗಳಿಗೆ ಲಭ್ಯವಾಗುತ್ತದೆ.
  • ಮಣ್ಣಿನಲ್ಲಿ ಜೀರ್ಣಿಸಿಕೊಡುವ ಸೂಕ್ಷ್ಮಾಣು ಜೀವಿಗಳು ಇಲ್ಲದಿದ್ದರೆ, ಅಥವಾ ತುಂಬಾ ಕಡಿಮೆಯಾದರೆ ರಸ ಗೊಬ್ಬರಗಳೂ ಕೆಲಸ ಮಾಡುವುದಿಲ್ಲ.
  • ಆ ಕಾರಣಕ್ಕೆ ಈಗ ರೈತರು ಹೆಚ್ಚಿನ ಇಳುವರಿಗಾಗಿ ಹೆಚ್ಚು ಹೆಚ್ಚು ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ.
  • ಹೆಚ್ಚು ಹಾಕುವ ಉದ್ದೇಶ ಹಿಂದೆ ಹಾಕುತ್ತಿದ್ದ ಪ್ರಮಾಣದಲ್ಲಿ ಇಳುವರಿ ಕಡಿಮೆಯಾದ ಕಾರಣಕ್ಕೆ. ಇದು ವರ್ಷ ಮುಂದುವರಿದಂತೆ ಹೆಚ್ಚಳ ಮಾಡುತ್ತಾ ಬರಬೇಕು.
  • ಅದಕ್ಕೂ ಒಂದು ಕೊನೆ ಎಂಬುದಿದೆ. ಒಂದಲ್ಲ ಒಂದು ದಿನ ರಸಗೊಬ್ಬರ ಕೆಲಸ ಮಾಡದ ಸ್ಥಿತಿ ಬರಬಹುದು.
  • ಇದು ನಮ್ಮ ದೇಶದಲ್ಲಿ ಬೇಗ ಬರಲಿಕ್ಕಿಲ್ಲ. ಕಾರಣ ನಾವು ಭಾಗಶಃ ರಸಗೊಬ್ಬರ ಬಳಸುವವರು.
  • ಆದರೆ ದಿನದಿಂದ ದಿನಕ್ಕೆ ಸಾವಯವ ಮೂಲವಸ್ತುಗಳ ಲಭ್ಯತೆ ಕ್ಷೀಣಿಸುತ್ತಿರುವುದು ಒಂದು ಆತಂಕ.

ನಮ್ಮಲ್ಲಿ ಸೊಪ್ಪು ಸದೆಗಳ ಕೊರತೆ ಇದೆ. ಇರುವ ಸೊಪ್ಪು ಸದೆಗಳನ್ನು ಒಟ್ಟು ಹಾಕುವುದಕ್ಕೆ ತಗಲುವ ವೆಚ್ಚ ಬಹಳ ದುಬಾರಿಯಾಗುತ್ತಿದೆ.  ಆ ಕಾರಣಕ್ಕೆ ರೈತರು ಅನಾಹುತಗಳ ಅರಿವು ಇದ್ದರೂ ಸಹ ಅನಿವಾರ್ಯವಾಗಿ ರಸ ಗೊಬ್ಬರಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಹಾಗೆಂದು ನಮ್ಮ ದೇಶದ 10 ರಾಜ್ಯಗಳಲ್ಲಿ ಈಗಲೂ ಮಣ್ಣಿನಲ್ಲಿ ಸಾವಯವ ವಸ್ತುಗಳ ಕೊರತೆ ಉಂಟಾಗಿಲ್ಲ. ಆ ರಾಜ್ಯಗಳೆಂದರೆ ಅಸ್ಸಾಂ, ತ್ರಿಪುರಾ, ಸಿಕ್ಕಿಂ ಮುಂತಾದ ಈಶಾನ್ಯ ರಾಜ್ಯಗಳು. ಕಾರಣ ಅಲ್ಲಿ ಇನ್ನೂ ರಸ ಗೊಬ್ಬರಗಳು ಸುಳಿದಿಲ್ಲ. ರೈತರು ಸ್ವೀಕರಿಸಿಲ್ಲ. ಮಿತ್ರರಾದ ಶ್ರೀ ಹರೀಶ್ ಶ್ರೀವತ್ಸ ಇವರು ಇದನ್ನೂ ಆಗಾಗ ಹೇಳುತ್ತಿದ್ದರು.

ತುರ್ತು ಅಗತ್ಯಗಳೇನು?

ಮಣ್ಣಿನಲ್ಲಿ ಈ ಕ್ರಿಯೆ ನಿರಂತರವಾಗಿದ್ದರೆ ಫಲವತ್ತೆತೆ ಹೆಚ್ಚಾಗುತ್ತದೆ
ಮಣ್ಣಿನಲ್ಲಿ ಈ ಕ್ರಿಯೆ ನಿರಂತರವಾಗಿದ್ದರೆ ಫಲವತ್ತೆತೆ ಹೆಚ್ಚಾಗುತ್ತದೆ
  • ರೈತರು ರಸ ಗೊಬ್ಬರಗಳನ್ನು ಬಳಸುವಾಗ ಸಮತೋಲನದಲ್ಲಿ ಬಳಸಬೇಕು.
  • ಶಿಫಾರಸಿನ ಪ್ರಮಾಣಕ್ಕಿಂತ ಹೆಚ್ಚು ಬಳಕೆ ಮಾಡಬಾರದು.
  • ರಸ ಗೊಬ್ಬರದ ಜೊತೆಗೆ ಸಾವಯವ  ವಸ್ತುಗಳನ್ನು ಅದರಲ್ಲೂ ಸ್ಥೂಲ (Bulk manures ) ಗೊಬ್ಬರಗಳ ಮೂಲವನ್ನು ಸಾಧ್ಯವಾದಷ್ಟು ಬಳಕೆ ಮಾಡಬೇಕು.
  • ಸಾವಯವ ವಸ್ತು ಎಂದರೆ ಅದು ಬಾಟಲಿಯಲ್ಲಿ ಬರುವ ದ್ರವ ಅಲ್ಲ. ಚೀಲದಲ್ಲಿ ಬರುವ ಸಿದ್ದ ಗೊಬ್ಬರ ಅಲ್ಲ.
  • ಕಡಿಮೆ ಬೆಲೆಗೆ ಸಿಗುವ ಎಷ್ಟು ಹಾಕಿದರೂ ಹೆಚ್ಚಾಗದಂತಿರುವ ಮೂಲವಸ್ತುಗಳೇ ಸ್ಥೂಲ ಗೊಬ್ಬರಗಳು.
  • ಯಾವುದೇ ಬೆಳೆ ತ್ಯಾಜ್ಯಗಳನ್ನು ಹಾಳು ಮಾಡದೆ ಭೂಮಿಗೆ ಸೇರಿಸಬೇಕು.
  • ಮಣ್ಣಿನಲ್ಲಿ ಅವು ಕರಗುವಂತೆ ತೇವಾಂಶವನ್ನೂ ಒದಗಿಸಬೇಕು.
  • ಅದು ಮಣ್ಣಿನ ರಚನೆ ಉತ್ತಮವಾಗುತ್ತದೆ. ಮಣ್ಣು ರಸ ಗೊಬ್ಬರಗಳಿಗೆ ಸ್ಪಂದಿಸುತ್ತದೆ.
  • ತೃಪ್ತಿಕರವಾದ ಬೆಳವಣಿಗೆ ಕಂಡು ಬಂದಾಗ ರಸ ಗೊಬ್ಬರಗಳನ್ನು ಬಿಡಲೂ ಬಹುದು.
  • ಮಣ್ಣಿನ ಆರೋಗ್ಯ ಕೃಷಿಯಲ್ಲಿ ಕೀಲಿ ಕೈ ಇದ್ದಂತೆ. ಅದನ್ನು ಕೆಡಿಸುವ ಕೃಷಿ ಕ್ರಮವನ್ನು ಅನುಸರಿಸಲೇ ಬಾರದು.

ರೈತರು ಸಂಪೂರ್ಣವಾಗಿ ರಸ ಗೊಬ್ಬರಗಳನ್ನು ಬಿಡಬೇಕು, ಸಾವಯವ ಕೃಷಿಯಲ್ಲೇ ಬೆಳೆ ಬೆಳೆಯಬೇಕು ಎಂಬುದು ಸಧ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವಾಗಬಹುದು. ಆದರೆ ಬದಲಾವಣೆ ನಿಧಾನವಾಗಿಯಾದರೂ ಆಗಲೇಬೇಕು. ರಸ ಗೊಬ್ಬರಗಳ ಬಳಕೆ ಕಡಿಮೆ ಮಾಡುತ್ತಾ, ಕಡಿಮೆ ರಸ ಗೊಬ್ಬರಕ್ಕೆ ಮಣ್ಣು ಸ್ಪಂದಿಸುವಂತೆ ಮಣ್ಣಿನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಬೇಕು.

ಮಣ್ಣು ಆರೋಗ್ಯ ಚೆನ್ನಾಗಿದ್ದರೆ ರೋಗ, ಕೀಟ ಸಮಸ್ಯೆ ಕಡಿಮೆಯಾಗುತ್ತದೆ. (Soil microbes increases) ಸರಕಾರ ಮಣ್ಣಿನ ಆರೋಗ್ಯ  ಸುಧಾರಣೆ ಎಂದು ಹೇಳಿದರೆ ಸಾಲದು,ಕೃಷಿ ಪೂರಕ ಉದ್ದಿಮೆಗಳ ಸಾವಯವ ತ್ಯಾಜ್ಯಗಳನ್ನು (ಉದಾ: ಸಕ್ಕರೆ ಕಾರ್ಖಾನೆಯ ತ್ಯಾಜ್ಯ, ಮುಂತಾದವು) ರೈತರಿಗೆ ತೀರಾ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಬೇಕು. ರೈತರಿಗೆ ಸಾವಯವ ವಸ್ತುಗಳು ಊಟಕ್ಕಿಂತ  ಉಪ್ಪಿನ ಕಾಯಿ ದುಬಾರಿಯಾದಂತೆ ಆಗಬಾರದು.

Leave a Reply

Your email address will not be published. Required fields are marked *

error: Content is protected !!