ಕೆಲವು ನಾಟಿ ಹಸುಗಳು ತುಂಟ ಸ್ವಭಾವದವುಗಳಾಗಿರುತ್ತವೆ. ಹಾಲು ಕರೆಯುವಾಗ ಹಿಂದೆ ಹೋದರೆ ಕಾಲಿನಿಂದ ಒದೆಯುವುದು, ಹಾಯುವುದು ಹಾಗೆಯೇ ಹುಚ್ಚುಕಟ್ಟುವುದು ಮಾಡುವುದು ಸಾಮಾನ್ಯ. ಇದನ್ನು ಸಾಧು ( ಹದಕ್ಕೆ) ತರಲು ಕೆಲವು ಉಪಾಯಗಳನ್ನು ಅನುಸರಿಸಬೇಕು.
ಮನೆ ಬಳಕೆಯ ಹಾಲಿಗೆ ಹಸು ಸಾಕುವವರಿಗೆ ನಾಟಿ ಅಥವಾ ನಾಟಿಯಲ್ಲಿ ಮಿಶ್ರ ತಳಿಯ ಹಸುಗಳು ಉತ್ತಮ. ಇವುಗಳನ್ನು ಸಾಕುವುದು ಸುಲಭ. ರೋಗ ರುಜಿನಗಳಿಲ್ಲ. ಕಳೆ ಗಿಡಗಳಿಂದಾದಿಯಾಗಿ ಬಹುತೇಕ ಮೇವನ್ನು ತಿನ್ನುತ್ತದೆ. ಅಧಿಕ ಆಹಾರ ಬಯಸದ ಕಾರಣ ಸುಮಾರು 7-8 ಕರು ಹಾಕುತ್ತದೆ. ಕೆಲವೊಂದು ತಳಿಗಳು ನಿರಂತರ ಕರು ಹಾಕುವ ವರೆಗೂ ಹಾಲು ಕೊಡುತ್ತಲೇ ಇರುತ್ತವೆ. ತಲೆಬಿಸಿ ಇಲ್ಲದ ಹಸು ಸಾಕಾಣಿಕೆ ಬಯಸುವವರಿಗೆ ನಾಟಿ ಹಸುಗಳು ಉತ್ತಮ. ಆದರೆ ಒಂದೇ ಒಂದು ಸಮಸ್ಯೆ ಎಂದರೆ ಅವು ಮುಂದೆ ಬಂದರೆ ಹಾಯುತ್ತವೆ, ಹಿಂದೆ ಬಂದರೆ ಒದೆಯುತ್ತವೆ. ಇದನ್ನು ನಿಯಂತ್ರಿಸಲು ಇಲ್ಲಿದೆ ಸುಲಭ ಉಪಾಯಗಳು.
- ಹಸುಗಳಿಗೆ ಮೈ ಮೇಲೆ ಏನಾದರೂ ಗಾಯವಾದರೆ ಔಷಧಿ ಹಚ್ಚಬೇಕು.
- ಕೃತಕ ಗರ್ಭದಾರಣೆ ಮಾಡಿಸಬೇಕು. ಹಾಲು ಕರೆಯುವಾಗ ಒದೆಯಬಾರದು.
- ಹೊಸಬರು ಹಟ್ಟಿಯ ಹತ್ತಿರ ಬಂದರೂ ಸುಮ್ಮನಿರಬೇಕು.
- ಈ ಸಾಧು ಸ್ವಭಾವ ಎಚ್ ಎಫ್ , ಜರ್ಸಿ, ಹಾಗೂ ಕೆಲವು ಮಿಶ್ರ ತಳಿಯ ಹಸುಗಳಿಗೆ ಮಾತ್ರ ಇರುವುದು.
- ನಾಟಿ ಹಸುಗಳು ಸ್ವಲ್ಪ ತುಂಟು ಬುದ್ಧಿ. ಇದನ್ನು ಸರಿ ಮಾಡಲು ಅಸಾಧ್ಯವೇನಲ್ಲ. ಸ್ವಲ್ಪ ತರಬೇತಿ ಕೊಡಬೇಕು.
ಸರಳ ತರಬೇತಿ:
- ತುಂಟು ಸ್ವಭಾವದ ಹಸುಗಳನ್ನು ನಾವು ಅವು ಜೋರು ಎಂದು ನಾವು ಹತ್ತಿರ ಹೋಗದೆ ಇರುವುದಲ್ಲ.
- ದಿನದಲ್ಲಿ ಹಟ್ಟಿಯ ಸಮೀಪ ಹೋದಾಗಲೆಲ್ಲಾ ಅವುಗಳನ್ನು ಮಾತಾಡಿಸಬೇಕು.
- ನಮ್ಮ ಹಿರಿಯರು ಹಸುಗಳಿಗೆ ಹೆಸರು ಇಡುತ್ತಿದ್ದರು. ಈ ಹೆಸರು ಕರೆದಾಗ ಅವು ಬರುತ್ತಿದ್ದವು.
- ಇದರ ಅರ್ಥ ಹಸುಗಳ ಒಡನಾಟ ಬೆಳೆಸಿಕೊಳ್ಳುವುದು.
- ಹಟ್ಟಿಯ ಸಮೀಪ ಹೋದಾಗಲೆಲ್ಲಾ ಹೆಸರು ಹೇಳಿ ಕರೆದು ಮೈಸವರುವುದು ಮಾಡುತ್ತಿರಬೇಕು.
- ಅವುಗಳಿಗೆ ಹಿಂಡಿ, ಹುಲ್ಲು ಇತ್ಯಾದಿಗಳನ್ನು ಆಗಾಗ ಕೊಡುತ್ತಾ ಇದ್ದರೆ ಅವುಗಳಿಗೆ ನಾವು ಪರಕೀಯರಾಗಿರುವುದಿಲ್ಲ.
- ನಮ್ಮ ಬರುವಿಕೆಯನ್ನು ಅವುಗಳು ಕಾಯುತ್ತಿರುತ್ತವೆ.
- ಕೆಲವು ಪೇಟೆ ಸುತ್ತುವ ಹಸುಗಳು ತುಂಬಾ ಸಾಧು ಸ್ವಭಾವದವುಗಳಾಗಿರುತ್ತವೆ.
- ಕಾರಣ ಅಲ್ಲಿ ಅವುಗಳಿಗೆ ಜನರ ಸಂಪರ್ಕ ಇರುತ್ತದೆ.
- ಅಂಗಡಿ ಬಾಗಿಲಲ್ಲಿ ಎಸೆಯುವ ಹಣ್ಣಿನ ಸಿಪ್ಪೆ ಇತ್ಯಾದಿಗಳನ್ನು ತಿನ್ನುತ್ತವೆ.
- ಯಾರಾದರೂ ಹಣ್ಣು ತಿನ್ನುವಾಗ ಅಂಗಡಿಯ ಬಾಗಿಲಲ್ಲಿ ನಿಲ್ಲುತ್ತವೆ.
- ಇದರಂತೆ ನಾವು ನಮ್ಮ ಹಟ್ಟಿಯ ಹಸುಗಳಿಗೂ ಸಲುಗೆಯನ್ನು ಬೆಳೆಸಬೇಕು.
ಮೈಯನ್ನು ಆಗಾಗ ತಟ್ಟುವುದು ಮಾಡುವುದರಿಂದ ಅವುಗಳಿಗೆ ತುಂಬಾ ಹಿತವೆನಿಸುತ್ತದೆ. ಹಸುವಿನ ಮೈ ಮೇಲಿನ ನೊಣ ಓಡಿಸಲು ಭುಜವನ್ನ್ನು ತಟ್ಟುವುದು, ನಯವಾಗಿ ಮೆಲ್ಲನೆ ಮಾತಾಡುವುದು, ಬಣ್ಣ ಬಣ್ಣದ ( ಕೆಂಪು, ಕಪ್ಪು, ಹಳದಿ, ನೀಲಿ ) ಬಟ್ಟೆಯನ್ನು ಧರಿಸಿ ಹಟ್ಟಿಯ ಸಮೀಪ ಹೋಗುವುದು, ಹಟ್ಟಿಯ ಸಮೀಪದಲ್ಲಿ ಜಗಳ ಆಡುವುದು ಮಾಡಬಾರದು. ಮನೆಯ ಕೆಲಸದವರನ್ನು ಹಸುಗಳ ಹತ್ತಿರ ಬಿಡಬೇಕು. ಹುಲ್ಲು ಹಾಕುವಾಗ ಅವರು ಮಾತಾಡಿಸುವುದು, ಮೈ ಸವರುವುದು ಮಾಡುತ್ತಿದ್ದರೆ ಹೊಸಬರನ್ನು ಕಂಡಾಗ ತಂಟೆ ಮಾಡುವುದಿಲ್ಲ. ಮೃದು ದ್ವನಿಯಲ್ಲಿ ಮಾತಾಡಿಸಬೇಕು.
- ಹಸುಗಳು ಅಥವಾ ನಾಟಿ ಎಮ್ಮೆಗಳು ಹಾಯುವುದು, ಒದೆಯುವುದು ಮಾಡುವುದು ಮತ್ತೇನಕ್ಕೂ ಅಲ್ಲ.
- ಅದು ತಮ್ಮ ಆತ್ಮ ರಕ್ಷಣೆಗಾಗಿ. ನಮ್ಮ ಮೇಲೆ ಆಕ್ರಮಣ ಮಾಡಬಹುದು ಎಂಬ ಅಂಜಿಕೆಯಲ್ಲೇ ಅವು ಹಾಗೆ ಮಾಡುತ್ತವೆ.
- ಈ ನಾಟಿ ಹಸುಗಳು ಮೂಲತಹ ಕಾಡಿನಲ್ಲಿದ್ದವು. ಅವುಗಳಿಗೆ ಹೆದರಿಕೆ ಹೆಚ್ಚಿಗೆ.
- ಅದು ರಕ್ತಗತವಾಗಿ ಬಂದಿರುತ್ತದೆ. ಆದರೆ ಮಿಶ್ರ ತಳಿಗೆ ಆಗುವಾಗ ಆ ಗುಣ ಸ್ವಲ್ಪ ಸ್ವಲ್ಪವೇ ಬದಲಾಗುತ್ತಾ ಹೋಗುತ್ತದೆ.
- ವಿದೇಶೀ ಹಸುಗಳಿಗೆ ವಂಶ ಗುಣದಲ್ಲೇ ಅಂಜಿಕೆ ಎಂಬುದೇ ಇರುವುದಿಲ್ಲ. ಹಟ್ಟಿಯ ಪರಿಸರ:
- ಹಟ್ಟಿಯ ಪರಿಸರದಲ್ಲಿ ಸದ್ದು ಗದ್ದಲಗಳು ಇರಬಾರದು.
- ಸಾಧ್ಯವಾದಶ್ಟು ನೆರಳು ಮತ್ತು ಗಾಳಿಯಾಡುವ ವ್ಯವಸ್ಥೆ ಇರಬೇಕು. ಹಸುಗಳನ್ನು ಕಟ್ಟುವಾಗ ಹಗ್ಗದಲ್ಲಿ ತುಂಬಾ ಗಿಡ್ಡವಾಗಿ ಕಟ್ಟುವುದು, ಆಚೆ ಈಚೆ ತಿರುಗದಂತೆ ಮಾಡುವುದು.
- ಹತ್ತಿರ ಹತ್ತಿರ ಬೇರೆ ಹಸುಗಳನ್ನು ಕಟ್ಟುವುದು ಮಾಡಕೂಡದು. ಕಟ್ಟಿ ಹಾಕಿದ್ದು, ಅವುಗಳಿಗೆ ಸುಖ ಎನ್ನಿಸಸುವಂತಿರಬೇಕು.
- ಕಟ್ಟಿಹಾಕಿದರೂ ತಮ್ಮ ಕೆಲಸ ಮಾಡಿಕೊಳ್ಳಲು ಅನನುಕೂಲವಾಗಬಾರದು.
- ಜಾನುವಾರುಗಳನ್ನು ಆಗಾಗ ಸ್ನಾನ ಮಾಡಿಸುತ್ತಾ ಇದ್ದರೆ ಅವು ಸಾಧುಗಳಾಗುತ್ತವೆ.
- ಸಾಧ್ಯವಾದಷ್ಟು ಹೊರಗೆ ಮೇಯಲು ಬಿಡುವುದರಿಂದ ಜಾನುವಾರುಗಳು ಸಾಧುಗಳಾಗುತ್ತವೆ.
ಕರೆಯುವಾಗ ಒದೆಯದಂತೆ ರಕ್ಷಣೆ:
- ಕರು ಇರುವಾಗಲೇ ಅವುಗಳ ಕಾಲು ಮುಟ್ಟುವುದು, ಸವರುವುದು, ಕೆಚ್ಚಲು ಮುಟ್ಟುವುದು ಮಾಡುತ್ತಾ ಇರಬೇಕು.
- ಹಸುಗಳ ಕುತ್ತಿಗೆಯ ಕೆಳ ಭಾಗವನ್ನು ತುರಿಸುವುದರಿಂದ ಅವು ನಮಗೆ ಬಹಳ ಹತ್ತಿರವಾಗುತ್ತವೆ.
- ಬಡಿಗೆಯಲ್ಲಿ ಹೊಡೆಯದೆ ಅದನ್ನು ತೋರಿಸಿಯೇ ಹೆದರಿಸುವುದನ್ನು ಅಭ್ಯಾಸ ಮಾಡಬೇಕು.
- ಜಾನುವಾರುಗಳು ಸಾಮಾನ್ಯವಾಗಿ ಒದೆಯುವ ಗುಣ ಹೊಂದಿರುತ್ತದೆ.
- ಹತ್ತಿರ ಹೋಗುವಾಗ ಅಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ನಾವು ಯೋಚಿಸಿಯೇ ಮುಂದುವರಿಯಬೇಕು.
- ಅದಕ್ಕಾಗಿ ಮೊದಲು ಕೆಚ್ಚಲಿಗೆ ಹಿತ ಮಿತ ಬೆಚ್ಚಗೆ ಇರುವ ನೀರನ್ನು ಎರಚಬೇಕು.
- ಹಾಗೆಯೇ ಮೊದಲು ಕರೆಯಲು ಕೈ ಹಾಕುವುದಲ್ಲ. ಮೊಲೆಗಳನ್ನು ಬೆರಳುಗಳಲ್ಲಿ ಅಲ್ಲಾಡಿಸಿ ಅವುಗಳಿಗೆ ಹಿತವಾಗುವಂತೆ ಮಾಡಬೇಕು.
- ಅಗ ಹಾಲು ಇಳಿಸುವುದನ್ನೂ ಮಾಡುತ್ತವೆ. ತೀರಾ ಒದೆಯುವ ಹಸುಗಳಾದರೆ ಅವುಗಳಿಗೆ ಕಾಲಿಗೆ ಹಗ್ಗ ಕಟ್ಟಬೇಕಾಗುತ್ತದೆ.
- ಹಗ್ಗ ಕಟ್ಟುವಾಗ ಹಿಂಬದಿಯ ಒಂದು ಕಾಲಿಗೆ ಸುತ್ತು ಕಟ್ಟು ಹಾಕಿ ಅದೇ ಹಗ್ಗವನ್ನು ಮತ್ತೊಂದು ಕಾಲಿಗೂ ಕಟ್ಟದೆ ಸುತ್ತು ಬರಿಸಿ ಹತ್ತಿರದ ಗೂಟಕ್ಕೆ ಕಟ್ಟಬೇಕು.
- ಅಗ ಎರಡೂ ಕಾಲನ್ನೂ ಎತ್ತಲು ಅಸಾಧ್ಯವೆಂದು ಅವು ಒದೆಯುವುದ್ದನ್ನು ನಿಲ್ಲಿಸುತ್ತವೆ.
‘
ಕೃತಕ ಗರ್ಭಧಾರಣೆ ಮಾಡುವಾಗ:
- ನಾಟಿ ಹಸುಗಳಿಗೆ ಕೃತಕ ಗರ್ಭದಾರಣೆ ಮಾಡುವುದು ಬಹಳ ದೊಡ್ದ ಸಾಹಸ.
- ಆ ಸಮಾದಲ್ಲಿ ಹಸುಗಳನ್ನು ಸಾಧು ಮಾಡಲು ಭುಜದ ಭಾಗದಲ್ಲಿ ಗಟ್ಟಿಯಾಗಿ ಅದುಮಿ ಹಿಡಿಯುವುದು ಬಹಳ ಫಲಕೊಡುತ್ತದೆ.
- ಅವುಗಳು ತಂಟೆ ಮಾಡುವುದು ಕಡಿಮೆಯಾಗುತ್ತದೆ.
- ಕೃತಕ ಗರ್ಭದಾರಣೆ ಮಾಡುವಾಗ ಬೊಬ್ಬೆ ಹಾಕಿ ಗದರಿಸುವುದು ಮಾಡಬಾರದು.
- ಮೂಗಿನ ದಾರ ಹಾಕುವುದು ಜಾನುವಾರುಗಳ ತುಂಟತನವನ್ನು ಕಡಿಮೆ ಮಾಡಲು ಸಹಕಾರಿ.
- ಇದಕ್ಕೆ ಮೂಗಿಗೆ ದಬ್ಬಣದಿಂದ ಹಗ್ಗ ಸುರಿಯಬೇಕಾಗುತ್ತದೆ.
- ಅದಕ್ಕಿಂತ ಸುಲಭ ಉಪಾಯ ದುಡಿ ಹಗ್ಗ ಅಥವಾ ಮುಖ ಮತ್ತು ಕೋಡಿನ ಹಿಂಬಾಗಕೆ ಬರುವಂತೆ ಹಗ್ಗವನ್ನು ಕಟ್ಟುವುದು.
- ಇದನ್ನು ಮುಖ ಚುಂಬರಿ ಎನ್ನುತ್ತಾರೆ.
- ಇದರಲ್ಲಿ ನೋವು ಆಗುವುದಿಲ್ಲ. ಹಾಕುವುದು ಸುಲಭ. ಇದು ತಲೆ ಅಲ್ಲಾಡಿಸಲು ಆಗದಂತೆ ಮಾಡುತ್ತದೆ.
ತುಂಟ ತನ , ಸಾಧುತ್ವ ಎಲ್ಲವೂ ನಾವು ಅವುಗಳ ಜೊತೆಗೆ ಒಡನಾಟದ ಮೇಲೆ ಅವಲಂಭಿತವಾಗಿರುತ್ತದೆ. ಇದು ಹಸುಗಳಿಗೆ ಮಾತ್ರವಲ್ಲ. ಪ್ರತಿಯೊಂದು ಸಾಕು ಪ್ರಾಣಿಗಳಿಗೂ ಹಾಗೆಯೇ. ಮೆತ್ತಗೆ ಮಾತಾಡಿದಾಗ ಸ್ಪಂದನ ಹೇಗಿರುತ್ತದೆ. ಗಟ್ಟಿ ಸ್ವರದಲ್ಲಿ ಮಾತಾಡಿದಾಗ ಹೇಗಿರುತ್ತದೆ ಹಾಗೆಯೇ.
ಜಾನುವಾರುಗಳು ಮಾನವನ ಜೊತೆ ಬೆರೆತಾಗ ಅವು ಸಾಧುಗಳಾಗುತ್ತವೆ. ನಾಯಿಯನ್ನು ನಾವು ಹೇಗೆ ಪಳಗಿಸುತ್ತೇವೆಯೋ ಹಾಗೆಯೇ ಹಸುಗಳನ್ನೂ ಪಳಗಿಸಬೇಕು. ಪಳಗಿಸಿದ ಹಸುಗಳು, ನಿಮ್ಮ ಯೋಗ ಕ್ಷೇಮವನ್ನೂ ಗಮನಿಸುತ್ತವೆ. ನಿಮ್ಮ ಕೈಕಾಲು ಜಾರಿದಾಗಲೂ ಅವು ಕೂಗುತ್ತವೆ. ಬುದ್ಧಿ ಮಾನವರಿಗಿಂತ ಹೆಚ್ಚು ಜಾನುವಾರುಗಳಿಗೆ ಬರುತ್ತದೆ. ಅದನ್ನು ನಾವು ತರಬೇತಿ ಕೊಡುವ ಮೂಲಕ ಬರುವಂತೆ ಮಾಡಬೇಕು.