ಅಡಿಕೆ ಬೆಳೆಗಾರರೇ ನೀವು ಇದನ್ನು ಒಪ್ಪುತ್ತೀರಾ?

ಒಬ್ಬ ವೈದ್ಯನ ಮಗ ವೈದ್ಯನಾದರೆ ಅವನ ವೃತ್ತಿ ಕ್ಷಮತೆಯಲ್ಲಿ ಇರುವ ಹಿಡಿತ ಬೇರೆಯವರಲ್ಲಿ ಬರಲು ಸ್ವಲ್ಪ ಕಷ್ಟವಾಗುತ್ತದೆ. ಇದನ್ನು ನೀವು ಗಮನಿಸಿರಬಹುದು.ಇದು ಬರೇ ವೈದ್ಯ ವೃತ್ತಿಗೆ ಮಾತ್ರವಲ್ಲ ಎಲ್ಲಾ ವೃತ್ತಿ ಕ್ಷೇತ್ರಕ್ಕೂ ಹುಟ್ಟು ಸಹಜವಾದ ಅನುಭವ ಅರ್ಜಿತ ಅನುಭವಕ್ಕಿಂತ ಮಿಗಿಲಾಗಿರುತ್ತದೆ.
ಅಡಿಕೆ ಬೆಳೆಗೆ ಸಲಹೆ ಕೊಡುವವರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಅಡಿಕೆ ಬೆಳೆಯನ್ನು ಹುಟ್ಟಿನಿಂದ ಕಂಡವರಿಗಿಂತ ಹೆಚ್ಚಿನ ಜ್ಞಾನವನ್ನು ಇವರು ಸಂಪಾದಿಸಿದವರಂತೆ ವರ್ತಿಸುತ್ತಾರೆ. ಬೆಳೆ ಬಗ್ಗೆ ಉಪದೇಶ ಮಾಡುತ್ತಾರೆ. ಒಂದು ಬದಿಯಲ್ಲಿ ಅವರ ಈ ಎಲ್ಲಾ ಸೇವೆಯ ಹಿಂದೆ ಕಿಕ್ ಬ್ಯಾಕ್ ಆಗಿ ಯಾವುದೋ ಒಂದು ಉತ್ಪನ್ನದ ಮಾರಾಟ ಅಥವಾ ಮಾರಾಟ ಕುದುರಿಸುವಿಕೆಯ ವ್ಯವಹಾರ ಇರುತ್ತದೆ. ಇವರ ಅಡಿಕೆ ಬೆಳೆ ಅನುಭವವನ್ನು ಕೇಳಲು ಅನುಸರಿಸಲು ನಮ್ಮಲ್ಲಿ ಕೆಲವರಿಗೆ ಹೆಚ್ಚಿನ ಆಸಕ್ತಿ. ಒಂದಷ್ಟು ಬೆಳೆಗಾರರಿಗೆ ಊರಿನ ಸಂಬಂಧಿಗಿಂತ ಪರವೂರಿನ ವೇಷಧಾರಿಯೇ ಮೇಲು. ಜೊತೆಗೆ ಅದರಲ್ಲೂ ಕಿಕ್ ಬ್ಯಾಕ್.

Arecanut yield

  • ನಮ್ಮ ದೇಶದಲ್ಲಿ ಸಲಹೆ (Consultancy) ವೃತ್ತಿ ಮಾಡಲು ಕೃಷಿ ಕ್ಷೇತ್ರದಲ್ಲಿರುವಷ್ಟು ಅವಕಾಶಗಳು ಬೇರೆ ಕ್ಷೇತ್ರದಲ್ಲಿಲ್ಲ.
  • ಹೊಸ ಹೊಸ ಉತ್ಪನ್ನವನ್ನು ಮಾರಾಟ ಮಾಡಲು ಸಹ ಇಲ್ಲಿ ಇರುವಷ್ಟು ಅವಕಾಶ ಬೇರೆಲ್ಲೂ ಇಲ್ಲ.
  • ಒಂದು ಊರಿನಲ್ಲಿ ವ್ಯವಹಾರ  ಫಲಕೊಡದಿದ್ದರೆ ಮತ್ತೊಂದು ಊರು ಇರುತ್ತದೆ.
  • ಒಬ್ಬ ಬೇಡ ಎಂದರೆ ಅವನ ನೆರೆಯವನು ಇರುತ್ತಾನೆ.
  • ಅಕ್ಕಪಕ್ಕದ ಕೃಷಿಕರು  ಪರಸ್ಪರ ದಾಯವಾದಿಗಳಂತೆ.
  • 80% ದಷ್ಟು ಅವಲಂಬಿತರಿರುವ ನಮ್ಮಲ್ಲಿ ಟಾರ್ಗೆಟ್ ಗ್ರೂಪ್ ಗೆ ಕೊರತೆ ಇಲ್ಲ.
  • ಇದು ಅಲ್ಲದಿದ್ದರೆ ಮತ್ತೊಂದು ಎಂದು ಉತ್ಪನ್ನವನ್ನು ಪರಿಚಯಿಸಲು ಅವಕಾಶಗಳೂ ಸಾಕಷ್ಟು ಇವೆ.
  • ಸಲಹೆ ಅಥವಾ consultancy ಎಂಬುದು ಬಂಡವಾಳ ಇಲ್ಲದೆ ಮಾಡುವ ವೃತ್ತಿ.
  • ಅದರಲ್ಲೂ ಭೂಮಿ, ನೀರು, ವಾತಾವರಣ, ಮುಂತಾದ ನಮ್ಮ ಹಿಡಿತದಲ್ಲಿಲ್ಲದ ಮೂಲ ಪರಿಕರಗಳ ಜೊತೆಗೆ ಮಾಡುವ ವೃತ್ತಿ ಆದ ಕಾರಣ ಇಲ್ಲಿ ಜಾರಿಕೊಳ್ಳಲೂ ಹೇರಳ ಅವಕಾಶಗಳಿವೆ.
  • ಇದನ್ನೇ  ಬಹುತೇಕ ವ್ಯವಹಾರಸ್ಥರು ನಗದೀಕರಣಕ್ಕೆ ಮುಂದಾಗಿದ್ದಾರೆ.

ಅಡಿಕೆ ಬೆಳೆಯುವುದಕ್ಕೆ ಸೂಕ್ತ ಮಾರ್ಗದರ್ಶನ ಇಲ್ಲ:

  • ಅಡಿಕೆ ಬೆಳೆಯ ಕುರಿತಾಗಿ ಕಾಲ ಕಾಲಕ್ಕೆ ಸರಿಯಾಗಿ, ಮಣ್ಣಿನ ತರಗತಿಗೆ ಅನುಗುಣವಾಗಿ, ಹವಾಮಾನಕ್ಕೆ ಅನುಗುಣವಾಗಿ ಹೀಗೇ ಕೃಷಿ ಕ್ರಮವನ್ನು ಅನುಸರಿಸಿದರೆ ಫಸಲು ಉತ್ತಮವಾಗುತ್ತದೆ ಎಂದು ಮಾರ್ಗದರ್ಶನ ನೀಡಲು ಬೇಕಾದ ಸೂಕ್ತ ವ್ಯವಸ್ಥೆಗಳಿಲ್ಲ.
  • ಕೆಲವು ಸಂಶೋಧನಾ ಕೇಂದ್ರಗಳು, ಇದ್ದರೂ ಸಹ ಅಲ್ಲಿ ನಡೆಯುವ ಸಂಶೊಧನೆಗಳು ರೈತರಿಗೆ ಪ್ರಯೋಜನ ಕೊಟ್ಟಿರದ ಕಾರಣವೋ ಅಥವಾ ಆ ಸಂಶೋಧನೆಗಳು ರೈತರಿಗೆ ಗೊತ್ತೇ ಇಲ್ಲವೋ, ಅವರು ಅದನ್ನು ಅನುಸರಿಸಲು ಒಲ್ಲರು.
  • ಕೆಲವೊಮ್ಮೆ ಇಲ್ಲಿನ ಸಂಶೋಧನೆಗಳು ಕೇವಲ ವಿಜ್ಞಾನಿಗಳ ಡಾಕ್ಟರೇಟ್ ಪದವಿಯನ್ನು ಗಳಿಸಲಷ್ಟೇ ಸೀಮಿತವಾಗಿರುವುದೂ ಇದೆ.

ಹಿಂದೊಮ್ಮೆ ಯಾರೋ ವಿಜ್ಞಾನಿಗಳು ಅಡಿಕೆಯ ಸಿಪ್ಪೆಯಲ್ಲಿ ಹಾಸಿಗೆ ಮಾಡಲಿಕ್ಕಾಗುತ್ತದೆ ಎಂದು ಸಂಶೋಧನೆ ನಡೆಸಿದ್ದ ವರದಿ ಇತ್ತು.ಅದಕ್ಕೆ ಕೆಲವು ರೈತರ ಪ್ರತಿಕ್ರಿಯೆಯೂ ಹೀಗಿತ್ತು. ನಮ್ಮ ಮನೆಯ ನಾಯಿಗೆ ಅಡಿಕೆ ಸಿಪ್ಪೆ ಹಾಸಿಗೆಯಾಗುತ್ತದೆ ಎಂಬುದು ಬಹಳ ಹಿಂದೆಯೇ ಗೊತ್ತಿತ್ತು ಎಂದು.

  • ಇಂತಹ ಸಂಶೋಧನೆಗಳು ಹೆಚ್ಚಿನ ಫಲವನ್ನು ನೀಡಲಾರದು.
  • ಅಡಿಕೆ ತಜ್ಞ ಎಂದು ಸ್ವ ಘೋಷಣೆ ಮಾಡಿಕೊಂಡರೆ ಸಾಲದು ಅಷ್ಟು ಜ್ಞಾನವೂ ಬೇಕಲ್ಲವೇ?
  •  ಅಡಿಕೆ ಮರದ ಸುತ್ತ, ತೋಟದ ಸುತ್ತ ಗಮನ ಇಟ್ಟು ಒಂದೊದು ಸುತ್ತು ಹಾಕುವಾಗ ಒಂದೊಂದು ವಿಚಾರ ನಮ್ಮ ಗಮನಕ್ಕೆ ಬರುತ್ತದೆ.
  • ಆದರೆ ಎಸಿ ರೂಮ್, ಹಾಗೂ ಖಾತ್ರಿಯ ಸಂಭಾವನೆ ಇರುವಾಗ ಇದು ಇದು ಹೇಗೆ ಗೊತ್ತಾಗುತ್ತದೆ?
  • ಹಸಿದವನಿಗೆ ಮಾತ್ರ ಅನ್ನ ರುಚಿಸಿದಂತೆ.

ನಿಯೋಜನೆ ಸರಿ ಇಲ್ಲ:

Good yield in arecanut

  • ಯಾವುದೇ ಬೆಳೆಯ ಸಂಶೋಧನೆಗೆ ಆ ಬೆಳೆಯ ಗಂಧ ಗಾಳಿಯೂ ಗೊತ್ತಿಲ್ಲದವರನ್ನು ನಿಯೋಜನೆ ಮಾಡುವ ವ್ಯವಸ್ಥೆ ಅತೀ ದೊಡ್ದ ದುರಂತ.
  • ಆಯಾ ಬೆಳೆಪ್ರದೇಶದ ಜನರನ್ನೇ ಅಲ್ಲಿನ ಬೆಳೆ ಸಂಶೋಧನೆಗಳಿಗೆ ನಿಯೋಜನೆ ಮಾಡಿದಾಗ ಅದಕ್ಕೆ ಒಂದ್ ತೂಕ ಇರುತ್ತದೆ.
  • ಅಡಿಕೆ ಬೆಳೆಗೆ ಆ ಪ್ರದೇಶದ ಜನರನ್ನೂ , ತೊಗರಿ ಬೆಳೆಯುವ ಪ್ರದೇಶಕ್ಕೆ ಅಲ್ಲೇ  ಹುಟ್ಟಿ ಬೆಳೆದು ವ್ಯಾಸಂಗ ಮಾಡಿದವರನ್ನು ವಿಜ್ಞಾನಿಯಾಗಿ ನೇಮಕ ಮಾಡುವ ವ್ಯವಸ್ಥೆ ಇರಬೇಕು.
  • ಇಷ್ಟೇ ಅಲ್ಲ. ಒಬ್ಬ ವಿಜ್ಞಾನಿ ವಿಷಯ ವಸ್ತುವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ತಕ್ಕಮಟ್ಟಿಗೆ ಅಭ್ಯಾಸ ಮಾಡಿ ತಜ್ಞತೆ ಹೊಂದುವ ಸಮಯದಲ್ಲಿ ಅವರನ್ನು ವರ್ಗಾವಣೆ ಮಾಡುವುದು ಇದು ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಮಾಮೂಲು.

 ಸಂಶೋಧನೆ, ಅಭಿವೃದ್ದಿ ಇಲಾಖೆ ಇವುಗಳಲ್ಲೆಲ್ಲಾ ಒಂದು ರೀತಿಯ ಹಿರಿತನ –ಕಿರಿತನ (Hierarchy) ದ ಮೌನ ಸಮರ ಎತ್ತುಗಳೆರಡರ ಹೋರಾಟದಲ್ಲಿ ಗಿಡದ ಬುಡ ಕಿತ್ತುಕೊಂಡು ಸತ್ತಂತೆ ಆಗಿದೆ.

ಅಡಿಕೆ ಬೆಳೆಗಾರು ಒತ್ತಾಯಿಸಬೇಕಾಗಿದೆ:

  • ಇಂದು ಅಡಿಕೆ ಬೆಳೆ ಕರ್ನಾಟಕದ ಅತೀ ದೊಡ್ದ ತೋಟಗಾರಿಕಾ ಬೆಳೆ. ಬಹುತೇಕ ರಾಜಕೀಯ ಮುಖಂಡರೂ ಸಹ ಅಡಿಕೆ ತೋಟ ಹೊಂದಿದವರು.
  • ಹೀಗಿರುವಾಗ ಅಡಿಕೆ ಬೆಳೆಗಾರರ ಮಾತಿಗೆ ಬೆಲೆ ಇದೆ.
  • ಜೊತೆಗೆ ಅಡಿಕೆ ಬೆಳೆಗಾರರ ಸಂಘಟನೆ ಇದೆ. ಈ ಸಂಘಟನೆಯ ಮೂಲಕ ಸರಕಾರದ ಗಮನಕ್ಕೆ ಈ ವಿಷಯವನ್ನು ತರಬೇಕು.
  • ಅಡಿಕೆ ಬೆಳೆಯ ಪ್ರದೇಶಕ್ಕೆ ಸ್ಥಳೀಯ ಜನರನ್ನೇ ವಿಜ್ಞಾನಿಯಾಗಿ ನಿಯೋಜನೆ ಹಾಗೆಯೇ ತೊಗರಿ, ಹತ್ತಿ ಕಬ್ಬು ಇವುಗಳಿಗೆಲ್ಲಾ ಆಯಾ ಬೆಳೆ ಪ್ರದೇಶದಲ್ಲೇ ಹುಟ್ಟಿ ಬೆಳೆದವರಿಗೆ ಆದ್ಯತೆ ಕೊಟ್ಟು ನಿಯೋಜನೆ ಮಾಡುವಂತೆ ಆದರೆ, ಅವರಿಂದ ನಾವು ಈಗಿನದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸಬಹುದು.
  • ಒಂದು ಬೆಳೆ ಅದಕ್ಕೆ ಏನು ಬೇಕು, ಏನು ಬೇಡ. ಅದನ್ನು ಅಭ್ಯಾಸ ಮಾಡಿ ಅದಕ್ಕನುಗುಣವಾಗಿ ಬೇಸಾಯ ಕ್ರಮ ಅನುಸರಿಸುವಂತಹ ಸ್ಟಾಂಡರ್ಡ್ ಫಾರ್ಮ್ಯುಲಾ ತರುವ ತನಕ ನಮ್ಮ ರೈತರ ಜೊತೆಗೆ ವ್ಯವಹಾರ ಕುದುರಿಸಲು ಜನ ಸಾಲು ಕಟ್ಟಿ ನಿಂತೇ ಇರುತ್ತಾರೆ.

ರೈತರು ಬುದ್ಧಿವಂತರಾಗಿರಿ:

ಅಡಿಕೆ ಬೆಳೆಗಾರರಿರಲಿ ಅಥವಾ ಇನ್ಯಾವುದೇ ಬೆಳೆಗಾರರಿರಲಿ, ತಮ್ಮ ವೃತ್ತಿಯಯಲ್ಲಿ ಅನುಭವವನ್ನು ಮೊದಲಾಗಿ ಸಂಪಾದಿಸಿಕೊಳ್ಳಬೇಕು. ಸಿಕ್ಕ ಸಿಕ್ಕವರ ಮಾತು ಕೇಳುತ್ತಲೇ ಕೃಷಿ ಮಾಡುವುದಲ್ಲ. ಪ್ರತೀ ವರ್ಷ ಒಬ್ಬೊಬ್ಬರ ಮಾತು ಕೇಳಿ ಅದನ್ನು ಅನುಸರಿಸುತ್ತಾ ಬಂದರೆ ನಮಗೆ ಇದೇ ಸರಿ ಎಂದು ಹೇಗೆ ಗೊತ್ತಾಗಬೇಕು? ತಮ್ಮದೇ ಆದ ಸ್ವಯಾರ್ಜಿತ ಅನುಭವ ಇಲ್ಲದಿದ್ದರೆ ಕೃಷಿ ಸ್ವಲ್ಪ ಕಠಿಣ.

ಬೆಳೆ ಬೆಳೆಯುವವರು ನೀವು. ನೀವೇ ಕೆಲವು ಸಂಶೊಧನೆಗಳನ್ನು ನಿಮ್ಮ ಬೆಳೆಯಲ್ಲಿ ಮಾಡಲು ಯಾಕೆ ಹಿಂಜರಿಯಬೇಕು? ನಿಮ್ಮ ಮಗುವಿನ ಬಗ್ಗೆ ನಿಮಗೆ ಗೊತ್ತಿರುವಷ್ಟು ನಿಮ್ಮ ವೈದ್ಯರಿಗೆ ಗೊತ್ತಿರುವುದಿಲ್ಲ ಆದಕಾರಣ ಕೃಷಿ ಎಂಬ ನೀವು ಸಾಕಿದ ಮಗುವನ್ನು ಹೇಗೆ ಸಾಕಬೇಕು, ಅದನ್ನು ಹೇಗೆ ಸಲಹಿದರೆ ಅದು ನಮ್ಮನ್ನು ಸಲಹುತ್ತದೆ ಎಂಬುದನ್ನು ನಾವು ಅಧ್ಯಯನ ಮಾಡಿದರೆ ಅದು ಎಲ್ಲದಕ್ಕಿಂತ
ಬಲಿಷ್ಟವಾಗಿರುತ್ತದೆ.

error: Content is protected !!