ಈ ಗಡ್ಡೆಗೆ ಬಹಳ ಬೇಡಿಕೆ ಮತ್ತು ಉತ್ತಮ ಬೆಲೆ.

chines potato

ಗಡ್ಡೆ ಗೆಣಸಿನ ಬೆಳೆಗಳಲ್ಲಿ  ಅಧಿಕ ಬೆಲೆಯ ಬೆಳೆ ಎಂದರೆ ಸಾಂಬ್ರಾಣಿ. ಚೈನೀಸ್ ಪೊಟ್ಯಾಟೋ ಎಂಬ ಈ ತರಕಾರಿ ನಮ್ಮಲ್ಲಿ ಬಹಳ ಪುರಾತನ ಕಾಲದಿಂದಲೂ ಬೆಳೆಯಲ್ಪಡುತ್ತಿತ್ತು. ಈಗ ಇದನ್ನು ಕೆಲವೇ ಕೆಲವು ಜನ ಮಾತ್ರ ಬೆಳೆಯುತ್ತಿದ್ದು, ಸರಾಸರಿ  ಕಿಲೋ 60 ರೂ ತನಕ ಬೆಲೆ ಇದೆ. ಅಪರೂಪದ  ತರಕಾರಿಯಾದ ಕಾರಣ ಬಾರೀ ಬೇಡಿಕೆಯೂ ಇದೆ. ತರಕಾರಿ ಅಂಗಡಿಗೆ ಬರುವುದೇ ಕಡಿಮೆ. ಬಂದರೆ ಕ್ಷಣದಲ್ಲಿ ಖಾಲಿ.

Chinies  potato

  • ಆಲೂಗಡ್ಡೆಯ ತರಹವೇ ಇರುವ ಈ ಗಡ್ಡೆ ಅದರ ತಮ್ಮ ಎಂದರೂ ತಪ್ಪಾಗದು.
  • ಆಲೂಗಡ್ಡೆಗೂ ಇದಕ್ಕೂ ಸುವಾಸನೆಯಲಿ ಸ್ವಲ್ಪ ಭಿನ್ನತೆ ಬಿಟ್ಟರೆ ಬೇರೆ ಏನೂ ಇಲ್ಲ.
  • ಬೇಯಿಸಿದಾಗ ಆಲೂಗಡ್ಡೆ ತರಹವೇ ಎಲ್ಲಾ ಗುಣಗಳು.
  • ಆದರೆ ಆಲೂಗಡ್ಡೆ ಬೆಳೆಯಲು ಎಲ್ಲಾ ಪ್ರದೇಶಗಳೂ ಹೊಂದಿಕೆಯಾಗುವುದಿಲ್ಲ.
  • ಆದರೆ ಇದಕ್ಕೆ ಯಾವ ಪ್ರದೇಶವೂ ಹೊಂದಿಕೊಳ್ಳುತ್ತದೆ.
  • ಯಾವುದೇ ರೋಗ ಇಲ್ಲ. ಕೀಟ ಇಲ್ಲ. ಮಳೆಯಾಶ್ರಯದಲ್ಲೇ ಬೆಳೆಯಬಹುದಾದ ಉತ್ತಮ ಲಾಭದ ಬೆಳೆ.

ಏನು ಈ ಸಾಂಬ್ರಾಣಿ:

Chinies potato grower

  • ಇದು ಒಂದು ಗಡ್ಡೆ ಗೆಣಸಿನ ಬೆಳೆ. ಒಂದು ಸಸ್ಯದ ಬೇರಿನಲ್ಲಿ ಮೂಡುವ ಈ ಗಡ್ಡೆ ಅಡುಗೆಗೆ ಬಳಸಲ್ಪಡುತ್ತದೆ.
  • ಬೇರೆ ಬೇರೆ ಅಡುಗೆಗಳನ್ನು ತಯಾರಿಸುತ್ತಾರೆ. ಪಲ್ಯ, ಗಸಿ ಮುಂತಾದ ಅಡುಗೆ ಹೆಚ್ಚು.
  • ಇದನ್ನು ಚಿಪ್ಸ್ ಮಾಡುವುದಿದೆ. ಪ್ರೈ ಮಾಡುವುದೂ ಇದೆ.
  • ಇದು ಕೋಲಿಯಸ್ Coleus rotundifolius ಕುಟುಂಬಕ್ಕೆ ಸೇರಿದ ಸಸ್ಯ
  • ಆಫ್ರಿಕಾದಲ್ಲಿ ಇದನ್ನು ಚೈನೀಸ್ ಪೊಟಾಟೋ ಎಂದು ಕರೆಯುತ್ತಾರೆ.
  • ಇದು ಆಫ್ರಿಕಾದ ಉಷ್ಣ ವಲಯದ ಮೂಲದ ಗಡ್ಡೆ ಗೆಣಸು ಎನ್ನಲಾಗುತ್ತದೆ.
  • ಆದರೆ ಇದು ಅನಾದಿ ಕಾಲದಿಂದಲೂ ಭಾರತದಲ್ಲಿ ಬೆಳೆಯುತ್ತಿದ್ದ ಬಗ್ಗೆ ವರದಿಗಳಿವೆ.
  • ಪ್ರಪಂಚದ ಉಷ್ಣ ವಲಯದ  ಎಲ್ಲಾ ಭಾಗಗಳಲ್ಲೂ ಬೆಳೆಯಲ್ಪಡುತ್ತದೆ. ಇದನ್ನು ಬೆಳೆಸುವುದು ಸರಳ.

ಇದರ ಆರೋಗ್ಯ ಗುಣ:

  • ಇದು ಒಂದು ಸತ್ವ ಪೂರ್ಣ ಆಹಾರ ಎಂದು ಪರಿಗಣಿಸಲ್ಪಟ್ಟಿದೆ.
  • ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು  ಅತ್ಯಧಿಕ ಪ್ರಮಾಣದಲ್ಲಿ ಇವೆ.
  • ದೇಹದ ಯಾವುದೇ ಜೀವ ಕೋಶ ತೊಂದರೆಗೊಳಗಾದರೆ ಇದನ್ನು ಸೇವಿಸಿದರೆ ಅದು ಸರಿಯಾಗುತ್ತದೆ ಎಂಬ ಮಾತು ಇದೆ.
  • ಹಾಗೆ ನೋಡಿದರೆ ಎಲ್ಲಾ ಗಡ್ಡೆ ಗೆಣಸುಗಳಿಗೂ ಈ ಗುಣ ಇದೆ. ಸುವರ್ಣ ಗಡ್ಡೆ ತಿಂದರೆ ಶತ್ರ ಚಿಕಿತ್ಸೆಯ ಗಾಯವೂ ವಾಸಿಯಾಗುತ್ತದೆ ಎನ್ನುತ್ತಾರೆ.
  • ಅಂತರ್ಜಾಲದಲ್ಲಿ ಈ ಬಗ್ಗೆ ಪುಟಗಟ್ಟಲೆ ಹೊಗಳಿಕೆಗಳಿವೆ. ಅವುಗಳ ಸಸ್ಯಾಸತ್ಯತೆ ಎಷ್ಟು ಎಂಬುದು ತಿಳಿಯದು.
  • ಆದರೂ ಇದು ಅಧಿಕ ಕಾರ್ಬೋಹೈಡ್ರೇಟ್ ಉಳ್ಳ ಗಡ್ಡೆ ಎನ್ನಬಹುದು.
  • ಪೊಟ್ಯಾಶಿಯಂ, ಕ್ಯಾಲ್ಸಿಯಂ,  ವಿಟಮಿನ್ ಸಿ, ಮೆಗ್ನೀಶಿಯಂ ಮತ್ತು ಕಬ್ಬಿಣಾಂಶಗಳು ಇವೆ.
  • ಇದರಲ್ಲಿ ಸ್ವಲ್ಪವೂ ಕೊಲೆಸ್ಟ್ರಾಲ್ ಇರುವುದಿಲ್ಲ.

ಇದನ್ನು ಹೆಚ್ಚಾಗಿ ಕೊಂಕಣಿ ಸಮುದಾಯದವರು ಬಹಳ ಆಸಕ್ತಿಯಿಂದ ಖರೀದಿಸುತ್ತಾರೆ. ಮಡಹಾಗಲದಂತಹ ತರಕಾರಿಗೂ ಇವರೇ ಪ್ರಮುಖ ಗ್ರಾಹಕರು. ಇವರ ಬುದ್ಧಿ ಚುರುಕು ತನದ ಹಿಂದೆ ಇಂತಹ ತರಕಾರಿ ಗಡ್ಡೆ ಗೆಣಸುಗಳ ಬಳಕೆ ಮಹತ್ವದ ಪಾತ್ರ ಪಡೆದಿದೆ. ಜಿ ಎಸ್ ಬಿ ಸಮುದಾಯದವರ ಮದುವೆ, ಉಪನಯನ ಮುಂತಾದ ಕಾರ್ಯಕ್ರಮಗಳಲ್ಲಿ ಇದರ ಅಡುಗೆ ಇದ್ದರೆ ಅದು ಶ್ರೀಮಂತಿಕೆಯ ಸಂಕೇತವಾಗಿರುತ್ತದೆ.

Planting material

ಬೆಳೆಸುವುದು ಹೇಗೆ:

  • ಸಾಂಬ್ರಾಣಿ ಬೆಳೆಯುವುದು ಬಹಳ ಸುಲಭ.
  • ಇದಕ್ಕೆ ಬೇಕಾಗುವುದು ಗಿಡದ ತುಂಡುಗಳು.
  • ಪುದಿನ ಅಥವಾ ಅಲಂಕಾರಿಕ ಕೋಲಿಯಸ್ ಗಿಡದ ಗೆಲ್ಲನ್ನು ಮುರಿದು ಎಲ್ಲಿ ಊರಿದರೂ ಬೇರು ಬಂದು ಬದುಕಿದಂತೆ ಇದೂ ಬದುಕುತ್ತದೆ.
  • ಬೇಸಿಗೆಯ ಹಂಗಾಮಿನಲ್ಲಿ ಬೆಳೆ ಬೆಳೆಯುವುದಿಲ್ಲ.
  • ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
  • ಏರಿ ಸಾಲು ಮಾಡಿ ಅದರ ಮೇಲ್ಭಾಗದಲ್ಲಿ ಗಿಡದ ತುಡುಗಳನ್ನು ಸುಮಾರು 1 ಅಡಿ ಅಂತರದಲ್ಲಿ ನೆಡಲಾಗುತ್ತದೆ.
  • ತಕ್ಷಣ ಬದುಕಿಕೊಂಡು ಬೆಳೆಯುತ್ತದೆ.
  • ಗಿಡ ಬೆಳೆದು ಮಧ್ಯಂತರ ತುಂಬುತ್ತದೆ.

Bottom of plants

  • ಗಿಡದ ಗಂಟು ನೆಲಕ್ಕೆ ತಾಗಿದ ಭಾಗಗಳಲ್ಲಿ ಗಡ್ಡೆ  ಬೆಳೆಯುತ್ತದೆ.
  • ಸಡಿಲವಾದ ಮರಳು ಮಿಶ್ರಿತ ಮಣ್ಣಿನಲ್ಲಿ ಗಡ್ಡೆಗಳು ಉತ್ತಮವಾಗಿ ಬೆಳೆಯುತ್ತವೆ.
  • ಕಲ್ಲು ಮಿಶ್ರ ಮಣ್ಣು ಆಗಿದ್ದಲ್ಲಿ ಗಡ್ಡೆ ಸಣ್ಣದಾಗುತ್ತದೆ ಮತ್ತು ಆಕಾರ ಸರಿ ಇರುವುದಿಲ್ಲ.
  • ಒಂದು ಗಿಡದಲ್ಲಿ ಸುಮಾರು ½ ಕಿಲೋ  ದಷ್ಟು  ಇಳುವರಿ ಪಡೆಯಬಹುದು.
  • ಪೊಟ್ಯಾಶ್ ಯುಕ್ತ ಗೊಬ್ಬರ ಅಧಿಕ ಪ್ರಮಾಣದಲ್ಲಿ ಕೊಟ್ಟರೆ ಗಡ್ಡೆ ಹೆಚ್ಚು ಬರುತ್ತದೆ.
  • ಹೆಗ್ಗಣ , ಕೋತಿ, ಮುಳ್ಳು ಹಂದಿ ಮುಂತಾದ ದಂಶಕಗಳ ಉಪಟಳ  ಇಲ್ಲದ ಜಾಗದಲ್ಲಿ ಮಳೆಗಾಲದಲ್ಲಿ ಯಾವುದೇ ಖರ್ಚು ಇಲ್ಲದೆ  ಬರುವ ಬೆಳೆ ಇದು.

ಬೇರೆ ಬೇರೆ ತರಕಾರಿಗಳನ್ನು ಬೆಳೆಸುವ ನಾವು ಕೆಲವು ಸುಲಭದ ಅಧಿಕ ವರಮಾನದ ತರಕಾರಿಗಳ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಈ ತರಕಾರಿಗಳು ಹಿಂದೆ ನಮ್ಮ  ತರಕಾರಿ ಕೃಷಿಯ ಸದಸ್ಯ ಬೆಳೆಯೇ ಆಗಿತ್ತು. ಈಗ ಅದು ಕಾಣಲಿಕ್ಕೂ ಸಿಗದಂತಾಗಿದೆ. ಬ್ರಹ್ಮಾವರ, ಸುತ್ತಮುತ್ತ ಎಲವು ಕೃಷಿಕರು ಇದನ್ನು ಈಗಲೂ ಬೆಳೆಸುತ್ತಾರೆ.

Leave a Reply

Your email address will not be published. Required fields are marked *

error: Content is protected !!