ಶ್ರೀಗಂದ ಬೆಳೆದರೆ ರೈತರು ಕೋಟಿಯಲ್ಲಿ ಮಾತಾಡಬಹುದಂತೆ. ರೈತರೇ ಕೋಟಿಯ ಆಶೆಗಾಗಿ ಗಂಧ ಬೆಳೆಸಬೇಡಿ. ಆದರೆ ಹೋದರೆ ಬಂದರೆ ಕೊಟಿ ಅಷ್ಟೇ.
ಶ್ರೀಗಂಧದ ಬೆಳೆ ಎಲ್ಲದಕ್ಕಿಂತ ಸುಲಭ,ನಿರ್ವಹಣೆ ಇಲ್ಲ, ಬಂಡವಾಳದ ಅವಶ್ಯಕತೆ ಇಲ್ಲ, ಕಡಿಮೆ ಪರಿಶ್ರಮದಲ್ಲಿ ಕೋಟಿ ಲೆಕ್ಕದ ಆದಾಯ ಎಂದೆಲ್ಲಾ ಸಲಹೆ ಕೊಡುವವರು ಸಾಕಷ್ಟು ಜನ ಇದ್ದಾರೆ. ಮಾಡುವುದು ಯಾರೋ, ಬಂಡವಾಳ ಯಾರದ್ದೋ , ಹೇಳುವವರಿಗೆ ಪರೋಕ್ಷವಾಗಿ ತಕ್ಷಣದ ಲಾಭ ಇರುತ್ತದೆ. ಹಿತ್ತಾಳೆಯನ್ನು ಅಪ್ಪಟ ಚಿನ್ನವೆಂದೇ ವಾದ ಮಾಡುವವರಿರುತ್ತಾರೆ. ರೈತರೇ ಕೋಟಿ ಮಾಡಲಾಗುವುದಿದ್ದರೆ ನಿಮಗೆ ಯಾರೂ ಹೇಳದೆ ಅವರೇ ಮಾಡಿಕೊಳ್ಳುತ್ತಾರೆ. ಅವರ ಜೇಬಿನಲ್ಲಿ ಸ್ಥಳ ಇಲ್ಲದಾದಾಗ ಮಾತ್ರ ನಿಮಗೆ ಅದನ್ನು ಬಿಟ್ಟು ಕೊಡುತ್ತಾರೆ. ಶ್ರೀಗಂಧ ಚಿನ್ನ ಚಿನ್ನವೇ. ಆದರೆ ನಮಗೆ ಅದನ್ನು ಉಳಿಸಿ ಅನುಭವಿಸುವ ಭಾಗ್ಯ ಬೇಕು! (ಹಣ ಇದ್ದವನಲ್ಲಿ ಋಣ ಇದ್ದಷ್ಟೇ ಪಡೆಯಬಹುದು)
-
ಜನ ಮರುಳೋ ಜಾತ್ರೆ ಮರುಳೋ ಎಲ್ಲರೂ ಒಂದು ಬೆಳೆಯ ಹಿಂದೆ ಹೋದರೆ ಅದರ ಮೌಲ್ಯ ಖಂಡಿತವಾಗಿಯೂ ಇಳಿಮುಖವಾಗುತ್ತದೆ.
-
ಇಂದು ಶ್ರೀಗಂಧಕ್ಕೆ ಭಾರೀ ಬೆಲೆ ಇದ್ದರೆ ಅದು ತೀವ್ರ ಕೊರತೆ ಇದ್ದ ಕಾರಣ.
-
ಅದರೆ ಜನ ಈಗ ನೆಟ್ಟ ಶ್ರೀಗಂಧ ಏನಾದರೂ ತಿರುಳು ಬಂದು ಮಾರುಕಟ್ಟೆಗೆ ಬಂದರೆ ಅದಕ್ಕೆ ಆಗ ಎಷ್ಟು ಬೆಲೆ ನಿಲ್ಲಬಹುದು ಎಂಬುದನ್ನು ಯಾರೂ ಹೇಳುವುದೂ ಇಲ್ಲ.
-
ಅದನ್ನು ಅಧ್ಯಯನ ಮಾಡುವುದೂ ಇಲ್ಲ. ಶ್ರೀಗಂಧದ ಕಥೆ ಮುಂದೆ ವನಿಲ್ಲಾ ತರಹ ಆದರೂ ಅಚ್ಚರಿ ಇಲ್ಲ.
ಶ್ರೀಗಂಧದ ಕಥೆ ಹೀಗಿದೆ :
- ಶ್ರೀಗಂಧ ಈಗ ರೈತರು ಬೆಳೆಸಬಹುದಾದ ಬೆಳೆಯಾಗಿದೆ. ಇದನ್ನು ಬೆಳೆಸಲು ಪರವಾನಿಗೆ ಬೇಡ.
- ಅದರೆ ಅದನ್ನು ಕಡಿದು ಕೃಷಿ ಉತ್ಪನ್ನ ಮಾರಾಟ ಮಾಡಿದಂತೆ ಮಾರಾಟ ಮಾಡಲಿಕ್ಕೆ ಆಗುವುದಿಲ್ಲ.
- ಈಗ ಕಿಲೋ ಶ್ರೀಗಂಧಕ್ಕೆ 14,000 ತನಕ ಬೆಲೆ ಇದೆ.
- ಇದು ಒಣ ಶ್ರಿ ಗಂಧಕ್ಕೆ . ಒಂದು ಶ್ರೀಗಂಧದ ಮರ ತನ್ನ ಎಲ್ಲಾ ತೇವಾಂಶವನ್ನು ಕಳೆದುಕೊಂಡು ಒಣಗಬೇಕಾದರೆ ಅದಕ್ಕೆ ಒಂದು ವರ್ಷ ಅವಧಿ ಬೇಕಾಗುತ್ತದೆ.
- 1000 ಮರ ಇದ್ದರೆ 1 ಕೋಟಿಗೂ ಹೆಚ್ಚು ಆದಾಯ. ಇದೆಲ್ಲಾ ಈಗಿನ ಲೆಕ್ಕಾಚಾರವೇ ಹೊರತು ಉತ್ಪಾದನೆ ಆದ ನಂತರದ್ದು ಅಲ್ಲ.
- ನಮ್ಮ ದೇಶದಾದ್ಯಂತ ಲಕ್ಷಾಂತರ ರೈತರು ಸುಮಾರು 60000 ಹೆಕ್ಟೇರಿಗೂ ಹೆಚ್ಚಿನ ಪ್ರದೇಶದಲ್ಲಿ ಶ್ರೀಗಂಧ ಬೆಳೆಸಿದ ವರದಿ ಇದೆ.
- ಬರೇ ನಮ್ಮ ದೇಶವಲ್ಲದೆ ಆಸ್ಟ್ರೇಲಿಯಾ, ವಿಯೆಟ್ ನಾಮ್, ಚೀನಾ ಮುಂತಾದ ದೇಶಗಳಲ್ಲಿ ಶ್ರೀಗಂಧ ನಮ್ಮ ದೇಶದಲ್ಲಿ ಬೆಳೆಯುತ್ತಿರುವಂತೆ ವಿಸ್ತೃತವಾಗಿ ಬೆಳೆಯುತ್ತಿವೆ. (ಮೂಲ:CWSTI)
- ನಮ್ಮ ದೇಶದಿಂದಲೇ ಇಲ್ಲಿಗೂ ಸಸ್ಯ ಮೂಲ ಹೋಗಿದೆ ಎಂಬ ವರದಿಗಳೂ ಇವೆ.
ನಮ್ಮ ದೇಶದಲ್ಲಿ ಮೈಸೂರು ಸೀಮೆ ಮತ್ತು ಕರ್ನಾಟಕ -ತಮಿಳುನಾಡಿನ ಗಡಿ ಭಾಗ ಶ್ರೀಗಂಧ ಬೆಳೆಯುತ್ತಿದ್ದ ಸಾಂಪ್ರದಾಯಿಕ ಪ್ರದೇಶಗಳು. ಇಲ್ಲಿ ಶ್ರೀಗಂಧ ವೇಗವಾಗಿ, ಹುಲುಸಾಗಿ ಬೆಳೆಯುತ್ತದೆ. ಉಳಿದೆಡೆ ಸ್ವಲ್ಪನಿಧಾನಗತಿಯ ಬೆಳವಣಿಗೆ ಎಂದು ಅಧ್ಯಯನಗಳು ಮಾಹಿತಿ ಕಲೆ ಹಾಕಿವೆ. ಆದರೆ ಈಗ ಆ ಪ್ರದೇಶಗಳಲ್ಲದೆ ಇತರ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್ , ಸಿಕ್ಕಿಂ, ಮಿಜೋರಾಂ, ಮೇಘಾಲಯಗಳಲ್ಲೂ ಶ್ರೀಗಂಧ ಬೆಳೆಸುತ್ತಿದ್ದಾರೆ. ನಮ್ಮ ರಾಜ್ಯದಲ್ಲೇ ಸುಮಾರು 25000 ಎಕ್ರೆಯಷ್ಟು ಶ್ರೀಗಂಧದ ಬೆಳೆ ಇದೆ ಎಂಬ ಲೆಕ್ಕಾಚಾರ ಇದೆ.
ಕೋಟಿ ಸಂಪಾದನೆಗೆ ಇದು ಬೇಕು.
- ಶ್ರೀಗಂಧದ ಮರವನ್ನು ನಾವೆಲ್ಲಾ ಕಂಡಿದ್ದೇವೆ. ಅದಕ್ಕೆ ಎಷ್ಟು ತಿರುಳು ಇರುತ್ತದೆ ಎಂಬುದೂ ನಮಗೆ ಗೊತ್ತಿದೆ.
- ಹೆಚ್ಚು ತಿರುಳು ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.
- ಕಾರಣ ಮರವನ್ನು ಯಾರು ನೆಟ್ಟು ಬೆಳೆಸಿದ್ದಲ್ಲ.
- ಅದರಷ್ಟಕ್ಕೇ ಹಕ್ಕಿಗಳು ಬೀಜ ತಿಂದು ಹೊರಹಾಕಿದ ಹಿಕ್ಕೆಯಲ್ಲಿ ಹುಟ್ಟಿದ ಮರಗಳು.
- ಬಹಳಷ್ಟು ಗಂಧದ ಮರಗಳಲ್ಲಿ ತಿರುಳು ತೀರಾ ಕಡಿಮೆ. ಇದಕ್ಕೆ ಕಾರಣ ಏನಿರಬಹುದು?
ಶ್ರೀಗಂಧದಲ್ಲಿ ಏನಾದರೂ ಹೆಚ್ಚು ತಿರುಳು ಬರುವ ತಳಿ ಇದೆಯೇ ? ನಾವು ಬೆಳೆಸಿದ್ದು ನಾಯಿ ಗಂಧವೇ (ಕಾಟು ಗಂಧ) ಎಂಬೆಲ್ಲಾ ಸಂದೇಹಗಳು ನಮ್ಮಲ್ಲಿವೆ.
- ನಿಜವಾಗಿ ಶ್ರೀಗಂಧದಲ್ಲಿ ನಮ್ಮ ದೇಶದಲ್ಲಿ ಇರುವುದು ಒಂದೇ ಒಂದು ತಳಿ.
- ಮನುಷ್ಯನಲ್ಲಿ ಗುಣ ವ್ಯತ್ಯಾಸ ಇರುವಂತೆ ಇದರಲ್ಲೂ ಇದೆ ಅಷ್ಟೇ.
- ಅದನ್ನು ವಂಶ ಗುಣ ಎನ್ನುತ್ತಾರೆ.
- ಅದೇ ರೀತಿ ಗಂಧದಲ್ಲೂ ತಳಿ ಒಂದೇ, ಅದರಲ್ಲಿ ಗುಣ ಸ್ವಲ್ಪ ಭಿನ್ನವಾಗಿರುವ ಸಾಧ್ಯತೆ ಇದೆ.
- ನಾಯಿ ಗಂಧ ಎಂಬುದು ಇಲ್ಲ.
- ಹೆಚ್ಚಿನ ಶ್ರೀ ಗಂಧದಲ್ಲಿ ತಿರುಳು ಬರುವುದು ಅದು ಬೆಳೆಯುವ ಪ್ರದೇಶದ ಹವಾಗುಣದ ಮೇಲೆ.
ಶ್ರೀಗಂಧ ಬೇಗ ತಿರುಳು ಕೂಡಿಕೊಂಡು ಬೆಳೆಯುವುದು ನಮ್ಮ ರಾಜ್ಯದ ಬಯಲುಸೀಮೆ ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ ಮಾತ್ರ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಮೈಸೂರು ಪ್ರಾಂತ್ಯದಲ್ಲಿ ಬೆಳೆಯುವ ಶ್ರೀಗಂಧದಲ್ಲಿ ತಿರುಳು ಹೆಚ್ಚು ಇರುತ್ತದೆ. ಉತ್ತಮ ಸುವಾಸನೆಯೂ ಇರುತ್ತದೆ ಎಂದು ಕೇಳಿರಬಹುದು. ಇದು ನಿಜ. ಕಾರಣ ಇಲ್ಲಿ ಶ್ರೀಗಂಧ ಬೆಳೆಗೆ ಬೇಕಾಗುವ ಸೂಕ್ತ ಹವಾಮಾನ ಇದೆ.
-
ಮಣ್ಣು ಫಲವತ್ತಾಗಿದ್ದರೆ ಚೆನ್ನಾಗಿ ಬೆಳೆಯುತ್ತದೆ.
-
ಆದರೆ ತಿರುಳು ಬರಲಾರದು.
-
ನಮ್ಮ ರಾಜ್ಯದಲ್ಲಿ ಈಗಾಗಲೆ 10-12 ವರ್ಷ ಬೆಳೆದ ಶ್ರೀಗಂಧದ ನೆಡು ತೋಪುಗಳಿವೆ.
-
ಅಲ್ಲಿ ತಿರುಳು ಎಷ್ಟು ಇದೆ ಎಂದು ಪರೀಕ್ಷೆ ಮಾಡಿದಾಗ ನಿರೀಕ್ಷೆಯಂತೆ ತಿರುಳು ಬಂದಿಲ್ಲ. ಬರೇ ಮರ ಬೆಳೆದಿದೆ.
-
ಶ್ರೀಗಂಧಕ್ಕೆ ಒಂದು ರೀತಿಯ ವೈರಾಣು ರೋಗ ಇದ್ದು, ಇದು ಬಾಧಿಸಿದ ಕಡೆ ಬೆಳೆದ ಮರ ಎಲೆಯು ತಿಳಿ ಹಸುರು ಬಣ್ಣವನ್ನು ಹೊಂದಿರುತ್ತದೆ.
-
ಸಸಿ ಬೆಳವಣಿಗೆ ನಿಧಾನ. ತಿರುಳು ಬರುವುದು ಕಡಿಮೆ.
ಕೋಟಿಯಲ್ಲದಿದ್ದರೂ ಭಯವಿಲ್ಲದೆ ಬದುಕಿ ಗರಿಷ್ಟ ಆದಾಯ ಕೊಡಬಲ್ಲ ಬೆಳೆ ಸಾಗುವಾನಿ ಮರ. ಇದು ರೈತರೆಲ್ಲರ ಗಮನದಲ್ಲಿ ಇರಬೇಕು. ಸಾಗುವಾನಿ ಅರವನ್ನು ಯಾರೂ ಕದ್ದುಕೊಂಡು ಹೋದಾರು ಎಂಬ ಭಯ ಇಲ್ಲ. ನೀವು ಇಚ್ಚಿಸಿದವರಿಗೆ ಮಾರಬಹುದು. ಎಷ್ಟು ಬೆಳೆಯಿತೋ ಅಷ್ಟು ಮೌಲ್ಯ ಹೆಚ್ಚಾಗುತ್ತದೆ.
ಶ್ರೀಗಂಧಕ್ಕೆ ಮೌಲ್ಯ ಯಾವಾಗ ?
- ಶ್ರೀಗಂಧಕ್ಕೆ ತಿರುಳು ಬಂದರೆ ಮಾತ್ರ ಅದಕ್ಕೆ ಮೌಲ್ಯ .
- ಇಲ್ಲವಾದರೆ ಅದು ಸಾಧಾರಣ ಕಟ್ಟಿಗೆ ಅಷ್ಟೇ.
- ಶ್ರೀಗಂಧದಲ್ಲಿ ತಿರುಳು ಎಷ್ಟಿದೆ, ಅದರಲ್ಲಿ ಎಣ್ಣೆ ಪ್ರಮಾಣ(Essentila oil)ಎಷ್ಟು ಇದೆ ಎಂಬುದರ ಮೇಲೆ ಅದಕ್ಕೆ ಬೆಲೆ ಕಟ್ಟಲಾಗುತ್ತದೆ.
- ಯಾವುದೇ ಮರಮಟ್ಟಿನಲ್ಲಿ ತಿರುಳು ಕೂಡುವುದು ಬರ ಸ್ಥಿತಿ ಉಂಟಾಗುವಾಗ.
- ತಿರುಳು ಬರುವ ಮರಮಟ್ಟುಗಳೂ ಸಹ ಒಣ ಪ್ರದೇಶದಲ್ಲಿ ಬೇಗ ತಿರುಳನ್ನು ಹೊಂದುತ್ತವೆ.
- ಯಾವುದೇ ಒಂದು ತಿರುಳು ಉಳ್ಳ ಮರಮಟ್ಟಿಗೆ ಕಾಂಡಕ್ಕೆ ಏನಾದರೂ ಗಾಯವಾದರೆ ಅಲ್ಲಿ ಬೇಗ ತಿರುಳು ಕೂಡುತ್ತದೆ.
- ಕಾರಣ ಬರ ಸ್ಥಿತಿ ಅಂತಹ ಸನ್ನಿವೇಶವನ್ನು ಸೃಷ್ಟಿಸುತ್ತದೆ.
- ಗಂಧದ ಸಸಿಯನ್ನು ಮಾರಾಟ ಮಾಡುವ ಅತೀ ದೊಡ್ಡ ದಂಧೆ ರೈತಾಪಿ ವರ್ಗದಲ್ಲಿ ಕೋಟಿಯ ಆಶೆಯನ್ನು ಹುಟ್ಟು ಹಾಕುತ್ತಿವೆ.
ಇದು ಬೆಳೆಯುವವರಿಗೆ ನಿರಾಶೆ ಮಾಡುವ ಬರಹ ಅಲ್ಲ. ಬೆಳೆಯುವ ಆಸಕ್ತರು ಭಾರೀ ಬಂಡವಾಳ ತೊಡಗಿಸಿ ಕೋಟಿಯ ಕನಸು ಕಾಣಬೇಡಿ ಎಂಬ ಕಳಕಳಿ ಅಷ್ಟೇ. ಕೋಟಿ ಯಾವಾಗಲೂ ಲಕ್ಷ ಆಗಬಹುದು. ಕೋಟಿಯಲ್ಲೇ ಇದ್ದರೆ ಆ ಆದಾಯದಲ್ಲಿ ಸರಕಾರಕ್ಕೆ ಪಾಲು ಸಹ ಹೋಗಬೇಕಾದೀತು. ಕಳ್ಳ ಕಾಕರಿಗೂ ಇದು ಆಹಾರವಾಗಬಹುದು. ಆದ ಕಾರಣ ಜಾಗರೂಕತೆಯಲ್ಲಿ ಭವಿಷ್ಯದ ಬೆಳವಣಿಗೆಯನ್ನು ಊಹನೆ ಮಾಡಿ ಶ್ರೀಗಂಧ ಬೆಳೆಸಿ. ಅದೂ ಮೌನವಾಗಿ ಯಾರಿಗೂ ಗೊತ್ತಾಗದಂತೆ ಮಾಹಿತಿ ಅರಿತುಕೊಂಡು ಬೆಳೆಸಿ.
end of the article:——————————————————————————
search words: Sandal wood cultivation# sandal wood cultivation and its myths# Is sandal wood fetches crores # Nursery lobbies of sandal wood cultivation# Reality of sandal wood cultivation#