ವೀಳ್ಯದೆಲೆಯ ಬೆಲೆ ಗೊತ್ತೇ? 100 ಎಲೆಗೆ 100 ರೂ. ತನಕವೂ ಆಗುವುದುಂಟು. ಅಲ್ಲದೆ ಇದು ವಾರ ವಾರ ಆದಾಯ ಕೊಡುವ ಬೆಳೆ. ಅಡಿಕೆ ಮರಕ್ಕೆ ಇದನ್ನು ಹಬ್ಬಿಸಿದರೆ ಒಳ್ಳೆಯ ಲಾಭ. ಅಡಿಕೆ ಬೆಳೆಯುವ ಕೆಲವು ಭಾಗಗಳಲ್ಲಿ ಇದೇ ಅಡಿಕೆಯೊಂದಿಗೆ ಮಿಶ್ರ ಬೆಳೆ.
ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳ ಸಾಲಿನಲ್ಲಿ ಕರಿಮೆಣಸು–ಕೊಕ್ಕೋ, ಬಾಳೆ ಮಾತ್ರವಲ್ಲ, ವೀಳ್ಯದೆಲೆ ಬೆಳೆಯೂ ಲಾಭದಾಯಕ . ದಿನಾ ಆದಾಯ ತಂದು ಕೊಡಬಲ್ಲ ಈ ಬೆಳೆಯನ್ನು ರಾಜ್ಯದ ಹೆಚ್ಚಿನ ಕಡೆ ಅಡಿಕೆ ಮರಗಳಿಗೆ ಹಬ್ಬಿಸಿಯೇ ಬೆಳೆಸುತ್ತಾರೆ.
- ಒಂದು ವೀಳ್ಯದೆಲೆಗೆ 5-10 ಪೈಸೆಯಷ್ಟು ಬೆಲೆ ಇದೆ. ಕೆಲವೊಮ್ಮೆ ಅದು 25 ಪೈಸೆಗೂ ಹೆಚ್ಚುತ್ತದೆ.
- ಒಂದು ಸಾಧಾರಣ ಬಳ್ಳಿ ವಾರ್ಷಿಕ 2000 ಕ್ಕೂ ಮಿಕ್ಕಿ ಎಲೆಗಳನ್ನು ಕೊಡುತ್ತದೆ.
- ಅಂದರೆ ಒಂದು ಮರದಿಂದ ಏನಿಲ್ಲವೆಂದರೂ ವಾರ್ಷಿಕ 200 ರೂ. ಆದಾಯ.
- ಹೀಗಿರುವಾಗ ಅಡಿಕೆ ಮರದ ಕಾಂಡಕ್ಕೆ ಮೆಣಸಿನ ಬಳ್ಳಿ ಹಬ್ಬಿಸಿದಂತೆ ವೀಳ್ಯದೆಲೆ ಹಬ್ಬಿಸುವುದು ಲಾಭದಾಯಕ.
ಹೇಗೆ ಲಾಭದಾಯಕ:
- ವೀಳ್ಯದೆಲೆಗೆ ಯಾವಾಗಲೂ ಬೇಡಿಕೆ ಇಲ್ಲದಿಲ್ಲ. ಇದಕ್ಕೆ ನಿರ್ಭಂದದ ತೊಂದರೆ ಇಲ್ಲ.
- ಇದನ್ನು ಸುಣ್ಣ ಹಾಗು ಅಡಿಕೆಯ ಜೊತೆಗೆ ಜಗಿದು ತಿನ್ನಲಾಗುತ್ತಿದ್ದು, ಭಾರತದಾದ್ಯಂತ ರೀತಿ ತಾಂಬೂಲ ಎಂಬ ಹೆಸರಿನಲ್ಲಿ ವೀಳ್ಯದೆಲೆ ತಿನ್ನುವ ಕೋಟ್ಯಾಂತರ ಗ್ರಾಹಕರಿದ್ದಾರೆ.
- ನಮ್ಮ ರಾಜ್ಯದ ಬೇರೆ ಬೇರೆ ಪ್ರದೇಶದಲ್ಲಿ ವೀಳ್ಯದೆಲೆಯನ್ನು ಬೆಳೆಸಲಾಗುತ್ತಿದೆ.
- ಮುಖ್ಯ ಪ್ರದೇಶಗಳೆಂದರೆ ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆಯ ಜಗದಾಳೆ, ತರೀಕೆರೆ, ಹಾವೇರಿ, ಹರಿಹರ, ಮೈಸೂರು ಮತ್ತು ತುಮಕೂರುಗಳು.
- ಹಾಗೆಂದು ವೀಳ್ಯದೆಲೆ ಬೆಳೆಯದ ಪ್ರದೇಶಗಳೇ ಇಲ್ಲ. ಕರಾವಳಿ – ಮಲೆನಾಡಿನಲ್ಲೂ ವೀಳ್ಯದೆಲೆ ಬೆಳೆಸಲಾಗುತ್ತದೆ.
- ಕೆಲವು ಪ್ರದೇಶಗಳಲ್ಲಿ ಇದನ್ನು ಎಕ್ರೆಗಟ್ಟಲೆ ಪ್ರದೇಶಗಳಲ್ಲಿ ಬೆಳೆಸುತ್ತಾರೆ.
- ಬೇರೆ ಬೇರೆ ಉರುಗಳಿಗೆ ಇದನ್ನು ಸಾಗಿಸುತ್ತಾರೆ. ತರೀಕೆರೆ, ಕಡೂರು, ಚಳ್ಳಕೆರೆ, ಕೆ ಆರ್ ನಗರ, ಬೆಂಗಳೂರು ಗ್ರಾಮಾಂತರ ಮುಂತಾದ ಕಡೆ ಇದನ್ನು ಅಡಿಕೆ ಮರದ ಆಶ್ರಯದಲ್ಲಿ ಬೆಳೆಸುತ್ತಾರೆ.
- ಆದರೆ ಕೆಲವೆಡೆ ನುಗ್ಗೆ, ಚಗಚೆ, ಹಾಲುವಾಣ ಮುಂತಾದ ಜೀವಂತ ಆಧಾರಗಳಿಗೆ ಹಬ್ಬಿಸುತ್ತಾರೆ.
- ಜೀವಂತ ಆಧಾರಗಳ ಬದಲಿಗೆ ಅಡಿಕೆ ಮರದ ಆಧಾರವನ್ನೇ ಬಳಸಿಕೊಂಡರೆ ದುಪ್ಪಟ್ಟು ಅನುಕೂಲ.
ಯಾವ ಅನುಕೂಲ:
- ಅಡಿಕೆ ಮರಗಳಿಗೆ ವೀಳ್ಯದೆಲೆ ಬಳ್ಳಿ ಹಬ್ಬಿಸುವುದರಿಂದ ಗೂಟದ ಖರ್ಚು ಇಲ್ಲ.
- ಅಡಿಕೆ ತೋಟದಲ್ಲಿ ನಿತ್ಯ ಇಲ್ಲವೇ ವಾರಕ್ಕೊಮ್ಮೆ ಆದಾಯ ದೊರೆಯುತ್ತದೆ.
- ವೀಳ್ಯದೆಲೆಗೆ ಪೂರ್ಣ ಬಿಸಿಲಿನ ಅವಶ್ಯಕತೆ ಇಲ್ಲ.
- ಭಾಗಶಃ ನೆರಳು ಬೇಕಾಗುತ್ತದೆ. ಇದು ಅಡಿಕೆ ಮರ ಒದಗಿಸುತ್ತದೆ.
- ವೀಳ್ಯದೆಲೆ ಬಳಸುವ ಗೊಬ್ಬರಗಳಿಂದ ಅಡಿಕೆ ಬೆಳೆಗೆ ಅನುಕೂಲವಾಗಿ ಅಡಿಕೆಯಲ್ಲೂ ಇಳುವರಿ ಹೆಚ್ಚಳವಾಗುತ್ತದೆ.
ಚಿತ್ರದುರ್ಗದ ಚಳ್ಳಕೆರೆಯಲ್ಲಿ, ತರೀಕೆರೆಯ ಸುತ್ತಮುತ್ತ ಹೆಚ್ಚಿನ ರೈತರು ಅಡಿಕೆ ಮರಕ್ಕೇ ಬಳ್ಳಿ ಹಬ್ಬಿಸುವುದು. ವೀಳ್ಯದೆಲೆ ತೀವ್ರ ನಿಗಾ ಬೇಕಾಗುತ್ತದೆ. ದಿನಂಪ್ರತೀ ಕೆಲಸ ಇರುತ್ತದೆ. ಅಷ್ಟೇ ಆದಾಯವೂ ಇರುತ್ತದೆ. ಅಡಿಕೆ ತೋಟದಲ್ಲಿ ಸದಾ ತಂಪು ಇರುತ್ತದೆ. ಮರದ ಕಾಂಡಕ್ಕೆ ಸೂರ್ಯನ ಬಿಸಿಲು ಬೀಳುವುದಿಲ್ಲ. ಆದುದರಿಂದ ಮರಸುಡುವುದಿಲ್ಲ. ಹೆಚ್ಚಿನ ಅಡಿಕೆ ಬೆಳೆಗಾಗರಿಗೆ ಇಲ್ಲಿ ಮುಖ್ಯ ಬೆಳೆ ವೀಳ್ಯದೆಲೆಯೇ ಹೊರತು ಅಡಿಕೆ ಅಲ್ಲ.
ಹೇಗೆ ನಾಟಿ:
- ಅಡಿಕೆ ಮರದ ಬುಡದಿಂದ 1 ಅಡಿ ದೂರದಲ್ಲಿ ವೀಳ್ಯದೆಲೆ ಬಳ್ಳಿಯನ್ನು ನಾಟಿ ಮಾಡಿ ಅದನ್ನು ಯಾವುದಾದರೂ ಆಧಾರದಿಂದ ಮರಕ್ಕೆ ಹಬ್ಬುವಂತೆ ಮಾಡಬೇಕು.
- ಬುಡದಲ್ಲಿ ನಾಟಿ ಮಾಡಿದರೆ ಅಲ್ಲಿ ಅಡಿಕೆಯ ಬೇರುಗಳೇ ಜಾಸ್ತಿ ಇರುತ್ತದೆ.
- ಬಳ್ಳಿ ಮರಕ್ಕೆ ತಾಗಿದ ನಂತರ ಅದನು ಕಟ್ಟುತ್ತಾ ಕೊಯ್ಯಲು ಎಷ್ಟು ಎತ್ತರದವರೆಗೆ ಅನುಕೂಲವೋ ಅಷ್ಟು ಎತ್ತರದದ ತನಕ ಹಬ್ಬಿಸುತ್ತಾ ನಿರ್ದಿಷ್ಟ ಎತ್ತರದ ಮೇಲೆ ಚಿಗುರು ಚಿವುಟಬೇಕು.
- ಸುಮಾರು 15-20 ಅಡಿ ಎತ್ತರದ ತನಕ ಏರಿದ ಬಳ್ಳಿಗಳಿಂದ ಕೊಯಿಲು ಮಾಡಲು ಸುಲಭ.
- ಆ ನಂತರ ಕಷ್ಟವಾಗುತ್ತದೆ. ಅಲ್ಲಲ್ಲಿ ಕತ್ತದ ಹಗ್ಗದಿಂದ ಕಟ್ಟು ಹಾಕುತ್ತಾ ಇರಬೇಕು.
- ಆಗಾಗ ತುದಿ ಚಿವುಟುತ್ತಾ ಅಡ್ಡ ಚಿಗುರುಗಳು ಬರುವಂತೆ ಮಾಡಬೇಕು.
- ಆಗ ಕಾಂಡಕ್ಕೆ ಅಂಟಿಕೊಂಡು ಜಾರುವುದಿಲ್ಲ.ಹೊಸ ಚಿಗುರು ಬಂದು ಹೆಚ್ಚು ಎಲೆಗಳನ್ನು ಕೊಡಬಲ್ಲುದು.
ವೀಳ್ಯದೆಲೆಯನ್ನು ಅಡಿಕೆ ಮರಗಳ ಮಧ್ಯಂತರದಲ್ಲೂ ಬೆಳೆಸಬಹುದು. ಆಂಶಿಕ ನೆರಳಿನಲ್ಲಿ ಚೆನ್ನಾಗಿ ಬರುತ್ತದೆ. ಎಲೆ ಬಳ್ಳಿಗೆ ಹೇರಳ ಗೊಬ್ಬರ ಕೊಡುವ ಕಾರಣ ಅಡಿಕೆಯಲ್ಲೂ ಇಳುವರಿ ಹೆಚ್ಚಾಗುತ್ತದೆ.
ಎಲ್ಲಾ ಕಡೆ ಬೆಳೆಸಬಹುದು:
- ವೀಳ್ಯದೆಲೆ ನಾಟಿ ಮಾಡಲು ಸಡಿಲ ಮಣ್ಣು ಬೇಕು. ನಂತರ ಬೇರು ಚೆನ್ನಾಗಿ ಬೆಳೆದು ಹೆಚ್ಚು ಹೆಚ್ಚು ಎಲೆ ಕೊಡಲೂ ಸಹ ಸಾವಯವ ಗೊಬ್ಬರಗಳು ಅಧಿಕ ಪ್ರಮಾಣದಲ್ಲಿ ಕೊಡಬೇಕಾಗುತ್ತದೆ.
- ವರ್ಷ ವರ್ಷವೂ ಹೊಸ ಮಣ್ಣನ್ನು ಹಾಕುತ್ತಿದ್ದರೆ ಬಳ್ಳಿಯಲ್ಲಿ ಹೆಚ್ಚು ಎಲೆಗಳು ಬರುತ್ತದೆ.
- ಸಾಮಾನ್ಯವಾಗಿ ವಾಣಿಜ್ಯಿಕವಾಗಿ ವೀಳ್ಯದೆಲೆ ಬೆಳೆಯುವ ಹರಿಹರ, ಜಗದಾಳೆ, ಚಳ್ಳಕೆರೆ ಮುಂತಾದ ಕಡೆ ರೈತರು ವರ್ಷಕ್ಕೊಮ್ಮೆ ( ಡಿಸೆಂಬರ್ – ಜನವರಿ) ಬಲಿತ ಬಳ್ಳಿಯನ್ನು ಪೂರ್ತಿ ಇಳಿಸುತ್ತಾರೆ.
- ಮರದಲ್ಲಿ 6-7 ಅಡಿ ಅಷ್ಟೇ ಹಸುರು ಬಳ್ಳಿ ಉಳಿಸುತ್ತಾರೆ.
- ಹೀಗೆ ಇಳಿಸಿದ ಬಳಿಯನ್ನು ಬುಡದಲ್ಲಿ ಸುಮಾರು 1/2 -3/4 ಅಡಿ ವರ್ತುಲಾಕಾರದ ಗುಳಿ ಮಾಡಿ ಸುತ್ತು ಹಾಕಿ ಮುಚ್ಚುತ್ತಾರೆ.
- ಅದರಲ್ಲಿ ಹೊಸ ಚಿಗುರುಗಳು ಬಂದು ಮತ್ತೆ ಮರಕ್ಕೆ ಹಬ್ಬುವುದೂ ಇದೆ.
- ಇದು ಮತ್ತೆ ಹಿಂದಿನಂತೆ ಮೇಲೆ ಹಬ್ಬುತ್ತದೆ.
- ಹೀಗೆ ಮಾಡಿದಾಗ ಅನುತ್ಪಾದಕ ಬಳ್ಳಿ ಕಡಿಮೆಯಾಗುತ್ತದೆ ಬಳ್ಳಿಗೆ ಪೋಷಕಾಂಶಗಳು ಹೆಚ್ಚುವರಿಯಾಗಿ ದೊರೆತು ಎಲೆ ಇಳುವರಿ ಹೆಚ್ಚುತ್ತದೆ.
- ಇದನ್ನು ವೀಳ್ಯದೆಲೆಯ ಬಳ್ಳಿಯ ಪುನಶ್ಛೇತನ ಎನ್ನುತ್ತಾರೆ.
- ಈ ಕೆಲಸವನ್ನು ಬೇಸಿಗೆಯಲ್ಲಿ ಮಾಡಿದರೆ ನೀರು ಕಡಿಮೆಯಾದರೂ ಸಾಕಾಗುತ್ತದೆ.
ಒಂದೇ ಒಂದು ಸಮಸ್ಯೆ ಎಂದರೆ ಇದಕ್ಕೆ ಕೆಲಸದವರು ಬೇಕು ಇಲ್ಲವೇ ನಾವೇ ಮಾಡಬೇಕು. ವಾರ ವಾರ ಕೊಯಿಲು ಮಾಡಬೇಕಾಗುತ್ತದೆ. ಮೆಣಸಿಗೆ ಹಾಗಿಲ್ಲ. ವರ್ಷಕ್ಕೊಮ್ಮೆ ಮಾತ್ರ ಕೊಯಿಲು.
ವೀಳ್ಯದೆಲೆಗೆ ಕೆಲವು ರೋಗಗಳು ಇರುತ್ತವೆ. ಇದನ್ನು ನಿವಾರಣೆ ಮಾಡಲು ಕಷ್ಟವಿಲ್ಲ. ಗಾಳಿಯಾಡುವಿಕೆ ಹೆಚ್ಚಿಸಿ ರೋಗ ಸಮಸ್ಯೆ ಕಡಿಮೆ ಮಾಡಬಹುದು. ಮಳೆಗಾಲದಲ್ಲಿ ನೀರಿನ ಬಸಿಯುವಿಕೆ ಚೆನ್ನಾಗಿದ್ದರೆ ಬೆಳೆ ಪಾಸ್.
ಕರಿಮೆಣಸಿನ ಬಳ್ಳಿಗೆ ರೋಗ ಬಂದಷ್ಟು ಬೇಗ ವೀಳ್ಯದೆಲೆಗೆ ರೋಗ ಬಾಧಿಸುವುದಿಲ್ಲ. ಆದ ಕಾರಣ ಮೆಣಸಿನ ಬಳ್ಳಿಯಂತೇ ಅಡಿಕೆ ಮರದ ಆಶ್ರಯದಲ್ಲಿ ವೀಳ್ಯದೆಲೆಯನ್ನು ಬೆಳೆಸಬಹುದು.
ಕರಿಮೆಣಸನ್ನು ವರ್ಷಕ್ಕೆ ಒಮ್ಮೆ ಮಾತ್ರ ಕೊಯ್ಯುವುದು ಹಾಗಾಗಿ ಕೂಲಿ ಕೆಲಸ ತುಂಬಾ ಕಡಿಮೆ
ಕರಿಮೆಣಸನ್ನು ಸುಮಾರು 40 ವರ್ಷಗಳ ವರೆಗೆ ಕೆಡದಂತೆ ಇಡಬಹುದು
ಆದರೆ ದೊಡ್ಡ ತೋಟಗಳಲ್ಲಿ ವೀಳ್ಯದೆಲೆಯನ್ನು ಪ್ರತಿನಿತ್ಯ ಕೊಯ್ಯಬೇಕು. ಅಲ್ಲದೆ ದಿನಾಲು ಕೊಯ್ದ ದ್ದನ್ನು ಅಂದೇ
ಮಾರಾಟ ಮಾಡಬೇಕು. ಹಾಗಾಗಿ ಪ್ರತಿನಿತ್ಯ ಕೂಲಿ ಕೆಲಸದವರು ಬೇಕಾಗುತ್ತದೆ.
ಹಾಗಾಗಿ ನನ್ನ ದೃಷ್ಟಿಯಲ್ಲಿ ವೀಳೆದೆಲೆ ಗಿಂತಲೂ ಕರಿಮೆಣಸಿನ ಕೃಷಿಯೇ ಉತ್ತಮ.