ತೆಂಗಿನ ಕಾಯಿಯ, ಎಳೆಕಾಯಿಯ ನೀರು ಸಿಹಿಯಾಗಿರಲಿ ಅದರ ತಳಿ ಗುಣ ಕಾರಣ ಹೊರತು ಅದನ್ನು ಹೊರ ವಸ್ತುಗಳನ್ನು ಸೇರಿಸಿ ಸಿಹಿ ಮಾಡಲು ಸಾಧ್ಯವಿಲ್ಲ. ತೆಂಗಿನ ಕೆಲವು ತಳಿಗಳು ಸಿಹಿಯಾದ ಎಳನೀರನ್ನು ಕೊಡುತ್ತವೆ. ಮತ್ತೆ ಕೆಲವು ಸ್ವಲ್ಪ ಸಪ್ಪೆ. ಇದು ಯಾರೂ ಮಾಡುವುದು ಅಲ್ಲ. ಅದು ಅದರ ಅಂತರ್ಗತ ಗುಣ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಿಹಿ ಹೆಚ್ಚಿಸಲು ಸೂಕ್ಷ್ಮ ಪೊಷಕಾಂಶ ಮತ್ತು ಪೊಟ್ಯಾಶಿಯಂ ಬಳಕೆ ನೆರವಾಗುತ್ತದೆಯಾದರೂ ಯಾವ ಕೀಟನಾಶಕ ರೋಗ ನಾಶಕ ಇದನ್ನು ಹೆಚ್ಚಿಸುವುದಿಲ್ಲ.
- ಇತ್ತೀಚೆಗೆ ಒಂದು ವಾಟ್ಸ್ ಆಪ್ ಸಂದೇಶ ಪ್ರಸಾರವಾಗುತ್ತಿದ್ದು, ಕೇರಳ ಮಲಯಾಳಂ ಭಾಷೆಯಲ್ಲಿ ಈ ಸಂದೇಶ ಇರುತ್ತದೆ.
- ಮಲಯಾಳಂ ಬಲ್ಲ ಮಿತ್ರರೊಂದಿಗೆ ಈ ವಿಚಾರದಲ್ಲಿ ಚರ್ಚಿಸಿದಾಗ, ತಿಳಿದು ಬಂದ ಇದರ ಸಾರಾಂಶ ಇದು.
ತಮಿಳುನಾಡು ರಾಜ್ಯದಿಂದ ಕೇರಳಕ್ಕೆ ಬರುವ ಎಳನೀರಿರು ಕೊಡುವ ಮರಗಳಿಗೆ ಕಾಯಿಯ ಕೆಲವು ಕೀಟ ಸಮಸ್ಯೆ ನಿವಾರಣೆಗಾಗಿ ಬೇರನ್ನು ತುಂಡು ಮಾಡಿ ಬೇರಿನ ಮೂಲಲ ಅಲ್ಯೂಮಿನಿಯಂ ಫೋಸ್ಫೇಡ್ ಮತ್ತು ಕಾರ್ಬೋಫ್ಯ್ರಾನ್ ( ಪ್ಯುರಡಾನ್) ಮಿಶ್ರಣ ಮಾಡಿ ಬೇರುಗಳಿಗೆ ಕೊಡಲಾಗುತ್ತಿದೆ. ಇದನ್ನು ಕುಡಿದರೆ ಅದು ಕುಡಿದವರ ದೇಹಕ್ಕೆ ವಿಷಕಾರಿಯಾಗಬಹುದು ಎಚ್ಚರ ಎಂಬ ಸಂದೇಶವಾಗಿರುತ್ತದೆ.
ಇದು ನಿಜವಾಗಿಯೂ ನಡೆಯುತ್ತದೆಯೇ?
- ತೆಂಗಿನ ಮರಗಳಿಗೆ ಬೇರಿನ ಮೂಲಕ ಯಾವುದೇ ಕೀಟ ನಾಶಕ ಅಥವಾ ರೋಗ ನಾಶಕ ಕೊಡುವಾಗ ಸರಿಯಾಗಿ ತಿಳಿದುಕೊಳ್ಳದೆ ಅಥವಾ ಸೂಕ್ತ ವೈಜ್ಞಾನಿಕ ಸಲಹೆಗಳಿಲ್ಲದೆ ಕೊಡುವಂತಿಲ್ಲ.
- ಇಷ್ಟಕ್ಕೂ ತೆಂಗಿನಂತಹ ಏಕದಳ ಸಸ್ಯದ ತುಂಡಾದ ಬೇರು ಯಾವುದೇ ಪೋಷಕ ಅಥವಾ ಕೀಟನಾಶಕ ರೋಗನಾಶಕವನ್ನು ಹೀರಿ ಕೊಳ್ಳುವುದಿಲ್ಲ.
- ಬೇರಿನ ತುದಿ, ( ಟೋಪಿ ಇರುವ) ಭಾಗ ಮಾತ್ರ ಸ್ವಲ್ಪ ಮಟ್ಟಿಗೆ ಹೇರಿಕೊಳ್ಳಬಲ್ಲುದು.
- ಇಲ್ಲಿ ಬೇರನ್ನು ತುಂಡು ಮಾಡಿ ಕೀಟನಾಶಕವನ್ನು ಕೊಡುವ ಚಿತ್ರವನ್ನು ಹಾಕಲಾಗಿದೆ.
- ಇದು ಬಹುಷಃ ಯವುದೋ ಸೆನ್ಸಿಟಿವ್ ಸುದ್ದಿಯನ್ನು ಪಸರಿಸುವುದಕ್ಕಾಗಿ ಮಾಡಿದ ಚಿತ್ರದಂತೆ ಕಂಡು ಬರುತ್ತದೆ.
- ತಮಿಳುನಾಡು ಕೃಷಿ ವಿಶ್ವ ವಿಧ್ಯಾನಿಲಯವು ತೆಂಗಿನ ಬೆಳೆಗೆ ಕೆಲವು ರೋಗ( ಸ್ಟೆಮ್ ಬ್ಲೀಡಿಂಗ್) ಮತ್ತು ಕೀಟವಾದ ನುಶಿ ಪೀಡಿ, ಕೆಂಪು ಮೂತಿ ಹುಳದ ನಿಯಂತ್ರಣಕ್ಕಾಗಿ ಮೋನೋಕ್ರೋಟೋಫೋಸ್ ಮತ್ತು ಕಾರ್ಬನ್ ಡೈಜಿಮ್ ಅನ್ನು ಹಿಂದೆ ಒಮ್ಮೆ ಶಿಫಾರಸು ಮಾಡಿತ್ತು.
- ಇದು ಆರೋಗ್ಯವಂತ ಮರಗಳಿಗೆ ಅಲ್ಲ. ಯಾವ ಮರವು ರೋಗ ಪೀಡಿತವಾಗಿ ಕಾಯಿ ಬಿಡದ ಹಂತಕ್ಕೆ ತಲುಪಿದೆಯೋ ಅಂತದ್ದಕ್ಕೆ ಮಾತ್ರ ಬಳಸಲು ಶಿಫಾರಸು ಮಾಡಲಾಗಿದೆ.
- ಇತ್ತೀಚೆಗೆ ಕೆಂಪು ಮೂತಿ ಹುಳದ ಹಾವಳಿ ಹೆಚ್ಚಾಗಿದ್ದು, ಎಳೆಯ ಸಸಿಗಳಿಗೆ, ಮರಗಳಿಗೆ ಇದರ ಬಾಧೆ ಉಂಟಾದಾಗ ಮೋನೋಕ್ರೋಟೋಫೋಸ್ ಕೀಟನಾಶಕವನ್ನು ಬೇರಿನ ಮೂಲಕ ಕೊಡುವುದನ್ನು ಕೆಲವು ರೈತರು ಮಾಡುತ್ತಿದ್ದಾರೆ.
- ಕೀಟ ಬಾಧಿತ ಅಂತಹ ಮರಗಳಲ್ಲಿ ಎಳನೀರಾಗಲೀ, ಕಾಯಿಯಾಗಲೀ ಇರುವುದಿಲ್ಲ.
ಕೃಷಿ ವಿಶ್ವ ವಿಧ್ಯಾನಿಲಯ ಹಾಗೂ ಕೃಷಿ , ತೋಟಗಾರಿಕಾ ಇಲಾಖೆಯವರು ಕಡ್ದಾಯವಾಗಿ ಈ ಉಪಚಾರ ಮಾಡಿ, ಅದರ ಉಳಿಕೆ ಅಂಶ ಇಲ್ಲದಾಗುವ ವರೆಗೆ ಅಂದರೆ ಸುಮಾರು 40 ದಿನಗಳ ವರೆಗೆ ಕಾಯಿ, ಎಳನೀರು ಕೀಳಬಾರದು ಎಂದು ನಿರ್ಧೇಶನ ನೀಡುತ್ತಿದೆ.
ಎಳನೀರು ಸಿಹಿಯಾಗುವುದು ನಿಜವೇ?
- ಎಳನೀರು ಸಿಹಿ ಯಾಗಿರುವುದು ಅದರ ತಳಿ ಗುಣವೇ ಹೊರತು ಬೇರೇನೂ ಅಲ್ಲ.
- ಕೆಲವು ಗೊಬ್ಬರ ಮಾರಾಟಗಾರರು, ಸಿಹಿ ಅಂಶ ಹೆಚ್ಚಳವಾಗಲು ಸೂಕ್ಷ್ಮ ಪೋಷಕಾಂಶಗಳು ಇನ್ನಿತರ ಕೆಲವು ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುತ್ತಾರೆಯೇ ಹೊರತು ನಿಜವಾಗಿ ಅದು ಕೆಲಸ ಮಾಡುವುದಿಲ್ಲ.
- ಎಣ್ಣೆ ಉದ್ದೇಶದ (Oil copra) ಕೊಬ್ಬರಿಗೆ ಹೊಂದಿಕೆಯಾಗುವ ತೆಂಗಿನ ತಳಿಯ ನೀರು ಸ್ವಲ್ಪ ಸಿಹಿ ಕಡಿಮೆ ಇರುತ್ತದೆ.
- ತಿನ್ನುವ ಕೊಬ್ಬರಿ (Edible copra) ಯ ತೆಂಗಿನ ತಳಿಯ ನೀರು ಸಿಹಿಯಾಗಿರುತ್ತದೆ.
- ಕರ್ನಾಟಕದ ಅರಸೀಕೆರೆ, ತಿಪಟೂರು, ತಳಿಗಳ ಎಳನೀರಿನಲ್ಲಿ ಸಿಹಿ ಅಂಶ ಹೆಚ್ಚು. COD, ಗಂಗಬೊಂಡ, CGD, ಮುಂತಾದ ಎಳನೀರಿಗಾಗಿಯೇ ಇರುವ ತಳಿಗಳಲ್ಲಿ ಸಿಹಿ ಅಂಶ ಸ್ವಲ್ಪ ಹೆಚ್ಚು ಇರುತ್ತದೆ.
ಕೆಲವು ತಮಿಳುನಾಡಿನ ಮಿತ್ರರ ಜೊತೆ ಈ ಬಗ್ಗೆ ಚರ್ಚಿಸಿದಾಗ ಕೆಲವು ರೈತರು ಇಂತಹ ಕ್ರಮಗಳನ್ನು ಅನುಸರಿಸುವುದು ನಿಜವಂತೆ. ಅದು ಬೇರು ತುಂಡು ಮಾಡಿ ಸಸ್ಯಕ್ಕೆ ಕೊಡುವುದಾಗಿರುತ್ತದೆ. ಇದನ್ನು ಸಸ್ಯಗಳು ಸ್ವೀಕರಿಸಲಾರವು. ಅದು ಮಣ್ಣಿಗೆ ಇಳಿದು ಹೋಗುತ್ತದೆ. ಬೆಳೆಯುವ ಬೇರಿನ ತುದಿಗೆ ಅದರಲ್ಲೂ ಸೂಕ್ತ ಬೇರಿಗೆ ಕೊಟ್ಟಾಗ ಮಾತ್ರ ಅದನ್ನು ಸಸ್ಯ ಸ್ವೀಕರಿಸುತ್ತದೆ.
- ತೆಂಗಿನ ಮರಗಳಿಗೆ ಬೇರಿನ ಮೂಲಕ ಯಾವುದನ್ನೂ ಉಣಿಸುವುದೂ ಸ್ವಲ್ಪ ಜಠಿಲವಾದ ವಿಚಾರವೇ ಆಗಿದ್ದು, ಇದರಲ್ಲಿ ಪೂರ್ಣ ಫಲಿತಾಂಶವನ್ನು ನಿರೀಕ್ಷಿಸಲಾಗದು.
- ತೆಂಗಿನ ಮರದ ಬೇರುಗಳು ಎಲ್ಲಿಂದ ಪೋಷಕವನ್ನು ಹೀರಿಕೊಳ್ಳುತ್ತವೆ ಎಂಬ ಬಗ್ಗೆ ಇದು ವಿಜ್ಞಾನ ಹೇಳುವ ಸಂಗತಿ.
- The main roots give rise to several lateral branches which subsequently branch and re branch. These roots are popularly known as feeding roots. At the tip of each root, there is a root cap, which protects the tender growth point and enables it to push its way through the soil.
ಕೇರಳಕ್ಕೆ ಎಳನೀರು ಬರುವುದು ತಮಿಳುನಾಡಿನಿಂದ:
- ಕೇರಳ ಒಂದು ಕಾಲದಲ್ಲಿ ತೆಂಗಿನ ನಾಡಾಗಿತ್ತು. ಇಲ್ಲಿ ಪ್ರತೀಯೊಂದಕ್ಕೂ ತೆಂಗಿನ ಕಾಯಿಯನ್ನು ಬಳಸಲಾಗುತ್ತಿತ್ತು.
- ಆದರೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಇಲ್ಲಿ ತೆಂಗಿಗೆ ಒಂದು ಸೊರಗು ರೋಗ ಬಂದ ಕಾರಣ ಬಹುತೇಕ ಎಳನೀರು ನೆರೆಯ ತಮಿಳುನಾಡಿನಿಂದ ( ಪೊಲ್ಲಾಚಿ, ದಿಂಡಿಗಲ್) ನಿಂದ ಬರುತ್ತದೆ.
- ಈ ಮಾರುಕಟ್ಟೆಯನ್ನು ಸ್ವಲ್ಪ ಅಲ್ಲೋಲ ಕಲ್ಲೋಲ ಮಾಡಲು ಈ ಸಂದೇಶ ರವಾನೆಯಾಗುತ್ತಿದ್ದರೂ ಅಚ್ಚರಿ ಇಲ್ಲ.
- ಕರ್ನಾಟಕಕ್ಕೆ ಬಹುತೇಕ ಎಳನೀರು ಬರುವುದು ಅರಸಿಕೆರೆ, ತಿಪಟೂರು, ಮಂಡ್ಯ,ಮುಂತಾದ ಭಾಗಗಳಿಂದ.
- ಕೆಲವು ಕಡೆಗೆ ಆಂದ್ರದಿಂದಲೂ ಬರುತ್ತದೆ.
- ಕರ್ನಾಟಕದಲ್ಲಿ ಯಾರೂ ಈ ರೀತಿಯ ಕೀಟ ನಿಯಂತ್ರಣ ಅನುಸರಿಸುವುದಿಲ್ಲ.
- ಎಳನೀರು ಕುಡಿಯುವ ಜನ ನಾವು ಕುಡಿಯುವ ಎಳನೀರಿನಲ್ಲಿ ವಿಷ ಸೇರಲ್ಪಟ್ಟಿದೆ ಎಂದು ಅಂಜಬೇಕಾಗಿಲ್ಲ.
- ಇದು ಸತ್ಯವಲ್ಲದ ಸಂಗತಿ.
ರೈತರಾದ ನಾವು ನಮ್ಮ ಕಾಲ ಬುಡಕ್ಕೇ ಮಚ್ಚಿನಿಂದ ಹೊಡೆದುಕೊಳ್ಳಬಾರದು. ಇಂತಹ ಸುದ್ದಿಗಳಿಂದ ಕೊನೆಗೆ ಎಲ್ಲಾ ಕೃಷಿ ಉತ್ಪನ್ನಗಳ ಮೇಲೆ ಗ್ರಾಹಕ ವರ್ಗ ಸಂಶಯ ಪಡುವಂತಾಗುತ್ತದೆ. ಈ ಹಿಂದೆ (ಸುಮಾರು 15 ವರ್ಷಕ್ಕೆ ಹಿಂದೆ) ನುಶಿ ಪೀಡೆ ಉಂಟಾದಾಗ ಘಟ್ಟದ ಎಳನೀರಿಗೆ ನುಶಿಗೆ ಔಷದಿ ಸಿಂಪಡಿಸುತ್ತಾರೆ ಎಂಬ ಪ್ರಚಾರ ಉಂಟಾಗಿ ಈಗಲೂ ಅದು ಗ್ರಾಹಕ ವರ್ಗದಲ್ಲಿ ಸುತ್ತಾಡುತ್ತಿದೆ. ನುಶಿ ಪೀಡೆಗೆ ಅಂದು ಔಷದಿ ಸಿಂಪಡಿಸಿದ್ದು, ಇರಬಹುದು.ಆದರೆ ಈಗ ಯಾರೂ ಸಿಂಪಡಿಸುವುದಿಲ್ಲ. ಅದು ಸಿಂಪರಣೆಯಿಂದ ನಿವಾರಣೆಯೂ ಆಗುವುದಿಲ್ಲ. ಇಂತಹ ಹಲವಾರು ಅಪಪ್ರಚಾರಗಳಿಂದ ನಾವು ನಮ್ಮ ಕಾಲಿಗೇ ಕೊಡಲಿ ಏಟು ಹಾಕಿಕೊಂಡಿದ್ದೇವೆ. ಅದನ್ನು ಮಾಡದೆ ಅಂತಹ ಸಂಶಯ ಇದ್ದರೆ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡುವ ಅಭ್ಯಾಸ ಮಾಡಿಕೊಳ್ಳಬೇಕು.