ಬಹುತೇಕ ತರಕಾರಿಗಳಲ್ಲಿ ಗಂಡು ಹೂವು, ಹೆಣ್ಣು ಹೂವು ಗಳಿರುತ್ತವೆ. ಗಂಡಿನ ಮೂಲಕ ಪರಾಗಸ್ಪರ್ಶ ಆಗಿ ಕಾಯಿ ಕಚ್ಚಬೇಕು. ಆದರೆ ತೊಂಡೆ ಕಾಯಿ ಹಾಗಲ್ಲ. ಎಲ್ಲಾ ಹೂವುಗಳೂ ಕಾಯಿಯಾಗುತ್ತದೆ.
ತೊಂಡೆ ಕಾಯಿ ಬೇಡಿಕೆಯ ತರಕಾರಿ. ರಾಜ್ಯದ ಎಲ್ಲಾ ಕಡೆ ಬೆಳೆಸಬಹುದು. ಒಮ್ಮೆ ತೊಂಡೆ ಬೆಳೆಸಿದವರು ಮತ್ತೆ ಆ ಕೃಷಿ ಬಿಡುವುದಿಲ್ಲ. ಮಳೆ ಕಡಿಮೆ ಇರುವ ಕಡೆ ಇದನ್ನು ವರ್ಷದುದ್ದಕ್ಕೂ ಬೆಳೆಸಬಹುದು. ಮಳೆ ಹೆಚ್ಚು ಇರುವಲ್ಲಿ ನವೆಂಬರ್ ತಿಂಗಳ ನಂತರ ಜೂನ್ ತನಕ ಬೆಳೆ ಬೆಳೆಸಬಹುದು. 100 ಚದರ ಅಡಿಯ ಚಪ್ಪರದಲ್ಲಿ ಮೂರು ದಿನಕ್ಕೊಮ್ಮೆ 2-3 ಕಿಲೋ ತನಕ ತೊಂಡೆ ಕೊಯ್ಯಲು ಸಿಗುತ್ತದೆ. ತೊಂಡೆ ಬೆಳೆಯಲ್ಲಿ ಒಂದು ಎಕ್ರೆಗೆ 15 ಟನ್ ಗೂ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಸರಾಸರಿ 15-20 ರೂ. ಬೆಲೆ ಇದ್ದು, ಒಂದು ಎಕ್ರೆ ತೊಂಡೆ ಬೇಸಾಯದಲ್ಲಿ 2.5ಲಕ್ಷಕ್ಕೂ ಹೆಚ್ಚು ಆದಾಯ ಪಡೆಯಬಹುದು.
ಹೇಗೆ ಬೆಳೆಸುವುದು?
- ತೊಂಡೆಯನ್ನು ಬಳ್ಳಿ ತುಂಡುಗಳ ಮೂಲಕ ಸಸ್ಯಾಭಿವೃದ್ದಿ ಮಾಡಲಾಗುತ್ತದೆ. ಬಳ್ಳಿಯ ತುಂಡುಗಳನ್ನು ಗುಣಿಯಲ್ಲಿ ನೆಡಬೇಕು.
- ಇದು ಬಹುವಾರ್ಷಿಕ ತರಕಾರಿ ಬೆಳೆಯಾದ ಕಾರಣ ಏರಿ ಮಾಡಿ ಬೆಳೆಸುವುದು ಸೂಕ್ತವಲ್ಲ.
- ತೊಂಡೆ ಬಳ್ಳಿ ನೆಟ್ಟು ಚಪ್ಪರಕ್ಕೆ ಹಬ್ಬುವ ತನಕ ಮದ್ಯಂತರದಲ್ಲಿ ಹರಿವೆ , ಮೆಣಸು ಬೆಳೆಸಬಹುದು.
ಗುಣಿಗಳನ್ನು ಸುಮಾರು 2 ಮೀಟರು ಅಂತರದಲ್ಲಿ ತೆಗೆಯಬೇಕು ಎನ್ನುತ್ತಾರೆ. ಆದರೆ ತೊಂಡೆ ಬೆಳೆಯುವ ಅನುಭವಿ ರೈತರು ಗುಣಿ ತೋಡುವ ಬದಲು ಸಾಲು ಮಾಡಿ ಅದರಲ್ಲಿ ನಾಟಿ ಮಾಡುತ್ತಾರೆ. ಸುಮಾರು 10 ಅಡಿ ಅಂತರದಲ್ಲಿ ಸಾಲು ಮಾಡಿ ಅದರಲ್ಲಿ ನೆಡಲಾಗುತ್ತದೆ.
- ಗುಣಿಯನ್ನು ಸಾಕಷ್ಟು ಕಾಂಪೋಸ್ಟು ಗೊಬ್ಬರ ಹಾಕಿ ತುಂಬಬೇಕು.
- ಇದರಿಂದ ನೆಟ್ಟ ಬಳ್ಳಿ ತುಂಡು ಉತ್ತಮವಾಗಿ ಬೇರು ಬಿಡುತ್ತದೆ.
- ಒಮ್ಮೆ ಹದವಾಗಿ ಮಣ್ಣು ಬಿಸಿ ಆಗುವಷ್ಟು ಸುಟ್ಟರೆ ಒಳ್ಳೆಯದು. ಇದರಿಂದ ಮಣ್ಣಿನ ಜಂತು ಹುಳ ಸಾಯುತ್ತದೆ.
ಬಳ್ಳಿ ತುಂಡುಗಳನ್ನು ಹೊಡದ ಮಾಧ್ಯಮದಲ್ಲಿ ಅರ್ಧ ಚಂದ್ರಾಕಾರದಲ್ಲಿ ಬಗ್ಗಿಸಿ ನಾಟಿ ಮಾಡಬೇಕು. ಆಗ ಅದರ ಗಂಟುಗಳಿಂದ ಹೆಚ್ಚು ಚಿಗುರುಗಳು ಬರುತ್ತವೆ.ತೊಂಡೆ ಬಳ್ಳಿಯನ್ನು ಈಗ ಅಥವಾ ಮಳೆ ಸ್ವಲ್ಪ ಕಡಿಮೆಯಾಗುವಾಗ ನೆಟ್ಟರೆ ಜನವರಿಯಿಂದ ಇಳುವರಿ ಪ್ರಾರಂಭವಾಗಿ ಜೂನ್ ತನಕವೂ ಇಳುವರಿ ಸಿಗುತ್ತಾ ಇರುತ್ತದೆ.ಮಳೆ ಕಡಿಮೆ ಇರುವಲ್ಲಿ ಇಡೀ ವರ್ಷ ಇಳುವರಿ.
- ನೆಡು ಬಳ್ಳಿಯ ಲಭ್ಯತೆಗನುಗುಣವಾಗಿ 1- 2 ಅಡಿಗೊಂದರಂತೆ ನೆಡಬಹುದು.
- ಬಳ್ಳಿಯ ಚಿಗುರುಗಳನ್ನು ಚಪ್ಪರಕ್ಕೆ ಹಬ್ಬಲು ಆಸರೆ ಒದಗಿಸಬೇಕು.
- ಒಮ್ಮೆ ಚಪ್ಪರಕ್ಕೆ ಬಳ್ಳಿ ಏರಿದರೆ, ನಂತರದ ಚಿಗುರು ಬಳ್ಳಿಗಳು ತನ್ನಷ್ಟಕ್ಕೇ ಹಬ್ಬುತ್ತಿರುತ್ತವೆ.
- ಚಪ್ಪರವನ್ನು ಬಲೆಯಲ್ಲಿ ಮಾಡಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ಕೋಲಾರ ಮುಂತಾದೆಡೆ ಕಲ್ಲು ಕಂಬ ಹಾಕಿ ಸರಿಗೆಯ ಮೂಲಕ ಮಾಡುತ್ತಾರೆ.
ತಳಿಗಳು:
- ತೊಂಡೆಯಲ್ಲಿ ಸುಮಾರು 10 ಕ್ಕೂ ಹೆಚ್ಚು ತಳಿಗಳಿವೆ.
- ಡಿ ಅರ್ ಸಿ -1 : ಈ ತಳಿ ಕೋಲಾರ,ಆಂದ್ರ, ಸುತ್ತಮುತ್ತ ಬೆಳೆಸುತ್ತಾರೆ. ಅಧಿಕ ಇಳುವರಿ ಕೊಡುತ್ತದೆ. ತಿಳಿ ಹಸುರು ಬಣ್ಣದ ಬಿಳಿ ಗೆರೆ ಇದೆ.
- ಡಿ ಅರ್ ಸಿ -2 : ಇದು ಮಧ್ಯಮ ಗಾತ್ರದ ಕಾಯಿ. ಹಸುರು ಬಣ್ಣ. ಉತ್ತಮ ಇಳುವರಿ ಕೊಡುತ್ತದೆ.
- ಸುಲಭ: ಇದು ಕೇರಳ ಮೂಲದ ತಳಿಯಾಗಿದ್ದು, ಉದ್ದದ ಕಾಯಿ. ಬೇಗ ಇಳುವರಿಗೆ ಪ್ರಾರಂಭವಾಗುತ್ತದೆ. ಒಂದು ಕಾಯಿ 18 ಗ್ರಾಂ ತೂಗುತ್ತದೆ.
- ಅರ್ಕಾ ನೀಲಾಂಚಲ್ ಕುಂಕಿ ಮತ್ತು ಅರ್ಕಾ ನೀಲಾಂಚಲ್ ಸುಭುಜಾ : ಇದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಆಯ್ಕೆ ಮಾಡಿದ ತಳಿ. ಉತ್ತಮ ಇಳುವರಿ ಕೊಡುತ್ತದೆ.
- ಕೊಯಂಬತ್ತೂರು ಕೃಷಿ ವಿಶ್ವ ವಿಧ್ಯಾನಿಲಯವು ಮೂರು ಉತ್ತಮ ತಳಿಯನ್ನು ಬಿಡುಗಡೆ ಮಾಡಿದೆ.
- ಕೇರಳ ಕೃಷಿ ವಿಶ್ವ ವಿಧ್ಯಾನಿಲಯ ಸಹ ಎರಡು ತಳಿಯನ್ನು ಬಿಡುಗಡೆ ಮಾಡಿದೆ.
- ಮಹಾರಾಷ್ಟ್ರ ಗುಜರಾತ್, ಮುಂತಾದ ಕಡೆ ತೊಂಡೆ ಬೆಳೆ ಇದ್ದು ಇಲ್ಲಿ ತಳಿಗಳು ಬೇರೆ ಇವೆ.
ಇದು ಸುಲಭದ ಬೆಳೆ:
- ತೊಂಡೆ ಬೆಳೆಯಲ್ಲಿ ನಾಟಿ ಮಾಡಿ ಬಳ್ಳಿ ಚಪ್ಪರಕ್ಕೆ ಏರಿದ ತರುವಾಯ ಹೂವಾಗಲು ಪ್ರಾರಂಭವಾಗುತ್ತದೆ.
- ಇದರಲ್ಲಿ ಗಂಡು ಹೂವು ಪ್ರತ್ಯೇಕ ಇಲ್ಲ. ಎಲ್ಲಾ ದ್ವಿಲಿಂಗ ಹೂವುಗಳು. ಚಳಿಗಾಲದಲ್ಲಿ ಸ್ವಲ್ಪ ಹೂ ಬಿಡುವಿಕೆ ಕಡಿಮೆ.
- ಬೇಸಿಗೆಯಲ್ಲಿ ಪ್ರತೀ ಎಲೆ ಕಂಕುಳದಲ್ಲೂ ಹೂ ಬಿಡುತ್ತದೆ. ಆಗ ಅತ್ಯಧಿಕ ಇಳುವರಿ.
- ತೊಂಡೆಯನ್ನು ವಾರಕ್ಕೆ 2 ಸಲ ಕೊಯಿಲು ಮಾಡಬೇಕು.
- ಎಲೆ ತಿನ್ನುಹ ಹುಳು ಮತ್ತು ಕಾಯಿಯಲ್ಲಿ ಮೇಣ ಸ್ರವಿಸುವ ಸಮಸ್ಯೆ ಬಿಟ್ಟರೆ ,ಅಂತಹ ಸಮಸ್ಯೆ ಇಲ್ಲ.
- ವಿಶೇಷ ಕೀಟ ನಾಶಕದ ಅವಶ್ಯಕತೆ ಇಲ್ಲ. ಚಳಿಗಾಲದಲ್ಲಿ ಇಬ್ಬನಿ ಬೀಳುವ ಸಮಯದಲ್ಲಿ ಸ್ವಲ್ಪ ಎಲೆ ಸೊರಗುವ ರೋಗ ಬರುತ್ತದೆ.
- ಇದಕ್ಕೆ ವಿಷ ರಾಸಾಯನಿಕ ವನ್ನೇ ಬಳಸಬೇಕಾಗಿಲ್ಲ. ಪೊಟ್ಯಾಶಿಯಂ ಫೋಸ್ಫೋನೇಟ್ ಸಿಂಪಡಿಸಿ ನಿಯಂತ್ರಣಕ್ಕೆ ತರಬಹುದು.
- ಹುಳಗಳ ನಾಶಕ್ಕೆ ಜೈವಿಕ ಕೀಟನಾಶಕ ವರ್ಟಿಸೀಲಿಯಂ ಬಳಸಿದರೆ ಯಾವುದೇ ವಿಷದ ಅಗತ್ಯ ಇರಲಾರದು.
ತೊಂಡೆ ಬೇಸಾಯಕ್ಕೆ ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆಗೊಬ್ಬರ ಕೊಡಬೇಕಾಗುತ್ತದೆ. ಹೂವು ಹೆಚ್ಚು ಬರಲು ರಂಜಕ ಹೆಚ್ಚು ಬೇಕು. ವಾಣಿಜ್ಯ ಬೆಳೆಗೆ ರಾಸಾಯನಿಕ ಗೊಬ್ಬರ ಸೂಕ್ತ .ಗೊಬ್ಬರ ಕೊಟ್ಟರೆ ಹೆಚ್ಚು ಹೆಚ್ಚು ಹೊಸ ಚಿಗುರುಗಳು ಬರುತ್ತವೆ. ಹೂವು ಬರುತ್ತದೆ. ಒಮ್ಮೆ ಹೂವಾದ ಬಳ್ಳಿ ಗಂಟಿನಲ್ಲಿ ಮತ್ತೆ ಹೂವಾಗುವುದಿಲ್ಲ. ಆದ ಕಾರಣ ಹೆಚ್ಚು ಹೆಚ್ಚು ಕವಲು ಚಿಗುರುಗಳು ಬರುತ್ತಲೇ ಇರಬೇಕು. ಹೂವು ಮುಗಿದ ಬಳ್ಳಿಗಳನ್ನು ತುಂಡು ಮಾಡಿದರೆ ಹೊಸ ಚಿಗುರು ಬರುತ್ತದೆ. ಟ್ರೆಲ್ಲಿಸ್ ಮಾದರಿಯಲ್ಲಿ ಬಳ್ಳಿ ಬಾಗಿದ ಕಡೆ ಮತ್ತೆ ಹೊಸ ಚಿಗುರು ಬಂದು ಹೂವು ಹೆಚ್ಚಾಗುತ್ತದೆ. ಕೊಯಿಲು ಬಹಳ ಸುಲಭ.
- ಒಮ್ಮೆ ನಾಟಿ ಮಾಡಿದ ಬಳ್ಳಿಯಿಂದ 3 ವರ್ಷ ಕಾಲ ಇಳುವರಿ ಪಡೆಯಬಹುದು.
- ಆದರೆ ಅಧಿಕ ಮಳೆಯಾಗುವ ಕಡೆ ಪ್ರತೀ ವರ್ಷ ಚಪ್ಪರಕ್ಕೆ ಹಬ್ಬಿದ ಬಳ್ಳಿಯನ್ನು ತುಂಡು ಮಾಡಿ ಬಳ್ಳಿ ಮಾತ್ರ ಚಪ್ಪರದಿಂದ ಜಾರದಂತೆ ಉಳಿಸಬೇಕು.
- ಹಬ್ಬಿದ ಬಳ್ಳಿಯನ್ನು ಹಾಗೇ ಬಿಟ್ಟರೆ ಬಲಿಷ್ಟ ಚಿಗುರುಗಳು ಬರಲಾರದು.
- ಪುಷ್ಟಿಯಾದ ಚಿಗುರುಗಳಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
- ಅಧಿಕ ಮಳೆಯಾಗುವ ಕಡೆ ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲದಂತೆ ಮಾಡಿದರೆ ಬಳ್ಳಿ ಬುಡ ಕೊಳೆಯುವುದಿಲ್ಲ.
- ಮಳೆಗಾಲದಲ್ಲಿ ಬುಡದಲ್ಲಿ ಸ್ವಲ್ಪವೂ ನೀರು ನಿಲ್ಲದಂತೆ ಬಸಿ ಗಾಲುವೆ ಮಾಡಿದರೆ ಬಳ್ಳಿ ಕೊಳೆಯದು.
ಸ್ಥಳೀಯ ಮಾರುಕಟ್ಟೆಗೆ ಸರಿಯಾಗಿ ಉತ್ಪಾದನೆ ಮಾಡುವಾಗ ಸ್ಥಳೀಯವಾಗಿ ಯಾವುದಕ್ಕೆ ಬೇಡಿಕೆ ಇದೆಯೋ ಅದೇ ತಳಿಯನ್ನು ಬೆಳೆಸುವುದು ಸೂಕ್ತ.